Saturday, 7th September 2024

ಜಾತಿಗೊಂದು ನಿಗಮ: ಹೊರೆಯಲ್ಲವೇ ?

ಅಶ್ವತ್ಥಕಟ್ಟೆ

ranjith.hoskere@gmail.com

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನರು. ಮೇಲುಕೀಳು ತಗ್ಗಿಸಬೇಕು, ಹಿಂದುಳಿದ ಸಮುದಾಯದ ಜನರನ್ನು ಮೇಲೆತ್ತಬೇಕು ಎನ್ನುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರ ಹೋರಾಟ ಮಾಡಿಕೊಂಡೇ ಬರುತ್ತಿವೆ. ಅದಕ್ಕಾಗಿ ನೂರಾರು ಯೋಜನೆ, ಲಕ್ಷಾಂತರ ಕೋಟಿ ರು. ಅನುದಾನವನ್ನು ಸ್ವಾತಂತ್ರ್ಯ ನಂತರ ಮೀಸಲಿಟ್ಟಿದ್ದಾರೆ.

ಮೀಸಲಿಡುತ್ತಲೇ ಇದ್ದಾರೆ. ಹಿಂದುಳಿದವರನ್ನು ಮೇಲೆತ್ತಲು ಪಕ್ಷಬೇಧ ಮರೆತು ಕಳೆದ ಏಳುವರೆ ದಶಕದಲ್ಲಿ ಏನೆಲ್ಲ ಯೋಜನೆ ರೂಪಿಸಿದ್ದರೂ, ಫಲಾನುಭವಿಗಳ ಸಂಖ್ಯೆ ಮಾತ್ರ ಇಳಿಕೆಯಾಗುವುದಕ್ಕಿಂತ, ಏರುಗತಿಯಲ್ಲಿಯೇ ಸಾಗುತ್ತಿದೆ ಎನ್ನುವುದು ವಿಪರ್ಯಾಸ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಿಂದುಳಿದ ಹಾಗೂ ದಲಿತರ ಅಭಿವೃದ್ಧಿಗಾಗಿ ಯಾವುದೇ ಪಕ್ಷದ ಸರಕಾರಗಳಿದ್ದರೂ, ಹಲವಾರು ಯೋಜನೆಗಳನ್ನು ರೂಪಿಸಿವೆ. ಪರಿಶಿಷ್ಟ ಜಾತಿ-ಪಂಗಡಕ್ಕಾಗಿಯೇ ಪ್ರತ್ಯೇಕ ಅನುದಾನವನ್ನು ಮೀಸಲಿಡಲಾಗಿದೆ. ಪ್ರತಿವರ್ಷ ಸಾವಿರಾರು ಕೋಟಿ ರುಪಾಯಿ ಅನುದಾನವನ್ನು ನೀಡಲಾಗುತ್ತಿದೆ.

ಅನುದಾನವಷ್ಟೇ ಅಲ್ಲದೇ, ಈ ಸಮುದಾಯಗಳ ಜನರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ಜಾರಿಗೊಳಿಸಿವೆ. ಆರಂಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕವೇ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ರೂಪಿಸಿ, ಸಹಾಯಧನವನ್ನು ನೀಡಲಾಗುತ್ತಿತ್ತು. ಆದರೆ ದಿನದಿಂದ ದಿನಕ್ಕೆ ನಿಗಮದ ಮೇಲಿನ ‘ಹೊರೆ’ ಹೆಚ್ಚಾಗುತ್ತಿದ್ದಂತೆ, ಅದನ್ನು ತಗ್ಗಿಸಲು ಒಂದೊಂದೇ ಅಭಿವೃದ್ಧಿ ನಿಗಮ ಗಳನ್ನು ಆರಂಭಿಸಲು ಸರಕಾರಗಳು ಶುರು ಮಾಡಿದವು. ಇದರ ಪರಿಣಾಮ ಇಂದು ಜಾತಿಗೊಂದು ನಿಗಮ ತಲೆ ಎತ್ತಿ ನಿಂತಿದೆ. ವಿಕೇಂದ್ರಿಕರಣದಿಂದ ಲಾಭವೆಂದು ಆರಂಭದಲ್ಲಿ ಹೇಳಲಾದರೂ, ಇತ್ತೀಚಿನ ಕೆಲ ವರ್ಷಗಳಲ್ಲಿನ ನಿಗಮಗಳ ಸಾಧನೆಯನ್ನು ನೋಡಿದರೆ, ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದು ಸ್ಪಷ್ಟ.

ಹಾಗೇ ನೋಡಿದರೆ, ಹಿಂದುಳಿದ ವರ್ಗಗಳಿಗೆಲ್ಲ ಸೇರಿ ಒಂದು ನಿಗಮ ಮಂಡಳಿ, ದಲಿತರಿಗೊಂದು ನಿಗಮ ಮಂಡಳಿಗಳಿದ್ದರೆ, ಆ ನಿಗಮಗಳಲ್ಲಿನ ಸಿಬ್ಬಂದಿಗೆ ಹೆಚ್ಚುವರಿ ಕೆಲಸವಾದರೂ, ಎಲ್ಲ ಕಾರ್ಯಗಳು ಸಾಂಗವಾಗಿ ಸಾಗುತ್ತಿತ್ತೇನೋ. ಆದರೆ ಜಾತಿ, ಉಪಜಾತಿ ಲೆಕ್ಕಾಚಾರದಲ್ಲಿ, ರಾಜಕೀಯ ಲಾಭದ ಲೆಕ್ಕಾಚಾರಗಳಿಗೆ, ಸಮುದಾಯದಲ್ಲಿ ‘ಮೈಲೇಜ್’ ಪಡೆಯಲು ಸೇರಿದಂತೆ ಹತ್ತು ಹಲವು ಕಾರಣಗಳಿಗೆ ಹತ್ತಾರು ನಿಗಮ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಆದರೆ ನಿಗಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು, ಅವುಗಳಿಗೆ ನೀಡುವ ಅನುದಾನ ಮಾತ್ರ ಬಹುದೊಡ್ಡ ಪ್ರಮಾಣದಲ್ಲಿ ಏರಿಸಿಲ್ಲ. ಇದರಿಂದಾಗಿ, ನಿಗಮಗಳಿಂದ ಸಮುದಾಯಗಳಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗುತ್ತಿದೆ ಎನ್ನುವುದು ಭಾವನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.

ಕರ್ನಾಟಕದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಐದು, ಹಿಂದುಳಿದ ವರ್ಗಗಳಿಗೆ ಸೇರಿದ ಒಂಬತ್ತು ಹಾಗೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಒಂದು ನಿಗಮ ಮಂಡಳಿಗಳಿವೆ. ಇದರೊಂದಿಗೆ ಬ್ರಾಹ್ಮಣ, ವೈಶ್ಯ, ಒಕ್ಕಲಿಗ ಸೇರಿದಂತೆ ಜಾರಿ ಲೆಕ್ಕಾಚಾರದಲ್ಲಿ ೨೫ಕ್ಕೂ ಹೆಚ್ಚು ಅಭಿವೃದ್ಧಿ ನಿಗಮಗಳಿವೆ. ಈ
ಎಲ್ಲ ನಿಗಮಗಳು, ತಮ್ಮ ತಮ್ಮ ಜಾತಿಗಳ ಅಭಿವೃದ್ಧಿಗೆ, ತಮ್ಮ ಜಾತಿಯಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ನಿರುದ್ಯೋಗ ಯುವಕ/ಯುವತಿ ಯರಿಗೆ ಸ್ವಯಂ ಉದ್ಯೋಗಕ್ಕೆ ಅನುದಾನ, ಗಂಗಾ ಕಲ್ಯಾಣ ಯೋಜನೆ, ಕಿರು ಸಾಲ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನಿಭಾಯಿಸುತ್ತಿವೆ. ಸಮುದಾಯದ ಲೆಕ್ಕದಲ್ಲಿ ಈ ನಿಗಮ ಮಂಡಳಿಗಳು ಆರಂಭಿಸಿರುವುದರಿಂದ, ‘ಟಾರ್ಗೆಟ್ ಫಲಾನುಭವಿಗಳನ್ನು’ ತಲುಪಬಹುದು ಎನ್ನುವುದು ಬಹುತೇಕ ಲೆಕ್ಕಾಚಾರವಾಗಿತ್ತು. ಆದರೆ ಅನುದಾನದ ಕೊರತೆ, ಫಲಾನುಭವಿಗಳ ಸಂಖ್ಯೆಯಲ್ಲಿನ ಏರಿಕೆಯಿಂದ ಇಡೀ ಯೋಚನೆಯ ಸ್ವರೂಪವೇ ಬದಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿಗಮ ಮಂಡಳಿಗಳು ಹೆಚ್ಚಾಗಿದ್ದರಿಂದ ಆಡಳಿತಾತ್ಮಕವಾಗಿ ಯೋಚಿಸಿದಾಗ, ಲಾಭಕ್ಕಿಂತ ಹೆಚ್ಚು ಹೊರೆಯೇ ಆಗಿದೆ ಎನ್ನುವುದು ಬಹುತೇಕ ಅಭಿಪ್ರಾಯ. ಉದಾಹರಣೆಗೆ ತೀರಾ ಇತ್ತೀಚಿಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ. ನಿಗಮ ಮಂಡಳಿ ಗಳಲ್ಲಿರುವ ವ್ಯವಸ್ಥಾಪಕ ನಿರ್ದೇಶಕ ಮೂಗಿನ ಕೆಳಗೆ ನಡೆಯುವ ಬಹುತೇಕ ವ್ಯವಹಾರಗಳನ್ನು ದಿನನಿತ್ಯದ ಆಧಾರದಲ್ಲಿ ಗಮನಿಸಲು ಸಾಧ್ಯವಾಗದೇ ಹೋಗಬಹುದು. ರಾಜ್ಯದಲ್ಲಿರುವ ೨೧ಕ್ಕೂ ಹೆಚ್ಚು ಜಾತಿ ಆಧಾರಿತ ನಿಗಮಗಳಲ್ಲಿ ನಡೆಯುವ ನಿತ್ಯ ವ್ಯವಹಾರವನ್ನು ಟ್ರಾಕ್ ಮಾಡುವುದು ‘ಹೇಳಿಕೆ’
ಕೊಟ್ಟಷ್ಟು ಸುಲಭವಲ್ಲ. ಈ ನಿಗಮಗಳ ಸಂಖ್ಯೆ ಕಡಿಮೆಯಿದ್ದರೆ, ಟ್ರಾಕ್ ಮಾಡುವುದು ಸವಾಲಿನ ಕೆಲಸವಾಗುವುದಿಲ್ಲ.

ವಾರ್ಷಿಕವಾಗಿ ಈ ಎಲ್ಲ ನಿಗಮಗಳಿಗೆ ಸೇರಿ ಒಂದುವರೆಯಿಂದ ಎರಡು ಸಾವಿರ ಕೋಟಿ ರು. ಅನುದಾನವನ್ನು ಸರಕಾರ ಮೀಸಲಿಡುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಸಂಬಂಧಿಸಿದ ಇಲಾಖೆಗಳು ಅನುದಾನ ಹಂಚಿಕೆ ಮಾಡುತ್ತವೆ. ಈ ಎಲ್ಲದರ ಹೊರತಾಗಿ, ನಿಗಮಗಳನ್ನು ಮುನ್ನಡೆಸುವುದೇ ಬಹು ದೊಡ್ಡ ಸಮಸ್ಯೆಯಾಗುತ್ತದೆ. ಏಕೆಂದರೆ, ಪ್ರತಿ ನಿಗಮಗಳನ್ನು ಆಯಾ ನಿಗಮಗಳಿಗೆ ಸಿಗುವ ಅನುದಾನದಲ್ಲಿಯೇ ನಿರ್ವಹಿಸಬೇಕು ಎನ್ನುವ ಕಾನೂನಿದೆ. ಸರಕಾರ ನೀಡುವ ಎರಡರಿಂದ ಮೂರು ಸಾವಿರ ಕೋಟಿಗಳಲ್ಲಿ ಅಹಿಂದ ಸಮುದಾಯಕ್ಕಾಗಿಯೇ ಇರುವ ೧೯ ನಿಗಮಗಳಿಗೆ ಅನುದಾನ ಹಂಚಿಕೆ ಮಾಡಿದರೆ, ತಲಾ ೧೦೦ರಿಂದ ೧೩೦ ಕೋಟಿ ರು. ಸಿಗುತ್ತದೆ. ಈ ರೀತಿ ಹಂಚಿಕೆಯಾದ ಅನುದಾನದ ಶೇ.೫೦ಕ್ಕಿಂತ ಹೆಚ್ಚು ಮೊತ್ತ ನಿಗಮಗಳ ವಾರ್ಷಿಕ ನಿರ್ವಹಣೆಗೆ ಖಾಲಿಯಾಗುತ್ತಿರುವುದು ದುರಂತ.

ಬಹುತೇಕ ನಿಗಮಗಳಲ್ಲಿ ಫಲಾನುಭವಿಗಳಿಗೆ ಯೋಜನೆಗಳನ್ನು ಮಂಜೂರು ಮಾಡಬೇಕೆಂಬ ಪಟ್ಟಿ ಸಿದ್ಧವಿದ್ದರೂ, ಅದಕ್ಕೆ ಅನುದಾನದ ಕೊರತೆ ಯಿರುತ್ತದೆ. ಇನ್ನು ಈ ಎಲ್ಲ ನಿಗಮಗಳ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಕ್ಷೇತ್ರವಾರು ಶಾಸಕರ ಜವಾಬ್ದಾರಿಗೆ ನೀಡುವು
ದರಿಂದ, ಪ್ರತಿ ಕ್ಷೇತ್ರದಿಂದ ಒಬ್ಬೊಬ್ಬ ಫಲಾನುಭವಿಯನ್ನು ಆರಿಸಿದರೂ, ಅಲ್ಲಿಗೆ ವಾರ್ಷಿಕ ಅನುದಾನ ಖಾಲಿಯಾಗಿ, ಮುಂದಿನ ವರ್ಷ ನೋಡಿದರೆ ಆಯಿತು ಎಂದು ಫೈಲ್ ಇಟ್ಟುಕೊಳ್ಳಲಾಗುತ್ತದೆ. ಈ ರೀತಿ ಪ್ರತಿವರ್ಷ ಬಾಕಿ ಉಳಿಸಿಕೊಂಡ ಫೈಲ್‌ಗಳನ್ನು ಕ್ಲಿಯರ್ ಮಾಡುವ ಮೊದಲೇ, ಮತ್ತೊಂದು ಫೈಲ್ ಬರುವುದರಿಂದ ಅರ್ಹರಿಗೆ ಯೋಜನೆಯ ಲಾಭ ಸಿಗುವುದೇ ದುಸ್ತರವಾಗಿದೆ.

ಅಹಿಂದ ಸಮುದಾಯಕ್ಕೆ ಸೇರಿರುವ ನಿಗಮಗಳಲ್ಲಿ ವರ್ಷಕ್ಕೆ ಕನಿಷ್ಠ ನೂರು ಜನರಿಗೆ ಯೋಜನೆಯನ್ನು ತಲುಪಿಸಬಹುದು. ಆದರೆ ಇನ್ನು ಅನೇಕ ನಿಗಮಗಳಲ್ಲಿ ನಿಗಮ ಅಧ್ಯಕ್ಷರ ಕಾರಿಗೆ ಪೆಟ್ರೋಲ್ ಹಾಕಿಸಲು ದುಡ್ಡಿಲ್ಲದ ಪರಿಸ್ಥಿತಿಯಿದೆ. ವಾರ್ಷಿಕ ಐದರಿಂದ ೧೦ ಕೋಟಿ ರು. ಅನುದಾನವನ್ನು ಪಡೆಯುವ ಅನೇಕ ನಿಗಮಗಳಲ್ಲಿ ರಾಜ್ಯದಲ್ಲಿವೆ. ಈ ನಿಗಮಗಳಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಲು ಆಗದ ಪರಿಸ್ಥಿತಿಯಿದೆ. ಉದಾಹರಣೆಗೆ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಐದು ಕೋಟಿ ರು. ಅನುದಾನವನ್ನು ನೀಡಿತ್ತು. ಈ ಅನುದಾನದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮವನ್ನು ನಿರ್ವಹಿಸುವುದರೊಂದಿಗೆ, ಬ್ರಾಹ್ಮಣ ಸಮುದಾಯದ ಅರ್ಹರಿಗೆ ಸಹಾಯವನ್ನು ಮಾಡಬೇಕಿತ್ತು! ಸಿಬ್ಬಂದಿಯನ್ನು ನೇಮಿಸಿ ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆ ನಿಗಮ ಅಧ್ಯಕ್ಷರು ಎರಡು ಮೂರು ವರ್ಷ ಕಾಲ ಕಳೆದಿದ್ದರು ಎನ್ನುವುದು ದುರಂತ.

ಹೆಚ್ಚೆಚ್ಚು ನಿಗಮ ಮಂಡಳಿಗಳನ್ನು ಆರಂಭಿಸಿದಷ್ಟು, ಆಡಳಿತಾತ್ಮಕ ನಿರ್ವಹಣೆಗೆ ಅನುದಾನ ನೀಡಬೇಕಾಗುವುದರಿಂದ, ಯೋಜನೆಗಳಿಗೆ ಅನುದಾನ ಕೊರತೆಯಾಗುವುದು ಸಹಜ. ಪ್ರತಿ ನಿಗಮಕ್ಕೆ ನೂರು ಕೋಟಿ ರು. ಅನುದಾನ ಕೊಟ್ಟು, ಐವತ್ತು ಕೋಟಿ ಅನುದಾನವನ್ನು ವಾರ್ಷಿಕ ನಿರ್ವಹಣೆಗೆ ಎತ್ತಿಡುವುದರಿಂದ, ಸಹಜವಾಗಿಯೇ ಅನುದಾನದ ಸಮಸ್ಯೆಯಾಗುತ್ತದೆ. ಜಾತಿಗೊಂದು ನಿಗಮ ಮಾಡುವ ಬದಲು, ನಿಗಮಗಳ ಸಂಖ್ಯೆಯನ್ನು ಕಡಿತ ಗೊಳಿಸಿದರೆ, ನಿರ್ವಹಣೆಯ ಖರ್ಚಿನಲ್ಲಿಯೇ ಸಮುದಾಯದ ಏಳ್ಗೆಗೆ ಅನುದಾನವನ್ನು ನೀಡಬಹುದು. ೨೦ ನಿಗಮಗಳಿಗೆ ವಾರ್ಷಿಕವಾಗಿ ನೂರು ಕೋಟಿ ರು. ವೇತನ, ಭತ್ಯೆ, ಪೆಟ್ರೋಲ್-ಡಿಸೇಲ್‌ಗೆ ಎತ್ತಿಡುವ ಬದಲು ನಾಲ್ಕೈದು ನಿಗಮದಲ್ಲಿಯೇ ಎಲ್ಲ ಸಮುದಾಯಗಳನ್ನು ತಂದರೆ ಫಲಾನುಭವಿಗಳ ಸಂಖ್ಯೆಯನ್ನಾದರೂ ಹೆಚ್ಚಿಸಬಹುದು.

ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಮುದಾಯವನ್ನು ಓಲೈಸುವ ಭರದಲ್ಲಿ, ವರ್ಷಕ್ಕೊಂದು ನಿಗಮ ಮಂಡಳಿಗಳನ್ನು ಘೋಷಿಸಲಾಗುತ್ತಿದೆ. ಈ ರೀತಿಯ ಘೋಷಿಸುವ ಹಿಂದೆ, ಆಯಾ ಸಮುದಾಯದ ಹಿತಾಸಕ್ತಿಗಿಂತ ಹೆಚ್ಚಾಗಿ, ಸಮುದಾಯದ ನಾಯಕರಿಗೆ ‘ಅಧ್ಯಕ್ಷ’ ಸ್ಥಾನದ ಪಟ್ಟ ನೀಡುವ ಲೆಕ್ಕಾಚಾರಗಳಿರುತ್ತದೆ. ರಾಜಕೀಯವಾಗಿ ಅಸ್ಥಿತ್ವವನ್ನು ಕಳೆದುಕೊಂಡಿರುವ ಅನೇಕ ರಾಜಕಾರಣಿಗಳಿಗೆ, ಪುನರಾಗಮನವಾಗಲು, ಸಾಂವಿಧಾನಿಕ ಸ್ಥಾನಮಾನ ಪಡೆಯಲು ಈ ನಿಗಮಗಳ ಅವಶ್ಯಕತೆ ಬಹುದೊಡ್ಡ ಮಟ್ಟದಲ್ಲಿದೆ. ಪಕ್ಷದ ಹಿರಿಯರಿಗೂ ತಮ್ಮ ಆಪ್ತರಿಗೊಂದು ಸೂರು ಕಲ್ಪಿಸುವ
ಉದ್ದೇಶವಿರುವುದರಿಂದ, ನಿಗಮ ಮಂಡಳಿಗಳನ್ನು ಯತ್ತೇಚ್ಛವಾಗಿ ತೆರೆಯಲು ಸದಾ ಸಿದ್ಧರಿರುತ್ತಾರೆ!

ಅಸ್ಥಿತ್ವದಲ್ಲಿರುವ ಹತ್ತಾರು ನಿಗಮಗಳನ್ನು ವಿಲೀನಗೊಳಿಸಲು ರಾಜಕೀಯ ಪಕ್ಷಗಳು ಹಾಗೂ ಸಚಿವರುಗಳಿಗೆ ಇಚ್ಛೆಯಿರುವುದಿಲ್ಲ. ಏಕೆಂದರೆ, ನಿಗಮ ಗಳು ಹೆಚ್ಚಾದಷ್ಟು, ಅಸಮಾಧಾನಿತ ಮುಖಂಡರುಗಳನ್ನು ಸಂತೈಸಲು, ಅಸಮಾಧಾನವನ್ನು ತಾತ್ಕಲಿಕವಾಗಿ ತಣಿಸಲು ಗುರಾಣಿಯ ರೀತಿಯಲ್ಲಿ
ಬಳಸಿಕೊಳ್ಳಬಹುದು. ಬಹುತೇಕ ನಿಗಮಗಳಲ್ಲಿ ಕೆಲಸ ಮಾಡಲು ಅನುದಾನವಿಲ್ಲದಿದ್ದರೂ, ಸರಕಾರಿ ಕಾರು, ಗನ್ ಮ್ಯಾನ್ ಹಾಗೂ ಕೆಲ ಸಿಬ್ಬಂದಿ ಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಅಸಮಾಧಾನಿತರು ಈ ‘ಸೌಕರ್ಯ’ಗಳಿಗೆ ಸಂತುಷ್ಟರಾಗಿ ಪಕ್ಷದಲ್ಲಿಯೇ ಮುಂದುವರೆಯುತ್ತಾರೆ.

ಆದ್ದರಿಂದ ರಾಜಕೀಯವಾಗಿ ಬಳಸಿಕೊಳ್ಳಲು ಈ ನಿಗಮಗಳು ಪಕ್ಷಗಳಿಗೆ ಪ್ರಮುಖ ಪಾತ್ರವಹಿಸುತ್ತವೆ. ಇನ್ನು ವಿವಿಧ ನಿಗಮಗಳ ವ್ಯಾಪ್ತಿಯಲ್ಲಿರುವ ೧೨ಕ್ಕೂ ಹೆಚ್ಚು ಯೋಜನೆಗಳ ಫಲಾನುಭವಿಗಳನ್ನು ಅಂತಿಮಗೊಳಿಸುವುದೇ ಬಹುದೊಡ್ಡ ಸಮಸ್ಯೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಪಂಗಡ ಸಚಿವರಾಗಿ ಯಾರೇ ಆಯ್ಕೆಯಾದರೂ, ಅವರಿಗೆ ಈ ಯೋಜನೆಗಳ ಫಲಾನುಭವಿಗಳ ‘ರೆಕ್ಮೆಂಡ್’ ಲೆಟರ್ ಬಹುದೊಡ್ಡ ಮಟ್ಟದಲ್ಲಿ ಬರುತ್ತದೆ. ನೂರು ಫಲಾನುಭವಿಗಳಿಗೆ ಅವಕಾಶವಿದ್ದರೆ, ೧೦ ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸುತ್ತಾರೆ. ಈ ಎಲ್ಲವನ್ನು ‘ನಿಭಾಯಿಸು ವುದೇ’ ಬಹುದೊಡ್ಡ ಸವಾಲಾಗಿರುತ್ತದೆ. ಈ ನಿಷ್ಠುರದ ಕೆಲಸದಿಂದ ತಪ್ಪಿಸಿಕೊಳ್ಳಲು ನಿಗಮದ ಅಧ್ಯಕ್ಷರ ತಲೆಯ ಮೇಲೆ ಹಾಕಿ ಬಹುತೇಕ ಸಚಿವರು ಬಚಾವಾಗುತ್ತಾರೆ. ಆದ್ದರಿಂದ ಅವರಿಗೂ ಈ ನಿಗಮಗಳನ್ನು ಮುಚ್ಚುವುದು ಬೇಡವಾಗಿದೆ!

ವಿಕೇಂದ್ರಿಕರಣದ ಮೂಲಕ ಜಾತಿಗಳ ಅಭಿವೃದ್ಧಿ ಸುಲಭ ಎನ್ನವ ಆಶಯದೊಂದಿಗೆ ಜಾತಿಗೊಂದು ನಿಗಮ ಮಂಡಳಿಗಳನ್ನು ರಾಜ್ಯ ಸರಕಾರಗಳು ಆಯಾ ಕಾಲಘಟ್ಟದಲ್ಲಿ ನೇಮಿಸಿರಬಹುದು. ಆದರೆ ಈ ರೀತಿ ನಿಗಮ ಮಂಡಳಿಗಳನ್ನು ಆರಂಭಿಸುವ ಭರದಲ್ಲಿ, ‘ಸಮುದಾಯಗಳ ಅಭ್ಯುದಯಕ್ಕೆ’
ಅನುದಾನ ಮೀಸಲಿಡುವುದಕ್ಕಿಂತ ಹೆಚ್ಚಾಗಿ ನಿಗಮಕ್ಕೊಂದು ಅಧ್ಯಕ್ಷ, ಅವರಿಗೊಂದು ಕಾರು, ಸಿಬ್ಬಂದಿಗಳಿಗೆಗಾಗಿಯೇ ಬಹುತೇಕ ಅನುದಾನ ವ್ಯಯ ವಾಗುತ್ತಿದೆ.

ಇದರಿಂದ ಜಾತಿ ಯ ಅಭಿವೃದ್ಧಿಯ ನಿಗಮ ಮಂಡಳಿ ಸ್ಥಾಪಿಸಿದ್ದಾರೆ ಎನ್ನುವ ಕ್ರೆಡಿಟ್ ಪಡೆಯಬಹುದೇ ಹೊರತು, ಅಭಿವೃದ್ಧಿಗಿಂತ ಹೆಚ್ಚಾಗಿ ನಿಗಮ ನಡೆಸುವುದಕ್ಕಾಗಿಯೇ ಹೆಚ್ಚು ಹಣ ವ್ಯಯವಾಗುತ್ತಿದೆ. ಈಗಾಗಲೇ ಆರಂಭಿಸಿರುವ ನಿಗಮಗಳನ್ನು ಮುಚ್ಚಿ ಆಡಳಿತಾತ್ಮಕ ವೆಚ್ಚವನ್ನು ತಗ್ಗಿಸಿ ಎನ್ನುವ ಸಲಹೆ ನೀಡುವುದು ಸುಲಭ. ಆದರೆ ಪ್ರಾಯೋಗಿಕವಾಗಿ ಇರುವ ನಿಗಮಗಳನ್ನು ಮುಚ್ಚಲು ಮುಂದಾದರೆ ರಾಜಕೀಯವಾಗಿ ಆಗಬಹುದಾದ ‘ಅನಾಹುತ’ ಒಂದೆರೆಡೆಲ್ಲ. ಆದ್ದರಿಂದ ಇನ್ನಾದರೂ ರಾಜಕೀಯ ಕಾರಣಗಳಿಗೆ ನಿಗಮಗಳನ್ನು ಆರಂಭಿಸುವ ಸಂಸ್ಕೃತಿ ನಿಲ್ಲಲಿ. ಇದರೊಂದಿಗೆ ಈಗಿರುವ ಚಿಕ್ಕ-ಚಿಕ್ಕ ನಿಗಮಗಳನ್ನು ವಿಲೀನಗೊಳಿಸಲು ಸಾಧ್ಯವೇ ಎನ್ನುವ ಬಗ್ಗೆಯೂ ಸರಕಾರಗಳು ಗಂಭೀರವಾಗಿ ಚಿಂತನೆ ನಡೆಸಬೇಕಿದೆ.

Leave a Reply

Your email address will not be published. Required fields are marked *

error: Content is protected !!