Saturday, 23rd November 2024

ಬದುಕು ಕೇವಲ ಫೋಟೋ ಸೆಷನ್‌ ಆಗದಿರಲಿ

ಶಿಶಿರ ಕಾಲ

shishirh@gmail.com

ಮನುಷ್ಯನಿಗೆ ಫೋಟೋ ಎಂದರೆ ಏಕೆ ಅಷ್ಟು ಹುಚ್ಚು? ಫೋಟೋ ಇಲ್ಲದ ಸೋಷಿಯಲ್ ಮೀಡಿಯಾ ಯೋಚಿಸಿ ನೋಡಿ. ಫೆಸ್ಬುಕ್, ಇನ್ಸ್ಟಾಗ್ರಾಮ್ ಇವುಗಳಲ್ಲಿನ ಪ್ರತಿಕ್ರಿಯೆಗಳಲ್ಲಿ ಶೇ. 96 ರಷ್ಟು ಪ್ರತಿಕ್ರಿಯೆ ಬರುವುದು ಫೋಟೋಕ್ಕೆ. ಈ ವರೆಗೆ ಫೆಸ್ಬುಕ್ ಒಂದರಲ್ಲೇ ಮನುಕುಲ ಅಪ್ಲೋಡ್ ಮಾಡಿದ ಫೋಟೋ ಸಂಖ್ಯೆ ಎಷ್ಟು ಗೊತ್ತಾ ? ಬರೋಬ್ಬರಿ ಎರಡೂವರೆ ಲಕ್ಷ ಕೋಟಿ !

ಅಮೆರಿಕದ ಗರ್ಭಪಾತದ ಸುತ್ತಲಿನ ರಾಜಕಾರಣ, ಹೇಗೆ ಮುಂದುವರಿದ ಜಾತ್ಯತೀತ ದೇಶದ ರಾಜಕೀಯ ಮತ್ತು ಕಾನೂನನ್ನು ರಿಲೀಜಿಯನ್ ನಿರ್ದೇಶಿಸುತ್ತದೆ ಎನ್ನುವುದನ್ನು ಹಿಂದೆ ಬರೆದಿದ್ದೆ. ಕ್ರಿಶ್ಚಿಯನ್ ಮೆಜಾರಿಟಿ ದೇಶಗಳಲ್ಲಿ ಇದೊಂದು ದೊಡ್ಡ ವಿಷಯ. ಇಲ್ಲಿ ಪರ ಮತ್ತು ವಿರೋಧ ಹೀಗೆ: ಹೆಣ್ಣಿಗೆ ಭ್ರೂಣವನ್ನು ಕೊಲ್ಲುವ ಅಧಿಕಾರ ಕೊಟ್ಟವರ್ಯಾರು? ತಾಯಿಯ ಬದುಕು, ಹುಟ್ಟದೇ ಇರುವ ಮಗುವಿಗಿಂತ ಮುಖ್ಯವಲ್ಲವೇ? ಇದು ಕೊಲೆ ಯಲ್ಲದೆ ಮತ್ತೇನು? ಹೊರಬಂದರೆ ಬದುಕಲು ಶಕ್ಯವಿಲ್ಲದ್ದು ಜೀವ ಎನ್ನಿಸಿ ಕೊಳ್ಳುವುದು ಹೇಗೆ? ಹೃದಯ ಬಡಿತವೇ ಜೀವ, ದೇವರ ಪ್ರಕಾರ ಪ್ರತಿಯೊಬ್ಬರಿಗೂ ಬದುಕಲು ಹಕ್ಕಿದೆ.

ಇಲ್ಲ, ಹಾಗಲ್ಲ, ಇಂದಿನ ಕಾಲಮಾನದಲ್ಲಿ ಹೆಣ್ಣು ಸ್ವತಂತ್ರ, ಆಕೆಗೆ ತನ್ನಿಚ್ಛೆ ಯಂತೆ ಬದುಕುವ ಅಧಿಕಾರವಿದೆ. ಇಲ್ಲ, ಇದು ಮಹಾ ಪಾಪ ಕೆಲಸ. ಇದು ವಾದ-ಪ್ರತಿವಾದ. ಹಿಂದಿನ ವರ್ಷ ಇಲ್ಲಿನ ಸುಪ್ರೀಂ ಕೋರ್ಟ್ ಗರ್ಭಪಾತ ತಾಯಿಯ ಹಕ್ಕು ಎಂದು ಪರಿಭಾಷಿಸಬಹುದಾದ ಒಂದು ತೀರ್ಪನ್ನು ಹಿಂತೆಗೆ ದುಕೊಂಡಿತ್ತು. ಇದರಿಂದಾಗಿ ಇಲ್ಲಿನ ಕೆಲವು ತೀರಾ ಕ್ರಿಶ್ಚಿಯನ್ ರಾಜ್ಯಗಳು ತಕ್ಷಣ ಗರ್ಭಪಾತವನ್ನು ಕಾನೂನು ಬಾಹಿರ ಗೊಳಿಸಿದವು. ಇಲ್ಲಿ ವೋಟಿನ ರಾಜಕಾರಣವೂ ಇದೆ. ಕಳೆದ ವರ್ಷದಿಂದ ಇಲ್ಲಿ ಹಲವು ರಾಜ್ಯಗಳಲ್ಲಿ ಗರ್ಭಪಾತಕ್ಕೆ ಅವಕಾಶ ವಿಲ್ಲ. ಹಾಗಾಗಿ ಮಹಿಳೆಯರು ಇನ್ನೊಂದು ರಾಜ್ಯಕ್ಕೆ ಹೋಗಿ ಗರ್ಭಪಾತ ಮಾಡಿಸಿಕೊಂಡು ಬರುವ ಪರಿಪಾಠ ಶುರುವಾಗಿದೆ.

ಕೆಲವು ರಾಜ್ಯದ ಗಡಿಯಲ್ಲಿ , ನಮ್ಮಲ್ಲಿ ಪೆಟ್ರೋಲ್ ಪಂಪು, ಹೆಂಡದ ಅಂಗಡಿ ಇನ್ನೊಂದು ರಾಜ್ಯದವರಿಗೆಂದೇ ತೆರೆದಿರುತ್ತಾ ರಲ್ಲ, ಹಾಗೆ ಗರ್ಭಪಾತದ ಕ್ಲಿನಿಕ್ಕುಗಳನ್ನು ರಾಜ್ಯದ ಗಡಿಗಳಲ್ಲಿ ತೆರೆಯಲಾಗಿದೆ. ಈ ಇಡೀ ವಾದದಲ್ಲಿ ಅತಿ ಹೆಚ್ಚು ಚರ್ಚಿತ ವಾದದ್ದು ಭ್ರೂಣವನ್ನು ಮನುಷ್ಯನೆಂದು ಪರಿಗಣಿಸಿ ಬದುಕುವ ಹಕ್ಕನ್ನು ಕೊಡುವುದು ಯಾವಾಗ ಎನ್ನುವುದು. ಅದರಲ್ಲಿ ಗಮನ ಸೆಳೆದದ್ದು ಮೊಂಟಾನಾದ ವಕೀಲರೊಬ್ಬರ ವಾದ. ಅವರ ಪ್ರಕಾರ ಭ್ರೂಣದ ಮೊದಲ ಫೋಟೋ ತೆಗೆದಾಕ್ಷಣ ಅದು ಬದುಕಿನ
ಶುರು ಎನ್ನುವುದು.

ಅವರ ವಾದ ಕೇಳಿದಾಗ ಒಂದು ವಿಚಾರವಂತೂ ಹೌದು. ತಂದೆ-ತಾಯಿಗೆ ಮಗುವಿನ ಸಂಭ್ರಮ ಶುರುವಾಗುವುದೇ ಮೊದಲ ಬಾರಿ ಸೋನೋಗ್ರಾಮ್ ಪರದೆಯ ಮೇಲೆ ಮೂಡುವ ಅಸ್ಪಷ್ಟ ಚಿತ್ರ ಪ್ರಿಂಟಾಗಿ ಕೈಗೆ ಸಿಕ್ಕಾಗ. ಅದುವೇ ಇನ್ನೊಂದು ಜೀವದ ಕಲ್ಪನೆ ಹುಟ್ಟಿಸುವ ಫೋಟೋ. ಇತ್ತೀಚಿನ ತಂದೆ-ತಾಯಿಯರು ತೀರಾ ಜೋಪಾನವಾಗಿ ಕಾಪಾಡುವ ಫೋಟೋ ಅದು. ಮಗುವಿನ ಹುಟ್ಟುಹಬ್ಬದ ಆಲ್ಬಮ್ ನಲ್ಲಿ ಈ ಭ್ರೂಣದ ಫೋಟೋ ಮೊದಲಿಗೆ ಇರಬೇಕು. ಅಲ್ಲಿಂದ ಮುಂದೆ ತಿಂಗಳ ಫೋಟೋ, ಮೊದಲ, ಪ್ರತೀ ವರ್ಷದ ಹುಟ್ಟುಹಬ್ಬದ ಫೋಟೋ, ಮೊದಲ ಬಾರಿ ಶಾಲೆಗೆ ಹೋಗುವ ದಿನದ ಫೋಟೋ, ಕೊನೆಯ ಕಾಲೇಜು ದಿನದ ಫೋಟೋ, ಕೆಲಸ ಶುರುಮಾಡಿದ ದಿನದ ಫೋಟೋ, ಹಬ್ಬ ಹರಿದಿನದ ಫೋಟೋ, ನಂತರ ಮದುವೆ, ಗರ್ಭಿಣಿ ಫೋಟೋ ಶೂಟ್ ಗಳು, ಮಗುವಿನ ಜೊತೆ ಮೊದಲ ಫೋಟೋ, ವಾರ್ಷಿಕೋತ್ಸವದ ಫೋಟೋಗಳು, ವೃದ್ದಾಪ್ಯದ ಫೋಟೋ, ಕೊನೆಯಲ್ಲಿ ಅಂತಿಮ ನಮನದ, ಹೆಣವಾಗಿ ಮಲಗಿದ ಫೋಟೋ.

ನಿಜವಲ್ಲವೇ, ಮನುಷ್ಯನ ಬದುಕು ಈಗ ಶುರುವಾಗುವುದು ಮತ್ತು ಕೊನೆಯಾಗುವುದು ಉಸಿರಿನಿಂದಲ್ಲ, ಬದಲಿಗೆ ಫೋಟೋ ದಿಂದ. ಪುಸ್ತಕಗಳು ಹುಟ್ಟುವುದಕ್ಕಿಂತ ಮೊದಲೇ ಕಥೆಗಳು ಹುಟ್ಟಿದ್ದವು. ಮೊದಲೆಲ್ಲ ಕಥೆಗಳನ್ನು ಬರೆದಿಡುತ್ತಿ ರಲಿಲ್ಲವಲ್ಲ. ಹಾಡು, ಮಾತು ಹೀಗೆ ಕಥೆಗಳು ಒಬ್ಬರಿಂದ ಇನ್ನೊಬ್ಬರಿಗೆ ದಾಟುತ್ತ ಬಂದದ್ದು ಇತಿಹಾಸ. ಕಥೆಯ ಕಲ್ಪನೆ ಯಿರುವ ಏಕೈಕ ಪ್ರಾಣಿಯೆಂದರೆ ಮನುಷ್ಯ ಮಾತ್ರ.

ಪ್ರಾಣಿಗಳಿಗೆ ಕನಸಿನ ಅನುಭವಾಗುತ್ತದೆ, ಆದರೆ ಅವನ್ನು ಕಥೆಯಾಗಿಸುವ ಹಿಕ್ಮತ್ತು ಇಲ್ಲ. ಕಥೆಯನ್ನು ಕುಣಿದು ನಟಿಸಿ ತೋರಿಸಿ ಹೇಳುವುದು ಇತ್ತೀಚಿನದಾಯಿತು. ಮಾತಿಗಿಂತ ಮೊದಲೇ ಕಥೆಗಳಿದ್ದವು. ಆದಿಮಾನವರು ಅದನ್ನು ಹೇಳುವ ರೀತಿ ಚಿತ್ರದಲ್ಲಾಗಿತ್ತು. ದಕ್ಷಿಣ ಆಫ್ರಿಕಾದ ಬ್ಲೋಮ್ಬಸ್ ಗುಹೆಯಲ್ಲಿನ ಮನುಷ್ಯ ಬಿಡಿಸಿದ ಚಿತ್ರಕ್ಕೆ ೧ ಲಕ್ಷ ವರ್ಷದ ಇತಿಹಾಸವಿದೆ. ಬಹುಶಃ ಅದಕ್ಕಿಂತ ೫ ಲಕ್ಷ ವರ್ಷದ ಹಿಂದೆಯೇ ಈ ಚಿತ್ರಬಿಡಿಸಿ ಕಥೆ ಹೇಳುವ, ಇತಿಹಾಸವನ್ನು ಈ ಮೂಲಕ ದಾಖಲಿಸುವ ಇಚ್ಛೆ ಹುಟ್ಟಿದ್ದಿರಬಹುದು.

ಇವನ್ನೆಲ್ಲ ಇಂಥ ವರ್ಷವೇ ಕಲಿತ ಎಂದು ಹೇಳುವುದು ಕಷ್ಟ. ಅದೆಷ್ಟೋ ಕಾಲದಿಂದ ಚಿತ್ರ, ಕಥೆ, ದಾಖಲೆ, ಇತಿಹಾಸ
ಇವೆಲ್ಲ ಒಂದಕ್ಕೊಂದು ತಳಕು ಹಾಕಿಕೊಂಡಿವೆ. ಒಂದು ಚಿತ್ರ ಸಾವಿರ ಶಬ್ದಕ್ಕೆ ಸಮ. ಕೆಲವೊಂದು ಐತಿಹಾಸಿಕ ಗುಹೆಗಳೊಳ ಗಿನ ಚಿತ್ರಗಳು ಹತ್ತೆಂಟು ಪುಸ್ತಕಕ್ಕಾಗುವಷ್ಟು ಮಾಹಿತಿಯನ್ನು ಕೊಟ್ಟಿವೆ. ವರ್ಡ್ ಟ್ರೇಡ್ ಸೆಂಟರ್‌ಗೆ ವಿಮಾನ ಅಪ್ಪಳಿಸಿದ ಫೋಟೋ, ಅಧ್ಯಕ್ಷ ಬುಷ್‌ಗೆ ಕಿವಿಯಲ್ಲಿ ಸೀಕ್ರೆಟ್ ಸರ್ವಿಸ್ ಈ ಘಟನೆಯನ್ನು ಹೇಳಿದ ಫೋಟೋ, ಚಂದ್ರನ ಮೇಲೆ ಮೊದಲ ಬಾರಿ ಕಾಲಿಟ್ಟ ಘಳಿಗೆಯ ಫೋಟೋ, ರಾಜ್ ಕುಮಾರ್ ವೀರಪ್ಪನ್ ಜತೆಗಿರುವ ಫೋಟೋ, ಜಪಾನಿನ ಮೇಲೆ ಸಿಡಿದ ಅಣು ಬಾಂಬ್, ಗಾಂಧಿಯ ಪಾರ್ಥಿವ ಶರೀರ, ಸುಡಾನಿನ ಹದ್ದು ಮಗುವಿನ ಸಾವಿಗೆ ಕಾಯುತ್ತಿರುವ ಘಳಿಗೆ, ಇವೆಲ್ಲವೂ ಐತಿಹಾಸಿಕ ದಾಖಲೆಗಳು.

ವಿಶ್ವೇಶ್ವರ ಭಟ್ಟರು ಇಂಗ್ಲೆಂಡಿಗೆ ಹೋಗಿ ರಸ್ತೆಯಲ್ಲಿ ಬಿದ್ದ ಮರವನ್ನೆತ್ತಿದ ರೋಚಕ(!?) ಘಟನೆ ಓದಿಯೇ ಇರುತ್ತೀರಿ. ಅವರು ಆ ಲೇಖನವನ್ನು ಫೆಸ್ಬುಕ್‌ನಲ್ಲಿ ಹಾಕಿದಾಗ, ಫೋಟೋ ಎಲ್ಲಿ? ಸಾಕ್ಷಿಗೆ ಫೋಟೋ ತಕ್ಷಣ ಇಡಿ ಎಂದು ನನ್ನಂತೆಯೇ ಕೆಲವರು ಕಾಲು ಎಳೆದಿದ್ದರು. ಅದಕ್ಕಿಂತ ಮೊದಲು ಸ್ವಚ್ಛ ಬಾಳೆ ಎಲೆ ಅಭಿಯಾನವಾಯಿತಲ್ಲ. ಅದರಲ್ಲಿ ಫೋಟೋ ಹಾಕಿ ಸಾಕ್ಷಿ ಕೊಟ್ಟಿದ್ದರಲ್ಲ, ಅದು ಊಟದ ಮೊದಲ ಫೋಟೋ ಎಂದೇ ಒಂದಿಷ್ಟು ಜನ ಕಿಚಾಯಿಸಿದ್ದರು.

ಈಗಿನ ಕಾಲವೇ ಹಾಗೆ. ಫೋಟೋ ಎಂದರೆ ಉಸಿರಿನ ಸಾಕ್ಷ್ಯ. ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ ಪುಸ್ತಕದಲ್ಲೊಂದು ಘಟನೆ ಬರುತ್ತದೆ. ಮದುವೆಯ ಸೀನ್. ಗಂಡು ಹೆಣ್ಣಿನ ಮನೆಯವರಿಗೆ ಚಿಕ್ಕ ಕಾರಣಕ್ಕೆ ಗಲಾಟೆಯಾಗುತ್ತದೆ. ಜಗಳ ಹೊಡೆದಾಟದ ಮಧ್ಯೆ ಫೋಟೋಗ್ರಾಫರ್ ಫೋಟೋ ತೆಗೆಯುತ್ತಾನೆ. ಆ ಫ್ಲ್ಯಾಶ್ ನ ಬೆಳಕಿಗೆ ಎಲ್ಲರೂ ಒಮ್ಮೆ ಅತ್ತ ನೋಡಿ ಶಾಂತವಾಗುತ್ತಾರೆ, ಪೋಸ್ ಕೊಡಲು ಶುರುಮಾಡುತ್ತಾರೆ.

ತೇಜಸ್ವಿಯವರು ಬರೆದ ಒಂದು ವಾಕ್ಯ ಹೀಗಿದೆ: “ಎಲ್ಲರೂ ಜಗಳ ನಿಲ್ಲಿಸಿ ಮಂತ್ರಮುಗ್ಧರಂತೆ ಫೋಟೋಕ್ಕಾಗಿ ನಾಟಕ ವಾಡುವಂತೆ ಮದುವೆಯನ್ನು ಹಂತಹಂತವಾಗಿ ಅಭಿನಯಿಸತೊಡಗಿದರು”. ನೀವು ಇದನ್ನು ಓದಿಯೇ ಇರುತ್ತೀರಿ. ಇದನ್ನು ತೇಜಸ್ವಿಯವರು ಬರೆದದ್ದು 1980 ರಲ್ಲಿ. ಎಂದರೆ ಇದೇನು ಹೊಸತಲ್ಲವೆಂದಾಯಿತು. ಈಗಂತೂ ಬಹುತೇಕ ಮದುವೆ, ಸಮಾರಂಭಗಳು ನಡೆಯುವುದೇ ಹೀಗೆ, ಕ್ಯಾಮರಾದ, ಫೋಟೋಗ್ರಾಫರ್ ನ ಆಣತಿಯಂತೆ.

ಪುರೋಹಿತರಿಗಿಂತ ಹೆಚ್ಚು ಕಂಟ್ರೋಲ್ ಹೊಂದಿರುವ ಏಕೈಕ ವ್ಯಕ್ತಿ ಫೋಟೋಗ್ರಾಫರ್. ಈ ಕಾರಣಕ್ಕೆ ಸಮಾರಂಭಗಳಲ್ಲಿ
ಫೋಟೋ ತೆಗೆಯುವ ದೃಶ್ಯ, ಪುರೋಹಿತರೂ ಸೇರಿ ಅದರಲ್ಲಿ ಭಾಗವಹಿಸುವವರು ಅದಕ್ಕೆ ತಕ್ಕನಾಗಿ ವ್ಯವಹರಿಸುವುದು,
ಇವನ್ನೆಲ್ಲ ಕಂಡಾಗ ತೇಜಸ್ವಿಯವರ ಪ್ರಭಾಕರನೆಂಬ ಪಾತ್ರ, ಅವರು ಅಂದೇ ಬರೆದಿದ್ದ ಇಡೀ ದೃಶ್ಯ ನೆನಪಾಗುತ್ತದೆ. ಈಗ ಸೆಲಿ ಬಗ್ಗೆ ಹೇಳದಿದ್ದರೆ ಹೇಗೆ? ಸೆಲಿ ಅವಾಂತರಗಳು ಒಂದೇ ಎರಡೇ? ಸೆಲ್ಫಿ ಗೀಳು ಇಂದು ಕೆಲವರಲ್ಲಿ ರೋಗವೆಂದು ಕರೆಯ ಬಹುದಾದ ಹಂತ ತಲುಪಿದೆ. ಹಿಂದಿನ ವರ್ಷ ಒಂದು ಮದುವೆಗೆ ಹೋಗಿದ್ದೆ. ಹೆಣ್ಣು ಗಂಡಿನ ಸ್ನೇಹಿತರು ಸೇರಿದ್ದರು. ಪ್ರತಿಯೊಂದು ಹಂತದಲ್ಲೂ ಸೆಲ್ಫಿ.

ಕ್ರಮೇಣ ಅತಿಯೆನ್ನಿಸುವಷ್ಟು ಆಯಿತು. ಇವರನ್ನು ಬಿಟ್ಟರೆ ಮುಹೂರ್ತ ಮೀರುತ್ತದೆ ಎಂದು ಪುರೋಹಿತರು ಗಲಾಟೆ ಯೆಬ್ಬಿಸಿದ್ದೂ ಆಯಿತು. ಇನ್ನೇನು ಗಟ್ಟಿ ಮೇಳ, ತಕ್ಷಣ ಮದುಮಕ್ಕಳ ಸ್ನೇಹಿತನೊಬ್ಬ ಎಲ್ಲಿ ಇದ್ದನೋ ಗೊತ್ತಿಲ್ಲ, ಕೈ ಉದ್ದ ಮಾಡಿ ವಿಕ್ಟರಿ ಸಂಕೇತ ತೋರಿಸಿ ತಾಳಿ ಕಟ್ಟುವಾಗಿನ ಸೆಲ್ಫಿ ತೆಗೆಯಬೇಕು ಎಂದು ಮುಂದೆ ಬಂದ. ಆತ ಬಂದು ನಿಂತದ್ದು
ಅಲ್ಲಿ ಇದ್ದ ಎರಡು ಫೋಟೋಗ್ರಾಫರ್ ಗಳ ಕ್ಯಾಮರಾ ಎದುರಿಗೆ. ಗಟ್ಟಿ ಮೇಳದ ಸದ್ದಿನಲ್ಲಿ ಆತನನ್ನು ಸರಿಯಬೇಕೆಂದು ಸ್ಟೇಜಿನ ಕೆಳಗಿದ್ದವರು ಎಷ್ಟೇ ಕೂಗಿಕೊಂಡರೂ ಪುಣ್ಯಾತ್ಮನಿಗೆ ಕೇಳಲಿಲ್ಲ. ತಾಳಿ ಕಟ್ಟಿ ಮುಗಿದೂ ಹೋಯಿತು.

ಒಬ್ಬ ಫೋಟೋಗ್ರಾಫರ್ ತೆಗೆದ ಫೋಟೋದಲ್ಲಿ ಮದುಮಕ್ಕಳ ಬದಲಿಗೆ ಈತನ ಬೆನ್ನು ಕಾಣಿಸಿದರೆ ಇನ್ನೊಂದರಲ್ಲಿ ಈತ ಹಲ್ಲು ಗಿಂಜಿ ಎರಡಕ್ಕೆ ಸಂಕೇತ ತೋರಿಸಿದ್ದು ಎದ್ದು ಕಾಣಿಸುತ್ತಿತ್ತು. ನಂತರ ಈ ಫೋಟೋದಿಂದ ಆತನನ್ನು ಎಡಿಟ್ ಮಾಡಿ
ಆಲ್ಬಮ್ ಪ್ರಿಂಟ್ ಮಾಡಬೇಕಾದರೆ ಫೋಟೋಗ್ರಾಫರ್‌ಗಳು ಹರಸಾಹಸವಾಯಿತು. ಈ ಸೆಲ್ಫಿ ಭೂಪರೆಂದರೆ ಹಾಗೆ.
ಸೆಲಿ ತೆಗೆಯಲು ಹೋಗಿ ಜೀವ ಕಳಕೊಂಡವರ ಬಗ್ಗೆ ಏನು ಹೇಳುವುದು? ಬದುಕುಳಿದವರಿಗೆ ತಮ್ಮವನ ಸಾವಿನ ಕಾರಣ
ಕೇಳಿದಾಗ ಹೇಗಾಗಬಹುದು? ಬಿಡಿ. ಈ ಸೆಲ್ಫಿ(ಶ್)ಗಳನ್ನು ಇಷ್ಟಕ್ಕೇ ಬಿಡೋಣವೆಂದರೆ ಇತ್ತೀಚೆ ಕಂಡ ಇನ್ನೊಂದು ಘಟನೆ
ನೆನಪಾಗುತ್ತದೆ.

ಹಿಂದಿನ ವಾರ ಕರ್ನಾಟಕದಿಂದ ಒಬ್ಬ ಫೇಮಸ್ ಹಾಡುಗಾರರನ್ನು ಇಲ್ಲಿನ ಕನ್ನಡ ಕೂಟ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು. ಕೊನೆಯ ಕೆಲ ಹಾಡುಗಳಿರುವಾಗ ಆತ ಕೆಲವರನ್ನು ಸ್ಟೇಜಿನ ಮೇಲೆ ಬಂದು ಹಾಡಿಗೆ ಸ್ಟೆಪ್ ಹಾಕುವಂತೆ ಕೇಳಿಕೊಂಡ. ಅಲ್ಲಿಯೂ ಕೆಲವು ಈ ಸೆಲ್ಫಿಶ್‌ಗಳ ಆಗಮನವಾಯಿತು. ನೃತ್ಯ ಮಾಡಿ ಎಂದರೆ ಇವರದು ಸೆಲ್ಫಿಗೆ ಸನ್ನೆಯಲ್ಲೇ ಒತ್ತಾಯ. ಅವರ ಕಾಟದ ಅಸಹನೆ ಹಾಡುಗಾರರ ಮುಖದಲ್ಲಿ ನೆರೆದ ನೂರಾರು ಮಂದಿಗೆ ಕಾಣಿಸುತ್ತಿತ್ತು.

ಹಾಗಂತ ಇವರೆಲ್ಲ ಸಭ್ಯ, ಸಜ್ಜನರೇ. ಆದರೆ ಈ ಫೋಟೋ ವ್ಯವಹಾರದಲ್ಲಿ ಮಾತ್ರ ಹೀಗೆ. ಇಲ್ಲಿನ ಪ್ರಶ್ನೆಯೆಂದರೆ, ಅದೇಕೆ ನಾವು ಇಷ್ಟು ಫೋಟೋ ತೆಗೆದುಕೊಳ್ಳುತ್ತೇವೆ? ಮನುಷ್ಯನಿಗೆ ಫೋಟೋ ಎಂದರೆ ಏಕೆ ಅಷ್ಟು ಹುಚ್ಚು? ಫೋಟೋ ಇಲ್ಲದ ಸೋಷಿಯಲ್ ಮೀಡಿಯಾ ಯೋಚಿಸಿ ನೋಡಿ. ಫೆಸ್ಬುಕ್, ಇನ್ಸ್ಟಾಗ್ರಾಮ್ ಇವುಗಳಲ್ಲಿನ ಪ್ರತಿಕ್ರಿಯೆಗಳಲ್ಲಿ ಶೇ. 96 ರಷ್ಟು ಪ್ರತಿಕ್ರಿಯೆ ಬರುವುದು ಫೋಟೋಕ್ಕೆ. ಈ ವರೆಗೆ ಫೆಸ್ಬುಕ್ ಒಂದರಲ್ಲೇ ಮನುಕುಲ ಅಪ್ಲೋಡ್ ಮಾಡಿದ ಫೋಟೋ ಸಂಖ್ಯೆ ಎಷ್ಟು ಗೊತ್ತಾ ? ಬರೋಬ್ಬರಿ ಎರಡೂವರೆ ಲಕ್ಷ ಕೋಟಿ !

ಫೋಟೋ ಸಂಹವಹಿಸುವ ಭಾಷೆಯಾಗಿ ಬದಲಾಗಿದೆ. ಸ್ನ್ಯಾಪ್ ಚಾಟ್ ಅದಕ್ಕೆ ಒಳ್ಳೆಯ ಉದಾಹರಣೆ. ಅಲ್ಲಿ ಮಾತಾಡುವುದೇ ಫೋಟೋಗಳಿಂದ. ಫೋಟೋ ಎಂದರೆ ಅದೆಷ್ಟೋ ಜನರಿಗೆ ತಮ್ಮನ್ನು ತಾವು ವ್ಯಕ್ತಪಡಿಸುವ, ಅಭಿವ್ಯಕ್ತಿಸುವ ಸಾಧನ. ಫೋಟೋ ತೆಗೆಯುವುದು, ನೆನಪಿಗೆ ಇಟ್ಟುಕೊಳ್ಳುವುದು, ದಾಖಲಿಸುವುದು ಇವೆಲ್ಲ ಸರಿ ಹೌದು. ಆದರೆ ಈ ಫೋಟೋ ತೆಗೆ ಯುವ, ತೆಗೆಸಿಕೊಳ್ಳುವ ವ್ಯವಹಾರದಲ್ಲಿ ಲಜ್ಜೆ ಮೀರಬಾರದು. ಜತೆಗಿರುವವರಿಗೆ ತೊಂದರೆಯಾಗುವಂತೆ, ಸಹಿಸಲ ಸಾಧ್ಯ ರೀತಿಯಲ್ಲಿ ವ್ಯವಹರಿಸುವುದು ಸಲ್ಲ. ಹೊಸ ತಲೆಮಾರು ಎನ್ನುವ ಸಮಜಾಯಿಷಿ ಒಪ್ಪಲಾಗದು.

ಫೋಟೋ ಬದುಕಿನ ನೆನಪುಗಳ ಬುತ್ತಿಗೆ, ನಾವು ನೋಡಿದ ಜಾಗ, ಹೋಗಿ ಬಂದ ಊರು, ನಮ್ಮವರ ನೆನಪಿಗೆ ಬೇಕು. ಆದರೆ ನಾವು ತೆಗೆಯುವ ಫೋಟೋಗಳಲ್ಲಿ ಇತಿಹಾಸವಾಗಿ ಇಷ್ಟವಾಗುವವು ಕೆಲವು ಮಾತ್ರ. ಉಳಿದೆಲ್ಲವೂ ಡಿಜಿಟಲ್ ಕಸಗಳು ಅಷ್ಟೆ. ಇಂದು ನಾವು ಒಮ್ಮೆಯೂ ನೋಡಲಾಗದಷ್ಟನ್ನು ಫೋಟೋಗಳನ್ನು ತೆಗೆಯುತ್ತಿದ್ದೇವೆ. ಆದರೆ ಅದೆಷ್ಟೋ ಬಾರಿ ಈ ಫೋಟೋ ತೆಗೆಯುವ ಆಚರಣೆಯಲ್ಲಿ – ಆ ಕ್ಷಣ ನಾವು ಅಲ್ಲಿದ್ದು ಆ ಸಮಯವನ್ನು, ಎದುರಿಗಿರುವುದರ ಸಾಕ್ಷಾತ್ ಅನುಭವ
ತಪ್ಪಿಸಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ನಾವೆಲ್ಲ, ನಮಗೆ ಲಾಗುವಾಗುವಷ್ಟು ವಿವೇಚಿಸಿಕೊಳ್ಳಬೇಕಾಗಿದೆ ಅಲ್ಲವೇ?