Saturday, 7th September 2024

ನವರಾತ್ರಿ ಆಚರಣೆಯ ಮಹತ್ವ

ದೇವಮೂಲೆ

ವಿನೋದ ಕಾಮತ್

ನವರಾತ್ರಿಯನ್ನು ಆಚರಿಸುವ ಪದ್ಧತಿ ಹಾಗೂ ಅದರ ಮಹತ್ವದ ಕುರಿತಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವ ಆಶಯ ನನ್ನದು. ಇವು ‘ಸನಾತನ’ ಸಂಸ್ಥೆ ರೂಪಿಸಿರುವ ‘ಶಕ್ತಿ’ ಎಂಬ ಕೃತಿಯಲ್ಲಿ ಅಡಕವಾಗಿರುವಂಥವು ಎಂಬುದು ನಿಮ್ಮ ಗಮನಕ್ಕೆ.

ಜಗತ್ತಿನಲ್ಲಿ ಯಾವಾಗ ತಾಮಸಿಕ, ಕ್ರೂರಿ ಮತ್ತು ಅಸುರೀ ಜನರು ಪ್ರಬಲರಾಗಿ, ಸಾತ್ವಿಕರು, ಸಜ್ಜನರು ಮತ್ತು ಧರ್ಮನಿಷ್ಠರನ್ನು ಪೀಡಿಸುತ್ತಾರೋ ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರವನ್ನು ಎತ್ತುತ್ತಾಳೆ. ಇದು ಆ ದೇವಿಯ ವ್ರತ ವಾಗಿದೆ. ನವರಾತ್ರಿಯಲ್ಲಿ ದೇವೀತತ್ತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ದೇವೀ ತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದು ಕೊಳ್ಳಲು ನವರಾತ್ರಿಯ ಕಾಲದಲ್ಲಿ ‘ಶ್ರೀ ದುರ್ಗಾ ದೇವ್ಯೈ ನಮಃ’ ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಸಲ ಮಾಡಬೇಕು.

ಆಶ್ವಯುಜ ಶುಕ್ಲ ಪಾಡ್ಯದಂದು ಪ್ರಾರಂಭವಾಗುವ ನವರಾತ್ರಿಯ ವ್ರತಕ್ಕೆ ಅನೇಕ ಕುಟುಂಬಗಳಲ್ಲಿ ಕುಲಾಚಾರದ ಸ್ವರೂಪವಿರುತ್ತದೆ. ಮನೆಯಲ್ಲಿನ ಪವಿತ್ರ
ಜಾಗದಲ್ಲಿ ಪೀಠವೊಂದನ್ನು ರೂಪಿಸಿ, ಸಿಂಹಾಸನಾರೂಢ ಅಷ್ಟಭುಜದೇವಿಯನ್ನು ಹಾಗೂ ನವಾರ್ಣವ ಯಂತ್ರವನ್ನು ಅದರ ಮೇಲೆ ಸ್ಥಾಪಿಸುತ್ತಾರೆ. ಯಂತ್ರದ
ಪಕ್ಕದಲ್ಲಿ ಘಟಸ್ಥಾಪನೆ ಮಾಡಿ ಅದಕ್ಕೂ ದೇವಿಗೂ ವಿಧಿಪೂರ್ವಕ ಪೂಜೆಮಾಡುತ್ತಾರೆ. ನವರಾತ್ರಿ ಮಹೋತ್ಸವದಲ್ಲಿ ಕುಲಾಚಾರದಂತೆ ಘಟಸ್ಥಾಪನೆ ಮತ್ತು
ಮಾಲಾಬಂಧನ ಮಾಡಬೇಕು. ಹೊಲದಿಂದ ಮಣ್ಣನ್ನು ತಂದು ಅದರಿಂದ ೨ ಬೆರಳು ಗಾತ್ರದಷ್ಟು ಚೌಕಾಕಾರ ಮಾಡಿ, ಅದರಲ್ಲಿ ೫ ಅಥವಾ ೭ ಧಾನ್ಯಗಳನ್ನು (ಜೋಳ, ಗೋಧಿ, ಎಳ್ಳು, ಹೆಸರು, ನವಣೆ, ತೃಣಧಾನ್ಯ ಮತ್ತು ಕಡಲೆ) ಹಾಕಬೇಕು.

ಮಣ್ಣಿನ ಅಥವಾ ತಾಮ್ರದ ಕಲಶದಲ್ಲಿ ನೀರು, ಗಂಧ, ಹೂವು, ಗರಿಕೆ, ಅಕ್ಷತೆ, ಅಡಕೆ, ಪಂಚಪಲ್ಲವ, ಪಂಚರತ್ನ ಅಥವಾ ನಾಣ್ಯ ಮುಂತಾದ ವಸ್ತುಗಳನ್ನು ಹಾಕಬೇಕು. ಸಪ್ತಧಾನ್ಯ ಮತ್ತು ಕಲಶಸ್ಥಾಪನೆಯ ವೈದಿಕ ಮಂತ್ರಗಳು ಗೊತ್ತಿಲ್ಲ ದಿದ್ದರೆ ಪುರಾಣೋಕ್ತ ಮಂತ್ರಗಳನ್ನು, ಅವೂ ಬರದಿದ್ದರೆ ಆಯಾ ವಸ್ತುಗಳ ಹೆಸರನ್ನು ಹೇಳಿ ‘ಸಮರ್ಪಯಾಮಿ’ ಎಂದು ನಾಮಮಂತ್ರದ ಉಪಯೋಗ ಮಾಡಬೇಕು. ಕಲಶದೊಳಗೆ ತಲುಪುವಂತೆ ಮಾಲೆಯನ್ನು ಕಟ್ಟಬೇಕು.
೯ ದಿನಗಳವರೆಗೆ ಪ್ರತಿದಿನ ಕುಮಾರಿಪೂಜೆ ಮಾಡಿ ಅವಳಿಗೆ ಭೋಜನ ನೀಡಬೇಕು. ಮುತ್ತೈದೆ ಎಂದರೆ ‘ಪ್ರಕಟ ಶಕ್ತಿ’, ಕುಮಾರಿ ಎಂದರೆ ‘ಅಪ್ರಕಟ ಶಕ್ತಿ’. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯ ವಾಗುವುದರಿಂದ, ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣ ಜಾಸ್ತಿಯಿರುತ್ತದೆ.

ಅಖಂಡ ದೀಪ ಪ್ರಜ್ವಲನೆ, ದೇವಿಮಹಾತ್ಮೆಯ ಪಠಣ, ಸಪ್ತಶತಿ ಪಾಠ, ಲಲಿತಾಪೂಜೆ, ಸರಸ್ವತಿಪೂಜೆ, ಉಪವಾಸ, ಜಾಗರಣೆ ಮುಂತಾದವನ್ನು ನಡೆಸಿ ಭಕ್ತರು
ತಂತಮ್ಮ ಶಕ್ತಿಸಾಮರ್ಥ್ಯಕ್ಕನುಗುಣವಾಗಿ ನವರಾತ್ರಿ ಮಹೋತ್ಸವವನ್ನು ಆಚರಿಸುತ್ತಾರೆ. ಭಕ್ತರು ಉಪವಾಸ ವಿದ್ದರೂ ದೇವಿಗೆ ಎಂದಿನಂತೆ ಅನ್ನದ ನೈವೇದ್ಯವಾಗ ಬೇಕು. ಈ ಕಾಲದಲ್ಲಿನ ಆಚಾರದ ಒಂದು ಉತ್ಕೃಷ್ಟ ಅಂಗವೆಂದು ಗಡ್ಡ-ಮೀಸೆ ಮತ್ತು ತಲೆಗೂದಲನ್ನು ಕತ್ತರಿಸದಿರುವುದು, ಕಠೋರ ಬ್ರಹ್ಮಚರ್ಯ, ಪಾದರಕ್ಷೆ ಗಳನ್ನು ಉಪಯೋಗಿಸದಿರುವುದು ಮುಂತಾದ ನಿಯಮಗಳನ್ನು ಪಾಲಿಸಲಾಗುತ್ತದೆ.

ನವರಾತ್ರಿಯ ಸಂಖ್ಯೆಗೆ ಒತ್ತುಕೊಟ್ಟು ಕೆಲವರು ಕೊನೆಯ ದಿನವೂ ದೇವಿಯನ್ನು ಇಡುತ್ತಾರೆ; ಆದರೆ ಶಾಸದನುಸಾರ ಕೊನೆಯದಿನ ದೇವಿಯ ಮೂರ್ತಿಯ
ವಿಸರ್ಜನೆಯಾಗುವುದು ಅವಶ್ಯಕ. ಅಂದು ಸಮಾರಾ ಧನೆಯ ನಂತರ ಸಮಯವಿದ್ದರೆ ಅಂದೇ ಎಲ್ಲ ದೇವರನ್ನು ತೆಗೆದು ಅಭಿಷೇಕ ಮತ್ತು ಷೋಡಷೋಪಚಾರ
ಪೂಜೆಯನ್ನು ಮಾಡಬೇಕು. ಸಮಯವಿಲ್ಲದಿದ್ದರೆ ಮರುದಿನ ಮಾಡಬೇಕು. ದೇವಿಯ ಮೂರ್ತಿಯ ವಿಸರ್ಜನೆಯ ವೇಳೆ ಬಿತ್ತಿದ ಸಪ್ತಧಾನ್ಯಗಳ ಸಸಿಗಳನ್ನು
ದೇವರಿಗೆ ಅರ್ಪಿಸುತ್ತಾರೆ ಮತ್ತು ‘ಶಾಕಂಬರಿದೇವಿ’ ಎಂದು ತಿಳಿದು ಸೀಯರು ಅವನ್ನು ತಲೆಯಲ್ಲಿ ಧರಿಸಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಾರೆ.
ನವರಾತ್ರಿಯನ್ನು ಪ್ರಾರಂಭಿಸುವಾಗ ಅಥವಾ ಸಮಾಪ್ತಿ ಮಾಡುವಾಗ, ದೇವರ ಉದ್ವಾರ್ಜನೆಯನ್ನು (ಅಂದರೆ ಶುದ್ಧೀಕರಣವನ್ನು) ಅವಶ್ಯವಾಗಿ ಮಾಡ
ಬೇಕು. ಉದ್ವಾರ್ಜನೆ ಮಾಡಲು ನಿತ್ಯದಂತೆ ನಿಂಬೆ ಕಾಯಿ, ಭಸ್ಮ ಮುಂತಾದವುಗಳನ್ನು ಉಪಯೋಗಿಸಬೇಕು.

ರಂಗೋಲಿ ಅಥವಾ ಪಾತ್ರೆ ತಿಕ್ಕುವ ಚೂರ್ಣ ವನ್ನು ಇದಕ್ಕಾಗಿ ಬಳಸಬಾರದು. ಕೊನೆಗೆ, ಸ್ಥಾಪಿಸಿದ ಘಟ ಮತ್ತು ದೇವಿಯನ್ನು ವಿಸರ್ಜಿಸಬೇಕು. ನವರಾತ್ರಿ
ಅಥವಾ ಇತರ ಧಾರ್ಮಿಕ ವಿಽಗಳಲ್ಲಿ ದೀಪವು ಯಾವಾಗಲೂ ಉರಿಯುತ್ತಿರಬೇಕು. ಇದು ಪೂಜಾ ವಿಧಿಯ ಅಂಗವಾಗಿದೆ. ಆದುದರಿಂದ, ಎಣ್ಣೆ ಕಡಿಮೆಯಾಗು ವಿಕೆ, ಉರಿದು ಕಪ್ಪಾಗುವಿಕೆ ಅಥವಾ ಗಾಳಿ ಮುಂತಾದ ಕಾರಣಗಳಿಂದಾಗಿ ದೀಪವು ನಂದಿದರೆ, ಅಂಥ ಕಾರಣವನ್ನು ದೂರಗೊಳಿಸಿ ದೀಪವನ್ನು ಪುನಃ
ಉರಿಸಬೇಕು ಮತ್ತು ಪ್ರಾಯಶ್ಚಿತ್ತವೆಂದು ೧೦೮ ಅಥವಾ ೧೦೦೮ ಬಾರಿ ಅಧಿಷ್ಠಾನ ದೇವತೆಯ ಜಪ ಮಾಡಬೇಕು.

ದೇವಿಗೆ ಈ ರೀತಿಯಲ್ಲಿ ಪ್ರಾರ್ಥನೆಯನ್ನು ಮಾಡಬೇಕು: ‘ಹೇ ದೇವಿ, ನಾವು ಶಕ್ತಿಹೀನರಾಗಿದ್ದೇವೆ, ಅಪರಿಮಿತ ಭೋಗವನ್ನು ಭೋಗಿಸಿ ಮಾಯಾಸಕ್ತರಾಗಿದ್ದೇವೆ.
ಹೇ ಮಾತೆ, ನೀನು ನಮಗೆ ಬಲವನ್ನು ನೀಡುವವಳಾಗು, ನಿನ್ನ ಶಕ್ತಿಯಿಂದ ನಾವು ಅಸುರೀ ಪ್ರವೃತ್ತಿಯನ್ನು ನಾಶಮಾಡುವಂತಾಗಲಿ’.

(ಲೇಖಕರು ‘ಸನಾತನ’ ಸಂಸ್ಥೆಯ ರಾಜ್ಯ ವಕ್ತಾರರು)

Leave a Reply

Your email address will not be published. Required fields are marked *

error: Content is protected !!