ವ್ಯಕ್ತಿ ಚಿತ್ರ
ಜಯಪ್ರಕಾಶ ಪುತ್ತೂರು
ನಮ್ಮ ಸಮಾಜದಲ್ಲಿ ಎಂತೆಂಥ ವ್ಯಕ್ತಿ-ವಿಶೇಷದವರು ಇದ್ದಾರೆ ಎಂಬುದನ್ನು ಗಮನಿಸುವಾಗ ನಿಜಕ್ಕೂ ಅಚ್ಚರಿಯ ಜತೆ ಸಂತೋಷವೂ ಆಗುತ್ತದೆ. ಅದಕ್ಕೆ ಕಾರಣ ಓರ್ವ ಸಾಮಾನ್ಯ ವ್ಯಕ್ತಿಯಾದ ಮೈಕ್ ಚಂದ್ರು. ಹೌದು, ಇವರು ತಮ್ಮ ಧ್ವನಿಯನ್ನೇ ಉಸಿರಾಗಿಸಿಕೊಂಡು ಬದುಕಿದಂಥ ಛಲಗಾರ.
ಜನಮಾನಸದಲ್ಲಿ ತಮ್ಮ ಕಂಠಸಿರಿಯಿಂದಲೇ ಆಕರ್ಷಿಸಿರುವ ಇವರನ್ನು ಗುರುತಿಸಿದ ಭಾರತೀಯ ಅಂಚೆ ಇಲಾಖೆ ಅವರ ಹೆಸರಿನಲ್ಲಿ ಅಂಚೆ ಲಕೋಟೆ ಯನ್ನು ಹೊರತಂದು ಗೌರವಿಸಿದೆ. ಇದೊಂದು ಅಪರೂಪದ ಘಟನೆಯಲ್ಲದೆ ಮತ್ತಿನ್ನೇನು! ಇಂಥ ಭಾಗ್ಯ ಅಧವಾ ಅದೃಷ್ಟ ಎಲ್ಲರಿಗೂ ಒಲಿದು ಬರಲು ಸಾಧ್ಯವೂ ಇಲ್ಲ. ಮೈಕ್ ಚಂದ್ರು ಅವರು ಚುನಾವಣೆ ಸಂದರ್ಭದಲ್ಲಿ, ವಸ್ತುಪ್ರದರ್ಶನದ ಆವರಣದಲ್ಲಿ, ಪಲ್ಸ್ ಪೋಲಿಯೋ, ಸಂಗೀತ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಹಾಗೂ ರಂಗಭೂಮಿ ವೇದಿಕೆಗಳಲ್ಲಿ ಧ್ವನಿ ಕೇಳಿದರೆ ಸಾಕು-ಅದು ‘ಮೈಕ್ ಚಂದ್ರುವವರೇ’ ಎಂದು ಗುರುತಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದರು.
ಈ ಹಿಂದೆ ೫೦ ವರ್ಷಗಳಿಂದಲೂ ತಮ್ಮ ಅಪೂರ್ವ ಕಂಠದಿಂದಲೇ ಗುರುತಿಸಿಕೊಂಡಿದ್ದವರು ಮೈಕ್ ಚಂದ್ರು. ಇವರ ಪ್ರತಿಬೆಯನ್ನು ಗುರುತಿಸಿ ಅಂಚೆ ಇಲಾಖೆ ಅವರ ಹೆಸರಿನಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಲಕೋಟೆಯನ್ನು ಹೊರ ತರುವ ಮೂಲಕ ಕಾರ್ಯಕ್ರಮಗಳ ಪ್ರಚಾರಕನಿಗೆ ಸ್ಟಾರ್ ಪ್ರಚಾರ ಒಲಿದಿತ್ತು. ತಿ.ನರಸೀಪುರ ಪಟ್ಟಣದ ಎನ್.ನಾರಾಯಣ ಮತ್ತು ವಿಶಾಲಾಕ್ಷಮ್ಮ ದಂಪತಿಗಳ ಮಗನಾಗಿ ಜನಿಸಿದ ಚಂದ್ರಶೇಖರ್ ಅವರಿಗೆ ಬಾಲ್ಯದ ದಿನಗಳಲ್ಲಿಯೇ ನಾಟಕ, ಕಲೆ, ಸಂಗೀತವೆಂದರೆ ಎಲ್ಲಿಲ್ಲದ ಅಪಾರ ಪ್ರೀತಿ.
ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಶಿಕ್ಷಕರಿಂದ ‘ಸೈ’ ಎನ್ನಿಸಿಕೊಂಡಿದ್ದರು. ಬನುಮಯ್ಯ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾಗ ಶಿಕ್ಷಣವನ್ನು ಮೊಟಕುಗೊಳಿಸಿ ಸಂಪೂರ್ಣವಾಗಿ ಪ್ರಚಾರದಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡವಲ್ಲಿ ಯಶಸ್ವಿಯಾದವರು ಮೈಕ್ ಚಂದ್ರು. ಆ ದಿನಗಳಲ್ಲಿ ಊರೂರುಗಳನ್ನು ಸುತ್ತಿ ಮೊದಲಿಗೆ ಚುನಾವಣೆಯಲ್ಲಿ ‘ಕಡ್ಡಾಯವಾಗಿ ನಿಮ್ಮ ಮತ ಚಲಾಯಿಸಿ’ ಎಂದು ಪ್ರಚಾರ ಮಾಡುತ್ತಿದ್ದರು. ಆಗ ‘ಬಿಬಿಸಿ’ ಚಾನಲ್ ಇವರನ್ನು ಸಂದರ್ಶನ ಮಾಡಿ ಸುದ್ದಿ ಪ್ರಸಾರ ಮಾಡಿತ್ತು.
ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದು, ಮೈಕ್ ಚಂದ್ರು ಅವರನ್ನು ಸ್ಥಳೀಯ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿತ್ತು. ಅಲ್ಲಿಂದ ಜಿಲ್ಲಾಡಳಿತ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವಂತಹ ಅವಕಾಶ ಕೊಟ್ಟಿತು. ಮೈಕ್ ಚಂದ್ರು ಧ್ವನಿಯನ್ನು ಕೇಳುತ್ತಿದ್ದ ವಿವಿಧ ಸಂಘ-ಸಂಸ್ಥೆಗಳು ಕೂಡ ನಿರೂಪಣೆ ಮಾಡಲು ಇವರನ್ನು ಕರೆದೊಯ್ಯುತ್ತಿದ್ದುದುಂಟು. ಮಾಸ್ಟರ್ ಹಿರಣ್ಣಯ್ಯ ಅವರೊಂದಿಗೆ ‘ಲಂಚಾವತಾರ’ ನಾಟಕದಲ್ಲಿಯೂ ಪಾತ್ರ
ಮಾಡಿ ಜೈಕಾರ ಗಿಟ್ಟಿಸಿಕೊಂಡವರು. ನಾಡಿನ ಕಲಾಸಂಘ, ಕಲಾಪ್ರಿಯ, ಸಮುದಾಯದ ವಿವಿಧ ನಾಟಕ-ಸಂಸ್ಥೆಗಳು ಇವರನ್ನು ಕಾಲಾನುಕಾಲಕ್ಕೆ ಗುರುತಿಸಿ ನಾಟಕಗಳಲ್ಲಿ ಅವಕಾಶಗಳನ್ನು ಮಾಡಿಕೊಟ್ಟಿತ್ತು.
ಅಷ್ಟೇ ಅಲ್ಲದೆ ಮುಂಬೈ, ದಿಲ್ಲಿ, ಮದ್ರಾಸ್, ಬೆಂಗಳೂರು-ಮುಂತಾದೆಡೆಗಳಲ್ಲಿಯೂ ತಮ್ಮ ಧ್ವನಿಯ ಶಕ್ತಿಯಿಂದ ಜನಮನ ಗೆದ್ದವರು. ಕರ್ನಾಟಕ
ರಾಜ್ಯ ಲಾಟರಿ ಪ್ರಚಾರ ಕಾರ್ಯದ ರಾಯಭಾರಿಯಾಗಿ ಕೆಲಸ ಮಾಡಿದ್ದೊಂದು ವಿಶೇಷ. ಧೂಮಪಾನದ ವಿರುದ್ಧ ಜಾಗೃತಿಯನ್ನೂ ಮೂಡಿಸಿದವರು. ಜಿಲ್ಲಾ ‘ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸರಕಾರಿ ಕೆಲಸ ಸಿಕ್ಕಿದರೂ ಅದನ್ನು ಇಷ್ಟಪಡದೆ ತಮ್ಮ ಧ್ವನಿಯ ಮೂಲಕವೇ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಛಲತೊಟ್ಟವರು ಮೈಕ್ ಚಂದ್ರು. ಹಲವು ವರ್ಷಗಳ ತನಕ ಬೆಳಗಿನ ವೇಳೆಯಲ್ಲಿ ಪತ್ರಿಕೆ ಗಳನ್ನು ಹಂಚುವ ಕಾಯಕವನ್ನೂ ಮಾಡಿದ್ದಾರೆ.
ವಸ್ತು ಪ್ರದರ್ಶನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದಾಗ ‘ಆಂದೋಲನ’ ಪತ್ರಿಕೆ ಬಗ್ಗೆ ಜಾಹೀರಾತು ಕೂಡ ಮಾಡಿದವರು
ಚಂದ್ರಶೇಖರ್. ಜೀವನದಲ್ಲಿ ಉನ್ನತ ಸಾಧನೆ ಮಾಡಿದ್ದರೂ ಮೈಕ್ ಚಂದ್ರು ಎಂದಿಗೂ ಬೀಗಿದವರಲ್ಲ. ಅವರ ಅವಿರತ ಶ್ರಮಕ್ಕೆ ಅಂಚೆ ಇಲಾಖೆ ರಾಷ್ಟ್ರೀಯ ಗೌರವ ತೋರಿದ್ದು ಕೂಡಾ ಈ ದೃಷ್ಟಿಯಿಂದಲೇ ಎಂದು ಹೇಳಿದರೆ ಹೆಚ್ಚು ಸಮಂಜಸವಾದೀತು. ಅದೇ ಮೊದಲ ಬಾರಿಗೆ ನಿರೂಪಣೆ ಮಾಡುವ ಓರ್ವ ವ್ಯಕ್ತಿಗೆ ಗೌರವ ಸಂದಿರುವುದು ಸಾಂಸ್ಕೃತಿಕ ನಗರಿಗೆ ಹಿರಿಮೆ ಎಂದರೆ ತಪ್ಪಾಗಲಾರದು. ಪ್ರತಿ ವರ್ಷದ ದಸರಾ ವಸ್ತು ಪ್ರದರ್ಶನದಲ್ಲಿ ಮೈಕ್ ಚಂದ್ರು ಅವರ ಧ್ವನಿ ಮೊಳಗುತ್ತಿತ್ತು.
ವರನಟ ಡಾ. ರಾಜ್‌ಕುಮಾರ್, ನಾಡಿನ ಖ್ಯಾತ ನಟ ಎಂಜಿಆರ್ ಸೇರಿದಂತೆ ಪ್ರಮುಖರ ಸಿನಿಮಾಗಳ ಸಂಗೀತ ರಸಸಂಜೆ ಕಾರ್ಯಕ್ರಮಗಳಿಗೆ ಮೈಕ್ ಚಂದ್ರು ಅವರೇ ನಿರೂಪಕರು. ಕನ್ನಡ, ತಮಿಳು, ಉರ್ದು ಭಾಷೆಗಳಲ್ಲಿ ಸುಲಲಿತವಾಗಿ ನಿರೂಪಣೆ ಮಾಡುವ ಇವರು ಜೊತೆಗೆ ಮುಖ್ಯಮಂತ್ರಿ ದೇವರಾಜ ಅರಸು ಅವರಿಂದ ಹಿಡಿದು, ಎಲ್ಲಾ ಹಿರಿಯ ರಾಜಕಾರಣಿಗಳ ಕಾರ್ಯಕ್ರಮಗಳ ಮೈಕ್ ವ್ಯವಸ್ಥೆಯನ್ನು ಮಾಡುತ್ತಿದ್ದರು. ಚಂದ್ರು ಅವರಿಗೆ ಬಾಲ್ಯದಿಂದಲೂ ನಾಟಕದ ಗೀಳು. ಶಾಲಾ-ಕಾಲೇಜು ದಿನಗಳಲ್ಲಿ ಹಲವು ನಾಟಕಗಳಿಗೆ ಬಣ್ಣ ಹಚ್ಚಿದ ಹೆಗ್ಗಳಿಕೆಯೂ ಇವರದು. ಮೈಕ್ ಚಂದ್ರು ಅವರು ತಮ್ಮ ಜೀವಿತಾವಧಿಯಲ್ಲಿ ೨೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪರ್ವತವಾಣಿ ಅವರ ‘ಹಗ್ಗದ ಕೊನೆ’ ನಾಟಕದಲ್ಲಿ ಪ್ರಮುಖ ಪಾತ್ರ ಮಾಡಿ ಹೆಸರು ಹಾಗೂ ಪ್ರಶಸ್ತಿ ಎರಡನ್ನೂ ತನ್ನದಾಗಿಸಿಕೊಂಡವರು.
ಸಮತೆಂತೋ ರಂಗತಂಡ, ಅಮರಕಲಾ ಸಂಘ, ಬೆನಕ ತಂಡದಲ್ಲೂ ಸಕ್ರಿಯರಾಗಿ ದುಡಿದವರು. ಮತದಾನ ಪ್ರಜಾಪ್ರಭುತ್ವದ ಪ್ರಮುಖ ಘಟ್ಟ.
ಯಾವುದೇ ಪಕ್ಷವಿರಲಿ, ಉತ್ತಮರನ್ನು ಆಯ್ಕೆ ಮಾಡಿ ಎಂದು ಎನ್. ಚಂದ್ರಶೇಖರ್ ಅವರು ಸೈಕಲ್‌ನ ಮೂಲಕ ಮೈಸೂರು ಸುತ್ತಮುತ್ತ ಪ್ರಚಾರ ಮಾಡಿದ್ದನ್ನು ಇಂದಿಗೂ ನೆನಪಿಟ್ಟುಕೊಂಡವರು ಬಹಳಷ್ಟು ಜನರಿದ್ದಾರೆ. ಇದನ್ನು ಗಮನಿಸಿದ ಚುನಾಚಣಾ ಆಯೋಗ ಇದನ್ನೇ ‘ಮತ ಜಾಗೃತಿ’ ಅಭಿಯಾನಕ್ಕೆ ಅಸವಾಗಿ ಬಳಸಿಕೊಂಡಿತ್ತು. ಡಾ. ರಾಜ್‌ಕುಮಾರ್ ಅವರ ೨೩ಕ್ಕೂ ಹೆಚ್ಚು ಸಂಗೀತ ರಸಸಂಜೆಗೆ ಮೈಕ್ ಚಂದ್ರು ಅವರು ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರು ದೆಹಲಿ ಕರ್ನಾಟಕ ಸಂಘ, ಮದ್ರಾಸ್ ವಸ್ತು ಪ್ರದರ್ಶನ, ಮುಂಬಯಿ ಕನ್ನಡ ಸಂಘದಲ್ಲೂ ಕಾರ‍್ಯಕ್ರಮ ನಿರೂಪಣೆ ಮಾಡಿದ್ದಾರೆ. ಮೊದಲಿಗೆ ನಾಟಕಗಳಲ್ಲಿ ಅಭಿನಯಿಸಿ, ಹಿಂದಿ ಭಾಷಾ ಲೋಕದ ಗಾರುಡಿಗ ‘ಬಿನಾಕಾ’ ಖ್ಯಾತಿಯ ಅಮಿನ್ ಸಯಾನಿ ಮುಂತಾದ ಪ್ರವಾಚಕರಿಂದ ಪ್ರೇರಿತ ರಾದವರು. ಅವರನ್ನೆಲ್ಲಾ ಸ್ವತಃ ಕಂಡು ಏಕಲವ್ಯನಂತೆ ಸತತವಾದ ಸ್ವಪ್ರಯತ್ನದಿಂದ, ತಮ್ಮ ಕಂಠಸಿರಿಯನ್ನು ಎಲ್ಲ ವಿಧದಲ್ಲಿ ಶ್ರೀಮಂತ ಗೊಳಿಸಿಕೊಂಡರು. ಅನಂತರ ಯಾವ ವೇದಿಕೆಯನ್ನು ಅಲಂಕರಿಸಲೂ ಹಿಂದೆ ಮುಂದೆ ನೋಡಿದವರಲ್ಲ. ಅಂತಹ ಈ ಕ್ಷೇತ್ರದ ಧ್ರುವತಾರೆಯನ್ನು ಅರಸುತ್ತಾ ಬಂದ ಪ್ರಶಸ್ತಿಗಳು ನೂರಾರು.
ತಾನು ಹಿಡಿದ ಈ ಅಪರೂಪದ ಹವ್ಯಾಸಕ್ಕೆ ಚಿನ್ನದ ಮೆರಗು ನೀಡಿ, ಆತ್ಮ ಮತ್ತು ಮನಸ್ಸನ್ನು ಸಮ್ಮಿಳಿಸಿ ಮಹಾಸಾಧನೆ ಮಾಡಿದ ಸರಳ, ಸಜ್ಜನರಾಗಿ ಎಲ್ಲರ ಆಪ್ತಮಿತ್ರರೂ ಆಗಿದ್ದರು. ‘ಒಬ್ಬ ಮನುಷ್ಯ ಕಂಠವನ್ನೇ ನಂಬಿ ಬದುಕಲು ಸಾಧ್ಯವೇ?’ ಎನ್ನುವ ಪ್ರಶ್ನೆ ಉದ್ಭವಿಸಿದರೆ ಧೈರ್ಯವಾಗಿ ‘ಹೌದು’ ಎನ್ನಬಹುದು. ಇದಕ್ಕೆ ನಿದರ್ಶನವಾಗಿ ಮೈಕ್ ಚಂದ್ರು ಬಾಳಿ ಜಗತ್ತಿಗೆ ತೋರಿಸಿದರು. ಇನ್ನೊಂದು ಅಚ್ಚರಿಯೆಂದರೆ, ಮೈಕ್ ಚಂದ್ರು ಅವರು ಯಾವುದೇ ಅನೌನ್ಸ್ ಮೆಂಟ್ ಮಾಡುವ ಮೊದಲೇ ಆ ಕುರಿತು ಮಾಹಿತಿಯನ್ನು ಕಲೆಹಾಕಿ ಜನತೆಗೆ ಹೇಗೆ ಅದನ್ನು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಮುಟ್ಟಿಸಬೇಕು ಎನ್ನುವ ಹೋಂವರ್ಕ್ ಕೂಡ ಮಾಡುತ್ತಿದ್ದರು.
‘ನಾನು ಯಾವುದೇ ಅನೌನ್ಸ್‌ಮೆಂಟ್‌ಗೆ ಮೈಕ್ ಹಿಡಿಯುವ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತೇನೆ. ಇದಕ್ಕಾಗಿ ದಿನಪತ್ರಿಕೆಗಳು, ವಾರಪತ್ರಿಕೆಗಳನ್ನು ಓದುತ್ತೇನೆ. ರಾಜಕೀಯ ಪಕ್ಷಗಳಾದರೆ ಅವುಗಳ ಪ್ರಣಾಳಿಕೆಯನ್ನೂ ಓದುತ್ತೇನೆ. ಹೀಗಾಗಿ ಎಲ್ಲವೂ ಸರಾಗವಾಗಿ ನಡೆಯುತ್ತದೆ’ ಎನ್ನುತ್ತಿದ್ದರು ಮೈಕ್ ಚಂದ್ರು.
‘ಕಾವೇರಿ ಚಳವಳಿ’ ಸಂದರ್ಭದಲ್ಲಿ ‘ಅಂದು ಕನ್ನಡಕ್ಕಾಗಿ ಗೋಕಾಕ್ ಚಳವಳಿ, ಇಂದು ನೀರಿಗಾಗಿ ಕಾವೇರಿ ಚಳವಳಿ’ ಎಂದು ಹೋರಾಟಕ್ಕೂ ಇಳಿದಿದ್ದ ವರು. ‘ನಾನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಅನೌನ್ಸ್ ಮಾಡುತ್ತೇನೆ. ಕೆಲವೊಂದು ಬಾರಿ ಸಮಯ ಸ್ಪೂರ್ತಿಯಿಂದಲೂ ಅನೌನ್ಸ್ ಮಾಡಬೇಕಾಗುತ್ತದೆ’ ಎನ್ನುವ ಮೈಕ್ ಚಂದ್ರು ಅವರಿಗೆ ಬೀಚಿ ಹಾಗೂ ಮಾಸ್ಟರ್ ಹಿರಣ್ಣಯ್ಯ ಅಂದರೆ ಬಹಳ ಪ್ರೀತಿ. ಅಂತಹ ಎನ್. ಚಂದ್ರಶೇಖರ್ (ಮೈಕ್ ಚಂದ್ರು) ಅವರು ತಮ್ಮ ೭೧ ನೇ ವಯಸ್ಸಿನಲ್ಲಿ ೨೦೨೧ ರ ಸೆಪ್ಟೆಂಬರ್ ೧೨ ರ ಭಾನುವಾರ ಜೆ.ಪಿ ನಗರದ ನಿವಾಸದಲ್ಲಿ ಹೃದಯಾ ಘಾತದಿಂದ ಸ್ವರ್ಗಸ್ಥರಾದರು.
(ಲೇಖಕರು: ಡಿಆರ್‌ಡಿಒ, ಎಡಿಎ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ)