Saturday, 7th September 2024

ಪಾಸ್’ಪೋರ್ಟ್ ಬೇಕು ಪಾಸ್’ಪೋರ್ಟ್…!

ವಿದೇಶವಾಸಿ

dhyapaa@gmail.com

ಪಾಸ್‌ಪೋರ್ಟ್‌ನ್ನು ಬಹಳ ಕಾಲ ಸುಮ್ಮನೆ ಕುಳ್ಳರಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಪಾಸ್ಪೋರ್ಟ್‌ನಲ್ಲಿರುವ ಪ್ರತಿ ಯೊಂದು ಖಾಲಿ ಪುಟವೂ ಒಂದು ಚಪ್ಪೆ ಹೊಡೆಸಿಕೊಳ್ಳಲು (ಸ್ಟ್ಯಾಂಪ್ ಹಾಕಿಸಿಕೊಳ್ಳಲು) ಕಿರುಚುತ್ತಿರುತ್ತದೆ ಎಂಬ ಮಾತಿದೆ. ಅದೂ ನಿಜವೇ.

Of all the books in the world, the best stories are found between the pages of a passport ಎಂಬ ಮಾತಿದೆ. ನಿಜ, ಪಾಸ್ ಪೋರ್ಟ್‌ನ ಪ್ರತಿ ಪುಟದಲ್ಲೂ ಸಾಕಷ್ಟು ಕತೆಗಳಿರುತ್ತವೆ. ಒಂದು ಪುಟದಲ್ಲಿ ಇರುವ ಒಂದು ವಿಸಾ, ಸ್ಟ್ಯಾಂಪ್‌ನ ಹಿಂದೆ ಸಾವಿರಾರು ನೆನಪುಗಳಿರುತ್ತವೆ.

ಇನ್ನೂ ಒಂದು ವಿಷಯವೆಂದರೆ, ಬೇರೆ ಪುಸ್ತಕದ ಪುಟಗಳಲ್ಲಿ ಅನ್ಯರ ವಿಷಯ, ಬೇರೆಯವರ ಕತೆ, ಇತರರ ನೆನಪು ತುಂಬಿ ಕೊಂಡಿದ್ದರೆ, ನಮ್ಮ ಪಾಸ್ ಪೋರ್ಟ್ ಪುಟದಲ್ಲಿ ನಮ್ಮದೇ ವಿಷಯ, ನಮ್ಮದೇ ಕತೆ, ನಮ್ಮದೇ ಸಾಲು ಸಾಲು ನೆನಪು! ಪಾಸ್ ಪೋರ್ಟಿನ ಒಂದೊಂದು ಪುಟ ತಿರುಗಿಸುತ್ತ ಹೋದಂತೆ, ನಮ್ಮ ಆತ್ಮಕತೆ, ನಮ್ಮ ಚಿತ್ರಸಂಪುಟಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ.

ಇದು ಪಾಸ್‌ಪೋರ್ಟ್ ಪುಟಗಳ ವಿಷಯವಾದರೆ, ಕೆಲವೊಮ್ಮೆ ಪಾಸ್‌ ಪೋರ್ಟ್ ಪಡೆಯುವ ಕತೆಯೂ ಅಷ್ಟೇ ಮಜಕೂರಾ ಗಿಯೂ, ಸಾಹಸಭರಿತವಾಗಿಯೂ, ರೋಚಕವಾಗಿಯೂ, ತಮಾಷೆಯಾಗಿಯೂ ಇರುತ್ತದೆ. ಸುಮಾರು ಎರಡು ದಶಕಕ್ಕೂ ಹಿಂದಿನ ಮಾತು. ಆಗ ನಾನು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿz. ಮಡದಿಗೆ ಚೊಚ್ಚಲ ಹೆರಿಗೆಯಾದದ್ದರಿಂದ ತವರಿಗೆ ಬಂದಿದ್ದಳು. ಭಾರತದಲ್ಲಿ ಹುಟ್ಟಿದ ಮಗನಿಗೆ ಹದಿನೈದು ದಿನವಾಗಿತ್ತು. ಆ ಶಿಶುವನ್ನೂ ನಮ್ಮ ಜತೆ ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹಿಂತಿರುಗಬೇಕಾಗಿತ್ತು.

ಅದುವರೆಗೂ ಇದ್ದ ತಾಯಿಯ ಪಾಸ್‌ಪೋರ್ಟ್‌ನೊಂದಿಗೆ ನವಜಾತ ಶಿಶುವೂ ಬರಬಹುದು ಎಂಬ ಕಾನೂನು ಆಗಷ್ಟೇ
ಬದಲಾಗಿತ್ತು. ಆದ್ದರಿಂದ ಎರಡು ವಾರದ ಶಿಶುವಿಗೆ ಪಾಸ್‌ಪೋರ್ಟ್ ಪಡೆಯುವ ಸಂಭ್ರಮಕ್ಕೆ (ಅಥವಾ ಸಂಗ್ರಾಮಕ್ಕೆ) ಅಣಿಯಾದೆ. ಆ ಹದಿನೈದು ದಿನದ ಮಗುವನ್ನು ಮಡಿಲಲ್ಲಿ ತುಂಬಿಕೊಂಡ ಮಡದಿ ಮತ್ತು ಮಗನ ಜನ್ಮ ಪ್ರಮಾಣ ಪತ್ರದೊಂದಿಗೆ ನಾನು, ತಾಲೂಕು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ನಿಂತಿದ್ದೆವು. ಆ ಕಾಲದಲ್ಲಿ
ನವಜಾತ ಶಿಶುವಿಗೆ ಪಾಸ್‌ಪೋರ್ಟ್ ಬೇಕೆಂದರೆ ನ್ಯಾಯಾಲಯದಿಂದ ಪ್ರಮಾಣಪತ್ರ ಪಡೆಯುವ ಅವಶ್ಯಕತೆಯಿತ್ತು.

ನ್ಯಾಯಾಲಯದಲ್ಲಿ ಎಂದಿನಂತೆ ಸಾಮಾನ್ಯ ಪ್ರಶ್ನೋತ್ತರಗಳು. ‘ನೀವು ಇವರಿಗೆ ಏನಾಗಬೇಕು?’ ‘ಗಂಡ’, ‘ಅವರು ನಿಮಗೆ ಏನಾಗಬೇಕು?’ ‘ಹೆಂಡತಿ’. ಇದೇ ಪ್ರಶ್ನೆ ಮಡದಿಗೆ. ಅದಕ್ಕೆ ಅವಳ ಉತ್ತರ. ‘ಯಾವ ಊರು? ಎಲ್ಲಿರುತ್ತೀರಿ?’ ಇತ್ಯಾದಿ
ಪ್ರಶ್ನೆಗಳ ನಂತರ ಕೊನೆಯಲ್ಲಿ, ‘ಈ ಮಗು ನಿಮಗೆ ಏನಾಗಬೇಕು?’ ಎಂದು ಇಬ್ಬರನ್ನೂ ಕೇಳಿದರು.

ನ್ಯಾಯಾಧೀಶರ ಪ್ರಶ್ನೆ ತಾನೆ, ‘ಮಗ’ ಎಂದು ಉತ್ತರಿಸಿ ಕೈಮುಗಿದು ಅಲ್ಲಿಂದ ಹೊರಟೆವು. ನಂತರ ಶುರುವಾಯ್ತು ನೋಡಿ, ನಿಜವಾದ ಹೆಣಗಾಟ. ಆ ಕಾಲದಲ್ಲಿ ಸುಲಭ ಮತ್ತು ಬೇಗ ಪಾಸ್ ಪೋರ್ಟ್ ಪಡೆಯಲು ಇದ್ದ ಉಪಾಯ ಎಂದರೆ ಏಜೆಂಟ್ ಮುಖಾಂತರ ಹೋಗುವುದು. ಪಾಸ್ ಪೋರ್ಟ್ ಏಜೆಂಟ್ ಎಲ್ಲರೂ ಹೀಗೆಯೋ ಅಥವಾ ನಮಗೆ ಸಿಗುವವರೇ ಅಂಥವರೋ ಗೊತ್ತಿಲ್ಲ. ಆ ಪುಣ್ಯಾತ್ಮ ಎಲ್ಲ ಕಾಗದ ಪತ್ರಗಳನ್ನೂ ಪಡೆದು ಒಂದು ತಿಂಗಳು ತನ್ನ ಪೆಟ್ಟಿಗೆಯೊಳಗೆ ಬೆಚ್ಚಗೆ ಇಟ್ಟುಕೊಂಡಿದ್ದ. ಕೇಳಿದಾಗೆಲ್ಲ ಒಂದೆರಡು ದಿನದಲ್ಲಿ ಪಾಸ್‌ಪೋರ್ಟ್ ಕೈಗೆ ಸಿಗುತ್ತದೆ ಎಂಬ ಉತ್ತರ ಸಿದ್ಧವಾಗಿರುತ್ತಿತ್ತು.

ಹಿಂತಿರುಗಿ ಸೌದಿ ಅರೇಬಿಯಾಕ್ಕೆ ಹೋಗುವ ದಿನ ಹತ್ತಿರ ಬರುವವರೆಗೂ ಅವನ ಬಣ್ಣದ ಮಾತುಗಳಿಗೆ ನಾನು ‘ಬಕರಾ’ ಆಗಿ ತಲೆ ಅಡಿಸುತ್ತಿದ್ದೆ. ಕೊನೆಗೆ, ಒಂದು ವಾರ ಮಾತ್ರ ಬಾಕಿ ಉಳಿದು, ಏಜೆಂಟ್ ಬಳಿ ಕಡಾಕಡಿ ಕೇಳಿದಾಗ ‘ನೀವೇ ನೇರವಾಗಿ ಬೆಂಗಳೂರಿಗೆ ಹೋದರೆ ಒಂದೆರಡು ದಿನದಲ್ಲಿ ಕೆಲಸ ಆಗ್ತದ್ರಾ…’ ಎಂದ ಭೂಪ. ‘ಇದನ್ನು ಮೊದಲೇ ಹೇಳಿದ್ದರೆ ಆಗುತ್ತಿತ್ತಲ್ಲ,
ಒಂದು ತಿಂಗಳು ಸುಕಾಸುಮ್ಮನೆ ಹಾಳು ಮಾಡಿದೆಯಲ್ಲ’ ಎಂದೆ.

‘ಯಾರಾದ್ರೂ ಬೆಂಗಳೂರಿಗೆ ಹೋಗೋರು ಸಿಗಾ ನೋಡ್ದೆ, ಯಾರೂ ಸಿಗಲಿಲ್ರಾ…’ ಎಂದು ರಾಗ ಎಳೆದ. ‘ನಾವು ಸ್ವರ್ಗ
ಕಾಣಬೇಕೆಂದರೆ ನಾವೇ ಸಾಯಬೇಕು’ ಎಂಬ ಮಾತಿನಂತೆ, ಅವನಿಂದ ಕಾಗದ ಪತ್ರಗಳನ್ನೆಲ್ಲ ಹಿಂಪಡೆದು ಸ್ವತಃ ನಾನೇ ಬೆಂಗಳೂರಿಗೆ ಹೊರಟೆ. ಬೆಂಗಳೂರು ತಲುಪಿ ಪಾಸ್‌ಪೋರ್ಟ್ ಕಚೇರಿಗೆ ಹೋದರೆ, ಅದೇ ಸರಕಾರಿ ‘ಬಾಬು’ಗಳು. ಒಬ್ಬರು
‘ನಾಳೆ ಆಗಲ್ಲ, ನಾಡಿದ್ದು ಬೇಡ, ಆಚೆ ನಾಡಿದ್ದು ಬನ್ನಿ’ ಎಂದರೆ, ಇನ್ನೊಬ್ಬರು ‘ತುಂಬಾ ಜನ ಪಾಸ್ ಪೋರ್ಟ್ ಕೇಳ್ತಾ ಇದ್ದಾರೆ, ರಶ್ ಇದೆ.

ಯಾವಗ ಸಿಗತ್ತೆ ಹೇಳಕ್ಕಾಗಲ್ಲ’ ಎಂದರು. ಅನಿವಾರ್ಯವಾಗಿ ಮೇಲಾಧಿಕಾರಿಗಳ ಬಳಿ ಹೋಗಬೇಕಾಯಿತು. ಮಹಿಳಾ ಅಧಿಕಾರಿಗೆ ವಿಷಯ ಅರುಹಿದೆ. ‘ಎರಡು ದಿನದಲ್ಲಿ ಪಾಸ್‌ಪೋರ್ಟ್ ನಿಮ್ಮ ಕೈಗೆ ಸಿಗತ್ತೆ, ನೀವು ಹೋಗಬಹುದು’ ಎಂದಳು ಮಹಾತಾಯಿ. ಆ ಕ್ಷಣದಲ್ಲಿ ಅವರ ಮಾತನ್ನು ನಂಬಬೇಕೋ, ಬಿಡಬೇಕೋ ನಿಜಕ್ಕೂ ಅರ್ಥವಾಗಲಿಲ್ಲ. ಎರಡನೆಯ ದಿನ ಸಿಗದಿದ್ದರೆ ಮೂರನೆಯ ದಿನದಿಂದ ದೀಪಾವಳಿ ರಜೆ ಆರಂಭ. ರಜೆ ಮುಗಿಯುವುದರೊಳಗಾಗಿ ಸೌದಿ ಅರೇಬಿಯಾಕ್ಕೆ ಹಿಂತಿರುಗಿ ಹೋಗುವುದಕ್ಕೆ ಟಿಕೆಟ್ ಕೂಡ ಮಾಡಿ ಆಗಿತ್ತು.

ವಿಸಾ ಅವಧಿ ಮುಗಿದು ಹೋಗುತ್ತಿದ್ದ ಕಾರಣ ಹಿಂತಿರುಗುವುದು ಅನಿವಾರ್ಯವಾಗಿತ್ತು. ಎರಡನೆಯ ದಿನ ಬೆಳಿಗ್ಗೆಯೇ ಪಾಸ್‌ಪೋರ್ಟ್ ಆಫೀಸಿಗೆ ಹೋಗಿ ಕುಳಿತೆ. ಅನೇಕ ಬಾರಿ ಅಲ್ಲಿದ್ದವರ ಬೆನ್ನು ಹತ್ತಿದ್ದಾಯಿತು. ಅಂತೂ ಸಾಯಂಕಾಲ
ಕಚೇರಿಯ ಬಾಗಿಲು ಹಾಕುವುದಕ್ಕಿಂತ ಮುಂಚೆ ಕರೆಯುವ ಕೊನೆಯ ಹೆಸರಿನ ಮೊದಲು ನನ್ನ ಹೆಸರು ಕೂಗಿದರು. ಅಬ್ಬಾ… ಅಂತೂ ಆಯಿತಲ್ಲ ಎಂದು ಲಬಕ್ಕನೆ ಹೋಗಿ ಪಾಸ್‌ಪೋರ್ಟ್ ತೆಗೆದುಕೊಂಡೆ.

ಪಾಸ್‌ಪೋರ್ಟ್ ಕೈಗೆ ಕೊಡುವಾಗ ಸರಕಾರಿ ‘ಬಾಬು’ ಹೇಳಿದ ಮಾತು ಕೇಳಿದಾಗ ಮತ್ತೆ ಠುಸ್ಸಾಗಿತ್ತು. ‘ಪಾಸ್‌ಪೋರ್ಟ್ ಕೊಡುತ್ತಿದ್ದೇನೆ, ನೀವು ‘ಪಿಸಿಸಿ’ (ಪೋಲೀಸ್ ಕ್ಲಿಯರೆ ಸರ್ಟಿಫಿಕೇಟ್) ತೆಗೆದುಕೊಳ್ಳಬೇಕಾಗುತ್ತದೆ’ ಎಂದ. ಅದೇನು ಎಂದು ಕೇಳಿದಾಗ, ‘ಈ ಪಾಸ್‌ಪೋರ್ಟ್ ಪಡೆದವರ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ ಎಂದು ಪೋಲೀಸರು ಪ್ರಮಾಣ ಪತ್ರ ಕೊಡಬೇಕು. ಇಲ್ಲವಾದರೆ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಿಡುವುದಿಲ್ಲ’ ಎಂದ.
‘ಅಲ್ಲ ಸ್ವಾಮಿ, ಹೇಳಿ ಕೇಳಿ ಎರಡು ತಿಂಗಳ ಮಗು. ಯಾವ ಅಪರಾಧ ಮಾಡಲು ಸಾಧ್ಯ ಹೇಳಿ? ಕೊಲೆ, ಸುಲಿಗೆ, ದರೋಡೆ, ಬಲಾತ್ಕಾರ, ಕಳ್ಳತನ…? ಅಂಬೆಗಾಲು, ಹರೆಯುವುದು ಬಿಡಿ, ಇನ್ನೂ ಕವುಚಲೂ ಆಗದ ಶಿಶು ಏನು ಮಾಡೀತು? ಅದೂ ಅಲ್ಲದೇ ಇನ್ನು ನಾಲ್ಕು ದಿನ ರಜೆ ಬೇರೆ’ ಎಂದೆ, ‘ಅದೆಲ್ಲ ನಮಗೆ ಗೊತ್ತಿಲ್ಲ, ಅದು ಕಾನೂನು.

ಮುಂದಿನದ್ದು ನಿಮಗೆ ಬಿಟ್ಟದ್ದು’ ಎನ್ನುತ್ತಾ ಕೌಂಟರ್ ಕ್ಲೋಸ್ ಮಾಡಿ ಎದ್ದು ನಡೆದ. ಪುನಃ ಮಹಿಳಾ ಮೇಲಧಿಕಾರಿಯ ಬಳಿ ಓಡಿದೆ. ಅವರಿಗೆ ವಿಷಯ ತಿಳಿಸಿದಾಗ, ನಕ್ಕು, ಇರಲಿ ಬಿಡಿ, ನಿಮಗೆ ವಿಮಾನ ನಿಲ್ದಾಣದಲ್ಲಿ ಏನಾದರೂ ತೊಂದರೆ
ಯಾದರೆ ನನಗೆ -ನ್ ಮಾಡಿ ಎಂದು ಅವರ ಮನೆಯ ಟೆಲಿಫೋನ್ ನಂಬರ್ ಕೊಟ್ಟರು. ಮುಂದೆ ಯಾರೂ ಕೇಳಲಿಲ್ಲ, ನಾವು ಸೌದಿ ಅರೇಬಿಯಾ ತಲುಪಿದೆವು.

ಇನ್ನೊಂದು ಕತೆ ಹೇಳುತ್ತೇನೆ. ಇದು ಯಕ್ಷಗಾನದ ಖ್ಯಾತ ಭಾಗವತರಾದ ನೆಬ್ಬೂರು ಶ್ರೀ ನಾರಾಯಣ ಭಾಗವತರು ಹೇಳಿದ ಕತೆ. ಅವರು ಕೆರೆಮನೆ ಯಕ್ಷಗಾನ ಮೇಳದಲ್ಲಿದ್ದ ಸಂದರ್ಭ. ಶ್ರೀಶಂಭು ಹೆಗಡೆಯವರ ಮುಂದಾಳತ್ವದಲ್ಲಿ ತಂಡ ಚೀನಾದಲ್ಲಿ ಪ್ರದರ್ಶನ ನೀಡಲು ಹೋಗಬೇಕಾಗಿತ್ತಂತೆ. ಹೆಗಡೆಯವರು ಭಾಗವತರಿಗೆ ಪಾಸ್‌ಪೋರ್ಟ್ ಮಾಡಿಸಲು ಹೇಳಿ, ಭಾಗವತರು
ಪಾಸ್‌ಪೋರ್ಟ್ ಮಾಡಲು ಕೊಟ್ಟಿದ್ದರಂತೆ. ಕೆಲವು ತಿಂಗಳಾದರೂ ಪಾಸ್‌ಪೋರ್ಟ್ ಕೈಗೆ ಸಿಕ್ಕಿರಲಿಲ್ಲವಂತೆ.

ಕಾರ್ಯಕ್ರಮದ ದಿನ ಹತ್ತಿರ ಬಂದಾಗ ಶಂಭು ಹೆಗಡೆಯವರು ದೆಹಲಿಯಲ್ಲಿ ಸಂಬಂಧ ಪಟ್ಟ ಅಽಕಾರಿಗಳೊಂದಿಗೆ ಮಾತಾಡಿ, ಭಾಗವತರ ಪಾಸ್‌ಪೋರ್ಟ್ ಮಾಡಿಸಿ, ಚೀನಾಕ್ಕೆ ಕರೆದುಕೊಂಡು ಹೋದರಂತೆ. ಕಾರ್ಯಕ್ರಮ ಮುಗಿಸಿ ಭಾಗವತರು ತಮ್ಮ ಕುಗ್ರಾಮ ನೆಬ್ಬೂರಿಗೆ ಹಿಂತಿರುಗಿ ಬಂದು ಒಂದೆರಡು ವಾರದ ನಂತರ ಪೋಲೀಸ್ ಪೇದೆಯೊಬ್ಬ ಅವರ ಮನೆಗೆ ಬಂದನಂತೆ. ಎಂದಿನಂತೆ ಪೋಲೀಸ್ ದರ್ಪದಲ್ಲಿ ‘ಇಲ್ಲಿ ನಾರಾಯಣ ಹೆಗಡೆ, ಯಕ್ಷಗಾನದ ಭಾಗವತರು ಯಾರು?’ ಎಂದು ಕೇಳಿದನಂತೆ.

ಬಡ ಭಾಗವತರು (ಅವರು ಶರೀರದಲ್ಲಷ್ಟೇ ಅಲ್ಲ, ಆರ್ಥಿಕವಾಗಿಯೂ ಬಡವರಾಗಿದ್ದವರು) ಕಂಗಾಲಾಗಿ, ಕೈ ಕಟ್ಟಿ ‘ನಾನೇ’ ಎಂದರಂತೆ. ಅದುವರೆಗೂ ಮನೆಗೆ ಪೋಲೀಸ್ ಬಂದದ್ದಿಲ್ಲ. ಈಗ ಯಾವ ಗ್ರಹಚಾರ ಬಂದು ಒಕ್ಕರಿಸಿತೋ ಎಂದು ಹೆದರಿದ್ದ ರಂತೆ. ಪೇದೆ ‘ನೀವು ಫಾರೆನ್ನಿಗೆ ಹೋಗ್ತೀರಿ?’ ಎಂದು ಕೇಳಿದನಂತೆ. ‘ಇನ್ನು ಸದ್ಯ ಹೋಗುವುದಿಲ್ಲ, ಈಗಾಗಲೇ ಹೋಗಿ ಬಂದೆ’ ಎಂದಾಗ ಆತ ಕಂಗಾಲಾಗಿದ್ದನಂತೆ. ‘ಪಾಸ್ ಪೋರ್ಟ್ ಇಲ್ಲದೇ ಹೇಗೆ ಹೋದಿರಿ?’ ಎಂದಾಗ, ಭಾಗವತರು ದೆಹಲಿಯಿಂದ ಪಾಸ್‌ಪೋರ್ಟ್ ಪದೆದ ವಿಷಯ ತಿಳಿಸಿದರಂತೆ. ಆತ ಇನ್ನಷ್ಟು ಹೆದರಿ, ‘ಈಗ ನಾನು ನನ್ನ ಮೇಲಿನ ಅಧಿಕಾರಿ ಗಳಿಗೆ ಏನು ಹೇಳುವುದು?’ ಎಂದು ತಲೆ ಮೇಲೆ ಕೈ ಹೊತ್ತು ಕುಳಿತನಂತೆ.

ಕೊನೆಗೆ ಭಾಗವತರೇ ಪೇದೆಗೆ ಧೈರ್ಯ ತುಂಬಿ, ಚಹಾ ಕುಡಿಸಿ ಕಳಿಸಿದರಂತೆ. ಇದೆಲ್ಲ ದಶಕದ ಹಿಂದಿನ, ಭಾರತದ ಕತೆ
ಯಾದರೆ, ಸೌದಿ ಅರೇಬಿಯಾದಲ್ಲಿ ನಡೆದ ಘಟನೆ ಕೇಳಿ. ಈಗೊಂದು ನಾಲ್ಕೈದು ವರ್ಷದ ಹಿಂದಿನವರೆಗೂ ದೇಶದಿಂದ ಹೊರಕ್ಕೆ ಹೋಗಿ ಬರಬೇಕಾದರೆ, ಪಾಸ್‌ಪೋರ್ಟ್‌ನಲ್ಲಿ ಚೀಟಿ ಅಂಟಿಸಬೇಕಾಗುತ್ತಿತ್ತು. ಈಗ ಆನ್‌ಲೈನ್‌ನಲ್ಲಿ ಕೆಲಸ
ಆಗುವುದರಿಂದ, ಕಚೇರಿಗೆ ಹೋಗಿ ನಮ್ಮ ಪಾಸ್ ಪೋರ್ಟ್ ಕೊಟ್ಟು, ಎಕ್ಸಿಟ್-ಎಂಟ್ರಿಯ ಚೀಟಿ ಅಂಟಿಸಬೇಕಾಗಿಲ್ಲ. ಟ್ರಾವೆಲ್ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತನೊಬ್ಬ ಭಾರತಕ್ಕೆ ತುರ್ತು ರಜೆಗೆ ಹೋಗಬೇಕಾದ್ದರಿಂದ ಪಾಸ್‌ಪೋರ್ಟ್‌ನಲ್ಲಿ
ಚೀಟಿ ಅಂಟಿಸಲು ಕೊಟ್ಟು ಬಂದಿದ್ದ.

ಒಂದೆರಡು ದಿನದಲ್ಲಿ ಸಿಗಬೇಕಾಗಿದ್ದ ಪಾಸ್‌ಪೋರ್ಟ್ ಒಂದೆರಡು ವಾರವಾದರೂ ಸಿಗಲಿಲ್ಲ. ಈತ ಪ್ರತಿನಿತ್ಯವೂ ಎರಡು ಬಾರಿ ಹೋಗಿ ಆ ಅಧಿಕಾರಿಯಲ್ಲಿ ಕೇಳುವಾಗ, ಆತ ‘ನಿನ್ನ ಪಾಸ್‌ಪೋರ್ಟ್ ಇಲ್ಲಿಲ್ಲ’ ಎಂದು ಕೈ ತಿರುಗಿಸುತ್ತಿದ್ದ. ಪಾಸ್‌ಪೋರ್ಟ್
ಕಳೆದಿದೆಯೆಂದು ತೀರ್ಮಾನಿಸಿ, ದೂರು ನೀಡಿ, ರಾಯಭಾರಿ ಕಚೇರಿಯಿಂದ ಹೊಸ ಪಾಸ್ ಪೋರ್ಟ್ ಪಡೆದ ನನ್ನ ಸ್ನೇಹಿತ, ಭಾರತಕ್ಕೆ ಹೋಗಿ ಹಿಂತಿರುಗಿ ಬಂದದ್ದೂ ಆಯಿತು. ಅದಾಗಿ ಒಂದು ತಿಂಗಳ ನಂತರ ಸ್ನೇಹಿತನಿಗೆ ಕಚೇರಿಯಿಂದ ಕರೆ
ಬಂತು. ಹೋದಾಗ, ಅದೇ ಅಧಿಕಾರಿ, ‘ನಿಮ್ಮ ಪಾಸ್‌ಪೋರ್ಟ್ ಸಿಕ್ಕಿದೆ, ತಗೊಳ್ಳಿ’ ಎಂದು ಸ್ನೇಹಿತನ ಕೈಗಿಟ್ಟ.

ಇದು ಹೇಗಾಯಿತು ಎಂದು ಸ್ನೇಹಿತ ಆಲೋಚಿಸುತ್ತಿರುವಾಗ ಆ ಕಚೇರಿಯಲ್ಲಿ ಕಸ ಗುಡಿಸುವಾತ ಬಂದು ಹೇಳಿದ. ಬಹಳ
ದಿನದಿಂದ ಆ ಅಧಿಕಾರಿಯ ಮೇಜಿನ ಒಂದು ಕಾಲಿನ ಕೆಳಗೆ, ಪಾಸ್‌ಪೋರ್ಟ್ ರೀತಿ ಕಾಣುವ ಒಂದು ಪುಸ್ತಕ ಕಾಣುತಿತ್ತು. ಕೊನೆಗೆ ಒಂದು ದಿನ ಅಧಿಕಾರಿಗೆ ಅದನ್ನು ತೋರಿಸಿ ಕೇಳಿದಾಗ ಅಧಿಕಾರಿಗೆ ಆ ಪಾಸ್‌ಪೋರ್ಟ್ ನನ್ನ ಸ್ನೇಹಿತನದ್ದು
ಎಂದು ನೆನಪಾಯಿತಂತೆ. ತಕ್ಷಣ ಆತ ನನ್ನ ಸ್ನೇಹಿತನನ್ನು ಕರೆದು ಹಳೆಯ ಪಾಸ್‌ಪೋರ್ಟ್ ಕೊಟ್ಟಿದ್ದ. ಹಾಗಾದರೆ, ಅದು ಮೇಜಿನ ಕಾಲಿನ ಕೆಳಗೆ ಹೋದದ್ದು ಹೇಗೆ? ಅಽಕಾರಿಯ ಮೇಜು ಅಡುತ್ತಿತ್ತಂತೆ.

ಅದನ್ನು ನಿಲ್ಲಿಸಲು, ಒಂದು ಕಾಲಿನ ಕೆಳಗೆ ಸಪೋರ್ಟ್ ಕೊಡಲು ಆತ ನನ್ನ ಸ್ನೇಹಿತನ ಪಾಸ್‌ಪೋರ್ಟ್ ಬಳಸಿಕೊಂಡಿದ್ದ, ಅಷ್ಟೇ ಅಲ್ಲ, ಅದನ್ನು ಆಗಲೇ ಮರೆತಿದ್ದ. ಕಸ ಗುಡಿಸುವವ ಕೇಳಿ, ಅದನ್ನು ತೆಗೆದು ನೋಡಿದಾಗಲೇ ಆ ಅಧಿಕಾರಿಗೆ ನೆನಪಾದದ್ದು! ಹೀಗೂ ಉಂಟೇ ಅನ್ನಬೇಡಿ, ಹೀಗೂ… ಉಂಟು! ಇಂತಹ ಕತೆಗಳು ಪಾಸ್‌ಪೋರ್ಟ್ ಪುಟಗಳಲ್ಲಿ ಮಾತ್ರ ವಲ್ಲ, ಅದನ್ನು ಪಡೆಯುವ, ಎಷ್ಟೋ ಬಾರಿ ಎಲ್ಲಿ ಇಟ್ಟಿದ್ದೇನೆಂದು ಮರೆಯುವ, ಹೊಸ ದೇಶಗಳಿಗೆ ಭೇಟಿನೀಡುವಾಗ ಪಡುವ ಪಾಡಿನ ಅನೇಕ ಸಂದರ್ಭದಲ್ಲಿ, ಅಂಗೈ ಅಗಲಕ್ಕೂ ಕಮ್ಮಿ ಗಾತ್ರದ, ಐವತ್ತಕ್ಕೂ ಕಡಿಮೆ ಪುಟಗಳಿರುವ ಒಂದು ಚಿಕ್ಕ ಪುಸ್ತಕದಲ್ಲಿ ಸಮ್ಮಿಳಿತವಾಗಿರುತ್ತದೆ.

ಪಾಸ್‌ಪೋರ್ಟ್‌ನ್ನು ಬಹಳ ಕಾಲ ಸುಮ್ಮನೆ ಕುಳ್ಳರಿಸುವುದು ಒಳ್ಳೆಯ ಸಂಪ್ರದಾಯವಲ್ಲ. ಪಾಸ್ಪೋರ್ಟ್‌ನಲ್ಲಿರುವ ಪ್ರತಿ ಯೊಂದು ಖಾಲಿ ಪುಟವೂ ಒಂದು ಚಪ್ಪೆ ಹೊಡೆಸಿಕೊಳ್ಳಲು (ಸ್ಟ್ಯಾಂಪ್ ಹಾಕಿಸಿಕೊಳ್ಳಲು) ಕಿರುಚುತ್ತಿರುತ್ತದೆ ಎಂಬ ಮಾತಿದೆ. ಅದೂ ನಿಜವೇ. ಇಲ್ಲವಾದರೆ ಪಾಸ್‌ಪೋರ್ಟ್ ಇಟ್ಟುಕೊಂಡರೆ ಏನು ಪ್ರಯೋಜನ? ಅದೊಂದು ರೀತಿಯಲ್ಲಿ ಅಡುಗೆ ಮಾಡಿಟ್ಟು ಊಟ ಮಾಡದೆ ಕುಳಿತಂತೆಯೇ. ಪಾಸ್‌ಪೋರ್ಟ್ ಮಾಡಿಸಿಕೊಂಡ ಮೇಲೆ ಅದನ್ನು ಸರಿಯಾಗಿ ಬಳಸಿಕೊಳ್ಳ ಬೇಕು.

ನಮ್ಮ ಪಾಸ್‌ಪೋರ್ಟ್‌ನ ಪ್ರತಿ ಪುಟವನ್ನೂ ತುಂಬಿಸುಸಿ, ಅದನ್ನು ಖಾಲಿ ಮಾಡುವುದೇ ನಮ್ಮ ಗುರಿ ಎಂಬತಿರಬೇಕು. ಆಗ ಮಾತ್ರ ‘ಪಾಸ್‌ಪೋರ್ಟ್ ಪುರಾಣಂ ಸಂಪೂರ್ಣಂ’. ಕೊನೆಯದಾಗಿ, ವಲಸೆ ಅಧಿಕಾರಿಗಳ (ಇಮಿಗ್ರೇಷನ್ ಆಫಿಸರ್) ಮುಂದೆ ನಿಂತು, ಎಷ್ಟೇ ನಮ್ಮ ಪರಿಚಯ ಹೇಳಿಕೊಂಡರೂ ಅವರು ಕೇಳುವುದೂ ಇಲ್ಲ, ನಂಬುವುದೂ ಇಲ್ಲ. ಒಮ್ಮೆ ಅವರ ಕೈಗೆ ಪಾಸ್‌ಪೋರ್ಟ್ ಕೊಟ್ಟು, ಎಲ್ಲಾ ದೂರದಲ್ಲಿ ನಿಂತರೂ ಸಾಕು, ಪಾಸ್‌ಪೋರ್ಟ್ ನಲ್ಲಿರುವ ನಮ್ಮ ಛಾಯಾಚಿತ್ರ ಮತ್ತು ಅದರಲ್ಲಿರುವ ಮಾಹಿತಿಯಿಂದ ನಮ್ಮ ಕುರಿತ ವಿಷಯಗಳನ್ನು ಅವರು ನಂಬುತ್ತಾರೆ. ನಾವು ಬದುಕಿದ್ದೇವೆ ಎನ್ನುವುದನ್ನೂ ಕೂಡ!

error: Content is protected !!