Sunday, 8th September 2024

ಮದುವೆ ಪ್ರೀತಿಗಾಗಿ, ಸಾಂಗತ್ಯ ಅನೇಕ ಕಾರಣಗಳಿಗಾಗಿ

ಶ್ವೇತ ಪತ್ರ

shwethabc@gmail.com

ಕೆಲವೊಂದು ಸಾಂಪ್ರದಾಯಿಕ ಸಮಾಜಗಳನ್ನ ಹೊರತುಪಡಿಸಿ ನಾವೆಲ್ಲ ಮದುವೆಯಾಗುವುದು ಪ್ರೀತಿಗಾಗಿ. ಸದಾ ಪ್ರೀತಿಯಲ್ಲಿ ಇರಬೇಕೆಂದುಕೊಂಡರೂ ನಮ್ಮ ಸಂಗಾತಿಗಳ ಜತೆ ಕೆಲವೊಮ್ಮೆ ಪ್ರೀತಿ ಸಾಧ್ಯವಾಗದೆ ನಾನೇಕೆ ಇವನ/ಇವಳ ಜತೆ ಬದುಕಬೇಕೆಂದು ಕೇಳಿಕೊಳ್ಳುವುದೂ ಇದೆ, ಹೌದಲ್ಲವೇ?

’All happy families are alike: Each unhappy family is unhappy in its own way’ ಅಂದರೆ, ಎಲ್ಲಾ ಖುಷಿಯ ಕುಟುಂಬಗಳು ಒಂದೇ ತೆರನಾಗಿದ್ದರೂ, ಪ್ರತಿ ಅಸಂತೋಷಿತ ಕುಟುಂಬದ ಅಸಂತೋಷಗಳು ಒಂದೊಂದು ರೀತಿ ಯಲ್ಲಿರುತ್ತವೆ. ಜಗತ್ತಿನ ಅತ್ಯುತ್ತಮ ಕಾದಂಬರಿಗಳಲ್ಲೊಂದಾದ, ಲಿಯೋ ಟಾಲ್‌ಸ್ಟಾಯ್‌ನ ‘ಅನ್ನ ಕರೇನೀನಾ’ ಕಾದಂಬ ರಿಯ ಶುರುವಿನ ಸಾಲು ಗಳಿವು. ಇದರ ಅರ್ಥ ವಿವರಣೆಯು ವಿಭಿನ್ನವಾದದ್ದನ್ನೇ ಧ್ವನಿಸಿದರೂ, ಪ್ರತಿ ನಾಗರಿಕ ಸಮಾಜವು ತನ್ನ ಜನರಿಗಾಗಿ ಗುಣಮಟ್ಟದ ಆಧಾರದಲ್ಲಿ ವಿನ್ಯಾಸವೊಂದನ್ನು ರಚಿಸಿರುತ್ತದೆ.

ಆ ತತ್ತ್ವಗಳಿಗೆ ಅನುಗುಣವಾಗಿ ಅದರಲ್ಲೂ ಬಹುಮುಖ್ಯವಾಗಿ ಪರಸ್ಪರ ನಂಬಿಕೆ, ಗೌರವ, ಸಹಕಾರ ಇವುಗಳು ಬದುಕಿನ ಖುಷಿಗೆ ಉತ್ತಮವಾದ ಅಂಶಗಳೆಂದು ಪರಿಗಣಿಸ ಲಾಗುತ್ತದೆ. ಅನ್ನ ಕರೇನೀನಾ ಕಾದಂಬರಿಯ ಜತೆಗೆ ಹೊಸ ತಲೆಮಾರಿನ ಓದುಗರು
ಪಯಣಿಸುವಾಗ ಎಲ್ಲಾ ಅಡೆತಡೆಗಳ ನಡುವೆಯೂ ಅಲ್ಲಿನ ಪಾತ್ರಗಳು ಖುಷಿಯನ್ನು ಕಂಡುಕೊಳ್ಳುವ ಬಗೆಯು ಅಚ್ಚುಮೆಚ್ಚೆ ನಿಸದಿರುವುದಿಲ್ಲ.

ಈಗಲೂ ನನಗೆ ಸೋಜಿಗವೆನಿಸುವುದು ಟಾಲ್‌ಸ್ಟಾಯ್ ನಮಗೊಡ್ಡುವ ಸವಾಲುಗಳು. ನಾವೆಲ್ಲ ಬಯಸುವ ಆದರ್ಶ ಸಂಬಂಧ
ಹಾಗೊಂದಿದೆಯೇ? ಶರವೇಗದಲ್ಲಿ ಬದಲಾಗುತ್ತಿರುವ ಬದುಕಿನ ಸಮಾನವಾದ ನ್ಯಾಯಸಂಬಂಧಿತವಾದ ಸಂಬಂಧಗಳು ಇವೆಯೇ? ಖುಷಿಗಳನ್ನು ಹಲವಾರು ರೀತಿಗಳಲ್ಲಿ ನಾವು ಪಡೆಯಲು ಸಾಧ್ಯವಿಲ್ಲವೇ? ಹೀಗೆ ಆತನ ಪ್ರಶ್ನೆಗಳು ನಮ್ಮತ್ತ ತೂರಿ ಬರುವಾಗ ನಮ್ಮನ್ನು ಸಂಬಂಧಗಳ ಕುರಿತಾಗಿ ನಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಕೆಲವೊಂದು ಸಾಂಪ್ರದಾಯಿಕ ಸಮಾಜ ಗಳನ್ನ ಹೊರತು ಪಡಿಸಿ ನಾವೆಲ್ಲ ಮದುವೆಯಾಗುವುದು ಪ್ರೀತಿಗಾಗಿ (ಇದಕ್ಕೆ ಬೇರಿನ್ನಾವುದೋ ತರ್ಕವಿರುವುದು ಅನುಮಾನಾ ಸ್ಪದವೇ). ಸದಾ ಪ್ರೀತಿಯಲ್ಲಿ ಇರಬೇಕೆಂದುಕೊಂಡರೂ ನಮ್ಮ ಸಂಗಾತಿಗಳ ಜತೆ ಕೆಲವೊಮ್ಮೆ ಪ್ರೀತಿ ಸಾಧ್ಯವಾಗದೆ ನಾನೇಕೆ ಇವನ/ಇವಳ ಜತೆ ಬದುಕಬೇಕೆಂದು ಕೇಳಿಕೊಳ್ಳುವುದೂ ಇದೆ, ಹೌದಲ್ಲವೇ? ವಿಚ್ಛೇದನದ ಬಗೆಗಿದ್ದ ಮಾನಸಿಕ ಕಳಂಕ ಈಗ ನಮ್ಮ ಸಮಾಜಗಳಲ್ಲಿ ಇಲ್ಲವಾಗಿದೆ.

ವಿಚ್ಛೇದನದ ಕುರಿತಾದ ಕಾನೂನು ಹಾಗೂ ಆರ್ಥಿಕ ಸ್ವಾವಲಂಬನೆಯ ಜತೆಗೆ ಮತ್ತೋರ್ವ ಸಂಗಾತಿಯ ಸಾನ್ನಿಧ್ಯ ಸುಲಭವಾಗಿ
ದಕ್ಕುತ್ತಿರುವ ಈ ದಿನಗಳಲ್ಲಿ ಇದು ಕಳಂಕವಾಗೇನು ಉಳಿದಿಲ್ಲ. ಭಾರತದಲ್ಲಿ ಶೇ.೧ರಷ್ಟು ಮದುವೆಗಳು ಮಾತ್ರ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ, ಇದರಲ್ಲಿ ಶೇ.೬೦ರಷ್ಟು ಜನರು ಮತ್ತೊಂದು ಮದುವೆಯ ಬಗೆಗೆ ಒಲವು ತೋರಿಸುತ್ತಿದ್ದಾರೆ. ಇದರರ್ಥ ಮದುವೆಯ ಮೂಲಕ ಬದುಕಿಗೆ ಒಲವು ತುಂಬಿಸಿಕೊಳ್ಳಲು ಜನ ಕಾತರಿಸುತ್ತಿರುವುದಂತೂ ನಿಜ. ಖುಷಿಗಳನ್ನು ಒಬ್ಬೊಬ್ಬರು
ಒಂದೊಂದು ರೀತಿಯಲ್ಲಿ ಕಂಡುಕೊಳ್ಳಬಹುದು. ಆ ಒಂದು ರೀತಿ ಮದುವೆಯು ಹೌದು!

ಆಧುನಿಕ ಜಗತ್ತಿನ ಪರಿಕಲ್ಪನೆಯಲ್ಲಿ ನಾಲ್ಕು ರೀತಿಯ ಮದುವೆಗಳನ್ನು ಗುರುತಿಸಬಹುದು: ಮೊದಲನೆಯದು ಕೆಲಸದ ಆಧರಿತ ಮದುವೆ- ಕೆಲವರಿಗೆ ಮದುವೆ ಎಂದರೆ ಅದೊಂಥರ ಕಮಿಟ್ಮೆಂಟ್, ಸವಾಲು, ಸಮಸ್ಯೆಯೂ ಹೌದು. ಈ ಸವಾಲು ಮತ್ತಷ್ಟು ದ್ವಿಗುಣಗೊಳ್ಳುವುದು ಬದುಕಿಗೆ ಮಕ್ಕಳು ಕಾಲಿಟ್ಟಾಗ ವಾಸ್ತವಿಕ ತಳಹದಿಯೇ ಕುಸಿದಂತಾಗುತ್ತದೆ.

ತಂದೆ ತಾಯಿ ಇಬ್ಬರೂ ಹೊರಗೆ ದುಡಿಯುತ್ತಾ ಆಗೊಮ್ಮೆ ಈಗೊಮ್ಮೆ ಮಾತ್ರ ಒಟ್ಟಿಗೆ ಕುಳಿತು ಊಟ ಮಾಡುವುದು. ಮಕ್ಕಳ
ಓದಿಗೆ, ನಿವೃತ್ತಿಯ ಜೀವನಕ್ಕೆ ಹೀಗೆ ಕೂಡಿಟ್ಟಷ್ಟೂ ಸಾಲದು. ಈ ತೆರನಾದ ಮದುವೆ ಹೆಚ್ಚು ವೃತ್ತಿಪರವಾಗಿರುತ್ತದೆ. ಇಲ್ಲಿ ಸಂಗಾತಿಗಳು ತಮ್ಮ ಸಂಪಾದನೆಯ ಬಗ್ಗೆ ಹೆಚ್ಚು ಸಂತುಷ್ಟರಾಗಿರುತ್ತಾರೆ. ಈ ಮದುವೆ ಅಪಾಯವೆನಿಸುವುದು ಮುಂದಿನ
ದಿನಗಳಲ್ಲಿ. ಮಕ್ಕಳು ಬೆಳೆದು ಬೇರೆ ಊರುಗಳಿಗೆ ಪಯಣಿಸಿ ಬಿಡುತ್ತಾರೆ, ಗೊತ್ತಿಲ್ಲದ ಯಾವುದೋ ಆರ್ಥಿಕ ಹೊಡೆತವೊಂದು ತಲೆದೋರಿರುತ್ತದೆ ಅಥವಾ ಸಂಗಾತಿ ಗಳಲ್ಲಿ ಒಬ್ಬರಿಗೆ ಜೀವನ ಬೋರಾಗಿ ಬದುಕೇ ರುಚಿಸದಂತಾಗಿಬಿಡುತ್ತದೆ.

ಮುಂದೆ ಮಾಡುವುದೇನು? ಆಗ ಕಾಡುವುದೇ ಖಾಲಿಗೂಡಿನ ಮನಸ್ಥಿತಿ. ಇನ್ನು ಮದುವೆಯ ಎರಡನೇ ವಿಧಾನವೇ ಶಾಸೋಕ್ತ
ಮದುವೆ. ಮದುವೆ ನಮ್ಮೆಲ್ಲರ ಅಸ್ಮಿತೆ. ಸಾರ್ವಜನಿಕವಾಗಿ ಮದುವೆಯಾಗುವ ನಾವುಗಳು ಅದನ್ನು ಸಮುದಾಯದ ಎದುರು ಅಂಗೀಕರಿಸಿಕೊಳ್ಳಲು ಇಚಿಸುತ್ತೇವೆ. ನಮ್ಮ ಮದುವೆಯ ಬಗೆಗೆ ಹತ್ತಿರದ ಸಂಬಂಧಿಕರು, ಸ್ನೇಹಿತರಿಗೆ ಒಂದು ತೆರನಾದ ಕುತೂಹಲವಂತೂ ಸಹಜವಾಗಿ ಇರುತ್ತದೆ. ಗೌರವವಾಗಿ ಬದುಕುವ ಸಂಗಾತಿಗಳು ಸಮಾಜದ ಆಸ್ತಿ. ಸಂಗಾತಿಗಳು ಪೋಷಕ ರಾಗುವ ಪ್ರಕ್ರಿಯೆ ಇಲ್ಲಿ ಸಂಗತಿಗಳನ್ನು ಸಂಕೀರ್ಣಗೊಳಿಸುತ್ತದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಸುಲಲಿತ. ಹೆಚ್ಚಿನ ಶಾಸ್ತ್ರೋಕ್ತ ಮದುವೆಗಳಲ್ಲಿ ತಂದೆ ತಾಯಿಗಳಾಗಿ ಗುರುತಿಸಿಕೊಳ್ಳುವ ಸಂಗತಿ ಹಾಗೂ ಕುಟುಂಬ ಸದಸ್ಯರಾಗಿ ಒಬ್ಬರಿಗೊಬ್ಬರು
ಒದಗಿಸಿಕೊಳ್ಳುವ ಕಟ್ಟುಪಾಡುಗಳು ಮುಖ್ಯವಾಗುತ್ತಾ ಹೋಗುತ್ತವೆ.

ಈ ಇವಾವುವೂ ಸಾರ್ವತ್ರಿಕವಾಗಿ ಅನುಸರಿಸಬಹುದಾದ ಜವಾಬ್ದಾರಿಗಳಲ್ಲದಿದ್ದರೂ ಒಂದು ಕುಟುಂಬದ ಬದ್ಧತೆಯಂತೂ ಆಗಿರುತ್ತವೆ. ಪ್ರತಿಯೊಂದು ಮನೆತನವು ತನ್ನದೇ ರೀತಿಯಲ್ಲಿ ಸೂಕ್ಷ್ಮರೂಪವನ್ನು ಪಡೆದಿರುತ್ತದೆ. ಇವತ್ತಿನ ನಮ್ಮ ಪುಟ್ಟ ಪ್ರಪಂಚದೊಳಗೆ ಅದೆಷ್ಟೋ ಎಣಿಸಲಾಗದ ವ್ಯವಸ್ಥಿತ ನಿಯಮಗಳು ಜಾರಿಯಲ್ಲಿವೆ. ಇಲ್ಲಿ ಮುಖ್ಯವಾಗುವ ಪ್ರಶ್ನೆ ಎಂದರೆ ಯಾರು ಯಾವ ಕೆಲಸಗಳನ್ನು, ದಿನದ ಯಾವ ಸಂದರ್ಭದಲ್ಲಿ ಮಾಡಬೇಕೆಂಬುದು. ದಿನಚರಿ ಹಾಗೂ ಶಾಸ್ತ್ರೋಕ್ತ ಮದುವೆ ಗಳು ಹೀಗೆ ಸಾಮಾನ್ಯವಾಗಿ ಬದುಕುವ ಪರಿಪಾಠಗಳನ್ನು ಒತ್ತಿ ಹೇಳುತ್ತಾ, ನಾವು ಯಾರು ಎಂಬುದನ್ನು ನಮಗೆ ಮತ್ತೆ ಮತ್ತೆ ನೆನಪಿಸುತ್ತವೆ.

ಇನ್ನು ಮೂರನೆಯದು ಪ್ಲೇಫುಲ್ ಮದುವೆ. ಮದುವೆಗೂ ಮುಂಚೆ ಆರಾಮಾಗಿ ಸುತ್ತಾಡಿಕೊಂಡು ಬದುಕುತ್ತಿರುವಂತೆ ಮದುವೆಯ ನಂತರವೂ ಹಾಗೆ ಸುತ್ತಾಡಲು ಸಾಧ್ಯವೇ? ಈ ದೃಷ್ಟಿಕೋನವೇ ಬದುಕಲ್ಲಿ ಹೊಸತನ್ನು ಪ್ರಯೋಗಿಸಿದಂತಿದೆ. ರಿಸ್ಕ್ ತೆಗೆದುಕೊಳ್ಳುತ್ತಾ ಜತೆಯಲ್ಲೇ ಮೋಜನ್ನು ಅನುಭವಿಸುವುದಿದೆಯಲ್ಲ, ಮದುವೆಯ ಹೊಸ ಉತ್ಸಾಹಗಳಿಗೆ ಅದು ಕೊನೆಯಾಗ
ಬಾರದು, ಬದಲಿಗೆ ಉತ್ತೇಜಕವಾಗಬೇಕು ಎಂಬುದನ್ನು ಮರುನೆನಪಿಸುತ್ತದೆ ಈ ಪ್ಲೇಪುಲ್ ಮದುವೆ. ಸಂಕಟಗಳ ಆಚೆಯೂ ದಾರಿಗಳನ್ನು ಕಂಡುಕೊಳ್ಳುತ್ತಾ ಸಾಗುವುದು ಈ ತರಹದ ಮದುವೆಗಳಲ್ಲಿ ಮುಖ್ಯವಾಗುತ್ತದೆ.

ಪ್ಲೇಫುಲ್ ಮದುವೆಯ ಫನ್ ಕಪಲ್ಸ್ ದೂರ ದೂರಗಳಿಗೆ ಪಯಣಿಸುತ್ತ, ಸ್ನೇಹಿತರ ಜತೆ ಕನೆಕ್ಟ್ ಆಗುತ್ತಾ, ಬಾರ್ ಮತ್ತು ರೆಸ್ಟೋ ರೆಂಟ್, ಸ್ಪೋರ್ಟ್ಸ್ ಕ್ಲಬ್‌ಗಳಲ್ಲಿ ಕಳೆದುಹೋಗುತ್ತಾ ಬದುಕಿಗೆ ಬೇಕಾದ ಚೈತನ್ಯವನ್ನು ಉತ್ತೇಜಿಸಿಕೊಳ್ಳುತ್ತ ನಾಳೆ ಇಲ್ಲವೆಂಬಂತೆ ಬದುಕಿಬಿಡುತ್ತಾರೆ. ಹೀಗೆ ಇರಬಹುದಾದ ಮದುವೆ ಯಾರಿಗಿಷ್ಟವಿಲ್ಲ ಹೇಳಿ? ಆದರೆ ಈ ಮದುವೆಯ ಅಪಾಯ ವೆಂದರೆ ನಿರಂತರ ವಾದ ಹೊಸತನದ ಹುಡುಕಾಟ, ಸಂತೋಷವೂ ಕೆಲವೊಮ್ಮೆ ಟೊಳ್ಳಾಗಿಯೂ, ವೈಫಲ್ಯವಾಗಿಯೂ ನಮ್ಮನ್ನು ಕಾಡಿಬಿಡ ಬಹುದು. ಎಷ್ಟು ಬಾರಿ ನಾವು ಗ್ರೀಸ್‌ಗೆ ಹೋಗಿಬರಬಹುದು ಹೇಳಿ? ಮನೆಯನ್ನು ಎಷ್ಟು ಬಾರಿ ನವೀಕೃತ ಗೊಳಿಸಬಹುದು? ಬೋರಾಗಿಬಿಡುವುದಿಲ್ಲವೇ!

ಇನ್ನು, ನಾನು ಹೇಳ ಹೊರಟಿರುವ ಕೊನೆಯ ಮದುವೆಯ ಬಂಧನ ಅದುವೇ ಸಾಮುದಾಯಿಕ ವಿವಾಹ. ಮದುವೆಯನ್ನು ನಮ್ಮ ಸಂಸ್ಕೃತಿಗಳು ಸಂಭ್ರಮಿಸುವುದು ಇಬ್ಬರ ನಡುವಿನ ಪವಿತ್ರ ಬಂಧವೆಂಬ ಕಾರಣಕ್ಕಾಗಿ. ಜತೆಯಲ್ಲೇ ಮದುವೆಯ ಮುನ್ನೊಲವು,
ಆತ್ಮೀಯತೆ ಹಾಗೂ ಪರಸ್ಪರ ಸಹಕಾರದ ತಳಹದಿಯ ಮೇಲೆ ನಿಂತಿರುತ್ತದೆ ಎಂಬ ಕಾರಣಕ್ಕಾಗಿಯೂ ಹೌದು. ಅಂದರೆ ಅಷ್ಟು ದಿನದ ಸ್ವಯಂ ಕೇಂದ್ರಿತ  ಮನಸ್ಥಿತಿಯನ್ನು ಬದಿಗಿಟ್ಟು ಒಡಗೂಡಿ ಬಾಳುವ ಸಂಕಲ್ಪವನ್ನು ನಮ್ಮದಾಗಿಸಿಕೊಳ್ಳುವುದು ಎಂದರ್ಥ.

ಸಾಮುದಾಯಿಕ ಮದುವೆಗಳಲ್ಲಿ ಸಂಗಾತಿಗಳು ಪ್ರತಿಕ್ಷಣವನ್ನು ಅನುಭವಿಸಿ-ಅನುಭಾವಿಸುತ್ತಾರೆ. ಒಟ್ಟಿಗೆ ಕುಳಿತು ಟಿವಿ ನೋಡುವ, ಸಂಗೀತ ಕೇಳುವ ಹೀಗೆ ಪ್ಲೇಫುಲ್ ಮದುವೆಯಲ್ಲಿ ಚಟುವಟಿಕೆಗಳ ಗಳಿಗೆಗಾಗಿ ಸಂಬಂಧಗಳು ಪ್ರಚೋದನೆಗೊಂಡರೆ
ಸಾಮುದಾಯಿಕ ವಿವಾಹಗಳಲ್ಲಿ ಸಂಬಂಧಗಳನ್ನು ಸಂಭ್ರಮಿಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ.

ಮೊನ್ನೆ ಸ್ನೇಹಿತರೊಬ್ಬರು ಸಿಕ್ಕಿ ಹೇಳುತ್ತಿದ್ದರು. ಸಂಗಾತಿಗಳಿಂದ ದೂರ ಉಳಿದು ಕಳೆದ ಸಮಯವೂ ವ್ಯರ್ಥ ಮಾಡಿದಂತೆಯೇ ಸರಿ ಎಂದು ವಿಚ್ಛೇದನ ಪಡೆದಿದ್ದರೂ ಈಗಲೂ ತಮ್ಮ ಹಳೆಯ ಸಂಗಾತಿಯ ಜತೆ ಸ್ನೇಹಪರತೆಯನ್ನು ಉಳಿಸಿಕೊಂಡಿದ್ದಾರೆ ಆ ಸ್ನೇಹಿತರು. ಮುಗಿಸುವ ಮುನ್ನ ನಾನು ಹೇಳಲೇಬೇಕಾದ ಸಂಗತಿ ಎಂದರೆ ನಮ್ಮಲ್ಲಿ ಅನೇಕ ಮದುವೆಗಳು ನಾನು ಹೇಳಿದ
ಮೇಲಿನ ನಾಲ್ಕು ಮದುವೆ ಎಂಬ ಪರಿಕಲ್ಪನೆಗಳ ಮಿಕ್ಸ್ ಫ್ರುಟ್ ಸಲಾಡ್‌ಗಳೇ. ಎಲ್ಲಾ ಮದುವೆಯ ಗಟ್ಟಿತನದಲ್ಲೂ ಪ್ರೀತಿ ಮತ್ತು ಒಲವು ತುಂಬಲೇಬೇಕು, ಹೌದಲ್ಲವೇ?!!!

Leave a Reply

Your email address will not be published. Required fields are marked *

error: Content is protected !!