Saturday, 7th September 2024

ಅಂದ ಹಾಗೆ ಇದು ಆಪರೇಷನ್‌ ಪೇಪರ್‌ ಕ್ಲಿಪ್‌ !

ಶಿಶಿರ ಕಾಲ

shishirh@gmail.com

ಕುಮಟಾ, ಹೊನ್ನಾವರ, ಸಿರ್ಸಿ ಹೋಟೆಲ್ಲುಗಳಲ್ಲಿ ಮಿಸಾಳ್ ಭಾಜಿ ಎಂಬ ಒಂದು ತಿಂಡಿ ಸಿಗುತ್ತದೆ. ಅವಲಕ್ಕಿ, ಕರಿದ ಶೇಂಗಾ, ಈರುಳ್ಳಿ, ಮ್ಯಾಟೋ, ಚುಡುವಾ, ಬೆಲ್ಲ, ಹುಳಿ, ಖಾರ, ಮಸಾಲೆ ಸಾಂಬಾರು, ಮೇಲೊಂದಿಷ್ಟು ಸಕ್ಕರೆ ಮತ್ತು ಚಂದಕ್ಕೆ
ಕೊತ್ತಂಬರಿ ಸೊಪ್ಪು. ಹೀಗೆ ಸುಮಾರು ಹತ್ತು-ಹದಿನೈದು ಆಹಾರ ಪದಾರ್ಥವನ್ನು ಸೇರಿಸಿ ಮಾಡುವ ಒಂದು ಹೋಟೆಲ್ ದಿಢೀರ್ ತಿಂಡಿ. ಬಹುಷಃ ಇದು ಭೇಲ್ ಪುರಿ, ಮಸಾಲ ಪುರಿ ಇವೇ ಮೊದಲಾದ ಚಾಟ್‌ಗಳೊಂದಿಗೆ ಸ್ನೇಹ ಮಾಡಿಕೊಂಡಿದ್ದರೆ ಅದ್ಯಾ ವತ್ತೋ ದೇಶದ ಮೊದಲ ತಿಂಡಿಯಾಗಿ ಬಿಡುತ್ತಿತ್ತು.

ಆದರೆ ನಸೀಬು ಸರಿಯಿಲ್ಲದ್ದರಿಂದ ತೀರಾ ಒಂದೆರಡು ತಾಲೂಕಿಗೆ ಮಾತ್ರ ಸೀಮಿತವಾಗಿ ಉಳಿದುಕೊಂಡಿದೆ. ಮಿಸಾಳ್ ಎಂದರೆ ಮಿಕ್ಸ್. ಈ ಮಿಕ್ಸೋಲಾಜಿಯಲ್ಲಿ ಒಬ್ಬೊಬ್ಬರದು ಒಂದೊಂದು ಹದವಾಗಿರುವುದರಿಂದ ರುಚಿ ಯಾವುದೇ ಎರಡು ಹೋಟೆಲ್ಲಿ ನಲ್ಲಿ ಒಂದೇ ಇರುವುದಿಲ್ಲ. ನಮ್ಮ ಕಡೆ ಯಾರೇ ಹಲವು ವಿಷಯಗಳನ್ನು ಸೇರಿಸಿ ಗೊಂದಲ ವಾಗುವಂತೆ ಮಾತಾಡಿದಾಗ ಅಥವಾ ಒಟ್ಟಿಗೆ ಎರಡು ಮೂರು ಕೆಲಸವನ್ನು ಕೈಗೆತ್ತಿ ಕೊಂಡು ಒಂದನ್ನೂ ಸುಸೂತ್ರ ಮಾಡದಿದ್ದಾಗ ‘ಮಿಸಾಳ್ ಭಾಜಿ ಮಾಡಿಬಿಟ್ಟೆ’ ಎಂದು ಹೋಲಿಕೆ ಮಾಡಿ ಹೇಳುವುದಿದೆ.

ಅಮೆರಿಕ ದೇಶ ಹೇಗಿದೆ? ವಿವರಿಸಿ ಎಂದು ಕೇಳಿದರೆ ನನಗೆ ಥಟ್ಟನೆ ನೆನಪಾಗುವುದು ನಮ್ಮೂರ ಮಿಸಾಳ್ ಭಾಜಿ. ಏಕೆಂದರೆ ಅಮೆರಿಕ ಹಾಗಿದೆ. ನಾನಾ ದೇಶ, ಸಂಸ್ಕೃತಿ, ಧರ್ಮದ ಕಲಸುಮೇಲೋರಗ. ನ್ಯೂಯಾರ್ಕ್‌ ನ ಟೈಮ್ಸ್ ಸ್ಕ್ವೇರ್‌ನಲ್ಲಿ ಹತ್ತು ನಿಮಿಷ ನಡೆದರೆ ನೀವು ಜಗತ್ತಿನ ಅಷ್ಟೂ ದೇಶದ ಜನರನ್ನು ಹಾದು ಹೋಗಿರುತ್ತೀರಿ ಎನ್ನುವುದು ಪ್ರವಾಸೋದ್ಯಮದ ಅತಿಶಯ ಖಂಡಿತ ಅಲ್ಲ. ಇದಕ್ಕೆ ಟೈಮ್ಸ್ ಸ್ಕ್ವೇರ್ ಒಂದೇ ಉದಾಹರಣೆಯೂ ಅಲ್ಲ. ಅಮೆರಿಕದ ಯಾವುದೇ ಮೆಟ್ರೋಪಾಲಿಟನ್ ನಗರದಲ್ಲಿ ನಡೆದರೂ ಹೀಗೆಯೇ.

ನನ್ನ ಚಿಕಾಗೋದ ಮನೆಯ ಸಾಲಿನಲ್ಲಿ ಹದಿನೈದು ಮನೆಗಳಿವೆ, ಅದರಲ್ಲಿ ಹತ್ತು ದೇಶದಿಂದ ಬಂದವರು, ಮೂಲದವರಿದ್ದಾರೆ. ಈ ರೀತಿ ವಲಸೆ ಬಂದವರ ಎರಡು ಮೂರನೇ ಸಂತತಿಯವರೆಗೆ ಅವರ ಮೂಲ ನೋಡಿಯೇ ಗ್ರಹಿಸಬಹುದು. ಅದಕ್ಕಿಂತ ಹಿಂದಿನವರೆಲ್ಲ ಬೇರೆಯದೇ ಒಂದು ತಳಿಯಾಗಿ ಬಿಟ್ಟಿದ್ದಾರೆ. ಅವರು ಬೇರೆ ದೇಶದ ಬೇರೆ ಸಂಸ್ಕೃತಿಯವರನ್ನು ಮದುವೆ ಯಾಗಿ ಅದರಿಂದ ಹಲವು ಹೈಬ್ರಿಡ್ ಸಂಸ್ಕೃತಿಗಳು ಹುಟ್ಟಿಕೊಂಡಿವೆ.

ಅಮೆರಿಕ ಎಂದರೆ ಮಿಸಾಳ್ ಭಾಜಿ ಸಂಸ್ಕೃತಿ. ಅಮೆರಿಕದಲ್ಲಿ ನೀವು ಅಮೆರಿಕನ್ ಇಂಡಿಯನ್ ಆಗಿ ಬದುಕಬಹುದು. ಇಸ್ರೇಲಿ ಅಮೆರಿಕನ್ ಆಗಿ, ಅಮೆರಿಕನ್ ಅರಬ್ಬಿಯಾಗಿ, ಹೀಗೆ ಇಲ್ಲಿ ಇದ್ದು ನಮ್ಮತನವನ್ನು ಸಂಪೂರ್ಣವಾಗಿ ಆಚರಿಸುವ, ಸಂಭ್ರಮಿಸುವ ಸ್ವಾತಂತ್ರ್ಯ ಇಲ್ಲಿ ಸಹಜವಾಗಿ ಇದೆ. ಇಲ್ಲಿನಂತೆ ಬದುಕುವುದು ಹಲವು ದೇಶಗಳಲ್ಲಿ ಅಸಾಧ್ಯ. ಇಲ್ಲಿ ಮನೆಗಳ ಎದುರು ಬಾಗಿಲಿಗೆ ಅಮೆರಿಕನ್ ಧ್ವಜ ಮತ್ತು ಅವರ ಮೂಲ ದೇಶದ ಧ್ವಜ ಎರಡನ್ನೂ ಪ್ರದರ್ಶಿಸುವುದು ಕಾಣುವುದು ಸಾಮಾನ್ಯ. ಹರ್ ಘರ್ ತಿರಂಗಾ ಸಮಯದಲ್ಲಿ ಮನೆಯ ಎದುರಿಗೆ ಭಾರತದ ಧ್ವಜ ಹಾಕಿದರೆ ಯಾರದ್ದೂ ತಕರಾರು ಬರಲಿಲ್ಲ.

ಅಮೆರಿಕದಲ್ಲಿ ಇದ್ದಷ್ಟು ಅಂತಾರಾಷ್ಟ್ರೀಯ ಕೌಟುಂಬಿಕ ಸಾಂಸ್ಕೃತಿಯ ವೈವಿಧ್ಯ ಇನ್ನೊಂದು ದೇಶದಲ್ಲಿಲ್ಲ. ಇಷ್ಟು ವೈವಿಧ್ಯಕ್ಕೆ ಕಾರಣ ಇಡೀ ದೇಶವೇ ವಲಸಿಗರದ್ದು. ಕೆಲವರು ಇತ್ತೀಚೆಗೆ ಬಂದವರಿರಬಹುದು, ಇನ್ನು ಕೆಲವರು ಕೆಲ ನೂರು ವರ್ಷದ ಹಿಂದೆ. ಮೂಲ ನಿವಾಸಿಗಳು ಮೊದಲೇ ಇದ್ದದ್ದು ಕಡಿಮೆ, ಈಗ ಸಂಖ್ಯೆ ನಗಣ್ಯ. ನಿರಂತರವಾಗಿ ಈ ದೇಶಕ್ಕೆ ವಿದೇಶದಿಂದ ಹರಿದು ಬರುವಷ್ಟು ವಲಸಿಗರ ಪ್ರಮಾಣ ಇನ್ನೊಂದು ದೇಶದಲ್ಲಿ ಇಲ್ಲ. ಅದರಲ್ಲಿ ಅಕ್ರಮವಾಗಿ ಒಳನುಸುಳಿ ಬರುವವರ ಸಂಖ್ಯೆ ಕೂಡ ದೊಡ್ಡ ಪ್ರಮಾಣದಲ್ಲಿದೆ.

ಅಮೆರಿಕದ್ದು ೩೩ ಕೋಟಿ ಜನಸಂಖ್ಯೆ. ಅದರಲ್ಲಿ ಸುಮಾರು ಐದು ಕೋಟಿ ಜನರು ಹುಟ್ಟಿದ್ದು ಬೇರೆ ದೇಶದಲ್ಲಿ. ಉಳಿದ ೨೮ ಕೋಟಿಯಲ್ಲಿ ಒಂದರಿಂದ ಎಂಟು ತಲೆಮಾರು ಹಿಂದೆ ಈ ದೇಶಕ್ಕೆ ಬಂದವರೇ ಹೆಚ್ಚು. ಆ ಕಾರಣಕ್ಕೆ ಅಮೆರಿಕ ಎಂದರೆ ಮನುಷ್ಯ ಜೀನ ಮಿಸಾಳ್ ಭಾಜಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿದಂತೆ. ಅಮೆರಿಕವನ್ನು ಪ್ರತಿ ವರ್ಷ ಹತ್ತು ಲಕ್ಷ ಅನ್ಯದೇಶದ ನಾಗರಿಕರು ಬಂದು ಸೇರಿಕೊಳ್ಳುತ್ತಾರೆ, ಇಲ್ಲಿಯವರೇ ಆಗಿಹೋಗುತ್ತಾರೆ. ಇಂತಹ ಸಮಾಜದ ವೈವಿಧ್ಯ ನಮ್ಮಲ್ಲಿನ ವೈವಿಧ್ಯಕ್ಕಿಂತ ವಿಭಿನ್ನ. ಊಹಿಸಿಕೊಳ್ಳಿ.

ಅಮೆರಿಕಕ್ಕೆ ವಲಸೆ ಬರುವವರಲ್ಲಿ ಉದ್ಯೋಗಕ್ಕೆ, ಅವರ ನೇರ ಸಂಬಂಧಿಗಳು ಒಂದು ಕಡೆಯಾಯಿತು. ಇನ್ನೊಂದು ನಿರಾಶ್ರಿತ ರದು. ಆ ವರ್ಗದಲ್ಲಿ ಅಮೆರಿಕ ಹೋಗಿ ಯುದ್ಧ ಮಾಡಿ, ಅವಾಂತರ ಎಬ್ಬಿಸಿ, ಅವರಿಗೆ ಸಹಾಯ ಮಾಡಿದವರನ್ನು, ಆ ದೇಶದಲ್ಲಿ ಅಮೆರಿಕನ್ನರ ಪರ ನಿಂತವರನ್ನು, ಅಲ್ಲಿನ ಮಂತ್ರಿ ಮಾಗಧರನ್ನು ಒಳಬಿಟ್ಟುಕೊಳ್ಳುವುದು. ವಿಯೆಟ್ನಾಮ್ ಯುದ್ಧ, ಇರಾಕ್-ಇರಾನ್ ಯುದ್ಧ, ಹೀಗೆ ಯುದ್ಧವೊಂದು ಮುಗಿಯುವಾಗ ಅಲ್ಲಿನ ಜನರ ದಂಡೊಂದು ನಿರಾಶ್ರಿತರಾಗಿ ಇಲ್ಲಿ ಒಳಬರುವುದು ಸಾಮಾನ್ಯ.

ಅಫ್ಘನ್ ಯುದ್ಧ ಹಿಂದಿನ ವರ್ಷ ಮುಗಿದಾಗ ನಾನಿರುವ ಊರಿಗೆ ತಾತ್ಕಾಲಿಕವಾಗಿ ಸಾವಿರಗಟ್ಟಲೆ ಅಫ್ಘಾನಿಗಳು ಬಂದಿದ್ದರು. ಆಗ ಅವರೆಲ್ಲ ದಂಡು ದಂಡಾಗಿ ವಾಲ್ಮಾರ್ಟ್ ಮೊದಲಾದ ಅಂಗಡಿಗಳಿಗೆ ಬರುವುದು ಕಾಣಿಸುತ್ತಿತ್ತು. ಅವರನ್ನು ಎಲ್ಲಿ, ಯಾವ ರಾಜ್ಯದ ಯಾವ ಊರಿನಲ್ಲಿ ಬಿಡಬೇಕು ಎನ್ನುವುದು ಇಲ್ಲಿನ ರಾಜಕಾರಣದ ಒಂದು ಭಾಗ. ಹೀಗೆ ಬರುವವರ ಒಂದೊಂದು
ಕುಟುಂಬದ್ದು, ವ್ಯಕ್ತಿಯದು ಎರಡು-ಮೂರು ಸಿನಿಮಾ ಆಗುವಷ್ಟು ಕಥೆ. ಇದೆಲ್ಲ ಅಮೆರಿಕ ಇತ್ತೀಚೆ ಶುರು ಮಾಡಿದ್ದಲ್ಲ. ಈ ರೀತಿ ಯುದ್ಧೋತ್ತರ ವಲಸೆ ಹಿಂದಿನಿಂದ ನಡೆದುಕೊಂಡುಬಂದದ್ದು.

ಎರಡನೇ ಮಹಾಯುದ್ಧದ ಭರಾಟೆ ಕೊನೆಯ ಹಂತದಲ್ಲಿದ್ದ ಸಮಯ. ಯುದ್ಧ ಮುಗಿಯುವುದೆಂದರೆ ಎಲೆಕ್ಟ್ರಿಕ್ ಸ್ವಿಚ್ ಬಂದ್ ಮಾಡಿದಂತಲ್ಲವಲ್ಲ. ಮದ್ದುಗುಂಡಿನ ಆವಾಜು ನಿಂತಾಕ್ಷಣ ಯುದ್ಧ ಮುಗಿದುಬಿಡುವುದಿಲ್ಲ. ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಟ್ರೂಪ್‌ಗಳು ಯುದ್ಧ ಗೆದ್ದಾಗಿತ್ತು. ಅದಾಗಲೇ ಹಿಟ್ಲರ್ ಸತ್ತು ನಾಲ್ಕು ತಿಂಗಳು ಕಳೆದಿತ್ತು. ಎರಡನೇ ಮಹಾಯುದ್ಧ ಇತಿಹಾಸದ ನಡೆದ ಮೊದಲ ಆಧುನಿಕ ವೈeನಿಕ ಯುದ್ಧ. ಈ ಯುದ್ಧದ ಅನಿವಾರ್ಯತೆ ಹೇಗೆಲ್ಲ ಆವಿಷ್ಕಾರಗಳಿಗೆ ಕಾರಣವಾಯಿತು,
ಡ್ರಗ್ಸ್ ಹಿನ್ನೆಲೆಯಲ್ಲಿ ಏನೇನೆಲ್ಲ ಅಮಾನವೀಯ ಪ್ರಯೋಗಗಳು ನಡೆದವು ಎನ್ನುವುದನ್ನು ಹಿಂದೊಮ್ಮೆ ಸರಣಿ ಲೇಖನದಲ್ಲಿ ಬರೆದಿದ್ದೆ.

ಅತ್ಯಾಧುನಿಕ ಬಂದೂಕುಗಳು, ರೇಡಾರ್, ಜೆಟ್ ವಿಮಾನಗಳು, ಅಣ್ವಸ ಇವೆಲ್ಲ ಆವಿಷ್ಕಾರವಾಗಿ, ಬಳಕೆಯಾಗಿ ನಡೆದ ಯುದ್ಧ ಅದು. ಯುದ್ಧದ ಪೈಪೋಟಿ ರಣರಂಗದಲ್ಲಷ್ಟೇ ಅಲ್ಲದೆ ವಿಜ್ಞಾನ ಕ್ಷೇತ್ರದಲ್ಲಿ ಕೂಡ ತುರುಸು ಸಮಾನಾಂತರವಾಗಿ ನಡೆದಿತ್ತು.
ಆಗೆಲ್ಲ ಸ್ಯಾಟಲೈಟ್, ಇಂಟರ್‌ನೆಟ್ ಇಲ್ಲದ ಕಾಲ. ಹಾಗಾಗಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಜರ್ಮನ್ನರು ಏನೇನು ಆವಿಷ್ಕರಿಸಿ ದ್ದರು ಎನ್ನುವುದರ ಅಂದಾಜೂ ಇರಲಿಲ್ಲ. ಅಮೆರಿಕನ್ ಬೇಹುಗಾರಿಕೆಗೆ ಜರ್ಮನಿಯಲ್ಲಿ ಆದ ವೈಜ್ಞಾನಿಕ ಅವಿಷ್ಕಾರದ ಮೇಲೆ ಹಿಡಿತ ಸಾಧಿಸುವ ಅವಶ್ಯತೆ ತಿಳಿದಿತ್ತು.

ಹಾಗೆಯೇ ಬಿಟ್ಟರೆ ಆವಿಷ್ಕಾರ ಮತ್ತು ವಿಜ್ಞಾನಿಗಳು ಸೋವಿಯತ್‌ನ ಪಾಲಾಗುತ್ತಿದ್ದವು. ಅದರಿಂದ ಅಮೆರಿಕಕ್ಕೆ ಸಹಜ ಆತಂಕ ಶುರುವಾಗಿತ್ತು. ಜರ್ಮನ್ ಮೇಡ್ ಎಂದರೆ ಇವತ್ತಿಗೂ ವಿಶ್ವಾಸಾರ್ಹ. ಆಗ ಜರ್ಮನ್ ತಂತ್ರಾಂಶ ಅಮೆರಿಕನ್ ಮಿತ್ರರಾಷ್ಟ್ರ ಗಳದ್ದಕ್ಕಿಂತ ಉತ್ಕೃಷ್ಟವಾಗಿತ್ತು. ಅದಲ್ಲದೆ ಹಿಟ್ಲರ್ ಬತ್ತಳಿಕೆಯಲ್ಲಿ ಬಳಸದೇ ಹೋದ ಅದೆಷ್ಟೋ ತಂತ್ರಜ್ಞಾನ, ಯುದ್ಧ
ಸಲಕರಣೆಗಳಿದ್ದವು ಎನ್ನುವ ಗಾಳಿ ಸುದ್ದಿ ಅಮೆರಿಕಕ್ಕೆ ಮುಟ್ಟಿತ್ತು.

ಯುದ್ಧ ತಂತ್ರಜ್ಞಾನ ಅಷ್ಟೊಂದು ಬೆಳೆದಿದೆ ಎಂದರೆ ಇನ್ನೂ ಬೆಳೆಯುತ್ತಿದೆ ಮತ್ತು ಅದನ್ನು ಬೆಳೆಸುವ ವಿಜ್ಞಾನಿಗಳು ಅಲ್ಲಿ ಇzರೆ ಎಂದರ್ಥ. ಸೋವಿಯತ್ ಅವರೆಲ್ಲರನ್ನು ತೆಕ್ಕೆಗೆ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಅವರಿಗಿಂತ ಅಮೆರಿಕ ಹಿಂದೆ ಬೀಳುವ ಸ್ಥಿತಿ. ಹಾಗೆಯೇ ಬಿಟ್ಟರೆ ಮುಂದೊಂದು ದಿನ ಜರ್ಮನಿಯೇ ಬೆಳೆದು ಅಮೆರಿಕದ ಮೇಲೆ ಕೇಳರಿಯದ ರೀತಿ ದಾಳಿ ಮಾಡಬ ಹುದು. ಆಗ ಜರ್ಮನಿಯ ಪಶ್ಚಿಮ ಭಾಗವನ್ನು ಅಮೆರಿಕದ ಮಿತ್ರ ರಾಷ್ಟ್ರಗಳು ಒತ್ತುವರಿದಿದ್ದವು.

ಪೂರ್ವದಲ್ಲಿ ಸೋವಿಯತ್ ಪ್ರಭಾವ ಇನ್ನೂ ಇತ್ತು. ಹೀಗಿರುವಾಗ ಬರೋಬ್ಬರಿ ಮೂರು ಸಾವಿರ ಜರ್ಮನ್ ವಿಜ್ಞಾನಿಗಳು
ಬರ್ಲಿನ್ ನಗರದಲ್ಲಿ ಸೇರಿಕೊಂಡಿದ್ದರು. ಆ ಸಮಯದಲ್ಲಿ ಜರ್ಮನ್ನರ ರೇಡಾರ್, ಮಿಸೈಲ, ಔಷಧ ಗಳು, ರಾಸಾಯನಿಕ ಮತ್ತು ಜೈವಿಕ ಅಸಗಳು, ಅಣ್ವಸ, ಹೀಗೆ ಈ ಎಲ್ಲ ವೈಜ್ಞಾನಿಕ ಮುನ್ನಡೆಯನ್ನು ಅಂದಾಜಿಸ ಲೆಂದೇ ಅಮೆರಿಕ ಮತ್ತು ಬ್ರಿಟನ್ ಸೇರಿ ಇಐuಖ ಎನ್ನುವ ಸಂಸ್ಥೆ ಹುಟ್ಟಿಹಾಕಿತು. ಅತ್ತ ಸೋವಿಯತ್ ಕೂಡ ಇದೇ ಕೆಲಸಕ್ಕೆ ಇನ್ನೊಂದು ದಿಕ್ಕಿನಿಂದ ಇಳಿದಿತ್ತು. ಇಬ್ಬರಿಗೂ ಜರ್ಮನ್ನರ ತಂತ್ರಜ್ಞಾನ ಮತ್ತು ವಿಜ್ಞಾನಿಗಳು ಬೇಕು.

ಮಿಸೈಲ್ ತಂತ್ರಜ್ಞಾನದಲ್ಲಿ ಜರ್ಮನಿ ಸಾಕಷ್ಟು ಮುಂದಿತ್ತು. ಇದೆಲ್ಲ ನಡೆಯುವಾಗ ಅದಾಗಲೇ ಮಿಸೈಲ್ ಸಂಬಂಧಿಸಿದ ಶೇ.೮೦ರಷ್ಟು ವಿಜ್ಞಾನಿಗಳು ಜರ್ಮನಿಯಿಂದ ಕಾಣೆಯಾಗಿಬಿಟ್ಟಿರು. ಅವರನ್ನೆಲ್ಲ ಸೋವಿಯತ್ ಮಾಸ್ಕೋಗೆ ಹೊತ್ತೊಯ್ದಿತ್ತು. ಎರಡು ಜರ್ಮನ್ ಭೌತಶಾಸ ಸಂಸ್ಥೆಗಳನ್ನೇ ಸೋವಿಯತ್ ಯಥಾವತ್ತು ಮಾಸ್ಕೋದಲ್ಲಿ ಪುನರ್ ಸ್ಥಾಪಿಸಿತ್ತು. ಇದು ಅಮೆರಿಕದ ಇನ್ನಷ್ಟು ಗಡಿಬಿಡಿಗೆ, ಆತಂಕಕ್ಕೆ ಕಾರಣವಾಯಿತು.

ಜರ್ಮನ್ನರ ಮಿಸೈಲ್ ತಂತ್ರಜ್ಞಾನಕ್ಕೆ  ಇನ್ನೊಂದು ಆರು ತಿಂಗಳು ಸಮಯ ಸಿಕ್ಕಿಬಿಟ್ಟಿದ್ದರೆ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಗೆಲುವು ಸಾಧ್ಯವೇ ಆಗುತ್ತಿರಲಿಲ್ಲ ಎನ್ನುವ ಅನಿಸಿಕೆಯಿದೆ. ಅಮೆರಿಕ ಮಿಸೈಲ್ ತಂತ್ರಜ್ಞಾನದಲ್ಲಿ ಜರ್ಮನಿಗಿಂತ ಕನಿಷ್ಠ ಇಪ್ಪತ್ತು ವರ್ಷ ಹಿಂದಿತ್ತು. ಹಾಗಾಗಿ ಅಮೆರಿಕಕ್ಕೆ ಜರ್ಮನಿಯ ಅದಾಗಲೇ ಅಭಿವೃದ್ಧಿಯಾದ ತಂತ್ರಜ್ಞಾನ ಸಿಕ್ಕಿಬಿಟ್ಟರೆ ಆವಿಷ್ಕಾರಕ್ಕೆ ವ್ಯಯಿಸ ಬೇಕಾದ ಸಮಯ, ಹಣ ಮತ್ತು ತಾಪತ್ರಯ ತಪ್ಪುತ್ತಿತ್ತು. ಹಾಗಾಗಿ ಈ ವಿಜ್ಞಾನಿಗಳನ್ನು, ಅವರ ಜ್ಞಾನವನ್ನು ಅಮೆರಿಕಕ್ಕೆ ಹಿಡಿದು ತರುವುದು ಬಹಳ ಮಹತ್ವದ್ದಾಗಿತ್ತು.

೨ ರಾಕೆಟ್ ಜರ್ಮನ್ನರ ಆವಿಷ್ಕಾರ. ಅದರ ವೇಗ ಮತ್ತು ಸಾಮರ್ಥ್ಯ ಆಗಲೇ ಹೇಗಿತ್ತೆಂದರೆ, ಆಗ ಇದ್ದ ಯಾವುದೇ ಯುದ್ಧ ವಿಮಾನದಿಂದ ಅದನ್ನು ಹೊಡೆದು ಉರುಳಿಸಲು ಸಾಧ್ಯವಿರಲಿಲ್ಲ. ಅದು ಗಂಟೆಗೆ ೫೦೦೦ ಕಿ. ಮೀ. ವೇಗದಲ್ಲಿ ಸಾವಿರ ಕೆಜಿ ಮದ್ದನ್ನು ೩೦೦ ಕಿ.ಮೀ. ದೂರಕ್ಕೆ ಹಾರಿ ದಾಳಿಮಾಡುವಷ್ಟು. ಜರ್ಮನಿಯ ಹತ್ತಿರ ಆಗ ಅಂತಹ ೩೦೦೦ ಮಿಸೈಲ್‌ಗಳಿದ್ದವು. ಇತ್ತ ಅಮೆರಿಕದ ಸೈನ್ಯದಲ್ಲಿ ಮೊದಲ ಬಾರಿ ರಾಕೆಟ್ ಸಂಬಂಧಿತ ವಿಭಾಗ ಆಗತಾನೆ ತೆರೆಯಲಾಗಿತ್ತು.

ಈ ವಿ೨ ಮಿಸೈಲ್‌ನ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದ್ದವನು ೩೦ ವರ್ಷ ಪ್ರಾಯದ ಜರ್ಮನ್ ವಿಜ್ಞಾನಿ ವಾರ್ನರ್ ವೊನ್ ಬ್ರೌನ್. ಆತ ಮತ್ತೊಂದಿಷ್ಟು ವಿಜ್ಞಾನಿಗಳು ಅಮೆರಿಕನ್ನರ ವಶವಾದರು. ವಶ ಎನ್ನುವುದ ಕ್ಕಿಂತ ಇವರೇ ಜೀವ ಉಳಿಸಿಕೊಳ್ಳಲು ಶರಣಾಗತರಾದದ್ದು. ಅಮೆರಿಕಗೂ ಅದೇ ಬೇಕಿತ್ತು. ಶರಣಾಗತಿಯಾಗುವಾಗ ವೊನ್ ಬ್ರೌನ್‌ಗೆ ಅಮೆರಿಕನ್ನರು ತನ್ನ ಜೀವ ತೆಗೆಯುವುದಿಲ್ಲ ಎಂದು ಪಕ್ಕಾ ತಿಳಿದಿತ್ತು. ಏಕೆಂದರೆ ಆತನಿಗೆ ತನ್ನ ರಾಕೆಟ್ ಆವಿಷ್ಕಾರದ ಮಹತ್ವದ ಮತ್ತು ಅಮೆರಿಕನ್ನರಿಗೆ ಅದರ ಅವಶ್ಯಕತೆಯ ಅಂದಾಜಿತ್ತು.

ರಾಕೆಟ್ ತಂತ್ರಜ್ಞಾನದಂತೆ ಅಮೆರಿಕ ಹಿಂದಿದ್ದ ಇನ್ನೊಂದು ತಂತ್ರಜ್ಞಾನವೆಂದರೆ ರಾಸಾಯನಿಕ ಅಸ, ನರ್ವ್ ಏಜೆಂಟ್, ರಾಸಾಯನಿಕ ಗೊಬ್ಬರ ಮೊದಲಾದ ರಾಸಾಯನಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ. ಅಮೆರಿಕನ್ನರ ಕೈಗೆ ಸಿಕ್ಕಿಬಿದ್ದ ಇನ್ನೊಬ್ಬ ಜರ್ಮನ್ ವಿeನಿಯೆಂದರೆ ಗೆರ್ಹಾರ್ಡ್ ಶ್ರೇಡರ್. ಆತ ಗ್ಯಾಸ್ ಚೇಂಬರ್‌ನಲ್ಲಿ ನಾಝಿಗಳು ಯಹೂದಿಗಳ ಮಾರಣ
ಹೋಮ ನಡೆಸಿದ್ದರಲ್ಲ, ಅಲ್ಲಿ ಬಳಕೆಯಾದ ವಿಷಾನಿಲ, ನರ್ವ್ ಏಜೆಂಟ್‌ಗಳನ್ನು ಕಂಡಿಹಿಡಿದವನು. ಇನ್ನೊಬ್ಬ ಈ ರೀತಿ ಸೆರೆ ಸಿಕ್ಕ ಜರ್ಮನ್ ವಿಜ್ಞಾನಿ ಫ್ರೆಡ್ರಿಕ್ ಹೊ-ನ್.

ಆತ ಅಮೆರಿಕಗೆ ಬಂದ ನಂತರದಲ್ಲಿ ಇಲ್ಲಿನ ರಾಸಾಯನಿಕ ಅಸಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದ. ಈ ರೀತಿ ಜರ್ಮನ್ ವಿeನಿಗಳನ್ನು ಹಿಡಿದು ತರುವ ಮತ್ತು ಬಳಸಿಕೊಳ್ಳುವ ಅಮೆರಿಕದ ಕೆಲಸ ೧೯೯೦ರವರೆಗೂ ನಿರಂತರವಾಗಿ ನಡೆಯಿತು. ಬರೋಬ್ಬರಿ ೧,೬೦೦ ವಿಜ್ಞಾನಿಗಳು ಅಮೆರಿಕ ಕೈವಶವಾದರು. ಅವರು ಅಂದು ಹೊತ್ತು ತಂದ ತಂತ್ರಜ್ಞಾನ, ವಿಜ್ಞಾನ ೧೦ ಬಿಲಿಯನ್ ಡಾಲರ್‌ನಷ್ಟು ಮೊತ್ತದ ಪೇಟೆಂಟ್ ಮತ್ತು ಅದೆಷ್ಟೋ ಮಹತ್ವದ ಆವಿಷ್ಕಾರಗಳಿಗೆ ಮುಂದಿನ ದಿನಗಳಲ್ಲಿ ಕಾರಣವಾದವು.

ಅಮೆರಿಕದ ಮಿಲಿಟರಿ ಇಂದು ಇಷ್ಟು ಬಲಿಷ್ಠವಾಗಲು ಈ ಜರ್ಮನ್ ವಿಜ್ಞಾನಿಗಳ ಕೊಡುಗೆ ಬಹಳಷ್ಟಿದೆ. ಒಂದು ಉದಾಹರಣೆಗೆ, ಹಿಂದೆ ಹೇಳಿದ ಹಿಟ್ಲರ್ ಪಾಳಯದ ವಿ೨ ರಾಕೆಟ್ ವಿeನಿ ವಾರ್ನರ್ ವೊನ್ ಬ್ರೌನ್. ಆತನೇ ನಂತರದಲ್ಲಿ ಅಮೆರಿಕದ ‘ನಾಸಾ’ದ
ಮನುಷ್ಯನನ್ನು ಅಂತರಿಕ್ಷಕ್ಕೆ ಒಯ್ಯುವ ಮಹತ್ವಾಕಾಂಕ್ಷಿ ಯೋಜನೆ ಅಪೋಲೋ ವನ್ನು ಮುನ್ನಡೆಸಿದ್ದು. ಆತ ಅಭಿವೃದ್ಧಿ ಪಡಿಸಿದ ಸ್ಯಾಟರ್ನ್ ೫’ ಮನುಷ್ಯನನ್ನು ಭೂ ಕಕ್ಷೆಯಿಂದಾಚೆ ಹೊತ್ತೊಯ್ದ ಮೊದಲ ನೌಕೆ.

ಈತನ ಇದೇ ಸ್ಯಾಟರ್ನ್ ೫ ಅಭಿವೃದ್ಧಿಯಾಗಿ ಮುಂದೆ ಮನುಷ್ಯ ಚಂದ್ರನ ಮೇಲೆ ಕಾಲಿಡುವಂತಾಗಿದ್ದು. ಆತನನ್ನ ರೊಕೆಟ್ ವಿಜ್ಞಾನದ ಪಿತಾಮಹ ಎಂದು ಕರೆಯುವುದು ಆ ಕಾರಣಕ್ಕೆ. ಮಂಗಳ ಗ್ರಹಕ್ಕೆ ಹೋಗುವ ವಿಚಾರವನ್ನು ಮೊದಲು ಸ್ಪಿನ್ ಮಾಡಿದ್ದು ಕೂಡ ಇವನೇ. ಈ ರೀತಿ ಅಮೆರಿಕ ಒಂದೂವರೆ ಸಾವಿರ ಜರ್ಮನ್ ವಿಜ್ಞಾನಿಗಳನ್ನು ತಂದದ್ದು, ಯುದ್ಧ ಕೈದಿಯಾಗಿ ಬಂದ ವಿಜ್ಞಾನಿಗಳನ್ನು ಬಳಸಿಕೊಂಡಿದ್ದು ಸರಿ ತಪ್ಪೆನ್ನುವ ವಿಶ್ಲೇಷಣೆ ಬೇಡ.

ಇದನ್ನು ತಿಳಿಯುವಾಗ ನನಗನಿಸಿದ್ದು- ಮೊಹಮ್ಮದ್ ಖಾಸಿಂ, ಘೋರಿ, ಘಜನಿ, ತುಘಲಕ್, ತೈಮೋರ್ ಇವರೆಲ್ಲ ಭಾರತವನ್ನು ಲೂಟಿ ಮಾಡಿದರಲ್ಲ, ಅವರೆಲ್ಲ ಬರೀ ಕೊಳ್ಳೆ ಹೊಡೆಯುವ ಬದಲು ಅಮೆರಿಕದಂತೆ ಅಲ್ಲಿನ eನವನ್ನು ಬಳಸಿಕೊಂಡಿದ್ದರೆ ಇಂದು ಮಧ್ಯ ಏಷ್ಯಾ ದೇಶಗಳು ಎಲ್ಲಿಯೋ ಇರುತ್ತಿದ್ದವು. ಭಾರತವೂ ಬೇರೆಯದೇ ತೆರನಾಗಿರುತ್ತಿತ್ತು. ಭಾರತದ ಗತ ಜ್ಞಾನ ವೈಭವವನ್ನು ತಿಳಿದಾಗ ಈ ದಾಳಿಕೋರರೆಲ್ಲ ಮಹಾ ಮೂರ್ಖರೆಂದೇ ಅನ್ನಿಸುವುದು.

ಬುದ್ಧಿವಂತಿಕೆಯನ್ನು ಮೂರ್ಖ ಹುಂಬತನ ಸೋಲಿಸಿಬಿಡುತ್ತದೆಯಲ್ಲ. ಆದರೆ ಅಮೆರಿಕ ಹಾಗೆ ಮಾಡಲಿಲ್ಲ. ಅದಕ್ಕೆ ಬದಲಾದ ಸಮಯ, ಅವಶ್ಯಕತೆ ಕಾರಣವಿರಬಹುದು. ಆದರೆ ಕಾಲ, ಸ್ಥಿತಿ ಯಾವುದೇ ಇರಬಹುದು, ಭಾರತದಲ್ಲಿ ಜ್ಞಾನವಿತ್ತಲ್ಲ, ಅದನ್ನು
ಬಳಸಿಕೊಳ್ಳಬಹುದಿತ್ತಲ್ಲ. ಬಿಡಿ. ಇಂದು ಅಮೆರಿಕ ದೇಶ, ನಾಸಾ, ಯುದ್ಧ ತಾಂತ್ರಿಕತೆ, ರಸಾಯನ ಶಾಸ್ತ್ರ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲ ರಂಗಗಳಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆಯೆಂದರೆ ಅದಕ್ಕೆ ಅಂದು ಇಲ್ಲಿಗೆ ಬಂದ ಒಂದೂವರೆ ಸಾವಿರ ವಿಜ್ಞಾನಿ ಗಳು ಮತ್ತು ನಂತರದಲ್ಲಿ ನಿರಂತರವಾಗಿ, ಇಂದು ಕೂಡ ಇಲ್ಲಿಗೆ ಹರಿದು ಬರುವ ಅನ್ಯ ದೇಶದ ಪ್ರತಿಭೆಗಳೇ ಕಾರಣವೆಂದರೆ
ಅತಿಶಯವಲ್ಲ.

ಅಮೆರಿಕ ಯುದ್ಧಕ್ಕೆ ಹೋದಲ್ಲ ಕೊನೆಯಲ್ಲಿ ಅಲ್ಲಿನ ವಿಜ್ಞಾನಿಗಳನ್ನು, ಬುದ್ಧಿವಂತರನ್ನು ಕರೆತಂದು ರಾಜಾಶ್ರಯ ಕೊಡುವ ರೂಢಿ ಇಂದಿಗೂ ಇದೆ. ವಿಶ್ವಯುದ್ಧದ ನಂತರ ಕೂಡ ಇಂತಹ ಅದೆಷ್ಟೋ ಆಪರೇಷನ್ ಗಳು ನಡೆದಿದೆ, ನಡೆಯುತ್ತಲೇ ಇದೆ. ಅಂದಹಾಗೆ ಈ ಜರ್ಮನ್ ವಿಜ್ಞಾನಿಗಳನ್ನು ಹೊತ್ತು ತರುವ ಕಾರ್ಯಕ್ರಮಕ್ಕೆ ಅಮೆರಿಕ ಇಟ್ಟುಕೊಂಡ ಹೆಸರೇ ‘ಆಪರೇಷನ್ ಪೇಪರ್ ಕ್ಲಿಪ್’ !

error: Content is protected !!