Thursday, 22nd February 2024

ಜನಮನದ ದನಿ ಎನ್‌ಇಪಿ ಬೇಕು ಅಭಿಯಾನ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಮಕ್ಕಳ ಸರ್ವಾಂಗೀಣ ಪ್ರಗತಿಯಾಗುವ ರೀತಿಯಲ್ಲಿ ಬದಲಾವಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ರೂಪಿಸಿದ್ದು, ಇದಕ್ಕಾಗಿ ಕೇಂದ್ರ ಸರಕಾರ ‘ನಿಪುಣ್ ಭಾರತ್’ ಯೋಜನೆಯನ್ನು ಜಾರಿಮಾಡಿದೆ. ವಿದ್ಯಾರ್ಥಿ ತನ್ನ ಜೀವನದ ಗುರಿಯತ್ತ ಹೆಚ್ಚಿನ ಗಮನವನ್ನು ಕೊಡುವಂತೆ ಇಲ್ಲಿ ಅವರನ್ನು ಸಿದ್ಧಪಡಿಸಲಾಗುತ್ತದೆ.

ಇಂದಿನ ಯುವಜನಾಂಗವೇ ದೇಶದ ಮುಂದಿನ ಭವಿಷ್ಯ. ಅವರನ್ನು ನಾವು ಹೇಗೆ ಸುಶಿಕ್ಷಿತ, ಸುಶೀಲ, ಸೃಜನಶೀಲರನ್ನಾಗಿ ಬೆಳೆಸುತ್ತೇವೆಯೋ ಅಷ್ಟು ನಮ್ಮ ದೇಶ ಸುಭದ್ರವಾಗಿರುತ್ತದೆ. ಇದಕ್ಕೆಲ್ಲ ಭದ್ರಬುನಾದಿ ದೇಶದ ಶಿಕ್ಷಣ ವ್ಯವಸ್ಥೆ. ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಣೆ ಆದಾಗಲೇ ನಮ್ಮ ಯುವಪೀಳಿಗೆಯ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಶಿಕ್ಷಣವು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರಬೇಕು, ಕಲಿಕೆಯಲ್ಲಿ ಪ್ರಾಯೋಗಿಕ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂಬುದು ಹಲವು ತಜ್ಞರ ಅಭಿಪ್ರಾಯ.

ದೇಶದಲ್ಲಿ ೩೫ ವರ್ಷಗಳ ಹಿಂದೆ ೧೯೮೬ರಲ್ಲಿ ರಚನೆಯಾದ ರಾಷ್ಟ್ರೀಯ ಶಿಕ್ಷಣ ನೀತಿಯೇ ಈ ದಶಕದಲ್ಲೂ ಮುಂದುವರಿದಿದೆ. ಹಾಗಾದರೆ, ಆ ಶಿಕ್ಷಣ ನೀತಿ ಇವತ್ತಿನ ಅಗತ್ಯಗಳಿಗೆ ಪೂರಕವೇ? ದೇಶದ ಮಕ್ಕಳಿಗೆ ಇದೇ ಶಿಕ್ಷಣ ವ್ಯವಸ್ಥೆ ಇದ್ದರೆ ಸಾಕೇ? ಅದರಲ್ಲಿನ ನ್ಯೂನತೆಗಳೇನು? ಸುಧಾರಣೆ ಬೇಡವೇ? ಎನ್ನುವ ಪ್ರಶ್ನೆ ಹಲವರನ್ನು ಕಾಡಿತ್ತು. ಅದರಲ್ಲಿ ಇಂದಿನ ದಿನಮಾನಕ್ಕೆ ಸರಿಹೊಂದಬಲ್ಲ, ಇಂದಿನ ಅಗತ್ಯಕ್ಕೆ ತಕ್ಕಂಥ ಅಂಶಗಳನ್ನು ಸೇರಿಸಬೇಕು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆ ನಿಟ್ಟಿನಲ್ಲಿ ಮಕ್ಕಳ ಸಮಗ್ರ ಬೆಳವಣಿಗೆ, ಬೌದ್ಧಿಕ ವಿಕಸನ ಹಾಗೂ ತಾರ್ಕಿಕ ಚಿಂತನೆಯನ್ನು ಹೆಚ್ಚು ಮಾಡಲು ರೂಪಿತಗೊಂಡಿದ್ದೇ ‘ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦’ (ಎನ್‌ಇಪಿ).

ಆದರೆ ರಾಜ್ಯದ ಕಾಂಗ್ರೆಸ್ ಸರಕಾರ ಹೊಸ ಶಿಕ್ಷಣ ನೀತಿಯ ಅನುಷ್ಠಾನವನ್ನು ತೀವ್ರವಾಗಿ ವಿರೋಧಿಸಿ, ಅದನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಮುಂದುವರಿಯು
ತ್ತಿದೆ. ಎಸ್‌ಇಪಿ ಎಂಬ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಆದರೆ ಸರಕಾರದ ನಡೆಯನ್ನು ವಿರೋಧಿಸಿ, ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿಯು ನವೆಂಬರ್ ೧೫ರಿಂದ ೩೦ರವರೆಗೆ ರಾಜ್ಯಾದ್ಯಂತ ‘ಎನ್‌ಇಪಿ ಬೇಕು’ ಸಹಿ ಸಂಗ್ರಹ ಅಭಿಯಾನವನ್ನು ಆಯೋಜನೆ ಮಾಡಿದೆ. ಅಭಿಯಾನವು ಇಂದು ಸಮಾಪನಗೊಳ್ಳುತ್ತಿದ್ದು ರಾಜ್ಯದ ಕೋಟ್ಯಂತರ ಜನ ಸಹಿ ಹಾಕುವ ಮೂಲಕ ಎನ್‌ಇಪಿ ಜಾರಿಯನ್ನು ಬೆಂಬಲಿಸಿದ್ದಾರೆ. ಪೀಪಲ್ಸ್ ಫಾರಮ್ ಫಾರ್ ಎಜು ಕೇಷನ್, ವಿದ್ಯಾಭಾರತಿ, ಎಬಿವಿಪಿ, ಅಖಿಲ ಭಾರತೀಯ ಶೈಕ್ಷಣಿಕ ಮಹಾಸಂಘ ಹೀಗೆ ರಾಜ್ಯದ ವಿವಿಧ ಶಿಕ್ಷಣ ಸಂಘಟನೆಗಳು ಈ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದು, ರಾಜ್ಯದಲ್ಲಿ ಇದೀಗ ಎಲ್ಲ ಸ್ತರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಎನ್‌ಇಪಿ-೨೦೨೦ರ ಅಳವಡಿಕೆಯ ಅಗತ್ಯತೆಯ ಪರ ಸಹಿ ಹಾಕಿದ್ದಾರೆ.

ಇಸ್ರೋದ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಹೊಸ ಶಿಕ್ಷಣ ನೀತಿ ೨೦೨೦ರ ಕರಡು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಕ್ಕಳ ಸರ್ವಾಂಗೀಣ ಪ್ರಗತಿಯಾಗುವ ರೀತಿಯಲ್ಲಿ ಬದಲಾವಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ರೂಪಿಸಿದ್ದು, ಇದಕ್ಕಾಗಿ ಕೇಂದ್ರ ಸರಕಾರ ‘ನಿಪುಣ್ ಭಾರತ್’ ಯೋಜನೆಯನ್ನು ಜಾರಿ ಮಾಡಿದೆ. ಈ ಹೊಸ ನೀತಿಯ ಪ್ರಕಾರ ಶಿಕ್ಷಣವನ್ನು ೫+೩+೩+೪ರಂತೆ ಒಟ್ಟು ನಾಲ್ಕು ಹಂತಗಳಲ್ಲಿ ವರ್ಗೀಕರಿಸಲಾಗಿದೆ. ಇಲ್ಲಿ
ಆರಂಭದ ೫ ವರ್ಷಗಳು ಬುನಾದಿ ಶಿಕ್ಷಣವಾಗಿದ್ದು, ೩ರಿಂದ ೮ರ ವಯೋಮಾನದ ಮಕ್ಕಳು ೩ ವರ್ಷಗಳ ಕಾಲ ಶಾಲಾಪೂರ್ವ ಹಂತ (ಅಂಗನವಾಡಿ) ಮತ್ತು ೨ ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೆ. ಮುಂದಿನ ೩ ವರ್ಷಗಳ ಹಂತವು ಪೂರ್ವಸಿದ್ಧತಾ ಹಂತವಾಗಿದ್ದು, ಇಲ್ಲಿ ೮ರಿಂದ ೧೧ ವರ್ಷದ ಮಕ್ಕಳು ೩, ೪ ಮತ್ತು ೫ನೇ ತರಗತಿಗಳಲ್ಲಿ ಕಲಿಯುತ್ತಾರೆ.

ನಂತರದ ಹಂತವನ್ನು ಮಾಧ್ಯಮಿಕ ಹಂತ ಎಂದು ಕರೆಯಲಾಗಿದ್ದು, ೧೧ರಿಂದ ೧೪ ವರ್ಷದ ಮ್ಕಕಳು ೬ರಿಂದ ೮ನೇ ತರಗತಿಯ ಶಿಕ್ಷಣವನ್ನು ಪಡೆಯುತ್ತಾರೆ. ಕೊನೆಯ ಹಂತ ಪ್ರೌಢಹಂತ. ಇದರಲ್ಲಿ ೧೪ರಿಂದ ೧೮ ವಯಸ್ಸಿನ ಮಕ್ಕಳು ೯ರಿಂದ ೧೨ನೇ ತರಗತಿಯನ್ನು ವ್ಯಾಸಂಗ ಮಾಡುತ್ತಾರೆ. ಬುನಾದಿ ಹಂತದಲ್ಲಿ ಮಕ್ಕಳ ಆರೈಕೆಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಆಟ, ಚಟುವಟಿಕೆ ಆಧಾರಿತ ಕಲಿಕೆಗೆ ಮಹತ್ವ ಕೊಟ್ಟು ಮಕ್ಕಳಲ್ಲಿ ಉತ್ತಮ ನಡವಳಿಕೆ, ಸೌಜನ್ಯ, ವೈಯಕ್ತಿಕ ಮತ್ತು ಸಾಮಾಜಿಕ ನೈರ್ಮಲ್ಯ, ಸಹಕಾರ ಮೊದಲಾದ ಜೀವನಮೌಲ್ಯಗಳನ್ನು ಮೂಡಿಸುವತ್ತ ಗಮನ ಹರಿಸಲಾಗುತ್ತದೆ. ಪೂರ್ವಸಿದ್ಧತಾ ಹಂತದಲ್ಲಿ ಪ್ರಾಯೋಗಿಕ ಕಲಿಕೆಯನ್ನು ಕೇಂದ್ರೀಕರಿಸಲಾಗುತ್ತದೆ.

ಪಠ್ಯಪುಸ್ತಕಗಳೊಂದಿಗೆ ಶಾಲಾ ತರಗತಿ ಕೋಣೆಯ ಕಲಿಕೆಯಿಂದ ಮಕ್ಕಳಲ್ಲಿ ಸಾಕ್ಷರತೆಯನ್ನು ಮೂಡಿಸುವ ಕೆಲಸ ಮಾಡಲಾಗುತ್ತದೆ. ಮಾಧ್ಯಮಿಕ ಹಂತದಲ್ಲಿ ಆಯಾ ವಿಷಯಗಳ ಶಿಕ್ಷಕರ ಮೂಲಕ ವಿಜ್ಞಾನ, ಗಣಿತ, ಕಲೆ, ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳನ್ನು ಕಲಿಸಲಾಗುತ್ತದೆ. ಈ ಹಂತದಲ್ಲಿ ಚರ್ಚೆ, ಸಂವಹನಗಳಿಂದಾಗಿ ಮಕ್ಕಳ ಬೌದ್ಧಿಕ ಸಾಮರ್ಥ್ಯದ ವಿಕಸನವಾಗುತ್ತದೆ. ಮುಂದಿನ ಪ್ರೌಢ ಹಂತವು ೪ ವರ್ಷಗಳ ವಿಷಯಾಧರಿತ ಶಿಕ್ಷಣವನ್ನು ಒಳಗೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗೆ ವಿಷಯದ ಆಯ್ಕೆಯ ಅವಕಾಶವನ್ನು ಕಲ್ಪಿಸಲಾಗುತ್ತದೆ.

ಮಕ್ಕಳನ್ನು ಆಳವಾದ, ತಾರ್ಕಿಕ ಚಿಂತನೆಗೆ ಹಚ್ಚುವುದು ಈ ಹಂತದ ಗುರಿ. ವಿದ್ಯಾರ್ಥಿ ತನ್ನ ಜೀವನದ ಗುರಿಯತ್ತ ಹೆಚ್ಚಿನ ಗಮನವನ್ನು ಕೊಡುವಂತೆ ಇಲ್ಲಿ ಅವರನ್ನು ಸಿದ್ಧಪಡಿಸಲಾಗುತ್ತದೆ. ಮುಂದೆ ಪದವಿ ಶಿಕ್ಷಣ ಹೇಗೆ ಎಂಬ ಕುತೂಹಲ ಇರಬಹುದು. ಹಿಂದೆ ಪದವಿ ಎಂದರೆ ಮೂರು ವರ್ಷ ಮಾತ್ರವೇ ಇತ್ತು. ಆದರೆ ಎನ್‌ಇಪಿ ಪ್ರಕಾರ ಪದವಿಯನ್ನು ಮೂರು ಅಥವಾ ನಾಲ್ಕು ವರ್ಷ ಕಲಿಯಬಹುದಾಗಿದೆ. ಅದೇ ಈ ನೀತಿಯ ವೈಶಿಷ್ಟ್ಯ. ಇಲ್ಲಿ ವಿದ್ಯಾರ್ಥಿಗಳು ಪೂರ್ಣ ಕೋರ್ಸ್ ಮುಗಿಸದೆ ಮಧ್ಯದಲ್ಲಿ ಕೋರ್ಸ್‌ನಿಂದ ನಿರ್ಗಮಿಸಬಹುದು. ಆದರೆ ಇದನ್ನು ‘ಕೋರ್ಸ್ ಅಪೂರ್ಣ’ ಎಂದು ಪರಿಗಣಿಸುವುದಿಲ್ಲ. ಒಂದು ವರ್ಷ ಕಲಿತರೆ ವೃತ್ತಿಪರ ಶಿಕ್ಷಣ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯದಲ್ಲಿ ಪ್ರಮಾಣಪತ್ರ ಸಿಗುತ್ತದೆ.

ಎರಡನೇ ವರ್ಷ ಪೂರ್ಣ ಮಾಡಿದರೆ ಡಿಪ್ಲೊಮಾ ಪ್ರಮಾಣ ಪತ್ರ ದೊರೆಯಲಿದೆ. ಮೂರನೇ ವರ್ಷ ಪೂರ್ಣ ಮಾಡಿದರೆ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ. ವಿದ್ಯಾರ್ಥಿಯು ಐಚ್ಛಿಕವಾಗಿ ೪ ವರ್ಷದ ಡಿಗ್ರಿಯನ್ನು ಆಯ್ದುಕೊಂಡಿದ್ದು ಅದನ್ನು ಪೂರ್ಣಗೊಳಿಸಿದರೆ, ಆತ ಯಾವುದೇ ವಿಷಯವನ್ನು ತೆಗೆದುಕೊಂಡು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬಹುದು. ನಾಲ್ಕು ವರ್ಷ ಪದವಿ ಶಿಕ್ಷಣ ಪಡೆದವರು ಸ್ನಾತಕೋತ್ತರ ಪದವಿ ಪಡೆಯಲು ಮುಂದೆ ಆರು ತಿಂಗಳು ಶಿಕ್ಷಣ ಪಡೆದರೆ ಸಾಕಾಗುತ್ತದೆ. ಹೀಗೆ ೩೪ ವರ್ಷಗಳ ನಂತರ ಜಾರಿಗೆ ಬರುತ್ತಿರುವ ೨೧ನೇ ಶತಮಾನದ ಮೊದಲ ಶಿಕ್ಷಣ ನೀತಿಯು, ಭಾರತೀಯ ಜ್ಞಾನ ಪರಂಪರೆಯನ್ನು ಆಧರಿಸಿ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಗೌರವಿಸುವ ಉತ್ತಮ ನಾಗರಿಕರನ್ನು ರೂಪಿಸಲು ಯೋಜನೆಯನ್ನು ಹಾಕಿಕೊಂಡಿದೆ. ಈಗಿನ ಹೊಸ ಶಿಕ್ಷಣ ನೀತಿಯನ್ನು ೧೯೬೪-೬೬ರಲ್ಲಿ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲಿ ರಚಿಸಿರುವ ಭಾರತೀಯ
ಶಿಕ್ಷಣ ಆಯೋಗವನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕಿಂತ ಮೊದಲು (೧೮೩೫ರಲ್ಲಿ) ಮೆಕಾಲೆ ಮಿನಿಟ್ ಹೆಸರಿನಲ್ಲಿ ಭಾರತೀಯರಿಗೆ ಆಂಗ್ಲ ಶಿಕ್ಷಣ ಕೊಡಿಸುವ ಉದ್ದೇಶ ಹೊತ್ತ
ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿತ್ತು. ನಂತರ ವುಡ್ಸ್ ಡಿಸ್ಪೆಚ್ (೧೮೫೪), ಭಾರತೀಯ ಶಿಕ್ಷಣ ಆಯೋಗ (೧೮೮೨), ಇಂಡಿಯನ್ ಯೂನಿವರ್ಸಿಟಿ ಕಮಿಷನ್ (೧೯೦೪), ಗೋಕುಲೇ ಬಿಲ್ (೧೯೧೨) ಸ್ಯಾಡ್ಲರ್ ಕಮಿಷನ್ (೧೯೧೭-೧೯), ಹಾರ್ಟ್ಸ್ ಕಮಿಷನ್ (೧೯೨೯), ಸಾರ್ಜೆಂಟ್ ವರದಿಗಳು (೧೯೪೪) ಜಾರಿಗೆ ಬಂದವು. ಸ್ವಾತಂತ್ರ್ಯಾನಂತರ ಯೂನಿವರ್ಸಿಟಿ ಎಜುಕೇಷನ್ ಕಮಿಷನ್ (ರಾಧಾಕೃಷ್ಣ ಆಯೋಗ, ೧೯೪೮-೪೯), ಸೆಕೆಂಡರಿ ಎಜುಕೇಷನ್ ಕಮಿ
ಷನ್ (ಮೊದಲಿಯಾರ್ ಆಯೋಗ, ೧೯೫೨-೫೩), ಭಾರತೀಯ ಶಿಕ್ಷಣ ಆಯೋಗ (ಕೊಟ್ಟಾರಿ ವರದಿ, ೧೯೬೪-೬೬), ರಾಷ್ಟ್ರೀಯ ಶಿಕ್ಷಣ ನೀತಿ (೧೯೮೬)ಯನ್ನು ಜಾರಿಗೆ ತರಲಾಯಿತು.

ಇದೀಗ ಅನುಷ್ಠಾನಕ್ಕೆ ಬರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಈ ಎಲ್ಲ ಹಳೆಯ ಮಾದರಿಗಳಿಗಿಂತ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದು, ಭಾರತದ ಭವಿಷ್ಯವನ್ನು ಬದಲಿಸುವ ಭರವಸೆಯನ್ನು ಮೂಡಿಸಿದೆ. ಶಿಕ್ಷಣ ಎಲ್ಲರಿಗೂ ಆರ್ಥಿಕವಾಗಿ ನಿಲುಕುವಂತಿರಬೇಕು, ಎಲ್ಲರಿಗೂ ತಲುಪಬೇಕು, ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಯಾವುದೇ ಭೇದವಿಲ್ಲದೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಲಭಿಸಬೇಕು, ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ವ್ಯವಸ್ಥೆಯ ನೇತೃತ್ವ ವಹಿಸಿದವರಲ್ಲಿ ಉತ್ತರದಾಯಿತ್ವ ಇರಬೇಕು ಎಂಬ ತತ್ವಗಳ ಆಧಾರದಲ್ಲಿ ಎನ್‌ಇಪಿಯನ್ನು ಜಾರಿಗೊಳಿಸಲಾಗಿದೆ. ಈ ಶಿಕ್ಷಣ ನೀತಿಯಿಂದ ಉದಯೋನ್ಮುಖ
ಪ್ರತಿಭೆಗಳಿಗೆ ಒಂದು ಉತ್ತಮವಾದ ಬುನಾದಿ ಮತ್ತು ವೇದಿಕೆ ಸಿಕ್ಕಂತಾಗುತ್ತದೆ.

ಅಲ್ಲದೆ ಉತ್ತಮ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಅನ್ಯದೇಶಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ಈಗಾಗಲೇ ಈ ಹೊಸ ಶಿಕ್ಷಣ ನೀತಿ ಕೇಂದ್ರದ ಕ್ಯಾಬಿನೆಟ್‌ನಲ್ಲಿ ಜಾರಿಯಾಗಿದ್ದು, ಇದನ್ನು ಮೊದಲಿಗೆ ಜಾರಿಗೆ ತರಲು ಒಪ್ಪಿಕೊಂಡ ಮೊದಲ ರಾಜ್ಯ ಕರ್ನಾಟಕ. ಆದರೆ ಈಗಿನ ಕಾಂಗ್ರೆಸ್ ಸರಕಾರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೋ ಮತದ ಅಥವಾ ಸಮುದಾಯದ ಓಲೈಕೆಗಾಗಿ ಈ ಹೊಸನೀತಿ ಜಾರಿಮಾಡಲು ಅಡ್ಡಗಾಲು ಇಡುತ್ತಿದೆ. ಬಿಜೆಪಿ ಸರಕಾರ ಇದನ್ನು ಜಾರಿ ಮಾಡಲು ಹೆಚ್ಚು ಒತ್ತುನೀಡುತ್ತಿದೆ ಅನ್ನುವ ಒಂದೇ ಕಾರಣಕ್ಕೆ ಉತ್ತಮ ಕಾರ್ಯವೊಂದನ್ನು ವಿರೋಧಿಸುವುದು ಎಷ್ಟು ಸಮಂಜಸ? ಮಕ್ಕಳ ಭವಿಷ್ಯಕ್ಕಿಂತ ರಾಜಕೀಯ ಮೇಲಾಟವೇ ಕಾಂಗ್ರೆಸ್ ಸರಕಾರಕ್ಕೆ ಮುಖ್ಯವಾಯಿತೆ? ಈ ಎಲ್ಲ ಪ್ರಶ್ನೆಗಳಿಗೆ ಸರಕಾರವೇ ಉತ್ತರ ನೀಡಬೇಕಿದೆ. ಇದಕ್ಕಾಗಿಯೇ ನವೆಂಬರ್ ೧೫ರಿಂದ ಬಿಜೆಪಿ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದೆ. ಕೋಟ್ಯಂತರ ಜನ ಎನ್ ಇಪಿಯನ್ನು ಬೆಂಬಲಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರಕಾರದ ಕಪಟ ರಾಜಕಾರಣ ರಾಜ್ಯಾದ್ಯಂತ ಬಟಾಬಯಲಾಗಿದೆ!

Leave a Reply

Your email address will not be published. Required fields are marked *

error: Content is protected !!