Saturday, 23rd November 2024

ಮಾತೆಯರೇ, ಒಪ್ಪಿಸಿಕೊಳ್ಳಿ ಮಮತೆಯ ಮಾ-ಗುಣಿತ ಬಳ್ಳಿ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಮೌಖಿಕವಾಗಿ ‘ಮೊಮ್, ಯು ಆರ್ ದ ಬೆಸ್ಟ್ ಏಂಡ್ ಸ್ವೀಟೆಸ್ಟ್…’ ಎಂದು ಒಂಥರ ಕೃತಕವೆನಿಸುವ ಪ್ರೀತಿ-ಗೌರವ ತೋರುತ್ತಾ, ತೀರ ವಾಣಿಜ್ಯಮಯವಾಗಿ ವರ್ಷದಲ್ಲೊಂದು ಪ್ರತ್ಯೇಕ ದಿನವನ್ನು ‘ಮದರ್ಸ್ ಡೇ’ ಎಂದು ಆಚರಿಸುವ ಪಾಶ್ಚಾತ್ಯ ಪದ್ಧತಿಯನ್ನು ಕೆಲವರು ವಿರೋಧಿಸುತ್ತಾರೆ. ಈಗೀಗ ಅದು ಭಾರತದಲ್ಲೂ ವ್ಯಾಪಕವಾಗಿ ಹಬ್ಬುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ.

‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ನಿನ್ನ ಸಂಗ ಆಡಲೆಂದು ಬಂದೆ ನಾನು…’ ಕನ್ನಡದ ಹಳೆಯದೊಂದು ಚಿತ್ರಗೀತೆ. ಕಪ್ಪು-ಬಿಳುಪು ಚಿತ್ರಗಳ ಕಾಲದ್ದು. ಕಪ್ಪು-ಬಿಳುಪು ಚಿತ್ರದ್ದು ಕೂಡ! ಅಮ್ಮನ ಸಂಗಡ ಆಡುವುದೆಂದರೆ ಕಂದನಿಗೆ ಯಾವ ಕಾಲಕ್ಕೂ ಇಷ್ಟವೇ ಎನ್ನಿ. ಅಂತೆಯೇ ಕಂದನ ಸಂಗಡ ಆಡುವುದೆಂದರೆ ಅಮ್ಮನಿಗೆ ಮತ್ತೂ ಇಷ್ಟ. ಅಮ್ಮ-ಮಗುವಿನ ಅನುಬಂಧ, ಎಷ್ಟೆಂದರೂ ಕರುಳಿನ ಸಂಬಂಧ ಅಂದರೆ ಹಾಗೆಯೇ ಅಲ್ಲವೇ? ಆದರೆ ಇಲ್ಲೊಂಚೂರು ಟ್ವಿಸ್ಟ್ ಕೊಟ್ಟು ಒಂದು ವಿಭಿನ್ನ ಪ್ರಯೋಗ ಮಾಡು ವವನಿದ್ದೇನೆ.

ಇಲ್ಲಿ ಮಗು ಅಮ್ಮನ ಸಂಗಡ ಆಡಲೆಂದು ಬಂದಿಲ್ಲ, ಅಮ್ಮನನ್ನು ಪ್ರತಿನಿಧಿಸುವ ಅಕ್ಷರದೊಡನೆ ಆಡಬಯಸಿದೆ. ಯಾವುದದು ಅಮ್ಮನನ್ನು ಪ್ರತಿನಿಧಿಸುವ ಅಕ್ಷರ? ಮತ್ತ್ಯಾವುದು, ಆ ಶ್ರೇಯಸ್ಸು ನಿಸ್ಸಂಶಯವಾಗಿ ಸಲ್ಲುವುದು ‘ಮ’ ಅಕ್ಷರಕ್ಕೇ! ಉಚ್ಚರಿಸ ಲಿಕ್ಕೆ ಅತ್ಯಂತ ಸುಲಭವಾದ, ಮಗುವಿನ ಬಾಯಿಯಿಂದ ಅತಿ ಸಹಜವಾಗಿ ಬರಬಹು ದಾದ ಅಕ್ಷರ ಅದೇ ತಾನೆ? ಒಮ್ಮೆ ಬಾಯ್ದೆರೆದು ಮುಚ್ಚಿದರೆ ಸಾಕು, ಅದೇ ಮ! ನೀವೇ ಯೋಚಿಸಿನೋಡಿ: ಮ ಅಕ್ಷರವಿಲ್ಲದಿದ್ದರೆ ಪ್ರಪಂಚದ ಬಹುಪಾಲು ಭಾಷೆಗಳಲ್ಲಿ ಅಮ್ಮ
ನನ್ನು ಕರೆಯುವುದೂ ಸಾಧ್ಯವಿಲ್ಲ.

ಇಲ್ಲಿ ಸಂಸ್ಕೃತದ ‘ಮಾತೃ’ ಮತ್ತು ಇಂಗ್ಲಿಷ್‌ನ ‘ಮದರ್’ ಮಾತ್ರ ನೆನಪಿಸಿಕೊಂಡರೆ ಸಾಲದು. ಅವು ಮಾತ್ರ ಮ-ಕಾರದವು ಮತ್ತು ಒಂದಕ್ಕೊಂದು ಹೋಲುವ ಪದಗಳು ಅಂದ್ಕೊಂಡರೆ ಸಾಲದು. ಫ್ರೆಂಚ್, ಜರ್ಮನ್, ಉರ್ದು, ಇಟಾಲಿಯನ್, ಪೋರ್ಚುಗೀಸ್,
ಡಚ್, ಗ್ರೀಕ್, ಹವಾಯಿಯನ್ ಹೀಗೆ ಪ್ರಪಂಚದ ಅನೇಕ ಭಾಷೆಗಳಲ್ಲಿ ಅಮ್ಮ ಎಂಬರ್ಥದ ಪದದಲ್ಲಿ ಮ ಅಕ್ಷರ ಇದ್ದೇಇದೆ.
ಕೆಲವದರಲ್ಲಿ ಮೊದಲಿನಕ್ಷರ ಇರಬಹುದು, ಮತ್ತೆ ಕೆಲವದರಲ್ಲಿ ಕೊನೆಯದಿರಬಹುದು ಅಷ್ಟೇ ವ್ಯತ್ಯಾಸ. ಆದ್ದರಿಂದ ಅಮ್ಮನ
ಅಕ್ಷರ ಅಂದರೆ ‘ಮ’. ಆದ್ದರಿಂದಲೇ ಇಂದು ಅಮ್ಮಂದಿರ ದಿನದ ವಿಶೇಷವಾಗಿ ಮ ಅಕ್ಷರದ ಮಧುರವಾದ ಮರ್ಮರ.

ಮದರ್ಸ್ ಡೇ ಸ್ಪೆಷಲ್ ಎಂದು ಮ ಅಕ್ಷರದ ಒಂದಿಷ್ಟು ಮ್ಯೂಸಿಂಗ್ಸು. ಮ-ಕಾರದಿಂದಲೇ, ಅಂದರೆ ಮಾ-ಗುಣಿತದಿಂದಲೇ, ‘ಮಮತೆಯ ಮಾತುಗಳನ್ನು ಮಿತಿ ಮೀರದಂತೆ ಮುದಗೊಂಡು ಮೂಕವಿಸ್ಮಿತವಾಗುವಂತೆ ಮೃದುವಾಗಿ ಮೆರೆಯಿಸಿ ಮೇಲೊಂದು ಮೈಮನದಿ ಮೊರೆಯುವ ಮೋಹಕ ಮೌನಗೀತವನ್ನೂ ಮಂಡಿಸಿ ಮಃದಾನಂದಗೊಳಿಸುವ’ ಪ್ರಯತ್ನ.
ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು… ಜನನಿಯಿಂದ ಪಾಠ ಕಲಿತ ಜನರು ಧನ್ಯರು… ನಿಜ, ಈ ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ನಡೆ-ನುಡಿಯ ಪ್ರಥಮ ಶಿಕ್ಷಣವನ್ನು ತಾಯಿ ಕೊಟ್ಟಷ್ಟು ಸಮರ್ಥವಾಗಿ ಕೊಡಲಾರರು ಅನ್ಯರು!

ಅಂದಹಾಗೆ, ಆ ಪದ್ಯ ಆರಂಭವಾಗುವುದು ‘ತಾಯಿ ದೇವರೆಂದು ವೇದ| ಬಾಯಿ ಬಿಟ್ಟು ಹೇಳುತಿಹುದು| ತಾಯಿ ದೇವರೆಂದು
ಹಿರಿಯರೆಲ್ಲರರಿವರು| ತಾಯಿ ದೇವರೆಂದು ತಿಳಿದರೆಲ್ಲರೊರೆವರು||’ ಎಂದು. ಆಮೇಲಿನ ಚರಣಗಳಲ್ಲೂ ಅಮ್ಮನ ಗುಣಗಾನ: ‘ಹೊಟ್ಟೆಯಲ್ಲಿ ಹೊತ್ತು ತಾಯಿ| ಬೆಟ್ಟದಷ್ಟು ಕಷ್ಟವನ್ನು| ಗಟ್ಟಿ ಮನದಿ ತಾಳ್ವಳಲ್ತೆ ಕಂದಗೋಸುಗ| ಬಿಟ್ಟು ಸುಖವ ತಾಳ್ವಳವಳು ಬಂದ ದುಃಖವ||’ ಮತ್ತು ‘ಕಂದ ಬಳಲಿ ಬಂದನೆಂದು| ನೊಂದುಕೊಂಡು ಬೇಗ ಮಮತೆ| ಯಿಂದ ನುಡಿದು ನುಡಿಸುತಮೃತ ಬಿಂದುವೆರೆವಳು| ಬೆಂದ ಮನದ ಬೇಗೆಯಳಿಸುತಂದಗೊಳಿಪಳು||’ ಇದನ್ನು ಬರೆದವರು: ಎಲ್.
ಗುಂಡಪ್ಪ.

ಈಗಿನ ಪಠ್ಯಪುಸ್ತಕಗಳಲ್ಲಿ ಇಂತಹ ಶ್ರೇಷ್ಠ ಪದ್ಯಗಳನ್ನು ಅದೇಕೆ ಅಳವಡಿಸಿಕೊಳ್ಳುವುದಿಲ್ಲವೋ. ಮಾತನಾಡಲಾರಂಭಿಸುವ ಮಗುವಿನ ಮೊದಲ ಮಾತು ‘ಅಮ್ಮಾ’! ಆ ಪದದಲ್ಲಿ ತುಳುಕುವ ಆರ್ದ್ರ ಭಾವವನ್ನು ಕಿಂಚಿತ್ತೂ ಲೋಪವಿಲ್ಲದೆ ಹೃದಯತುಂಬಿ
ಉಚ್ಚರಿಸುತ್ತಿದ್ದವರೆಂದರೆ ಮಗು ವಿನ ಹೃದಯದವರಾಗಿಯೇ ಕೊನೆವರೆಗೂ ಬದುಕಿದ್ದ ಡಾ. ರಾಜಕುಮಾರ್. ಕನ್ನಡ ಚಿತ್ರಸಂಭಾಷಣೆಯಲ್ಲಿ ‘ಅಮ್ಮಾ’ ಎಂದು ಹೇಳುವಾಗಿನ ಅವರ ರೀತಿ ಅನನ್ಯವಾದುದಾಗಿತ್ತು ಎಂದು ಅಭಿಮಾನಿಗಳು
ಎಂದೆಂದಿಗೂ ಸ್ಮರಿಸುತ್ತಾರೆ.

‘ಅಮ್ಮಾ ನೀನು ನಮಗಾಗಿ ಸಾವಿರ ವರುಷ ಸುಖವಾಗಿ… ಬಾಳಲೇಬೇಕು ಈ ಮನೆಬೆಳಕಾಗಿ…’ ಎಂದು ಅಣ್ಣಾವ್ರು ಡಾ. ಪಿ. ಬಿ. ಶ್ರೀನಿವಾಸ್ ಜತೆಗೂಡಿ ಹಾಡಿದ್ದು ಕೆರಳಿದ ಸಿಂಹ ಚಿತ್ರದ ಗೀತೆಯಲ್ಲಿ. ಮಿನುಗೆಲೆ ಮಿನುಗೆಲೆ ನಕ್ಷತ್ರ… ನನಗಿದು ಚೋದ್ಯವು ಬಹು
ಚಿತ್ರ! ಘನ ಗಗನದಿ ಬಲು ದೂರದಲಿ ಮಿನುಗುವೆ ವಜ್ರಾಕಾರದಲಿ… ಎಂದು ಕಲಿಸುವ ಅಮ್ಮ ಆಪ್ತಳೆನಿಸಬೇಕಾಗಿದ್ದಲ್ಲಿ ಈಗ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್, ಹೌ ಐ ವಂಡರ್ ವ್ಹಾಟ್ ಯೂ ಆರ್… ಅಪ್ ಎಬವ್ ದ ವರ್ಲ್ಡ್ ಸೋ ಹೈ, ಲೈಕ್ ಎ ಡೈಮಂಡ್ ಇನ್ ದ ಸ್ಕೈ… ಕಲಿಸುವ ಮಮ್ಮಿ ಇಷ್ಟವಾಗುತ್ತಿರುವುದು ದೊಡ್ಡ ವಿಪರ್ಯಾಸ.

ಕನ್ನಡದ ಕಂದ ಈಗ ಕನ್ನಡಕೆ ಹೋರಾಡಬೇಕಾಗಿದೆ; ಕನ್ನಡವ ಕಾಪಾಡಬೇಕಾಗಿದೆ. ಅದೇ ಜೋಗುಳದ ಹರಕೆಯಾಗಿ,
ಕನ್ನಡಮ್ಮನನ್ನು ಮರೆಯಬಾರದೆಂಬ ವಿನಮ್ರ ಕೋರಿಕೆಯೂ ಆಗಿದೆ. ಅಮ್ಮನ ಮೇಲಿರುವಷ್ಟೇ ಪ್ರೀತಿ ನಮಗೆಲ್ಲ ಕನ್ನಡಮ್ಮನ
ಮೇಲೂ ಬೇಕಲ್ಲವೇ? ಆ ಪ್ರೀತಿಯನ್ನು ಬರೀ ನವೆಂಬರ್ ತಿಂಗಳಿನಲ್ಲಿ ಮಾತ್ರ ತೋರುವುದೆಂದು ಆಗಬಾರದಲ್ಲವೇ? ಅಂದಹಾಗೆ ಜೇನ್ ಟೇಲರ್ ಬರೆದ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ನರ್ಸರಿ ರೈಮ್‌ಅನ್ನು ಚಂದವಾಗಿ ಕನ್ನಡಕ್ಕೆ ಅನುವಾದಿಸಿದವರು ಪಂಜೆ ಮಂಗೇಶರಾಯರು, ಮತ್ತು ಕನ್ನಡಕೆ ಹೋರಾಡು ಎಂದು ಕನ್ನಡದ ಕಂದನಿಗೆ ಕರೆಯಿತ್ತವರು ಕುವೆಂಪು.

ಮೀಯಿಸು ಮೊಲೆಯೂಡಿಸು ಮೈದಡವಿ ಮಲಗಿಸು… ಮಗುವೇ ನಿನ್ನ ಸರ್ವಸ್ವವೆಂಬ ಮಧುರಭಾವ ಮೆರೆಯಿಸು… ಹೀಗೆಂದು ಬಹುಶಃ ದೇವರು ಪ್ರತಿಯೊಬ್ಬ ತಾಯಿಗೂ ಆಣತಿಯಿತ್ತಿರುತ್ತಾನೆ. ಮಗುವಿನ ಪಾಲಿಗೂ ಮೊದಮೊದಲು ತಾಯಿಯೇ ಸರ್ವಸ್ವ ಆಗಿರುತ್ತಾಳೆ. ದೇವರು ಅಮ್ಮಂದಿರನ್ನು ನಿರ್ಮಿಸಿದ್ದೇ- ತಾನು ಎಲ್ಲ ಕಡೆಯೂ ಎಲ್ಲ ವೇಳೆಯಲ್ಲೂ ಇರಲಿಕ್ಕಾಗುವುದಿಲ್ಲ, ತನ್ನದೇ ಸೃಷ್ಟಿಯ ಹಸುಗೂಸುಗಳನ್ನು ನಿರ್ವ್ಯಾಜ ಪ್ರೇಮದಿಂದ ನೋಡಿಕೊಳ್ಳುವವರು ಬೇಕು ಎಂಬ ಉದ್ದೇಶದಿಂದ ಅಂತ ಅರ್ಥ ಬರುವ ಇಂಗ್ಲಿಷ್ ಮಾತೊಂದಿದೆ.

ಅಮೆರಿಕದ ಪ್ರಸಿದ್ಧ ಅಂಕಣಕಾರ್ತಿ ಎರ್ಮಾ ಬಾಂಬೆಕ್ ಎಂಬಾಕೆ ಆ ನುಡಿಗಟ್ಟಿಗೆ ನವುರಾದ ಹಾಸ್ಯ ಲೇಪಿಸಿ ಅಮ್ಮಂದಿರ  ಶ್ರೇಷ್ಠತೆಯನ್ನು ಸಾರುತ್ತ ಬರೆದ ಅಂಕಣಬರಹ ತುಂಬ ಪ್ರಖ್ಯಾತ. ಮುದ್ದು ಮಾಡಿ ಬೆಳೆಸಿದ ತಾಯಿಗೆ ಹೆಗ್ಗಣವೂ(ಅಂದರೆ
ಹೆಗ್ಗಣದಂತಿರುವ ಮಗುವೂ) ಮುದ್ದಾಗಿ ಕಾಣಿಸುತ್ತದಂತೆ. ‘ಹೆತ್ತ ತಾಯಿಗೆ ಹೆಗ್ಗಣ ಮುದ್ದು’ ಎಂಬ ಆ ಗಾದೆ, ತಾಯಿಯಾದವಳ ಒಂದು ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆಯೇ ಅಥವಾ ಮಗುವಿನ ಬಗೆಗೆ ಆಕೆಯಲ್ಲಿರುವ ನಿಶ್ಶರ್ತ ಪ್ರೀತಿ ವಾತ್ಸಲ್ಯಗಳನ್ನು ಎತ್ತಿ ತೋರಿಸುತ್ತದೆಯೇ? ಇದಕ್ಕೆ ಉತ್ತರ ನಮಗೆ ಸಿಗುವುದು ಅಪರಾಧ ಕ್ಷಮಾಪಣಾ ಸ್ತೋತ್ರದಲ್ಲಿ ಶಂಕರಾಚಾರ್ಯರು ಹೇಳಿದ ‘ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ (ಲೋಕದಲ್ಲಿ ಯಾವನೋ ಕೆಟ್ಟ ಮಗ ಹುಟ್ಟಿಯಾನು, ಆದರೆ ಕೆಟ್ಟ ತಾಯಿ ಅಂತ ಯಾರೂ ಅನಿಸಿಕೊಳ್ಳುವುದಿಲ್ಲ) ಮಾತಿನಲ್ಲಿ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿನಲ್ಲಿ ಹೆಗ್ಗಣ ಎನ್ನುವುದರ ಮೂಲಕ ಮಗನನ್ನು ನಿಂದಿಸಲಾಗಿದೆ, ಆದರ್ಶ ನಡತೆಯವನಲ್ಲ ಸ್ವಲ್ಪ ಕೆಟ್ಟವನು ಎಂದು ಪ್ರತಿಬಿಂಬಿಸಲಾಗಿದೆ.

ಆದ್ದರಿಂದ ಹೆಗ್ಗಣದ  (ಅಂದರೆ ಮಗುವಿನ) ದೃಷ್ಟಿಯಿಂದಷ್ಟೇ ಈ ಗಾದೆಯ ಬಳಕೆ ತಾಯಿಯನ್ನು ಕಡೆಗಣಿಸುವುದಕ್ಕಲ್ಲ. ಅದೇ ಸ್ತೋತ್ರದಲ್ಲಿ ಶಂಕರಾಚಾರ್ಯರು ‘ಅಪರಾಧ ಪರಂಪರಾವೃತಂ ನ ಹಿ ಮಾತಾ ಸಮುಪೇಕ್ಷತೇ ಸುತಮ್’ (ಸಾವಿರ ತಪ್ಪು ಮಾಡಿದ್ದರೂ ಕೂಡ ತಾಯಿಯಾದವಳು ಯಾವತ್ತಿಗೂ ಮಗನನ್ನು ಕಡೆಗಣಿಸುವುದಿಲ್ಲ) ಎಂದು ಹೇಳಿ ತಾಯಿಯ ಘನತೆಯನ್ನು
ಎತ್ತಿಹಿಡಿದಿದ್ದಾರೆ.

ಮೂಕವೇದನೆ ಅನುಭವಿಸುವವಳು ತಾಯಿ – ಅದು ತನ್ನ ಮಗುವಿನ ಶಾಲೆಯ ಮೊದಲ ದಿನವಿರಲಿ, ಮಗು ಶಾಲೆಯಿಂದ
ಹಿಂದಿರುಗುವುದು ಐದೇ ನಿಮಿಷ ತಡವಾದಾಗಿರಲಿ, ಮಕ್ಕಳು ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭವಿರಲಿ, ಬದುಕಿನ  ನಿರ್ಧಾರ ಗಳನ್ನು ಬೆಳೆದ ಮಕ್ಕಳೇ ತೆಗೆದುಕೊಳ್ಳಲಾರಂಭಿಸುವ ನಿರ್ಣಾಯಕ ಘಟ್ಟವೇ ಇರಲಿ. ತಾಯಿಯಾದವಳು ಮಕ್ಕಳಿಗೋಸ್ಕರ ಎಷ್ಟು ಸಂಕಟಪಡುತ್ತಾಳೆ ಮತ್ತು ಆ ಸಂಕಟವನ್ನೇ ಸಂತಸದಂತೆ ಹೇಗೆ ಬಿಂಬಿಸುತ್ತಾಳೆ ಎಂದು ರಾಮಾಯಣ ದಲ್ಲಿ ಸುಮಿತ್ರೆಯ ಭಾವನೆಗಳ ಮೂಲಕ ವಾಲ್ಮೀಕಿ ಮಹರ್ಷಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಏನೂ ತಪ್ಪು ಮಾಡದ ಮಗ ಹದಿನಾಲ್ಕು ವರ್ಷ ಕಾಲ ಕಾಡಿನಲ್ಲಿರಬೇಕಾಗುತ್ತದೆ ಎಂಬ ಚಿಂತೆ ಸುಮಿತ್ರೆಗೆ ಇರಲಿಲ್ಲವೆಂದೇ? ಖಂಡಿತ ಇತ್ತು, ಮಣಭಾರದಷ್ಟು. ಆದರೆ ಅದನ್ನವಳು ಲಕ್ಷ್ಮಣನೆದುರು ತೋಡಿಕೊಳ್ಳಲಿಲ್ಲ, ತೋರಿಕೊಳ್ಳಲೂ ಇಲ್ಲ. ‘ಕಂದಾ, ನೀನು ರಾಮನಲ್ಲೇ ತಂದೆ ದಶರಥನನ್ನು ಕಾಣು. ಸೀತೆಯಲ್ಲೇ ನನ್ನನ್ನು(ತಾಯಿಯನ್ನು) ಕಾಣು. ಅಡವಿಯನ್ನು ಅಯೋಧ್ಯೆ ಯೆಂದೇ ತಿಳಿದುಕೋ. ಹೋಗಿ ಬಾರಪ್ಪಾ ಸುಖವಾಗಿ’ ಎಂದು ಬೀಳ್ಕೊಟ್ಟಳು. ಒಳಗೊಳಗೇ ಬಿಕ್ಕಿಬಿಕ್ಕಿ ಎಷ್ಟು ಕೊರಗುತ್ತಿದ್ದಳೋ!
ಮೃದುತ್ವಕ್ಕೆ – ಅದು ಸ್ಪರ್ಶಾನುಭವದ್ದಾಗಲಿ ಅಥವಾ ಸ್ಪರ್ಶಾ ತೀತವಾಗಿರಲಿ – ವ್ಯಾಖ್ಯೆ ಬರೆಯುವುದಾದರೆ, ತನ್ನ ಮಗುವಿನ ಪಾಲನೆ ಪೋಷಣೆಯ ವಿಷಯದಲ್ಲಿ ತಾಯಿ ತೋರುವ ಭಾವಕ್ಕಿಂತ ಮಿಗಿಲಾದ ಉಪಮೆ ಉದಾಹರಣೆ ಬೇರೆ ಸಿಗಲಾರದು.

ಮೇಲೆ ಹೇಳಿದಂತೆ ದೇವರು ಅಮ್ಮಂದಿರನ್ನು ನಿರ್ಮಿಸುವಾಗ ಯಾವ್ಯಾವ ಗುಣಲಕ್ಷಣಗಳು ಎಷ್ಟು ಕಾಠಿಣ್ಯವಾಗಿ ಅಥವಾ ಎಷ್ಟು
ಮೃದುವಾಗಿ ಇರಬೇಕು ಎಂದು ಅತ್ಯಂತ ಕರಾರುವಾಕ್ಕಾದ ಮಾಪಕಗಳನ್ನು ಮತ್ತು ಉಪಕರಣಗಳನ್ನು ಬಳಸುತ್ತಾನಂತೆ. ಆದ್ದರಿಂದಲೇ ಅಮ್ಮನ ಮನಸಿನ ಮೃದುತ್ವದಲ್ಲಿ, ಅದರ ಗುಣಮಟ್ಟದಲ್ಲಿ ಯಾವುದೇ ಕಾಂಪ್ರೊಮೈಸ್ ಆಗಲಿ ಕಂಡೀಷನ್ಸ್ ಆಗಲಿ ಇರುವುದಿಲ್ಲ.

ಮೆಲ್ಲ ಮೆಲ್ಲನೆ ಬಂದನೆ… ಗೋಪಮ್ಮ ಕೇಳೆ ಮೆಲ್ಲಮೆಲ್ಲನೆ ಬಂದನೆ… ನಂದಗೋಕುಲದಲ್ಲಿ ಶ್ರೀಕೃಷ್ಣನ ಬಾಲಲೀಲೆಗಳಂತೆಯೇ ಪುಟ್ಟ ಕಂದನ ಕಿಲಕಿಲ ನಗು, ಹರ್ಷದ ಕೇಕೆ, ಹಠ ಹಿಡಿದು ರಂಪಾಟ, ಅದಕ್ಕೆ ಅಮ್ಮನ ಅರೆಮುನಿಸು, ಗುಮ್ಮನನ್ನು ಕರೆಯು ತ್ತೇನೆಂಬ ಬೆದರಿಕೆ, ಕರೆಯಬೇಡ ಸುಮ್ಮನಿರುತ್ತೇನೆ ಎಂದು ಮಗುವಿನ ಗೋಗರೆತ… ನಮ್ಮೆಲ್ಲರ ಮನೆ-ಮನಗಳೂ ನಂದ ಗೋಕುಲವಾಗುವುದು ತಾಯಿ-ಮಗುವಿನ ಈ ರೀತಿಯ ವಾತ್ಸಲ್ಯ ವಿನಿಮಯದಿಂದಲೇ, ಹಿತಕರ ಕಣ್ಣುಮುಚ್ಚಾಲೆ ಗಳಿಂದಲೇ.

ಮೇರೆ ಪಾಸ್ ಮಾ ಹೈ! – ಭಾರತೀಯ ಚಲನಚಿತ್ರರಂಗದಲ್ಲಿ ತಾಯಿದೇವರನ್ನು ಕುರಿತು ಹಾಡಿರುವ ಹಾಡುಗಳಿಗೆ, ಮೂಡಿರುವ ದೃಶ್ಯಗಳಿಗೆ, ಸಂಭಾಷಣೆಯಲ್ಲಿ ಉದುರಿರುವ ಆಣಿಮುತ್ತುಗಳಿಗೆ ಲೆಕ್ಕವೇ ಇಲ್ಲ. ಆದರೆ ಹಸಿ‘ದೀವಾರ್’ನಲ್ಲಿ ಹರಳು ನೆಟ್ಟಂತೆ ಆ ಚಿತ್ರವನ್ನು ನೋಡಿರುವ ಪ್ರತಿಯೊಬ್ಬ ಪ್ರೇಕ್ಷಕನ ಎದೆಯಾಳವನ್ನು ಹೊಕ್ಕು ಅಲ್ಲೇ ಅಂಟಿಕೊಂಡಿರುವ ಸಾರ್ವಕಾಲಿಕ ಶ್ರೇಷ್ಠ ಡಯಲಾಗ್ ಎಂದರೆ ದೀವಾರ್ ಚಿತ್ರದ್ದು.

‘ಆಜ್ ಮೇರೇ ಪಾಸ್ ಬಿಲ್ಡಿಂಗೇಂ ಹೈಂ, ಪ್ರಾಪರ್ಟೀ ಹೈ, ಬ್ಯಾಂಕ್ ಬ್ಯಾಲೆನ್ಸ್ ಹೈ, ಬಂಗ್ಲಾ ಹೈ, ಗಾಡೀ ಹೈ… ಕ್ಯಾ ಹೈ ತುಮ್ಹಾರೇ ಪಾಸ್?’ ಎನ್ನುವ ವಿಜಯ್ (ಅಮಿತಾಭ್ ಬಚ್ಚನ್)ನ ದರ್ಪಕ್ಕೆ ಉತ್ತರವಾಗಿ ‘ಮೇರೆ ಪಾಸ್ ಮಾ ಹೈ’ ಎಂದು ಮೆಲುದನಿಯಲ್ಲಿ ತಣ್ಣಗೆ ಉತ್ತರಿಸುವ ರವಿ(ಶಶಿಕಪೂರ್). ಮಾತೆಯ ಮಹತ್ವವನ್ನು ಮನಮನದಲ್ಲಿ ಮಾರ್ದನಿಸುವ ಮೇರು ಮಾತಿದು! ಶ್ರೀಕೃಷ್ಣ ತುಲಾಭಾರದಲ್ಲಿ ತುಳಸೀದಳ ಇದ್ದಂತೆ ‘ಮಾ’! ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು… ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು… ಪಾಪ ಅತ್ತರಮ್ಮ ತಾನು ಅತ್ತು ಬಿಡುವಳು… ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು! ಇವು ಜಿ.ಪಿ.ರಾಜರತ್ನಂ ಬರೆದ ಪದ್ಯದ ಸಾಲುಗಳು.

ಮಗುವಿಗೆ ಒಂಚೂರು ನೋವಾದರೂ ತೀವ್ರವಾಗಿ ಯಾತನೆ ಪಡುವ ಗುಣಸ್ವಭಾವ ತಾಯಿಯದು. ಮನುಷ್ಯರಲ್ಲಷ್ಟೇ ಅಲ್ಲದೆ ಇತರ ಜೀವಿಗಳಲ್ಲೂ ತಾಯಿಯ ಈ ‘ಪೊಸೆಸಿವ್‌ನೆಸ್’ ಧಾರಾಳವಾಗಿ ಕಂಡುಬರುತ್ತದೆ. ಮೊಸರನ್ನ, ಹುಳಿಯನ್ನಗಳ ಕೈತುತ್ತು ಕೊಟ್ಟದ್ದು, ತುತ್ತಿನ ಆ ರುಚಿಯಲ್ಲಿ ‘ಅಮ್ಮ ಮಾಡಿ ಕೊಟ್ಟದ್ದು’ ಎಂಬ ಅಮೃತಭಾವದ ಧಾರೆಯೆರೆದದ್ದು – ಇವನ್ನೆಲ್ಲ ನೆನೆಸಿ ಈಗ ಸದ್ಯಕ್ಕೆ ಅಮ್ಮನಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿರುವ ಮಕ್ಕಳಿಗೆ (‘ಮಾಡಿದ್ದುಣ್ಣೊ ಮಹಾರಾಯ…’ ಎಂದು ಸ್ವಯಂಪಾಕ ಜೀವನ ಸಾಗಿಸುವ ಬ್ರಹ್ಮಚಾರಿಗಳಿಗೂ) ಕಣ್ಣುಗಳು ತೇವವಾಗುವ ಸಂದರ್ಭಕ್ಕೆ ಮದರ್ಸ್ ಡೇಯೇ ಆಗಬೇಕೆಂದೇನೂ ಇಲ್ಲ.

ಅಮ್ಮನ ನೆನಪು ಖುಶಿಯಲ್ಲೂ ಕಷ್ಟದಲ್ಲೂ ಹೇಳದೆ ಕೇಳದೆ ಧುತ್ತೆಂದು ಬರುತ್ತದೆ. ಮೋಹದ ಮಗಳೇ ಲಾಲಿಸಿ ಕೇಳೇ ಪ್ರೀತಿಯ ತರಳೆ ಕಂದಮ್ಮ ಕೇಳೇ… ಹೋಗುವೆ ನೀನು ಅಗಲುವೆ ನಾನು ಹೇಳುವುದೇನು ಕಂದಮ್ಮ ಕೇಳೇ… ಮದುವೆಯ ದಿನ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗಿನ ಸಂಪ್ರದಾಯದ ಹಾಡು ಇದು. ತಾಯಿಹೃದಯದ ಅವಸ್ಥೆ ಬಹುಶಃ ಅಕ್ಷರಗಳಲ್ಲಿ ಹಿಡಿದಿ
ಡಲಾರದ್ದು. ಆ ಸನ್ನಿವೇಶದಲ್ಲಿ ಅಗಲುವಿಕೆಯ ನೋವಿನಲ್ಲೂ ನಲಿವಿನ ಆಶಾಕಿರಣವೊಂದು ಅದಾಗಲೇ ಮೂಡಿರುತ್ತದೆ ಯೆಂಬುದೂ ಅಷ್ಟೇ ಸತ್ಯ. ಇಂದಿನ ಮದುಮಗಳೇ ಮುಂದೊಂದು ದಿನ ಮುದ್ದಾದ ಮಗುವಿಗೆ ಅಮ್ಮನಾಗುತ್ತಾಳೆ.

ಆಕೆಗೂ ಮಾತೃತ್ವದ ಸಿದ್ಧಿಯಾಗುತ್ತದೆ, ವಂಶ ವೃದ್ಧಿಯಾಗುತ್ತದೆ. ಮೌಖಿಕವಾಗಿ ‘ಮೊಮ್, ಯು ಆರ್ ದ ಬೆಸ್ಟ್ ಏಂಡ್ ಸ್ವೀಟೆಸ್ಟ್…’ ಎಂದು ಒಂಥರ ಕೃತಕವೆನಿಸುವ ಪ್ರೀತಿ-ಗೌರವ ತೋರುತ್ತಾ, ತೀರ ವಾಣಿಜ್ಯಮಯವಾಗಿ ವರ್ಷದಲ್ಲೊಂದು ಪ್ರತ್ಯೇಕ ದಿನವನ್ನು ‘ಮದರ್ಸ್ ಡೇ’ ಎಂದು ಆಚರಿಸುವ ಪಾಶ್ಚಾತ್ಯ ಪದ್ಧತಿಯನ್ನು ಕೆಲವರು ವಿರೋಧಿಸುತ್ತಾರೆ. ಈಗೀಗ ಅದು ಭಾರತ ದಲ್ಲೂ ವ್ಯಾಪಕವಾಗಿ ಹಬ್ಬುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಆ ಒಂದು ದಿನದಂದು ಮಾತ್ರ ಅಮ್ಮನ ನೆನಪಾಗುವುದೇ? ಆವತ್ತು ಮಾತ್ರ ಅಮ್ಮನೆಂದರೆ ದೇವರೇ? ‘ಮಾತೃ ದೇವೋ ಭವ’ ಎಂದ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಿತ್ಯವೂ ಮದರ್ಸ್ ಡೇ.

ಹೊತ್ತುಹೆತ್ತು ಸಾಕಿಸಲಹಿದ ಅಮ್ಮನಷ್ಟೇ ಅಲ್ಲ, ಭೂಮಿಯನ್ನೂ ಪ್ರಕೃತಿಯನ್ನೂ ನದಿಯನ್ನೂ ಕೊನೆಗೆ ಗೋವನ್ನೂ ತಾಯಿಯೆಂದು ಗೌರವಿಸುವ ಉದಾತ್ತ ಚಿಂತನೆ ನಮ್ಮದು ಎಂದು ಅವರ ವಾದ. ಒಪ್ಪತಕ್ಕದ್ದೇ, ಆದರೆ ‘ಮದರ್ಸ್ ಡೇ’ (ಅಥವಾ
ಆ ಥರದ ಯಾವುದೇ ‘ಡೇ’ಗಳ) ಆಚರಣೆಯನ್ನು ಹಾಗೇಕೆ ಅರ್ಥೈಸಬೇಕು? ಆ ಒಂದು ದಿನ ಅಮ್ಮನಿಗೇ ಮೀಸಲು ಎಂದರೆ ಸಂಭ್ರಮಪಡಬಾರದೇಕೆ? ಮಂಗಳವಾರದ ಒಂದು ವಿಶೇಷವೇನೆಂದು ನಿಮಗೆ ಗೊತ್ತೇ? ಜನನ ದಾಖಲಾತಿ ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ ವಾರದ ಏಳು ದಿನಗಳ ಪೈಕಿ ಮಂಗಳವಾರದಂದು ಗರಿಷ್ಠ ಸಂಖ್ಯೆಯಲ್ಲಿ ಹೆರಿಗೆಗಳಾಗುವುದು!

ಇದಕ್ಕೆ ಕಾರಣವೇನಿ ರಬಹುದು ಅಂತೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ, ಅಂತಹ ವಿಶೇಷ ಕಾರಣವೇನೂ ಸಿಗಲಿಕ್ಕೂ ಇಲ್ಲ. ಆದರೆ ವಿಷಯ ಮಾತ್ರ ಸತ್ಯ. ಒಂದು ದೇಶದ ಜನಸಂಖ್ಯೆಯನ್ನು ಸ್ಯಾಂಪಲ್ ಎಂದು ಪರಿಗಣಿಸಿ ಫಲಿತಾಂಶವನ್ನು ಇಡೀ ಪ್ರಪಂಚಕ್ಕೆ, ಇಡೀ ಮನುಕುಲಕ್ಕೆ ಅನ್ವಯಿಸಿದರೂ ಬಹುಶಃ ಮಂಗಳವಾರದಂದು ಮಾತೆಯ ರಾಗಿರುವವರ ಸಂಖ್ಯೆಯೇ ಹೆಚ್ಚು ಇರಬಹುದು.

ಮಃದಾನಂದ ಬಹುಶಃ ಯಾವೊಬ್ಬ ಮಾತೆಗಾದರೂ ಆಗ ಆಗುತ್ತದೆ ಯಾವಾಗ ಯಃಕಶ್ಚಿತ್ ಮಕಾರ ಮಾ- ಗುಣಿತವೂ ಈ ರೀತಿ ಮನೋರಂಜನೆಗಾಗಿಯಾದರೂ ಮಾತೃದೇವೋಭವ ಎಂದು ಮನದಣಿಯೆ ಮನನ ಮಾಡಿಕೊಳ್ಳುತ್ತದೆ! ಅಂತಹ ಆನಂದಾ ನುಭೂತಿ ಗಾಗಿಯೇ ಈ ಅಂಕಣ ಓದುವ(ಮತ್ತು ಓದುವವರ) ಅಮ್ಮಂದಿರೆಲ್ಲರಿಗೂ ಹಾರ್ದಿಕ ಶುಭಾಶಯಗಳು.