ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಕಳೆದ ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋದರು. ಹೀಗೆ ಹೋಗುವಾಗ ತಮ್ಮೊಂದಿಗೆ ಪುತ್ರ ವಿಜಯೇಂದ್ರ,
ಪರಮಾಪ್ತ ಲೆಹರ್ ಸಿಂಗ್ ಸೇರಿದಂತೆ ತಮ್ಮ ಕಿಚನ್ ಕ್ಯಾಬಿನೆಟ್‌ನಲ್ಲಿರುವವರನ್ನಷ್ಟೇ ಜತೆಗಿರಿಸಿಕೊಂಡಿದ್ದರು.
ಇದರರ್ಥ,ಯಡಿಯೂರಪ್ಪ ಅವರ ದೆಹಲಿ ಪ್ರವಾಸ ಸಂಪೂರ್ಣವಾಗಿ ರಾಜಕೀಯ ಉದ್ದೇಶದ್ದಾಗಿತ್ತು. ಆದರೆ ಇದನ್ನು ತೋರಗೊಡುವ ಉದ್ದೇಶ ಇಲ್ಲದೆ ಮೇಕೆದಾಟು ಯೋಜನೆ, ರಾಜ್ಯದ ಅಭಿವೃದ್ಧಿ, ಕೇಂದ್ರದಿಂದ ಹೆಚ್ಚಿನ ನೆರವು ಪಡೆದು ಬರುವುದು ಈ ಪ್ರವಾಸದ ಉದ್ದೇಶ ಎಂದು ಕತೆ ಕಟ್ಟಲಾಯಿತು. ಇದೇ ಮುಖ್ಯ ಉದ್ದೇಶವಾಗಿದ್ದರೆ ಯಡಿಯೂರಪ್ಪ ಅವರ ಜತೆ ಇರಬೇಕಾಗಿದ್ದವರು ಸರಕಾರದ ಹಿರಿಯ ಅಧಿಕಾರಿಗಳು.
ಆದರೆ ಇಡೀ ಪ್ರವಾಸದುದ್ದ ಯಡಿಯೂರಪ್ಪ ಅವರ ಜತೆ ನೆರಳಿನಂತಿದ್ದುದು ಅವರ ಕಿಚನ್ ಕ್ಯಾಬಿನೆಟ್ ಮಾತ್ರ. ಹೀಗೆ ದೆಹಲಿಗೆ ಹೋದ ಯಡಿಯೂರಪ್ಪ ಅವರು ಶುರುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಮೋದಿಯವರನ್ನು ಭೇಟಿ ಮಾಡುವಾಗ ಪುತ್ರ ವಿಜಯೇಂದ್ರ ಅವರನ್ನೂ ಜತೆಗಿರಿಸಿ ಕೊಳ್ಳುವ, ಅವರ ನೆತ್ತಿಯ ಮೇಲೆ ನಿಮ್ಮ ಆಶೀರ್ವಾದವಿರಲಿ ಅಂತ ಮೋದಿಯವರನ್ನು ಕೇಳಿಕೊಳ್ಳುವ ಉದ್ದೇಶ ಯಡಿಯೂರಪ್ಪ ಅವರಿಗಿತ್ತು. ಆದರೆ ಅವರ ಆಸೆ ಈಡೇರಲಿಲ್ಲ. ಈ ಹಿಂದೆ ವಂಶಪಾರಂಪರ್ಯ ರಾಜಕಾರಣ ದೇಶಕ್ಕಂಟಿದ ಶಾಪ ಎಂದು ಹೇಳಿದ್ದ ಮೋದಿಯವರು ಆ ಮಾತಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸುತ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಒಬ್ಬರೇ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ದುಬಾಷಿಯೊಬ್ಬರ ನೆರವಿನಿಂದ ನಡೆದ ಸುಮಾರು ಹತ್ತು ನಿಮಿಷಗಳ ಕಾಲದ ಚರ್ಚೆಯ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಪಕ್ಷಕ್ಕೆ ಸಲ್ಲಿಸಿ ಸೇವೆಯ ಬಗ್ಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿ ಬಿಜೆಪಿ ಮತ್ತಷ್ಟು ಸುಭದ್ರವಾಗಲು ನಿಮ್ಮ ನೆರವಿನ ಅಗತ್ಯವಿದೆ ಎಂದಿದ್ದಾರೆ. ಯಡಿಯೂರಪ್ಪ ಅವರು ಕೂಡಾ ‘ನಿಮ್ಮ ಆಶೀರ್ವಾದ ಇರಲಿ ಸಾರ್,ಪಕ್ಷ ಪುನಃ ಅಧಿಕಾರ ಹಿಡಿಯಲು ಏನು ಬೇಕೋ?ಅದೆಲ್ಲವನ್ನೂ ಮಾಡುತ್ತೇನೆ’ ಎಂದು ಮೋದಿಯವರಿಗೆ ಹೇಳಿದ್ದಾರೆ.
ಇದಾದ ನಂತರ ಯಡಿಯೂರಪ್ಪ ಅವರನ್ನು ಬೀಳ್ಕೊಡಲು ಎದ್ದು ನಿಂತ ಮೋದಿಯವರು, ‘ನಾಳೆ ಪಕ್ಷಾಧ್ಯಕ್ಷರಾದ ನಡ್ಡಾಜಿ ಅವರನ್ನು ಭೇಟಿ ಮಾಡಿ’ ಎಂದು ಕೈ ಮುಗಿದಿದ್ದಾರೆ. ಮರುದಿನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 25 ಸೀಟುಗಳನ್ನು ಗೆಲ್ಲಿಸಿಕೊಂಡು
ಬರಬೇಕು ಎಂದರೆ ನಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲೇಬೇಕು ಎಂದಿದ್ದಾರೆ.
ಹಾಗೆಯೇ ಮುಂದುವರಿದು, ಇದೇ ಕಾರಣಕ್ಕಾಗಿ ನನ್ನ ಮಗ ವಿಜಯೇಂದ್ರ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದಾಗ ಅ ಇದ್ದ ವಿಜಯೇಂದ್ರ ಅವರ ಕಡೆ ನೋಡಿದ ನಡ್ಡಾ ಗುಡ್, ಗುಡ್ ನನಗೆ ಗೊತ್ತು ಎಂದಿದ್ದಾರೆ. ಅಷ್ಟೇ ಅಲ್ಲ, ವಿಜಯೇಂದ್ರ ಅವರ ಸಂಘಟನಾ ಶಕ್ತಿಯ ಬಗ್ಗೆ ನನಗೆ ಮಾಹಿತಿಯಿದೆ. ಮೋದೀಜಿ ಮತ್ತು ಅಮಿತ್ ಶಾಜೀ ಅವರಿಗೂ ಈ ಬಗ್ಗೆ ಮೆಚ್ಚುಗೆಯಿದೆ ಎಂದಿದ್ದಾರೆ.
ಇದಾದ ನಂತರ ಮುಖ್ಯ ವಿಷಯಕ್ಕೆ ಬಂದು, ಯಡಿಯೂರಪ್ಪಾಜೀ, ನಿಮ್ಮ ವಿಷಯದಲ್ಲಿ ಹೈಕಮಾಂಡ್‌ಗೆ ತುಂಬ ಗೌರವವಿದೆ. ಆದರೆ ಪಕ್ಷದ ನೀತಿ-ನಿಯಮಾವಳಿ ಗಳ ಬಗ್ಗೆ ನಿಮಗೂ ಗೊತ್ತು. ಎಪ್ಪತ್ತೈದು ವರ್ಷ ಕಳೆದ ಮೇಲೆ ಯಾರೇ ಆದರೂ ಪಕ್ಷದ ಮಾರ್ಗದರ್ಶಕರಾಗಬೇಕು. ನಿಮ್ಮ ಪ್ರಕರಣದಲ್ಲಿ ಇದನ್ನು ಸಡಿಲಿಸ ಲಾಯಿತು ಎಂದಿದ್ದಾರೆ. ನಡ್ಡಾ ಅವರು ಮುಖ್ಯ ವಿಷಯಕ್ಕಿಳಿದ ಮೇಲೆ ಯಡಿಯೂರಪ್ಪ ಕೂಡಾ ಸುಮ್ಮನೆ ಕೇಳುತ್ತಾ ಹೋಗಿದ್ದಾರೆ. ಯಡಿಯೂರಪ್ಪಾ ಜೀ, ಈ ತಿಂಗಳ ಇಪ್ಪತ್ತಾರಕ್ಕೆ ನೀವು ಮುಖ್ಯಮಂತ್ರಿಯಾಗಿ ಎರಡು ವರ್ಷಗಳಾಗುತ್ತವೆ. ಹೀಗಾಗಿ ಬೇರೊಬ್ಬರನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಬೇಕು ಎಂಬುದು ವರಿಷ್ಠರ ಬಯಕೆ. ಹೀಗಾಗಿ ಆ ಕೆಲಸಕ್ಕೆ ನೀವು ಸಹಕಾರ ನೀಡಬೇಕು.
ಅಷ್ಟೇ ಅಲ್ಲ, ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸಲು ನೆರವು ನೀಡಬೇಕು ಎಂದು ನಡ್ಡಾ ಹೇಳಿದ್ದಾರೆ. ಅವರ ಮಾತಿನಿಂದ ಕಸಿವಿಸಿಗೊಂಡ ಯಡಿಯೂರಪ್ಪ, ‘ಸಾರ್, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಂತದಲ್ಲಿ ನಾವೆಲ್ಲ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಪುನಃ ಅಧಿಕಾರ ಹಿಡಿಯ ಬೇಕು ಅನ್ನುವುದೇ ನನ್ನಾಸೆ ಎಂದಿದ್ದಾರೆ. ಮುಂದುವರಿದು, ಈ ಸರಕಾರ ಅಸ್ತಿತ್ವಕ್ಕೆ ಬರಲು ನಾನು ಶ್ರಮಿಸಿದ ರೀತಿ ನಿಮಗೆ ಗೊತ್ತು. ಹೀಗಾಗಿ ಅವಧಿ ಮುಗಿಯುವವರೆಗೆ ಮುಂದುವರಿಯಲು ನನಗೆ ಅವಕಾಶ ಕೊಡಿ. ಮುಂದಿನ ಟರ್ಮು ನನಗೆ ಅವಕಾಶ ಕೊಡಿ ಅಂತ ನಿಶ್ಚಿತವಾಗಿ ನಾನು ಕೇಳುವುದಿಲ್ಲ’ ಎಂದಿದ್ದಾರೆ.
ಹಾಗೆಯೇ, ಈ ಸರಕಾರ ರಚಿಸಲು ಬೇರೆ ಪಕ್ಷಗಳಿಂದ ಬಂದು ನನಗೆ ಶಕ್ತಿ ನೀಡಿದವರಿದ್ದಾರೆ. ನಾನು ಅವರೆಲ್ಲರ ಹಿತ ಕಾಪಾಡಬೇಕು. ಹಾಗೆಯೇ ನನ್ನನ್ನು
ನಂಬಿ ಪಕ್ಷ ಕಟ್ಟಲು ಶ್ರಮಿಸಿದವರಿದ್ದಾರೆ. ಇದನ್ನು ಹೊಂದಾಣಿಕೆಯಿಂದ ಮುಂದುವರಿಸಿಕೊಂಡು ಹೋಗಲು ನನಗೆ ನಿಮ್ಮ ಸಹಕಾರ ಬೇಕು ಎಂದಿದ್ದಾರೆ. ಈ ಹಂತದಲ್ಲಿ ಮಾತನಾಡಿದ ನಡ್ಡಾ ಅವರು, ‘ಯಡಿಯೂರಪ್ಪ ಜೀ, ಯಾವ ಕಾರಣಕ್ಕೂ ಪಕ್ಷ ನಿಮ್ಮ ಹಿತವನ್ನು ಮರೆಯುವುದಿಲ್ಲ, ಏನೇನು ಆಗಬೇಕು ಅಂತಿದೆಯೋ? ಅದನ್ನು ಹೇಳಿ. ನಿಮ್ಮ ಹಿತ ಬೇರೆಯಲ್ಲ, ಪಕ್ಷದ ಹಿತ ಬೇರೆಯಲ್ಲ ಎಂದಿದ್ದಾರೆ.
ಆದರೆ ಪಟ್ಟು ಬಿಡದ ಯಡಿಯೂರಪ್ಪ, ಈ ದೇಶಕ್ಕೆ ಮೋದೀಜಿಯವರ ಅಗತ್ಯವಿದೆ. ಆವರು ಅಧಿಕಾರಕ್ಕೆ ಬರಲು ಪೂರಕವಾಗಿ ಕೆಲಸ ಮಾಡುವುದೇ ನನ್ನ ಗುರಿ.
ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಒತ್ತಿ ಹೇಳಿದ್ದಾರೆ. ತಾವೇನೇ ಹೇಳಿದರೂ ಯಡಿಯೂರಪ್ಪ ತಮ್ಮ ನಿಲುವಿಗೆ ಅಂಟಿಕೊಂಡಾಗ ನಡ್ಡಾ ಅವರು ನಗುತ್ತಾ, ಹೈಕಮಾಂಡ್ ಏನು ಬಯಸಿದೆ ಅಂತ ನಿಮಗೆ ಹೇಳಿದ್ದೇನೆ. ನೀವು ಪಕ್ಷದ ಶಿಸ್ತಿನ ಸಿಪಾಯಿ ಅಂತ ನಮಗೆ ಗೊತ್ತು. ಮುಂದೇನು ಮಾಡಬೇಕು ಅನ್ನೋ ಸಂದೇಶ ನಿಮಗೆ ತಲುಪುತ್ತದೆ. ಫಾಲೋ ಮಾಡಲು ಸಜ್ಜಾಗಿರಿ ಎಂದು ಹೇಳಿ ಕೈ ಮುಗಿದಿದ್ದಾರೆ. ಹೀಗೆ ಪಕ್ಷಾಧ್ಯಕ್ಷರಾದ ನಡ್ಡಾ ಅವರ ಜತೆ ಮಾತನಾಡಿದ ನಂತರ ಯಡಿಯೂರಪ್ಪ ಅವರ ಜತೆ ಮಾತನಾಡಿದ ಕೆಲ ದಿಲ್ಲಿಯ ನಾಯಕರು, ನಿಮ್ಮ ಜಾಗಕ್ಕೆ ಬೇರೆಯವರನ್ನು ತರಲು ವರಿಷ್ಠರು ನಿರ್ಧರಿಸಿದ್ದಾರೆ.
ನೀವು ಅಮಿತ್ ಶಾ ಅವರನ್ನು ಭೇಟಿ ಮಾಡಿದಾಗ ನಿಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿ ಎಂದಿದ್ದಾರೆ. ಆದರೆ ಅಮಿತ್ ಶಾ ಕಾರ್ಯಕ್ರಮವೊಂದರಲ್ಲಿ ಬಿಜಿಯಾಗಿ ದ್ದಾರೆ. ನಿಮಗೆ ಸಿಗುವುದು ಕಷ್ಟ ಎಂಬ ಮೆಸೇಜು ಸಿಕ್ಕಾಗ ಯಡಿಯೂರಪ್ಪ ಬೆಂಗಳೂರಿಗೆ ದೌಡಾಯಿಸಲು ಸಜ್ಜಾಗಿದ್ದಾರೆ. ಆದರೆ ಅವರು ಹೊರಡಲು ಸಜ್ಜಾಗು ತ್ತಿದ್ದಂತೆಯೇ ಅಮಿತ್ ಶಾ ಅವರಿಂದ ಬುಲಾವ್ ಬಂದಿದೆ. ಹೀಗೆ ಅಮಿತ್ ಶಾ ಬುಲಾವ್ ಹಿನ್ನೆಲೆಯಲ್ಲಿ ಅಲ್ಲಿಗೆ ಧಾವಿಸಿದ ಯಡಿಯೂರಪ್ಪ ಅವರ ಬಳಿ ಶಾ ನಗುತ್ತಲೇ ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ನಾವು ಗೆಲ್ಲಬೇಕು ಯಡಿಯೂರಪ್ಪಾ ಜೀ ಎಂದಿದ್ದಾರೆ.
ಅವರ ಮಾತು ಕೇಳಿದ ಯಡಿಯೂರಪ್ಪ ಅವರು, ವಿಧಾನಸಭಾ ಎಲೆಕ್ಷನ್‌ನಲ್ಲಿ ಗೆದ್ದು ಪಾರ್ಲಿಮೆಂಟ್ ಚುನಾವಣೆಯಲ್ಲೂ ಗೆಲ್ಲುತ್ತೇವೆ ಸಾರ್. ಕರ್ನಾಟಕದಲ್ಲಿ ಮಿನಿಮಮ್ ೨೫ ಸೀಟು ಗೆಲ್ಲಲು ಬ್ಲೂಪ್ರಿಂಟ್ ರೆಡಿ ಆಗಿದೆ ಸಾರ್. ನಿಮ್ಮ ಆಶೀರ್ವಾದ ಇರಲಿ ಎಂದಿದ್ದಾರೆ. ಓ, ಖಂಡಿತವಾಗಿ ನಿಮಗೆ ನಮ್ಮ ಬೆಂಬಲವಿದೆ.
ಯಡಿಯೂರಪ್ಪ ಜೀ,ಪಕ್ಷ ಸಂಘಟಿಸಲು ನಿಮ್ಮ ಪ್ರಯತ್ನ ಮುಖ್ಯ. ಇನ್ನು ಸಂಘಟನೆಯ ಕಡೆ ನೀವು ಹೆಚ್ಚು ಗಮನ ಕೊಡಬೇಕು ಎಂದು ಅಮಿತ್ ಶಾ ಹೇಳಿದಾಗ ಯಡಿ ಯೂರಪ್ಪ ಹೂಂಗುಟ್ಟಿದ್ದಾರೆ. ಇದಾದ ನಂತರ ಯಡಿಯೂರಪ್ಪ ಅವರು, ‘ನನಗೆ ಕೆಳಗಿಳಿಯಲು ಹೇಳಿಲ್ಲ, ಪಕ್ಷ ಸಂಘಟಿಸಲು ಹೇಳಿದ್ದಾರೆ’. ಹೀಗಾಗಿ ಅವಧಿ ಮುಗಿಯುವವರೆಗೆ ನಾನೇ ಸಿಎಂ ಎಂದಿದ್ದಾರೆ. ಅಷ್ಟೇ ಅಲ್ಲ, ಮುಂದಿನ ಅಸೆಂಬ್ಲಿ, ಪಾರ್ಲಿಮೆಂಟ್ ಚುನಾವಣೆಗೂ ನನ್ನದೇ ನಾಯಕತ್ವ ಎಂದು ಬೀಗಿದ್ದಾರೆ.
ಆದರೆ ಇದೇ ಭರದಲ್ಲಿ ಹಲ ನೀರಾವರಿ ಯೋಜನೆಗಳು, ವಿದ್ಯುತ್ ಯೋಜನೆಗಳ ಕಡತಗಳ ವಿಲೇವಾರಿಗಾಗಿ ಸರಕಾರದ ಮಟ್ಟದಲ್ಲಿ ಚುರುಕಿನ ಚಟುವಟಿಕೆಗಳು ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಧಿಕಾರ ಬಿಡುವ ಘಳಿಗೆ ಸನ್ನಿಹಿತವಾಗದಿದ್ದರೆ ಹೀಗೇಕೆ ತ್ವರಿತಗತಿಯಲ್ಲಿ ಕಡತ ವಿಲೇವಾರಿ ಕಾರ್ಯ ನಡೆಯುತ್ತಿತ್ತು?ಎಂಬ ಪ್ರಶ್ನೆಗಳು ಮೇಲೆದ್ದಿವೆ. ಹೀಗಾಗಿ ಒಂದು ಕಡೆಯಲ್ಲಿ ನಾನು ಭದ್ರ ಎಂದು ಯಡಿಯೂರಪ್ಪ ಹೇಳಿಕೊಳ್ಳುತ್ತಿದ್ದರೂ, ಮತ್ತೊಂದು
ಕಡೆಯಿಂದ ಈ ತಿಂಗಳ ಕೊನೆಯಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರುವುದು ನಿಶ್ಚಿತ ಎಂಬ ಮಾತು ಬಿಜೆಪಿಯ ಪಡಸಾಲೆಯಿಂದ ಕೇಳಿ ಬರುತ್ತಿದೆ.