Saturday, 7th September 2024

ವಾಚನಾಲಯ ಎಂಬ ಓದುಗರ ದೇವಾಲಯ

ವಿದೇಶವಾಸಿ

ಕಳೆದ ವಾರ ಜರ್ಮನ್ ದೇಶದಲ್ಲಿರುವ ಜನರ ನಿಷ್ಠೆ, ಪ್ರಾಮಾಣಿಕತೆಯ ಕುರಿತು ಬರೆದಿದ್ದೆ. ಈ ವಾರ ಅವರಲ್ಲಿರುವ ಹುಚ್ಚಿನ ಬಗ್ಗೆಯೂ ಹೇಳಬೇಕು. ಅದು ಅಂತಿಂಥ ಹುಚ್ಚಲ್ಲ, ಭಯಂಕರ ಹುಚ್ಚು, ಓದಿನ ಹುಚ್ಚು.

ಸಾರ್ವಜನಿಕರು ಓಡಾಡುವ ಬಸ್‌ನಲ್ಲಿಯೂ ಒಂದು ಪುಟ್ಟ ವಾಚನಾಲಯ ಇದ್ದರೆ ಆ ದೇಶವನ್ನು ಜರ್ಮನಿ ಎನ್ನಬಹುದು. ನಿಜ, ವಿಶ್ವದ ಬೇರೆ ಯಾವುದಾದರೂ ದೇಶಗಳಲ್ಲಿ ಈ ವ್ಯವಸ್ಥೆ ಇದೆಯೇ? ಗೊತ್ತಿಲ್ಲ. ಇದುವರೆಗೆ ನಾನು ಸುತ್ತಾಡಿದ ದೇಶಗಳಲ್ಲಿ, ಯಾವದೇಶದಲ್ಲೂ ಕಣ್ಣಿಗೆ ಬೀಳಲಿಲ್ಲ. ಜರ್ಮನಿಯ ಸರಕಾರಿ ಸಾರಿಗೆ ಸಂಸ್ಥೆಯ ಬಹುತೇಕ ಬಸ್ಸುಗಳಲ್ಲಿ ಇಂತಹ ಒಂದು ವ್ಯವಸ್ಥೆಯಿದೆ.

ಇತ್ತೀಚೆಗೆ ಜರ್ಮನಿಯ ಪ್ರವಾಸದಲ್ಲಿದ್ದಾಗ, ಬಸ್ ಪ್ರಯಾನ ಮಾಡುತ್ತಿzಗ ಡ್ರೈವರ್ ಕ್ಯಾಬಿನ್ ಹಿಂದುಗಡೆ ಒಂದು ಸಣ್ಣ ಶೆಲ್‌ನಲ್ಲಿ ಒಂದಷ್ಟು ಪುಸ್ತಕ ಇಟ್ಟಿದ್ದನ್ನು ಕಂಡೆ. ಮೊದಲು ಕಂಡಾಗ ಅದು ಚಾಲಕನ ಆಸಕ್ತಿ ಇರಬಹುದು ಅಂದುಕೊಂಡೆ. ಅದೇ ರೀತಿಯ ಕಪಾಟು, ಪುಸ್ತಕವನ್ನು ಇನ್ನೂ ಒಂದೆರಡು ಬಸ್ಸಿನಲ್ಲಿ ಕಂಡಾಗ ಕುತೂಹಲ ತಡೆಯಲಾಗಲಿಲ್ಲ. ಚಾಲಕನಲ್ಲಿ ಕೇಳಿದೆ. ಇಂಗ್ಲೀಷ್ ಬರುತ್ತಿರಲಿಲ್ಲವೋ, ಬಂದರೂ ಮಾತಾಡಲಿಲ್ಲವೋ ಗೊತ್ತಿಲ್ಲ, ಆತ ಜರ್ಮನ್ ಭಾಷೆಯಲ್ಲಿಯೇ ಉತ್ತರಿಸಿದ.

ಅವನ ಮಾತಿನಿಂದ ಅದು ಪ್ರಯಾಣಿಕರ ಓದಿಗಾಗಿ ಇಟ್ಟಿದ್ದು ಎಂದು ಅರ್ಥವಾಯಿತು. ಪ್ರಯಾಣಿಸುವಾಗ ಯಾರಿಗೆ ಓದಲು ಪುರುಸೊತ್ತು ಇದೆಯೋ ಇಲ್ಲವೋ ಗೊತ್ತಿಲ್ಲ, ಮನಸ್ಸಿದ್ದವರು ಓದಲಿ ಎಂದು ಇಟ್ಟಿರುವ, ಅದೊಂದು ಉಚಿತ ಪುಸ್ತಕ ಭಾಗ್ಯ
ಎನ್ನುವುದಂತೂ ಅರ್ಥವಾಯಿತು. ಸುಮಾರು ನಲವತ್ತರಿಂದ ಐವತ್ತರಷ್ಟಿರುವ ಪುಸ್ತಕವನ್ನು ಕೆಳಗೆ ಇಳಿಯುವಾಗ ಕೊಂಡುಹೋಗುವಂತಿಲ್ಲ. ಬಸ್ಸಿನಲ್ಲಿ ಕುಳಿತಿರುವಷ್ಟು ಸಮಯ ಮಾತ್ರ ಅವು ಪ್ರಯಾಣಿಕನ ಜತೆಗಾರ. ಅದೊಂದು ಚಲಿಸುವ, ಪುಟ್ಟ ವಾಚನಾಲಯ.

ಸಾಮಾನ್ಯವಾಗಿ ಆ ಕಪಾಟಿನ ಮುಂದಿನ ಆಸನಕ್ಕೆ ಆಸೆಪಡುವವರು ಪುಸ್ತಕಪ್ರಿಯರಾಗಿರುತ್ತರೆ. ಒಂದು ವೇಳೆ ಪುಸ್ತಕಾ ಸಕ್ತರಲ್ಲ ಅಂದುಕೊಳ್ಳಿ, ಆ ಆಸನದಲ್ಲಿ ಕುಳಿತವರು ಕುತೂಹಲಕ್ಕಾದರೂ ಪುಸ್ತಕದ ಮೇಕೆ ಕಣ್ಣು-ಕೈ ಆಡಿಸದೇ
ಇರುವುದಿಲ್ಲ. ಅಷ್ಟರಮಟ್ಟಿಗೆ ಸಾರಿಗೆ ಸಂಸ್ಥೆಯವರ ಶ್ರಮ ಸಾರ್ಥಕ. ಬಸ್ಸಿನಲ್ಲಿ, ಜನರ ಮಾತಿನ ಗೌಜಿಯಲ್ಲಿ ಓದುವುದು ಸಾಧ್ಯವೇ? ಮೊದಲನೆಯದಾಗಿ, ಅಲ್ಲಿಯ ಬಸ್ಸಿನಲ್ಲಿ ಅಷ್ಟು ಗದ್ದಲ ಇರುವುದಿಲ್ಲ. ಗುಟ್ಕಾ ಉಗುಳುವವರ, ಮೊಬೈಲ್‌ನಲ್ಲಿ ಜೋರಾಗಿ ಕಿರುಚುವವರ ಕಾಟವೂ ಇಲ್ಲ.

ಅಷ್ಟಕ್ಕೂ ಬಸ್ಸಿನಲ್ಲಿ ಓದಲೇಬೇಕೆಂಬ ಕಡ್ಡಾಯವಾಗಲಿ, ಅಲಿಖಿತ ಕಾನೂನಾಗಲೀ ಇಲ್ಲ. ಓದಬೇಕು ಎನಿಸಿದವರಿಗೆ ಕಲ್ಪಿಸಿಕೊಟ್ಟ ಒಂದು ವ್ಯವಸ್ಥೆ ಅದು. ಒಂದು ರೀತಿಯಲ್ಲಿ ವಿಮಾನದಲ್ಲಿ ಆಸನದ ಮುಂದೆ ಸಿನಿಮಾ ನೋಡಲು ಇರುವ ಸ್ಕ್ರೀನ್‌ನ ಹಾಗೆ. ಇಷ್ಟವಿದ್ದರೆ ನೋಡಬಹುದು, ಇಲ್ಲವಾದರೆ ನಿದ್ರಿಸಿ ಗೊರಕೆ ಹೊಡೆಯಬಹುದು. ಎಷ್ಟೋ ಬಾರಿ ನಾವು ಕುತೂಹಲಕ್ಕಾಗಿ ಸ್ಕ್ರೀನ್ ಆನ್ ಮಾಡಿ, ಏನು ನಡೆಯುತ್ತಿದೆ ಎಂದು ನೋಡುತ್ತೇವೆ.

ಚೆನ್ನಾಗಿದ್ದರೆ ಅದೇ ನೋಡಿಸಿಕೊಂಡು ಹೋಗುತ್ತದೆ. ಪುಸ್ತಕವೂ ಹಾಗೆಯೇ, ಚೆನ್ನಾಗಿದ್ದರೆ ಅದೇ ಓದಿಸಿಕೊಂಡು ಹೋಗುತ್ತದೆ. ಆದರೆ ಕುತೂಹಲ ಮೂಡಬೇಕಾದರೆ ಕೈಗೆಟುಕುವಂತಿರಬೇಕು, ಅಲ್ಲವೇ? ಆ ಸಂದರ್ಭದಲ್ಲಿ ನನಗೆ ಅನಿಸಿದ್ದು, ನಮ್ಮ ದೇಶದಲ್ಲಿ ಈ ಅನುಕೂಲ ಯಾವಾಗ ಲಭಿಸೀತು ಎಂಬುದು. ಆರ್ಥಿಕವಾಗಿ ಜರ್ಮನಿಗೂ, ನಮ್ಮ ದೇಶಕ್ಕೂ ಬಹಳ ಅಂತರವಿದೆ, ಒಪ್ಪೋಣ. ನಿನ್ನೆಯ ಒಂದು ಅಂಕಿ ಅಂಶದ ಪ್ರಕಾರ ಭಾರತ ಬ್ರಿಟನ್ ದೇಶವನ್ನೂ ಹಿಂದಿಕ್ಕಿ ಈಗ ಐದನೆಯ ಸ್ಥಾನಕ್ಕೇರಿದೆ.

ಅಮೆರಿಕ ಮತ್ತು ಚೀನಾ ಮೊದಲ ಎರಡು ಸ್ಥಾನದಲ್ಲಿದ್ದರೆ, ಜರ್ಮನಿ ಮೂರನೆಯ ಸ್ಥಾನದಲ್ಲಿದೆ. ಅಂತರವೇನೋ ಕಮ್ಮಿ ನಿಜ, ಆದರೆ ನಮ್ಮಲ್ಲಿರುವಷ್ಟು ಬಡತನ, ಸಮಸ್ಯೆಗಳು ಆ ದೇಶದಲ್ಲಿಲ್ಲ. ಸರಕಾರಗಳಿಗೆ ಅದರದ್ದೇ ಆದ ಆದ್ಯತೆಗಳಿವೆ. ಸರಿಯಾದ
ಬಸ್ಸುಗಳೇ ಇರದಿದ್ದಾಗ ಇನ್ನು ಅದರೊಳಗೆ ಪುಸ್ತಕ ಎಲ್ಲಿಂದ ಬರಬೇಕು? ಹೋಗಲಿ, ಖಾಸಗಿಯವರಾದರೂ ಇದನ್ನು ಮಾಡಬಹುದಿತ್ತಲ್ಲ? ಅದರಲ್ಲೂ ಸಾರಿಗೆ ಮತ್ತು ಅಕ್ಷರ, ಎರಡನ್ನೂ ಉದ್ದಿಮೆಯನ್ನಾಗಿಸಿಕೊಂಡ ವಿರ್‌ಆಎಲ್ ಸಂಸ್ಥೆಯ ಸಂಕೇಶ್ವರರಂಥವರಿಗೆ ಇದೊಂದು ತೀರಾ ಕಷ್ಟದ ಕೆಲಸವೇನೂ ಅಲ್ಲ.

ಈಗಾಗಲೇ ದಿನಪತ್ರಿಕೆ ಒದಗಿಸುತ್ತಿರುವುದರ ಜತೆಗೆ ಕೆಲವು ಪುಸ್ತಕಗಳನ್ನು ಇಟ್ಟರೆ ಓದುಗ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಓದಿದವರೆಲ್ಲರೂ ಪುಸ್ತಕವನ್ನು ಹಿಂತಿರುಗಿಸುವಷ್ಟು ಪ್ರಾಮಾಣಿಕರಾಗಿರುತ್ತಾರೆಯೇ ಎಂಬುದು
ಬೇರೆಯ ಮಾತು! ಇತ್ತೀಚೆಗೆ ಜರ್ಮನಿ ಪ್ರವಾಸದಲ್ಲಿದ್ದಾಗ ಅಲ್ಲಿಯ ರಾಜಧಾನಿ ಬರ್ಲಿನ್‌ಗೆ ಭೇಟಿ ಕೊಟ್ಟಿದ್ದೆ, ರಾಜಧಾನಿ ಎಂದಮೇಲೆ ಸ್ವಾಭಾವಿಕವಾಗಿ ಕೆಲವು ವಿಶೇಷತೆಗಳಿರಬೇಕಾದದ್ದೇ. ಅದರಲ್ಲೂ ಕಂತೆ ಕಂತೆ ಇತಿಹಾಸದ ಕತೆ ಹೇಳಿದ ಜರ್ಮನಿಯಂತಹ ದೇಶದ ರಾಜಧಾನಿ ಎಂದರಂತೂ ಕೇಳುವುದೇ ಬೇಡ.

ಒಂದು ಕಾಲದಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಯನ್ನು ಎರಡು ಬೇರೆ ರಾಷ್ಟ್ರವನ್ನಾಗಿ ಇಬ್ಬಾಗಿಸಿದ ಗೋಡೆಯ ಕುರುಹು, ಬ್ರ್ಯಾಂಡನ್ ಬರ್ಗ್ ಗೇಟ್, ಪಾರ್ಲಿಮೆಂಟ್, ಕ್ಯಾಥೆಡ್ರಲ್, ಇನ್ನೂರು ಮೀಟರ್ ಎತ್ತರದಲ್ಲಿ ಮುನ್ನೂರ ಅರವತ್ತು ಡಿಗ್ರಿ ತಿರುಗುವ ಉಪಹಾರಗೃಹ ಹೊಂದಿದ ಮುನ್ನೂರ ಎಪ್ಪತ್ತು ಮೀಟರ್ ಎತ್ತರದ ದೂರದರ್ಶನದ ಗೋಪುರ, ಬೇರೆ ಬೇರೆ ದೇಶದ ದೂತಾವಾಸಗಳು, ಇತ್ಯಾದಿ. ಪ್ರತಿಯೊಂದೂ ನೋಡಬೇಕಾದ ಸ್ಥಳಗಳೇ ಹೌದು. ಇದರ ನಡುವೆ ಅಲ್ಲಿರುವ ವಾಚನಾಲಯಕ್ಕೆ ಭೇಟಿ ಕೊಡದಿದ್ದರೆ ಮಾತ್ರ ಬರ್ಲಿನ್ ಭೇಟಿ ಅಪೂರ್ಣ.

ಬರ್ಲಿನ್ ರೇಲ್ವೆ ನಿಲ್ದಾಣದ ಸಮೀಪದಲ್ಲಿಯೇ ‘ಮ್ಯೂಸಿಯಂ ಐಲೆಂಡ್’ ಎಂಬ ಸ್ಥಳವಿದೆ. ಪ್ರಮುಖ ನಾಲ್ಕೈದು ವಸ್ತುಸಂಗ್ರಹಾಲಯಗಳು ಆ ಸ್ಥಳದಲ್ಲಿರುವುದರಿಂದ ಅದಕ್ಕೆ ಆ ಹೆಸರಾದರೂ, ಅಲ್ಲಿರುವ ಪ್ರತಿಯೊಂದು ಕಟ್ಟಡವೂ ವಿಶೇಷವಾದದ್ದು; ಅದರಲ್ಲಿ ಎರಡನೆಯ ಮಾತೇ ಇಲ್ಲ. ಕೆಲವು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳು, ಆರ್ಟ್ ಗ್ಯಾಲರಿಗಳು, ಒಪೆರಾ ಹೌಸ್, ಚರ್ಚ್, ಯುದ್ಧ ಸ್ಮಾರಕ, ಎಲ್ಲವೂ ಒಂದಕ್ಕಿಂತ ಒಂದು ಸುಂದರ. ಇವೆಲ್ಲದರ ನಡುವೆಯೂ ಗಮನ ಸೆಳೆಯುವುದು ಅಲ್ಲಿಯ ವಾಚನಾಲಯ.

ಹೊರಗಿನಿಂದ ನೋಡಿದರೆ ಅದೊಂದು ಭವ್ಯ ಅರಮನೆ. ಬಹುಭಾಗ ಕಲ್ಲಿನಿಂದಲೇ ಕಟ್ಟಿದ, ಶ್ವೇತವರ್ಣದ ಆ ಕಟ್ಟಡ ಒಂದೇ ಕ್ಷಣದಲ್ಲಿ ಮನ ಸೂರೆಗೊಳ್ಳುತ್ತದೆ. ವಿಶಾಲವಾದ ಪ್ರವೇಶ ದ್ವಾರ, ಆಹ್ವಾನಿಸಲು ಉದಕದ ಊಟೆ, ಅಲ್ಲಲ್ಲಿ ಕಲ್ಲಿನಲ್ಲಿ
ಕಡೆದ ಪುತ್ಥಳಿ, ಸ್ವಾಗತಕ್ಕೆ ಹಾಸಿದ ರಕ್ತ ವರ್ಣದ ರತ್ನಗಂಬಳಿ, ದ್ವಾರದಲ್ಲಿ ಇಬ್ಬರು ಕಾವಲುಗಾರರು. ಸಣ್ಣ ಸೂಜಿ ಬಿದ್ದರೂ ಕೇಳಬಹುದಾದ ನಿಃಶಬ್ದ, ಪ್ರಶಾಂತತೆ. ಮೇಲ್ನೋಟಕ್ಕೆ ಅದೊಂದು ಆಧುನಿಕ ಅರಮನೆಯಂತೆ ಕಂಡರೂ ಅದೊಂದು ವಾಚ
ನಾಲಯ. ಅಲ್ಲಿಯ ಸುಪ್ರಸಿದ್ಧ ‘ಬರ್ಲಿನ್ ಸ್ಟೇಟ್ ಲೈಬ್ರರಿ’.

ದ್ವಾರದಲ್ಲಿ ನಿಂತ ನನಗೆ ಒಳಗೆ ಹೋಗಲೋ, ಬೇಡವೋ ಎಂಬ ದ್ವಂದ್ವ. ಧೈರ್ಯ ಮಾಡಿ ಅಲ್ಲಿಯ ಕಾವಲುಗಾರರನ್ನು (ಸೆಕ್ಯುರಿಟಿ) ಕೇಳಿದೆ. ಸದಸ್ಯರಲ್ಲದವರಿಗೆ ವಾಚನಾಲಯದ ಒಳಗೆ ಓಡಾಡಲು ಅರ್ಧ ಗಂಟೆ ಅವಕಾಶವಿದೆ ಎಂದು ಹೇಳಿ, ಶಬ್ದ ಮಾಡುವಂತಿಲ್ಲ, ಫ್ಲ್ಯಾಷ್ ಬಳಸಿ ಫೋಟೊ ತೆಗೆಯುವಂತಿಲ್ಲ, ನೀರು ಹೊರತುಪಡಿಸಿ ಇನ್ನೇನನ್ನೂ ಒಳಗೆ ಕೊಂಡುಹೋಗುವಂತಿಲ್ಲ, ಪುಸ್ತಕ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ, ಮೊಬೈಲ್‌ನಲ್ಲಿ ಜೋರಾಗಿ ಮಾತಾಡುವಂತಿಲ್ಲ, ಇತ್ಯಾದಿ ನಿಯಮಗಳನ್ನು ತಿಳಿಸಿ, ಕಾರ್ಡ್ ಕೈಗಿತ್ತು ಒಳಗೆ ಕಳಿಸಿಕೊಟ್ಟ.

‘ಸ್ಟಾಟ್ಸ್‌ಬಿಬ್ಲಿಯೊಥೆಕ್ ಜು ಬರ್ಲಿನ್’ ಅಥವಾ ಬರ್ಲಿನ್ ಸ್ಟೇಟ್ ಲೈಬ್ರರಿ ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ಸ್ಥಾಪಿಸಿದ, ಮೂರು ಅಂತಸ್ತಿನ, ಬೃಹದಾಕಾರದ ವಾಚನಾಲಯ. ಎರಡು ಮಹಾಯುದ್ಧದ ಕಾಲದಲ್ಲಿ, ಬರ್ಲಿನ್ ಇಬ್ಬಾಗವಾಗುವ ಸಂದರ್ಭದಲ್ಲಿ, ನಾಜಿಸಂ ಅವಧಿಯಲ್ಲಿ ಸಾಕಷ್ಟು ಹಾನಿಗೊಳಗಾದರೂ, ಪ್ರತಿ ಸಲವೂ ಪುನಃ ಉದ್ಧಾರವಾಗಿ ಎದ್ದುನಿಂತ ಗ್ರಂಥಾಲಯ ಅದು.

೨೦೦೦ ದಿಂದ ೨೦೧೨ ರವರೆಗೆ ಇದನ್ನು ನವೀಕರಿಸಿ, ಆಧುನಿಕರಿಸಲಾಯಿತು. ಇಲ್ಲಿ ಸದಸ್ಯತ್ವ ಪಡೆಯಲು ಹಣ ಕೊಡಬೇಕಾಗಿಲ್ಲ. ಹದಿನಾರು ವರ್ಷಕ್ಕೆ ಮೇಲ್ಪಟ್ಟ ಯಾರಾದರೂ ಸದಸ್ಯತ್ವ ಪಡೆಯಬಹುದು. ಪುಸ್ತಕ ಓದಲು, ಕೊಂಡು ಹೋಗಲು ಕೂಡ ಶುಲ್ಕ ನೀಡಬೇಕಾಗಿಲ್ಲ, ಡಿಪಾಸಿಟ್ ಇಡಬೇಕಾಗಿಲ್ಲ. ಅ ಕುಳಿತು ಓದುವುದು,ಆದರೂ ಪ್ರತಿಯೊಬ್ಬ ಓದುಗನೂ ಆರಾಮದಲ್ಲಿ ಕುಳಿತು ಓದಬಹುದಾದ ಮೇಜು.

ಪ್ರತಿ ಓದುಗನಿಗೂ ಒಂದು ಕಂಪ್ಯೂಟರ್, ಅದಕ್ಕೆ ಇಂಟರ್ನೆಟ್ ವ್ಯವಸ್ಥೆ. ಓದುಗರಿಗೆ ಅದು ದೇವಾಲಯ, ಅಧ್ಯಯನ
ಮಾಡುವವರಿಗೆ ಸ್ವರ್ಗ. ಪುಸ್ತಕ ಬೇಕಾದರೆ ಒಂದೆರಡು ದಿನ ಮೊದಲೇ ಆನ್ಲೈನ್‌ನಲ್ಲಿ ಕಾಯ್ದಿರಿಸಬಹುದು. ಕೊಂಡುಹೋದ ಕೃತಿಯನ್ನು ಮೂವತ್ತು ದಿನಗಳವರೆಗೆ ಇಟ್ಟುಕೊಳ್ಳಬಹುದು, ಓದಿ ಮುಗಿಯದಿದ್ದರೆ, ಅವಧಿ ಮೀರುವುದಕ್ಕೆ ಮುನ್ನ ಹತ್ತು ಬಾರಿ ವಿಸ್ತರಿಸಿಕೊಳ್ಳಬಹುದು. ಅಲ್ಲಿಯೇ ಕುಳಿತು ಓದುವುದಾದರೆ ಸೋಮವಾರದಿಂದ ಶನಿವಾರದವರೆಗೆ ವಾರಕ್ಕೆ
ಅರವತ್ತೊಂಬತ್ತು ಗಂಟೆ ಈ ವಾಚನಾಲಯ ಲಭ್ಯ.

ಆದರೆ ಅಲ್ಲಿಯೂ ಮುಂಗಡವಾಗಿಯೇ ಸ್ಥಳ ಕಾಯ್ದಿರಿಸಬೇಕು. ಸುಮಾರು ಎಂಟು ನೂರು ಜನ ಕುಳಿತು ಓದಬಹುದಾದ ವಾಚನಾಲಯದಲ್ಲಿ ನಾನು ನೋಡಿದಂತೆ ಎ ಒಂದೆರಡು ಕಡೆ ಬಿಟ್ಟರೆ, ಎಲ್ಲ ಟೇಬಲ್‌ಗಳಲ್ಲಿಯೂ ಓದುಗರು
ತುಂಬಿಕೊಂಡಿದ್ದರು.

ಇನ್ನು ವಾಚನಾಲಯದ ಒಳಗೆ ಸಾಮಾನ್ಯ ಓದುಗರ ಸ್ಥಳ ಒಂದುಕಡೆಯಾದರೆ, ನಕಾಶೆ, ಹಸ್ತ ಪ್ರತಿ, ಮಕ್ಕಳು ಮತ್ತು ಯುವಕರ ಕುರಿತ ವಿಷಯಗಳು, ದಿನಪತ್ರಿಕೆ ಓದಲು ಹೀಗೆ ಎಲ್ಲದಕ್ಕೂ ಪ್ರತ್ಯೇಕ ಸ್ಥಳವಿದೆ. ಚರ್ಮದ ಮೇಲೆ ಹಿಬ್ರೂ ಭಾಷೆಯಲ್ಲಿ ಬರೆದಿಟ್ಟ ಬೈಬಲ್‌ನಿಂದ ಹಿಡಿದು ಇಂದಿನ ಅತ್ಯಾಧುನಿಕ ಸಂಶೋಧನೆಗಳವರೆಗೆ, ಈ ವಾಚನಾಲಯ
ದಲ್ಲಿ ಒಟ್ಟೂ ಸುಮಾರು ಹನ್ನೆರಡು ಮಿಲಿಯನ್ ಕೃತಿಗಳಿವೆ. ಅಂದರೆ ಸುಮಾರು ಒಂದು ಕೋಟಿ ಇಪ್ಪತ್ತು ಲಕ್ಷ ಕೃತಿಗಳು. ಅಷ್ಟಾಗಿಯೂ ಇದರಲ್ಲಿ ಕತೆ, ಕಾದಂಬರಿ, ಕವನ, ನಾಟಕ, ಪ್ರವಾಸ ಕಥನ ಯಾವುದೂ ಸೇರಿಲ್ಲ.

ಎಲ್ಲವೂ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆಗೆ ಸಂಬಂಧಪಟ್ಟ ಕೃತಿಗಳು. ಈ ವಾಚನಾಲಯಕ್ಕೆ ಪ್ರತಿ ವರ್ಷ ಒಂದು ಲಕ್ಷ ಇಂತಹ ಗ್ರಂಥಗಳು ಬಂದು ಬೀಳುತ್ತವೆ. ಇಷ್ಟಾಗಿಯೂ ಈ ಗ್ರಂಥಾಲಯ ವಿಶ್ವದ ಅತ್ಯುತ್ತಮ ಗ್ರಂಥಾಲಯಗಳ ಪಟ್ಟಿಯಲ್ಲಿ ಹದಿಮೂರನೆಯ ಸ್ಥಾನದಲ್ಲಿದೆ ಎಂದರೆ, ಇನ್ನು ಮೊದಲ ಹತ್ತು ಸ್ಥಾನದಲ್ಲಿರುವ ಗ್ರಂಥಾಲಯಗಳು ಹೇಗಿರಬಹುದು ಎಂದು ಊಹಿಸಿ. ಸುಮ್ಮನೆ ಒಂದು ಮಾಹಿತಿಗಾಗಿ ಹೇಳುತ್ತೇನೆ, ಮೊದಲನೆಯ ಸ್ಥಾನದಲ್ಲಿರುವ ಅಮೆರಿಕದ ‘ಲೈಬ್ರರಿ ಆಫ್ ಕಾಂಗ್ರೆಸ್’ ನಲ್ಲಿ ವಿಶ್ವದ ನಾಲ್ಕುನೂರ ಐವತ್ತಕ್ಕೂ ಹೆಚ್ಚು ಭಾಷೆಯ ಸುಮಾರು ಮೂವತ್ತೆರಡು ಮಿಲಿಯನ್ ಕ್ಯಾಟಲಾಗ್‌ಗಳಿವೆ. ಸುಮಾರು ಅರವತ್ತೊಂದು ದಶಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳ ಸಂಗ್ರಹವಿದೆ.

ಅಮೆರಿಕದಲ್ಲಿ ಪ್ರಕಟವಾಗುವ ಪತ್ರಿಕೆಗಳು, ಪುಸ್ತಕಗಳು ಸೇರಿದಂತೆ ದಿನನಿತ್ಯ ಸರಾಸರಿ ಇಪ್ಪತ್ತೆರಡು ಸಾವಿರ ಪ್ರತಿಗಳು ಈ ಕಣಜವನ್ನು ಸೇರುತ್ತವೆ. ಆ ವಾಚನಾಲಯದಲ್ಲಿ ಪುಸ್ತಕ ಹೊತ್ತ ಕಪಾಟುಗಳನ್ನೆಲ್ಲ ಒಂದಕ್ಕೊಂದು ಜೋಡಿಸಿಟ್ಟರೆ ಒಂದು ಸಾವಿರದ ಮುನ್ನೂರು ಕಿಲೋಮೀಟರ್ ಗಿಂತಲೂ ಹೆಚ್ಚು ಉದ್ದವಾಗುತ್ತದೆ. ಅಂದರೆ ಬೆಂಗಳೂರಿನಿಂದ ಮಧ್ಯಪ್ರದೇಶದ ಇಂದೋರಿನವರೆಗೆ ಹೋದಷ್ಟು ದೂರ! ಅಂತಹ ದೇಶಗಳೆಲ್ಲ ಮುಂದುವರಿಯಬೇಕಾದದ್ದೇ ಬಿಡಿ.

ವಾಚನಾಲಯಗಳ ಇತಿಹಾಸ ಬಹಳ ಹಳೆಯದು. ಕ್ರಿಸ್ತಪೂರ್ವ ಏಳನೆಯ ಶಮಾನದಲ್ಲಿ ಇರಾನ್ ದೇಶದಲ್ಲಿ ಮೊದಲ ವಾಚನಾಲಯ ಸ್ಥಾಪಿತವಾಯಿತು ಎಂಬ ಮಾಹಿತಿ ಇದೆ. ಒಂದು ಕಾಲದಲ್ಲಿ ಭಾರತವೂ ಅತ್ಯುತ್ತಮವಾದ ವಾಚನಾಲಯಗಳನ್ನು ಹೊಂದಿತ್ತು ಎನ್ನುವುದಕ್ಕೆ ನಳಂದ ವಿಶ್ವವಿದ್ಯಾಲಯದ ಪುಸ್ತಕ ಭಂಡಾರದ ಕುರುಹುಗಳಿವೆ. ಕಾಲಘಟ್ಟದಲ್ಲಿ ಅವೆಲ್ಲ ಧ್ವಂಸಗೊಂಡವು ಎನ್ನುವುದು ಎಷ್ಟು ನಿಜವೋ, ನಂತರ ಅದರ ಪುನರುಜ್ಜೀವನಕ್ಕೆ ಯಾರೂ ಅಷ್ಟೊಂ
ದು ಆಸಕ್ತಿ ವಹಿಸಲಿಲ್ಲ ಎನ್ನುವುದೂ ಅಷ್ಟೇ ನಿಜ.

‘ವಿಶ್ವದಲ್ಲಿರುವ ಅತಿ ದೊಡ್ಡ ಖಜಾನೆ ಎಂದರೆ ವಾಚನಾಲಯ’ ಎಂಬ ಮಾತಿದೆ. ಒಂದು ಪುಸ್ತಕವೇ ಸಾಕಷ್ಟು ಜ್ಞಾನ ನೀಡಬಹುದು ಎಂದಾದರೆ, ಇನ್ನು ಲಕ್ಷಾಂತರ ಪುಸ್ತಕಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡ ಒಂದು ಗ್ರಂಥಾಲಯದ ಪರಿಧಿಯನ್ನು ಅಳೆಯುವ ಮಾಪನ ಎಲ್ಲಿದೆ? ‘ನನ್ನ ಪರ್ಸಲ್ಲಿರುವ ವಸ್ತುಗಳಲ್ಲಿ ಅತ್ಯಂತ ಮೌಲ್ಯಯುತವಾದದ್ದು ದುಡ್ಡೂ ಅಲ್ಲ, ಕ್ರೆಡಿಟ್ ಕಾರ್ಡ್‌ಗಳೂ ಅಲ್ಲ, ನನ್ನ ಲೈಬ್ರರಿಯ ಕಾರ್ಡ್.’

ಇದು ನನ್ನ ಮಾತಲ್ಲ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಶ್ ಪತ್ನಿ, ಲಾರಾ ಬುಶ್ ಹೇಳಿದ ಮಾತು. ಏನೇ ಇರಲಿ ಬಿಡಲಿ, ಒಂದು ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಒಂದಾದರೂ ವಾಚನಾಲಯ ಇರಬೇಕು. ಸಾಧ್ಯವಾಗದಿದ್ದರೆ, ಕೊನೆ ಪಕ್ಷ
ದೇಶದಲ್ಲಿ ಒಂದಾದರೂ ಇರಬೇಕಪ್ಪ.

error: Content is protected !!