Saturday, 7th September 2024

ಸಂಸದರೇ, ನೀವು ಈ ಕೆಲಸ ಮಾಡಬಹುದು !

ಅಶ್ವತ್ಥಕಟ್ಟೆ

ranjith.hoskere@gmail.com

ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿದು ಸರಕಾರ ರಚನೆಯಾಗಿ, ಪ್ರತಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಪ್ರತಿಷ್ಠಾಪನೆಯಾಗಿದೆ. ದೆಹಲಿಯ ಸಂಸತ್ ಭವನದಲ್ಲಿ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿ ಆಗಿದೆ. ಅಲ್ಲಿಗೆ ಬಹುತೇಕ ಸಂಸದರು ತಮ್ಮ ’ಕೆಲಸ’ ಮಗಿಯಿತು ಎನ್ನುವ ನಿರಾಳ
ಭಾವನೆಗೆ ಜಾರಿದ್ದಾರೆ. ಇನ್ನೇನಿದ್ದರೂ, ಮುಂದಿನ ಐದು ವರ್ಷದ ಬಳಿಕ ಎದುರಾಗುವ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಮುಖ ತೋರಿಸಿದರಾಯಿತು ಎನ್ನುವ ಮನಸ್ಥಿತಿಯಲ್ಲಿದ್ದಾರೆ.

‘ಸಂಸದರೇಕೆ ಕಾಣಿಸಿಕೊಳ್ಳುವುದಿಲ್ಲ?’ ಎಂದು ಯಾರಾದರೂ ಪ್ರಶ್ನಿಸಿದರೆ, ‘ಸಂಸದರ ಕಾರ್ಯವ್ಯಾಪ್ತಿಯೇ ಚಿಕ್ಕದ್ದು. ಸ್ಥಳೀಯ ಸಂಸ್ಥೆ, ಶಾಸಕರಿಗೆ ಇರುವಷ್ಟು ಅನುದಾನವಾಗಲಿ, ಅಧಿಕಾರವಾಗಲಿ ನಮಗಿರುವುದಿಲ್ಲ’ ಎನ್ನುವ ಸಿದ್ಧಉತ್ತರವನ್ನು ಬಹುತೇಕ ಸಂಸದರು ನೀಡುತ್ತಾರೆ. ಸಂಸದರಿಗೆ ವರ್ಷಕ್ಕೆ ಸಿಗುವ ಒಂದೆರೆಡು ಕೋಟಿ ಅನುದಾನದಲ್ಲಿ ಮಠ ಮಾನ್ಯಗಳ ಅಭಿವೃದ್ಧಿ, ಛತ್ರಗಳ ನಿರ್ಮಾಣ ಕಾಮಗಾರಿಗೆ, ಹೆಚ್ಚೆಂದರೆ ರಸ್ತೆ ಬದಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುದಾನ ನೀಡುವುದು. ಇದನ್ನು ಮೀರಿ ಎಲ್ಲ ಸರಕಾರಿ ಕಾರ್ಯಕ್ರಮಗಳಲ್ಲಿ ‘ಘನ’ ಉಪಸ್ಥಿತಿಯಲ್ಲಿ ಕೂರುವುದು, ಇಲ್ಲವೇ ದಿಶಾ ಸಭೆಗಳಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳುವುದು.

ಇವನ್ನು ಬಿಟ್ಟರೆ, ಇಎಸ್‌ಐ ಆಸ್ಪತ್ರೆ, ಕಾಫಿ ಬೋರ್ಡ್ ಸೇರಿದಂತೆ ಕೆಲ ಕೇಂದ್ರ ಸರಕಾರದಿಂದ ನಡೆಯುವ ಸಂಸ್ಥೆಗಳಿಗೆ ಶಿ-ರಸು ಪತ್ರ ಕೊಡುವುದು, ದೆಹಲಿಗೆ ಹೋಗುವ ತಮ್ಮ ಕ್ಷೇತ್ರದ ಕೆಲ ಪ್ರಭಾವಿಗಳಿಗೆ ಕರ್ನಾಟಕ ಭವನದಲ್ಲಿ ‘ವಸತಿ ವ್ಯವಸ್ಥೆ’ ಮಾಡುವುದೇ ಇಡೀ ಕ್ಷೇತ್ರಕ್ಕೆ ಮಾಡುವ ಕೆಲಸ ಎನ್ನುವಂತಾವಾಗಿದೆ. ಇದನ್ನು ಹೊರತುಪಡಿಸಿ, ಈ ಹಿಂದೆ ಬಹುತೇಕರಿಗೆ ಸಂಸದರು ನೆನಪಾಗುತ್ತಿದ್ದನ್ನು ಕೇಂದ್ರಿಯ ವಿದ್ಯಾಲಯದಲ್ಲಿ ಸೀಟು ಪಡೆಯುವ ಸಮಯದಲ್ಲಿ (ಹಿಂದೆ ಪ್ರತಿಯೊಬ್ಬ ಸಂಸದರಿಗೆ ಕೇಂದ್ರಿಯ ವಿದ್ಯಾಲಯದಲ್ಲಿ ವರ್ಷ ಕ್ಕೆ ಒಬ್ಬ ವಿದ್ಯಾರ್ಥಿಯನ್ನು ಶಿಫಾರಸು ಮಾಡುವ ಅವಕಾಶವಿತ್ತು. ಈಗ ಈ ಶಿಫಾರಸಿಗೂ ಅವಕಾಶವಿಲ್ಲ) !

ಇವಿಷ್ಟೇ ಸಂಸದರ ಕೆಲಸವೆಂದು ಬಹುತೇಕರು ಅಂದು ಕೊಂಡಿದ್ದಾರೆ (ಇದಕ್ಕೆ ಅಪವಾದವೆನ್ನುವಂತೆ ರಾಜ್ಯದ ಕೆಲ ಸಂಸದರು ಇದ್ದಾರೆ). ಇನ್ನೇನು ಚುನಾವಣೆ ಎದುರಾಗಲಿದೆ ಎನ್ನುವ ಸಮಯದಲ್ಲಿ ‘ಅಂಕಪಟ್ಟಿ/ಅಭಿವೃದ್ಧಿ ಕಾರ್ಡ್’ ಗಳನ್ನು ಶಾಸಕರಿಗೆ ಸಿದ್ಧಪಡಿಸುವಂತೆ ಸಂಸದರಿಗೆ ಸಿದ್ಧಪಡಿ
ಸಿದ ಉದಾಹರಣೆಯಿಲ್ಲ. ಇದ್ದರೂ ಅದು ಬೆರಳೆಣಿಕೆಯಷ್ಟು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಂಸದರೂ ಸಹ, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಇರುವಷ್ಟು ಮಾತ್ರ ಮಾಡುತ್ತೇವೆ ಎನ್ನುವ ಉತ್ತರದ ಮೂಲಕ ಬಚಾವಾಗುತ್ತಾರೆ.

ಹಾಗಾದರೆ, ಸಂಸದರಾಗಿ ಆಯ್ಕೆಯಾದವರು ವರ್ಷಕ್ಕೆ ನಾಲ್ಕೈದು ಬಾರಿ ದೆಹಲಿಗೆ ತೆರಳಿ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವುದು, ತಮ್ಮ ಪಕ್ಷಗಳ ಪರವಾಗಿ ಕೈ ಎತ್ತುವುದು, ಇಲ್ಲವೇ ರಾಜ್ಯ ಸರಕಾರದಿಂದ ಕೇಂದ್ರ ಸರಕಾರದ ಬಳಿಗೆ ತೆರಳುವ ‘ಸರ್ವ ಪಕ್ಷ ನಿಯೋಗ’ದಲ್ಲಿ ತಾವೂ ಒಬ್ಬರಾಗಿ ಹೋಗಿ ಬರುವುದಷ್ಟೇ ಕೆಲಸವೇ? ಇಡೀ ಜಿಲ್ಲೆ ಅಥವಾ ಎಂಟತ್ತು ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ, ೧೫ರಿಂದ ೨೦ ಲಕ್ಷ ಮತದಾರರ ಪ್ರತಿನಿಧಿಯಾಗಿ ದೆಹಲಿಯಲ್ಲಿ ಪ್ರತಿನಿಧಿಸುವ ಸಂಸದರಿಗೆ ಇರುವ ‘ಕಾರ್ಯವ್ಯಾಪ್ತಿ’ ಇಷ್ಟೇನಾ? ಕೇಂದ್ರದಿಂದ ಬರುವ ಎರಡು ಕೋಟಿ ಸಂಸದರ ಅಭಿವೃದ್ಧಿ ಅನುದಾನ ವನ್ನು ಹೊರತುಪಡಿಸಿ ಇನ್ನಾವುದೇ ಕೆಲಸ ಮಾಡಲು ‘ಶಿಷ್ಠಾಚಾರ’ ಸಿಗುವುದಿಲ್ಲವೇ ಎನ್ನುವುದು ಬಹುತೇಕರ ಅಚ್ಚರಿಯಾಗಿರುತ್ತದೆ.

ಜಿಲ್ಲಾ ಪಂಚಾಯಿತಿ ಅಥವಾ ಬಿಬಿಎಂಪಿ ಕಾರ್ಪೋರೇಟರ್‌ಗಳಿಗೆ ಇರುವಷ್ಟು ಅನುದಾನ-ಅಧಿಕಾರವೂ ಕೆಲವೊಮ್ಮೆ ಸಂಸದರಿಗೆ ಇರುವುದಿಲ್ಲ ಎನ್ನುವುದು ಬಹುತೇಕ ರಾಜಕೀಯ ನಾಯಕರ ಮಾತು. ಅದಕ್ಕೆ ಆರೆಂಟು ಬಾರಿ ಸಂಸದರಾಗಿ ಆಯ್ಕೆಯಾದರೂ, ಜನಮಾನಸದಲ್ಲಿ ಗುರುತಿಸಿ
ಕೊಂಡಿರುವುದಿಲ್ಲ. ಒಂದರ್ಥದಲ್ಲಿ ಸಂಸದರ ಕಾರ್ಯವ್ಯಾಪ್ತಿ ಮೇಲ್ನೋಟಕ್ಕೆ ಸೀಮಿತವಾಗಿರುತ್ತದೆ. ಸ್ಥಳೀಯ ಶಾಸಕರು, ಸ್ಥಳೀಯ ಸಂಸ್ಥೆ ಸದಸ್ಯರಿಗೆ ಇರುವಷ್ಟು ‘ಅಧಿಕಾರ’ ಸಂಸದರಿಗೆ ಇರುವುದಿಲ್ಲ.

ಆದರೆ, ಈ ಎಲ್ಲ ಕಟ್ಟಲೆಗಳನ್ನು ಮೀರಿ ಕೆಲಸ ಮಾಡಲೇ ಬೇಕು ಎನ್ನುವ ಛಲಕ್ಕೆ ನಿಂತರೆ ಸಂಸದರಿಗೆ ಬೇಕಾದಷ್ಟು ಅವಕಾಶಗಳಿರುತ್ತವೆ. ಈ ಕೆಲಸಗಳನ್ನು ಹುಡುಕಿಕೊಂಡು ಹೋಗಬೇಕಾಗಿರುವುದು ಮನಸ್ಸು ಸಂಸದರಿಗೆ ಇರಬೇಕಷ್ಟೆ. ಸಂಸದರೆಂದರೆ ಬೆಂಗಳೂರು-ದೆಹಲಿ ಓಡಾಡಿಕೊಂಡಿರು
ವುದಷ್ಟೇ ಕೆಲಸವಲ್ಲ. ಈ ಸಂಚಾರದ ವೇಳೆ ಕ್ಷೇತ್ರದ ಸಮಸ್ಯೆಗಳನ್ನು ದೆಹಲಿ ಮಟ್ಟದಲ್ಲಿ ಬಗೆಹರಿಸಬಹುದೇ ಎನ್ನುವ ಆಲೋಚನೆಗಳಿರಬೇಕು. ಕರ್ನಾಟಕದ ಮಟ್ಟಿಗೆ ದಿ.ಅನಂತಕುಮಾರ್ ಅವರು ಈ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದರು. ಇನ್ನು ಹುಡುಕಿಕೊಂಡು ಹೋಗಿ ಕೆಲಸ ಮಾಡಿಸಿಕೊಂಡು ಬರುವ ವಿಷಯದಲ್ಲಿ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಈ ಹಿಂದಿನ ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಹಲವು ಸಂಸದರಿಗೆ ‘ಮಾದರಿ’ಯಾಗಿದ್ದರು ಎಂದರೆ ತಪ್ಪಾಗುವುದಿಲ್ಲ.

ಮೊದಲೇ ಹೇಳಿದಂತೆ ಸಂಸದರಾಗಿ ಆಯ್ಕೆಯಾದವರು ಒಂದು ಲೋಕಸಭಾ ಕ್ಷೇತ್ರದ ಜನರನ್ನು ದೆಹಲಿ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ. ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗದೇ, ಇಡೀ ರಾಜ್ಯದ ಪ್ರತಿನಿಧಿಯಾಗಿ ದೆಹಲಿಯಲ್ಲಿ ಧ್ವನಿ ಎತ್ತಿದರೆ ತಪ್ಪೇನಿಲ್ಲ. ಈ ಹಿಂದೆ ದಿ. ಅನಂತಕುಮಾರ್ ಅವರು ಆಡಳಿತ
ಪಕ್ಷದಲ್ಲಿರಲಿ, ವಿರೋಧ ಪಕ್ಷದಲ್ಲಿರಲಿ ರಾಜ್ಯದ ವಿಷಯ ವೆಂದು ಬಂದಾಗ ಕರ್ನಾಟಕ ಹಾಗೂ ದೆಹಲಿಯ ‘ಸೇತುವೆ’ ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ರೀತಿ ದೆಹಲಿ ಯೊಂದಿಗೆ ಇಡೀ ರಾಜ್ಯದ ಕೊಂಡಿಯಾಗಿರಲು ಸಾಧ್ಯವಿಲ್ಲದಿದ್ದರೆ, ಕನಿಷ್ಠ ತಮ್ಮ ತಮ್ಮ ಕ್ಷೇತ್ರಗಳಿಗೆ ಏನಾಗಬೇಕು ಎನ್ನುವ ಬಗ್ಗೆಯೂ ಯೋಚಿಸಬಹುದು.

ಹಾಗೇ ನೋಡಿದರೆ, ಕೇಂದ್ರ ಸರಕಾರದ ಹತ್ತಾರು ಯೋಜನೆಗಳನ್ನು ಘೋಷಿಸುತ್ತದೆ. ಆದರೆ ಈ ಯೋಜನೆಗಳನ್ನು ಅನೇಕ ಯೋಜನೆಗಳು ಜನರ ಬಳಿಗೆ ತಲುಪುವುದೇ ಇಲ್ಲ. ಈ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಸಂಸದರು ಆಲೋಚಿಸಬಹುದು. ಇದರೊಂದಿಗೆ, ಕೇಂದ್ರ ಹಾಗೂ ರಾಜ್ಯ ಸರಕಾರದ ನರೇಗಾ, ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್, ಗ್ರಾಮೀಣ
ಭಾಗದ ರಸ್ತೆ ಅಭಿವೃದ್ಧಿ ಸೇರಿದಂತೆ ನೂರಾರು ಯೋಜನೆ ಗಳನ್ನು ತಮ್ಮ ಲೋಕಸಭಾ ಕ್ಷೇತ್ರಗಳಿಗೆ ತಗೆದುಕೊಂಡು ಬರುವ ನಿಟ್ಟಿನಲ್ಲಿ ದೆಹಲಿ ಮಟ್ಟದಲ್ಲಿ ಓಡಾಡಬಹುದು. ಆದರೆ ಬಹುತೇಕ ಸಂಸದರಿಗೆ ಈ ರೀತಿಯ ಯೋಜನೆಗಳನ್ನು ತರಬಹುದು ಎನ್ನುವ ಆಲೋಚನೆಯೂ ಬರುವುದಿಲ್ಲ
ಎನ್ನುವುದೇ ದುರಂತ.

ಮತದಾರರಿಗೆ ನೇರವಾಗಿ ಲಭಿಸುವ ಯೋಜನೆಗಳು ಒಂದೆಡೆಯಾದರೆ, ಮತ್ತೊಂದೆಡೆ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸುವಲ್ಲಿ ಕೇಂದ್ರದ ಯಾವೆಲ್ಲ ಯೋಜನೆಗಳನ್ನು ಬಳಸಿಕೊಳ್ಳಬಹುದು? ಕೇಂದ್ರದ ಅನುದಾನವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆಯೂ ಆಲೋಚಿಸ ಬಹುದು. ಉದಾಹರಣೆಗೆ, ಕ್ಷೇತ್ರದಲ್ಲಿರುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ, ರೈಲ್ವೇ ಸಂಪರ್ಕವನ್ನು ಹೆಚ್ಚಿಸುವ, ರೈಲ್ವೇ ಹಳಿಗಳ ಅಭಿವೃದ್ಧಿ ಸೇರಿದಂತೆ ನಾನಾ ಯೋಜನೆಗಳ ಮೂಲಕ ತಮ್ಮ ಕ್ಷೇತ್ರಕ್ಕೆ ಸಂಪರ್ಕ ಜಾಲವನ್ನು ಹೆಚ್ಚಿಸಿ ಕೊಳ್ಳಬಹುದು.

ಇದಕ್ಕೆ ತಾಜಾ ಉದಾಹರಣೆಯಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಮಾಡಿದ್ದನ್ನು ಗಮನಿಸಬಹುದು. ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಮುಕ್ತಾಯಗೊಳ್ಳಲು ದಶಕಗಳೇ ಬೇಕು ಎಂದು ಅನೇಕರು ಅಂದಾಜಿಸಿದ್ದರು. ಆದರೆ ಪ್ರತಾಪ್ ಸಿಂಹ ಸಂಸದರಾಗಿ ತಗೆದುಕೊಂಡ ವಿಶೇಷ ಆಸಕ್ತಿಯಿಂದ ಕೆಲವೇ ವರ್ಷದಲ್ಲಿ ಇಡೀ ಯೋಜನೆ ಮುಕ್ತಾಯವಾಗಿತ್ತು. ಇದೇ ರೀತಿ ಮೈಸೂರಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರ, ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಕೇಂದ್ರದಿಂದ ರಾಜ್ಯ ಸರಕಾರದ ನೆರವಿಲ್ಲದೇ ನೇರವಾಗಿ ತಂದರು. ಈ ಮೂಲಕ ಸಂಸದರಾಗಿ ಈ ಎಲ್ಲ ಕೆಲಸಗಳನ್ನು ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ.

ಇವುಗಳೊಂದಿಗೆ ದೆಹಲಿಯ ಸಂಸತ್‌ನಲ್ಲಿ ರಾಜ್ಯದ ಹಿತದೃಷ್ಠಿಗೆ ಸಂಬಂಧಿಸಿದಂತೆ, ರಾಜ್ಯದ ಭಾಷೆ, ಗಡಿಗೆ ಸಂಬಂಧಿಸಿದಂತೆ ಧ್ವನಿ ಎತ್ತಬಹುದು. ಆದರೆ ನನಗೆ ನೆನಪಿಗೆ ಇರುವಂತೆ ಬಹುತೇಕ ಸಂಸದರು, ದೆಹಲಿಗೆ ಹೋಗಿ ಮೇಜು ಕುಟ್ಟುವುದನ್ನು ಬಿಟ್ಟು ಬೇರೆ ಯಾವ ಕೆಲಸವನ್ನು ಮಾಡಿಲ್ಲ. ಕನ್ನಡಿಗರಿಗೆ ಕನ್ನಡದಲ್ಲಿಯೇ ನೀಟ್ ಬರೆಯುವಂತೆ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡುವಂತೆ ಗಟ್ಟಿ ಧ್ವನಿ ಎತ್ತಿರುವುದನ್ನು ನೋಡಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಆಯ್ಕೆಯಾಗಿರುವ ಸಂಸದರಾದರೂ, ಆಲೋಚಿಸಲಿ. ಸ್ಥಳೀಯ ಮಟ್ಟದಲ್ಲಿಯೇ ನೋಡುವುದಾದರೆ, ಸಂಸದರಾದವರು ದಿಶಾ ಸಭೆಗಳನ್ನು ನಡೆಸಲಿ, ಆ ಸಭೆಗಳಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಆಗುತ್ತಿರುವ ಯೋಜನೆ, ಕಾಮಗಾರಿ, ಕೇಂದ್ರ, ರಾಜ್ಯ ಸರಕಾರದ ಫಲಾನುಭವಿಗಳ ಮಾಹಿತಿ ಪಡೆಯುವ ಹಕ್ಕಿರುತ್ತದೆ.

ಈ ಸಭೆಯನ್ನು ಸಂಸದರ ನೇತೃತ್ವದಲ್ಲಿಯೇ ನಡೆಸಬೇಕಿರುವುದರಿಂದ ತಿಂಗಳಿಗೊಮ್ಮೆ ಅಧಿಕಾರಿಗಳಿಂದ ಏನಾಗಿದೆ ಎಂದು ಮಾಹಿತಿ ಪಡೆದು,
ಏನಾದರೂ ಲೋಪದೋಷಗಳಿದ್ದರೆ ಅವುಗಳನ್ನು ಮುಖ್ಯಮಂತ್ರಿಗಳೊಂದಿಗೆ ಅಥವಾ ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಬಗೆಹರಿಸುವ ಬಗ್ಗೆಯೂ ಕ್ರಮವಹಿಸಬಹುದು. ಆದರೆ ಎಷ್ಟು ಸಂಸದರು ಪ್ರತಿ ತಿಂಗಳು ದಿಶಾ ಸಭೆ ನಡೆಸಿದ್ದಾರೆ? ಸಭೆ ನಡೆಸಿದ್ದರೂ, ಅಲ್ಲಿನ ಯಾವ ಅಜೆಂಡಾಗಳನ್ನು
ಮುಂದಿಟ್ಟುಕೊಂಡು ಕೇಂದ್ರ ಹಾಗೂ ರಾಜ್ಯ ಸರಕಾರ ಗಳೊಂದಿಗೆ ಸಂವಹನ ನಡೆಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ಗಮನಿಸಬೇಕು.

ಲೋಕಸಭಾ ಚುನಾವಣೆ ಬಹುತೇಕ ಸಮಯದಲ್ಲಿ ನಡೆಯುವುದು ರಾಷ್ಟ್ರ ಮಟ್ಟದ ವಿಷಯಗಳ ಮೇಲೆ ಹೊರತು, ಸಂಸದ ಅಭ್ಯರ್ಥಿ ಯಾರು ಎನ್ನುವುದರ ಮೇಲಲ್ಲ. ಆದ್ದರಿಂದ ಬಹುತೇಕ ಸಮಯದಲ್ಲಿ ಪಕ್ಷದ ಗುರುತಿನ ಮೇಲೆ ಯಾರೇ ನಿಂತಿದ್ದಾರೆ ಎನ್ನುವುದರ ಮೇಲೆ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧಾರವಾಗಲಿದೆ. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಗೆಲುವುದು ಎಷ್ಟು ಮುಖ್ಯವೋ, ಗೆದ್ದ ಬಳಿಕ ಗೆಲ್ಲಿಸಿದ ಕ್ಷೇತ್ರದ ಜನರ ‘ಋಣ’ ತೀರಿಸಿ
ದಂತಾಗುತ್ತದೆ. ಈ ಬಾರಿ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರಲ್ಲಿ ಶೇ.೫೦ಕ್ಕಿಂತ ಹೆಚ್ಚು ಮಂದಿ ನೂತನ ಸಂಸದರಿದ್ದಾರೆ. ಇವರಾದರೂ, ಈ ಹಿಂದಿನ ಸಂಸದರ ಸಂಪ್ರದಾಯಕವನ್ನು ಮುರಿಯುವ ಪ್ರಯತ್ನ ಮಾಡಬೇಕು.

ಇರುವ ಅವಕಾಶಗಳನ್ನು ಬಳಸಿಕೊಳ್ಳದೇ, ‘ಸಂಸದರಾಗಿ ನಮಗ್ಯಾವ ಅಧಿಕಾರ’ವಿದೆ ಎಂದು ಮೂಗು ಮುರಿಯುವ ಸಂಸದರು ಇನ್ನಾದರೂ ತಮಗಿರುವ ಕಾರ್ಯವ್ಯಾಪ್ತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅದನ್ನು ಬಳಸಿಕೊಂಡು ಮತದಾರರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿ. ಸಿಕ್ಕಿರುವ
ಅವಕಾಶವನ್ನು ಬಳಸಿಕೊಂಡು, ರಾಜ್ಯ ಹಾಗೂ ಕ್ಷೇತ್ರದ ಜನರಿಗೆ ಏನೆಲ್ಲ ಯೋಜನೆಗಳನ್ನು ತರಲು ಸಾಧ್ಯ ಎನ್ನುವ ಬಗ್ಗೆ ಯೋಚಿಸಿ, ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ‘ಭಿನ್ನ ಸಂಸದ’ರಾಗುತ್ತೀರಾ. ಇಲ್ಲದಿದ್ದರೂ, ಮೇಜುಕುಟ್ಟಿ ಬರುವ ನೂರಾರು ಸಂಸದರಲ್ಲಿ ನೀವೊಬ್ಬರಾಗಿ ಕಳೆದು ಹೋಗುತ್ತೀರಾ ಎನ್ನುವುದು ಸ್ಪಷ್ಟ.

Leave a Reply

Your email address will not be published. Required fields are marked *

error: Content is protected !!