Friday, 13th December 2024

ಮಹಿಳಾ ಅಭ್ಯರ್ಥಿಗಳ ಬಗ್ಗೆ ಹಗುರ ಮಾತು ಸಲ್ಲ

ಪ್ರಚಲಿತ

ಜಯಶ್ರೀ ಕಾಲ್ಕುಂದ್ರಿ

ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕಂಗನಾ ರಣಾವತ್ ಅವರನ್ನು ಕುರಿತು
ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದ ಅವಹೇಳನಕಾರಿ ಮತ್ತು ಅಪ್ರಭುಧ್ಧ ಹೇಳಿಕೆಗಳು ಖಂಡನಾರ್ಹ. ಇಂತಹ ಆಕ್ಷೇಪಾರ್ಹ ಸಂದೇಶವನ್ನು ಯಾರೇ ಪೋ ಮಾಡಿದ್ದರೂ ಶಿಕ್ಷಾರ್ಹರು.

ಜನಸಾಮಾನ್ಯರಿಂದ ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆಯೇ, ಸಂದೇಶವನ್ನು ಅಳಿಸಿ ಹಾಕಲಾಯಿತಾದರೂ ಕಂಗನಾರ ಮನಸ್ಸಿ ಗಾಗಿರುವ ಗಾಯದ ಕಲೆಯನ್ನು ಅಳಿಸಲಾಗದು. ಅಸಭ್ಯ ಸಂದೇಶಕ್ಕುತ್ತರವಾಗಿ ಕಂಗನಾ, ‘ಶಿಕ್ಷಕಿಯಾಗಿರಲಿ, ನಟಿಯಾಗಿ ರಲಿ, ಪತ್ರಕರ್ತೆಯಾಗಿರಲಿ, ನಟಿ ಯಾಗಿರಲಿ, ಅಥವಾ ಲೈಂಗಿಕ ಕಾರ್ಯಕರ್ತೆಯಾಗಿರಲಿ, ಎಲ್ಲರೂ ಗೌರವಕ್ಕೆ ಅರ್ಹರು. ಛೋಟಾ
ಕಾಶಿ ಎಂದೇ ಪ್ರಸಿದ್ದಿ ಪಡಿದಿರುವ ಮಂಡಿ ಕ್ಷೇತ್ರವನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ನನಗೆ ನೋವುಂಟು ಮಾಡಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾದ ರೇಖಾ ಶರ್ಮಾ, ಇಂತಹ ಸಂದೇಶವನ್ನು ಪೋ ಮಾಡಿದವರು ಮತ್ತು ಸಂದೇಶ ವನ್ನು ಬೆಂಬಲಿಸಿ ಪ್ರತಿಕ್ರಿಯೆ ವ್ಯಕ್ತಪಡಿಸುವಂತಹ ಅವಮಾ ನಕರ ನಡವಳಿಕೆಯುಳ್ಳವರ ವಿರುಧ್ಧ ಕಠಿಣ ಕ್ರಮ
ಕೈಗೊಳ್ಳ ಬೇಕೆಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಮಹಿಳಾ ಅಭ್ಯರ್ಥಿಗಳನ್ನು ಕುರಿತು ವಿರೋಧ ಪಕ್ಷದ ಅಭ್ಯರ್ಥಿಗಳಿಂದ, ಆಶ್ಲೀಲ ಎನ್ನುವಷ್ಟರ ಮಟ್ಟಿಗೆ ಹೇಳಿಕೆಗಳು ಮೂಡಿ ಬರುತ್ತವೆ. ಇದೇ ಕಾರಣದಿಂದ ರಾಜಕಾರಣವೆಂದರೆ ಸಾಕೆಂದು, ಪ್ರಜ್ಞಾವಂತ
ಮಹಿಳೆಯರು ದೂರ ಸರಿಯುವಂತಾಗಿದೆ. ರಾಜಕಾರಣವೆಂದರೆ, ಯಾರೂ ಯಾರನ್ನೂ ನಂಬದಂತಹ ವಾತಾವರಣವೊಂದು ಸೃಷ್ಟಿಯಾಗಿದೆ. ರಾಜಕಾರಣಿಗಳ ನಡೆ, ನುಡಿಗಳನ್ನು ಕುರಿತು ಮತದಾರರಲ್ಲಿ ಜಿಗುಪ್ಸೆ, ಅಸಹನೆಗಳು ಆವರಿಸಿವೆ. ಸುಸಂಸ್ಕೃತ
ಜನರು, ಪುನರುಚ್ಛಿಸಲು ಸಹ ಮುಜುಗರ ಪಡುವಂತಹ ಶಬ್ದಾವಳಿಗಳನ್ನು, ಜನಪ್ರತಿನಿಽಗಳು ಬಳಸುತ್ತಾರೆ.

ಎಲ್ಲಾ ಅಭ್ಯರ್ಥಿಗಳು  ಸ್ವಹಿತಾಸಕ್ತಿಗೇ ಪ್ರಥಮ ಆದ್ಯತೆ ನೀಡುವ ಸಂಚುಗಾರರಂತೆ ತೋರುತ್ತಾರೆ. ಮತದಾನವನ್ನು ಕುರಿತು ಜನಸಾಮಾನ್ಯರಲ್ಲಿ ಉದಾಸೀನತೆ ಮೂಡುವಂತೆ ಮಾಡುತ್ತಾರೆ. ಕೆಲವೊಮ್ಮೆ ಮತದಾರರ ಉದಾಸೀನತೆಯೇ ಅಭ್ಯರ್ಥಿಗಳಿಗೆ
ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಹ ಅನುಭವವಾಗ ದಿರಲಾರದು.

ರಾಜಕೀಯ ಪಕ್ಷಗಳಿಗೆ ಮಹಿಳೆಯರಿಗೆ ಟಿಕೆಟ್ ಕೊಡುವುದು ಆದ್ಯತೆಯ ವಿಷಯವೇ ಅಲ್ಲ. ಒಂದು ಪಕ್ಷ ಟಿಕೆಟ್ ಸಿಕ್ಕರೂ ಸರಿ, ಅವಳ ಆತ್ಮಸ್ಥ್ಯೆರ್ಯವನ್ನು ಮುಗಿಸುವಂತಹ ವ್ಯಂಗ್ಯಭರಿತ ಬಾಣಗಳನ್ನು ಎದುರಿಸಬೇಕಾದ ಅನಿವಾರ್ಯತೆ ಆಕೆಗೆ. ಎಷ್ಟೇ ಚುನಾವಣೆಗಳು ನಡೆದರೂ, ರಾಜಕೀಯ ಪಕ್ಷಗಳ ನಿರ್ದೇಶನದಲ್ಲಿ ಮೂಡಿ ಬರುವ ಈ ಪ್ರಹಸನದಲ್ಲಿ ಸಕಾರಾತ್ಮಕ ಬದಲಾವಣೆ ಮತ್ತು ಫಲಿತಾಂಶಗಳೇನೂ ಕಾಣಸಿಗದು. ವಾಹಿನಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ, ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅನುಕಂಪ ತೋರುವಂತೆ ಅಭಿನಯಿಸುತ್ತಾ ಗಟ್ಟಿ ದನಿಯಲ್ಲಿ ಮಾತನಾಡುವ ರಾಜಕೀಯ ಪಕ್ಷಗಳು, ಮಹಿಳೆಯರನ್ನು ಸಂಸತ್ತು ಅಥವಾ ವಿಧಾನಸಭೆಗಳಿಗೆ ಕಳುಹಿಸಬೇಕೆಂದರೆ ಸಾಕು, ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಎಲ್ಲಿ ಕೈ ತಪ್ಪಿಹೋಗಿ ಮಹಿಳೆಯರಿಗೆ ಮೀಸಲಾಗುವುದೋ ಎಂದುಕೊಂಡು ಅಸಹನೆ ವ್ಯಕ್ತಪಡಿಸುತ್ತಾರೆ.

‘ಮಹಿಳಾ ಮೀಸಲಾತಿ ತಂದು ನಾವೆ ಮನೆಯಲ್ಲಿ ಕೂತಿರಬೇಕಾ? ನಮ್ಮ ಹೆಂಡತಿಯನ್ನು ರಾಜಕೀಯಕ್ಕೆ ಕಳಿಸಿ ನಾವು ಸೌಟು ಹಿಡೀಬೇಕಾ?’ ಎನ್ನುವ ಮಾತುಗಳನ್ನು ಅನೇಕ ಮುಖಂಡರು ಹೇಳುತ್ತಾರೆ. ಕೆಲವೊಂದು ರಾಜಕೀಯ ಪಕ್ಷಗಳು ಮಹಿಳೆಯರನ್ನು ಚುನಾವಣಾ ಕಣಕ್ಕೆ ಇಳಿಸಿದರೂ, ಅವರ ವಿರೋಧಿಗಳು ಮಹಿಳಾ ಪ್ರತಿಸ್ಪರ್ಧಿಗಳನ್ನು ತಮ್ಮ ಪರಮ ವೈರಿಗಳೆಂದೇ ಭಾವಿಸಿ, ಅತ್ಯಂತ ಹೀನಾಯ ಶಬ್ದಗಳನ್ನು ಬಳಸಿ ನಿಂದಿಸುತ್ತಾರೆ. ಸಾಮಾಜಿಕ ಜಾಲತಾಣಗಳೇ ಉಸಿರಾಗಿರುವ ಇಂದಿನ ದಿನಗಳಲ್ಲಿ,
ಮಹಿಳೆಯರನ್ನು ನಿಂದಿಸಲು ಹೊಸಹೊಸ ಅವ ಹೇಳನಕಾರಿ ಶಬ್ದಗಳು ಸೃಷ್ಟಿಯಾಗುತ್ತಲಿವೆ.

ನಿಂದನೆ, ಏಕವಚನದ ಬಳಕೆ ಮತ್ತು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಮಹಿಳಾ ಅಭ್ಯರ್ಥಿ ಗಳು ಇಂತಹ ಅಪಶಬ್ದಗಳಿಗೆ ಜಗ್ಗದೆ, ಚುನಾವಣಾ ಪ್ರಚಾರ ಆರಂಭಿಸಿದರೂ, ಅವರ ಪುರುಷ ಪ್ರತಿಸ್ಪರ್ಧಿಗಳು ಅವರ ಚಾರಿತ್ರ್ಯ ಧೆಗೆ ಮುಂದಾಗುತ್ತಾರೆ. ಇಂತಹ ಭಾಷಾಶೂರರ ಆಕ್ರಮಣ ಪ್ರವೃತ್ತಿ ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇಂತಹವರಲ್ಲಿ ಯಾರು ಹಿತವರು ನಿನಗೆ? ಎಂದು ಪ್ರಶ್ನಿಸಿದರೆ ಮತದಾರರಿಗೆ ಉತ್ತರಿಸುವುದು ಸಾಧ್ಯವೇ? ಅಚ್ಚರಿಯ ವಿಷಯವೆಂದರೆ, ಇಂತಹ ಭಾಷಾಶೂರರನ್ನು ಅವರ ಪಕ್ಷದ ಹಿರಿಯರು ಶಿಕ್ಷಿಸುವ ಮಾತಂತಿರಲಿ, ಪ್ರಶ್ನಿಸುವುದೂ ಇಲ್ಲ.

ಅವಹೇಳನಕಾರೀ ಶಬ್ದಶೂರರಿಗೆ ಪಕ್ಷದ ಮುಖಂಡರಿಂದ ಶಾಭಾಸ್ ಗಿರಿ ಸಿಗುವುದರ ಜೊತೆಜೊತೆಗೆ ಹಿಂಬಾಲಕರಿಂದ ಜನನಾಯಕನ ಪಟ್ಟವೂ ಸಿಗುತ್ತದೆ. ಭಾಷಾವೀರರೂ ಮಾತ್ರವಲ್ಲ, ಪಕ್ಷದ ಹಿರಿಯರಿಂದ ಅತ್ಯಾಚಾರಿಗಳಿಗೂ ಸಹ ರಕ್ಷಣೆ ಸಿಗುತ್ತದೆ. ತಮ್ಮ ಮೂಗಿನ ನೇರಕ್ಕೆ, ನಡೆಯದ ಮಹಿಳೆಯ ಪ್ರತಿಯೊಂದು ನಡೆಯೂ ವಿರೋಧಿಗಳಿಗೆ ಸವಾಲಾಗಿ ಕಾಣುತ್ತದೆ.
ವಾಹಿನಿಯ ನಿರೂಪಕಿಯೊಬ್ಬರು, ‘ನನ್ನ ಸರಳ ಉಡುಗೆ-ತೊಡುಗೆಗಳೂ ಸಹ ಇವರಿಗೆ ಮಾನ್ಯವಾಗದು. ನನ್ನನ್ನು ಬೆಹನ್ಜಿ, ಎಂದೇ ಕರೆಯುತ್ತಾರೆ. ಚಿಕ್ಕ ಗ್ರಾಮದಲ್ಲಿ ವಿದ್ಯಾಭ್ಯಾಸ ಮುಗಿಸಿ, ಪ್ರತಿಷ್ಠಿತ ವಾಹಿನಿಯೊಂದರ ಸುದ್ದಿ ಸಂಪಾದಕಿಯಾಗಿರುವ ನನ್ನ ಹೋರಾಟ, ಅರ್ಹತೆಗಳ ಬಗ್ಗೆ ಇವರಾರೂ ಯೋಚಿಸುವುದೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು.

ಪರಿಶ್ರಮ, ಬುದ್ದಿಮತ್ತೆ ಮತ್ತು ಅರ್ಹತೆಗಳಿಗೆ ಇಂತಹ ಪುರುಷರಿಂದ ಮೆಚ್ಚುಗೆಯನ್ನು ನಿರೀಕ್ಷಿಸಲಾದೀತೆ? ಮಾಜಿ ಮುಖ್ಯಮಂತ್ರಿ ಯೊಬ್ಬರು, ಅತ್ಯಾಚಾರದಂತಹ ಉಗ್ರಕೃತ್ಯಗಳನ್ನು ಎಸಗಿದವರನ್ನು ಸಮರ್ಥಿಸುತ್ತಾ, ‘ಹುಡುಗರು ತಪ್ಪು ಮಾಡುವುದು ಸಹಜ’
ಎಂದು ತೀರ್ಪು ನೀಡಿದ್ದರು. ಇನ್ನೊಬ್ಬ ರಾಜಕಾರಣಿ, ‘ವಿರೋಧಿಗಳು ನಮ್ಮ ತಂಟೆಗೆ ಬಂದರೆ, ಅವರ ಮನೆಯ ಹೆಣ್ಣು ಮಕ್ಕಳಿಗೆ ಗತಿಕಾಣಿಸುತ್ತೇವೆ’ ಎಂದು ಸವಾಲೆಸಿದಿದ್ದರು. ಮಹಿಳಾ ಸಂಸದರ ಬಿಂದಿ, ಬಳೆಗಳೂ ಸಹ ಇವರ ವಿಮರ್ಶೆಗೆ ಒಳಪಡುತ್ತವೆ.

‘ಮಹಿಳಾ ಸಂಸದರು, ನರ್ತಿಸುತ್ತಾ, ಕೂಣಿಯುತ್ತಾ, ಬರುತ್ತಾರೆ’, ಎನ್ನು ವವರೂ ಇಲ್ಲದಿಲ್ಲ. ಪ್ರತಿಸ್ಪರ್ಧಿಯನ್ನು ‘ಮಾಯಾಂಗನೆ’ ಎನ್ನುವವರೂ ಇದ್ದಾರೆ. ಈ ಬಗೆಯ ನಿಂದನೆ, ಛೇಡನೆಗಳಿಗೆ ಪಕ್ಷಬೇಧವೇನೂ ಇಲ್ಲ. ರಾಜಕಾರಣಿಗಳ ಮಾತಿನ ಭರಾಟೆ ತೀರ ಅತಿ
ರೇಕಕ್ಕೆ ಹೋಗಿ, ಮಹಿಳಾ ರಾಜಕಾರಣಿಗಳ ಖಾಸಗಿ ವಿಚಾರಗಳನ್ನು ಬಯಲಿಗೆಳೆದು, ಮುಜುಗರಕ್ಕೆ ಈಡಾಗುವಂತಹ ಮಾತುಗಳ ನ್ನಾಡುತ್ತಾರೆ. ಕೇಳಿಸಿಕೊಳ್ಳಲೂ ಸಾಧ್ಯವಾಗದಂತಹ ಅಸಭ್ಯ ಭಾಷೆಗಳನ್ನು ಬಳಸುತ್ತಾರೆ.

ಅವರ ಉದ್ದೇಶ ತಾವು ಮತ್ತು ತಮ್ಮ ಪಕ್ಷ ಜಯಭೇರಿಯಾಗಬೇಕೆಂದು ಇರುತ್ತದೆಯೇ ಹೊರತು ಇಂತಹ ಮಾತುಗಳಿಂದ ವಿರೋಧಿಗಳಿಗೆ ಎಷ್ಟು ಘಾಸಿಯಾಗುತ್ತದೆಂಬ ಪರಿವೆ ಇರುವುದಿಲ್ಲ. ದೇಶದಲ್ಲಿ ರಾಜಕೀಯ ಸಂವಾದ ಎಷ್ಟು ಕೆಳಮಟ್ಟಕ್ಕೆ
ಇಳಿದಿದೆ ಎಂಬುದಕ್ಕೆ ಈ ಹೇಳಿಕೆಗಳು ಸ್ಪಷ್ಟ ನಿದರ್ಶನವೆನಿಸಿವೆ. ಪಕ್ಷವೊಂದರ ಪ್ರಮುಖ ನಾಯಕಿಯೊಬ್ಬರು ‘ಮಹಿಳೆಯನ್ನು ಕೆಳಗಿಳಿಸಲು ಪುರುಷರು ಬಳಸುವ ಸುಲಭವಾದ ಮಾರ್ಗವೆಂದರೆ ಅವಳಿಗಿಂತ ವೇಗವಾಗಿ ಓಡುವುದು ಅಲ್ಲ, ಆದರೆ ಆಕೆಯ ಪಾತ್ರವನ್ನು ಹತ್ಯೆ ಮಾಡುವುದು’ ಎಂದು ಬೇಸರದಿಂದ ನುಡಿಯುತ್ತಿದ್ದರು.

ಸೌಂದರ್ಯ ಮಾತ್ರವಲ್ಲ, ತಮ್ಮ ಪ್ರತಿಭೆ ಮತ್ತು ಶಿಸ್ತುಬದ್ಧ ಜೀವನಶೈಲಿಯಿಂದಲೇ ಮೇಲಕ್ಕೆ ಬಂದಿರುವ ಮಹಿಳಾ
ರಾಜಕಾರಣಿಯೊಬ್ಬರು, ‘ನನಗೆ ಅತಿ ಮಹತ್ವಾಕಾಂಕ್ಷೆಯಿದೆಯೆಂದು ಪುರುಷ ರಾಜಕಾರಣಿಗಳು ಟೀಕಿಸುತ್ತಾರೆ. ಆದರೆ, ಓರ್ವ ಪುರುಷ ರಾಜಕೀಯವನ್ನು ಪ್ರವೇಶಿಸುವಾಗ ಜನರು ಹೀಗೆ ಮಾತನಾಡುತ್ತಾರಾ? ಮಹಿಳೆಗೆ ಮಾತ್ರ ಯಾಕೆ ಈ ತರಹದ ಪ್ರಶ್ನೆ?’ ಎಂದು ನೊಂದು ನುಡಿಯುತ್ತಾರೆ.

ಎಷ್ಟೋ ಮಹಿಳಾ ರಾಜಕಾರಣಿಗಳಿಗೆ, ಪ್ರತಿಭೆ, ರಾಜಕೀಯ ವಿಚಾರಗಳ ಬಗೆಗಿನ ಜ್ಞಾನ, ತಿಳುವಳಿಕೆಗಳು ಕೆಲ ಪುರುಷ ರಾಜಕಾರಣಿಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಇರುತ್ತದೆಂಬ ಮಾತಿನಲ್ಲಿ ಉತ್ಪ್ರೇಕ್ಷೆ ಯೇನೂ ಕಾಣಸಿಗದು. ಇಷ್ಟಾದರೂ ಗೆಲ್ಲುವ ಮಾನದಂಡವನ್ನು ಮಹಿಳೆಯರಿಗೆ ಮಾತ್ರ ಅನ್ವಯಿಸಲಾಗುತ್ತದೆ. ಪುರುಷರಿಗಾಗಲೀ ಅಥವಾ ಮಹಿಳೆಯರಿಗಾಗಲೀ ಗೆಲುವು ಸಲೀಸಾಗಿ ಒಲಿದು ಬರುವಂತಹುದಲ್ಲವೆಂಬ ಮಾತಿನಲ್ಲಿ ಸತ್ಯಾಂಶವಿಲ್ಲದಿಲ್ಲ. ಹಣಬಲ, ತೋಳ್ಬಲ, ಧರ್ಮ-ಜಾತಿಗಳ ದುರ್ಬಳಕೆ, ತಂತ್ರ- ಕುತಂತ್ರಗಳ ಆಧಾರದಲ್ಲಿಯೇ ಸೋಲು-ಗೆಲುವುಗಳ ಮಾನದಂಡವಾಗಿದ್ದರೆ, ಮಹಿಳೆಯರಿಗೆ ಅನ್ವಯಿಸ ಬಹುದಾದ ಮಾನದಂಡಗಳೇನು? ಎಂಬ ಪ್ರಶ್ನೆ ಮೂಡುತ್ತದೆ.

ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೇವಲ ಅಲಂಕಾರದ ಗೊಂಬೆಗಳನ್ನಾಗಿ ಪರಿಗಣಿಸದೇ, ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಬದ್ಧತೆ ತೋರಬೇಕು. ಹಣ ಹಂಚಿಕೆ ಮತ್ತು ತೋಳ್ಬಲ ಪ್ರದರ್ಶನದ ಕೊಳಕನ್ನು ತೊಳೆ
ಯುವುದು ಸಹ ಮಹಿಳಾ ರಾಜಕಾರಣಿಗಳಿಂದ ಸಾಧ್ಯವೆನ್ನಬಹುದು. ಕೆಲ ಪುರುಷ ರಾಜಕಾರಣಿ ಗಳು ಹೆಂಡತಿ, ಮಗಳು ಇಲ್ಲವೇ ಸೋದರಿಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿರುವ ನಿದರ್ಶನಗಳಿವೆ. ಕುಟುಂಬಗಳ ಆಸ್ತಿಯ ರೂಪದಲ್ಲಿ, ಅಧಿಕಾರ ಹಂಚಿಕೆಯಾಗುತ್ತಿರುವುದು ಪ್ರಜಾ ಪ್ರಭುತ್ವದಲ್ಲಿ ಆರೋಗ್ಯಕರ ಬೆಳವಣಿಗೆಯೆನಿಸದು.

ಅಧಿಕಾರ ಮತ್ತು ಅವಕಾಶಗಳು ದೊರೆತಾಗಲೆ ಪ್ರತಿಭಾವಂತ ಮಹಿಳಾ ರಾಜಕಾರಣಿಗಳು ತಮ್ಮ ಸಾಮರ್ಥ್ಯವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ನಿರೂಪಿಸಿದ್ದಾರೆ. ಇಂಥವರ ಸ್ಪರ್ಧೆಯಿಂದ ಚುನಾವಣೆಗಳಿಗೂ ಹೊಸತೊಂದು ಆಯಾಮ ದೊರೆಯಲಿದೆ ಯೆಂಬ ಮಾತು ನಿರ್ವಿವಾದ. ಜನಪರ ಕಾಳಜಿಗಳು, ಮಹಿಳಾ ರಾಜಕಾರಣಿಗಳನ್ನು ಗ್ಲಾಮರ್‌ನಿಂದಾಚೆಗೆ ಕರೆದೊಯ್ದಿರುವುದು ಸಹ ಗಮನಾರ್ಹ. ‘ನೀವು ನಮಗೆ ಬಾಗಿಲನ್ನು ತೆರೆದು ಹೆಜ್ಜೆ ಇಡಲು ಬಿಡಿ. ಆಮೇಲೆ ನಾವು ಎಲ್ಲವನ್ನೂ ಸರಿ ಮಾಡುತೇವೆ’ ಎಂದು ಮಹಿಳಾ ರಾಜಕಾರಣಿಯೊಬ್ಬರು ಸಂಸತ್ತಿನಲ್ಲಿ ಗುಡುಗಿದ್ದಾರೆ.

ನಗರ ಪ್ರದೇಶಗಳಲ್ಲಿ ಮಹಿಳಾ ರಾಜಕಾರಣಿಗಳ ಉಡುಗೆ-ತೊಡುಗೆಗಳ ಬಗ್ಗೆ ಪುರುಷ ರಾಜಕಾರಣಿಗಳಿಂದ ಟೀಕೆಗಳು ಮೂಡಿ ಬಂದರೆ, ಗ್ರಾಮೀಣ ಪ್ರದೇಶಗಳಲ್ಲಿ, ‘ನಮ್ಮ ಜೀವನಶೈಲಿಗೆ ಪುರುಷ ಪಾಳೇಗಾರಿಕೆಯೇ ಸಹಜವಾದದ್ದು’ ಎನ್ನುವ ಹಾಗೆ ನಡೆಯುತ್ತಿದೆ. ಉಡುಗೆ-ತೊಡುಗೆಗಳ ಜೊತೆ ಜೊತೆಗೆ ತಮ್ಮ ಮಾತಿಗೆ ಎದುರಾಡದೆ ಬದುಕುವ ಪತ್ನಿ ಮಾತ್ರ ರಾಜಕೀಯ ಪ್ರವೇಶಿಸಲು ಅರ್ಹಳೆಂದು ಪತಿ ನಿರ್ಧರಿಸಿಯಾಗಿರುತ್ತದೆ. ಸ್ವತಂತ್ರಳಾಗಿ ವಿಚಾರ ಮಾಡುವ ಜನಪರ ನಿರ್ಧಾರ ಕೈಗೊಳ್ಳುವ ಮಹಿಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಅವಕಾಶ ಕಡಿಮೆಯೆನ್ನ ಬಹುದು. ಸಂವಿಧಾನಬಧ್ಧ ಅಧಿಕಾರವನ್ನು ಚಲಾಯಿಸುವಲ್ಲಿ ಮಹಿಳೆಯರನ್ನು ಅಡ್ಡಿ ಪಡಿಸುವ ಪುರುಷರ ಸಂಖ್ಯೆ ಕಡಿಮೆಯೇನಿಲ್ಲ.

ರಾಜಕಾರಣಿಗಳು ಐದು ವರ್ಷಗಳಿಗೊಮ್ಮೆ ಮಾತ್ರ ಕಾಣಸಿಗುತ್ತಾರೆ. ಅವರ ನಡೆ, ನುಡಿ, ಭಾಷಣಗಳು ಕೇವಲ ಆಶ್ವಾಸನೆಗಳ ರೂಪದಲ್ಲಿರುತ್ತವೆ, ಎಂದು ಮತದಾರರು ಅಭಿಪ್ರಾಯ ಪಡುತ್ತಾರೆ. ಈ ದಿನ ಸ್ವಪಕ್ಷಿಯಾಗಿರುವವರು ನಾಳೆ ಪ್ರತಿಸ್ಪರ್ಧಿ ಯಾಗಿರುತ್ತಾರೆ. ಯಾರು ಹಿತವರು ನಿಮಗೆ? ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಒಳ್ಳೆಯ ಅಭ್ಯರ್ಥಿಗಳನ್ನು ಆರಿಸುವುದು ಕಷ್ಟವಾಗಿದ್ದರೆ ಮತದಾನವನ್ನು ಬಹಿಷ್ಕರಿಸದೇ ಕಡಿಮೆ ಕೆಟ್ಟವರಿಗೆ ಮತ ಚಲಾಯಿಸುವುದು ಸೂಕ್ತ. ಇಂತಹ ಕೊಳಕು ರಾಜಕಾರಣದ ಸಹವಾಸ ಬೇಡವೇ ಬೇಡ, ಎಂದುಕೊಳ್ಳುವ ಮಹಿಳೆಯರ ಸಂಖ್ಯೆಯೇ ಜಾಸ್ತಿ. ತಮ್ಮ ಪ್ರತಿಭೆ.

ಪರಿಶ್ರಮಗಳಿಂದ ಸೇನೆ, ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿರುವ ಮಹಿಳೆಯರು, ಪ್ರತಿಸ್ಪರ್ಧಿ ಗಳು ಚೂಪಾಗಿಸಿಕೊಂಡು ಎಸೆಯುವ ನುಡಿ ಬಾಣಗಳಿಗೆ ಉದಾಸೀನತೆಯನ್ನು ತೋರಿ ಮುಂದಡಿಯಿರಿಸುತ್ತಿದ್ದಾರೆ. ಮಹಿಳೆ ಯರತ್ತ ಎಸೆಯುವ ವ್ಯಂಗ್ಯೋಕ್ತಿ ಬಾಣಗಳಿಂದ, ಪುರುಷ ಪ್ರತಿಸ್ಪರ್ಧಿಗಳು, ತಮ್ಮ ದೌರ್ಬಲ್ಯ, ಅರ್ಹತೆ, ಸಾಮರ್ಥ್ಯ ಗಳನ್ನು ಮತದಾರರ ಎದುರು ಬಿಡಿಸಿ ಇರಿಸುತ್ತಿದ್ದಾರೆ.

ಎಲ್ಲಾ ಸ್ಥಾನಗಳಲ್ಲಿಯೂ ರಾಜಕಾರಣ ಸ್ಥಾನ ಪಡೆದಿರುವಾಗ, ರಾಜಕಾರಣದಿಂದ ದೂರವುಳಿಯುವುದು ಮಹಿಳೆಯರಿಗೆ ಅಸಾಧ್ಯವೆನ್ನಬಹುದು. ಹಣಬಲ, ತೋಳ್ಬಲವಿರುವವರು ಚುನಾವಣೆಗಳನ್ನು ಗೆಲ್ಲುತ್ತಾ ನಡೆದರೆ, ಮೌಲ್ಯಾಧಾರಿತ ರಾಜಕಾರಣ
ಹಿನ್ನಡೆಯನ್ನನುಭವಿಸುತ್ತದೆಂಬ ಮಾತು ಸರ್ವವಿದಿತ. ನಡೆ-ನುಡಿಗಳಲ್ಲಿ ಸಂಯಮ ತೋರದ, ಭಂಡತನ, ಲೋಭಗಳನ್ನೇ ಬಂಡವಾಳವಾಗಿಸಿಕೊಂಡು ರಾಜಕಾರಣಿಗಳು ಜಯಭೇರಿ ಬಾರಿಸುತ್ತಿರುವುದರಲ್ಲಿ ಮತದಾರರ ಪಾತ್ರವೂ ಇಲ್ಲದಿಲ್ಲ.

ನಾಲಿಗೆ ಮೇಲೆ ಹಿಡಿತವಿಲ್ಲದೆ, ಮಹಿಳೆಯರನ್ನು ಕುರಿತು ಹಗುರವಾಗಿ ಮಾತನಾಡುವ ಮತ್ತು ನಿಂದಿಸುವ ಪುರುಷ ರಾಜಕಾರಣಿ ಗಳನ್ನು ಪಕ್ಷಾತೀತವಾಗಿ ವಿರೋಧಿಸುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತ ಪಡಿಸಬೇಕು. ಜಾತಿ ಮತ್ತು ಲಿಂಗಾಧಾರಿತ
ತಾರತಮ್ಯ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗದಿದ್ದರೆ, ಸ್ವಸ್ಥ ಪ್ರಜಾಪ್ರಭುತ್ವದ ಕಲ್ಪನೆ ಸಾಕಾರವಾಗಲಾರದು. ರಾಜಕಾರಣಿಗಳಲ್ಲಿ ನೈತಿಕತೆಯನ್ನು ಮರುಸ್ಥಾಪಿಸುವ ಹೊಣೆಗಾರಿಕೆ ಮಹಿಳೆಯರಿಗಿದೆ. ಚುನಾವಣೆಗಳ ಕಲ್ಮಶವನ್ನು ತೊಳೆ ಯುವ ನಿಟ್ಟಿನಲ್ಲಿ ಮಹಿಳಾ ರಾಜಕಾರಣಿಗಳಿಗೆ ಪ್ರಾತಿನಿಧ್ಯ ಮತ್ತು ಪ್ರೋತ್ಸಾಹ ಅತ್ಯಗತ್ಯ.