Thursday, 19th September 2024

ಮಾತಾಡಿ ಮಾಣಿಕ್ಯ ಕಳೆದುಕೊಂಡವರು !

ಅಶ್ವತ್ಥಕಟ್ಟೆ

ರಂಜಿತ್ ಹೆಚ್.ಅಶ್ವತ್ಥ

ಶ್ರೇಷ್ಠ ಕವಿ ಸರ್ವಜ್ಞ ‘ಮಾತಿನಿಂ ನಗೆಬರಹು. ಮಾತಿನಿಂ ಹಗೆ ಕಲಹು. ಮಾತಿನಿಂ ಸರ್ವಸಪದವು. ಲೋಕಕ್ಕೆ ಮಾತೇ ಮಾಣಿಕ್ಯ
ಸರ್ವಜ್ಞ’ ಎಂದು ಹೇಳುವ ಮೂಲಕ ಮಾತಿನ ಮಹತ್ವವನ್ನು ಸಾರಿದ್ದಾರೆ. ಆದರೆ ಇದೇ ಮಾತು ಮಾಡುವ ಎಡವಟ್ಟಿನ ಬಗ್ಗೆ
ಜಾನಪದರು, ‘ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು’ ಎನ್ನುವ ಮೂಲಕ ಮಾತನಾಡುವಾಗ ಇರಬೇ ಕಾದ ಎಚ್ಚರವನ್ನು ಹೇಳಿದ್ದಾರೆ.

ಈಗೇಕೆ ಮಾತಿನ ಉಕ್ತಿಗಳ ಬಗ್ಗೆ ಹೇಳಬೇಕು ಎನಿಸಿತು ಎಂದರೆ, ಇತ್ತೀಚಿನ ದಿನದಲ್ಲಿ ರಾಜಕೀಯ ನಾಯಕರು ತಮ್ಮ ಮಾತಿನ ಮೂಲಕ ‘ಪ್ರಚಾರ’ ಪಡೆಯುವ ಅತ್ಯುತ್ಸಾಹದಲ್ಲಿ ತಮ್ಮ ಘನತೆ ಮೀರಿ ಮಾತನಾಡಿ, ತಮ್ಮ ವರ್ಚಸ್ಸಿಗೆ ಧಕ್ಕೆ ತರಿಸಿಕೊಂಡವರು ಹೆಚ್ಚಾಗುತ್ತಿದ್ದಾರೆ. ಜನಪ್ರತಿನಿಧಿಯಾಗು ವವರಿಗೆ ಜನರನ್ನು ಸೆಳೆಯುವ ತಾಕತ್ತು ಇರಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಜನರ ಗಮನ ತಮ್ಮತ್ತ ಸೆಳೆಯುವುದಕ್ಕಾಗಿ ‘ವಿವಾದಾತ್ಮಕ ಹೇಳಿಕೆ’ ನೀಡಿದರೆ ಅದರಿಂದ ಲಾಭಕ್ಕಿಂತ ‘ನಷ್ಟ’ವೇ ಹೆಚ್ಚಾಗಿ ಕೊರಗ ಬೇಕಾಗುತ್ತದೆ.

ಈ ರೀತಿ ಮಾತಿನ ಪ್ರಭಾವದಿಂದ ತಮ್ಮ ಸ್ಥಾನಕ್ಕೆ ಅಥವಾ ತಮ್ಮ ಘನತೆಗೆ ಧಕ್ಕೆ ತಂದುಕೊಂಡ ಅನೇಕರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಕಂಡಿದ್ದೇವೆ. ಈ ರೀತಿ Attention grabbing  ಹೇಳಿಕೆ ನೀಡುವುದರಿಂದ ಆಗಬಹುದಾದ ಅನಾಹುತದ ಬಗ್ಗೆ ಅನೇಕರಿಗೆ ಮಾತನಾಡುವಾಗ ತಿಳಿದಿದ್ದರೆ, ಇನ್ನು ಕೆಲವರಿಗೆ ತಿಳಿಯದೇ ಹೇಳಿಕೆ ನೀಡುತ್ತಾರೆ. ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆ ಗಳು ಮಾತನಾಡುವ ನಾಯಕರಿಗೆ ಲಾಭವಾಗಿದ್ದರೆ, ಇನ್ನು ಕೆಲವೊಮ್ಮೆ ಈ ಹೇಳಿಕೆಗಳೇ ತಿರುಗುಬಾಣವಾಗಿ, ರಾಜಕೀಯ ಅಸ್ತಿತ್ವಕ್ಕೆ ಧಕ್ಕೆ ತರುವ ಅಪಾಯವನ್ನು ಸೃಷ್ಟಿಸುತ್ತವೆ.

ರಾಜ್ಯದಲ್ಲಿ ಕಳೆದೊಂದು ವಾರದ ಹಿಂದೆ ‘ಸಿಎಂ ಬದಲಾವಣೆ ನಿಶ್ಚಿತ. ಯಡಿಯೂರಪ್ಪ ಶಿವಮೊಗ್ಗಕ್ಕೆ ಮುಖ್ಯಮಂತ್ರಿಯಾಗಿ ದ್ದಾರೆ. ಸಚಿವ ಸ್ಥಾನಕ್ಕಾಗಿ ಯಾರ ಕಾಲು ಹಿಡಿಯುವುದು ಗೊತ್ತಿಲ್ಲ.’ ಎನ್ನುವ ಮಾತುಗಳನ್ನು ಬಿಜೆಪಿಯ ಹಿರಿಯ ಶಾಸಕ ಹಾಗೂ ಕೇಂದ್ರದಲ್ಲಿ ರಾಜ್ಯಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಬಸವಗೌಡ ಪಾಟೀಲ್ ಯತ್ನಾಳ್ ನೀಡಿದರು. ಈ ರೀತಿ ಸಿಎಂ ಬದಲಾವಣೆ ಎನ್ನುವ ಹೇಳಿಕೆ ನೀಡಲು ಯತ್ನಾಳ್ ಅವರಿಗಿದ್ದ ‘ಮೂಲ’ ಯಾವುದು? ಯಡಿಯೂರಪ್ಪ ಅವರನ್ನು ಹೈ ಕಮಾಂಡ್ ಬದಲಾಯಿಸುವುದೇ ಎನ್ನುವ ವಾದ ಒಂದೆಡೆಯಾದರೆ, ಈ ಹೇಳಿಕೆ ನೀಡುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಉಂಟಾದ ಅಲ್ಲೋಲ್ಲ ಕಲ್ಲೋಲ ಅಷ್ಟಿಷ್ಟಲ್ಲ. ಅದರಲ್ಲೂ ಉಪಚುನಾವಣೆ, ವಿಧಾನಪರಿಷತ್ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ, ಬಳಿಕ ಶೀಘ್ರದಲ್ಲಿಯೇ ಎದುರಾಗಲಿರುವ ಗ್ರಾಮ ಪಂಚಾಯಿತಿ ಚುನಾವಣಾ ಹೊಸ್ತಿಲಿನಲ್ಲಿ ಈ ರೀತಿ ಹೇಳಿಕೆ ಪಕ್ಷಕ್ಕೆ ಭಾರಿ ಮುಜುಗರವನ್ನು ಉಂಟು ಮಾಡಿತ್ತು.

ಮಾಧ್ಯಮಗಳು ಯತ್ನಾಳ್ ಅವರ ಆ ಹೇಳಿಕೆಯೊಂದನ್ನಿಟ್ಟುಕೊಂಡು ವಾರಗಟ್ಟಲೇ ರಾಜಕೀಯ ವಿಶ್ಲೇಷಣೆ ಮಾಡಿದರು. ಸರಕಾರ ಹಾಗೂ ಪಕ್ಷಕ್ಕೆ ಮುಜುಗರ ವನ್ನು ಉಂಟು ಮಾಡಿದ ಯತ್ನಾಳ್‌ರನ್ನು ಉಚ್ಚಾಟಿಸಬೇಕು ಎನ್ನುವ ವಾದಗಳು ಕೇಳಿ ಬಂತು. ಹಾಗೇ ನೋಡಿದರೆ ಯತ್ನಾಳ್ ಅವರ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ರಾಜಕೀಯವಾಗಿ ಮೇಲೆ ಬರಲು ಇರಬೇಕಾದ ಎಲ್ಲ ‘ಅರ್ಹತೆ’ಗಳಿದ್ದರೂ, ಕೇಂದ್ರ ಸರಕಾರದಲ್ಲಿ ವಾಜಪೇಯಿ ಅವರ ಸರಕಾರದಲ್ಲಿ ಕೇಂದ್ರ ರೈಲ್ವೇ ರಾಜ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರೂ, ರಾಜ್ಯ ರಾಜಕೀಯದಲ್ಲಿ ಸಿಗಬೇಕಾದ ಸ್ಥಾನಮಾನಗಳು ಅವರಿಗೆ ಸಿಗಲಿಲ್ಲ.

ಬಿಜೆಪಿಯಿಂದ ಹೊರಹೋಗಿ, ಪಕ್ಷೇತರವಾಗಿ ವಿಧಾನಪರಿಷತ್‌ಗೆ ಆಯ್ಕೆಯಾಗಿ, ಬಿಜೆಪಿಯಿಂದ ಅಂತರಕಾಯ್ದುಕೊಂಡಿದ್ದರು.
ವಾಜಪೇಯಿ, ಆಡ್ವಾಣಿ ಅವರ ಕಾಲದಲ್ಲಿ ದೆಹಲಿಯೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೂ, ಸಂಘ ಪರಿವಾರದೊಂದಿಗೆ ಉತ್ತಮ ಒಡನಾಟವಿದ್ದರೂ, ಪಕ್ಷಕ್ಕೆ ವಾಪಸು ಬರಲು ಹರಸಾಹಸಪಡಬೇಕಾಯಿತು. ಕೊನೆಗೆ ಯಡಿಯೂರಪ್ಪ ಅವರಿಂದ ಯತ್ನಾಳ್ ಬಿಜೆಪಿಯೊಳಗೆ ಬಂದರು. ಇಷ್ಟೊಂದು ರಾಜಕೀಯ ಏರುಪೇರು ಅನುಭವಿಸಲು ಹಾಗೂ ರಾಜಕೀಯ ಹಿರಿತನಕ್ಕೆ ಸಿಗಬೇಕಾದ ಗೌರವ – ಘನತೆಗಳು ಸಿಗದೇ ಇರಲು ಕಾರಣ, ‘ಮಾತು’.

ರಾಜಕೀಯಕ್ಕೆ ಬಂದ ದಿನದಿಂದಲೂ, ಯತ್ನಾಳ್ ಅವರು ನೇರ ಮಾತುಗಳಿಂದ ಅನೇಕ ಬಾರಿ ಸಮಸ್ಯೆಗೆ ಸಿಲುಕಿದ್ದಾರೆ. ಕೇವಲ ನೇರ ನುಡಿ ಮಾತ್ರವಲ್ಲದೇ, ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಮುಂದಿರುತ್ತಾರೆ. ಕಳೆದ ವಾರ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಕಳೆದ ವರ್ಷ ರಾಜ್ಯದಲ್ಲಿ ಪ್ರವಾಹ ಬಂದಿದ್ದ ಸಮಯದಲ್ಲಿ ತಮ್ಮದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ, ವಿವಾದಕ್ಕೆ ಗುರಿಯಾಗಿದ್ದರು. ಕೇವಲ ಯತ್ನಾಳ್ ಮಾತ್ರವಲ್ಲ ಬಿಜೆಪಿಯ ‘ಫೈರ್ ಬ್ರ್ಯಾಂಡ್’ ಎನ್ನುವ ಅನಂತಕುಮಾರ ಹೆಗಡೆ ಅವರು ಸಹ ಇದೇ ರೀತಿ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸದ್ದು
ಮಾಡುವುದನ್ನು ಗಮನಿಸಬಹುದು. ಪಕ್ಷದ ಸಿದ್ಧಾಂತವನ್ನು ಶಿರಸಾವಹಿಸಿ ಪಾಲಿಸುವ ಅವರು, ಮಾತಿಗೆ ನಿಂತರೆ ವಿವಾದ
ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ.

ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲೊಮ್ಮೆ ‘ಮುಸ್ಲಿಮರು ನನಗೆ ಮತ ಹಾಕಿ ಅಪವಿತ್ರಗೊಳಿಸಬೇಡಿ’ ಎಂದು ಹೇಳಿಕೆ ನೀಡುವ ಭಾರಿ ವಿವಾದ ಸೃಷ್ಟಿಸಿದ್ದರು. ಹೆಗಡೆ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಆಯ್ಕೆ
ಯಾಗಿದ್ದಾರೆ. ಯೂತ್ ಐಕಾನ್ ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ದಲ್ಲಿ ರಾಜ್ಯ ಖಾತೆ ಸಚಿವರನ್ನಾಗಿ ಹೆಗಡೆ ಅವರನ್ನು ಮಾಡಿದ್ದರು. ಕೌಶಲ್ಯಾಭಿವೃದ್ಧಿ ಖಾತೆಯನ್ನು ಹೊಂದಿದ್ದ ಹೆಗಡೆ ಅವರು ಸಚಿವರಾಗಿದ್ದ ಅವಽಯಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ವಿಷಯಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು, ವಿವಾದಾತ್ಮಕ ಹೇಳಿಕೆಗಳ ಮೂಲಕ. ಖಟ್ಟರ್ ಹಿಂದುತ್ವವಾದಿಯಾಗಿರುವುದಕ್ಕಿಂತ ಹೆಚ್ಚಾಗಿ, ಇತರ ಧರ್ಮಗಳ ಬಗ್ಗೆ ನಕರಾತ್ಮಕವಾಗಿ ಮಾತನಾಡುವ ಮೂಲಕವೇ ಹೆಚ್ಚು ಸದ್ದು ಮಾಡಿದ್ದರು.

ಆದ್ದರಿಂದಲೇ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರೂ, ‘ಸಚಿವ ಸ್ಥಾನ’ವನ್ನು ನೀಡುವ ಸಾಹಸಕ್ಕೆ ಬಿಜೆಪಿ ವರಿಷ್ಠರು ಕೈಹಾಕ ಲಿಲ್ಲ. ಆದ್ದರಿಂದಲೇ ಅವರನ್ನು ಪಕ್ಷದ ವರಿಷ್ಠರು, ‘ಪಕ್ಷದಲ್ಲಿ ಇದ್ದೂ ಇಲ್ಲದವರಂತೆ’ ನೋಡಿಕೊಳ್ಳುತ್ತದೆ. ಇವರಷ್ಟೇ ಅಲ್ಲದೇ ಕಾಂಗ್ರೆಸ್‌ನ ಸಿ.ಎಂ ಇಬ್ರಾಹಿಂ, ಜಮೀರ್ ಅಹಮದ್, ಈಗ ಬಿಜೆಪಿಯಲ್ಲಿರುವ ಎಚ್. ವಿಶ್ವನಾಥ್ ಅವರದ್ದು ಇದೇ ನಡೆ. ಇಬ್ರಾಹಿಂ, ಜಮೀರ್ ಮಾತನಾಡುತ್ತಿದ್ದಾರೆ ಎಂದರೆ, ಅಲ್ಲೊಂದು ವಿವಾದ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುವ ಮಾತು ರಾಜಕೀಯ ವಲಯದಲ್ಲಿರುವ ಪ್ರತಿಯೊಬ್ಬರು ಹೇಳುತ್ತಾರೆ. ಅನೇಕ ಬಾರಿ ಇವರು ನೀಡುವ ಹೇಳಿಕೆಗಳನ್ನು
‘ಡಿ-ಂಡ್’ ಮಾಡಿಕೊಳ್ಳಲು ಆಡಳಿತ ನಡೆಸುವ ಸರಕಾರಕ್ಕೆ ಅಥವಾ ಪಕ್ಷದ ಮುಖಂಡರಿಗೆ ಆಗುವುದಿಲ್ಲ.

ಆಡಳಿತದಲ್ಲಿದ್ದಾಗಲೂ ಪ್ರತಿಪಕ್ಷದ ನಾಯಕರ ರೀತಿ ಮಾತನಾಡುವ ಈ ನಾಯಕರ ಮಾತುಗಳನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ, ಯಾವ ಸ್ಥಾನವನ್ನು ನೀಡದೇ ಮೂಲೆಗುಂಪು ಮಾಡಿರುತ್ತಾರೆ. ಈ ರೀತಿ ಹೇಳಿಕೆ ನೀಡಿ ತಮ್ಮ ರಾಜಕೀಯ ಜೀವನಕ್ಕೆ ತಾವೇ ಚಪ್ಪಡಿಕಲ್ಲು ಹಾಕಿಕೊಂಡ ನಾಯಕರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣದಲ್ಲಿಯೂ
ಸಾಲು ಸಾಲು ಜನರಿದ್ದಾರೆ. ಕೆಲವರು ತಮ್ಮ ಹೇಳಿಕೆಗಳಿಂದಲೇ ಹಲವು ಸ್ಥಾನಗಳನ್ನು ಪಡೆದರೆ, ಇನ್ನು ಕೆಲವರು ಹೇಳಿಕೆಗಳೇ
ಅವರಿಗೆ ಹಾಗೂ ಅವರ ಪಕ್ಷಕ್ಕೆ ಮುಳುವಾಗಿರುವುದನ್ನುನೋಡಿದ್ದೇವೆ.

ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಮಹಾರಾಷ್ಟ್ರದ ಸಚಿವ ಸಂಜಯ ರಾವತ್ ಅವರು, ಇತ್ತೀಚಿಗೆ ನಟಿ ಕಂಗನಾ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದವಿವಾದಾತ್ಮಕ ಹೇಳಿಕೆ, ಇಡೀ ಸರಕಾರವನ್ನೇ ಅಳುಗಾಡಿಸುವ ಮಟ್ಟಿಗೆ ತಂದು ನಿಲ್ಲಿಸಿದೆ. ಹಾಗೇ ನೋಡಿದರೆ ಸಂಜಯ್ ರಾವತ್ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಶಿವಸೇನೆ ಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ಇನ್ನು ರಾಷ್ಟ್ರ ಬಿಜೆಪಿಯಲ್ಲಿ ಈ ರೀತಿ ಸದ್ದು ಮಾಡುವ ನಾಯಕರೆಂದರೆ ಅದು ಸುಬ್ರಮಣ್ಯ ಸ್ವಾಮಿ ಎಂದರೆ ತಪ್ಪಾಗಲಿಕ್ಕಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಹಲವು ಪ್ರಕರಣಗಳು ಬೀಳುವುದಕ್ಕೆ ಇವರೇ ಮೂಲ ಪುರುಷ. ಸುಬ್ರಮಣ್ಯ ಸ್ವಾಮಿ ಅವರು ಬಿಜೆಪಿ ರಾಜ್ಯಸಭಾ ಸದಸ್ಯರಾಗಿ, ಹಿಂದುತ್ವ, ರಾಷ್ಟ್ರೀಯತೆ ಹಾಗೂ ತಮ್ಮ ತತ್ವ ಸಿದ್ಧಾಂತಕ್ಕೆ ನೇರವಾಗಿಯೇ ಮಾತನಾಡುವರು. ಸುಬ್ರಮಣ್ಯ ಸ್ವಾಮಿ ಅವರಿಗೆ ತಮ್ಮದೇಯಾದ ಫೈನ್ ಕ್ಲಬ್ ಇದೆ. ಆದರೆ ಪಕ್ಷ ಮಾತ್ರವನ್ನು ಅವರನ್ನು ಸಂಪುಟಕ್ಕೆ ಅಥವಾ ಪಕ್ಷದ ಆಯಕಟ್ಟಿನ ಜಾಗದಲ್ಲಿ ಕೂರಿಸಲು ಮನಸು ಮಾಡಿಲ್ಲ.

ಉತ್ತಮ ವಾಗ್ಮಿ, ಆರ್ಥಿಕ ವಲಯದಲ್ಲಿ ಉತ್ತಮ ಹಿಡಿತ ಹೊಂದಿದ್ದರೂ, ಅವರಿಗೆ ಯಾಕೆ ಸ್ಥಾನ ಸಿಗಲಿಲ್ಲವೆಂದು ನೋಡುವು ದಾದರೆ, ಅದಕ್ಕೆ ಕಾರಣ ಅವರ ವಿವಾದಾತ್ಮಕ ಹೇಳಿಕೆಗಳು. ರಾಜಕೀಯದಲ್ಲಿರಬೇಕಾದ ಎಲ್ಲ ಗುಣಗಳಿದ್ದರೂ,  Diplomatic’  ಆಗಿ ಹೇಗಿರಬೇಕು ಎನ್ನುವ ಗುಣವನ್ನು ಮಾತ್ರ ಮೈಗೂಡಿಸಿಕೊಂಡಿಲ್ಲ. ಆದ್ದರಿಂದಲೇ ಅನೇಕ ಬಾರಿ ಸಮಸ್ಯೆಗೆ ಸಿಲುಕಿದ್ದಾರೆ.
ಇದೇ ರೀತಿ ಕಾಂಗ್ರೆಸ್‌ನ ಸಂಜಯ್ ನಿರುಪಮ್ ಸಹ ಸರ್ಜಿಕಲ್ ಸ್ಟ್ರೈಕ್ ಬಗ್ಗೆ, ಸೇನೆಯ ಬಗ್ಗೆ ವಿವಾದತ್ಮಕವಾಗಿ ಮಾತನಾಡಿ ಶಿಕ್ಷೆ ಅನುಭವಿಸಿದ್ದರು. ಇನ್ನು ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಕಮಲನಾಥ್ ಚುನಾವಣಾ ಸಮಯದಲ್ಲಿ ಮೋದಿ ವಿರುದ್ಧ ಮಾತನಾಡಿ, ಪಕ್ಷಕ್ಕೆ ಮುಜುಗರವನ್ನು ತಂದಿದ್ದರಿಂದ ಅವರ ವಿರುದ್ಧ ‘ಅಮಾನತು’ ಶಿಕ್ಷೆ ನೀಡಲಾಗಿತ್ತು. ಆದರೂ ಪಾಠ ಕಲಿಯದ ಕಮಲನಾಥ್ ಮೊನ್ನೆ ಮೊನ್ನೆ ತಾನೇ ಮಧ್ಯಪ್ರದೇಶ ಸಚಿವೆ ಇಮರ್ತಿ ದೇವಿ ಅವರನ್ನು ‘ಐಟಂ’ ಎಂದು ಕರೆದು ಭಾರಿ ವಿವಾದಕ್ಕೆ ಗುರಿಯಾಗಿದ್ದರು.

ಈ ರೀತಿ ಮಾತಿನಿಂದ ತಲೆಗೆ ಬಂದು ಕೊಂಡವರು ಒಂದು ಭಾಗವಾದರೆ, ರಾಜಕೀಯದಲ್ಲಿ ಕೆಲವರು ವಿವಾದ ಸೃಷ್ಟಿಸಲೆಂದೇ ಮಾತನಾಡುವವರು ಇದ್ದಾರೆ. ರಾಜ್ಯದಲ್ಲಿ ಜಮೀರ್ ಅಹಮದ್, ರೇಣುಕಾಚಾರ್ಯ ಸೇರಿದಂತೆ ಕೆಲ ನಾಯಕರು ತಾವು ಮಾತನಾಡುವುದು ವಿವಾದವಾಗುತ್ತದೆ ಎನ್ನುವ ಸ್ಪಷ್ಟ ಅರಿವಿದ್ದರೂ ಅದನ್ನು ಮಾತನಾಡುತ್ತಾರೆ. ಮಾತಿನ ಮೂಲಕವಾದರೂ ಪ್ರಚಾರ ಪಡೆಯಬೇಕೆಂಬ ಗೀಳು ಅವರಲ್ಲಿರುತ್ತದೆ. ಆದ್ದರಿಂದ ಅವರು ವಿವಾದ ಹೇಳಿಕೆ ನೀಡುವುದಕ್ಕೆ ತುದಿಗಾಲಲ್ಲಿ ನಿಂತಿರು ತ್ತಾರೆ. ಈ ರೀತಿ ನಾಯಕರು ತಮ್ಮ ಹೇಳಿಕೆ ನೀಡುವ ಮೊದಲು ಈ ಹೇಳಿಕೆ ಎಷ್ಟು ಡ್ಯಾಮೇಜ್ ಆಗುತ್ತದೆ ಎನ್ನುವ ಲಾಭ – ನಷ್ಟ ವನ್ನು ಹಾಕಿಕೊಂಡೇ ಮುಂದುವರಿಸುತ್ತಾರೆ. ಈ ಎರಡು ಕ್ಯಾಟಗರಿ ನಡುವೆ ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ
ಅಂತವರದ್ದು ಇನ್ನೊಂದು ವರ್ಗ. ಸೂಕ್ತ ತಯಾರಿಯಿಲ್ಲದೇ, ಮಾತನಾಡಿ ಸಿಕ್ಕಿ ಹಾಕಿಕೊಳ್ಳುತ್ತಾರೆ.

ಇದರಿಂದ ಅವರ ಪಕ್ಷಕ್ಕಿಂತ ಎದುರಾಳಿ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತದೆ ಎನ್ನುವ ಅರಿವು ಅವರಿಗೆ ಇರುವುದಿಲ್ಲ. ಹಾಗೇ ನೋಡಿದರೆ, ರಾಹುಲ್ ಗಾಂಧಿ ಅವರು ನೀಡಿದ ಅನೇಕ ಹೇಳಿಕೆಗಳೇ 2013, 2018  ಲೋಕಸಭೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದಕ್ಕೆ ಬುನಾದಿಗಳಾದವು. ನೀಡುವ ಹೇಳಿಕೆ ಡ್ಯಾಮೇಜ್ ಆಗಿದೆಯೆಂದು ಅದನ್ನು ಸರಿ ಮಾಡಲು ಹೋಗಿ ಮತ್ತೊಂದು ಅವಾಂತರ ಸೃಷ್ಟಿಸಿಕೊಳ್ಳುವುದನ್ನು ನೋಡಿದ್ದೇವೆ.

ರಾಜಕೀಯದಲ್ಲಿರುವವರು ಮಾತನಾಡದೇ ಮೌನಕ್ಕೆ ಶರಣಾದರೆ ಜನರನ್ನು ರೀಚ್ ಆಗುವುದು ಕಷ್ಟ ಎನ್ನುವುದನ್ನು ನಾವೆಲ್ಲ ಒಪ್ಪಿಕೊಳ್ಳಬೇಕು. ಆದರೆ ಬಾಯಿಂದ ಶಬ್ದಗಳನ್ನು ಹೊರಹಾಕುವ ಮೊದಲು ಏನು ಮಾತನಾಡುತ್ತಿದ್ದೇವೆ ಎನ್ನುವುದನ್ನು ಅರಿತಿರಬೇಕು. ಇಲ್ಲವೇ, ಹಾಕಿದ ಶಬ್ದವನ್ನು ಅರಗಿಸಿಕೊಳ್ಳುವ ಶಕ್ತಿ ಹಾಗೂ ಛಾತಿ ಎರಡೂ ಇರಬೇಕು. ಕೆಲ ದಿನಗಳ ಹಿಂದಷ್ಟೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಳಿನ್‌ಕುಮಾರ್ ಕಟೀಲ್ ವಿರುದ್ಧ ‘ಕಾಡು ಮನುಷ್ಯ’ ಎಂದು ಜರಿದರು. ಇದಕ್ಕೆ ಸಾಮಾಜಿಕ ಜಾಲತಾಣ ದಲ್ಲಿ ಹಾಗೂ ಆಡಳಿತ ಪಕ್ಷ ಬಿಜೆಪಿಯಲ್ಲಿ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಆದರೆ ಹೇಳಿದ ಮಾತನ್ನು ಅರಗಿಸಿಕೊಳ್ಳುವ ಶಕ್ತಿ ಅವರಲ್ಲಿ ಇದಿದ್ದರಿಂದ ಅಲ್ಲಿಯೇ ಅದು ಇರ್ತಥ್ಯವಾಗಿತ್ತು.

ಇದೇ ರೀತಿ ಸಮ್ಮಿಶ್ರ ಸರಕಾರ ಬೀಳುವ ಸಮಯದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಯಡಿಯೂರಪ್ಪ ಅವರು ವಿಷ ಜಂತು ಎನ್ನುವ ಅರ್ಥ ಬರುವ ರೀತಿಯಲ್ಲಿ ಸದನದಲ್ಲಿಯೇ ವಾಗ್ದಾಳಿ ನಡೆಸಿದ್ದರು. ಆದರೆ ಅದನ್ನು ಜಯಿಸಿಕೊಳ್ಳುವ ಶಕ್ತಿ ಅವರಲ್ಲಿ ಇತ್ತು. ಆದ್ದರಿಂದ ಕೇವಲ ರಾಜಕೀಯ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರು ತಮ್ಮ ನಾಲಿಗೆ ಯಿಂದ ಹೊರ ಬರುವ ಪ್ರತಿ ಮಾತಿನ ಮೇಲೆ ಎಚ್ಚರವಹಿಸಬೇಕು.

ಸಾರ್ವಜನಿಕ ಜೀವನದಲ್ಲಿರುವವರು ‘ಮೌನ’ವಾಗಿ ತಪಸ್ವಿಗಳ ರೀತಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದರೆ ಹಿರಿಯರು ಹೇಳಿರು ವಂತೆ ‘ಮಾತು ಬೆಳ್ಳಿಯಾದರೆ, ಮೌನ ಬಂಗಾರ’ ಎಲ್ಲಿ ಎಷ್ಟು ಮಾತನಾಡಬೇಕು ಎನ್ನುವುದನ್ನು ಅರಿತರೆ, ಶೇ.50ರಷ್ಟು ಗೆದ್ದಂತೆ ಎನ್ನುವುದನ್ನು ಮರೆಯಬಾರದು.

Leave a Reply

Your email address will not be published. Required fields are marked *