Sunday, 8th September 2024

ಪೋಷಕತ್ವ; ಮುಂದಿನ ತಲೆಮಾರನ್ನು ಕಟ್ಟುವ ದಿವ್ಯ ಅನುಬಂಧ

ಶ್ವೇತಪತ್ರ

shwethabc@gmail.com

ಪೋಷಕರಾಗಿ ನಾವು ನೆನಪಿಡಬಹುದಾದ ಬಹುಮುಖ್ಯ ಸಂಗತಿ ಎಂದರೆ ದಂಪತಿಗಳಾಗಿ ನೀವು ನಂಬುವ ಪೋಷಕತ್ವದ ಸಂಗತಿಗಳೊಂದಿಗೆ ಅನುಸರಿಸಿ ಮಗುವಿನ ಲಾಲನೆ ಪಾಲನೆ ಆಟ ಪಾಠ ಶಾಲೆ ಇತ್ಯಾದಿ, ಈ ವಿಚಾರಗಳಲ್ಲಿ ನಿಮ್ಮ ನಡುವೆ ಒಪ್ಪಿಗೆ ಒಡ ಮೂಡದಿದ್ದರೆ ಬೈದಾಡಿ, ಕಿರುಚಾಡಿ, ಕೂಗಾಡಿ, ಸಿಟ್ಟು ಮಾಡಿಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ. ಒಟ್ಟಿಗೆ ಕುಳಿತು ಚರ್ಚಿಸಿ ನಿಮ್ಮ ನಿಮ್ಮ ಮೌಲ್ಯ ಮತ್ತು ನಂಬಿಕೆಯ ಆಧಾರದಲ್ಲಿ ಉತ್ತರಗಳನ್ನು ಕಂಡುಕೊಳ್ಳಿ. ಪ್ರತಿ ಪೋಷಕರದ್ದು ಭಿನ್ನ ಪ್ರಯಾಣವೇ ಆಗಿರುತ್ತದೆ ಆದರೆ ದಾರಿ ಮಾತ್ರ ಒಂದೇ ಆಗಿರಲಿ.

ನಿಮ್ಮ ಮಕ್ಕಳ ನಾಳಿನ ನೆನಪುಗಳಲ್ಲಿ ನೀವಿರಬೇಕಾದರೆ, ಅವರ ಈ ಕ್ಷಣಗಳನ್ನು ನೀವು ಜೀವಿಸಬೇಕು. ಹೀಗೊಂದು ಮಾತಿದೆ ಆ ಮಾತು ಸತ್ಯವೂ ಹೌದು. ಒಂದು ತಲೆಮಾರಿಗೆ ಜೀವ ಕೊಡುತ್ತ ಇಡೀ ಒಂದು ತಲೆಮಾರನ್ನು ಪ್ರಭಾವಿಸುತ್ತಾ, ಮಾರ್ಗದರ್ಶಿಸುತ್ತಾ, ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಮೌಲ್ಯಾಧಾರಿತವಾಗಿ ಹೀಗೆ ಬದುಕಿನ ಎಲ್ಲಾ ಆಯಾಮಗಳಿಂದಲೂ ಅವರನ್ನು ಕಟ್ಟುತ್ತ ಸಾಗುವುದೇ ಪೋಷಕತ್ವ.

ಪ್ರಪಂಚದ ಎಲ್ಲಾ ತೆರನಾದ ಪೋಷಕತ್ವದ ಅಭ್ಯಾಸಗಳು ಮೂರು ಮುಖ್ಯ ಗುರಿಗಳನ್ನು ಹೊಂದಿರುತ್ತವೆ – ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ, ಮಕ್ಕಳನ್ನು ಉತ್ತಮ ಮತ್ತು ಪ್ರಯೋಜನಕಾರಿ ವಯಸ್ಕರನ್ನಾಗಿ ಮಾಡುವುದು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಅವರಿಗೆ ದಾರೆ ಎರೆಯುವುದು. ಮಕ್ಕಳ ಉತ್ತಮ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಉತ್ತಮ ಹಾಗೂ ಆರೋಗ್ಯಕಾರಿ ಪೋಷಕತ್ವದ ಪಾತ್ರ ಪ್ರಮುಖವಾಗಿರುತ್ತದೆ.

ಪೋಷಕತ್ವದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದೆಂದರೆ ಮಕ್ಕಳಿಗೆ ಕೇವಲ ಹೊಟ್ಟೆ-ಬಟ್ಟೆಗೆ ವ್ಯವಸ್ಥೆ ಮಾಡಿ ಬಿಡುವುದಷ್ಟೇ ಅಲ್ಲ. ಅದರ ಹೊರತಾಗಿಯೂ ಅವರ ಬೇಕು ಬೇಡಗಳಿಗೆ ಸ್ಪಂದಿಸುವುದು, ಅವರ ಭಾವನಾತ್ಮಕ ಯೋಗ ಕ್ಷೇಮದ ಬೆಳವಣಿಗೆಗೆ ಪೂರಕವಾಗಿರುವುದು ಅವರಲ್ಲಿ ಸಾಮಾಜಿಕ ಕೌಶಲಗಳನ್ನು ಮೈಗೂಡಿಸುವುದು. ನಾವೆಲ್ಲರೂ
ನಮ್ಮ ನಮ್ಮ ಮಕ್ಕಳಿಗೆ ಉತ್ತಮ ಪೋಷಕ ರಾಗಬಯಸುವವರೇ.

ಉತ್ತಮ ಪೋಷಕತ್ವವೆಂದರೇನು? ಆತ್ಮವಿಶ್ವಾಸದ, ಉದಾರತೆಯುಳ್ಳ, ಯಶಸ್ವಿ ಮಗುವನ್ನು ಸಮಾಜಕ್ಕೆ ಕೊಡಬೇಕೆಂದರೆ
ನಮ್ಮ ಪೋಷಕತ್ವ ಹೇಗಿರಬೇಕು? ಈ ಬಗ್ಗೆ ನಮ್ಮ ದ್ವಂದ್ವಗಳಿವೆ ಘರ್ಷಣೆಗಳಿವೆ. ಪೋಷಕತ್ವವೆಂಬುದು ಒಂದು ಸರ್ಕಸ್‌ ನಂತೆ ಒಂದೆಡೆ ಬದುಕಿನ ಆದ್ಯತೆಗಳನ್ನು, ಜವಾಬ್ದಾರಿಗಳನ್ನು ಬ್ಯಾಲೆ ಮಾಡುತ್ತ ಮತ್ತೊಂದೆಡೆ ಮಕ್ಕಳ ಅವಶ್ಯಕತೆಗಳನ್ನು ನೀಗಿಸುತ್ತ ಕುಟುಂಬದ ಇತರ ಸದಸ್ಯರ ಅಗತ್ಯತೆಗಳನ್ನು ಪೂರೈಸುತ್ತಾ ಸಾಗುವುದು. ಇವತ್ತಿನ ಆಧುನಿಕ ಜಗತ್ತಿನಲ್ಲಿ ಮಕ್ಕಳನ್ನು ಬೆಳೆಸುವುದು ಸುಲಭವೇ? ನಮ್ಮ ಹಳೆಯ ತಲೆಮಾರಿನ ಪೋಷಕರಿಗೆ ಮಕ್ಕಳನ್ನು ಬೆಳೆಸುವುದು ಸುಲಭವಿತ್ತಾ? ಮಕ್ಕಳನ್ನು ಹೆಚ್ಚು ಕೌಟುಂಬಿಕವಾಗಿ ಕನೆಕ್ಟ್ ಆಗುವಂತೆ ಮಾಡುವುದು ಹೇಗೆ? ಹೀಗೆ ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ..!

ಇತ್ತೀಚೆಗೆ ಧ್ರುವ ಎಂಬ ಹುಡುಗನ ಪೋಷಕರು ನನ್ನ ಬಳಿ ಆಪ್ತ ಸಲಹೆಗೆ ಬಂದಿದ್ದರು. ಧ್ರುವನದ್ದು ಒಂದೇ ತಗಾದೇ, ಫೋನ್ ಬೇಕೆಂಬುದು. ತಂದೆ-ತಾಯಿ ಇಷ್ಟು ಬೇಗ ಫೋನ್ ಬೇಡವೆಂದು ಇನ್ನೊಂದೆರಡು ವರ್ಷ ಕಳೆಯಲಿ ಕೊಡಿಸುವೆವು ಎಂದಿದ್ದರು. ಇದಕ್ಕೆ ಧ್ರುವ ಬರೀ ಹೀಗೆ ಹೇಳ್ತೀರಾ ನನ್ನ ಸ್ನೇಹಿತರ ಬಳಿಯೆ ಫೋನ್ ಇದೆ. ನೀನು ಅಮ್ಮ ಲ್ಯಾಪ್ ಟಾಪ್ ಜತೆ ಇರ್ತೀರಾ ಅಕ್ಕ ದೃತಿ ಕೂಡ ಕಂಪ್ಯೂಟರ್ ಜತೆನೇ ಇರುತ್ತಾಳೆ. ನನಗೂ ಫೋನ್ ಬೇಕೇ ಬೇಕೆಂದು ರೂಮಿನ ಬಾಗಿಲನ್ನು ದಡಾರನೆ ಮುಚ್ಚಿ ದಿನಗಟ್ಟಲೆ ರೂಮಿನಲ್ಲಿ ಕುಳಿತು ಬಿಡುತ್ತಿದ್ದ ತನ್ನ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದ.

ಧ್ರುವನ ಪೋಷಕರಿಗೆ ಏನು ಮಾಡುವುದೆಂದು ತಿಳಿಯದಾಗಿತ್ತು. ತಂದೆ ತಾಯಿಯಾಗಿ ಮಗನನ್ನು ಹೇಗೆ ಸಮಾಧಾನ ಪಡಿಸಬೇಕೆಂದು ಎಂಬುದರಲ್ಲಿ ಅವರು ಸೋತಿದ್ದರು. ಪೋಷಕತ್ವ ಅತ್ಯಂತ ಜವಾಬ್ದಾರಿಯ ಕೆಲಸ. ಈ ಕೆಲಸಕ್ಕೆ ಯಾವುದೇ ಸೂಕ್ತ ತರಬೇತಿಯನ್ನು ನಮಗೆ ಯಾರು ನೀಡಿರುವುದಿಲ್ಲ. ಜನರೇಶನ್ ಯಾವುದೇ ಇರಲಿ ಪೋಷಕತ್ವ ಮಾತ್ರ ಸವಾಲಿನದ್ದೇ ಅದರಲ್ಲೂ ಹದಿಹರೆಯದವರೊಂದಿಗಿನ ಪೋಷಕರ ಒಡನಾಟ ಕಷ್ಟಕರ.

ಹಾರ್ಮೋನುಗಳ ಬದಲಾವಣೆ, ಹದಿಹರೆಯದವರ ಅಸ್ಮಿತೆಯ ಹುಡುಕಾಟ, ಲೈಂಗಿಕತೆ, ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಚಟ, ನಮ್ಮನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲವೆಂಬ ಭಾವ ಹೀಗೆ ಹದಿ ಹರೆಯದವರ ಸಂಕೀರ್ಣ
ಮನಸ್ಥಿತಿಗಳು ಅವರಲ್ಲಿ ಕೋಪ, ಒಂಟಿತನ ಗೊಂದಲವನ್ನು ಉಂಟು ಮಾಡುವುದಷ್ಟೇ ಅಲ್ಲ ಅವರ ಅಪರಿಚಿತ ವರ್ತನೆ ಯಿಂದ ಪೋಷಕರಲ್ಲಿ ಹತಾಶೆಯನ್ನು ಮೂಡಿಸುತ್ತಿವೆ.

ಹೇಳಿದ ಮಾತು ಕೇಳಲ್ಲ ನಾವೆಲ್ಲ ಎಷ್ಟೊಂದು ಶಿಸ್ತಿನಿಂದ ಬೆಳೆದವು ಆದರೆ ನಮ್ಮ ಮಕ್ಕಳ ವರ್ತನೆಗೆ ನಾವೇ ಹೆದರು ವಂತಾಗಿದೆ. ನಮ್ಮ ಮಕ್ಕಳ ಆಯ್ಕೆ, ಅಭಿರುಚಿಗಳು ನಮ್ಮಲ್ಲಿ ಅಸಹಾಯಕತೆಯನ್ನು, ಹೆದರಿಕೆಯನ್ನು ಉಂಟು ಮಾಡುತ್ತಿವೆ
ಎಂಬುದು ಪೋಷಕರ ಅಳಲು. ಇದರ ಪರಿಣಾಮ ಹರೆಯದ ಮಕ್ಕಳು ಮಾಗುವವರೆಗೂ ಮನೆಯಲ್ಲಿ ಘರ್ಷಣೆಗಳು ಸಹಜ
ಈ ಘರ್ಷಣೆಗಳು ಪೋಷಕರ ಮಾತನ್ನು ಉಲ್ಲಂಘಿಸುವುದರಿಂದ ಹಿಡಿದು ಸ್ನೇಹಿತರ ಆಯ್ಕೆ, ಕುಟುಂಬ ಸದಸ್ಯರಿಗಿಂತ
ಸ್ನೇಹಿತರಿಗೆ ಕೊಡ ಮಾಡುವ ಮಾನ್ಯತೆ, ಶಾಲಾ-ಕಾಲೇಜುಗಳಲ್ಲಿನ ಕಡಿಮೆ ಸಾಧನೆ, ಸ್ಕೂಟರ್ ಬೈಕು ,ಕಾರು, ಫೋನು ಗಳು ಬೇಕೆಂಬ ಹಟ, ಹುಡುಗ ಹುಡುಗಿಯರ ನಡುವಿನ ಆಕರ್ಷಣೆ, ಬಟ್ಟೆ ಧರಿಸುವಿಕೆಯ ಸಮಸ್ಯೆ, ಹೇರ್ ಸ್ಟೈಲ್, ಮೇಕಪ್ ಮದ್ಯಪಾನ, ಧೂಮಪಾನ ಹೀಗೆ ಚಟಗಳಿಗೆ ಅಂಟಿಕೊಳ್ಳುವ ಪ್ರಕ್ರಿಯೆಗಳವರೆಗೂ ಮುಂದುವರೆಯುತ್ತವೆ.

ಮಕ್ಕಳ ಹರೆಯದಲ್ಲಿ ಪೋಷಕತ್ವದ ನಿರ್ವಹಣೆಯ ಸವಾಲು ಒಂದೆಡೆಯಾದರೆ ಇವತ್ತಿನ ಆಧುನಿಕ ಯುಗದಲ್ಲಿ ಏಕ
ಪೋಷಕತ್ವ (ಸಿಂಗಲ್ ಪೇರೆಂಟಿಂಗ್) ಮತ್ತೊಂದು ಸವಾಲು ಒಟ್ಟು ಕುಟುಂಬ, ಕೂಡು ಕುಟುಂಬ ಕ್ರಮೇಣ ವಿಭಕ್ತ
ಕುಟುಂಬಗಳಾಗಿ ಮಾರ್ಪಾಡುಗೊಂಡು ಈಗ ವಿಭಕ್ತ ಕುಟುಂಬದಿಂದ ಏಕ ಪೋಷಕತ್ವಕ್ಕೆ ಬಂದು ನಿಂತಿದೆ. ಸಿಂಗಲ್ ಪೇರೆಂಟಿಂಗ್ ಮಕ್ಕಳಿಗೂ, ವಯಸ್ಕರರಿಗೂ ಸಹಜವಾಗೇ ಒತ್ತಡವನ್ನುಂಟು ಮಾಡುವ ಸಂಗತಿ.

ಇಲ್ಲಿ ಒಂಟಿಯಾಗಿ ಮಕ್ಕಳನ್ನು ಪೋಷಿಸುವಾಗ ಜವಾಬ್ದಾರಿ ಹೊರೆಯಾಗಿ ಪರಿಣಮಿಸುವುದು ಸಹಜ. ಏಕೆಂದರೆ ಮನೆ,
ಮಗು, ಕೆಲಸದ ಜತೆಗೆ ಹಣಕಾಸು ಎಲ್ಲವನ್ನು ನಿಭಾಯಿಸುವಾಗ ಕುಗ್ಗುವುದು ಸಾಮಾನ್ಯ. ಅಷ್ಟೇ ಅಲ್ಲದೆ ಏಕಪೋಷತ್ವದಲ್ಲಿ
ತಂದೆ ಅಥವಾ ತಾಯಿಯ ಮತ್ತೊಂದು ವೈವಾಹಿಕ ಸಂಬಂಧ ಮಕ್ಕಳ ಮನಸ್ಸಿನ ಆಳದಲ್ಲಿ ತೊಂದರೆಯನ್ನು ಸೃಷ್ಟಿಸುತ್ತದೆ.
೨೧ನೆಯ ಶತಮಾನದ ಪೋಷಕತ್ವದ ಹೊಸ ಸವಾಲುಗಳೇನು? ದಿನಗಳೆದಂತೆ ಪೋಷಕತ್ವ ಬದಲಾದದ್ದು ಹೇಗೆ? ಹೀಗೆ ಯೋಚಿಸುತ್ತಿರಬೇಕಾದರೆ ಬದಲಾದ ಕುಟುಂಬದ ಚಿತ್ರಣವು ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ.

ಇಡೀ ಒಂದು ಹಳ್ಳಿ ಒಂದು ಮಗುವನ್ನು ಬೆಳೆಸಿತಂತೆ. ಹೀಗೊಂದು ಗಾದೆ ಮಾತು. ಹಿಂದೆ ಪೋಷಕತ್ವ ಕೇವಲ ತಂದೆ ತಾಯಂದಿರಿಗಷ್ಟೇ ಸೀಮಿತವಾದ ವಿಷಯವಾಗಿರಲಿಲ್ಲ ನಮ್ಮ ಪೂರ್ವಿಕರಿಗೆ ಅದೊಂದು ಸಾಮೂಹಿಕ ಪ್ರಕ್ರಿಯೆ ಯಾಗಿತ್ತು. ಯುವಲ್ ನೋವಾ ಹರಾರಿ ಅವರು ತಮ್ಮ ಪುಸ್ತಕ Sapiens : A brief history of human kind ನಲ್ಲಿ ಕುಟುಂಬದ ರಚನೆ ಅನೇಕ ವರ್ಷಗಳಿಂದ ವಿಕಸನಗೊಂಡಿರುವ ಕ್ರಿಯೆ ಈ ಕ್ರಿಯೆಯಲ್ಲಿ ಬರ ಬರುತ್ತಾ ಕುಟುಂಬಗಳು ಸಣ್ಣದಾಗ ತೊಡಗಿದವು ಎಂಬುದನ್ನು ವಿವರಿಸುತ್ತಾರೆ.

ಕೆಲವು ವರ್ಷಗಳ ಹಿಂದೆ ಕುಟುಂಬವೆಂದರೆ ಅಜ್ಜ, ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ , ಅತ್ತೆ, ಮಾಮ, ಚಿಕ್ಕಮ್ಮ , ಚಿಕ್ಕಪ್ಪ ಇವರೆಲ್ಲರ ಮಕ್ಕಳು ಒಂದೇ ಸೂರಿನ ಕೂಡಿ ಬದುಕುವುದೇ ಆಗಿತ್ತು. ಬದಲಾದ ಬದುಕಿನ ಸನ್ನಿವೇಶಗಳಿಗೆ, ಕಾರಣಗಳಿಗೆ ಕುಟುಂಬದ ಚಿತ್ರಣವು ಬದಲಾಗುತ್ತ ಪೋಷಕತ್ವದ ಪರಿಕಲ್ಪನೆಯು ಬದಲಾಗಿದೆ. ಗಂಡು ಹೆಣ್ಣು ಎಂಬ ಲಿಂಗ ಭೇದವಿಲ್ಲದೆ ದುಡಿಮೆ ಜಾಗೃತಗೊಂಡಿತು. ಇವೆಲ್ಲದರ ನಡುವೆ ಮಂಕಾದದ್ದು ಮಾತ್ರ ಮಕ್ಕಳು. ಇಲ್ಲಿ ಪೋಷಕರಾಗಿ ನಾವು ನೆನಪಿಡಬಹುದಾದ ಬಹುಮುಖ್ಯ ಸಂಗತಿ ಎಂದರೆ ದಂಪತಿಗಳಾಗಿ ನೀವು ನಂಬುವ ಪೋಷಕತ್ವದ ಸಂಗತಿಗಳೊಂದಿಗೆ ಅನುಸರಿಸಿ ಮಗುವಿನ ಲಾಲನೆ ಪಾಲನೆ ಆಟ ಪಾಠ ಶಾಲೆ ಇತ್ಯಾದಿ, ಈ ವಿಚಾರಗಳಲ್ಲಿ ನಿಮ್ಮ ನಡುವೆ ಒಪ್ಪಿಗೆ ಒಡ ಮೂಡದಿದ್ದರೆ ಬೈದಾಡಿ, ಕಿರುಚಾಡಿ, ಕೂಗಾಡಿ, ಸಿಟ್ಟು ಮಾಡಿಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ.

ಒಟ್ಟಿಗೆ ಕುಳಿತು ಚರ್ಚಿಸಿ ನಿಮ್ಮ ನಿಮ್ಮ ಮೌಲ್ಯ ಮತ್ತು ನಂಬಿಕೆಯ ಆಧಾರದಲ್ಲಿ ಉತ್ತರಗಳನ್ನು ಕಂಡುಕೊಳ್ಳಿ. ಪ್ರತಿ ಪೋಷಕರದ್ದು ಭಿನ್ನ ಪ್ರಯಾಣವೇ ಆಗಿರುತ್ತದೆ ಆದರೆ ದಾರಿ ಮಾತ್ರ ಒಂದೇ ಆಗಿರಲಿ. ನಿಮ್ಮದು ವಿಭಕ್ತ ಕುಟುಂಬವಾಗಿದ್ದರೆ ಅಥವಾ ನೀವು ಸಿಂಗಲ್ ಪೇರೆಂಟ್ ಆಗಿದ್ದರೆ ನಿಮಗೆ ಅವಶ್ಯಕ ಸಹಾಯದ ಸಮಯದಲ್ಲಿ ಕುಟುಂಬದವರ ಸ್ನೇಹಿತರ
ಸಮುದಾಯದವರ ನೆರವು ಪಡೆಯುವುದಕ್ಕೆ ಹಿಂಜರಿಯಬೇಡಿ. ಮುಖ್ಯವಾಗಿ ಇಲ್ಲಿ ನಿಮ್ಮ ಇಗೋಗಳಿಗಿಂತ ಮಕ್ಕಳ ಪೋಷಣೆ
ಗುರುತರವಾಗಿರುತ್ತದೆ. ಈ ಹೊತ್ತಿನಲ್ಲಿ ನಮ್ಮದು ಬ್ಯುಸಿ ಬದುಕು, ಯಾರಿಗೂ ಸಮಯವಿಲ್ಲ ಮೈ-ಮನಸ್ಸುಗಳನ್ನು
ತುಂಬಿಕೊಂಡಿರುವ ದಿನ ಬೆಳಗಿನ ಕೆಲಸಗಳು.

ಈ ಮಧ್ಯೆ ಸಾಮಾಜಿಕ ಹೊರೆಗಳಾಗಿ ಬಂದೆರಗುವ ಶಾಲೆಯ ಪ್ರಾಜೆಕ್ಟ್ ಕೆಲಸಗಳು, ಸ್ನೇಹಿತರ ಮಕ್ಕಳ ಬರ್ತ್‌ಡೇ ಪಾರ್ಟಿಗಳು, ಮಾಡಲೇಬೇಕಾದ ಹೋಗಲೇಬೇಕಾದ ಅನಿವಾರ್ಯತೆ ಇವುಗಳ ಮಧ್ಯೆ ನಮ್ಮ ಪೋಷಕತ್ವ ಇಂದು ಹೇಗಾಗಿದೆ ಎಂದರೆ ನಮ್ಮ ಮಕ್ಕಳ ಒಂದು ನಿಮಿಷದ ಸಮಯವೂ ಹಾಳಾಗಬಾರದು ಅವರು ಯಾವಾಗಲೂ ಗುರಿಗಳೆಡೆಗೆ ಮುಖ ಮಾಡಿರಬೇಕು.

ಶಾಲೆ, ಶಾಲೆಯ ನಂತರ ಕ್ರೀಡೆ, ನೃತ್ಯ, ಸಂಗೀತ, ಗಣಿತ, ಅಬಾಕಸ್ ಕ್ಲಾಸುಗಳು ಹೀಗೆ ಮಕ್ಕಳ ಮೇಲೆ ವಿಪರೀತ ಒತ್ತಡ
ಹೇರಿ ಅವರಿಂದ ಅತಿಯಾಗಿ ನಿರೀಕ್ಷಿಸುತ್ತಾ ನಾವು ಒತ್ತಡಕ್ಕೊಳಗಾಗುತ್ತಿದ್ದೇವೆ. ಶಾಲೆಯ ಕ್ಲಾಸ್ ಟೆಸ್ಟ್‌ನಲ್ಲಿ ಕಡಿಮೆ
ಅಂಕಗಳಿಸಿದ ಮಕ್ಕಳ ಮನಸ್ಸಲ್ಲಿ ನಾವು ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಭಾವ ಮೂಡುತ್ತಿದೆ. ಇದಕ್ಕೆ ಕಾರಣ
ನಾವೇ ಪೋಷಕರು ನೆನಪಿಡಿ ನಮ್ಮ ಮಕ್ಕಳು ಮಕ್ಕಳೇ ಹೊರೆತು ಸೂಪರ್ ಹ್ಯೂಮ ಅಲ್ಲ.

ಅವರ ಮನಸ್ಸಿನ ಮೇಲೆ ಅನಗತ್ಯ ಹೊರೆಗಳನ್ನು ಹೊರಿಸುವುದು ಬೇಡ. ನಿಮ್ಮ ಮಗುವನ್ನು ಮತ್ತೊಂದು ಮಗುವಿಗೆ ಹೋಲಿಸಿ ನೋಡುವುದು ಸಲ್ಲದು. ಪ್ರತಿ ಮಗುವೂ ವಿಭಿನ್ನ ,ಅನನ್ಯ. ಮಕ್ಕಳನ್ನು ಬೆಳೆಸುವಾಗ ನಿರೀಕ್ಷಗಳಿಗಿಂತ ಒಪ್ಪಿ ಕೊಳ್ಳುವಿಕೆ ಬಹಳ ಮುಖ್ಯ. ಶೆಫಾಲಿ ತ್ಸಾಬೆರಿ ತಮ್ಮ ಪುಸ್ತಕ The Concious Parent ನಲ್ಲಿ ನಿಮ್ಮನ್ನು ನೀವು ಎಷ್ಟರಮಟ್ಟಿಗೆ ಒಪ್ಪಿಕೊಂಡಿರುವಿರೋ ಅಷ್ಟರಮಟ್ಟಿಗಷ್ಟೇ ನಿಮಗೆ ನಿಮ್ಮ ಮಕ್ಕಳನ್ನು ಒಪ್ಪಿಕೊಳ್ಳಲು ಸಾಧ್ಯವೆನ್ನುತ್ತಾರೆ.

ಹಾಗಾಗಿ ನಿಮಗೆ ಮೊದಲು ನಿಮ್ಮ ಕುರಿತಾದ ಒಪ್ಪಿತವಿರಲಿ, ಸ್ವಯಂ ಪ್ರೀತಿ ಇರಲಿ ಆಗ ಮಕ್ಕಳನ್ನು ಒಪ್ಪಿಕೊಳ್ಳುವ ಮನಸ್ಥಿತಿ
ನಿಮ್ಮದಾಗುತ್ತದೆ. ಮಕ್ಕಳು ಸ್ವತಂತ್ರವಾಗಿ ಆಲೋಚಿಸುವಂತೆ ಖುಷಿಯಾಗಿ ಬೆಳೆಸಲು ಸಾಧ್ಯವಾಗುವುದು ನಿಮ್ಮ ಮಕ್ಕಳನ್ನು
ಅವರಿರುವಂತೆ ಒಪ್ಪಿಕೊಂಡಾಗ ಮಾತ್ರ. ಇವತ್ತಿನ ಮೊಬೈಲ್ ಜಗತ್ತಿನಲ್ಲಿ ಮಕ್ಕಳನ್ನು ಬೆಳೆಸುವುದು ಸವಾಲಿನ ಕೆಲಸ. ಬದುಕಿನ ಪ್ರತಿ ಮೂಲೆಗಳಲ್ಲಿಯೂ ಮೊಬೈಲ್ ಹೊಕ್ಕಿದೆ. ಮನೆಯಲ್ಲಿ ಎಲ್ಲರೂ ಮೊಬೈಲ್ ಹಿಡಿದು ಕೂತರೆ ಮಾತಿಗಿಂತ ಮೌನದ್ದೇ ಕಾರು ಬಾರು.

ಒಂದನೇ ಕ್ಲಾಸಿನ ಮಗುವಿಗೆ ಕೋಡಿಂಗ್ ಕಳಿಸುವ ತವಕ ನಮ್ಮ ಪೋಷಕರದ್ದು ಮರಕೋತಿ ಆಡುವ ವಯಸ್ಸಲ್ಲಿ ಕೋಡಿಂಗ್ ಕಲಿಯುವ ಮಗು ತನ್ನ ೨೧ನೆಯ ವಯಸ್ಸಿನಲ್ಲಿ ಮರಕೋತಿ ಆಡಬೇಕಾ ತಿಳಿಯದಾಗುತ್ತಿದೆ. ಪೋಷಕರ ಮನಸ್ಥಿತಿಯ ವಿಪರೀತ ಎನ್ನುವಷ್ಟು ಗೊಂದಲ. ನನ್ನ ಮಗು ಅದನ್ನು ಮಾಡಿಬಿಡಬೇಕು ಇದನ್ನು ಮಾಡಿಬಿಡಬೇಕು ಪೋಷಕರಲ್ಲಿ ಸಾವ ಧಾನತೆ ಇಲ್ಲ. ಮಕ್ಕಳಿಗೆ ಬಹುಮುಖ್ಯವಾಗಿ ಬೇಕಾದ ಭಾವನಾತ್ಮಕ ಅವಶ್ಯಕತೆಯಾದ ಆತ್ಮೀಯತೆಯನ್ನು ಪೋಷಕರು ಒದಗಿಸುತ್ತಿಲ್ಲ. ಆಳದಲ್ಲಿ ಮಕ್ಕಳು ಒಂಟಿಯಾಗುತ್ತಿದ್ದಾರೆ.

ಮಕ್ಕಳಿಗಷ್ಟೇ ನಿಯಮಗಳು ಜಾರಿಯಾದರೆ ಸಾಲದು. ಪೋಷಕರು ತಮಗೂ ನಿಯಮಗಳ ಚೌಕಟ್ಟನ್ನು ಜಾರಿಗೊಳಿಸಬೇಕು. ಮಕ್ಕಳು ಫೋನ್ ನೋಡಬಾರದೆಂದರೆ ನೀವು ನೆಟ್ ಆಫ್ ಮಾಡಿಡಬೇಕು. ಟಿವಿ ಆರಿಸಿ ಒಟ್ಟಿಗೆ ಕುಳಿತು ಊಟ ಮಾಡಬೇಕು ಈ ಶಿಸ್ತನ್ನು ಮೊದಲು ಪೋಷಕರು ಒಳಗೊಳ್ಳಬೇಕು. ಎಲ್ಲರಿಗೂ ನಾವು ಬೆಸ್ಟ್ ಅಪ್ಪ ಅಮ್ಮನಾಗಬೇಕೆಂಬ ಹಂಬಲ ತುಡಿತ ಸಹಜ. ಬೆಸ್ಟ್ ಪೋಷಕತ್ವವನ್ನು ವಿವರಿಸುವ ಯಾವುದೇ ಒಂದು ಸಾರ್ವಕಾಲಿಕ ವ್ಯಾಖ್ಯಾನೆ ಇಲ್ಲ. ನಾಲ್ಕು ಮಕ್ಕಳ ತಂದೆಯು
ಆಗಿರುವ ಮಕ್ಕಳ ಮನೋತಜ್ಞ ಡಾ. ವಿನ್ಸೆಂಟ್ ಮೊಲೋನಿ ಹೇಳುವಂತೆ ಪೋಷಕರಾಗಿ ಸಹಜವಾಗಿ ೨೮ ವಿಚಾರಗಳಿಗೆ
ನೀವು ತಲೆಕೆಡಿಸಿಕೊಂಡು ಕೂತರೆ ಈ ಚಿಂತೆಯೇ ನಿಮ್ಮ ಪೋಷಕತ್ವಕ್ಕೆ ಅಡ್ಡಿಯಾಗಬಹುದೆಂದು.

ಪೋಷಕತ್ವದ ನಿಮ್ಮ ಸೆಣೆಸಾಟವನ್ನು ವಿವೇಕಯುತವಾಗಿ ತೆಗೆದುಕೊಳ್ಳಿ. ನೆನಪಿಡಿ ಪೋಷಕರಾಗಿ ಎಲ್ಲವನ್ನೂ ನಿಯಂತ್ರಿಸಲು ನಿಮ್ಮಿಂದ ಸಾಧ್ಯವಿಲ್ಲ. ಪೋಷಕತ್ವದ ನಿಮ್ಮ ದಾರಿ ಪ್ರೀತಿ ಸಂಯಮ ಕೃಷಿಯಿಂದ ಕೂಡಿರಲಿ!

error: Content is protected !!