Saturday, 7th September 2024

ಬನ್ನಿ, ಸುಮ್ಮನೆ ಲಾಂಗ್ ಡ್ರೈವ್‌ಗೆ ಹೋಗಿ ಬರೋಣ !

ಕೊಲ್ಲಿ ದೇಶಗಳಲ್ಲಿನ ರಸ್ತೆಗಳು ಬಹಳ ಅಗಲ. ಏಕೆಂದರೆ, ಇಲ್ಲಿಯ ವಾಹನಗಳ ಗಾತ್ರ ದೊಡ್ದದು. ಜಿಎಮ್‌ಸಿ, ಫೋರ್ಡ್, ಕ್ಯಾಡಿಲ್ಯಾಕ್, ಡಾಡ್ಜ್ ಇವೆಲ್ಲ ರಸ್ತೆ ಮೇಲೆ ಚಲಿಸುವ ಹಡಗುಗಳಿದ್ದಂತೆ. ಇತ್ತೀಚೆಗೆ ಜಪಾನ್, ಕೊರಿಯಾದ ಕಾರುಗಳು ಮಾರುಕಟ್ಟೆಗೆ ಬರುವ ಮೊದಲು ಅಮೆರಿಕದ ದೊಡ್ಡ ಕಾರುಗಳೇ ಇಲ್ಲಿನ ರಸ್ತೆಗಳನ್ನು ಆಳುತ್ತಿದ್ದವು.

ಇಂದು ಅಂಕಣ ಬರಹ ಇಲ್ಲ. ನನಗಂತೂ ಬರೆದು ಸಾಕಾಯ್ತು. ನಿಮಗೂ ಓದಿ ಸುಸ್ತಾಗಿರಬೇಕು. ಅದಕ್ಕೇ ಈ ವಾರ ಬ್ರೇಕ್. ಬನ್ನಿ, ಸುಮ್ಮನೇ ಬ್ರೇಕ್ ಇಲ್ಲದ ಒಂದು ಲಾಂಗ್‌ಡ್ರೈವ್‌ಗೆ ಹೋಗಿ ಬರೋಣ. ಸಾಮಾನ್ಯವಾಗಿ ನಾನು ಒಬ್ಬನೇ ಹೋಗು ವುದು. ಇಂದು ನನ್ನಪಕ್ಕದ ಆಸನ ನಿಮಗೆ ಮೀಸಲು. ಇವತ್ತಿನ ನಮ್ಮ ಲಾಂಗ್‌ಡ್ರೈವ್ ಅಂದರೆ ನೂರಿನ್ನೂರು ಅಲ್ಲ, ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂರ.

ಏನು? ಕಾರಿನಲ್ಲಿ ಸಾವಿರಾರು ಕಿ.ಮೀ. ದೂರದ ಪ್ರಯಾಣ ಅಂದರೆ ತುಂಬಾ ರಿಸ್ಕು ಅಂತಾನಾ? ಅಯ್ಯೋ, ರಿಸ್ಕ್ ಇದ್ದ ರೇನೇ ಮಜಾ ಕಣ್ರೀ! ಅಲ್ಲ, ಈಗಲ್ಲದಿದ್ದರೆ ಇನ್ನು ಯಾವಾಗ ಹೇಳಿ? ಇದನ್ನೆಲ್ಲ ಕೈಕಾಲು ಗಟ್ಟಿ ಇರುವಾ ಗಲೇ ಮಾಡಬೇಕು. ಅವಕಾಶ ಸಿಕ್ಕಾಗ ಪೂರೈಸಿಕೊಳ್ಳಬೇಕು.

ವಯಸ್ಸಾದಂತೆ ಸುತ್ತಾಡುವ ಉಮೇದು ಕಮ್ಮಿಯಾಗುತ್ತದೆ ಎನ್ನುವುದು ಒಂದು ಕಡೆ ಯಾದರೆ, ಇನ್ನೊಂದು ಕಡೆ ಯಾವ ಗೈಡುಗಳೂ ನಿಮ್ಮನ್ನು ಇಂಥ ಜಾಗಕ್ಕೆ ಕರೆದುಕೊಂಡು ಹೋಗುವುದಿಲ್ಲ.

ಇಂತಹ ಪ್ರಯಾಣವನ್ನು ಯಾವುದೇ ಟೂರ್ ಆಪರೇಟರ್‌ಗಳೂ ನಡೆಸುವುದಿಲ್ಲ. ನಮಗೆ ನಾವು, ಗೋಡೆಗೆ ಮಣ್ಣು
ಎನ್ನುವಂತೆ, ನಾವೇ ತಯಾರಿ ಮಾಡಿಕೊಂಡು ಹೊರಡಬೇಕು ಅನುಭವಿಸಬೇಕು. ಪ್ರಯಾಣಕ್ಕೆ ಹೊರಡುವ ಮುಂಚೆಯೇ
ಅಂಜಿದರೆ ಹೇಗೆ? ಮರಳುಗಾಡಿನಲ್ಲಿ, ನಿರ್ಜನ ಪ್ರದೇಶದಲ್ಲಿ, ಅದೂ ಕಾರಿನಲ್ಲಿ, ಅದರಲ್ಲೂ ಇಬ್ಬರೇ ಹೋಗುವುದು ಅಂತಾನಾ? ಅಯ್ಯೋ, ನಾನಂತೂ ಒಬ್ಬಂಟಿಗನಾಗಿ ಹೋಗುವುದೇ ಹೆಚ್ಚು, ಇಂದು ಇಬ್ಬರಿದ್ದೇವೆ. ನಾನಂತೂ ಎಲ್ಲ ಪ್ರಾಥಮಿಕ ತಯಾರಿ ಮಾಡಿಕೊಂಡಿದ್ದೇನೆ.

ಏಕೆಂದರೆ ಕ್ರಮಿಸಬೇಕಾದ ಆಂತರ ಬಹಳ. ಕೆಲವೊಮ್ಮೆ ಎಲ್ಲಿ ಹೋಗುತ್ತೇನೆ, ಎಂದು ಹಿಂದಿರುಗಿ ಬರುತ್ತೇನೆ ಎಂಬ ನಿರ್ದಿಷ್ಟ ದಿಕ್ಕುದೆಸೆ ಇಲ್ಲದೆಯೇ ಹೊರಡುವವ ನಾನು. ಇಂದು ಹಾಗಲ್ಲ, ತಲುಪಬೇಕಾದ ತಾಣ ಯಾವುದೆಂದು ಗೊತ್ತಿದೆ. ಯಾವಾಗ
ತಲುಪುತ್ತೇನೆ, ಎಷ್ಟು ದಿನ ಇರುತ್ತೇನೆ, ಯಾವತ್ತು ಹಿಂದಿರುಗುತ್ತೇನೆ ಎಂಬ ಪಟ್ಟಿ ಸಿದ್ಧವಾಗಿದೆ. ಅದೂ ನೀವಿದ್ದೀರೆಂಬ ಕಾರಣಕ್ಕಾಗಿ ಮಾತ್ರ.

ಇಲ್ಲವಾದರೆ, ನಾನೇ ಹಾಕಿಕೊಂಡ ಪೂರ್ವಯೋಜಿತ ವೇಳಾಪಟ್ಟಿಯಲ್ಲಿ ಆಗಾಗ ಮನಸು ಬದಲಾಯಿಸಿ, ನನಗೆ ನಾನೇ ಆದೇಶ ಕೊಟ್ಟುಕೊಂಡು, ನಾನೇ ಪಾಲಿಸಿ, ಮನವರಿಕೆ ಮಾಡಿಕೊಳ್ಳುತ್ತೇನೆ. ಇಂದು ಜತೆಗೆ ನೀವಿದ್ದುದರಿಂದ ವೇಳಾಪಟ್ಟಿ ಅನುಸರಿಸಲು ಪ್ರಯತ್ನಿಸುತ್ತೇನೆ. ಆದರೂ, ಯಾವುದಕ್ಕೂ, ಕೊನೆಯ ಗಳಿಗೆಯ ಬದಲಾವಣೆಗೆ ತಯಾರಾಗಿರಿ. ನಿಮಗೆ ಸ್ವಲ್ಪ ಧೈರ್ಯ ಬರಬೇಕೆಂದರೆ ಒಮ್ಮೆ ಕಾರಲ್ಲಿ ಇಣುಕಿ ನೋಡಬೇಕು.

ದೊಡ್ಡ ನೀರಿನ ಗ್ಯಾಲನ್, ಒಂದಿಷ್ಟು ಬಿಸ್ಕತ್ತು, ಒಣಹಣ್ಣುಗಳು, ಕುರುಕಲು ತಿಂಡಿ ಇದೆ. ಏನು? ಹಣ್ಣು, ಚಾಕಲೇಟ್ ಇರಬೇಕಿತ್ತು ಅಂತನಾ? ಈ ಬೇಸಿಗೆಯಲ್ಲಿ ಅದೆಲ್ಲ ಎಷ್ಟು ಹೊತ್ತು ಸರಿಯಾಗಿರುತ್ತೆ ಹೇಳಿ? ಹಣ್ಣು ಹಾಳಾಗುತ್ತೆ, ಚಾಕಲೇಟ್ ಕರಗಿ ಹೋಗುತ್ತೆ. ಬೇಕಾದರೆ ಅವನ್ನೆಲ್ಲ ಪ್ರಯಾಣದ ದಾರಿಯಲ್ಲಿ ಸಿಗುವ ಸಣ್ಣಸಣ್ಣ ಅಂಗಡಿಗಳಲ್ಲಿ ತೆಗೆದುಕೊಂಡರಾಯಿತು. ಸದ್ಯ ಕಾರಲ್ಲಿ ಕೆಡದೆ ಇರುವ ತಿನಿಸುಗಳನ್ನು ಇಟ್ಟುಕೊಳ್ಳಬೇಕು ಅಂತ ಇಷ್ಟು ದಾಸ್ತಾನು. ಇನ್ನು ಜ್ಯೂಸ್‌ನದ್ದೂ ಇದೇ ಹಣೆಬರಹ. ಅದಕ್ಕಾಗಿ, ನೀರೇ ಒಳ್ಳೆಯದು ಅಂತ ಸಾಕಷ್ಟು ನೀರು ಇಟ್ಟುಕೊಂಡದ್ದು.

ಪ್ರಯಾಣದಲ್ಲಿ ದಣಿವಾಗದಿದ್ದರೂ ಆಗಾಗ ನೀರು ಕುಡಿಯುತ್ತಿರಬೇಕು. ಕುಡಿಯುವುದರ ಹೊರತಾಗಿಯೂ ಪ್ರಯಾಣದಲ್ಲಿ ನೀರಿನ ಅವಶ್ಯಕತೆ ಇರುವುದರಿಂದ ನೀರು ಎಷ್ಟಿದ್ದರೂ ಒಳ್ಳೆಯದೇ. ಟೈರು ಪಂಚರ್ ಆದರೆ ಬದಲಾಯಿಸಲು ಜ್ಯಾಕ್, ಸ್ಪಾನರ್, ಸ್ಪೇರ್ ಟೈರು ಎಲ್ಲವೂ ಇದೆ. ಅದರ ಜತೆಗೆ ಗಾಳಿ ಕಡಿಮೆಯಾದರೆ ತುಂಬಲು ಸಣ್ಣ ಏರ್‌ಕಂಪ್ರೆಸರ್ ಇದೆ. ಅವಶ್ಯ ಕತೆ ಬಿದ್ದರೆ ಇದನ್ನು ಸಿಗರೇಟ್ ಹೊತ್ತಿಸಲು ಇಟ್ಟಿರುವ ಸಾಕೆಟ್ ಗೆ ಸಿಕ್ಕಿಸಿದರಾಯಿತು. ಕಂಪ್ರೆಸರ್ ಕೆಲಸ ಮಾಡಲು
ಆರಂಭಿಸುತ್ತದೆ, ಎಷ್ಟು ಬೇಕೋ ಅಷ್ಟು ಗಾಳಿ ತುಂಬಿಸಿಕೊಂಡರಾಯಿತು.

ಇನ್ನು, ಹ್ಯಾಂಡ್ ಗ್ಲವ್ಸ್, ಕ್ಯಾಪ್, ಒಂದೆರಡು ವೇಸ್ಟ್ ಬಟ್ಟೆ ಎಲ್ಲವೂ ಇವೆ. ಹೌದು ಮತ್ತೆ, ಮಾರ್ಗಮಧ್ಯದಲ್ಲಿ ವಾಹನ
ಏನಾದರೂ ಕೆಟ್ಟು ನಿಂತಾಗ ಟಿಶ್ಯೂ ಪೇಪರ್ ಖಾಲಿಯಾದರೆ? ಹಾ, ರಾತ್ರಿ ವೇಳೆ ಸಹಾಯಕ್ಕೆ ಬೇಕೆಂದು ಒಂದು ಪವರ್ ಫುಲ್ ಟಾರ್ಚೂ ಇದೆ. ಅವೆಲ್ಲ ಎಮರ್ಜನ್ಸಿಯಲ್ಲಿ, ಅವಶ್ಯಕತೆ ಬಿದ್ದರೆ ಮಾತ್ರ ಪ್ರಯೋಜನಕ್ಕೆ ಬರುತ್ತವೆ.

ಇಷ್ಟೆಲ್ಲ ವಸವಂತ ಏಕೆ ಅಂತನಾ? ತುರ್ತುಸ್ಥಿತಿ ಅಥವಾ ಅವಶ್ಯಕತೆ ಯಾವಾಗ, ಎಲ್ಲಿ, ಹೇಗೆ ಬರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲವಲ್ಲ. ಆದ್ದರಿಂದ ದೂರದ ಪ್ರಯಾಣಕ್ಕೆ ಹೊರಡುವಾಗ ಇರಬೇಕಾದ ಮಿನಿಮಮ್ ತಯಾರಿ ಇದು. ಮೊದಲೆಲ್ಲ ದಿಕ್ಸೂಚಿ ಇಟ್ಟುಕೊಳ್ಳುತ್ತಿದ್ದೆ, ಈಗ ಮೊಬೈಲ್ ಬಂದ ಮೇಲೆ, ಅದರ ದಿಕ್ಸೂಚಿ ಇರುವುದರಿಂದ ಕೈಬಿಟ್ಟಿದ್ದೇನೆ.

ಭರವಸೆ ಬಂತಲ್ಲ, ಹಾಗಾದರೆ ಬನ್ನಿ ಕುಳಿತುಕೊಳ್ಳಿ. ಹೊರಡುವಾಗ ಒಂದು ದೇವರಸ್ತುತಿ ಇರಲಿ. ನನ್ನ ದಾಸ್ತಾನಿನಲ್ಲಿ ಡಾ. ರಾಜ್‌ಕುಮಾರ್, ಎಸ್‌ಪಿಬಿ, ಕಿಶೋರ್ ಕುಮಾರ್, ಮುಕೇಶ್, ಸಿ. ಅಶ್ವತ್ಥ್, ಲತಾದೀದಿ ಎಲ್ಲರೂ ಇದ್ದಾರೆ. ನಿಮಗೆ ಯಾರು ಇಷ್ಟ ಹೇಳಿ. ಅಥವಾ ನನ್ನ ಇಷ್ಟದ ಯಕ್ಷಗಾನದ ಪದ್ಯ ಆದೀತಾ? ಏಕಾಗ್ರತೆಗೆ ಕುಂದು ಉಂಟಾಗುವುದರಿಂದ, ಯೂಟ್ಯೂಬ್,
ಇನ್ಸ್ಟಾಗ್ರಾಂ, ಟಿಕ್‌ಟಾಕ್‌ನಂಥ ದೃಶ್ಯಮಾಧ್ಯಮಕ್ಕೆ ಅವಕಾಶವಿಲ್ಲ.

ಇ, ದಾರಿಯುದ್ದಕ್ಕೂ ಒಂದಷ್ಟು ಹರಟೆ ಹೊಡೆಯೋಣವೇ? ಆ ಆಯ್ಕೆಯೂ ನಿಮ್ಮದೇ. ಆದರೆ, ಬಹುಪಾಲು ನೀವೇ ಮಾತಾಡ
ಬೇಕು. ಏಕೆಂದರೆ ವಾಹನ ಚಾಲನೆಯ ಜವಾಬ್ದಾರಿ ನನ್ನದಾದದ್ದರಿಂದ, ಅದರೆಡೆಗೆ ಹೆಚ್ಚು ಗಮನ ಕೊಡಬೇಕಾದದ್ದರಿಂದ ನಾನು ಹೆಚ್ಚು ಮಾತಾಡುವುದಿಲ್ಲ. ಯಾವ ವಿಷಯವೇ ಆದರೂ ಕೇಳಿಸಿಕೊಳ್ಳುತ್ತೇನೆ. ಮಧ್ಯ ನಿಮ್ಮ ಪ್ರಶ್ನೆಗಳಿದ್ದರೆ, ನನಗೆ ತಿಳಿದದ್ದನ್ನು ಉತ್ತರಿಸುತ್ತೇನೆ. ನಾವು ಹೋಗುತ್ತಿರುವ ದಾರಿಯಲ್ಲಿ ವಾಹನ ಸಂಚಾರ ಕಮ್ಮಿಯೇ ಅನ್ನಿ. ಎಲ್ಲೋ ಅಗೊಮ್ಮೆ ಈಗೊಮ್ಮೆ ವಾಹನ ಕಾಣುತ್ತದೆ.

ಇನ್ನು ಜನರು ಬಿಡಿ, ಮರುಭೂಮಿಯ ರಾಜ ಎನ್ನಿಸಿಕೊಂಡ ಒಂಟೆಯೂ ಕಾಣುವುದಿಲ್ಲ. ಮೊದಲೆಲ್ಲ ಒಂಟೆಗಳು ರಸ್ತೆ ದಾಟು ವುದು, ದಾರಿಯಲ್ಲಿ ಕುಳಿತಿರುವುದು ಸಾಮಾನ್ಯವಾಗಿತ್ತು. ಈಗ ಹಾಗಲ್ಲ, ಚತುಷ್ಪಥ, ಷಟ್ಪಥ ರಸ್ತೆಯ ಎರಡೂ ಕಡೆ ತಂತಿ ಬೇಲಿ ಹಾಕಿದ್ದಾರೆ. ಐದೋ ಹತ್ತೋ ನಿಮಿಷಕ್ಕೆ ಒಂದೆರಡು ವಾಹನ ಓಡಾಡುವಾಗ, ಆ ಸಂಭ್ರಮಕ್ಕೆ ಇಷ್ಟು ಅಗಲದ ರಸ್ತೆ ಏಕೆ ಮಾಡಿದ್ದಾರೆ? ಈ ಸಂಭ್ರಮಕ್ಕೆ ಇಷ್ಟೆಲ್ಲ ವಸವಂತ ಯಾಕೆ ಎನ್ನಬೇಡಿ. ಅದಕ್ಕೆ ಕಾರಣವೂ ಇದೆ.

ಈ ದೇಶಗಳಲ್ಲಿ ಸಾಧ್ಯವಾದಷ್ಟು ಅಗಲವಾದ ರಸ್ತೆ ಮಾಡುತ್ತಾರೆ ಏಕೆಂದರೆ, ಇಲ್ಲಿಯ ವಾಹನಗಳ ಗಾತ್ರ ದೊಡ್ದದು. ಜಿಎಮ್‌ಸಿ, ಫೋರ್ಡ್, ಕ್ಯಾಡಿಲ್ಯಾಕ್, ಡಾಡ್ಜ್ ಇವೆಲ್ಲ ರಸ್ತೆ ಮೇಲೆ ಚಲಿಸುವ ಹಡಗುಗಳಿದ್ದಂತೆ. ಈಗೊಂದು ಹತ್ತಿಪ್ಪತ್ತು ವರ್ಷದ ಕೆಳಗೆ, ಜಪಾನ್, ಕೊರಿಯಾದ ಕಾರುಗಳು ಮಾರುಕಟ್ಟೆಗೆ ಬರುವ ಮೊದಲು ಅಮೆರಿಕದ ದೊಡ್ಡ ಕಾರುಗಳೇ ರಸ್ತೆ ಆಳುತ್ತಿದ್ದವು. ಹಾಗಾಗಿ ರಾಜಮಾರ್ಗಗಳೇ ನಿರ್ಮಾಣವಾದವು.

ಇನ್ನೊಂದು ಮುಖ್ಯ ಅಂಶವೆಂದರೆ, ಈ ಪ್ರದೇಶದಲ್ಲಿ ಆಗಾಗ ಬೀಸುವ ಮರಳುಮಾರುತ. ಗಾಳಿ ಜೋರಾಗಿ ಬೀಸುವಾಗ ತನ್ನೊಂದಿಗೆ ಸಾಕಷ್ಟು ಮರಳಿನ ಕಣಗಳನ್ನು ಹೊತ್ತು ತರುತ್ತದೆ. ಅವೆಲ್ಲ ಬಂದು ರಸ್ತೆಯ ಮೇಲೆ ಒಕ್ಕರಿಸುತ್ತವೆ. ಅಗಲವಾದ ರಸ್ತೆಯ ಮೇಲೆ ಅವು ನಿಲ್ಲುವುದಿಲ್ಲ ಎಂದಲ್ಲ, ರಸ್ತೆಯ ಇಕ್ಕೆಲಗಳಲ್ಲೂ ಸಾಕಷ್ಟು ಜಾಗ ಇರುವುದರಿಂದ, ಅಗಲವೂ ಹೆಚ್ಚು ಇರುವುದರಿಂದ ರಸ್ತೆಯ ಮಧ್ಯದವರೆಗೆ ಬಂದು, ವಾಹನ ಸಂಚಾರಕ್ಕೆ ತಡೆಯುಂಟಾಗುವುದಕ್ಕೆ ಸ್ವಲ್ಪ ಸಮಯ
ಬೇಕಾಗುತ್ತದೆ.

ರಸ್ತೆಯನ್ನು ಮರಳು ಸಂಪೂರ್ಣ ಅತಿಕ್ರಮಿಸುವುದರ ಒಳಗಾಗಿ, ಅಂತಹ ತುರ್ತುಪರಿಸ್ಥಿತಿ ಎದುರಿಸಲೆಂದೇ ಸಜ್ಜಾಗಿ ನಿಂತ
ಬುಲ್ಡೋಜರ್, ಶಾವೆಲ, ಗ್ರೇಡರ್, ಡಂಪ್‌ಟ್ರಕ್ ನಂಥ ಭಾರಿ ಯಂತ್ರೋಪಕರಣಗಳು ಫೀಲ್ಡಿಗೆ ಇಳಿಯುತ್ತವೆ. ಗಾಳಿ ನಿಲ್ಲು ವವರೆಗೂ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುತ್ತವೆ. ಗಾಳಿ ನಿಂತ ಒಂದೆರಡು ಗಂಟೆಯಲ್ಲಿ ಏನೂ ಆಗೇ ಇಲ್ಲ
ಎಂಬಂತೆ ರಸ್ತೆ ಶುಭ್ರವಾಗಿ ನಳನಳಿಸುತ್ತಿರುತ್ತದೆ. ರಸ್ತೆಬದಿಯಲ್ಲಿರುವ ಬೇಲಿ ಒಂಟೆಗಳು ರಸ್ತೆಗೆ ರದಂತೆ ತಡೆಯುತ್ತದೆ. ಎರಡು ಕಾರಣಗಳಿಂದ ನಾವು ಒಂಟೆಗಳಿಂದ ದೂರ ಇರಬೇಕು.

ಮೊದಲನೆಯದು, ಕುಳಿತ ಒಂಟೆಗೇ ಆಗಲಿ, ನಿಂತ ಒಂಟೆಗೇ ಆಗಲಿ, ಡಿಕ್ಕಿ ಹೊಡೆದರೆ ಹೆಚ್ಚು ನಷ್ಟವಾಗುವುದು ನಮಗೇ. ಕುಳಿತ ಒಂಟೆಗಿಂತಲೂ ನಿಂತ ಒಂಟೆಗೆ ಡಿಕ್ಕಿ ಹೊಡೆದರೆ ಅಪಾಯ ಹೆಚ್ಚು, ಏಕೆಂದರೆ ಒಂಟೆಗಳ ಕಾಲು ಉದ್ದ ತಾನೇ? ಅದಕ್ಕೆ ಗುದ್ದಿದಾಗ ಒಂಟೆಯ ಸಂಪೂರ್ಣ ದೇಹ ಕಾರಿನ ಗಾಜಿಗೆ ಅಪ್ಪಳಿಸುತ್ತದೆ. ಆ ವೇಗದಲ್ಲಿ ಗುದ್ದಿದಾಗ ಒಂಟೆ ಏನಾದರೂ ಚಾಲಕನ ಮೈಮೇಲೆ ಬಿದ್ದರೆ ಆತ ಪಡ್ಚಾ! ಇನ್ನೊಂದು ವಿಷಯವೆಂದರೆ, ಸತ್ತ ಒಂಟೆಗೆ ಯಾವತ್ತೂ ಬೆಲೆ ಹೆಚ್ಚು. ಸತ್ತ ಎಮ್ಮೆ
ಹತ್ತುಸೇರು ಹಾಲು ಕೊಡುತ್ತಿತ್ತು, ಕಾರಿನ ಚಕ್ರದ ಕೆಳಗೆ ಸಿಕ್ಕಿ ಸತ್ತ ಕೋಳಿ ಅಂಕದ ಕೋಳಿಯಾಗಿತ್ತು ಅನ್ನುತ್ತಾರಲ್ಲ, ಅದೇ ಲೆಕ್ಕ. ಬಹುತೇಕ, ಹಾಗೆ ಸತ್ತ ಒಂಟೆಗಳೆಲ್ಲ ರೇಸಿನಲ್ಲಿ ಓಡುತ್ತಿದ್ದ ಒಂಟೆಗಳಾಗಿರುತ್ತವೆ.

ನಿಜ, ಅರಬ್ಬರ ಕುದುರೆ ಮತ್ತು ಕುದುರೆಯ ಓಟದ ಪಂದ್ಯ ಹೇಗೆ ಜನಪ್ರಿಯವೋ, ಒಂಟೆಯ ರೇಸ್ ಕೂಡ ಇಲ್ಲಿ ಅಷ್ಟೇ
ಜನಪ್ರಿಯ. ಓಟದ ಪಂದ್ಯದಲ್ಲಿ ಭಾಗವಹಿಸುವ ಒಂದೊಂದು ಒಂಟೆಗೆ ಸಾಮಾನ್ಯವಾಗಿ ಭಾರತದ ಸುಮಾರು ಮೂವತ್ತರಿಂದ ಐವತ್ತು ಲಕ್ಷದವರೆಗಿನ ಬೆಲೆ ಇರುತ್ತದೆ.

ರಸ್ತೆಯ ಇಬ್ಬದಿಯ ಬೇಲಿ ನೋಡಿದಿರಿ, ಮಧ್ಯದ ಬೇಲಿ ಗಮನಿಸಿದಿರಾ? ಬರುವ, ಹೋಗುವ ವಾಹನಗಳ ದಾರಿ ಬೇರ್ಪಡಿಸಲು ಇರುವ ಈ ಬೇಲಿ ಸಾಮಾನ್ಯವಾಗಿ ಎಲ್ಲ ಕಡೆ ಇರುವಂಥದ್ದೇ. ಇಲ್ಲಿಯ ವಿಶೇಷ ಎಂದರೆ, ಒಮ್ಮೆ ಯಾರಾದರೂ ದಾರಿ ತಪ್ಪಿ ಮುಂದೆಹೋದರು ಅಂದುಕೊಳ್ಳಿ, ಅವರು ಹಿಂದಿರುಗಿ ಬರಬೇಕೆಂದರೆ 20-25 ಕಿ.ಮೀ. ದೂರ ಹೋಗಿ ಹಿಂದಿರುಗಿ ಬರಬೇಕು.

ಮಧ್ಯದಲ್ಲಿ ಟ್ರ್ಯಾಕ್ಟರ್ ತಿರುಗಿಸಲು, ಬೈಕ್ ತಿರುಗಿಸಲು ಎಂದು ಸಣ್ಣದಾರಿ ಮಾಡಿಕೊಳ್ಳುವಂತಿಲ್ಲ. ಏನಿದು, ಎಚ್ಚರಿಕೆಯ
ಗಂಟೆ? ಅಯ್ಯೋ ಪೆಟ್ರೋಲ್ ಮುಗಿದುಹೋಗುತ್ತಿದೆ ಎಂಬ ಸೂಚನೆ. ಮಾತಾಡುವ ಭರದಲ್ಲಿ ನಾವು ದಾರಿ ಕ್ರಮಿಸಿದ್ದೇ ತಿಳಿಯಲಿಲ್ಲ. ನಾವು ಈಗಾಗಲೇ ಸುಮಾರು ೫೦೦ ಕಿ.ಮೀ. ಪ್ರಯಾಣಿಸಿದ್ದೇವೆ. ಹೆದ್ದಾರಿ ಬಿಟ್ಟು ಊರಿನ ದಾರಿ ಹಿಡಿದಿದ್ದೇವೆ. ಮೊದಲು ವಾಹನಕ್ಕೆ ಇಂಧನ ತುಂಬಿಸಿಕೊಳ್ಳಬೇಕು.

ಪ್ರತಿ 2 ಗಂಟೆಯ ಸತತ ಪ್ರಯಾಣದ ನಂತರ ಮಧ್ಯದಲ್ಲಿ ಒಂದೆರಡು ಬಾರಿ ಇಂಜಿನ್ ತಣ್ಣಗಾಗಲಿ ಎಂದು 5-10 ನಿಮಿಷ ನಿಂತದ್ದೇನೋ ನಿಜ, ಆದರೆ ಇಂಧನದ ಕಡೆಗೆ ಗಮನ ಹರಿಸಲಿಲ್ಲವಲ್ಲ. ಅದಕ್ಕೇ ಹೇಳುವುದು, ವಾಹನ ಚಾಲನೆ ಎಂದರೆ, ಪೂರ್ಣಪ್ರಮಾಣದ, ಪೂರ್ಣಸಮಯದ ಕೆಲಸ. ಅಲ್ಲಿ ಒಂದು ಸೆಕೆಂಡಿನಅಲಕ್ಷ್ಯವೂ ಸಲ್ಲದು. ಈಗ ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಕಾರಿನಲ್ಲಿ ಮುಗಿದುಹೋಗುತ್ತಿರುವ ಇಂಧನ ತುಂಬಿಸಿಕೊಳ್ಳುವ ಕುರಿತು ಯೋಚಿಸೋಣ. ಆಮೇಲೆ ಮುಂದಿನ ಮಾತು.
ಈಗ ಸದ್ಯಕ್ಕೆ ಹತ್ತಿರದಲ್ಲಿ ಪೆಟ್ರೋಲ್ ಪಂಪ್ ಎಲ್ಲಿದೆ ನೋಡೋಣ.

ಅಯ್ಯೋ! ಇಲ್ಲಿ ನೆಟ್ ವರ್ಕೇ ಇಲ್ಲ. ಸೂರ್ಯ ಬೇರೆ ಮುಳುಗುತ್ತಿದ್ದಾನೆ. ಈಗೇನು ಮಾಡುವುದು?

ಪ್ರಯಾಣ ಮುಂದುವರಿಯುವುದು…

error: Content is protected !!