Saturday, 7th September 2024

ಸಮರ; ಕೆಲವರಿಗೆ ಮೃತ್ಯು, ಕೆಲವರಿಗೆ ಮೃಷ್ಟಾನ್ನ !

ವಿದೇಶವಾಸಿ

dhyapaa@gmail.com

ಒಂದು ಕಾಲದಲ್ಲಿ ಬೆಳಕಿರುವಾಗ ಮಾತ್ರ ಯುದ್ಧ ಆಗುತ್ತುತ್ತು. ಸೂರ್ಯಾಸ್ತದ ನಂತರ ಯಾರೂ ಯುದ್ಧ ಮಾಡುತ್ತಿರಲಿಲ್ಲ. ಅದು ಧರ್ಮಯುದ್ಧ ಎಂದು ಕರೆಸಿಕೊಳ್ಳುತ್ತಿತ್ತು. ಇತ್ತೀಚಿನ ಯುದ್ಧ ನೋಡಿ, ಶುರುವಾಗುವುದೇ ಸೂರ್ಯಾಸ್ತದ ನಂತರ.

ಯುದ್ಧದ ಸಿದ್ಧಾಂತಗಳೆಲ್ಲ ಮಿಸೈಲ್ ಮತ್ತು ಬಾಂಬಿನ ಸದ್ದಿಗೆ ಸಿಡಿದು ಛಿದ್ರವಾಗಿ ಗಾಳಿಯಲ್ಲಿ ತೂರಿ ಹೋಗಿದೆ. ಪ್ರೀತಿಯಲ್ಲಿ, ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತ (everything is fair in love and war) ಎಂದು ಯಾವ ಮಹಾಪುರುಷ ಹೇಳಿದನೋ ಏನೋ, ಕೆಲವರು ಅದನ್ನೇ ವೇದವಾಕ್ಯ ಎಂದು ತಿಳಿದಂತಿದೆ. ಇವರನ್ನು ಬೇಕಾದರೆ ಬೇರೆಯವರ ಮನೆಯ ಮಕ್ಕಳನ್ನು ಬಾವಿಗೆ ತಳ್ಳಿ ಮಜಾ ನೋಡುವವರು ಎನ್ನಿ ಅಥವಾ ಪಕ್ಕದ ಮನೆಗೆ ಬೆಂಕಿ ಬಿದ್ದಾಗ ಅದರಲ್ಲಿ ತಮ್ಮ ಪಕ್ವಾನ್ನ ಬೇಯಿಸಿಕೊಳ್ಳುವವರು ಎನ್ನಿ.

ಪಕ್ಕದ ಮನೆಗೆ ಬಿದ್ದ ಬೆಂಕಿಯ ಜ್ವಾಲೆ ಮುಂದೆ ತಮ್ಮ ಮನೆಯನ್ನೂ ಸುಟ್ಟೀತು ಎಂಬುದಾಗಲಿ, ಅಥವಾ ಪಕ್ಕದ ಮನೆಯವರ ಮಗು ಬಿದ್ದ ಬಾವಿಯಲ್ಲಿ ಮುಂದೊಂದು ದಿನ ನಮ್ಮ ಮನೆಯ ಮಗುವೇ ಬೀಳಬಹು ಎಂಬ ವಿಚಾರ ಮಾಡದೇ ಇರುವವರು ಮೂರ್ಖರೇ ಸರಿ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗು ತ್ತಿರುವ ಸಮೀಕರಣ ಕಂಡಾಗ ಇಂತಹ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ.

ತತ್ವಶಾಸ್ತ್ರದಲ್ಲಿ ಒಂದು ಮಾತಿದೆ. ಎಲ್ಲಾ ಒಬ್ಬರಿಗೆ ನೋವಾದರೆ ಅದೇ ಕಾರಣಕ್ಕೆ ಇನ್ನೆ ಒಬ್ಬರಿಗೆ ಸಂತೋಷವಾಗುತ್ತಿರುತ್ತದೆ ಯಂತೆ. ಉದಾಹರಣೆಗೆ, ಮರ ಕಡಿದಾಗ ಮರಕ್ಕೆ ನೋವಾದರೆ, ಅದನ್ನು ಹಂಸತೂಲಿಕಾತಲ್ಪ ಮಾಡಿಕೊಂಡವ ಸುಖದ ಸುಪ್ಪತ್ತಿಗೆಯಲ್ಲಿ ನಿದ್ರಿಸುತ್ತಿರುತ್ತಾನೆ. ಯಾವುದೋ ದೇವರ ಮುಂದೆ ತಲೆ ಕತ್ತರಿಸುವಾಗ ಒದ್ದಾಡುವ ಕುರಿ ಕೋಳಿಗಳನ್ನು ಯಾರೋ ಆಸ್ವಾದಿಸುತ್ತಿರುತ್ತಾರೆ.

ವೃಕ್ಷ, ಪ್ರಾಣಿ, ಪಕ್ಷಿ ಬಿಡಿ, ಮನುಷ್ಯರನ್ನೇ ತೆಗೆದುಕೊಳ್ಳಿ. ತಾನು ಬೆಳೆದ ಹೆಚ್ಚಿನಾಂಶ ಬೆಳೆ ಮಳೆಯಿಂದಾಗಿ ನಷ್ಟವಾಯಿತು
ಎಂದು ರೈತ ಚಿಂತಿಸುತ್ತಿರುತ್ತಾನೆ. ಇದ್ದು ಬಿದ್ದದ್ದನ್ನು ಮಧ್ಯವರ್ತಿಗೆ ಮಾರಿ, ನಿರೀಕ್ಷಿಸದಷ್ಟು ಹಣ ಸಿಗದಿದ್ದಾಗ ಬೇಸರ ಪಡುತ್ತಾನೆ. ಹೆಚ್ಚಿನ ಹಣ ನೀಡಿಕೊಂಡು ಕೊಳ್ಳಬೇಕಾದ ಪರಿಸ್ಥಿತಿ ಬಂದುದಕ್ಕಾಗಿ ಗ್ರಾಹಕನೂ ಚಿಂತೆಯಲ್ಲಿರುತ್ತಾನೆ. ಆದರೆ ಅದೇ ಅವಕಾಶ ಒದಗಿಸಿಕೊಂಡು, ಅದೇ ವಸುವನ್ನು ಮಾರಾಟ ಮಾಡಿದ ಮಧ್ಯವರ್ತಿಯೋ, ವ್ಯಾಪಾರಸ್ಥನೋ ಹೆಚ್ಚು ಲಾಭ ಮಾಡಿದ ಖುಷಿಯಲ್ಲಿರುತ್ತಾನೆ.

ಇಂದಿನ ದುರಂತವೆಂದರೆ ಈ ಮನಸ್ಥಿತಿ ವ್ಯಕ್ತಿ, ಊರು, ರಾಜ್ಯಗಳನ್ನು ಮೀರಿ, ದೇಶದಿಂದ ದೇಶಕ್ಕೆ ಹಬ್ಬಿ, ಅಂತಾರಾಷ್ಟ್ರೀಯ ಮಟ್ಟದವರೆಗೆ ಬೆಳೆದು ನಿಂತಿದೆ. ಪ್ರತಿಯೊಬ್ಬರಿಗೂ ತಾನು ಮಾಡಿದ್ದೇ ಸರಿ, ತಾನು ಹೇಳಿದಂತೆ ಉಳಿದವರು ಕೇಳಬೇಕು. ಯಾರಿಗೇನಾದರೇನು? ನಾವು ಲಾಭ ಮಾಡಿಕೊಳ್ಳಬೇಕು ಎನ್ನುವವರೇ ಹೆಚ್ಚುತ್ತಿದ್ದಾರೆ. ಈ ಮನಸ್ಥಿತಿ ಹೊಸದಲ್ಲದಿರ ಬಹುದು, ಆದರೆ ಈ ಮಟ್ಟಕ್ಕೆ ಇತ್ತೇ? ಎಂಬುದು ದೊಡ್ಡ ಪ್ರಶ್ನೆ.

ರಷ್ಯಾ ಮತ್ತು ಯುಕ್ರೇನ್ ಯುದ್ಧಹಲ್ಲಿ ಸಾಕಷ್ಟು ದೇಶಗಳು ಹೈರಾಣಾಗಿ ಹೋಗಿವೆ. ಇದಕ್ಕೂ ಮುಂಚೆಯೂ ಸಾಕಷ್ಟು ಯುದ್ಧ ಗಳಾಗಿವೆ. ವಿಶ್ವ ಯುದ್ಧ ಬಿಡಿ, ದೇಶ ದೇಶದ ನಡುವೆ ನಡೆದ ಸಣ್ಣ ಯುದ್ಧಗಳನ್ನೇ ತೆಗೆದುಕೊಳ್ಳಿ, ಉದಾಹರಣೆಗೆ,
ಇರಾನ – ಇರಾಕ್, ಸೌದಿ ಅರೇಬಿಯಾ-ಯೆಮನ್. ಇನ್ನು ಅಮೆರಿಕ ಎಂಬ ದೊಡ್ಡಣ್ಣ ಇರಾಕ್, ಅಫಘಾನಿಸ್ತಾನದಂತಹ ದೇಶಗಳ ಮೇಲೆ ಮಾಡಿದ ದಾಳಿಯಂತೂ ಕೇಳುವುದೇ ಬೇಡ. ಈ ಯಾವ ಯುದ್ಧಗಳೂ ಇತರ ದೇಶಗಳ ಮೇಲೆ ರಷ್ಯಾ-ಯುಕ್ರೇನ್ ಯುದ್ಧ ಬೀರಿದಷ್ಟು ಪರಿಣಾಮ ಬೀರಿಲ್ಲ ಎಂದರೆ ಸುಳ್ಳಲ್ಲ.

ಜತೆಗೆ, ಈ ಯುದ್ಧ ಮುಗಿಯುವ ಹೊತ್ತಿಗೆ ಯಾವ ಯಾವ ಮಿತ್ರ ದೇಶಗಳು ಶತ್ರುಗಳಾಗುತ್ತಾರೋ, ಶತ್ರುಗಳು ಮಿತ್ರ ರಾಗುತ್ತಾರೋ ಗೊತ್ತಿಲ್ಲ. ಹೀಗೆ ಮುಂದುವರಿದರೆ, ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರವಾಗಿ, ಬಡ ರಾಷ್ಟ್ರಗಳು ಶ್ರೀಮಂತ ರಾಷ್ಟ್ರವಾಗಿ ಬದಲಾದರೂ ಆಶ್ಚರ್ಯವಿಲ್ಲ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತಂತೆ. ಅಪ್ಪ ಅಮ್ಮ ಗೊತ್ತಿಲ್ಲ, ಹೀಗೇ
ಮುಂದುವರಿದರೆ, ಇದಕ್ಕೊಂದು ಉಪಾಯ ಕಂಡುಕೊಳ್ಳದಿದ್ದರೆ, ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಯುರೋಪ್ ಬಡವಾಗುವು ದಂತೂ ನಿಜ.

ಇದಕ್ಕೆ ಪ್ರಮುಖ ಕಾರಣ ಯುರೋಪ್ ಇಂಧನ ರೂಪದಲ್ಲಿ ಹೆಚ್ಚಾಗಿ ಬಳಸುವ, ರಷ್ಯಾದಿಂದ ಆಮದಾಗುತ್ತಿದ್ದ ಅನಿಲ. ಯುದ್ಧಕ್ಕೂ ಮೊದಲು, ಯುರೋಪಿಗೆ ಬೇಕಾಗುವ ಶೇಕಡಾ ನಲವತ್ತು ಪ್ರತಿಶತ ಅನಿಲ ಇಂಧನ ರಷ್ಯಾದಿಂದ ಪೂರೈಕೆ ಯಾಗುತ್ತಿತ್ತು. ಯುದ್ಧ ಆರಂಭವಾದ ನಂತರ ತನ್ನ ಮೇಲೆ ಹೇರಿದ ನಿರ್ಬಂಧದಿಂದ ರೊಚ್ಚಿಗೆದ್ದ ರಷ್ಯಾ, ಯುರೋಪಿಗೆ ಪೂರೈಸುವ ಇಂಧನದಲ್ಲಿ ಶೇಕಡಾ ತೊಂಬತ್ತರಷ್ಟನ್ನು ಕಡಿತಗೊಳಿಸಿತು.

ಅದಕ್ಕೆ ನಿರ್ವಹಣೆಯ ನೆಪ ಹೇಳಿತ್ತು ರಷ್ಯಾ. ಅದನ್ನು ಅಲ್ಲಗಳೆಯುವಂತೆಯೂ ಇರಲಿಲ್ಲ. ಕಾರಣ ರಷ್ಯಾದಿಂದ ಯುರೋಪಿಗೆ ಇಂಧನ ಪೂರೈಕೆಯಾಗುತ್ತಿದ್ದದ್ದು ಕೊಳವೆ (ಪೈಪ್‌ಲೈನ್) ಮೂಲಕ. ಇದು ಸುಮಾರು ಒಂದು ಸಾವಿರದ ಇನ್ನೂರು ಕಿಲೋ ಮೀಟರ್ ಉದ್ದದ, ಸಮುದ್ರದ ತಳದಲ್ಲಿರುವ ಪೈಪ್‌ಲೈನ್. ೨೦೧೧ರಲ್ಲಿ ಆರಂಭವಾದ ‘ನಾರ್ಡ್ ಸ್ಟ್ರೀಮ್ – 1’ ಹೆಸರಿನ ಈ ಪೈಪ್‌ಲೈನ್ ರಷ್ಯಾದ ಪಶ್ಚಿಮ ಭಾಗದಲ್ಲಿರುವ ಸೇಂಟ್ ಪೀಟರ್ಸ್‌ಬರ್ಗ್ ನಗರದ ಸಮುದ್ರ ತಟದಿಂದ ಆರಂಭವಾಗಿ ಜರ್ಮನಿಯ ಈಶಾನ್ಯ ಭಾಗದಲ್ಲಿರುವ ಲುಬ್‌ಮಿನ್ ತೀರದಲ್ಲಿ ಅಂತ್ಯವಾಗುತ್ತದೆ.

ಸುಮಾರು ಹನ್ನೊಂದು ಬಿಲಿಯನ್ ಡಾಲರ್ ವೆಚ್ಚದ ಈ ಕೊಳವೆ ಮಾರ್ಗ ಪ್ರತಿನಿತ್ಯ ಯುರೋಪಿಗೆ ನೂರ ಎಪ್ಪತ್ತು ಘನ ಮೀಟರ್‌ನಷ್ಟು ಅನಿಲ ಪೂರೈಸುತ್ತಿತ್ತು. ಸಾಲದು ಎಂಬಂತೆ, ಇದೇ ರೀತಿಯ ‘ನಾರ್ಡ್ ಸ್ಟ್ರೀಮ್ – ೨’ ಪೈಪ್‌ಲೈನ್ ಕೂಡ ಇಂಧನ ಪೂರೈಸಲು ಸಂಪೂರ್ಣ ಸಿದ್ಧವಾಗಿದ್ದು, 2022 ರಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ಅದಕ್ಕೂ ಮೊದಲು ಯುದ್ಧ ಆರಂಭವಾಯಿತು.

ಅಷ್ಟೇ ಆಗಿದ್ದರೆ ನಡೆಯುತ್ತಿತ್ತೋ ಏನೋ. ಇತ್ತೀಚೆಗೆ ನಾರ್ಡ್ ಸ್ಟ್ರೀಮ್ – 1 ರಲ್ಲಿ ಒಂದು ಸ್ಫೋ ಉಂಟಾಯಿತು. ಅದು ಹೇಗಾಯಿತು ಎನ್ನುವುದು ಇದುವರೆಗೂ ರಹಸ್ಯವೇ. ಕೆಲವರು ಇದರ ಹಿಂದೆ ಅಮೆರಿಕದ ಕೈವಾಡವಿದೆ ಎಂದರೆ, ಕೆಲವರು ಇದು ಪುತಿನ್ ಬೇಕಂತಲೇ ಮಾಡಿದ್ದು ಎಂದರು. ಪುತಿನ್ ಮಾತ್ರ ಇದು ಯುಕ್ರೇನಿನ ಕೆಲಸ ಎಂದರು. ಯುಕ್ರೇನ್ ತನ್ನ ಭೂಮಿ ಉಳಿಸಿಕೊಳ್ಳುವುದನ್ನು ಬಿಟ್ಟು ಪೈಪ್‌ಲೈನ್ ಧ್ವಂಸ ಮಾಡಲು ಬಾಲ್ಟಿಕ್ ಸಮುದ್ರದ ಬುಡಕ್ಕೆ ಹೋಗತ್ತೆ ಎನ್ನುವ
ವಾದ ನಂಬುವುದು ಕಷ್ಟ. ಅಮೆರಿಕ ಮಾಡಿದ್ದೇ, ರಷ್ಯಾವೇ ಮಾಡಿದ್ದೆ, ಇದರಿಂದ ಯುರೋಪ್ ಹಳ್ಳ ಹಿಡಿದದ್ದು ಸ್ಪಷ್ಟ!

ಜರ್ಮನಿ ಮತ್ತು ಫ್ರಾನ್ಸ್, ಯುರೋಪ್‌ನ ದೊಡ್ಡ ರಾಷ್ಟ್ರಗಳ ಪಟ್ಟಿಗೆ ಸೇರಿದವು. ಆರಂಭದಲ್ಲಿ ಎರಡೂ ದೇಶಗಳು ರಷ್ಯಾವನ್ನು ಎದುರು ಹಾಕಿಕೊಳ್ಳಲು ಇಷ್ಟಪಟ್ಟಿರಲಿಲ್ಲ. ಜರ್ಮನಿ ತನಗೆ ಬೇಕಾದ ಅನಿಲದಲ್ಲಿ ಶೇಕಡಾ ಐವತ್ತೈದರಷ್ಟನ್ನು ರಷ್ಯಾದಿಂದ
ಆಮದು ಮಾಡಿಕೊಳ್ಳುತ್ತಿದ್ದರೆ, ಫ್ರಾನ್ಸ್ ಶೇಕಡಾ ಹದಿನೇಳರಷ್ಟನ್ನು ಮಾತ್ರ ರಷ್ಯಾದಿಂದ ಪಡೆಯುತ್ತಿತ್ತು. ಫ್ರಾನ್ಸ್‌ನಲ್ಲಿರುವ ಸುಮಾರು ಐವತ್ತಕ್ಕೂ ಹೆಚ್ಚು ಅಣುವಿದ್ಯುತ್ ಸ್ಥಾವರಗಳು ದೇಶಕ್ಕೆ ಬೇಕಾಗುವ ಸುಮಾರು ಅರವತ್ತು ಪ್ರತಿಶತ ವಿದ್ಯುತ್
ಉತ್ಪಾದಿಸುತ್ತಿದ್ದುದು ಇದಕ್ಕೆ ಕಾರಣ ಇದ್ದೀತು.

ಆದರೆ, ಅದರಲ್ಲಿ ಅರ್ಧದಷ್ಟು ಈಗ ಕಾರ್ಯ ನಿರ್ವಹಿಸುತ್ತಿಲ್ಲವಾದ್ದರಿಂದ, ಫ್ರಾನ್ಸ್ ನಾರ್ವೆಯಿಂದ ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾಕ್ಕೆ ಹೋಲಿಸಿದರೆ ನಾರ್ವೆ ಯಾವ ಲೆಕ್ಕಕ್ಕೂ ಇಲ್ಲ. ರಷ್ಯಾ ಪ್ರತಿನಿತ್ಯ ನೂರ ಎಪ್ಪತ್ತು ಘನ
ಮೀಟರ್ ಅನಿಲವನ್ನು ಯುರೋಪ್‌ಗೆ ರಫ್ತು ಮಾಡುತ್ತಿದ್ದರೆ, ನಾರ್ವೆ ಪ್ರತಿನಿತ್ಯ ಐದರಿಂದ ಆರು ಘನ ಮೀಟರ್ ಮಾತ್ರ ಅನಿಲ ರಫ್ತು ಮಾಡುವ ಸಾಮರ್ಥ್ಯ ಹೊಂದಿದೆ.

ಯುದ್ಧ ಆರಂಭವಾಗುವುದಕ್ಕೂ ಮೊದಲು ಯುಕೆ, ಪೋಲಂಡ್ ಮತ್ತು ಡೆನ್ಮಾರ್ಕ್ ನಾರ್ವೆಯಿಂದ ಅನಿಲ ಆಮದು ಮಾಡಿ ಕೊಳ್ಳುತ್ತಿದ್ದ ದೊಡ್ಡ ದೇಶಗಳಾಗಿದ್ದವು. ಈಗ ಇದ್ದಕ್ಕಿದ್ದಂತೆ ನಾರ್ವೆಯ ಅನಿಲಕ್ಕೆ ಬೇಡಿಕೆ ಹೆಚ್ಚಾಗಿದೆ. ಮಜಾ ಏನೆಂದರೆ, ಪರಿಸರ ಪ್ರೇಮದ ಮಾತಾಡುವ, ಸಾರಿಗೆಗೆ ಎಲೆಕ್ಟ್ರಿಕ್ ಕಾರು-ಸೈಕಲ್ ಬಳಸುವ, ತನ್ನ ಮನೆಯನ್ನು ಬೆಚ್ಚಗಿಟ್ಟುಕೊಳ್ಳಲು ರಿನೀವೇಬಲ್ ಎನರ್ಜಿ ಬಳಸುವ ನಾರ್ವೆ, ತನ್ನ ಭೂಮಿಯನ್ನೇ ಅಗೆದು ತೆಗೆದ ಇಂಧನವನ್ನು ಬೇರೆ ದೇಶಗಳಿಗೆ ಮಾರಾಟ ಮಾಡುತ್ತಿದೆ. ಅದೂ ಹೆಚ್ಚಿನ ದರದಲ್ಲಿ. ಈ ವಿಷಯದಲ್ಲಿ ಫ್ರಾನ್ಸ್ ಈಗಾಗಲೇ ತಕಾರಾರು ಎತ್ತಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ನಾರ್ವೆಯ ನಡೆ ಸರಿಯಲ್ಲ ಎಂದು ಹೇಳಿದೆ. ಇನ್ನೂ ಮಜಾ ಒಂದಿದೆ. ಯಾವ ನ್ಯಾಟೋ (NATO) ಒಕ್ಕೂಟಕ್ಕೆ ಸೇರುವ ವಿಷಯದಲ್ಲಿ ರಷ್ಯಾ-ಯುಕ್ರೇನ್ ಯುದ್ಧ ಆರಂಭವಾಯಿತೋ, ಅದೇ ಸಂಸ್ಥೆಯ ಅಧ್ಯಕ್ಷ ಗಾದಿಯಲ್ಲಿ ಕುಳಿತಿರುವವರು ಯಾರು ಗೊತ್ತಾ? ಒಂಬತ್ತು ವರ್ಷ ನಾರ್ವೆಯ ಪ್ರಧಾನಿಯಾಗಿದ್ದ ಜೆನ್ಸ್ ಸ್ಟಾಲೆನ್‌ಬರ್ಗ್. ಒಂದೆಡೆ, ತೀರಾ ಇತ್ತೀಚಿನವರೆಗೂ ಪರಿಸರ, ಹವಾಮನ ಬದಲಾವಣೆ, ಜಾಗತಿಕ ತಾಪಮಾನದ ಬಗ್ಗೆ ಮಾತನಾಡುತ್ತಿದ್ದ ನಾರ್ವೆ, ತಾಪಮಾನ ಹೆಚ್ಚಿಸುವ ಇಂಧನ ಮಾರಿ ಸೋಂಪಾಗಿ ದುಡ್ಡು ದೋಚುತ್ತಿದೆ.

ಒಟ್ಟಿನಲ್ಲಿ ಈ ವರ್ಷ ನಾರ್ವೆಗೆ ಒಳ್ಳೆಯ ಕೊಯ್ಲು! ಯುದ್ಧ ಆರಂಭವಾದ ನಂತರ ರಷ್ಯಾದ ತೈಲ ಮತ್ತು ಅನಿಲದಿಂದ ಬರುವ ಆದಾಯ ಹೆಚ್ಚಿದ್ದನ್ನು ಕಳೆದ ವಾರದ ಅಂಕಣದಲ್ಲಿ ಬರೆದಿದ್ದೆ. ಯುರೋಪ್‌ನಲ್ಲಿ ಕೆಲವು ದೇಶಗಳು ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂಧನ ಬಳಕೆಯನ್ನು ಶೇಕಡ ಹದಿನೈದರಷ್ಟು ಕಡಿತಗೊಳಿಸಲು ಯೋಚಿಸುತ್ತಿದ್ದರೂ, ಅದು ಸಮಸ್ಯೆಗೆ ಪರಿಹಾರ ವಲ್ಲ. ಅದನ್ನು ಚೆನ್ನಾಗಿ ಅರಿತ ರಷ್ಯಾ ಈಗ ಟರ್ಕಿಯೊಂದಿಗೆ ಮಾತುಕತೆ ನದೆಸಿದೆ. ಹಾಗೇನಾದರೂ ಆದರೆ, ರಷ್ಯಾದಿಂದ ಅನಿಲ ಖರೀದಿಸಿ, ಯುರೋಪ್‌ಗೆ ಮಾರಿ ಟರ್ಕಿಯೂ ‘ಮನೆಯ ಕುಳಿತು ಆದಾಯ ಗಳಿಸಿ’ ತಂಡ ಸೇರಲಿದೆ. (ಈ ಮೊದಲು ರಷ್ಯಾ ಭಾರತಕ್ಕೂ ಇದೇ ರೀತಿಯ ಆಫರ್ ನೀಡಿತ್ತು, ಭಾರತ ಅದನ್ನು ತಿರಸ್ಕರಿಸಿತು ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬ ಹುದು). ಈ ಕಾಲದಲ್ಲಿ ನಮಗೆ ಧರ್ಮಸಮ್ಮತವಲ್ಲ ಎಂದು ಬಿಟ್ಟ ಕೆಲಸ ಮಾಡುವುದಕ್ಕೆ ಇನ್ನೊಬ್ಬರು ತಯಾರಾಗಿರುತ್ತಾರೆ ಎಂಬುದಂತೂ ನಿಜ.

ಇರಲಿ, ಈಗ ಯುರೋಪ್ ದೇಶಗಳಲ್ಲಿ ಚ್ಚುತ್ತಿರುವ ದರದಿಂದಾಗಿ ಜನರು ಸರಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಕಳೆದ ವಾರ ಫ್ರಾನ್ಸ್‌ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು ಎಂದರೆ ಚಳಿಯಲ್ಲಿಯೂ ಜನ ಎಷ್ಟು ಬಿಸಿಯಾಗಿದ್ದಾರೆ ಎಂಬ ಅರಿವಾಗುತ್ತದೆ. ಈ ನಡುವೆ ಜರ್ಮನಿ ಮತ್ತು ಫ್ರಾನ್ಸ್ ವಿಶ್ವದಲ್ಲಿ ಅತಿ ಹೆಚ್ಚು ಅನಿಲದ
ಖಜಾನೆ ಹೊಂದಿರುವ ಖತಾರ್ ದೇಶವನ್ನು ಸಂಪರ್ಕಿಸಿ, ಅನಿಲ ಪೂರೈಸಲು ಕೇಳಿಕೊಂಡರೂ, ಮನವೊಲಿಸುವಲ್ಲಿ ವಿಫಲ ವಾಗಿವೆ.

ಸಾಲದು ಎಂಬಂತೆ, ‘2025 ರ ವರೆಗೆ ಯಾವರೀತಿಯ ಸಹಾಯವನ್ನೂ ಮಾಡಲು ಸಾಧ್ಯವಿಲ್ಲ’ ಎಂಬ ಖತಾರ್ ನ ಹೇಳಿಕೆ ಈ ದೇಶ ಬೆಚ್ಚಿ ಬೀಳುವಂತೆ ಮಾಡಿದೆ. ಇದನ್ನೇ ಎಚ್ಚರಿಕೆಯ ಗಂಟೆ ಎಂದು ಪರಿಗಣಿಸಿ, ಬಲ್ಗೇರಿಯಾ, ಅಸ್ಟೋನಿಯಾ, ಸೈಪ್ರಸ್, ಲಕ್ಸಂಬರ್ಗ್, ಕ್ರೊವೇಷಿಯಾ, ಸ್ಲೊವೇನಿಯಾದಂತಹ ದೇಶಗಳು ರಷ್ಯಾದೊಂದಿಗೆ ತಮ್ಮ ಸಂಬಂಧವನ್ನು ಪುನಃ ಸ್ಥಾಪಿಸಲು ಉತ್ಸುಕತೆ ತೋರಿಸಿವೆ.

ಜತೆಗೆ, ಯುರೋಪಿನ ಹದಿಮೂರು ದೇಶಗಳು ಮೊದಲಿನಂತೆಯೇ ರಷ್ಯಾದಿಂದ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿವೆ. ಎಲ್ಲಿಯವರೆಗೆ ಎಂದರೆ, ಕೆಲವು ದೇಶಗಳು ನ್ಯಾಟೋ ಒಕ್ಕೂಟದಿಂದಲೇ ಹೊರಗೆ ಬರುವವರೆಗೆ, ಅಗತ್ಯ ಬಿದ್ದರೆ ಯುರೋಪಿಯನ್ ಒಕ್ಕೂಟ ದಿಂದಲೂ ಹೊರಗೆ ಬರುವವರೆಗೆ ಚಿಂತಿಸುತ್ತಿವೆ. ದೊಡ್ಡ ದೇಶಗಳು ಹಾಗೋ ಹೀಗೋ ಸ್ವಲ್ಪ ದಿನ ತಡೆದುಕೊಂಡಾವು, ಯುದ್ಧದ ಪೆಟ್ಟಿಗೆ ಸಣ್ಣ ದೇಶಗಳು ಪುಡಿಯಾಗುವುದಕ್ಕೆ ಹೆಚ್ಚು ಸಮಯ ಬೇಡ. ಇವೆಲ್ಲ ಒಂದು ಕಡೆಯಾದರೆ ಇನ್ನೊಂದು ಕಡೆ ಚೀನಾ ಮತ್ತು ಇರಾನ್ ರಷ್ಯಾಕ್ಕೆ ಪರೋಕ್ಷವಾಗಿ ಸಹಾಯ ಮಾಡಿ ಸದ್ದಿಲ್ಲದೇ ದುಡ್ಡು ಮಾಡುತ್ತಿವೆ.

ಒಟ್ಟಿನಲ್ಲಿ ಈ ಯುದ್ಧ ಕೆಲವರಿಗೆ ಸಾಕಪ್ಪಾ ಸಾಕು ಎನಿಸಿದರೆ, ಕೆಲವರಿಗೆ ಇನ್ನೂ ಬೇಕು, ಮತ್ತೂ ಬೇಕು! ಇದರ ನಡುವೆ ಒಂದು ಪ್ರಶ್ನೆಗೆ ಯಾರೂ ಉತ್ತರಿಸಲು ಸಿದ್ಧರಿಲ್ಲ. ಈ ಯುದ್ಧ ಆರಂಭವಾದದ್ದು ಯಾಕೆ? ನ್ಯಾಟೊ ಒಕ್ಕೂಟಕ್ಕೆ ಸೇರಬೇರಿಕೊಳ್ಳ
ಬೇಕು, ತನ್ಮೂಲಕ ಯುದ್ಧವನ್ನು ತಪ್ಪಿಸಬೇಕು ಎಂಬ ಯುಕ್ರೇನ್ನ ಉತ್ಕಟ ಅಪೇಕ್ಷೆಯಿಂದಾಗಿ. ಒಂದು ವೇಳೆ ಯುದ್ಧದ ಪರಿಸ್ಥಿತಿ ಎದುರಾದರೂ ನ್ಯಾಟೋ ದೇಶಗಳು ತನ್ನ ಸಹಾಯಕ್ಕೆ ಬರಬೇಕು ಎಂಬ ಕಾರಣದಿಂದಾಗಿ. ಈಗ ಯುದ್ಧ ಆರಂಭವಾಗಿ
ಸುಮಾರು ಎಂಟು ತಿಂಗಳಾಗುತ್ತ ಬಂತಾದರೂ, ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಎಂದಾದರೆ, ಇಲ್ಲಿ ಸೋಲುತ್ತಿರು ವವರು ಯಾರು? ರಷ್ಯಾ…? ಯುಕ್ರೇನ್…? ಅಮೆರಿಕ…? ಯುರೋಪ…? ಅಥವಾ ನ್ಯಾಟೋ…?

error: Content is protected !!