ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಇಂಗ್ಲಿಷ್ ಪದಕೋಶದಲ್ಲಿರುವ ಶೇ.ಎಪ್ಪತ್ತರಷ್ಟು ಪದಗಳನ್ನು ಯಾರೂ ಉಪಯೋಗಿಸುವುದಿಲ್ಲವಂತೆ. ಪದಗಳ ಅರ್ಥ ಗೊತ್ತಿದ್ದವರಿಗೂ, ಅವುಗಳನ್ನು ಬಳಸುವ ಅವಕಾಶ ಮತ್ತು ಸನ್ನಿವೇಶ ಸಿಗುವುದಿಲ್ಲವಂತೆ. ಹೀಗಾಗಿ ಬಹುತೇಕ ಪದಗಳು ಅಜ್ಞಾತ ವಾಗಿ, ಅಪರಿಚಿತವಾಗಿಯೇ ಉಳಿದು ಬಿಡುತ್ತಿವೆ.
ಉದಾಹರಣೆಗೆ, Abibliophobia. ಇದು ಒಂಥರಾ ವಿಚಿತ್ರ ಕಾಯಿಲೆ. ನನಗೆ ನಾಳೆ ಓದಲಿಕ್ಕೆ ಏನೂ ಸಿಗದೇ ಹೋಗಬಹುದು, ಆಗ ಏನು ಮಾಡುವುದು, ಹೇಗೆ ಸಮಯ ಕಳೆಯುವುದು, ಹೇಗೆ ಜ್ಞಾನ ವೃದ್ಧಿಸಿಕೊಳ್ಳುವುದು, ಹೇಗೆ ಸುತ್ತಲಿನ ವಿದ್ಯಮಾನಗಳನ್ನು ತಿಳಿದುಕೊಳ್ಳುವುದು ಎಂಬ ಭಯವೇ Abibliophobia. ಅಂಥ ಪರಿಸ್ಥಿತಿ ಯಾರಿಗೂ ಬರುವುದಿಲ್ಲ. ಒಂದು ವೇಳೆ ಬಂದರೆ ? ಪ್ರತಿದಿನ ಐದು ತಾಸು ಓದುವ ಅಭ್ಯಾಸವಿರುವವರನ್ನು ಜೈಲಿಗೆ ಹಾಕಿದರೆ, ಅಲ್ಲಿ ಓದಲು ಏನೂ ಸಿಗದಿದ್ದರೆ, ಆಗ ಅವರಿಗೆ ಈ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ನೀವು ಯಾವುದೋ ಒಂದು ಪುಸ್ತಕವನ್ನು ಶುಕ್ರವಾರ ಖರೀದಿಸಿ, ಮುಂದಿನ ಎರಡು ರಜಾ ದಿನಗಳಲ್ಲಿ ಓದಬೇಕೆಂದು ತೀರ್ಮಾನಿಸಿರುತ್ತೀರಿ. ಆದರೆ ಆ ಪುಸ್ತಕ ಲಭ್ಯವಿರುವ ಅಂಗಡಿ ನವೀಕರಣಕ್ಕಾಗಿ, ಮುಂದಿನ ಹತ್ತು ದಿನ ಬಾಗಿಲು ತೆರೆಯುವುದಿಲ್ಲ ಎಂದು ಗೊತ್ತಾದರೆ, ನಿಮ್ಮ ಮನಸ್ಸಿನಲ್ಲಿ, ‘ಅಯ್ಯೋ ಮುಂದಿನ ಹತ್ತು ದಿನ ಓದಲು ಯಾವ ಪುಸ್ತಕಗಳೂ ಸಿಗುವುದಿಲ್ಲವಲ್ಲ, ಆಗ ಸಮಯವನ್ನು ಕಳೆಯುವುದು ಹೇಗೆ ಎಂದು ಚಡಪಡಿಸಲಾರಂಭಿಸಿದರೆ ಅದು Abibliophobia. ಇನ್ನು ಕೆಲವು ಪದಗಳನ್ನು ಪದೇ ಪದೆ ಬಳಸುವ ಸಂದರ್ಭ ಬರುತ್ತದೆ. ಆದರೆ ಉಚ್ಚಾರದ ಕಾರಣದಿಂದ ಅಥವಾ ಅದರ ಅರ್ಥ ಬೇರೆಯವರಿಗೆ ಗೊತ್ತಿಲ್ಲದಿರ ಬಹುದು ಎಂಬ ಕಾರಣದಿಂದ ಅದನ್ನು ಬಳಸುವುದಿಲ್ಲ. ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಇಂಥ ದೊಡ್ಡ ದೊಡ್ಡ ಪದಗಳನ್ನು ಬಳಸುತ್ತಿದ್ದಾನೆ ಎಂದು ತಿಳಿದುಕೊಳ್ಳಬಹುದು ಎಂಬ ಕಾರಣಕ್ಕೆ ಅರ್ಥ ಗೊತ್ತಿದ್ದರೂ ಯಾರೂ ಬಳಸುವುದಿಲ್ಲ.
ಉದಾಹರಣೆಗೆ, Nudiustertian. ಇದರರ್ಥ ಮೊನ್ನೆೆ ಇಂಗ್ಲೀಷಿನಲ್ಲಿ ಈ Day before yesterday ಎಂದು ಹೇಳುತ್ತಾರೆ ಅಥವಾ ಬರೆಯುತ್ತಾರೆಯೇ ಹೊರತು Nudiustertian ಎಂದು ಹೇಳುವುದಿಲ್ಲ. ಕಾರಣ ಅದರ ಉಚ್ಚಾರ ಮತ್ತು ಆ ಪದ ನಿಕಟವಲ್ಲ ದಿರುವುದು. ಅದೇ ರೀತಿ ಇನ್ನೊಂದು ಪದವಿದೆ. ಅದು Pauciloquent. ನಿಮಗೊಬ್ಬ ಗಣ್ಯ ವ್ಯಕ್ತಿ ಸಿಗುತ್ತಾರೆ, ಅವರ ಜತೆ ದೀರ್ಘ ಸಂಭಾಷಣೆ ಸಾಧ್ಯವಾಗುವುದಿಲ್ಲ. ಕಾರ್ಯಕ್ರಮದಲ್ಲಿ ಅವರು ಸುದೀರ್ಘ ಮಾತಾಡಬಹುದು ಎಂದು ಭಾವಿಸಿರುತ್ತೀರಿ. ಆದರೆ ಅವರು ಕೆಲವೇ ಮಾತು ಹೇಳಿ ಕುಳಿತುಬಿಡುತ್ತಾರೆ. ಅಂಥವರು Pauciloquent ಅಂದರೆ ಮಿತಭಾಷಿ (person of few words) ಆದರೆ ಯಾರೂ ಈ ಪದವನ್ನು ಬಳಸುವುದಿಲ್ಲ. ಒಂದು ವೇಳೆ ಆ ಪದ ಬಳಸಿದರೆ ಸುದೀರ್ಘ ವ್ಯಾಖ್ಯಾನ ಮಾಡಬೇಕಾಗುತ್ತದೆ.
ಕೆಲವೊಮ್ಮೆ ಹೊಟ್ಟೆಯಲ್ಲಿ ಗೊಳಗೊಳ ಎಂದು ಸದ್ದಾಗುತ್ತಿರುತ್ತದೆ. ಅದರಿಂದ ಕಿರಿಕಿರಿಯೂ ಆಗಬಹುದು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಹೊಟ್ಟೆ ಕೆಟ್ಟಿದೆ ಎಂದು ಹೇಳುತ್ತೇವೆ. ಇಂಗ್ಲೀಷಿನಲ್ಲಿ stomach upset ಆಗಿದೆ ಎನ್ನುತ್ತೇವೆ. ಈ ಪದದ ಬದಲು Collywobbles ಎಂದು ಹೇಳಿದರೆ, ಹೊಟ್ಟೆನೋವೊಂದೇ ಅಲ್ಲ, ತಲೆನೋವೂ ಆರಂಭವಾಗಬಹುದು. ಹೊಟ್ಟೆಯಲ್ಲಿ ಈ
ಗೊಳಗೊಳವಾಗುವುದಕ್ಕೆ Collywobbles ಅಂತಾರೆ.
ಕೆಲವರು ಏನೋ ಹೇಳಿದರೆ ಇನ್ನೇನೋ ಅರ್ಥ ಮಾಡಿಕೊಳ್ಳುತ್ತಾರೆ. ಆನೆಯ ಸೊಂಡಿಲು ನೋಡಿ, ಕಂಬ ಎಂದು ಭಾವಿಸುತ್ತಾರೆ. ಮೀನಿನ ಬಾಲ ನೋಡಿ ತಿಮಿಂಗಿಲ ಅಂದುಕೊಳ್ಳುತ್ತಾರೆ. ಇಂಥ ಸ್ವಭಾವಕ್ಕೆ ಇಂಗ್ಲೀಷಿನಲ್ಲಿ prejudice (ಪೂರ್ವಗ್ರಹ) ಅಂತಾರೆ. ಅದನ್ನೇ Taradiddle ಅಂದರೆ ಯಾರಿಗೆ ಅರ್ಥವಾಗುತ್ತದೆ. ಪ್ರಯೋಜನಕ್ಕೆೆ ಬಾರದ ಪದಗಳಿರಬಹುದು, ಆದರೂ ಇರಬೇಕು. ಬೇರೆಯವರನ್ನು ಇಂಪ್ರೆಸ್ ಮಾಡಲಾದರೂ ಇರಬೇಕು. ಕನಿಷ್ಠ ಶಶಿ ತರೂರ್ ಅವರಂಥವರಾದರೂ ಇವುಗಳನ್ನು ಆಗಾಗ ಬಳಸಿ ಸುದ್ದಿ ಮಾಡುತ್ತಾರೆ ಮತ್ತು ಆ ಪದಗಳ ಇರುವಿಕೆಯನ್ನು ಜಾಹೀರಾತು ಮಾಡುತ್ತಾರೆ.
ಪದೆಪು, ಬರ್ದುಗೆ, ಕುಂಭದ್ರೋಣ ಇತ್ಯಾದಿ.. ಕನ್ನಡದಲ್ಲೂ ಇಂಥ (ಪ್ರಯೋಜನಕ್ಕೆ ಬಾರದ) ಅನೇಕ ಪದಗಳಿವೆ. ಕನ್ನಡ ಭಾಷಿಕರಿಗೂ ಇವುಗಳ ಅರ್ಥ ಗೊತ್ತಿರುವುದಿಲ್ಲ. ಪದ ಪ್ರೇಮಿಗಳಿಗೂ, ವಿದ್ವಾಂಸರಿಗೂ ಈ ಪದಗಳು ಕಬ್ಬಿಣದ ಕಡಲೆಯೇ. ಅವುಗಳನ್ನು ನಿತ್ಯ ಭಾಷೆಯಲ್ಲಿ ಯಾರೂ ಬಳಸುವುದಿಲ್ಲ. ಬಳಸಿದರೆ ಬೌನ್ಸರ್ ರೀತಿಯಲ್ಲಿ ಹಾರಿ ಹೋಗುತ್ತದೆ. ಇಂಥ ಪದಗಳನ್ನು ಎಳೆದು ತಂದು ಪತ್ರಿಯ ಹೆಡ್ ಲೈನ್‌ಗಳಲ್ಲಿಡಬೇಕು. ಆಗಲೇ ಅದು ಚಾಲ್ತಿಗೆ ಬಂದೀತು. ಇಲ್ಲದಿದ್ದರೆ ಗಡಂಗಿನಲ್ಲಿರುವ ಹಳೆ ಮದ್ಯದ ಥರಾ ಅಲ್ಲಿಯೇ ಉಳಿದುಬಿಡುತ್ತದೆ.
ಉದಾಹರಣೆಗೆ, ಪದೆಪು. ಇದು ಇಂಗ್ಲಿಷಿನ loveಗೆ ಸಂವಾದಿ ಪದ. ಆದರೆ ಯಾರೂ ಬಳಸುವುದಿಲ್ಲ. ‘ನನ್ನ-ನಿನ್ನ ನಡುವೆ ಪದೆಪು ಮೂಡಿದೆ’ ಎಂದು ಹುಡುಗಿಗೆ ಹೇಳಿದರೆ, ಪ್ರೀತಿಸುವವಳೂ ದೂರ ಹೋಗಬಹುದು. ಪದೆಪು ಪದಕ್ಕೆ ಹಿಗ್ಗು, ನಲಿವು, ಸೊಗಸು, ವಿಶ್ವಾಸ ಎಂಬ ಅರ್ಥಗಳೂ ಇವೆ. ವೇಶ್ಯಾವಾಟಿಕೆ ಅಥವಾ ಸೂಳೇಗಾರಿಕೆಗೆ ಪೋಟಾಧ್ಯಾಯ ಅಂದರೆ ಯಾರಿಗೆ ಅರ್ಥವಾದೀತು? ಇದು ಸಂಸ್ಕೃತ ಪದವಾದರೂ ಕವಿತೆಗಳಲ್ಲಿ ಪ್ರಾಸಕ್ಕಾಗಿ ಈ ಪದವನ್ನು ಕುವೆಂಪು ಅವರು ಬಳಸಿದ್ದಾರೆ. ಆದರೆ ಎಷ್ಟು ಜನ ಅದರ ಅರ್ಥವನ್ನು ಸರಿಯಾಗಿ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಕನ್ನಡದಲ್ಲಿ ಇನ್ನೊಂದು ಪದವಿದೆ. ಅದು ಬರ್ದುಗೆ. ಇದರ
ಅರ್ಥ ಸಾವು, ನಿಧನ, ಮರಣ. ಪತ್ರಿಕೆಯ ಒಂದೇ ಪುಟದಲ್ಲಿ ಐದಾರು ಅಪಘಾತ ಸುದ್ದಿಯಲ್ಲಿ ಸಾವು, ಮೃತ್ಯು, ನಿಧನ ಎಂದು ಬರೆದು, ಉಳಿದವುಗಳಿಗೆ ಅವನ್ನೇ ಮರುಬಳಕೆ ಮಾಡುವ ಬದಲು, ಬರ್ದುಗೆ ಎಂದು ಬಳಸಬಹುದು. ಆದರೆ ಬರ್ದುಗೆಯಲ್ಲಿ ಸಾವಿನ ಅರ್ಥವೇ ಸ್ಫುರಿಸುವುದಿಲ್ಲ. ಹೀಗಾಗಿ ಈ ಪದಕ್ಕೆ ‘ಬಳಕೆಭಾಗ್ಯ’ ಕರುಣಿಸುವುದು ಕಷ್ಟ.
ಧಾರಾಕಾರವಾಗಿ ಮಳೆಯಾದಾಗ ಪತ್ರಿಕೆಯ ಶೀರ್ಷಿಕೆಗಳಲ್ಲಿ ‘ಕುಂಭದ್ರೋಣ ಮಳೆ’ ಎಂಬ ಪದಪ್ರಯೋಗವನ್ನು ಇತ್ತೀಚಿನ
ವರ್ಷಗಳಲ್ಲಿ ಹೆಚ್ಚಾಗಿ ಬಳಸುತ್ತಿರುವುದನ್ನು ಗಮನಿಸಿರಬಹುದು. ಸೋಜಿಗವೆಂದರೆ, ಟಿವಿ ಹೆಡ್ ಲೈನ್‌ಗಳಲ್ಲೂ ಈ ಪದ
ಬಳಕೆಯಾಗುತ್ತಿರುವುದು. ಹಾಗೆ ನೋಡಿದರೆ, ‘ಕುಂಭದ್ರೋಣ’ ಅಂದರೆ ಮಳೆಯ ಕಲ್ಪನೆಯೇ ಬರುವುದಿಲ್ಲ. ಕುಂಭದ್ರೋಣ ಅಂದರೆ ಕೊಡ ಅಥವಾ ಕಲಶದಲ್ಲಿ ಸುರಿಯುವುದು ಎಂದರ್ಥ. ಆಕಾಶದಿಂದ ನೀರನ್ನು ಕೊಡದಿಂದ ಸುರಿದರೆ ಹೇಗಿರುವುದೋ, ಆ ರೀತಿ ಧಾರಾಕಾರ ಮಳೆಯಾಗುತ್ತಿದೆ ಎನ್ನುವಾಗ ಈ ಪದವನ್ನು ಬಳಸುತ್ತಾರೆ.
ಇದು ಸಹ ಪದಕೋಶದಲ್ಲಿಯೇ ಉಳಿದು ಬಿಡಬಹುದಾದ ಪದ. ಆದರೆ ಸುದ್ದಿಮನೆಯಲ್ಲಿನ ಸೃಜನಶೀಲ ಮತ್ತು ‘ಧೈರ್ಯಶಾಲಿ’ (ಇಂಥ ಪದವನ್ನು ಶೀರ್ಷಿಕೆಯಲ್ಲಿ ಬಳಸಲು ಧೈರ್ಯವೂ ಬೇಕು) ಉಪಸಂಪಾದಕನಿಂದಾಗಿ ಈ ಪದ ಚಾಲ್ತಿಗೆ ಬಂದಿದೆ. ಈಗಂತೂ ‘ಕುಂಭದ್ರೋಣ ಮಳೆ’ ಪ್ರಯೋಗ ಆಡುಮಾತಿಗೂ ಬಂದಿದೆ. ಕಳೆದ ನಾಲ್ಕು ತಿಂಗಳ ಹಿಂದೆ, ಭಾರತದ ಆರ್ಥಿಕ ಪರಿಸ್ಥಿತಿ ತೀವ್ರ ಹಿನ್ನೆಡೆ ಅನುಭವಿಸಿದಾಗ, ‘ವೈಪಥದಲ್ಲಿ ಭಾರತದ ಕುಂಟು ನಡಿಗೆ’ ಎಂಬ ಶೀರ್ಷಿಕೆ ನೀಡಿದ್ದೆವು. ಆಗ ಕೆಲವು
ಓದುಗರು ‘ವೈಪಥ ಅಂದರೇನು?’ ಎಂದು ಕೇಳಿ ಬರೆದಿದ್ದರು, ಫೋನ್ ಮಾಡಿದ್ದರು. ಅದಾದ ಬಳಿಕ ಅನೇಕ ಸಲ ಆ ಪದವನ್ನು
ಬಳಸಿದ್ದರಿಂದ ಅದು ಈಗ ಪರಿಚಿತವಾಗುತ್ತಿದೆ. ಅಂದ ಹಾಗೆ ‘ವೈಪಥ’ ಅಂದರೆ ಸುಗಮವಲ್ಲದ ದಾರಿ ಎಂದರ್ಥ. ಒಂದು
ಪದವನ್ನು ಪದಕೋಶದಿಂದ ಹೊರಗೆಳೆದುಕೊಂಡು ಬಂದು ಬಳಸಿದರೆ ಮಾತ್ರ ಚಲಾವಣೆಗೆ ಬರುತ್ತದೆ.
ನಾಳೆ ಕನ್ನಡದ ಸಿನಿಮಾ ನಿರ್ದೇಶಕನೊಬ್ಬ ‘ಪದೆಪು’ ಎಂಬ ಹೆಸರಿನ ಸಿನಿಮಾ ಮಾಡಿದರೆ, ಅದರಲ್ಲಿ ಕಿಚ್ಚ ಸುದೀಪ್ ನಾಯಕನಟನಾಗಿ ನಟಿಸಿದರೆ, ಆ ಪದ ಒಂದು ವಾರದೊಳಗೆ ಎಲ್ಲ ಕನ್ನಡಿಗರಿಗೆ ಪರಿಚಿತವಾಗುವುದರಲ್ಲಿ ಸಂದೇಹವಿಲ್ಲ.
ಚೇತನ್ ಭಗತ್ ಹೊಸ ಕಾದಂಬರಿ ನಾನು ಕೇಶವ. ನನ್ನ ಜೀವನ ಬರ್ಬಾದ್ ಆಗಿದೆ.
ನನಗೆ ನನ್ನ ಜಾಬ್ ಅಂದ್ರೆ ಸ್ವಲ್ಪವೂ ಇಷ್ಟ ಇಲ್ಲ. ನನ್ನ ಗರ್ಲ್ ಫ್ರೆೆಂಡ್ ಹೆಸರು ಝರಾ. ಅವಳದು ಅಪೂರ್ವ ಸೌಂದರ್ಯ.
ಅವಳು ಕಾಶ್ಮೀರಿ ಮುಸ್ಲಿಂ. ಅವಳು ನನ್ನನ್ನು ಬಿಟ್ಟಿದ್ದಾಳೆ. ನಾನು ನಿಮಗೆ ಹೇಳಿಲ್ಲ… ನನ್ನದು ಸಂಪ್ರದಾಯಸ್ಥರ ಕುಟುಂಬ.
ಅವೆಲ್ಲ ಇರಲಿ ಬಿಡಿ. ನಾಲ್ಕು ವರ್ಷಗಳ ಹಿಂದೆ, ನಾನು ಮತ್ತು ಝರಾ ದೂರವಾದೆವು.
ಅವಳು ಜೀವನದಲ್ಲಿ ಮುಂದಕ್ಕೆ ಹೋದಳು. ಆದರೆ ನನಗೆ ಅದು ಸಾಧ್ಯವಾಗಲಿಲ್ಲ. ಅವಳನ್ನು ಮರೆಯಲು ನಾನು ದಿನವೂ
ಕುಡಿಯಲಾರಂಭಿಸಿದೆ. ಅವಳಿಕೆ ಫೋನ್ ಮಾಡಿದೆ, ಮೆಸೇಜ್ ಮಾಡಿದೆ, ಸೋಷಿಯಲ್ ಮೀಡಿಯಾದಲ್ಲೆಲ್ಲ ಅವಳನ್ನು
ಹಿಂಬಾಲಿಸಿದೆ. ಅವಳು ನನ್ನನ್ನು ತಿರಸ್ಕರಿಸಿದಳು. ಹೀಗಿರುವಾಗ ಒಂದು ದಿನ.. ಅಂದು ಅವಳ ಬರ್ಥಡೇ ರಾತ್ರಿ ಝರಾ ನನಗೆ ಮೆಸೇಜ್ ಮಾಡಿದಳು !
ಅನಂತರ ಅವಳು ಫೋನ್ ಮಾಡಿದಳು. ಹಳೆ ಪ್ರಸಂಗಗಳನ್ನು ಮೆಲುಕು ಹಾಕಿದೆವು. ಅವಳು ಎಂದಿನಂತೆ ತನ್ನ ಹಾಸ್ಟೆಲ್ ರೂಮ್ ನಂಬರ್ 105ಕ್ಕೆ ಕರೆದಳು. ನಾನು ಅಲ್ಲಿಗೆ ಹೋಗಬಾರದಿತ್ತು. ಆದರೆ ನಾನು ಹೋದೆ.. ಆ ಕ್ಷಣದಿಂದ ನನ್ನ ಬದುಕು ಬದಲಾಗಿ ಹೋಯಿತು. ಇದು Love Story ಅಲ್ಲ, Unlove Story !
ಇದು ಭಾರತದ ಇಂಗ್ಲಿಷ್ ಕಾದಂಬರಿಲೋಕದ ಗಂಡು ಸನ್ನಿ ಲಿಯಾನ್ (?), ಚೇತನ್ ಭಗತ್ ಅವರ ಹೊಸ ಕಾದಂಬರಿಯ
ಬೆನ್ನುಡಿ. ಅಂದ ಹಾಗೆ ಇದರ ಹೆಸರು – The Girl In Room 105. ಈ ಕೃತಿ ಬಿಡುಗಡೆಯಾದ ದಿನವೇ ಬಾಚಿಕೊಂಡು ಓದುತ್ತಿದ್ದೇನೆ. ಬೆಳಗ್ಗೆ ತಿಂಡಿ ತಿಂದ ನಂತರ ಬಾಯಲ್ಲಿ ಕವಳ ಇಟ್ಟುಕೊಂಡು ಜಗತ್ತಿನ ಎಲ್ಲಾ ಜನ, ಸಮಸ್ಯೆಗಳ ಬಗ್ಗೆ
ಮಾತಾಡುವ ಶಿರಸಿಯ ಹೆಗಡೆಗಳಂತೆ, ಚೇತನ್ ಭಗತ್ ಭಾಳ ಮಜವಾಗಿ ಕತೆ ಹೇಳುತ್ತಾ ಹೋಗುತ್ತಾನೆ. ಜಗಿದಷ್ಟೂ ಹಲ್ಲಿಗೆ
ಕಾವು, ಎಲೆಅಡಿಕೆ ರಸ ಹೀರಿದವನೇ ರುಚಿ ಬಲ್ಲ !
ಕಾಫಿಕ್ಲಾಟ್‌ಸ್ಚ್ ಪಾರ್ಟಿ !
ಎರಡು ವರ್ಷಗಳ ಹಿಂದೆ, ಜರ್ಮನಿಯಲ್ಲಿ ನಡೆಯುವ ಫ್ರಾಂಕ್ ಫರ್ಟ್ ಪುಸ್ತಕ ಮೇಳಕ್ಕೆ ಹೋಗಿದ್ದೆ. ಅಲ್ಲಿ ಜಗತ್ತಿನೆಲ್ಲೆಡೆ
ಗಳಿಂದ ಪುಸ್ತಕ ಪ್ರಕಾಶಕರು, ಲೇಖಕರು, ಮಾರಾಟಗಾರರು, ಓದುಗರು, ಲಿಟರರಿ ಏಜೆಂಟುಗಳು ದೊಡ್ಡ ಸಂಖ್ಯೆಯಲ್ಲಿ
ಭಾಗವಹಿಸುತ್ತಾರೆ. ಅದೊಂದು ರೀತಿಯಲ್ಲಿ ಪುಸ್ತಕ ಕುಂಭಮೇಳ !
ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನ ಭಾಗವಹಿಸುತ್ತಾರೆ. ಈ ಸಲದ ಪುಸ್ತಕಮೇಳ ಆನ್‌ಲೈನ್‌ನಲ್ಲಿ ನಡೆಯಲಿದೆ. ಅಲ್ಲಿ ನೂರಾರು ವೇದಿಕೆಗಳಲ್ಲಿ, ಲೇಖಕರೊಂದಿಗೆ ಸಂವಾದ ನಡೆಯುತ್ತದೆ. ಓದುಗರು ತಮ್ಮ ಇಷ್ಟದ ಲೇಖಕ – ಲೇಖಕಿಯರ ಜತೆ ಚರ್ಚಿಸುತ್ತಾರೆ, ಸೆಲ್ಫಿ ತೆಗೆದುಕೊಳ್ಳುತ್ತಾರೆ, ಪುಸ್ತಕಗಳಿಗೆ ಹಸ್ತಾಕ್ಷರ ಪಡೆಯುತ್ತಾರೆ.
ಕೊನೆಯಲ್ಲಿ ಸಾಹಿತಿಗಳೊಂದಿಗೆ ಕಾಫಿ. ಇದರಲ್ಲಿ ಆಹ್ವಾನ ಇದ್ದವರಿಗೆ ಮಾತ್ರ ಪ್ರವೇಶ. ಈ ಕಾರ್ಯಕ್ರಮಕ್ಕೆ kaffeeklatsch ಅಂತಾರೆ. ಜರ್ಮನಿಯಲ್ಲಿ Kaffee ಅಂದರೆ ಕಾಫಿ, Klatsch (ಕ್ಲಾಟ್‌ಸ್ಚ್ ) ಅಂದರೆ ಗಾಸಿಪ್.
ಕಾಫಿಕ್ಲಾಟ್‌ಸ್ಚ್ ಅಂದರೆ ಕಾಫಿ ಕುಡಿಯುತ್ತಾ ಗಾಸಿಪ್ ಮಾಡುವ ಕೂಟ. ಇದು ಎಲ್ಲಾ ಗೋಷ್ಠಿ ಮತ್ತು ಸಂವಾದಗಳಿಗಿಂತ
ಆಸಕ್ತಿದಾಯಕವಾಗಿರುತ್ತದೆ. ಈ ಕಾಫಿಕ್ಲಾಟ್‌ಸ್ಚ್ ನಲ್ಲಿ ಬರೀ ಆತ್ಮರತಿ ಮತ್ತು ಪರನಿಂದನೆ (ತನ್ನನ್ನು ಹೊಗಳಿಕೊಳ್ಳುವುದು
ಮತ್ತು ಬೇರೆಯವರನ್ನು ಟೀಕಿಸುವುದು). ಯಾವ ಲೇಖಕ ಎಲ್ಲಿಂದ ಕದ್ದು ಬರೆದಿದ್ದಾನೆ, ಯಾವ ಲೇಖಕನಿಗೆ ಎಷ್ಟು ಸಂಭಾವನೆ ಬಂತು, ಯಾವ ಲೇಖಕನ ಕೃತಿ ಫ್ಲಾಪ್ ಆಯಿತು, ಯಾರು ಯಾರ ಜತೆ ಓಡಾಡುತ್ತಿದ್ದಾರೆ, ಯಾರ ಮದುವೆ ಮುರಿದುಬಿತ್ತು.. ಇವೇ ಅಲ್ಲಿ ಚರ್ಚೆಯಾಗುತ್ತವೆ. ಕಾಫಿಕ್ಲಾಟ್‌ಸ್ಚ್ ಪಾರ್ಟಿಗೆ ಆಹ್ವಾನ ಬಂದರೆ, ಸಾಹಿತ್ಯಲೋಕದ ತಾಜಾ ಗಾ‘ಸಿಪ್ಪು’ಗಳನ್ನು ಮೆಲ್ಲಬಹುದು.
ನಾನು ಹೋದ ಒಂದು ಕಾಫಿಕ್ಲಾಟ್‌ಸ್ಚ್ ಪಾರ್ಟಿಯಲ್ಲಿ ಸ್ಲೊವೇನಿಯಾದ ಲೇಖಕ ಮತ್ತು ಅವನ ಮಾಜಿ ಗರ್ಲ್ ಫ್ರೆಂಡ್ ಎಲ್ಲರ ಎದುರೇ ಜೋರಾಗಿ ಜಗಳ ಮಾಡಿಕೊಂಡರು. ಈ ಲೇಖಕ ಮಹಾಶಯ ಕಾದಂಬರಿ ಬರೆಯಲು ಆರು ತಿಂಗಳು ಬಿಡುವು ಬೇಕು ಎಂದು ಪೊಲ್ಯಾಂಡಿಗೆ ಹೋದವನು ಅಲ್ಲಿ ಮತ್ತೊಬ್ಬಳನ್ನು ಕಟ್ಟಿಕೊಂಡಿದ್ದ. ಹೋಗುವಾಗ ಈಕೆಯನ್ನು ಬಸುರು ಮಾಡಿದ್ದ. ಇದನ್ನು ಗಮನಿಸಿದ, ನನ್ನ ಪಕ್ಕದಲ್ಲಿದ್ದ ಪತ್ರಕರ್ತನೊಬ್ಬ, ‘ಇದು ನಿಜವಾದ ಸಾಹಿತ್ಯ ಕೃಷಿ. ಕಾದಂಬರಿಕಾರನೇ ತನ್ನ ಕಾದಂಬರಿಯ ನಾಯಕನಾಗಿದ್ದಾನೆ’ ಎಂದು ಉದ್ಗಾರ ತೆಗೆದು ಈ ಬಿಗು ವಾತಾವರಣವನ್ನು ತಿಳಿಗೊಳಿಸಿದ್ದ.
ಕಾಫಿ ಕುಡಿದೇ ಇಷ್ಟೆಲ್ಲಾ ರಾದ್ದಾಂತ ಮಾಡಿಕೊಳ್ಳುತ್ತಾರೆಂದರೆ, ಈ ಪಾರ್ಟಿಯ ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು.
ಮಧ್ಯಾಹ್ನ ನಾಲ್ಕರಿಂದ ಸಾಯಂಕಾಲ ಏಳರೊಳಗೆ ನಡೆಯುವ ಈ ಪಾರ್ಟಿಯಲ್ಲಿ ಬೇರೆ ಬೇರೆ ದೇಶಗಳ ಕಾಫಿ ದಂಡಿಯಾಗಿ
ಸರಬರಾಜಾಗುತ್ತವೆ. ಜತೆಗೆ ಬಿಸ್ಕತ್, ಕುರುಕಲು ತಿಂಡಿ. ಜನ ಅಲ್ಲಲ್ಲಿ ಗುಂಪು ಕಟ್ಟಿಕೊಂಡು, ಅಲ್ಲಿರುವವರ ಬಗ್ಗೆೆಯೇ ಟೀಕೆ ಗಳನ್ನು ಮಾಡುತ್ತಿರುತ್ತಾರೆ. ನೀವು ನಾಲ್ಕೈದು ಜನ ಹರಟೆ ಹೊಡೆಯುತ್ತಿದ್ದಾಗ, ಹೊಸ ವ್ಯಕ್ತಿ ಸೇರಿದರೆ, ಆತ ಬಿಟ್ಟು ಬಂದ ಗುಂಪಿನಲ್ಲಿದ್ದವರ ಬಗ್ಗೆೆಯೇ ಮಾತಾಡುತ್ತಾನೆ. ಈ ಗುಂಪಿನಿಂದ ಯಾರಾದರೂ ಹೋದರೆ, ಉಳಿದವರೆಲ್ಲ ಅವನ ಬಗ್ಗೆೆಯೇ ಮಾತಾಡುತ್ತಾರೆ. ಅಂದರೆ ಎಲ್ಲರೂ ಎಲ್ಲರ ಬಗ್ಗೆ ಲೂಸ್ ಟಾಕ್ ಮಾಡುತ್ತಾರೆ. ಈ ಪಾರ್ಟಿಯನ್ನು ಏರ್ಪಡಿಸುವುದೇ ಆ ಕಾರಣಕ್ಕೆ. ಜನ ಕಾಫಿಗಿಂತ ಗಾಸಿಪ್‌ಗಳನ್ನು ಹೆಚ್ಚು ಹೀರುತ್ತಾರೆ. ಗುಂಡು ಪಾರ್ಟಿಗಿಂತ ಕಾಫಿಕ್ಲಾಟ್‌ಸ್ಚ್ ಹೆಚ್ಚು ರೋಚಕ ವಾಗಿರುತ್ತದೆ. ಅಷ್ಟಕ್ಕೂ ಆತ್ಮರತಿ ಮತ್ತು ಪರನಿಂದನೆಯಲ್ಲಿರುವಷ್ಟು ಮಜಾ ಮತ್ಯಾವುದರಲ್ಲಿದೆ?
ದೇಶದ ಮುಖ್ಯಸ್ಥರ ಹವ್ಯಾಸ
ಒಂದು ಸಾಯಂಕಾಲ ಪ್ರಧಾನಿ ರಾಜೀವ್ ಗಾಂಧಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಜನರಲ್ ಜಿಯಾ-ಉಲ್-ಹಕ್ ಇಬ್ಬರೇ
ನ್ಯೂಯಾರ್ಕಿನ ಹೊಟೇಲಿನಲ್ಲಿ ಭೇಟಿಯಾಗಿದ್ದರಂತೆ. ಅದು ಖಾಸಗಿ ತೀರಾ ಭೇಟಿಯಾಗಿತ್ತು. ಇಬ್ಬರೂ ಕುಶಾಲು ಮಾತಿನಲ್ಲಿ
ತೊಡಗಿದ್ದರು.
‘ರಾಜೀವ್, ನಿಮ್ಮ ಪ್ರಿಯವಾದ ಹವ್ಯಾಸವೇನು?’ ಎಂದು ಜನರಲ್ ಕೇಳಿದರಂತೆ. ‘ನಮ್ಮ ದೇಶದಲ್ಲಿ ಜನ ನನ್ನ ಬಗ್ಗೆ ಜೋಕು ಗಳನ್ನು ಹೇಳಿ ನಗುತ್ತಾರೆ. ಅಂಥ ಜೋಕುಗಳನ್ನು ಸಂಗ್ರಹಿಸುವುದು ನನ್ನ ಪ್ರಿಯವಾದ ಹವ್ಯಾಸ.’ ಎಂದು ರಾಜೀವ್ ಹೇಳಿದರಂತೆ. ‘ಜನರಲ್, ನಿಮ್ಮ ಹವ್ಯಾಸವೇನು?’ ಎಂದು ರಾಜೀವ್ ಕೇಳಿದರಂತೆ.
ಅದಕ್ಕೆ ಜನರಲ್ ಜಿಯಾ ಹೇಳಿದರಂತೆ – ‘ನನ್ನ ದೇಶದಲ್ಲೂ ಜನ ನನ್ನ ಬಗ್ಗೆೆ ಜೋಕುಗಳನ್ನು ಹೇಳಿ ನಗುತ್ತಾರೆ. ಹಾಗೆ ಜೋಕು ಗಳನ್ನು ಹೇಳಿ ನಕ್ಕವರನ್ನು ಹಿಡಿದು ಸಂಗ್ರಹಿಸಿಡುವುದು ನನ್ನ ಪ್ರಿಯವಾದ ಹವ್ಯಾಸ.’