ಇದೇ ಅಂತರಂಗ ಸುದ್ದಿ
vbhat@me.com
ಜೀವನದಲ್ಲಿ ಪುಸ್ತಕವನ್ನೇ ಓದದವರು ಗ್ರಂಥಾಲಯ ಸಚಿವರಾಗಿದ್ದರು! ಗೆದ್ದಲುಹುಳುವನ್ನು ಗ್ರಂಥಾಲಯ ಮಂತ್ರಿ ಮಾಡಿದರೆ ಹೇಗೋಹಾಗೆ! ಮಧು ಬಂಗಾರಪ್ಪನವರಿಗೆ ಕನ್ನಡವನ್ನು ಸರಾಗವಾಗಿ ಓದಲು, ಬರೆಯಲು ಬರುತ್ತದಾ? ಗೊತ್ತಿಲ್ಲ. ಅವರೇ ಹೇಳುವುದು ಒಳ್ಳೆಯದು. ಇಷ್ಟೂ ಸಾಲದೆಂಬಂತೆ, ಇವರು ಪಿಯುಸಿ ಫೇಲ್. ಜತೆಗೆ ಇವರಿಗೆ ಪ್ರಾಥಮಿಕ ಶಿಕ್ಷಣ ಖಾತೆ ಬೇರೆ. ಶಾಲೆ, ಶಿಕ್ಷಣ, ಪುಸ್ತಕ ಖಾತೆಗೆ ‘ಸರಸ್ವತಿ ಶಾಪ ಪುತ್ರ’ರನ್ನು ಪ್ರತಿಷ್ಠಾಪಿಸಿದರೆ ಹೇಗೆ?
ರಾಜ್ಯ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಇರುವಾಗ, ನಾನೊಂದು ಅಂಕಣ ಬರೆದಿದ್ದೆ. ‘ಪ್ರಮುಖ ಸಚಿವ ಖಾತೆ ಗಳಿಗೆ ಲಾಬಿ ನಡೆಯುವ ಹಾಗೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಗ್ರಂಥಾಲಯ ಇಲಾಖೆ ಖಾತೆಗಳಿಗೂ ಲಾಬಿ ಮಾಡುವ ದಿನಗಳು ಬರಬೇಕು. ಕನ್ನಡ-ಸಂಸ್ಕೃತಿ ಸಚಿವರಾಗಲು ಭಾರಿ ಲಾಬಿ, ಗ್ರಂಥಾಲಯ ಖಾತೆಗೆ ಪಟ್ಟು ಎಂಬ ತಲೆಬರಹಗಳನ್ನು ಪತ್ರಿಕೆಗಳಲ್ಲಿ ನೋಡುವ ದಿನಗಳು ಬರಬೇಕು. ಅಂಥ ಶೀರ್ಷಿಕೆಗಳನ್ನು ಬರೆಯುವ, ಮುದ್ರಿಸುವ ಅವಕಾಶ ಈ ಜನ್ಮದದರೂ ಸಂಪಾದಕನಾಗಿ ನನಗೆ ಸಿಗಲಿ ಎಂದುಆಶಿಸುತ್ತೇನೆ’ ಎಂದು ಬರೆದಿದ್ದೆ.
ಇದಕ್ಕೆ ಕಾರಣಗಳೂ ಇದ್ದವು. ಯಾವುದೇ ಪಕ್ಷದ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿ, ಯಾರೇ ಮುಖ್ಯಮಂತ್ರಿಆಗಲಿ, ಕನ್ನಡದ ಅಸ್ಮಿತೆ ಮೆರೆಯುವ, ನಮ್ಮತನದ ಹೆಗ್ಗುರುತಾದ ಕನ್ನಡ ಮತ್ತು ಸಂಸ್ಕೃತಿ ಖಾತೆ ಮಂತ್ರಿಯಾಗಲು ಯಾರೂ ಮುಂದೆ ಬರುವುದಿಲ್ಲ. ಆ ಖಾತೆಗೆ ಯಾರೂ ಲಾಬಿ ಮಾಡುವುದಿಲ್ಲ. ಹಣಕಾಸು, ಲೋಕೋಪಯೋಗಿ, ಭಾರಿ ನೀರಾವರಿ, ಬೃಹತ್ ಕೈಗಾರಿಕೆ, ಇಂಧನ, ಗೃಹ, ಬೆಂಗಳೂರು ಅಭಿವೃದ್ಧಿ, ಕಂದಾಯ… ಸಚಿವ ರಾಗಲು ಪೈಪೋಟಿ ಏರ್ಪಡುತ್ತದೆ.
ಹೈಕಮಾಂಡ್ ಮಟ್ಟದಲ್ಲಿ ಈ ಖಾತೆ ಸಚಿವರಾಗಲು ದೊಡ್ಡಮಟ್ಟದ ಲಾಬಿ ನಡೆಯುತ್ತದೆ. ಪ್ರಭಾವಿ ನಾಯಕರು ದಿಲ್ಲಿ ನಾಯಕರ ಎಡತಾಕುತ್ತಾರೆ. ಅವರ ಪರವಾಗಿ ಯಾರ್ಯಾರೋ, ಯಾರ್ಯಾರಿಗೋ ಫೋನ್ ಮಾಡುತ್ತಾರೆ. ಕೊನೆಗೆ ಪ್ರಭಾವಿಗಳು ಪ್ರಮುಖ ಖಾತೆಗಳನ್ನು ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಇದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಮೊನ್ನೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸಂಪುಟ ರಚನೆ ಕಸರತ್ತು ಆರಂಭಿಸಿದಾಗಲೂ ಇದೇ ಪೈಪೋಟಿ ನಡೆದಿದ್ದನ್ನು ನೋಡಿದ್ದೇವೆ.
ಆದರೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಗ್ರಂಥಾಲಯ ಸಚಿವರಾಗಲು ಯಾರೂ ಮುಂದೆ ಬರುವುದಿಲ್ಲ. ಈ ಖಾತೆಗಳನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಆ ಖಾತೆಗಳಲ್ಲಿ ಮುಂದುವರಿದಷ್ಟು ದಿನ ಖಿನ್ನಮನಸ್ಕರಾಗಿಯೇ ಇರುತ್ತಾರೆ.
ಒಂದರ್ಥದಲ್ಲಿ ಅವು ಪನಿಷ್‌ಮೆಂಟ್ ಖಾತೆಗಳು. ಸಂಪುಟ ಸೇರುವವರೆಲ್ಲರೂ ಮುಖ್ಯಮಂತ್ರಿಗಳಿಗೆ ಆಪ್ತರಾಗೇನೂ ಇರುವುದಿಲ್ಲ.
ಸಾಮಾನ್ಯವಾಗಿ ಅವರಿಗೆ ಆಗದವರಿಗೆ, ಈ ಖಾತೆಗಳು ಹೋಗುತ್ತವೆ. ಇನ್ನು ಸಂಪುಟ ಸೇರುವವರೆಲ್ಲ ‘ಹೆವ್ವಿ ವೇಟ್ ’ಗಳಲ್ಲ. ಅಂಥವರಿಗಾಗಿ ಈ ಖಾತೆಗಳು ಮುಡಿಪಾಗಿಡಲಾಗುತ್ತದೆ. ಸಚಿವರನ್ನಾಗಿ ಮಾಡಿದಂತಾಗಬೇಕು, ಆದರೆ ಮಹತ್ವದ ಖಾತೆ ಆಗಬಾರದು ಎಂಬ ಲೆಕ್ಕಾಚಾರದಲ್ಲಿ ಈ ಎರಡು ಖಾತೆಗಳ ಹಂಚಿಕೆಯಾಗುತ್ತವೆ. ಸರಕಾರಗಳ ಧೋರಣೆಯೇ ಹೀಗಾದರೆ, ಕನ್ನಡದ ಅಸ್ಮಿತೆಯ ದೃಷ್ಟಿಯಿಂದ ಮಹತ್ವವಾದ ಈ ಎರಡು ಖಾತೆಗಳು ಪ್ರಾಮುಖ್ಯ ಗಳಿಸಿಕೊಳ್ಳುವುದಾದರೂ ಹೇಗೆ?
ಹೀಗಾಗಿ ಯಾರೂ ಈ ಖಾತೆಗಳನ್ನು ವಹಿಸಿಕೊಳ್ಳಲು ಮುಂದೆ ಬರುವುದಿಲ್ಲ.
ಅಪಾತ್ರರೇ ಈ ಖಾತೆಗಳಿಗೆ ಸಚಿವರಾಗುತ್ತಾರೆ. ಈಹಿನ್ನೆಲೆಯಲ್ಲಿ, ಈ ಎರಡು ಖಾತೆಗಳ ಸಚಿವರಾಗಲು ದಿಲ್ಲಿ ಮಟ್ಟದಲ್ಲಿ ಲಾಬಿ ಏರ್ಪಡುವಂಥ ದಿನಗಳು ಬರಲಿ ಎಂದು ಬರೆದಿದ್ದು. ಒಂದು ಖಾತೆ ಮಹತ್ವವನ್ನು ಹೇಗೆ ಪಡೆದುಕೊಳ್ಳುತ್ತದೆ? ಯಾವಾಗ ಅದು ಲಾಬಿ ಮಾಡಿ ಗಿಟ್ಟಿಸಿಕೊಳ್ಳುವ ಖಾತೆಯಾಗುತ್ತದೆ? ಇದಕ್ಕೆ ಉತ್ತರ ಸರಳ. ಯಾವ ಖಾತೆಗೆ ಮುಖ್ಯಮಂತ್ರಿ ಗಳು ಹೆಚ್ಚಿನ ಹಣವನ್ನು ತೆಗೆದಿಡುತ್ತಾರೋ, ಆ ಖಾತೆ ಸಹಜವಾಗಿ ಮಹತ್ವದ್ದೆಂದು ಎನಿಸಿಕೊಳ್ಳುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಗ್ರಂಥಾಲಯ ಖಾತೆಗಳಿಗೆ ಬಿಡಿಗಾಸಿನಷ್ಟು ಹಣವನ್ನು ಇಟ್ಟಿರುವುದರಿಂದ ಯಾರೂ ಆ
ಖಾತೆಗಳ ಸಚಿವರಾಗಲು ಮುಂದೆ ಬರುವುದಿಲ್ಲ. ಒಂದು ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಎಂಟು ನೂರು ಕೋಟಿ-
ಸಾವಿರ ರುಪಾಯಿ ಮತ್ತು ಗ್ರಂಥಾಲಯ ಖಾತೆಗೆ ಮುನ್ನೂರು- ನಾನೂರು ಕೋಟಿ ರುಪಾಯಿ ತೆಗೆದಿರಿಸಿದರೆ, ಆಗ ನೋಡಿ ಹೇಗೆ ಪೈಪೋಟಿ ಏರ್ಪಡುತ್ತದೆಂದು? ಆದರೆ ಇಲ್ಲಿ ತನಕ ಯಾವ ಮುಖ್ಯಮಂತ್ರಿಗೂ ಅಷ್ಟು ಹಣ ತೆಗೆದಿರಿಸಬೇಕು ಎಂದು ಅನಿಸಿಲ್ಲ. ಹೀಗಾಗಿ ಇವು ಯಾರಿಗೂ ಬೇಡದ ಖಾತೆಗಳಾಗಿಯೇ ಇವೆ.
ಕೆಲವು ವರ್ಷಗಳ ಹಿಂದೆ ನಡೆದ ಒಂದು ಪ್ರಸಂಗವನ್ನು ಇಲ್ಲಿ ನೆನಪಿಸಬಯಸುತ್ತೇನೆ. ಆಗ ಬಾಬುರಾವ್ ಚವಾಣ್ ಅವರು ಗ್ರಂಥಾಲಯ ಸಚಿವರಾಗಿದ್ದರು. ನ್ಯಾಷನಲ್ ಬುಕ್ ಟ್ರಸ್ಟ್ ಧಾರವಾಡದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿತ್ತು. ಅದರ ಉದ್ಘಾಟನೆಗೆ ಚವಾಣ್ ಅವರನ್ನು ಆಹ್ವಾನಿಸಿತ್ತು. ತಮ್ಮ ಉದ್ಘಾಟನಾ ಭಾಷಣದಲ್ಲಿ ಚವಾಣ್, ‘ನಾನು ಇಲ್ಲಿ ತನಕ ಒಂದೇ ಒಂದು ಪುಸ್ತಕವನ್ನು ಓದಿಲ್ಲ. ಶಾಲೆಯಲ್ಲೂ ಪಠ್ಯ ಪುಸ್ತಕ ಓದಿದ್ದು ಕಮ್ಮಿಯೇ.
ನನ್ನ ಅಪ್ಪ ಸಣ್ಣವನಿದ್ದಾಗ ಪಂಚತಂತ್ರದ ಕತೆ ಪುಸ್ತಕ ತಂದುಕೊಟ್ಟಿದ್ದ. ಅದನ್ನೂ ಓದಲು ಆಗಲಿಲ್ಲ. ಈಗ ನಾನು
ಗ್ರಂಥಾಲಯ ಸಚಿವ. ಇನ್ನು ಮುಂದಾದರೂ ಪುಸ್ತಕಗಳನ್ನು ಓದಲು ಪ್ರಯತ್ನಿಸುವೆ. ನನ್ನ ಸಮಸ್ಯೆಅಂದ್ರೆ ಪುಸ್ತಕವನ್ನು
ತೆರೆಯುತ್ತಿದ್ದಂತೆ ನಿದ್ದೆ ಬಂದು ಬಿಡುತ್ತದೆ’ ಎಂದು (ಪ್ರಾಮಾಣಿಕವಾಗಿ) ಹೇಳಿದ್ದರು. ಆ ಖಾತೆಯನ್ನು ಬಿಡುವ ಸ್ವಲ್ಪ ದಿನಗಳ ಮೊದಲು ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ, ‘ನನ್ನನ್ನು ಈ ಖಾತೆಗೆ ಯಾಕೆ ಮಂತ್ರಿಮಾಡಿದ್ದಾರೋ ಗೊತ್ತಿಲ್ಲ.
ಜೀವನದಲ್ಲಿ ಪುಸ್ತಕ ಓದದ ನನ್ನನ್ನೇ ಸಚಿವರನ್ನಾಗಿ ಮಾಡಿzರೆ. ಸರಸ್ವತಿಗೂ ನನಗೂ ಸಂಬಂಧವೇ ಇಲ್ಲ’ ಎಂದುಹೇಳಿಕೊಂಡಿದ್ದರು. ಕಾರ್ಯಕ್ರಮವೊಂದರಲ್ಲಿ ಅವರಿಗೆ ಉಡುಗೊರೆಯಾಗಿ ಪುಸ್ತಕಗಳನ್ನು ನೀಡಿದಾಗ, ಅವನ್ನೆ ವೇದಿಕೆಯ ಬಿಟ್ಟು ಹೋಗಿದ್ದರು. ಯಾರಾದರೂ ಪುಸ್ತಕ ಕೊಟ್ಟರೆ, ‘ನನಗ್ಯಾಕೆ ಪುಸ್ತಕ ಕೊಡ್ತೀರಿ? ಯಾರಾದರೂ ನನಗೆ ಪುಸ್ತಕಗಳನ್ನು ಕೊಟ್ಟರೆ, ಮನೆಗೆ ಒಯ್ಯುವುದಿಲ್ಲ. ಕಾರಣ ನಮ್ಮ ಮನೆಯಲ್ಲಿ ಯಾರೂ ಓದುವುದಿಲ್ಲ’ ಎಂದು ಹೇಳುತ್ತಿದ್ದರು. ಗ್ರಂಥಾಲಯ ಸಚಿವರಿಗೆ ಪುಸ್ತಕಗಳನ್ನು ನೀಡಿ ಅವಲಕ್ಷಣ ಮಾಡಿಸಿಕೊಂಡಂತಾಯಿತು ಎಂಬ ಮಾತು ಆ ದಿನಗಳಲ್ಲಿ ಜನಜನಿತವಾಗಿತ್ತು.
ಈಗ ಸಿದ್ದರಾಮಯ್ಯನವರು ಗ್ರಂಥಾಲಯ ಖಾತೆಯನ್ನು ಮಧು ಬಂಗಾರಪ್ಪನವರಿಗೆ ವಹಿಸಿದ್ದಾರೆ. ಸಾಮಾನ್ಯವಾಗಿ ಈ
ಖಾತೆಗೆ ಸಚಿವರಾಗಿ ಬಂದವರನ್ನು ಲೇಖಕರು, ಪ್ರಕಾಶಕರು, ಪುಸ್ತಕ ಮಾರಾಟಗಾರರು ಔಪಚಾರಿಕವಾಗಿ ಭೇಟಿಯಾಗುವು
ದುಂಟು. ಅದೇ ರೀತಿ, ಅಕ್ಷರವ್ಯವಸಾಯದಲ್ಲಿರುವವರು ಗ್ರಂಥಾಲಯ ಖಾತೆಯನ್ನೂ ವಹಿಸಿಕೊಂಡಿರುವ ಮಧು
ಬಂಗಾರಪ್ಪನವರನ್ನು ಭೇಟಿಯಾಗಿದ್ದರು.
ಸಚಿವರನ್ನು ನೋಡಲು ಹೋಗುವಾಗ ಖಾಲಿ ಕೈಯಲ್ಲಿ ಹೋಗುವುದುಂಟೇ? ಎಲ್ಲರೂ ತಮ್ಮ ತಮ್ಮ ಪ್ರಕಾಶನದ ಒಂದೆರಡು ಪುಸ್ತಕಗಳನ್ನುಸಚಿವರಿಗೆ ಕೊಡಲು ತೆಗೆದುಕೊಂಡು ಹೋಗಿದ್ದರು. ಅವನ್ನು ನೋಡುತ್ತಿದ್ದಂತೆ ಮಧು ಬಂಗಾರಪ್ಪ, ‘ನಿಜ ಹೇಳಬೇಕೆಂದರೆ, ನಾನುಜೀವನದಲ್ಲಿ ಪುಸ್ತಕಗಳನ್ನು ಓದಿದವನಲ್ಲ. ಅದರಲ್ಲೂ ಕನ್ನಡದ ಕತೆ, ಕಾದಂಬರಿ, ಲೇಖನಗಳ
ಪುಸ್ತಕಗಳನ್ನು ಓದಿಯೇ ಇಲ್ಲ. ಇನ್ನು ಮುಂದೆ ಓದುತ್ತೇನೆ, ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ’
ಎಂದುಬಿಟ್ಟರು!
ಜೀವನದಲ್ಲಿ ಪುಸ್ತಕವನ್ನೇ ಓದದವರು ಗ್ರಂಥಾಲಯ ಸಚಿವರಾಗಿದ್ದರು! ಗೆದ್ದಲುಹುಳುವನ್ನು ಗ್ರಂಥಾಲಯ ಮಂತ್ರಿ ಮಾಡಿದರೆ ಹೇಗೋಹಾಗೆ! ಮಧು ಬಂಗಾರಪ್ಪನವರಿಗೆ ಕನ್ನಡವನ್ನು ಸರಾಗವಾಗಿ ಓದಲು, ಬರೆಯಲು ಬರುತ್ತದಾ? ಗೊತ್ತಿಲ್ಲ. ಅವರೇ ಹೇಳುವುದು ಒಳ್ಳೆಯದು. ಇಷ್ಟೂ ಸಾಲದೆಂಬಂತೆ, ಇವರು ಪಿಯುಸಿ ಫಲ. ಜತೆಗೆ ಇವರಿಗೆ ಪ್ರಾಥಮಿಕ ಶಿಕ್ಷಣ ಖಾತೆ ಬೇರೆ. ಶಾಲೆ, ಶಿಕ್ಷಣ, ಪುಸ್ತಕ ಖಾತೆಗೆ ‘ಸರಸ್ವತಿ ಶಾಪ ಪುತ್ರ’ರನ್ನು ಪ್ರತಿಷ್ಠಾಪಿಸಿದರೆ ಹೇಗೆ? ತಾಯಿ ಭುವನೇಶ್ವರಿಯೇ, ನೀನು ಧನ್ಯ!
ಪುಸ್ತಕ ಮತ್ತು ಪರಿಪೂರ್ಣತೆ
‘ಯಾವ ಪುಸ್ತಕವೂ ಪರಿಪೂರ್ಣ ಅಲ್ಲ, ಯಾವ ಲೇಖಕನಿಗೂ ಎಲ್ಲವೂ ಗೊತ್ತಿರಲು ಸಾಧ್ಯವಿಲ್ಲ’ ಎಂಬುದು ಸಂಸ್ಕೃತ ಶ್ಲೋಕ.
ವಿಷಯಪರಿಣತನೊಬ್ಬ ತನಗೆ ಪಾಂಡಿತ್ಯವಿರುವ ವಿಷಯದ ಬಗ್ಗೆ ಬರೆದಾಗಲೂ ಈ ಮಾತು ಅನ್ವಯ. ಹೀಗಾಗಿ ಎಲ್ಲ ಪುಸ್ತಕಗಳೂ ಒಂದಿಂದು ರೀತಿಯಲ್ಲಿ ಅಪೂರ್ಣವೇ. ಒಂದು ವಿಷಯದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಅದೇ ವಿಷಯದ ಬಗ್ಗೆ ಅನೇಕರು ಬರೆದ ಪುಸ್ತಕಗಳನ್ನು ಓದಬೇಕಾದೀತು. ಅದೇ ಸಂಶೋಧನೆ ಎಂದೂ ಕೆಲವರು ಹೇಳುತ್ತಾರೆ. ಹಾಗೆಂದು ಸಂಶೋಧನೆಯೂ ಪರಿಪೂರ್ಣ ಅಲ್ಲ.
ಹೀಗಾಗಿ ಒಂದೇ ವಿಷಯದ ಬಗ್ಗೆ ಹಲವರು ಸಂಶೋಧನೆ ಮಾಡುತ್ತಾರೆ. ನಮ್ಮ ಬಗ್ಗೆ ನಾವು ಬರೆದರೂ, ಅದು ಅಪೂರ್ಣವೇ. ಯಾವುದೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ, ಈ ಪ್ರಕೃತಿಯೂ ಸೇರಿ. ಏನೇ ಬರೆದರೂ ಅದಕ್ಕೆ ಸ್ವಲ್ಪ ಸೇರಿಸಬಹುದಂತೆ ಅಥವಾ ಯಾರ ಕಾಪಿಯನ್ನಾದರೂ ಎಡಿಟ್ ಮಾಡಬಹುದಂತೆ. ಯಾರ ಬರಹದದರೂ ತಪ್ಪು ಕಂಡು ಹಿಡಿಯಬಹುದಂತೆ.
ವಾಲ್ಮೀಕಿ ಮೊದಲ ಸಲ ‘ರಾಮಾಯಣ’ ಬರೆದರೂ ಅದಾದ ಬಳಿಕ, ಸಾವಿರಾರು ಮಂದಿ ವ್ಯಾಖ್ಯಾನಿಸಿದ್ದಾರೆ, ತಮ್ಮ ದೃಷ್ಟಿ
ಕೋನದಲ್ಲಿ ರಾಮಾಯಣವನ್ನು ಬರೆದಿzರೆ. ವಾಲ್ಮೀಕಿ ಮೊದಲಿಗೆ ಬರೆದಿದ್ದರೂ, ಅದೇ ಪರಿಪೂರ್ಣ ಅಲ್ಲ, ಸರ್ವಸ್ವವಲ್ಲ.
‘ನೀವೇಕೆ ನಿಮ್ಮ ಆತ್ಮಕಥೆಯನ್ನು ಬರೆಯಬಾರದು?’ ಎಂದು ಅಟಲ್ ಬಿಹಾರಿ ವಾಜಪೇಯಿಗೆ ಕೇಳಿದಾಗ, ‘ನಾನು ನನ್ನ ಬಗ್ಗೆಹೇಳುವುದೇನೂ ಇಲ್ಲ. ನನ್ನ ಬಗ್ಗೆ ನನಗಿಂತ ನಿಮಗೇ (ಪತ್ರಕರ್ತರಿಗೆ) ಹೆಚ್ಚು ಗೊತ್ತಿದೆ’ ಎಂದು ಹೇಳಿದ್ದರು. (ನಾನು
ಅವರ ಬಗ್ಗೆ ಬರೆದಸುಮಾರು ಆರು ನೂರು ಪುಟಗಳ ಬಯಾಗ್ರಫಿ (ಅಜಾತಶತ್ರು) ಯನ್ನು ವಾಜಪೇಯಿ ಕೈಗಿತ್ತಾಗಲೂ, ‘ನನಗೇ ನನ್ನ ಬಗ್ಗೆ ಇಷ್ಟೆಲ್ಲ ವಿಷಯಗಳು ಗೊತ್ತಿಲ್ಲ’ ಎಂದು ತಮಾಷೆಗೆ ಹೇಳಿದ್ದರು.)
ಇಂದಿರಾ ಗಾಂಧಿ ಸೇರಿದಂತೆ ಭಾರತದ ಮೂವರು ಪ್ರಧಾನಿಗಳಿಗೆ ಪತ್ರಿಕಾ ಸಲಹೆಗಾರರಾಗಿದ್ದ ಎಚ್.ವೈ.ಶಾರದಾ
ಪ್ರಸಾದ್ ಅವರಿಗೆ, ‘ನೀವೇಕೆ ನಿಮ್ಮ ಆತ್ಮಕಥೆ ಬರೆಯಬಾರದು?’ ಎಂದು ಕೇಳಿದಾಗ, ಅವರು ಹೇಳಿದ್ದು -‘ನೀವು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿದ್ದಾಗ (ಪಿಎಂಒ), ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸತ್ಯದ ಒಂದು ಮಗ್ಗುಲು ಅಷ್ಟೇ ಗೊತ್ತಾಗುವುದಿಲ್ಲ, ಅದಕ್ಕಿಂತಮುಖ್ಯವಾಗಿ ಸತ್ಯಕ್ಕೆ ಎಷ್ಟು ಮಗ್ಗುಲುಗಳು ಇದ್ದಿರಬಹುದು ಎಂಬುದೂ ಗೊತ್ತಾಗುವುದಿಲ್ಲ.
ನಾವು ಯಾವುದು ಸತ್ಯ ಎಂದು ಭಾವಿಸಿರುತ್ತೇವೋ, ಅದು ಮತ್ತೊಂದು ಮಗ್ಗುಲಿನಿಂದ ಬೇರೆ ರೀತಿಯಲ್ಲಿ ಕಾಣಿಸುತ್ತದೆ.
ಹೀಗಾಗಿ ನಾನು ಬರೆಯುವ ಗೋಜಿಗೆ ಹೋಗಲಿಲ್ಲ.’ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೂ, ‘ನೀವೇಕೆ ಆತ್ಮಕಥೆ ಬರೆಯುತ್ತಿಲ್ಲ?’ ಎಂದು ಕೇಳಿದಾಗಲೂ, ‘ನೀವು ನನ್ನ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಬದಲಿಸಲು ನನಗೆ ಇಷ್ಟವಿಲ್ಲ’ ಎಂದು ಹೇಳಿದ್ದರು.
ಎಂದೆಂದೂ ಹೆಲ್ಮೆಟ್ ಧರಿಸದ ಗವಾಸ್ಕರ್
ಇಂದಿಗೆ ಐವತ್ತು ವರ್ಷಗಳ ಹಿಂದೆ, ಸುನಿಲ್ ಗವಾಸ್ಕರ‍್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಆಂಗ್ಲ ದೈನಿಕವೊಂದು ಅವರನ್ನು ಸಂದರ್ಶಿಸಿತು. ಅವರ ಸಂದರ್ಶನದಲ್ಲಿ ಒಂದು ಪ್ರಶ್ನೆ ಮತ್ತು ಅದಕ್ಕೆ ಆ ಮಹಾನ್ ಕ್ರಿಕೆಟ್ ಪಟು ನೀಡಿದ ಉತ್ತರ ಗಮನಸೆಳೆಯಿತು.
‘ನೀವೇಕೆ ನಿಮ್ಮ ಕ್ರಿಕೆಟ್ ಜೀವನದಲ್ಲಿ ಎಂದೂ ಹೆಲ್ಮೆಟ್ ಹಾಕಿಕೊಳ್ಳಲಿಲ್ಲ ಅಥವಾ ನೆಟ್ ಪ್ರಾಕ್ಟೀಸ್ ಮಾಡುವಾಗ ಹೆಲ್ಮೆಟ್
ಧರಿಸಿದ್ದಿರಾ?’ ಎಂಬ ಸಂದರ್ಶಕನ ಪ್ರಶ್ನೆಗೆ ಗವಾಸ್ಕರ್ ಹೇಳಿದ್ದು – ‘ಆ ದಿನಗಳಲ್ಲಿ ಯಾರೂ ಹೆಲ್ಮೆಟ್ ಧರಿಸುತ್ತಿರಲಿಲ್ಲ. ನಾವು
ಲೆಗ್-ಗಾq ಮತ್ತು ಗ್ಲೋವ್ಸ್ ಹಾಕಿಕೊಳ್ಳುತ್ತಿzವು. ನಾವು ಉಳಿದುಕೊಳ್ಳುತ್ತಿದ್ದ ಹೋಟೆಲಿನಲ್ಲಿ ಇಟ್ಟಿರುತ್ತಿದ್ದ ದಪ್ಪ ಟವೆಲುಗಳನ್ನು ತೊಡೆಗೆ ಕಟ್ಟಿಕೊಳ್ಳುತ್ತಿದ್ದೆವು. ೧೯೭೧ರ ವೆ ಇಂಡೀಸ್ ಪ್ರವಾಸದ ನಂತರ ತೊಡೆಗೆ ಸ್ಪಾಂಜ್ ಗಾq ಧರಿಸಲಾರಂಭಿಸಿದೆವು. ಆದರೆ ಅದು ಟವೆಲ್ ಸುತ್ತಿಕೊಂಡಷ್ಟು ಸುರಕ್ಷಿತವಾಗಿರಲಿಲ್ಲ. ನಾನೆಂದೂ ಹೆಲ್ಮಟ್‌ನ್ನು ಧರಿಸಲಿಲ್ಲ. ಅದನ್ನು ಧರಿಸುವ ಅವಶ್ಯ ಕತೆಯೂ ಬೀಳಲಿಲ್ಲ. ಕಾರಣ ನನಗೆ ನನ್ನ ಬ್ಯಾಟಿಂಗ್ ಟೆಕ್ನಿಕ್‌ನಲ್ಲಿ ವಿಶ್ವಾಸವಿತ್ತು. ಕೈಯಲ್ಲಿ ಬ್ಯಾಟ್ ಇರುವಾಗ, ಹೇಗೆ ಬೌಲ್ ಎಸೆದರೂ ಎದುರಿಸಬಹುದಲ್ಲ.
ಒಮ್ಮೆ ಮಾಲ್ಕಮ್ ಮಾರ್ಷಲ್ ಎಸೆದ ಚೆಂಡು ನನ್ನ ಹಣೆಗೆ ಬಡಿಯಿತು. ಆನಂತರ ನನ್ನ ಕ್ರಿಕೆಟ್ ಜೀವನದ ಕೊನೆಯ ಮೂರು ವರ್ಷಗಳಲ್ಲಿ, ಆಗಾಗ ವೇಗದ ಬೌಲರುಗಳನ್ನು ಎದುರಿಸುವಾಗ ಸ್ಕಲ್ ಕ್ಯಾಪ್ ಧರಿಸುತ್ತಿದ್ದೆ, ಅದೂ ಹೊಸ ಚೆಂಡನ್ನು ಎದುರಿಸುವಾಗ ಮಾತ್ರ. ಅದನ್ನು ಬಿಟ್ಟರೆ ನಾನು ಸದಾ ಬಿಳಿ ಪನಾಮಾ ಹ್ಯಾಟ್ ಧರಿಸಿ ಆಡುತ್ತಿದ್ದೆ. ಉಳಿದಂತೆ ತಲೆಗೆ
ಏನೂ ಧರಿಸದೇ ಆಡುತ್ತಿದ್ದುದೂ ಉಂಟು.’
ನನ್ನಂತೆ ನೀವೂ ಮಾಡಬಹುದು
ನಾನು ಜರ್ಮನಿಯ ಹೆಡೆಲ್ ಬರ್ಗ್‌ಗೆ ಹೋದಾಗ, ಹದಿನೆಂಟನೇ ಶತಮಾನದ ಜರ್ಮನ್ ಕವಿ ಕ್ಲೋಪ್ ಸ್ಟಾಕ್ ಮನೆಗೆ ಹೋಗಿದ್ದೆ. ಅಲ್ಲಿ ಓದಿದ ಒಂದು ಪ್ರಸಂಗ. ಆ ದಿನಗಳಲ್ಲಿ ಹೊಸ ಕೃತಿಗಳು ಬಿಡುಗಡೆಯಾದಾಗ, ಕೃತಿಕಾರರೊಂದಿಗೆ ಪ್ರಮುಖ ಊರುಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅದೇ ರೀತಿ ಕ್ಲೋಪ್ ಸ್ಟಾಕ್ ಬರೆದ ಹೊಸ ಕವನ ಸಂಕಲನ ಬಿಡುಗಡೆಯಾದಾಗ, ಆತ ತನ್ನ ಕೃತಿಯ ಬಗ್ಗೆ ವಿವರಿಸಲು, ಗೋಟಿಂಗೆನ್‌ನಿಂದ ಹ್ಯಾಂಬರ್ಗ್ ತನಕ ಪ್ರವಾಸ ಪ್ರತಿ ದಿನ ಒಂದೆರಡು ಕಾರ್ಯಕ್ರಮಗಳಿರುತ್ತಿದ್ದವು.
ಆತ ತನ್ನ ಈ ಪ್ರವಾಸದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ. ಅವನ ಕೊನೆಯ ಕಾರ್ಯಕ್ರಮ ಹ್ಯಾಂಬರ್ಗ್‌ನಲ್ಲಿ. ಅಲ್ಲಿ ಸಭಿಕನೊಬ್ಬ ಎದ್ದು ನಿಂತು ಕ್ಲೋಪ್ ಸ್ಟಾಕ್ ಬರೆದ ಕೆಲವು ಸಾಲುಗಳನ್ನು ಓದಿ, ಇದರ ಅರ್ಥವನ್ನು ವಿವರಿಸುವಂತೆ ಹೇಳಿದ. ಕ್ಲೋಪ್ ಸ್ಟಾಕ್ ಆಗ ಹೇಳಿದ – ‘ಇದನ್ನು ಬರೆಯುವಾಗ ನನ್ನ ಮನಸ್ಥಿತಿ ಏನಿತ್ತೋ ಗೊತ್ತಿಲ್ಲ. ಆಗಿನ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಕಷ್ಟ. ಆದರೆ ಒಂದು ಮಾತಂತೂ ಸತ್ಯ, ಇವು ನಾನು ಬರೆದ ಚೆಂದದ ಸಾಲುಗಳು. ನಾನು ನನ್ನ ಇಷ್ಟು ವರ್ಷಗಳ ಜೀವನದ ಅನುಭವಗಳನ್ನು ಈ ಸಾಲುಗಳಲ್ಲಿ ಅಡಕವಾಗಿಟ್ಟಿದ್ದೇನೆ.
ನಿಮಗೆ ಈ ಸಾಲುಗಳ ಅರ್ಥಗಳನ್ನು ತಿಳಿದುಕೊಳ್ಳಬೇಕು ಎಂದು ಗಂಭೀರವಾಗಿ ಅನಿಸಿದರೆ, ನೀವೂ ನಿಮ್ಮ ಜೀವನವನ್ನು ಮುಡಿಪಾಗಿಡಬಹುದು.’
ಸ್ಕೂಪ್ ಸುದ್ದಿ ಅಂದ್ರೆ..
ಆತ ಟ್ರೈನಿ ರಿಪೋರ್ಟರ್ ಎಂದು ಪತ್ರಿಕೆ ಸೇರಿ ಒಂದು ವಾರವಾಗಿತ್ತು. ರಾತ್ರಿ ಹತ್ತು ಗಂಟೆ ಹೊತ್ತಿಗೆ, ಸಂಪಾದಕರಿಗೆ ಒಂದು ಕರೆ ಬಂತು. ನಗರದ ಹೊರವಲಯದಲ್ಲಿರುವ ಫ್ಯಾಕ್ಟರಿಯಲ್ಲಿ ಬೆಂಕಿ ಬಿದ್ದಿದೆಯೆಂದು. ತಕ್ಷಣ ಯಾರನ್ನು ಕಳಿಸುವುದು? ವರದಿ
ಗಾರರೆಲ್ಲ ಡ್ಯೂಟಿ ಮುಗಿಸಿ ಮನೆಗೆ ಹೋಗಿದ್ದರು. ಟ್ರೈನಿ ರಿಪೋರ್ಟರ್ ಮಾತ್ರ ಇದ್ದ. ಅವನನ್ನು ಕರೆದ ಸಂಪಾದಕರು,
’ನೋಡು, ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ ಯಂತೆ. ತಕ್ಷಣ ಹೋಗು, ವಾಹನ ಸಿದ್ಧವಾಗಿದೆ’ ಎಂದರು.
ಟ್ರೈನಿ ರಿಪೋರ್ಟರ್ ಅವಸರದಲ್ಲಿ ಕಾರಿನಲ್ಲಿ ಕುಳಿತುಕೊಂಡ. ಡ್ರೈವರ್ ವೇಗವಾಗಿ ಓಡಿಸಿದ. ಅದು ಅವನ ಮೊದಲ ಔಟ್
ಸೈಡ್ ಅಸೈನ್‌ಮೆಂಟ. ಸರಿ, ಘಟನಾ ಸ್ಥಳ ತಲುಪಿದ. ಬೇರೆ ಯಾವ ಪತ್ರಿಕೆಯ ವರದಿಗಾರರೂ ಬಂದಿರಲಿಲ್ಲ. ಟ್ರೈನಿ
ರಿಪೋರ್ಟರ್‌ಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಸಂಪಾದಕರಿಗೆ ಮೆಸೇಜ್ ಮಾಡಿದ – ‘ನಾನು ಬೆಂಕಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಬಂದಿದ್ದೇನೆ. ಮುಂದೇನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ದಯವಿಟ್ಟು ತಿಳಿಸಿ, ನಿಮ್ಮ ಸೂಚನೆಯ ನಿರೀಕ್ಷೆಯಲ್ಲಿದ್ದೇನೆ.’
ಅದಾಗಿ ಕೆಲವೇ ಕ್ಷಣಗಳಲ್ಲಿ ಸಂಪಾದಕರು ಪ್ರತಿಕ್ರಿಯಿಸಿದರು – ‘ಬೆಂಕಿ ದುರ್ಘಟನೆ ಸಂಭವಿಸಿದ ಯಾವ ಪ್ರದೇಶದಲ್ಲಿ
ಬೆಂಕಿಯ ಜ್ವಾಲೆ ತೀವ್ರವಾಗಿದೆ ಎಂಬುದನ್ನು ಪರೀಕ್ಷಿಸು.. ಹಿಂದೆ ಮುಂದೆ ನೋಡದೇ ಅಲ್ಲಿ ಧುಮುಕು. ಯಾರಿಗೂ ಸಿಗದ ಸ್ಕೂಪ್ ಸುದ್ದಿಯನ್ನು ನಾನು ಇಲ್ಲಿ ಕುಳಿತೇ ಬರೆಯುತ್ತೇನೆ.’