Saturday, 23rd November 2024

ಪಠ್ಯವೆನ್ನುವುದು ಪಂಥದ ಪ್ರತಿಷ್ಠೆಯಾಗದಿರಲಿ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ರಾಜ್ಯದ ಭವಿಷ್ಯದ ನಾಗರಿಕರನ್ನು ಸೃಷ್ಟಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಶಿಕ್ಷಣವನ್ನು ನೀಡುವ ಸಮಯದಲ್ಲಿ ಅವರಿಗೆ ಬೇಕಾದ ಶಿಕ್ಷಣವನ್ನು ನೀಡುತ್ತಾ ಹೋದರೆ, ರಾಜ್ಯದ ವಿದ್ಯಾರ್ಥಿಗಳಿಗೆ ಇದರ ಹೊರೆ ಬೀಳುತ್ತದೆ.

ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಿನಿಂದ ಬೇಕಾದ ಚರ್ಚೆಗಿಂತ ಹೆಚ್ಚಾಗಿ ಅನಗತ್ಯ ವಿಷಯಗಳ ಮೇಲಿನ ಚರ್ಚೆಯೇ ಹೆಚ್ಚಾಗುತ್ತಿದೆ. ಈ ರೀತಿ ಅನಗತ್ಯ ವಿಷಯಗಳಲ್ಲಿ ರಾಜಕೀಯ ಪಕ್ಷದವರು, ತಮ್ಮ ಬೇಳೆ ಬೇಯಿಸಿ ಕೊಳ್ಳುವುದಕ್ಕೆ ಒಳ್ಳೆಯ ಸರಕ್ಕನ್ನಾಗಿ ಮಾಡಿಕೊಳ್ಳುತ್ತಿವೆ. ಮೊದಲಿಗೆ ಧರ್ಮ ಸಂಘರ್ಷದಿಂದ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಪ್ರಸ್ತಾಪವಾಗಿತ್ತು. ಇದರಿಂದಾಗಿ ರಾಜ್ಯಕ್ಕೆ ಆಗಿರುವ ಸಮಸ್ಯೆ ಒಂದೆರೆಡಲ್ಲ. ಈ ಧರ್ಮ ದಂಗಲ್ ಅಂತ್ಯವಾಗುವ ಮೊದಲೇ ಇದೀಗ ಪಠ್ಯದಲ್ಲಿ ಏನಿರಬೇಕು? ಏನಿರಬಾರದು ಎನ್ನುವ ವಿಷಯದಲ್ಲಿ ಭಾರಿ ವಿವಾದ ಶುರುವಾಗಿದೆ.

ಭವ್ಯ ಭವಿಷ್ಯವನ್ನು ರೂಪಿಸುವುದಕ್ಕೆ ಸಜ್ಜಾಗಬೇಕಿದ್ದ ಪಠ್ಯ ಪುಸ್ತಕದ ವಿಷಯದಲ್ಲಿ ಇದೀಗ ಎಡ-ಬಲ ಪಂಥದ ಹೆಸರಲ್ಲಿ ಪರ-ವಿರೋಧ ಚರ್ಚೆಗೆ ಆಹಾರ ವಾಗಿರುವುದು ನಿಜಕ್ಕೂ ಉತ್ತಮ ಬೆಳೆವಣಿಗೆಯಲ್ಲ. ಅದರಲ್ಲಿಯೂ, ಪ್ರೌಢ ಶಾಲೆಯಲ್ಲಿ ಅಳವಡಿಸಬೇಕಿರುವ ಪಠ್ಯಕ್ಕೆ ಜಾತಿ, ಧರ್ಮ, ಪಂಥದ ನಂಜನ್ನು ಅಂಟಿಸುವ ಕೆಲಸವನ್ನು ಕೆಲವರು ಮಾಡುತ್ತಿರುವುದು ಖಂಡನೀಯ. ಅಷ್ಟಕ್ಕೂ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರ ನ್ನಾಗಿ ಮಾಡುತ್ತಿದ್ದಂತೆ ಈ ವಿವಾದ ಸಣ್ಣ ಪ್ರಮಾಣದಲ್ಲಿ ಶುರುವಾಗಿತ್ತು.

ಆದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪರಿಷ್ಕೃತ ಪಠ್ಯದಲ್ಲಿ ಪಠ್ಯ ಪರಿಷ್ಕರಣ ಸಮಿತಿ ಮಾಡಿರುವ ಹಲವು ಬದಲಾವಣೆಗಳಿಂದ ಎಡಪಂಥೀಯರ ಚಿಂತಕರು ರೊಚ್ಚಿಗೆದ್ದು, ‘ಇತಿಹಾಸವನ್ನೇ ತಿರುಚುವ ಪ್ರಯತ್ನ’ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ರೋಹಿತ್ ಚಕ್ರತೀರ್ಥ ಅವರಿಂದ ಇದಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ರೀತಿ ಬೊಬ್ಬೆ ಹಾಕುತ್ತಿದ್ದಾರೆ. ಅದರಲ್ಲಿಯೂ ಟಿಪ್ಪು ಪಠ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ್ದು, ಹೆಡಗೇವಾರ್ ಅವರ ವಿಷಯವನ್ನು ಸೇರಿಸಿದ್ದು, ಭಗತ್ ಸಿಂಗ್ ಅವರ ವಿಷಯವನ್ನು ತಗೆದಿದ್ದಾರೆ ಊಹಾಪೋಹ ಈ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವಂತೆ ಮಾಡಿದ್ದರಲ್ಲಿ ಅನುಮಾನವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿರುವಂತೆ, ಪರಿಷ್ಕರಣೆಯಾಗಿರುವ ಪಠ್ಯವೆಲ್ಲ ಒಂದೇ ಪಂಥವನ್ನು ಮಾತ್ರ ಬೆಂಬಲಿಸಿ, ಇನ್ನೊಂದನ್ನು ಸಂಪೂರ್ಣವಾಗಿ ಕಡೆಗಣಿಸಿಲ್ಲ. ಆದರೆ ಈ ಹಿಂದಿನ ಸರಕಾರಗಳ ಅವಧಿಯಲ್ಲಿ, ಕೈಬಿಟ್ಟಿದ್ದ ಕೆಲವರ ವಿಷಯ ಗಳನ್ನು ಸೇರಿಸಲಾಗಿದೆ. (ಈ ಹಿಂದೆ ಯಾವ ಕಾರಣಕ್ಕೆ ಕೈಬಿಡಲಾಗಿತ್ತು ಎನ್ನುವುದು ಬೇರೆ ಮಾತು).

ಇನ್ನು ಟಿಪ್ಪು ಸುಲ್ತಾನ್‌ನ ಬಗ್ಗೆ ಮಾಡಿದ್ದ ಅತಿಯಾದ ವೈಭವೀಕರಣಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಆದರೆ ಇದನ್ನು ಪಂಥದ ಕನ್ನಡಕದಿಂದ ನೋಡುವುದು ಸರಿಯಲ್ಲ. ಹಾಗೇ ನೋಡಿದರೆ, ಇತಿಹಾಸ ಓದುವಾಗ ಪೂರ್ವಾಗ್ರಹ ಪೀಡಿತವಾಗಿ ಓದುತ್ತಾ ನೋಡಿದರೆ, ಎಲ್ಲವೂ ತಪ್ಪು ಎನಿಸುತ್ತದೆ. ಎಡಪಂಥೀಯರಿಗೆ ಹೆಡಗೇವಾರ್ ತಪ್ಪು ಎನಿಸಿದರೆ, ಬಲ ಪಂಥೀಯರಿಗೆ ಟಿಪ್ಪು ಸರಿ ಕಾಣುವುದಿಲ್ಲ. ಆದರೆ ನಿಜವಾದ ಇತಿಹಾಸವನ್ನು ಅರಿಯಬೇಕು ಎನ್ನುವುದಾದರೆ, ಇಬ್ಬರನ್ನು
ಓದಲೇಬೇಕು. ಇಲ್ಲದಿದ್ದರೆ ಇತಿಹಾಸದ ಒಂದು ಘಟ್ಟವನ್ನು ವಿದ್ಯಾರ್ಥಿಗಳಿಂದ ಮುಚ್ಚಿಟ್ಟ ಹಾಗೇ ಆಗುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು.

ಇನ್ನು ಈ ಬಾರಿ ಪರಿಷ್ಕರಣೆಯ ಸಮಯದಲ್ಲಿ, ಪೋರ್ಚಗೀಸರ ವಿರುದ್ಧ ದಶಕಗಳ ಕಾಲ ಕಾಳು ಮೆಣಸಿನ ವ್ಯಾಪಾರವನ್ನು ನಡೆಸಿ, ಬಳಿಕ 75ರ ಹರೆಯದಲ್ಲಿ ಹೋರಾಡಿದ್ದ ಚೆನ್ನಭೈರಾದೇವಿ, ರಾಜ್ಯ ವಿಸ್ತರಣೆಯೇ ರಾಜರುಗಳ ದೊಡ್ಡ ಸಾಧನೆಯಲ್ಲ. ಬದಲಿಗೆ ಒಂದು ರಾಜ್ಯವನ್ನು ಕಲೆ, ಸಂಸ್ಕೃತಿ, ಶಿಕ್ಷಣದ ಮೂಲಕ ಯಾವ ರೀತಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬಹುದು ಎನ್ನುವುದನ್ನು ಮಾದರಿಯಾಗಿ ತೋರಿಸಿದ್ದ ಮೈಸೂರು ರಾಜವಂಶಸ್ಥರ ಪರಿಚಯ,
ಕಾಶ್ಮೀರದ ಲಲಿತಾದಿತ್ಯ ಸೇರಿದಂತೆ ಹಲವು ಪ್ರಸ್ತಾಪಗಳು ಸರಿಯಾಗಿಯೇ ಇವೆ.

ಇಷ್ಟು ವರ್ಷಗಳ ಕಾಲ ಈ ಬಗ್ಗೆ ಪಠ್ಯದಲ್ಲಿ ಏಕೆ ಸೇರಿಸಿಲ್ಲ ಎನ್ನುವುದನ್ನು ಆ ಕಾಲದ ಸರಕಾರಗಳು ಹಾಗೂ ಸಮಿತಿಯ ಅಧ್ಯಕ್ಷ, ಸದಸ್ಯರು ರಾಜ್ಯದ ಜನರಿಗೆ ತಿಳಿಸಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಹಾಗೆಂದ ಮಾತ್ರಕ್ಕೆ, ಟಿಪ್ಪು ಸುಲ್ತಾನ ಇಲ್ಲದ ಮೈಸೂರು ಇತಿಹಾಸವನ್ನು ತಿಳಿಸುವುದು ಸಾಧ್ಯವಿಲ್ಲ ಎನ್ನುವು ದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಆದರೆ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯ ಎಲ್ಲ ತೀರ್ಮಾನಗಳನ್ನು ಸರಿಯಿದೆ ಎಂದಲ್ಲ. ಪಠ್ಯ ಪುಸ್ತಕದಲ್ಲಿ ಇತಿಹಾಸವನ್ನು ತಿಳಿಸುವ ನಿಟ್ಟಿನಲ್ಲಿ, ಮೈಸೂರು ಮಹಾರಾಜರನ್ನು ಸೇರಿಸಿದ್ದು ಎಷ್ಟು ಸರಿಯೋ, ಟಿಪ್ಪು ಸುಲ್ತಾನ ವಿಷಯವನ್ನೇ ಕೈಬಿಡುವುದಕ್ಕೆ ಮುಂದಾಗಿದ್ದು, ಭಗತ್ ಸಿಂಗ್ ಬಗ್ಗೆ ಈಗಾಗಲೇ ಇದ್ದ ಪಠ್ಯವನ್ನು ಪರಿಷ್ಕರಿಸಿದ್ದು ಸರಿಯಲ್ಲ. ಇನ್ನು ಈ ಅಂಕಣ ಬರೆಯುವ ಕೆಲ ಗಂಟೆಯ ಮೊದಲು, ಪಠ್ಯ ಪುಸ್ತಕದಲ್ಲಿರುವ ಒಂದು ಪುಟವನ್ನು ನೋಡುತ್ತಿದ್ದೆ. ಅದರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕವಿ ಪರಿಚಯದ ಸಾರಂಶದ ಕೊನೆಯ ಸಾಲಿನಲ್ಲಿ, ‘ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’ ಎನ್ನುವ ಬಾಲಿಷ ವಾಕ್ಯವನ್ನು ಸೇರಿಸಲಾಗಿದೆ.

ಈ ರೀತಿಯ ಬಾಲಿಷ ವಾಕ್ಯವನ್ನು ರಾಷ್ಟ್ರಕವಿ ಕುವೆಂಪು ಅವರ ಪರಿಚಯಕ್ಕೆ ಸೇರಿಸುವ ಮೂಲಕ, ಏನನ್ನು ಸಾಧಿಸಲು ಹೊರಟಿದ್ದಾರೆ. ಮುಂದಿನ ಪೀಳಿಗೆಗೆ ಕುವೆಂಪು ಅವರ ಮೇಲಿನ ಗೌರವವನ್ನೇ ತಗ್ಗಿಸಬೇಕು ಎನ್ನುವ ಯೋಚನೆಯೇ? ಈ ರೀತಿಯ ಬಾಲಿಷ ಅಂಶಗಳನ್ನು ಸೇರಿಸುವ ಮೊದಲು ಈ ಬಗ್ಗೆ ಎಚ್ಚರ ವಹಿಸಲಿಲ್ಲವಾದರೂ ಏಕೆ? ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿ ಮಾರ್ಪಡಿಸಿರುವ ಅಂಶಗಳನ್ನು ಸಮರ್ಥಿಸಿಕೊಳ್ಳುವ ಸಮಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.

ಅವುಗಳೇಂದರೆ, ‘ ಈ ಹಿಂದೆ ಪಠ್ಯಪುಸ್ತಕದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಏಕೆ ಬೋಧಿಸಿಲ್ಲ? ಟಿಪ್ಪು ಸುಲ್ತಾನ್ ಕುರಿತ ಒಂದು ಪುಟವಿದ್ದದ್ದನ್ನು 5 ಪುಟಕ್ಕೆ ವಿಸ್ತರಿಸಿದರು. ಬ್ರಿಟೀಷರ ವಿರುದ್ಧ ಹೋರಾಡಿದ್ದು ಟಿಪ್ಪು ಮಾತ್ರನಾ? ಚೆನ್ನಭೈರಾದೇವಿ, ಮದಕರಿನಾಯಕ, ಸಂಗೊಳ್ಳಿ ರಾಯಣ್ಣ , ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಯಾರ ವಿರುದ್ಧ ಹೋರಾಟ ಮಾಡಿದ್ದರು? ಡಾ.ಹೆಡಗೆವಾರ್ ಒಬ್ಬ ಕ್ರಾಂತಿಕಾರಿ, ಬ್ರಿಟಿಷ್ ಆಡಳಿತದ ವೇಳೆ ಚಳುವಳಿಗೆ ಧುಮುಕಿದವರು. ಅವರನ್ನು ಸೇರಿಸುವುದರಲ್ಲಿ ತಪ್ಪೇನಿದೆ?’ ಈ ಪ್ರಶ್ನೆಗಳಲ್ಲಿ ಯಾವ ತಪ್ಪಿಲ್ಲ ಎನ್ನುವುದನ್ನು ಒಪ್ಪಬೇಕಿದೆ.

ಇನ್ನು ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಇದೀಗ ಪರ-ವಿರೋಧ ಚರ್ಚೆಗಳು ಆರಂಭ ವಾಗಿವೆ. ಪ್ರಮುಖವಾಗಿ, ಚಕ್ರತೀರ್ಥ ಅವರನ್ನು ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಇರುವ ಮಾನದಂಡವೇನು? ಅವರು ಯಾವ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು ಎನ್ನುವ ಪ್ರಶ್ನೆಗಳು ಶುರುವಾಗಿದೆ. ಈ ಹಿಂದಿನ ಎಲ್ಲ ಪಠ್ಯಪುಸ್ತಕ ಸಮಿತಿಯಲ್ಲಿ ಹಿರಿಯರನ್ನು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಅನುಭವ ಇರುವವರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗುತ್ತಿತ್ತು.

ಆದರೆ ರೋಹಿತ್ ಅವರಿಗೆ ಈ ಯಾವ ಅನುಭವವೂ ಇಲ್ಲ. ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದು, ಹಲವು ಅಂಕಣಗಳನ್ನು ಬರೆದಿದ್ದಾರೆ ಎನ್ನುವುದನ್ನು ಒಪ್ಪಬಹುದು. ಆದರೆ ಶೈಕ್ಷಣಿಕ ಹಿನ್ನಲೆಯಲ್ಲಿ ನೋಡಬೇಕಾಗಿತ್ತು ಎನ್ನುವುದು ಹಲವರ ವಾದವಾಗಿದೆ. ಈ ವಾದ ತಪ್ಪು ಎನ್ನುವುದು ಸರಿಯಲ್ಲ.
ಈ ರೀತಿ ರೋಹಿತ್ ಚಕ್ರತೀರ್ಥ ಪರವಾಗಿ ಮಾತನಾಡುವುದಕ್ಕೆ ನೂರು ಕಾರಣಗಳಿದ್ದರೆ, ವಿರೋಽಸುವುದಕ್ಕೆ ಸಾವಿರ ಕಾರಣ ಇರಬಹುದು. ಇನ್ನು ಬಿಜೆಪಿ ಸರಕಾರವಿದ್ದಾಗ ಅವರಿಗೆ ಬೇಕಾದಂತೆ ಪಠ್ಯ, ಕಾಂಗ್ರೆಸ್ ಸರಕಾರ ಬರುತ್ತಿದ್ದಂತೆ ಅವರಿಗೆ ಬೇಕಾದ ಪಠ್ಯಕ್ರಮವನ್ನು ಅಳವಡಿಸುತ್ತಾ ಹೋದರೆ, ಅದನ್ನು
ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಏನು ಮಾಡಬೇಕು? ಮಕ್ಕಳಿಗೆ ರಾಜ್ಯದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ತಿಳಿಸಬೇಕಾದ ಪಠ್ಯಪುಸ್ತಕಗಳನ್ನು, ಈ ರೀತಿ ರಾಜಕೀಯ ಮೇಲಾಟಗಳಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳಬಾರದು.

ಇದರಿಂದಾಗಿ, ಎರಡೂ ಕಡೆಯವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಹಾಯವಾಗಬಹುದು. ಆದರೆ ಒಂದು ಜನರೇಷನ್ ಅನ್ನು ಸಂಕಷ್ಟಕ್ಕೆ ಸಿಲುಕಿಸಿದಂತೆ ಎನ್ನು ವುದನ್ನು ಮರೆಯಬಾರದು. ರಾಜ್ಯದ ಭವಿಷ್ಯದ ನಾಗರಿಕರನ್ನು ಸೃಷ್ಟಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಶಿಕ್ಷಣವನ್ನು ನೀಡುವ ಸಮಯದಲ್ಲಿ, ಎಡಪಂಥೀಯರಿದ್ದಾರ, ಅವರಿಗೆ ಬೇಕಾದ ಶಿಕ್ಷಣ, ಬಲಪಂಥೀಯರು ಅಽಕಾರಕ್ಕೆ ಬಂದಾಗ ಇವರಿಗೆ ಬೇಕಾದ ಶಿಕ್ಷಣವನ್ನು ನೀಡುತ್ತಾ ಹೋದರೆ, ರಾಜ್ಯದ ವಿದ್ಯಾರ್ಥಿಗಳಿಗೆ ಗಳಿಗೆ ಇದರ ಹೊರೆ ಬೀಳುತ್ತದೆ. ಆದ್ದರಿಂದ ರಾಜ್ಯ, ದೇಶದ ಇತಿಹಾಸವನ್ನು ತಿಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಕೆಲಸವನ್ನು ಯಾರೇ ಅಽಕಾರದಲ್ಲಿದ್ದರೂ ಮಾಡಬೇಕಾಗಿದೆ. ಒಟ್ಟಾರೆಯಾಗಿ, ಪಠ್ಯ ಶಿಕ್ಷಣ ಮಕ್ಕಳ ಭವಿಷ್ಯವನ್ನು ರೂಪಿಸುವಂತಿರಬೇಕೇ ಹೊರತು, ರಾಜಕೀಯ ಪಕ್ಷಗಳ ಸಿದ್ಧಾಂತವನ್ನು ಮಕ್ಕಳಲ್ಲಿ ತುಂಬಿಸುವಂತಾಗಬಾರದು.