Saturday, 7th September 2024

ನೆಹರೂ ವಿರುದ್ದ ಸ್ಫರ್ಧೆಗೆ ಇಳಿದಿದ್ದ ಕಾಂಗ್ರೆಸ್ ಅಧ್ಯಕ್ಷ !

ಶಶಾಂಕಣ

shashidhara.halady@gmail.com

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾರಾಗಿದ್ದರು? ಇದೊಂದು ಪುಟ್ಟ ಕ್ವಿಜ್ ಪ್ರಶ್ನೆ.
ಇದಕ್ಕೆ ಉತ್ತರ ಜೆ.ಬಿ.ಕೃಪಲಾನಿ (ಆಚಾರ್ಯ ಕೃಪಲಾನಿ.) ಸುದೀರ್ಘ ಕಾಲ ಕಾಂಗ್ರೆಸ್‌ನಲ್ಲಿದ್ದುಕೊಂಡು, ಗಾಂಧೀಜಿಯವರ ಬಲಗೈ ಬಂಟ ಎನಿಸಿ, 1934ರಿಂದ 1945ರ ತನಕ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಆಚಾರ್ಯ ಕೃಪಲಾನಿ ಯವರು, 1946- 47ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆಗಿದ್ದರು.

ಆದರೆ, ಎಂದಿಗೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ತಾವು ನಂಬಿದ ತತ್ವ ಗಳನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ ಮತ್ತು ಹಣದಾಸೆಗೆ ಬಿದ್ದವರಲ್ಲ. ಆದ್ದರಿಂದಲೇ ಮೊದಲ ಪ್ರಧಾನಿ ನೆಹರೂ ಅವರ ತಪ್ಪುಗಳನ್ನು ಬಹಿರಂಗವಾಗಿ ಟೀಕಿಸುತ್ತಾ, ಸರಕಾರದ ತಪ್ಪು ನಡೆಗಳನ್ನು ಗುರುತಿಸಿ ತಿದ್ದಿಕೊಳ್ಳುವಂತೆ ಸಲಹೆ ನೀಡುತ್ತಾ, ಕಾಂಗ್ರೆಸ್‌ನ ಸ್ಥಾಪಿತ ಹಿತಾಸಕ್ತಿಗಳ ಕಣ್ಣು ಕೆಂಪಗಾಗುಂತೆ ಮಾಡಿದರು. ಜತೆಗೆ, ಬ್ರಿಟಿಷರ ಸಂಚಿನ ದೇಶವಿಭಜನೆಯನ್ನು ಕಾಂಗ್ರೆಸ್ ಯಾವ ಕಾರಣಕ್ಕೂ ಒಪ್ಪಿಕೊಳ್ಳ ಬಾರದಿತ್ತು ಎಂದು ಕೃಪಲಾನಿಯವರು ತೀವ್ರವಾಗಿ ಟೀಕಿಸಿದ್ದರು.

1951-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಮತ್ತು ನೆಹರೂ ವಿರುದ್ಧ ನಿಂತು, ತಮ್ಮದೇ ಪಕ್ಷ ಕಟ್ಟಿ (ಕಿಸಾನ್ ಮಜದೂರ್ ಪ್ರಜಾ ಪಕ್ಷ – ಕೆಎಂಪಿಪಿ), ಮೊದಲ ಸಂಸತ್ತಿನಲ್ಲಿ ಒಂದು ಅರ್ಥಪೂರ್ಣ ವಿರೋಧ ಪಕ್ಷವನ್ನು ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಆದರೆ, ಸ್ವಾತಂತ್ರ್ಯ ಪಡೆದ ಹುಮ್ಮನಸ್ಸಿನಲ್ಲಿದ್ದ ನಮ್ಮ ದೇಶದ ಜನತೆ, ಕಾಂಗ್ರೆಸ್ ಪಕ್ಷದ ಜೋಡೆತ್ತು ಚಿಹ್ನೆಗೆ ಭರಪೂರ ಮತ ಚಲಾಯಿಸಿ, ೩೬೪ ಸ್ಥಾನಗಳನ್ನು ಗೆಲ್ಲಿಸಿಕೊಟ್ಟರು.

ಮೂರನೆಯ ಸ್ಥಾನಕ್ಕೆ ಇಳಿದ ಕೆಎಂಪಿಪಿ ಪಕ್ಷವು, ಕೇವಲ ಹತ್ತು ಸ್ಥಾನಗಳನ್ನು ಪಡೆದು, ಹೀನಾಯ ಸೋಲನ್ನು ಅನುಭವಿಸಿತು.
ಇದರಿಂದ ಆಚಾರ್ಯ ಕೃಪಲಾನಿ ಬೇಸರ ಪಟ್ಟುಕೊಂಡವರಲ್ಲ; ಹೋರಾಟದ ಹಾದಿಯನ್ನು ತಮ್ಮ ಜೀವನದುದ್ದಕ್ಕೂ ಅನು ಸರಿಸುತ್ತಾ ಬಂದ ಕೃಪಲಾನಿಯವರು, 1951-52ರ ಮೊದಲ ಲೋಕಸಭಾ ಚುನಾವಣೆಯಲ್ಲೂ ಹೋರಾಟದ ಕಿಚ್ಚಿನಿಂದಲೇ ತಮ್ಮ ಪಕ್ಷವನ್ನು ಕಣಕ್ಕೆ ಇಳಿಸಿದ್ದರು. 145 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕೆಎಂಪಿಪಿ ಪಕ್ಷವು, ಅರ್ಧದಷ್ಟು ಕ್ಷೇತ್ರ ಗಳಲ್ಲಿ ಜಯ ಗಳಿಸಿದ್ದರೂ, ಒಂದು ಉತ್ತಮ ಮತ್ತು ಕ್ರಿಯಾತ್ಮಕ ವಿರೋಧ ಪಕ್ಷವಾಗಿ ಸಂಸತ್ತಿನಲ್ಲಿ ಕೆಲಸ ಮಾಡಬಹುದಿತ್ತು.

ನೆಹರೂ ಸರಕಾರವನ್ನು ಮತ್ತು ನೆಹರೂ ಅವರ ತಪ್ಪು ನಿರ್ಣಯಗಳನ್ನು ಕಟು ಶಬ್ದಗಳಲ್ಲಿ ಟೀಕಿಸುತ್ತಿದ್ದ ಕೃಪಲಾನಿಯವರು ಅಂತಹದೊಂದು ಸನ್ನಿವೇಶವನ್ನು ನಿರೀಕ್ಷಿಸಿದ್ದರು. ಮುಖ್ಯವಾಗಿ, ದೇಶ ವಿಭಜನೆಗೆ  ಹರೂ ಮತ್ತು ಅವರ ಸ್ನೇಹಿತರೇ ಕಾರಣ ಎಂದು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡು, ಆ ನಿಟ್ಟಿನಲ್ಲಿ ಜನಾಭಿಪ್ರಾಯವನ್ನು ರೂಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು.

ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ ಎಂದೇ ಜನಪ್ರಿಯಗೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಆಗ ದೇಶದಾದ್ಯಂತ, ಹಳ್ಳಿ ಹಳ್ಳಿಗಳಲ್ಲೂ ಬೆಂಬಲ ದೊರಕಿತು; ಜತೆಗೆ 1948ರಲ್ಲಿ ನಡೆದ ಗಾಂಧೀಜಿಯವರ ಹತ್ಯೆಯಿಂದಾಗಿ ಎದ್ದ ಅನುಕಂಪದ
ಅಲೆಯೂ ಕಾಂಗ್ರೆಸ್ ಪರವಾಗಿತ್ತು; ಕೃಪಲಾನಿಯವರ ಪಕ್ಷ ಮತ್ತು ಇತರ ಎಲ್ಲಾ ಪಕ್ಷಗಳು ತೀವ್ರ ಸೋಲನ್ನು ಅನುಭವಿಸಿ ದವು.

ಅದೇ ವರ್ಷ ಕೆಎಂಪಿಪಿಯನ್ನು ವಿಸರ್ಜಿಸಿ, ಸೋಷಿಯಲಿಸ್ಟ್ ಪಾರ್ಟಿಯೊಂದಿಗೆ ವಿಲೀನಗೊಳಿಸಿ, ಪ್ರಜಾ ಸೋಷಿಯಲಿಸ್ಟ್
ಪಕ್ಷವನ್ನು ಕೃಪಲಾನಿಯವರು ರೂಪಿಸಿದರು. ಆ ಮೂಲಕ ಕಾಂಗ್ರೆಸ್‌ಗೆ ಮತ್ತು ನೆಹರೂ ಸರಕಾರಕ್ಕೆ ಸವಾಲೆಸೆಯುವಂತಹ ಬಲಿಷ್ಠ ವಿರೋಧ ಪಕ್ಷವನ್ನು ಬೆಳೆಸಲು ಪ್ರಯತ್ನಿಸಿದರು. ಆದರೆ, ನೆಹರೂ ಪ್ರಧಾನಮಂತ್ರಿಯಾಗಿರುವ ತನಕವೂ, ನೆಹರೂ
ಜನಪ್ರಿಯತೆಯನ್ನು ಪೂರ್ತಿ ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ.

ನೆಹರೂ ಕಾಲಾನಂತರ, ಇಂದಿರಾ ಗಾಂಧಿಯವರ ಸರಕಾರದ ವಿರುದ್ಧ ಕೃಪಲಾನಿಯವರು ತಮ್ಮ ಅಭಿಯಾನ ಆರಂಭಿಸಿ ದರು. 1970ರ ದಶಕದ ಮೊದಲ ಭಾಗದಲ್ಲಿ ‘ಇಂಡಿಯಾ ಈಸ್ ಇಂದಿರಾ’ ಎಂಬ ಘೋಷಣೆಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆದಿತ್ತು; ಆದರೆ ನಮ್ಮ ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಬಡತನ, ಅಗತ್ಯ ವಸ್ತುಗಳ ಕೊರತೆ ಮೊದಲಾದ ಸಮಸ್ಯೆಗಳು ಭೀಕರ ರೂಪ ತಾಳಿ, ಜನಸಾಮಾನ್ಯರ ಬದುಕನ್ನು ಹೈರಾಣಗೊಳಿಸಿದ್ದವು; ಇದಕ್ಕೆಲ್ಲಾ ಕಾಂಗ್ರೆಸ್ ಸರಕಾರವು ತೆಗೆದುಕೊಂಡ ತಪ್ಪು ನಿರ್ಣಯಗಳೇ ಕಾರಣ ಎಂಬುದು ಕೃಪಲಾನಿಯವರು ಅಭಿಮತ.

ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜತೆ ಸೇರಿ, ಕೃಪಲಾನಿ ಯವರು ಇಂದಿರಾ ಗಾಂಧಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಲು, ಹೋರಾಟ ನಡೆಸಿದರು. ಪರಿಣಾಮ? ಇಂದಿರಾ ಗಾಂಧಿಯವರು 1975ರಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಹರಣ ಗೊಳಿಸಿದರು; ಮಾತ್ರವಲ್ಲ ದೇಶದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಜನರನ್ನು ಕಾರಣ ತೋರಿಸದೇ ಬಂಧನಕ್ಕೆ ಒಳಪಡಿಸಿ ದರು.

ಆ ರೀತಿ, ಯಾವುದೇ ಸೂಕ್ತ ಕಾರಣವಿಲ್ಲದೇ ಬಂಧನಕ್ಕೆ ಒಳಗಾದ ಮೊದಮೊದಲ ನಾಯಕರುಗಳಲ್ಲಿ ಕೃಪಲಾನಿಯವರೂ ಸೇರಿದ್ದರು! 1917ರಿಂದಾರಂಭಿಸಿ, ಬ್ರಿಟಿಷರ ವಿರುದ್ಧ ಹಲವು ಬಾರಿ ಹೋರಾಟ ನಡೆಸಿ, ಬಂಧನಕ್ಕೆ ಒಳಗಾಗಿದ್ದ ಕೃಪಲಾನಿ ಯವರು, ಸ್ವತಂತ್ರ್ಯ ಭಾರತದಲ್ಲೂ ಬಂಧನಕ್ಕೆ ಒಳಗಾಗುವ ಸ್ಥಿತಿ ಬಂದದ್ದು ಒಂದು ವಿಪರ್ಯಾಸ.  ಜೀವಮಾನ ದುದ್ದಕ್ಕೂ ಅನ್ಯಾಯದ ವಿರುದ್ಧ ಹೋರಾಡುತ್ತಾ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಾ ಬಂದಿದ್ದ ಕೃಪಲಾನಿಯವರ ಬದುಕಿನ ಹಿನ್ನೆಲೆಯನ್ನು ನೋಡುತ್ತಾ ಹೋದರೆ, ಹಲವು ಸ್ವಾರಸ್ಯಕರ ವಿವರಗಳು ದೊರಕುತ್ತವೆ. ಸಿಂಧ್ ಪ್ರದೇಶದ ಹೈದರಾಬಾದ್‌ನಲ್ಲಿ 11.11.1888ರಂದು ಜನಿಸಿದ ಜೆ.ಬಿ. ಕೃಪಲಾನಿಯವರು, ಪುಣೆಯ -ರ್ಗುಸನ್ ಕಾಲೇಜಿ ನಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು.

1912ರಿಂದ 1917ರ ತನಕ, ಬಿಹಾರದ ಮುಜಫರ್‌ಪುರದ ಎಲ್.ಎಸ್.ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಇತಿಹಾಸದ ಅಧ್ಯಾಪಕ ರಾಗಿ ಕೆಲಸ ಮಾಡಿದರು. ಇದೇ ಸಮಯದಲ್ಲಿ, ಅಂದರೆ 1915ರಲ್ಲಿ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ವಾಪಸಾಗಿ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಚುಕ್ಕಾಣಿ ಹಿಡಿದರು. ಗಾಂಧೀಜಿಯವರು ಬಿಹಾರದಲ್ಲಿ ಚಂಪಾರಣ್ ಸತ್ಯಾಗ್ರಹ ನಡೆಸಿದಾಗ, ಅವರ ಜತೆ ಕೈಜೋಡಿಸಿದವರಲ್ಲಿ ಜೆ.ಬಿ.ಕೃಪಲಾನಿಯವರು ಪ್ರಮುಖರು.

ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ್ದ ‘ಸತ್ಯಾಗ್ರಹ’ ಪ್ರಯೋಗವನ್ನು ನಮ್ಮ ದೇಶದಲ್ಲೂ ಮಾಡಲು, ಅವರಿಗೆ ತಕ್ಕ ಬೆಂಬಲಿಗರು, ಸಹೋದ್ಯೋಗಗಳ ಅಗತ್ಯವಿತ್ತು. ಆ ಕೊರತೆಯನ್ನು ತುಂಬಿದವರಲ್ಲಿ ಕೃಪಲಾನಿಯವರು ಮೊದಲಿಗರು.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಕೃಪಲಾನಿ ಯವರು ಆಗ ಸಂಬಳ ತರುವ ಕೆಲಸದಲ್ಲಿದ್ದರು! ಆದರೂ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ, ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋದರು! ಗಾಂಧೀಜಿಯವರು ಕರೆನೀಡಿದ ಎಲ್ಲಾ ಹೋರಾಟಗಳಲ್ಲೂ ಕೃಪಲಾನಿಯವರು ಸಕ್ರಿಯವಾಗಿ ಭಾಗವಹಿಸಿದರು. 1928-29ರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಕೃಪಲಾನಿಯವರು, ಅಂದಿನ ಎಲ್ಲಾ ಪ್ರಮುಖ ವಿದ್ಯಮಾನಗಳಿಗೆ ಸಾಕ್ಷಿಯಾಗಿದ್ದರು.
1934ರಿಂದ 1945ರ ತನಕದ ಸುದೀರ್ಘ ಅವಧಿಗೆ ಅವರು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿ ದದ್ದು, ಗಾಂಧೀಜಿಯವರಿಗೆ ಅವರ ಮೇಲಿದ್ದ ವಿಶ್ವಾಸವನ್ನು ತೋರಿಸುತ್ತದೆ.

ಗಾಂಧೀಜಿಯವರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾಗ, ಕೃಪಲಾನಿ ಯವರು ಕಾರ್ಯದರ್ಶಿಯಾಗಿದ್ದರು. 1946-47ರಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು. 1946ರಲ್ಲಿ, ಬ್ರಿಟಿಷ್ ಸರಕಾರದ ಸೂಚನೆಯಂತೆ, ನೆಹರೂ ಅವರ ನೇತೃತ್ವದಲ್ಲಿ ಮಧ್ಯಂತರ ಸರಕಾರದ ರಚನೆಯಾಯಿತು. ಅದರಲ್ಲಿ ಭಾಗವಹಿಸಿದ ಕೃಪಲಾನಿಯವರು, ಸಂವಿಧಾನ ರಚನಾ ಸಭೆಯಲ್ಲೂ
ತಮ್ಮ ಕರ್ತವ್ಯ ನಿರ್ವಹಿಸಿದರು. ಆದರೆ, 1947ರ ಸಮಯದಲ್ಲಿ ನೆಹರೂ ಅವರ ಹಲವು ನಡೆಗಳನ್ನು ಟೀಕಿಸಿದ್ದರಿಂದಾಗಿ, ಕೃಪಲಾನಿಯವರು ಕಟು ಟೀಕಾಕಾರರೆಂದೇ ಗುರುತಿಸಿಕೊಂಡರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಅವಕಾಶ ಇರಬೇಕು ಮತ್ತು ಪ್ರಮುಖ ನಿರ್ಣಯಗಳನ್ನು ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸಿ ಮುಂದುವರಿಯಬೇಕು ಎಂಬುದು ಕೃಪಲಾನಿಯವರ ಷರತ್ತು. ಆದರೆ, ಆಗಿನ ವೈಸ್‌ರಾಯ್ ಅವರ ನಿಕಟವರ್ತಿ ಯಾಗಿ ಪರಿವರ್ತನೆಗೊಂಡ ನೆಹರೂ ಅವರಿಗೆ ಇದು ಇಷ್ಟವಾಗುತ್ತಿರಲಿಲ್ಲ; ಮೌಂಟ್‌ಬ್ಯಾಟನ್ ಜತೆ
ಚರ್ಚಿಸಿ, ನೇರವಾಗಿ ನಿರ್ಣಯ ತೆಗೆದುಕೊಳ್ಳುವುದು ನೆಹರೂ ಅವರ ಆಡಳಿತದ ಶೈಲಿಯಾಗಿತ್ತು. ಇದನ್ನು ಕೃಪಲಾನಿಯವರು ಒಪ್ಪುತ್ತಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ದೇಶದ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿದ್ದ ಕೃಪಲಾನಿಯವರು, ಆ ಒಂದು ಸನ್ನಿವೇಶಕ್ಕೆ ನೆಹರೂ ಮತ್ತು ಅವರ ಸಹೋದ್ಯೋಗಿಗಳು ಕಾರಣ ಎಂದು ಬಲವಾಗಿ ಖಂಡಿಸಿದರು. ಗಾಂಧೀಜಿಯವರನ್ನು ಹೊರತು ಪಡಿಸಿದರೆ, ಬೇರೆಲ್ಲಾ ಕಾಂಗ್ರೆಸ್ ನಾಯಕರೂ ಕೃಪಲಾನಿಯವರ ಟೀಕೆಗೆ ಗುರಿಯಾದವರೇ. ಜಾಣ್ಮೆಯಿಂದ ವರ್ತಿಸಿದ್ದರೆ, ದೇಶ ವಿಭಜನೆಯನ್ನು ತಡೆಯಬಹುದಿತ್ತು ಎಂಬುದು ಕೃಪಲಾನಿಯವರ ಅಭಿಮತ. ಅದನ್ನು ಅವರು ತಮ್ಮ ಆತ್ಮ ಚರಿತ್ರೆ ‘ಮೈ ಟೈಮ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಆದರೆ, ಈ ಆತ್ಮ ಚರಿತ್ರೆಯ ಪ್ರಕಟಣೆಯ ವಿಚಾರವೇ ಒಂದು ದೊಡ್ಡ ಕಥೆ; ಕಾಂಗ್ರೆಸ್ ಆಡಳಿತ, ನೆಹರೂ ಅವರ ಅಧಿಕಾರದ
ಶೈಲಿ, ಅವರ ಮಗಳು ಇಂದಿರಾ ಅವರಿಂದ ನಡೆದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಲ್ಲವನ್ನೂ ನಿರ್ಭಿಡೆಯಿಂದ ಬರೆದಿರುವ ಈ ಆತ್ಮ ಚರಿತ್ರೆಯು, ಕೃಪಲಾನಿಯವರ ಜೀವಿತಾವಽಯಲ್ಲಿ ಪ್ರಕಟಗೊಳ್ಳಲೇ ಇಲ್ಲ! ಅವರು ಮೃತಪಟ್ಟು 22 ವರ್ಷಗಳ
ನಂತರ, 2004ರಲ್ಲಿ ಈ ಮಹತ್ವಪೂರ್ಣ ಆತ್ಮಕಥೆ ಪ್ರಕಟಗೊಂಡಿತ್ತು! ಸಾಂದರ್ಭಿಕವಾಗಿ ನೆನಪಿಸಿಕೊಳ್ಳುವುದಾದರೆ, ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರದ ಅವಽಯಲ್ಲಿ, ಕೃಪಲಾನಿಯವರ ಆತ್ಮಕಥೆ ಬೆಳಕಿಗೆ ಬರಲು ಸಾಧ್ಯವಾಯಿತು!

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಕೇವಲ ಆರು ತಿಂಗಳಿನಲ್ಲಿ ಗಾಂಧೀಜಿಯವರ ಹತ್ಯೆಯಾದ ನಂತರ, ಕಾಂಗ್ರೆಸ್‌ ನಲ್ಲಿ ಕೃಪಲಾನಿಯವರು ಒಂಟಿ ಯಾದರು. ಪ್ರಧಾನಿ ನೆಹರೂ ಅವರು ಮೇಲ್ನೋಟಕ್ಕೆ ಕೃಪಲಾನಿಯವರಿಗೆ ಅಪಾರ ಗೌರವ ಕೊಡುತ್ತಿದ್ದರು; ಹಿರಿಯ ಕಾಂಗ್ರೆಸಿಗರು ಎಂಬ ಗೌರವ ಕೃಪಲಾನಿಯವರಿಗೆ ಇದ್ದೇ ಇತ್ತು. ಆದರೆ, ಪ್ರಧಾನಿ ನೆಹರೂ
ತೆಗೆದುಕೊಳ್ಳುತ್ತಿದ್ದ ನಿರ್ಣಯಗಳು ಕೃಪಲಾನಿಯವರಿಗೆ ಸರಿಬರುತ್ತಿರಲಿಲ್ಲ; ಕಾಂಗ್ರೆಸ್ ಪಕ್ಷದ ಹಿತಕ್ಕಿಂತ ದೇಶದ ಹಿತ ಮುಖ್ಯ ಎಂಬುದು ಕೃಪಲಾನಿಯವರ ಪ್ರತಿಪಾದನೆಯಾಗಿತ್ತು.

ಆದ್ದರಿಂದಲೇ ಇರಬೇಕು, 1951-52ರ ಲೋಕಸಭೆ ಚುನಾವಣೆಯಲ್ಲಿ ಕೃಪಲಾನಿಯವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲಿಲ್ಲ; ಬದಲಿಗೆ ತಮ್ಮದೇ ಪಕ್ಷ ಕೆಎಂಪಿಪಿ ಕಟ್ಟಿ, 145 ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಆದರೆ, ಕೆಎಂಪಿಪಿ ಗೆಲ್ಲಲು ಸಾಧ್ಯವಾಗಿದ್ದು ಕೇವಲ 10 ಕ್ಷೇತ್ರಗಳಲ್ಲಿ.

ಫೈಜಾಬಾದ್ ಜಿಲ್ಲೆಯಲ್ಲಿ ಸ್ಪರ್ಧಿಸಿದ್ದ ಕೃಪಲಾನಿ ಯವರೇ ಸೋತುಹೋದರು! ಪ್ರಧಾನಿ ನೆಹರೂ ಅವರು ಕೃಪಲಾನಿಯವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸದೇ ಇರುವ ಯೋಚನೆ ಮಾಡಿದ್ದರು; ಅದನ್ನು ಕೃಪಲಾನಿಯವರು ಒಪ್ಪಲಿಲ್ಲ; ಪ್ರಜಾಪ್ರಭುತ್ವ ಎಂದ ಮೇಲೆ ಅರ್ಥಪೂರ್ಣ ಸ್ಪರ್ಧೆ ಇರಲೇಬೇಕು, ಆಗಲೇ ಅದಕ್ಕೊಂದು ಬೆಲೆ ಎಂದು ಪ್ರತಿಪಾದಿಸಿದ್ದರು. ಅದೇ ಚುನಾವಣೆ  ಯಲ್ಲಿ ಕೃಪಲಾನಿಯವರ ಪತ್ನಿ ಸುಚೇತಾ ಕೃಪಲಾನಿಯವರು ನವದೆಹಲಿಯಿಂದ ಸ್ಪರ್ಧಿಸಿ, ಗೆದ್ದರು. ಆದರೆ ನಂತರದ ವರ್ಷಗಳಲ್ಲಿ ಸುಚೇತಾ ಕೃಪಲಾನಿಯವರು ಕಾಂಗ್ರೆಸ್ ಸೇರಿ, ಹಲವು ಬಾರಿ ಚುನಾಯಿತರಾದರು ಮಾತ್ರವಲ್ಲ, ನಮ್ಮ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿಯೂ ಆಯ್ಕೆಯಾಗಿ ದಾಖಲೆ ಬರೆದರು. (1963-67ರ ಅವಧಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ).

ಜೆ.ಬಿ.ಕೃಪಲಾನಿಯವರು ನಂಬಿದ್ದ ತತ್ವಗಳಿಗೆ ಬಲವಾದ ಏಟು ಬಿದ್ದದ್ದು ಬಹುಶಃ 1975ರಲ್ಲಿ. ಅಲಹಾಬಾದ್ ನ್ಯಾಯಾ ಲಯವು ಇಂದಿರಾ ಗಾಂಧಿಯವರು ನಡೆಸಿದ್ದ ಚುನಾವಣಾ ಅಕ್ರಮಗಳನ್ನು ಗುರುತಿಸಿ, ಅವರ ಆಯ್ಕೆಯನ್ನು ಅಸಿಂಧು ಗೊಳಿಸಿದಾಗ, ಜಯಪ್ರಕಾಶ ನಾರಾಯಣ, ಆಚಾರ್ಯ ಕೃಪಾಲನಿ ಮೊದಲಾದವರು ಇಂದಿರಾ ಗಾಂಧಿಯವರ ರಾಜೀನಾಮೆ ಗೆ ಆಗ್ರಹಿಸಿದರು. ಅದಕ್ಕೆ ಉತ್ತರವಾಗಿ ಇಂದಿರಾ ಗಾಂಽಯವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದರು; ಸಾವಿರಾರು ಪ್ರಮುಖರ ಜತೆ ಕೃಪಲಾನಿಯವರು ಜೈಲಿಗೆ ಸೇರಬೇಕಾಯಿತು. ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರೋ, ಅದೇ ಸ್ವತಂತ್ರ ದೇಶದ ಸರಕಾರವು ತನ್ನನ್ನು ಈ ರೀತಿ, ಸೂಕ್ತ ಕಾರಣವಿಲ್ಲದೇ ಬಂಧನಕ್ಕೆ ಒಳಪಡಿಸಬಹುದು ಎಂದು ಆಚಾರ್ಯ ಕೃಪಲಾನಿಯವರು ಖಂಡಿತವಾಗಿಯೂ ನಿರೀಕ್ಷಿಸಿರಲಿಕ್ಕಿಲ್ಲ.

19ನೇ ಮಾರ್ಚ್ 1982ರಂದು ವಯೋಸಹಜ ಕಾರಣಗಳಿಂದ ನಿಧನರಾದಾಗ, ಆಚಾರ್ಯ ಕೃಪಲಾನಿಯವರಿಗೆ 93 ವರ್ಷ. ಅದಾಗಲೇ ಅವರು ‘ಮೈ ಡೇಸ್’ ಎಂಬ ಹೆಸರಿನಲ್ಲಿ ಆತ್ಮಕಥೆ ಬರೆದಿದ್ದರೂ, ಅವರ ಜೀವಿತಾವಧಿಯಲ್ಲಿ ಅದು ಪ್ರಕಟಗೊಳ್ಳುವ ಅವಕಾಶ ದೊರಕಲಿಲ್ಲ. 1989ರಲ್ಲಿ ಕೃಪಲಾನಿಯವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆಯಾಯಿತು. ಗಾಂಽಜಿ, ಲೋಹಿಯಾ ಮತ್ತು ಖಾನ್ ಅಬ್ದುಲ್ ಗಫರ್ ಖಾನ್ ಹೊರತು ಪಡಿಸಿ, ಕಾಂಗ್ರೆಸ್‌ನಲ್ಲಿದ್ದ ಬೇರೆಲ್ಲರೂ ‘ಮಾನಸಿಕ
ಹೇಡಿಗಳಂತೆ’ (ಮಾರಲ್ ಕೊವಾರ್ಡೈಸ್) ವರ್ತಿಸಿ, ನಮ್ಮ ದೇಶದ ವಿಭಜನೆಯನ್ನು ಒಪ್ಪಿಕೊಂಡರು ಎಂದು ಅದರಲ್ಲಿ ಅವರು ಬರೆದಿದ್ದಾರೆ. ಆದ್ದರಿಂದಲೇ ಇರಬೇಕು, ಕೆಲವು ಹಿರಿಯ ಕಾಂಗ್ರೆಸಿಗರಿಗೆ ಕೃಪಲಾನಿ ಎಂದರೆ ಅಷ್ಟಕ್ಕಷ್ಟೆ.

error: Content is protected !!