Saturday, 7th September 2024

ನೆಹರು ಕಾಲದಿಂದಲೂ ರಾಜ್ಯಕ್ಕೆ ಅನ್ಯಾಯ !

ವರ್ತಮಾನ

maapala@gmail.com

ಕೇಂದ್ರದ ಹಣಕಾಸು ಹಂಚಿಕೆ ವಿಚಾರ ಮುಂದಿಟ್ಟುಕೊಂಡು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿವಾದಕ್ಕೆ ಕಾರಣವಾಗುವುದರ ಜತೆಗೆ ಲೋಕಸಭೆ ಚುನಾವಣೆ ಸಿದ್ಧತೆಯಲ್ಲಿರುವ ಕಾಂಗ್ರೆಸ್‌ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂದಾದರೆ ಅದು ನೆಹರು ಕಾಲದಿಂದಲೂ ಇತ್ತು, ಈಗಲೂ ಇದೆ ಅಷ್ಟೆ.

ಕೇಂದ್ರ ಸರಕಾರದ ೨೦೨೪-೨೫ನೇ ಸಾಲಿನ ಲೇಖಾನುದಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ನೀಡಿದ ರಾಷ್ಟ್ರ ವಿಭಜನೆಯ ಹೇಳಿಕೆ ಇದೀಗ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರಕಾರ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಹಂಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿಯಿಂದಾಗಿ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದಕ್ಷಿಣ ಮತ್ತು ಉತ್ತರ ಭಾರತಗಳು ಪ್ರತ್ಯೇಕವಾಗುವಂತೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾದ ಅನಿವಾರ್ಯ ಎದುರಾಗುತ್ತದೆ ಎಂದು ಡಿ.ಕೆ.ಸುರೇಶ್ ಹೇಳಿದ್ದರು.

ಈ ಹೇಳಿಕೆ ಬರುತ್ತಿದ್ದಂತೆ ಪ್ರತಿಪಕ್ಷಗಳು ಕಾಂಗ್ರೆಸ್ ವಿರುದ್ಧ ದಾಳಿ ಆರಂಭಿಸಿದವು. ದೇಶ ಒಡೆಯುವುದೇ ಕಾಂಗ್ರೆಸ್‌ನ ಮನಃಸ್ಥಿತಿ. ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಉತ್ತರಿಸಬೇಕು. ೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆಗ ಅನುಮತಿ ನೀಡಿ ಸಹಿ ಹಾಕಿದ ಕಾಂಗ್ರೆಸ್‌ನವರು ಮತ್ತೆ ರಾಷ್ಟ್ರ ವಿಭಜನೆಯ ಸಂಚು ಹೆಣೆಯುತ್ತಿದ್ದಾರೆ. ದೇಶ ಒಗ್ಗಟ್ಟಾಗಿರುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ವಿದ್ರೋಹದ ಮನಃಸ್ಥಿತಿ ಯವರಿಂದ ದೇಶ ವಿಭಜನೆಯ ಮಾತು… ಹೀಗೆ ಪುಂಖಾನುಪುಂಖ ವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ.

ಅಖಂಡ ಭಾರತವು ಬ್ರಿಟಿಷರಿಂದ ಸ್ವತಂತ್ರವಾದಾಗ ಧರ್ಮದ ಕಾರಣಕ್ಕೆ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾಯಿತು. ಅದಕ್ಕೆ ಒಪ್ಪಿ ಸಹಿ ಹಾಕಿದ್ದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್. ಅಲ್ಪ ಸಂಖ್ಯಾತರ ತುಷ್ಟೀಕರಣ ನೀತಿಯನ್ನು ಆಗಿನಿಂದಲೇ ಅನುಸರಿಸಲಾರಂಭಿಸಿದ ಕಾಂಗ್ರೆಸ್ ಖುಷಿಯಿಂದಲೇ
ಪಾಕಿಸ್ತಾನ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಿತ್ತು. ಬಳಿಕ ೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಪಾಕಿಸ್ತಾನ ವಿಭಜನೆಯಾಗಿ ಬಾಂಗ್ಲಾದೇಶ ಹುಟ್ಟು
ಕೊಂಡಿತ್ತು. ಅದಕ್ಕೆ ಕಾರಣ ವಾಗಿದ್ದು ಆಗ ಭಾರತದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್. ಪಾಕಿಸ್ತಾನದ ಆಟೋಪಕ್ಕೆ ಕಡಿವಾಣ ಹಾಕಲು ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದಿಟ್ಟ ನಿರ್ಧಾರ ಕೈಗೊಂಡಿದ್ದರಾದರೂ ಕಾಂಗ್ರೆಸ್ ಕೈಯ್ಯಲ್ಲಿ ನೆರೆಯ ದೇಶ ವಿಭಜನೆ ಯಾಗಿದ್ದು ಮಾತ್ರ ಸುಳ್ಳಲ್ಲ.

ಹೀಗಾಗಿ ಡಿ.ಕೆ.ಸುರೇಶ್ ರಾಷ್ಟ್ರ ವಿಭಜನೆಯ ಮಾತು ಹೇಳಿದಾಗ ಬಿಜೆಪಿ ನಾಯಕರು ಇತಿಹಾಸವನ್ನು ಕೆದಕಿ ಕಾಂಗ್ರೆಸ್‌ನ ವಿಭಜಕ ನೀತಿಯನ್ನು ಜಗಜ್ಜಾಹೀರು ಗೊಳಿಸುತ್ತಿ ದ್ದಾರೆ. ರಾಜಕೀಯವಾಗಿ ಇದು ಬಿಜೆಪಿಗೆ ಅಗತ್ಯವೂ ಇದೆ. ಹೀಗಾಗಿಯೇ ಡಿ.ಕೆ.ಸುರೇಶ್ ಹೇಳಿಕೆ ಮುಂದಿಟ್ಟುಕೊಂಡು ದೇಶಾದ್ಯಂತ ಚರ್ಚೆ ಆರಂಭಿ ಸಿದೆ ಬಿಜೆಪಿ. ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಚಾರ ಪ್ರತಿಧ್ವನಿಸಿ ಕಾಂಗ್ರೆಸನ್ನು ಮುಜುಗರಕ್ಕೀಡು ಮಾಡಿದೆ. ನಾಯಕರು ಏನೇ ಸಮರ್ಥನೆ ಕೊಟ್ಟರೂ ಅದು ಪರಿಣಾಮ ಕಾರಿಯಾಗುತ್ತಿಲ್ಲ. ಏಕೆಂದರೆ, ಡಿ.ಕೆ. ಸುರೇಶ್ ನೀಡಿದ ಹೇಳಿಕೆ ಅಷ್ಟೊಂದು ಗಂಭೀರವಾಗಿದೆ.

ಹಾಗೊಂದು ವೇಳೆ ಅನುದಾನ ಹಂಚಿಕೆ ವಿಷಯ ದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ದೇಶ ವಿಭಜನೆ ಮಾಡಬೇಕಾದ ಪರಿಸ್ಥಿತಿ
ಬಂದಿದ್ದರೆ ಜವಹರಲಾಲ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ದೇಶ ವಿಭಜನೆ ಆಗಬೇಕಿತ್ತು. ಏಕೆಂದರೆ, ಆಗಿ ನಿಂದಲೂ ಅನುದಾನ ಹಂಚಿಕೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಲೇ ಇತ್ತು. ಮಹಾರಾಷ್ಟ್ರ ಕೂಡ ಇದಕ್ಕೆ ಹೊರತಾಗಿಲ್ಲ. ಕರ್ನಾಟಕದವರೇ ಆದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ದಕ್ಷಿಣ ಭಾರತಕ್ಕೆ ಒಂದಷ್ಟು ಅನುಕೂಲ ಸಿಕ್ಕಿದ್ದು ಹೊರತು ಪಡಿಸಿ ಉಳಿದೆಲ್ಲ ಸರಕಾರಗಳೂ ದಕ್ಷಿಣ ಭಾರತದಿಂದ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ ಎಂಬ ಕಾರಣಕ್ಕೆ ಈ
ಭಾಗಕ್ಕೆ ಹೆಚ್ಚು ಅನುದಾನ ನೀಡಿದ ಉದಾಹರಣೆಗಳಿಲ್ಲ.

ಹಾಗೆಂದು ಅದನ್ನು ಮುಂದಿಟ್ಟುಕೊಂಡು ಯಾರೂ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಇಡಲಿಲ್ಲ. ನಮಗೆ ನ್ಯಾಯ ಕೊಡಿ ಎಂದು ಕೇಳಿದರೇ ಹೊರತು ನಮ್ಮ ಪಾಲು ನಮಗೆ ಕೊಡದಿದ್ದರೆ ದೇಶ ವಿಭಜನೆ ಮಾಡಬೇಕು ಎಂದು ಹೇಳಲಿಲ್ಲ. ಏಕೆಂದರೆ, ನರೇಂದ್ರ ಮೋದಿ ಪ್ರಧಾನಿ ಯಾಗುವವರೆಗೆ ತೆರಿಗೆ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ, ಕರ್ನಾಟಕಕ್ಕೆ ತಾರತಮ್ಯ ಎಂಬ ಮಾತುಗಳು ಕೇಳಿಬಂದಿರಲಿಲ್ಲ. ಹಾಗೆಂದು ತಾರತಮ್ಯ ಆಗುತ್ತಿರಲಿಲ್ಲ ಎಂದು ಅರ್ಥವಲ್ಲ. ವಿಶೇಷವೆಂದರೆ, ಇಂತಹ ಅನ್ಯಾಯ, ತಾರತಮ್ಯದ ಆರೋಪ ಶುರುವಾಗಿದ್ದು ೨೦೧೩- ೧೮ರ ಅವಧಿಯಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರ ದಲ್ಲಿದ್ದಾಗ ಮತ್ತು ೨೦೧೪ರಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ.

ಸ್ವಲ್ಪ ಮಟ್ಟಿಗೆ ತೆಲಂಗಾಣದಲ್ಲಿ ಕೆ.ಸಿ.ಚಂದ್ರಶೇಖರ್ ನೇತೃತ್ವದ ಪಕ್ಷ ಅಧಿಕಾರದಲ್ಲಿದ್ದಾಗ ಈ ಮಾತು ಕೇಳಿಬಂತಾದರೂ ಉಳಿದ ರಾಜ್ಯಗಳಲ್ಲಿ ಆ ರೀತಿಯ ಆರೋಪಗಳು ಕೇಳಿಬರಲಿಲ್ಲ. ಇದೀಗ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕೂಗು ಜೋರಾ
ಯಿತು. ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಕೇಂದ್ರದ ನರೇಂದ್ರ ಮೋದಿ ಅವರ ಸರಕಾರವನ್ನು ಟೀಕಿಸುವುದು ಜೋರಾಯಿತು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ೧೪ನೇ ಹಣಕಾಸು ಆಯೋಗದಡಿ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆ ಯನ್ನು ೧೫ನೇ ಹಣಕಾಸು ಆಯೋಗವು ಶೇ.೪.೭೧೩ ರಿಂದ ಶೇ. ೩.೬೪೭ಕ್ಕೆ ಇಳಿಸಿರುವುದು. ಇದರಿಂದಾಗಿ ರಾಜ್ಯವು ದೇಶಕ್ಕೆ ಸಂಗ್ರಹಿಸಿಕೊಡುವ ಪ್ರತಿ ೧೦೦ ರುಪಾಯಿಗೆ ೧೨.೫೦ ರುಪಾಯಿ ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ.

ಕರ್ನಾಟಕದಿಂದ ವಾರ್ಷಿಕ ೪ ಲಕ್ಷ ಕೋಟಿ ರು. ಆದಾಯ ಗಳಿಕೆ ಯಾದರೆ ಇದಕ್ಕೆ ಪ್ರತಿಯಾಗಿ ಕೇಂದ್ರದಿಂದ ನಮಗೆ ಬರುವುದು ಸುಮಾರು ೫೦,೦೦೦ ಕೋಟಿ ರುಪಾಯಿ ಮಾತ್ರ. ೧೫ನೇ ಹಣಕಾಸು ಆಯೋಗದ ಶಿಫಾರಸು ಗಳಿಂದ ಕರ್ನಾಟಕಕ್ಕೆ ೫ ವರ್ಷಗಳ ಅವಧಿಯಲ್ಲಿ ರೂ. ೬೨,೦೦೦ ಕೋಟಿ ನಷ್ಟ ಆಗಲಿದೆ ಎನ್ನುವುದು ಕಾಂಗ್ರೆಸ್ ಆರೋಪ. ಇದಕ್ಕೆ ಪ್ರತಿಯಾಗಿ ಕೇಂದ್ರ ದಿಂದ ಅನ್ಯಾಯವಾಗಿಲ್ಲ ಎಂದು ಪ್ರತಿಪಾದಿಸುವ ಬಿಜೆಪಿ, ಯುಪಿಎ ಅವಧಿಯಲ್ಲಿ ೨೦೦೪-೨೦೧೪ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆ ಯಲ್ಲಿ ೮೧,೭೯೫.೧೯ ಕೋಟಿ ರು. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ ೬೦,೭೭೯.೮೪ ಕೋಟಿ ರು. ಬಂದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ೨೦೧೪-೨೦೨೩ ಡಿಸೆಂಬರ್‌ವರೆಗೆ ತೆರಿಗೆ ಹಂಚಿಕೆಯಲ್ಲಿ ೨,೮೨,೭೯೧ ಕೋಟಿ ರು. ಮತ್ತು ಅನುದಾನ ಹಂಚಿಕೆಯಲ್ಲಿ ೨,೦೮,೮೮೨.೦೨ ಕೋಟಿ ರು. ಬಂದಿದೆ. ಇದು ಶೇ. ೨೫೦ಕ್ಕೂ ಹೆಚ್ಚು ಎಂದು ಹೇಳುತ್ತಿದ್ದಾರೆ. ಇಲ್ಲಿ ಇಬ್ಬರೂ ಹೇಳುತ್ತಿರುವುದು ಸತ್ಯ.

ಇಲ್ಲಿ ಕೇಂದ್ರದ ಬಗ್ಗೆ ಆರೋಪಿಸಲು ಇನ್ನೂ ಒಂದು ಕಾರಣವಿದೆ. ರಾಜ್ಯಗಳಿಂದ ಬಂದ ಅನುದಾನವನ್ನು ಒಟ್ಟು ಸೇರಿಸಿ ಹಂಚುವಾಗ ಕೇಂದ್ರ ಸರಕಾರ ಇದೀಗ ತಲಾ ಆದಾಯ ಮತ್ತು ಜನಸಾಂದ್ರತೆ ಲೆಕ್ಕ ಹಾಕುತ್ತಿದೆ. ಅತಿ ಕಡಿಮೆ ತಲಾ ಆದಾಯ ಮತ್ತು ಹೆಚ್ಚು ಜನಸಾಂಧ್ರತೆ ಇರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಕಾಂಗ್ರೆಸ್‌ನವರು ಆಗಾಗ್ಗೆ ಪ್ರಸ್ತಾಪಿಸುವ ಸಮಸಮಾಜ ನಿರ್ಮಾಣಕ್ಕೆ ಇದು ಅನಿವಾರ್ಯವಾದರೂ ಉತ್ತರ ಭಾರತಕ್ಕೆ ಹೋಲಿಸಿದರೆ ಕಡಿಮೆ ಜನ ಸಾಂಧ್ರತೆ ಇರುವ ಮತ್ತು ಹೆಚ್ಚು ತಲಾ ಆದಾಯ ಹೊಂದಿರುವ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆ ಪ್ರಮಾಣ ಕಡಿಮೆಯಾಗಿದೆ. ಇದುವೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗಿಗೆ ಕಾರಣವಾಗಿದೆ.

ಕಳೆದ ಒಂದು ದಶಕದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆ ಮತ್ತು ಸಹಾಯಾನುದಾನ ಕಡಿಮೆಯಾಗಿರುವುದು ಸತ್ಯ. ರಾಜ್ಯದ ಯೋಜನೆಗಳಿಗೆ ನೆರವಿನ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ಜೀವನ್ ಜ್ಯೋತಿ ಭಿಮಾ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್ ನಿಧಿ, ಭೇಟಿ ಪಡಾವೋ, ಭೇಟಿ ಬಚಾವೋ… ಹೀಗೆ ಹತ್ತಾರು
ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಜಾರಿಗೊಳಿಸಿದೆ. ಇದೆಲ್ಲವನ್ನೂ ಪರಿಗಣಿಸಿದಾಗ ಕೇಂದ್ರದಿಂದ ರಾಜ್ಯಗಳಿಗೆ ಬರುವ ಸಹಾಯ
ಹಿಂದೆಂದಿಗಿಂತಲೂ ಹೆಚ್ಚು. ಉದಾಹರಣೆಗೆ ಕಳೆದ ಐದು ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಗೆಂದು ರಾಜ್ಯಕ್ಕೆ ಕೇಂದ್ರದಿಂದ ೩೦ ಸಾವಿರ ಕೋಟಿ ರು. ಬಂದಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ೧೩೨೭.೪೩ ಕೋಟಿ ರೂ. ಬಿಡುಗಡೆಯಾಗಿದೆ.

ರೈಲ್ವೆ, ಬಂದರು, ವಿಮಾನಯಾನ ಅಭಿವೃದ್ಧಿಗೂ ಸಾಕಷ್ಟು ಅನುದಾನ ಬಂದಿದೆ. ಇವೆಲ್ಲವೂ ಮೂಲ ಸೌಕರ್ಯ ಯೋಜನೆಗಳಾಗಿರುವುದರಿಂದ ಬಂದಿರುವ ಹಣ
ಕ್ಕಿಂತ ಮುಂದೆ ಆಗುವ ಅನುಕೂಲಗಳು ಹೆಚ್ಚು. ಆದರೆ, ರಾಜಕೀಯ ಲೆಕ್ಕಾಚಾರದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳು ಲೆಕ್ಕಕ್ಕೆ ಬರುತ್ತಿಲ್ಲ. ಇಲ್ಲಿ ಲೆಕ್ಕ ಹಾಕುವುದು ಏನಿದ್ದರೂ ಕೇಂದ್ರದಿಂದ ನೇರವಾಗಿ ಸಿಗುವ ಹಣದ ಬಗ್ಗೆ ಮಾತ್ರ. ಮೊದಲೆಲ್ಲ ಪ್ರತಿಪಕ್ಷದಲ್ಲಿದ್ದವರಿಗೆ ಈ ರೀತಿಯ ಲೆಕ್ಕಾಚಾರಗಳು ಗೊತ್ತಿರಲಿಲ್ಲ. ಆದರೆ, ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕರಿಗೆ ಇಂತಹ ಲೆಕ್ಕಾಚಾರಗಳು ಗೊತ್ತಿತ್ತು. ಹೀಗಾಗಿ ಅವರು ಪ್ರತಿಪಕ್ಷ ಸ್ಥಾನಕ್ಕೆ ಹೋದ ಕೂಡಲೇ ಕೇಂದ್ರ ಪ್ರಾಯೋಜಿತ ಯೋಜನೆಗಳ ಬಗ್ಗೆ ಹೆಚ್ಚು ಪ್ರಸ್ತಾಪಿಸದೇ ಕೇಂದ್ರದಿಂದ ರಾಜ್ಯಗಳಿಗೆ ಬರುವ ತೆರಿಗೆ ಹಂಚಿಕೆ ಮತ್ತು ಸಹಾಯಾನುದಾನವನ್ನು ಮಾತ್ರ ಲೆಕ್ಕ ಹಾಕಿ ಕೇಂದ್ರ ಸರಕಾರದ ವಿರುದ್ಧ ಅನ್ಯಾಯ, ತಾರತಮ್ಯದ ಆರೋಪ ಮಾಡುತ್ತಿದ್ದಾರೆ. ಏಕೆಂದರೆ, ಜನಸಾಮಾನ್ಯರಿಗೆ ಸರಕಾರದ ಆಂತರಿಕ ಲೆಕ್ಕಾಚಾರ ಗಳು ತಿಳಿದಿರುವುದಿಲ್ಲ ಎಂಬುದು ಈ ವಿಚಾರದಲ್ಲಿ ರಾಜಕೀಯ ಮಾಡುವವರಿಗೆ ಚೆನ್ನಾಗಿ ಗೊತ್ತಿದೆ.

ರಾಷ್ಟ್ರ ವಿಭಜನೆಯ ಕುರಿತ ಡಿ.ಕೆ.ಸುರೇಶ್ ಹೇಳಿಕೆಯ ಹಿಂದೆ ಇರುವುದೂ ಇದೇ ರಾಜಕೀಯ ಲೆಕ್ಕಾಚಾರ. ಅನುದಾನ ಹಂಚಿಕೆ ತಾರತಮ್ಯದ ಹೆಸರಿನಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿರುವುದು ಮತಗಳಿಕೆಯ ಮಾರ್ಗ. ಏಕೆಂದರೆ, ಗುರುವಾರ ಬಜೆಟ್ ಮಂಡನೆ ವೇಳೆ, ‘ಇದೀಗ ಮಧ್ಯಂತರ ಬಜೆಟ್ ಕೊಡುತ್ತೇವೆ. ಮತ್ತೆ ಅಧಿಕಾರಕ್ಕೆ ಬಂದು ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಕೊಡುತ್ತೇವೆ. ಆಗ ಹೊಸ ಯೋಜನೆಗಳನ್ನು ಪ್ರಕಟಿಸುತ್ತೇವೆ’ ಎಂಬ ನರೇಂದ್ರ ಮೋದಿ ಸರಕಾರದ ಆತ್ಮವಿಶ್ವಾಸ ಸಹಜವಾಗಿಯೇ ಕಾಂಗ್ರೆಸ್ ನಾಯಕರನ್ನು ಚಿಂತೆಗೀಡುಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಮೇಲಿಂದ ಮೇಲೆ ಬೀಳುತ್ತಿರುವ ಪೆಟ್ಟುಗಳು, ಇಂಡಿಯ ಮೈತ್ರಿಕೂಟದ ಬಿಕ್ಕಟ್ಟು ಮತ್ತೆ ಅಧಿಕಾರಕ್ಕೆ ಬರುವ ಕಾಂಗ್ರೆಸ್‌ನ ಅತಿ ಆಸೆಗೆ ಧಕ್ಕೆ ತಂದಿದೆ.

ಉತ್ತರ ಭಾರತದಲ್ಲಂತೂ ಪಕ್ಷ ಕಳೆದ ಚುನಾವಣೆಗಿಂತಲೂ ಹೀನಾಯ ಪ್ರದರ್ಶನ ತೋರುವ ಆತಂಕ ಎದುರಾಗಿದೆ. ಹೀಗಾಗಿ ದಕ್ಷಿಣ ಭಾರತಕ್ಕೆ ಅನ್ಯಾಯ ವಾಗಿದೆ. ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಡಿ.ಕೆ.ಸುರೇಶ್ ಹೇಳಿರುವುದು, ಉತ್ತರ ಭಾರತದಲ್ಲಿ ಕಳೆದುಕೊಳ್ಳುವುದನ್ನು ಬಿಜೆಪಿ ಶಕ್ತಿ ಕಡಿಮೆ ಇರುವ ದಕ್ಷಿಣ ಭಾರತದಲ್ಲಾ ದರೂ ಪಡೆಯುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ.

ಲಾಸ್ಟ್‌ಸಿಪ್: ಕಾಂಗ್ರೆಸ್‌ನವರ ಹೇಳಿಕೆ ಗಮನಿಸಿದರೆ ಏಕೋ ಕೋತಿ ಮರಕ್ಕೆ ಸಿಕ್ಕಿಸಿದ ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಕಥೆ ನೆನಪಾಗುತ್ತz

Leave a Reply

Your email address will not be published. Required fields are marked *

error: Content is protected !!