Friday, 18th October 2024

ಪ್ರಧಾನಿ ಭೇಟಿಯಿಂದ ಬಿಜೆಪಿ ನಿರೀಕ್ಷೆ ಈಡೇರಿತೇ ?

ವರ್ತಮಾನ

maapala@gmail.com

ನಿಗದಿಯಂತೆ ಪ್ರಧಾನಿ ಮೋದಿ ಮಂಗಳೂರಿಗೆ ಬಂದು ಹೋಗಿದ್ದಾರೆ. ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ, ಪ್ರಧಾನಿಯವರ ಆಗಮನದಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯದ ಬಿಜೆಪಿ ಮತ್ತು ಪಕ್ಷದ ಸರಕಾರಕ್ಕೆ ಅದು ಸಿದ್ಧಿಸಿದೆಯೇ?

ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು ಭೇಟಿಯಿಂದ ರಾಜ್ಯ ಬಿಜೆಪಿಗೆ ಬೂಸ್ಟರ್ ಡೋಸ್ ಸಿಗುತ್ತದೆ. ಪಕ್ಷದ ಸರಕಾರಕ್ಕೂ ಸಾಕಷ್ಟು ಅನುಕೂಲಗಳಾಗುತ್ತವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಇದು ಪ್ರಮುಖ ಆಧಾರವಾಗ ಲಿದೆ. ಇನ್ನೇನು ರಾಜ್ಯದಲ್ಲಿ ಬಿಜೆಪಿ ಹವಾ ಸೃಷ್ಟಿಯಾಗಿಯೇ ಬಿಡುತ್ತದೆ ಎಂಬ ನಿರೀಕ್ಷೆಯನ್ನು ಪಕ್ಷ ಮತ್ತು ಸರಕಾರ ಹೊಂದಿತ್ತು.

ಹಾಗೆ ನೋಡಿದರೆ, ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರಲಿರು ವುದರಿಂದ ರಾಜ್ಯ ಬಿಜೆಪಿಗೆ ಇಂತಹ ಒಂದು ಬೂಸ್ಟಪ್‌ನ ಜರೂರತ್ತೂ ಇತ್ತು. ಅದನ್ನು ಸಾಽಸಲು ಬೇಕಾದ ಎಲ್ಲಾ ಅವಕಾಶಗಳೂ ಇದ್ದವು. ಆದರೆ, ಆಗಿದ್ದೇನು? ಇದ್ದ ಅವಕಾಶವನ್ನೂ ರಾಜ್ಯದ ಬಿಜೆಪಿ ಮತ್ತು ಸರಕಾರ ಕೈಚೆಲ್ಲಿತು. ಮೊದಲೇ ಸಿದ್ದರಾಮೋತ್ಸವ, ೪೦ ಪರ್ಸೆಂಟ್ ಕಮಿಷನ್ ಆರೋಪ, ಭಾವನಾತ್ಮಕ ವಿಚಾರದಲ್ಲೇ ಮುಳುಗಿ ಅಭಿವೃದ್ಧಿಯತ್ತ ನಿರೀಕ್ಷಿತ ಗಮನ ಹರಿಸದೇ ಇರುವುದು… ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿರುವ ಬಿಜೆಪಿ ಸರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು ಎಂದೇ ಹೇಳಬೇಕು.

ಏಕೆಂದರೆ, ಇಡೀ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ವಿಜೃಂಬಣೆಯಾಯಿತಷ್ಟೇ ಹೊರತು ಮುಖ್ಯಮಂತ್ರಿ, ಸಚಿವರು ಭಾಗವಹಿಸಿದ್ದರು ಎಂಬುದನ್ನು ಹೊರತುಪಡಿಸಿ ರಾಜ್ಯ ಸರಕಾರದ ಇರುವಿಕೆಯ ಸಣ್ಣ ಸುಳಿವು ಕೂಡ ಕಾಣಿಸಲಿಲ್ಲ. ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳು ಕೂಡ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸೀಮಿತವಾಯಿತೇ ಹೊರತು ರಾಜ್ಯ ಸರಕಾರದ ಇರುವಿಕೆ ಕಾಣಿಸಿಕೊಳ್ಳಲೇ ಇಲ್ಲ.

ಹೌದು, ಚುನಾವಣೆ ಸಮೀಪಿಸುತ್ತಿರುವಾಗ, ಅದಕ್ಕಾಗಿ ಆಡಳಿತ ಪಕ್ಷ ಸಿದ್ಧತೆ ಆರಂಭಿಸುತ್ತಿರುವಾಗ ಪ್ರಧಾನಿ ಸಮ್ಮುಖ
ದಲ್ಲಿ ರಾಜ್ಯ ಸರಕಾರದ ಯಾವುದಾದರೂ ಒಂದು ಯೋಜನೆ ಅಥವಾ ಕಾರ್ಯಕ್ರಮದ ಘೋಷಣೆಯಾಗಿದ್ದರೆ, ಅದನ್ನು
ಪ್ರಧಾನಿ ಮೂಲಕ ಮಾಡಿಸುತ್ತಿದ್ದರೆ ಅದಕ್ಕೆ ಸಿಗುತ್ತಿದ್ದ ಮೈಲೇಜ್ ಬೇರೆಯದ್ದೇ ಆಗಿರುತ್ತದೆ. ಅಷ್ಟೇ ತೀವ್ರವಾಗಿ ಜನರ ಮನಸ್ಸನ್ನು ತಲುಪುತ್ತದೆ. ಮೇಲಾಗಿ ಪ್ರಧಾನಿ ಆ ಯೋಜನೆ ಘೋಷಣೆ ಮಾಡಿ ಅದರ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದರೆ ಅದರ ಸಂಪೂರ್ಣ ಲಾಭ ರಾಜ್ಯದ ಬಿಜೆಪಿ ಸರಕಾರಕ್ಕೆ ಆಗುತ್ತಿತ್ತು.

ಈ ಒಂದು ಸಣ್ಣ ಯೋಚನೆಯನ್ನೂ ಮಾಡದ ರಾಜ್ಯ ಸರಕಾರ ಕುಸಿಯುತ್ತಿರುವ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಇದ್ದ ಒಂದೊಳ್ಳೆಯ ಅವಕಾಶವನ್ನು ತಾನಾಗಿಯೇ ಕೈಚೆಲ್ಲಿತು. ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ಪ್ರಧಾನಿ ನರೇಂದ್ರ
ಮೋದಿ ಅವರ ಈ ಭೇಟಿ ಖಂಡಿತವಾಗಿಯೂ ಅತ್ಯಂತ ಮಹತ್ವಪೂರ್ಣ. ಏಕೆಂದರೆ, 2014ರಲ್ಲಿ ನರೇಂದ್ರ ಮೋದಿ
ನೇತೃತ್ವದ ಸರಕಾರ ಕೇಂದ್ರದಲ್ಲಿ ಅಽಕಾರಕ್ಕೆ ಬಂದ ಮೇಲೆ ಆರಂಭವಾದ ಯೋಜನೆಗಳು ಬಹುತೇಕ ಕಾಲಮಿತಿಯಲ್ಲಿ
ಮುಕ್ತಾಯಗೊಳ್ಳುತ್ತಿದೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಇದರ ಪ್ರತಿಫಲನ ಆಗದೇ ಇದ್ದರೂ 2024ರ ಲೋಕಸಭೆ ಚುನಾವಣೆ ವೇಳೆ ಆಗಿರುವ ಕೆಲಸಗಳು ಕಣ್ಣಿಗೆ ಕಾಣುತ್ತವೆ. ಅವುಗಳನ್ನು ಜನರಿಗೆ ತೋರಿಸಿ ಮತ ಕೇಳಲು ಅಷ್ಟು ಸಾಕು. ಅದೇ ರೀತಿ ಕಾರ್ಯಕ್ರಮದಲ್ಲಿ ಅವರು ಕೇಂದ್ರ ಸರಕಾರದ ಯೋಜನೆಗಳು ಮತ್ತು ಅದರ ಅನುಕೂಲತೆಗಳ ಕುರಿತಾಗಿಯೇ ಹೆಚ್ಚು ಮಾತನಾಡಿದರು. ಅದರ ಜತೆಗೆ ರಾಜ್ಯ ಸಕರಾದರ ಒಂದೆರಡು ಹೊಸ ಕಾರ್ಯಕ್ರಮಗಳನ್ನು ಪ್ರಧಾನಿಯವರ ಮೂಲಕ ಪ್ರಕಟಿಸುತ್ತಿದ್ದರೆ ಅದೆಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿತ್ತು ಎಂಬುದನ್ನು ನಮ್ಮವರು ಯೋಚಿಸಬೇಕಿತ್ತು.

ಏಕೆಂದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಡಬಲ್ ಎಂಜಿನ್ ಸರಕಾರ. ಹೀಗಿರುವಾಗ ರಾಜ್ಯ ಸರಕಾರದಿಂದ ಅಧಿಕೃತ ಮನವಿ ಕೇಂದ್ರ ಸರಕಾರಕ್ಕೆ ಅಧಿಕೃತ ಮನವಿ ಹೋಗುತ್ತಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಕಡೆಗಣಿಸುತ್ತಿರಲಿಲ್ಲ. ಆದರೆ, ಆ ನಿಟ್ಟಿನಲ್ಲಿ ಪ್ರಯತ್ನವಾಗಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮಂಗಳೂರು
ಭೇಟಿಯ ಬಗ್ಗೆ ರಾಜ್ಯದ ಬಿಜೆಪಿ ಮತ್ತು ಸರಕಾರ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. 2023ರ ವಿಧಾನಸಭೆ ಚುನಾವಣೆ
ದೃಷ್ಟಿಯಿಂದ ಪಕ್ಷ ಸಿದ್ಧತೆ ಮಾಡಿಕೊಳ್ಳಲು ಆರಂಭಿಸುತ್ತಿರುವ ಜನೋತ್ಸವ, ರ‍್ಯಾಲಿ, ನಾಯಕರ ರಾಜ್ಯ ಪ್ರವಾಸಕ್ಕೆ ಇದರಿಂದ
ಹೊಸ ಹುಮ್ಮಸ್ಸು ಬರುತ್ತದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರಲ್ಲಿ ಸರಕಾರದ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶ ತಣಿಸಲು ಇದೊಂದು ಮಹತ್ವದ ಹೆಜ್ಜೆ ಎಂದು ಭಾವಿಸಲಾಗಿತ್ತು. ಆದರೆ, ಆ ನಿರೀಕ್ಷೆಗಳು ಅಂದುಕೊಂಡಷ್ಟು ಮಟ್ಟಿನಲ್ಲಿ ಈಡೇರಿದ ಅಥವಾ ಆಡೇರುವ ಸಣ್ಣ ಲಕ್ಷಣವೂ ಕಾಣಿಸುತ್ತಿಲ್ಲ. ಇದಕ್ಕೆ ಮೂಲಕ ಕಾರಣ ಪಕ್ಷ ಮತ್ತು ಸರಕಾರದ ಮಧ್ಯೆ ಸಮನ್ವಯದ ಕೊರತೆ. ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವುದು, ಅಭೂತಪೂರ್ವವಾಗಿ ಆಯೋಜಿಸುವುದರ ಕುರಿತು ಪಕ್ಷ ಮತ್ತು ಸರಕಾರ ಆಸಕ್ತಿ ವಹಿಸಿತೇ ಹೊರತು ಅದರಿಂದ ರಾಜ್ಯ ಸರಕಾರವಾಗಲೀ, ಪಕ್ಷವಾಗಲಿ ಲಾಭ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಯೋಚಿಸಲೇ ಇಲ್ಲ.

ಇದೇ ಪ್ರಧಾನಿಯವರು ಈ ಹಿಂದೆ ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಚುನಾವಣಾ ವರ್ಷ ಪ್ರಧಾನಿಯವರ ಕಾರ್ಯಕ್ರಮಗಳು ನಡೆದಾಗ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಒಟ್ಟೊಟ್ಟಿಗೆ ಉದ್ಘಾಟಿಸುವ ಅಥವಾ ಶಂಕುಸ್ಥಾಪನೆ ನೆರವೇರಿಸುವ ರೀತಿ ಆಯೋಜಿಸಲಾಗುತ್ತಿತ್ತು. ಆ ಮೂಲಕ ಪ್ರಧಾನಿ ಭೇಟಿಯ ಸಂಪೂರ್ಣ ಲಾಭವನ್ನು ಸ್ಥಳೀಯ ಸರಕಾರಗಳು ಪಡೆದುಕೊಂಡಿದ್ದವು.

ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಕೇಂದ್ರ ಸರಕಾರದ ಜನಪ್ರಿಯತೆ ಅಥವಾ ಕೇಂದ್ರದ ವಿರುದ್ಧದ ಜನಾ
ಭಿಪ್ರಾಯ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ. 2004ರಲ್ಲಿ ಕೇಂದ್ರದಲ್ಲಿ
ಯುಪಿಎ ಸರಕಾರ ಅಽಕಾರಕ್ಕೆ ಬಂದರೂ ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2013ರಲ್ಲಿ
ದೇಶಾದ್ಯಂತ ಕೇಂದ್ರದ ಯುಪಿಎ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿ ೨೦೧೪ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಚಿತ್ರಣ ಸ್ಪಷ್ಟವಾಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.

ಇದಕ್ಕೆ ಸ್ಥಳೀಯ ಸರಕಾರದ ಆಡಳಿತ ವೈಖರಿ ಕಾರಣವಾಗಿತ್ತೇ ಹೊರತು ಕೇಂದ್ರ ಸರಕಾರದ ಆಡಳಿತ ಪರಿಮಾಮ ಬೀರಲಿಲ್ಲ. ಪ್ರಸ್ತುತ ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಇದೆ. ಇಲ್ಲಿ ಬಿಜೆಪಿ ಸರಕಾರದ ಜನಪ್ರಿಯತೆ ಕಡಿಮೆಯಾಗುತ್ತಿದೆ. ಅದಕ್ಕೆ
ತಕ್ಕಂತೆ ರಾಜ್ಯದಲ್ಲಿ ಕಾಂಗ್ರೆಸ್ ಇನ್ನೂ ಶಕ್ತಿಯುತವಾಗಿದೆ. ವಸ್ತುಸ್ಥಿತಿ ಹೀಗಿರುವಾಗ ಆಡಳಿತಾರೂಢ ಪಕ್ಷ ತನ್ನ ಸಂಘಟನೆ
ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿಕ್ಕಿದ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕೇ ವಿನಃ
ಕೇಂದ್ರ ಸರಕಾರ ಅಥವಾ ಪ್ರಧಾನಿಯವರನ್ನು ನೆಚ್ಚಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಪ್ರಧಾನಿಯವರ
ಮೂಲಕ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಲೇ ಬೇಕು.

ಇಲ್ಲದಿದ್ದರೆ ಎಷ್ಟೇ ಹರಸಾಹಸ ಮಾಡಿದರೂ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿಲ್ಲ
ಎಂಬುದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು. ಹಾಗೆಂದು ಕಾಲವಿನ್ನೂ ಮಿಂಚಿ ಹೋಗಿಲ್ಲ. ಚುನಾವಣೆಗೆ ಸಾಕಷ್ಟು ಸಮಯವಿದೆ. ರಾಜ್ಯ ಬಿಜೆಪಿಯಲ್ಲಿ ತಂತ್ರಗಾರಿಕೆ ರೂಪಿಸಿ ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಾಯಕರಿಗೇನೂ ಕೊರತೆ ಇಲ್ಲ. ಆಡಳಿತ ನಡೆಸುವವರು ಈ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷದ ಜವಾಬ್ದಾರಿ ನಿನಗೆ, ಆಡಳಿತದ ಜವಾಬ್ದಾರಿ ನನಗೆ ಎಂದು ಕುಳಿತುಕೊಳ್ಳುವುದಲ್ಲ.

ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಿಕ್ಕಿದ ಅವಕಾಶದಲ್ಲಿ ಎಷ್ಟು ಸಾಧ್ಯವೋ ಅಷ್ಟಾ ಲಾಭ ಮಾಡಿಕೊಳ್ಳಲು ನೋಡಿಕೊಳ್ಳಬೇಕು. ಮುಂದಿನ ಪ್ರಧಾನಿ ಭೇಟಿಯ ವೇಳೆಯಾದರೂ ಎಚ್ಚೆತ್ತುಕೊಂಡು ಆಗಿರುವ ಲೋಪಗಳನ್ನು ಸರಿಪಡಿಸಿ ಕೊಳ್ಳಬೇಕು. ಅದಕ್ಕೆ ಪಕ್ಷ ಮತ್ತು ಸರಕಾರದ ಮಧ್ಯೆ ಸಮನ್ವಯತೆ ಬೇಕೇ ಬೇಕು. ಇಲ್ಲವಾದಲ್ಲಿ ಮುಂದೆಯೂ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದರು ಎಂಬಂತಾಗುತ್ತದೆಯೇ ಹೊರತು ಅದರಿಂದ ರಾಜ್ಯದ ಬಿಜೆಪಿ ಸರಕಾರಕ್ಕೆ ಯಾವುದೇ ಲಾಭವಾಗುವುದಿಲ್ಲ.

ಲಾಸ್ಟ್ ಸಿಪ್: ಇನ್ನೊಬ್ಬರ ಸಾಮರ್ಥ್ಯವನ್ನು ನಂಬಿ ನಾನು ಗೆಲ್ಲುತ್ತೇನೆ ಎಂದು ಭಾವಿಸುವುದು ಮೂರ್ಖತನದ ಪರಮಾವಧಿ.