Saturday, 27th July 2024

ಲಾಲಾರಸ ಪ್ರಶ್ನೆಗಳಿಗೆ ಲಿಮರಿಕ್ ಉತ್ತರ ಬರೆದ ಕವಯಿತ್ರಿ

ಶ್ರೀವತ್ಸ ಜೋಶಿ

srivathsajoshi@yahoo.com

ಅಣಕು ರಾಮನಾಥ್ ಮತ್ತು ಎಚ್.ಡುಂಡಿರಾಜ್ – ಇಬ್ಬರು ನಗೆಸಮ್ರಾಟರು ಸೇರಿ ಎರಡು ವರ್ಷಗಳ ಹಿಂದೆ ‘ಡುಂಡಿರಾಮ್ಸ್ ಲಿಮರಿಕ್ಸ್’ ಎಂಬ ವಿನೂತನ ಪುಸ್ತಕ
ಹೊರತಂದಾಗ ಅದನ್ನು ತಿಳಿರುತೋರಣದಲ್ಲಿ ಪರಿಚಯಿಸುತ್ತ ನಾನು ಲಿಮರಿಕ್‌ಗಳ ಬಗ್ಗೆ ಬರೆದಿದ್ದೆ. ಮುಖ್ಯವಾಗಿ ಆ ಪುಸ್ತಕದ ಮುನ್ನುಡಿಯಲ್ಲಿ ಬಿ. ಜನಾರ್ದನ ಭಟ್ ಅವರು ವಿಸ್ತೃತವಾಗಿ ಮಾಡಿದ್ದ ಲಿಮರಿಕ್ ಕಾವ್ಯಪ್ರಕಾರದ ಸೋದಾಹರಣ ಬಣ್ಣನೆಯಿಂದ ಕೆಲ ಭಾಗಗಳನ್ನು ಉಲ್ಲೇಖಿಸಿದ್ದೆ. ಇಂದಿನ ಅಂಕಣಬರಹವನ್ನು ಸವಿಯಬೇಕಾದರೆ ಬಹುಶಃ ಅದರದೊಂದು ಪುನರಾವರ್ತನೆ ಅವಶ್ಯವಾಗಬಹುದು.

ಆದ್ದರಿಂದ ಇಲ್ಲಿ ಸಂಕ್ಷಿಪ್ತವಾಗಿ ಕೊಡುತ್ತಿದ್ದೇನೆ: ‘ಲಿಮರಿಕ್ ಅಂದರೆ ಪದ್ಯರಚನೆಯ ಒಂದು ವಿಧ. ಇದು ಒಟ್ಟು ಐದು ಸಾಲುಗಳಿರುವ ಹಾಸ್ಯ ಕವಿತೆ. ಪಂಚಪದಿ ಎಂದು ಹೇಳಬಹುದು. ಅಥವಾ ಡುಂಡಿರಾಜ್ ಹೆಸರಿಸಿರುವಂತೆ ‘ಪಂಚ್ ಪದಿ’ ಎಂದು ಕೂಡ ಕರೆಯಬಹುದು. ಬಹುಮಟ್ಟಿಗೆ ಅಪ್ರಸ್ತುತ ಪ್ರಸಂಗದಂತೆ ಇರುವ ಲಿಮರಿಕ್‌ಗಳು ಓದುಗನ ಕಲ್ಪನೆಯನ್ನು ವಿಸ್ತರಿಸಿ ಮನಸ್ಸನ್ನು ಮುದಗೊಳಿಸಿ ನಗು ಉಕ್ಕಿಸುತ್ತವೆ. ಇಂಗ್ಲಿಷ್ ನಲ್ಲಿ ಇವುಗಳನ್ನು ನಾನ್‌ಸೆನ್ಸ್ ಹಾಸ್ಯಪ್ರಕಾರ ಎಂದು
ಗುರುತಿಸುವುದೂ ಇದೆ. ಆ ದೃಷ್ಟಿಯಿಂದ ಇವು ಒಂಥರದಲ್ಲಿ ಲೇವಡಿಗೆ ಅಥವಾ ಸಮಾಜದ ಓರೆಕೋರೆ ತಿದ್ದಲಿಕ್ಕೆ ಒದಗಿಬರುವ ಅಕ್ಷರ ವ್ಯಂಗ್ಯಚಿತ್ರಗಳು. ಇಂಗ್ಲಿಷಿನವರಿಗೆ ಇವುಗಳಲ್ಲಿ ರುಚಿ ಜಾಸ್ತಿ.

ನಾವು ಸುಭಾಷಿತಗಳನ್ನು ಬಳಸುವಂತೆ ಇಂಗ್ಲಿಷರು ಲಿಮರಿಕ್ ಗಳನ್ನು ಬಳಸುತ್ತಾರೆ. ಭಾಷಣಗಳಿಗೆ, ಉಪನ್ಯಾಸಗಳಿಗೆ ಮೆರುಗು ತಂದುಕೊಳ್ಳುತ್ತಾರೆ. ಆದರೆ ಅವೆಲ್ಲವೂ ಘನಗಂಭೀರ ಆಗಿರುತ್ತವೆ ಅಂತೇನಿಲ್ಲ. ಸಭ್ಯತೆಯ ಎಲ್ಲೆ ದಾಟಿ ಪೋಲಿ ಅಶ್ಲೀಲ ಎನಿಸುವಂಥವೂ ಇರುತ್ತವೆ. ಶೇಕ್ಸ್‌ಪಿಯರ್‌ನ ನಾಟಕಗಳಲ್ಲೂ ಕೆಲ ಪಾತ್ರಗಳು ಲಿಮರಿಕ್‌ಗಳನ್ನಾಡಿದ್ದಿದೆಯಂತೆ. ಅಷ್ಟಾದರೂ ೧೯ನೆಯ ಶತಮಾನದ ಕೊನೆಯವರೆಗೂ ಈ ಪದ್ಯಪ್ರಕಾರಕ್ಕೆ ಲಿಮರಿಕ್ ಎಂಬ ಹೆಸರೇನೂ ಇರಲಿಲ್ಲ. ಲಿಮರಿಕ್ ಎಂದರೆ ಐರ್‌ಲ್ಯಾಂಡ್ ದೇಶದ ಒಂದು ಪಟ್ಟಣ. ‘ವೋಂಟ್ ಯೂ ಕಮ್ ಟು ಲಿಮರಿಕ್…’ (ಲಿಮರಿಕ್‌ಗೆ ಬರೋಲ್ವೇನೇ…) ಅಂತ ಹೈದನೊಬ್ಬ ಹೆಣ್ಣನ್ನು ಕರೆಯುವ ಪ್ರಖ್ಯಾತ ಇಂಗ್ಲಿಷ್ ಪದ್ಯ, ಅದಕ್ಕೊಂದು ಜನಪ್ರಿಯ ಟ್ಯೂನ್ ಇತ್ತಂತೆ.

ಒಮ್ಮೆ ಇಂಗ್ಲಿಷ್ ಪತ್ರಿಕೆಯೊಂದು ಪಂಚಪದಿ ಗಳನ್ನು ಪ್ರಕಟಿಸುವಾಗ ಇವುಗಳನ್ನು ‘ವೋಂಟ್ ಯೂ ಕಮ್ ಟು ಲಿಮರಿಕ್’ ಧಾಟಿಯಲ್ಲಿ ಗುನುಗುನಿಸಬಹುದು ಎಂದು ಓದುಗರಿಗೆ ಸೂಚನೆ ಕೊಟ್ಟಿತ್ತು. ಆಮೇಲೆ ಅಂತಹ ಪಂಚಪದಿ ಪದ್ಯಪ್ರಕಾರಕ್ಕೆ ಲಿಮರಿಕ್ ಎಂದೇ ಹೆಸರಾಯ್ತು. ಲಿಮರಿಕ್ ಪದ್ಯದಲ್ಲಿ ಒಟ್ಟು ಐದು ಸಾಲುಗಳು. ೧ನೆಯ,೨ನೆಯ, ಮತ್ತು ೫ನೆಯ ಸಾಲುಗಳದು ಒಂದು ಪ್ರಾಸ. ಇವುಗಳ ಉದ್ದ, ಅಂದರೆ ಸರಾಸರಿ ಪದಗಳ ಸಂಖ್ಯೆ ಕೂಡ ಒಂದೇ ರೀತಿ.
ಅದಕ್ಕೆ ವ್ಯತಿರಿಕ್ತವಾಗಿ ೩ನೆಯ ಮತ್ತು ೪ನೆಯ ಸಾಲುಗಳದು ಇನ್ನೊಂದು ಪ್ರಾಸ. ಈ ಜೋಡಿ ಸಾಲುಗಳ ಉದ್ದ (ಸರಾಸರಿ ಪದಗಳ ಸಂಖ್ಯೆ) ಕಡಿಮೆ. ಇದನ್ನು ಡುಂಡಿರಾಮ್ಸ್ ಲಿಮರಿಕ್ಸ್ ಪುಸ್ತಕದಿಂದಾಯ್ದ ಒಂದು ಕನ್ನಡ ಲಿಮರಿಕ್ ಮೂಲಕವೇ ಹೇಳುವುದಾದರೆ- ‘ಕುಂತಿಯ ಮಕ್ಕಳ ಖ್ಯಾತಿಯ ಹಾಗೆ ಮೂರು ಸಾಲ್ಗಳು ಉದ್ದನೆ| ಮಾದ್ರಿಯ ಮಕ್ಕಳ ಕೀರ್ತಿಯ ಹಾಗೆ ಎರಡು ಸಾಲ್ಗಳು ಗಿಡ್ಡನೆ| ಪಾಂಡವರಿದ್ದರು ಪಂಚ| ಅಂತೆಯೆ ಲಿಮರಿಕ್ ಪ್ರಪಂಚ| ದೊಡ್ಡ ಸಾಲಿಗೂ ಚಿಕ್ಕ ಸಾಲಿಗೂ ವಿವಿಧ ಪ್ರಾಸದ ಜೋಡಣೆ|’ ಈ ಲೆಕ್ಕಾಚಾರವೆಲ್ಲ ಒಂದು ಥೋರ ಮಟ್ಟಿನ ಅಂದಾಜು ಮಾತ್ರ.

ಏಕೆಂದರೆ ಕನ್ನಡದ/ಸಂಸ್ಕೃತದ ಛಂದೋಬದ್ಧ ಕಾವ್ಯಗಳಂತೆ ಗುರು-ಲಘು ಪ್ರಸ್ತಾರವಾಗಲೀ ಮಾತ್ರೆಗಳ ಸಂಖ್ಯೆ ಅಕ್ಷರಗಳ ಸಂಖ್ಯೆಯ ಕಟ್ಟುನಿಟ್ಟಿನ ನಿಯಮಗಳಾಗಲೀ ಲಿಮರಿಕ್ ಗಳಿಗಿಲ್ಲ. ಎಷ್ಟೆಂದರೂ ಅವು ಹಾಸ್ಯದ ಸರಕು. ಸಲೀಸಾಗಿ ಉಚ್ಚರಿಸಲಿಕ್ಕೆ ಬರಬೇಕು, ಹಿತವಾದೊಂದು ಲಯ ಇರಬೇಕು ಅಷ್ಟೇ.
ಇಂಗ್ಲಿಷ್ ಲಿಮರಿಕ್‌ನ ಇನ್ನೊಂದು ಮುಖ್ಯ ಲಕ್ಷಣವೆಂದರೆ ಕಥೆ ಹೇಳಿದಂತೆ ಇರಬೇಕು- ಪ್ರಾರಂಭದ ಎರಡು ಸಾಲುಗಳಲ್ಲಿ ಹಾಸ್ಯ ಕಥಾನಕದ ನಾಯಕ ಅಥವಾ ನಾಯಕಿ ಯಾವ ಊರಿನವನು/ಳು ಎನ್ನುವುದನ್ನೂ, ಅವರ ಹೆಸರನ್ನೂ, ಸಂಕ್ಷಿಪ್ತ ಪರಿಚಯ (ಗುಣವಿಶೇಷಣ)ವನ್ನೂ ಮಾಡಿ ಕೊಡಬೇಕು.

ಮೂರು ಮತ್ತು ನಾಲ್ಕನೆಯ ಸಾಲುಗಳಲ್ಲಿ ಒಂದು ಆಸಕ್ತಿಕರ ಘಟನೆಯನ್ನು ಸ್ವಾರಸ್ಯಕರವಾಗಿ ಹೇಳಬೇಕು. ಕೊನೆಯ ಸಾಲಿನಲ್ಲಿ ಅದರ ಪರಿಣಾಮವನ್ನು ಹೇಳಿ ನಗು ಉಕ್ಕುವಂತೆ ಮಾಡಬೇಕು. ಅಸಂಗತವಿರಲಿ ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿರಲಿ ಅಂತೂ ಪಂಚಮ ಸಾಲಿನಲ್ಲಿ ಪಂಚ್ ಇರಲೇಬೇಕು. ಐದೇಐದು ಸಾಲುಗಳಲ್ಲಿ ಒಂದಿಡೀ ಹಾಸ್ಯಪ್ರಸಂಗವನ್ನು ರಸವತ್ತಾಗಿ, ಪ್ರಾಸಬದ್ಧವಾಗಿ, ಲಯಬದ್ಧವಾಗಿ ಬಣ್ಣಿಸುವುದು ಲಿಮರಿಕ್‌ನ ಹೆಚ್ಚುಗಾರಿಕೆ. ವಿಭಿನ್ನ ಉದ್ದದ ಸಾಲುಗಳಿಂದಾಗಿ ಲಿಮರಿಕ್‌ಅನ್ನು ಬರೆದಾಗ ಅದೊಂದು ಮೊಂಡು ಕೊಂಡಿಯ ಚೇಳಿನಂತೆ ಕಾಣುತ್ತದೆ. ಚೇಳಿ ನಂತೆಯೇ ಕುಟುಕುತ್ತದೆ, ಆದರೆ ಕೊಂಡಿ ಮೊಂಡಾಗಿರುವುದರಿಂದ ಅಪಾಯವಿಲ್ಲ.’

ಇದಿಷ್ಟು ಹಿನ್ನೆಲೆಯನ್ನು ಲಿಮರಿಕ್ ಬಗ್ಗೆ ಹೇಳಬೇಕಾಯ್ತೇಕೆಂದರೆ ಕಳೆದ ವಾರದ ಅಂಕಣದಲ್ಲಿ ದೀಪಾವಳಿ ವಿಶೇಷವೆಂದು ಸಿಹಿ-ಕಾರ ತಿಂಡಿಗಳ ಹೆಸರೇ ಉತ್ತರವಾಗಿರುವಂತೆ ೨೪ ರಸಪ್ರಶ್ನೆಗಳನ್ನು ಪೋಣಿಸಿದ್ದೆನಷ್ಟೆ? ಅವುಗಳಿಗೆ ಉತ್ತರಗಳನ್ನು ಬರೆದು ಕಳುಹಿಸುವಾಗ ಓದುಗರೊಬ್ಬರು ಭಲೇ ಕ್ರಿಯೇಟಿವಿಟಿ ತೋರಿದ್ದಾರೆ. ಅದೇ ನೆಂದರೆ ಒಂದೊಂದು ಉತ್ತರವನ್ನೂ ಅವರು ಲಿಮರಿಕ್ ರೂಪದಲ್ಲಿ ಬರೆದುಕಳುಹಿಸಿದ್ದಾರೆ! ಅವರ ಈ ಐಡಿಯಾ ನನಗಂತೂ
ತುಂಬ ಇಷ್ಟವಾಯ್ತು. ಅದನ್ನು ನಾನು ಮಾತ್ರ ಓದಿ ಆನಂದಿಸುವುದು ಸಾಧುವಲ್ಲ ಎಂದುಕೊಂಡು ಅವರ ಪ್ರತಿಭೆಯನ್ನು, ಸೃಜನಶೀಲತೆಯನ್ನು ನಿಮ್ಮೆಲ್ಲರಿಗೂ ತೋರಿಸಲಿಕ್ಕಾಗಿ ಈ ವಾರದ ಅಂಕಣವನ್ನು ಅದಕ್ಕೇ ವಿನಿಯೋಗಿಸುತ್ತಿದ್ದೇನೆ.

ದೀಪಾವಳಿ ಮುಗಿದ ಮೇಲೂ ತಿಂಡಿತಿನಸಿನ ಗುಂಗಿನಲ್ಲೇ ಇರಬೇಕೇ ಎಂದು ಕೆಲವರು ಅಂದುಕೊಳ್ಳುವ, ಗೊಣಗುವ ಸಾಧ್ಯತೆ ಇದೆಯಾದರೂ ಇಂತಹ
ವಿಶಿಷ್ಟ ಸ್ವಾರಸ್ಯಗಳನ್ನು ನಾವೆಲ್ಲರೂ ಆನಂದಿಸಬೇಕು, ಸಣ್ಣಸಣ್ಣ ಸಂಗತಿಗಳಲ್ಲಿ ಸಂಭ್ರಮ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು, ಸಾಧ್ಯವಾದರೆ ಅಷ್ಟಿಷ್ಟು ಪ್ರೇರಣೆ ಪಡೆದು ನಾವೂ ಇಂತಹ ಕ್ರಿಯೇಟಿವಿಟಿಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನನ್ನ ಅಂಬೋಣ. ಯಾರು ಈ ಪ್ರತಿಭಾನ್ವಿತೆ ಓದುಗರು ಅಂತೀರಾ? ಹೆಸರು: ಮೋಹಿನಿ ದಾಮ್ಲೆ. ‘ಭಾವನಾ’ ಎಂದು ಕಾವ್ಯನಾಮ.

ಮೂಲತಃ ನಮ್ಮ ಕಾರ್ಕಳದವರು. ನಮ್ಮದೇ ಚಿತ್ಪಾವನ ಮರಾಠಿ ಸಮುದಾಯ ದವರು. ಸಾಗರ ಮೂಲದ ಪತಿ ಡಾ.ರಾಮಕೃಷ್ಣ ದಾಮ್ಲೆಯವರೊಡನೆ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಸದ್ಗೃಹಿಣಿ. ತಿಳಿರುತೋರಣದಲ್ಲೇ ಹಿಂದೊಮ್ಮೆ (೦೮ ಮಾರ್ಚ್ ೨೦೨೦ರಂದು) ಮಹಿಳಾದಿನದ ವಿಶೇಷವೆಂದು ಇವರನ್ನು ಸವಿಸ್ತಾರ ಪರಿಚಯಿಸಿದ್ದೇನಾದ್ದರಿಂದ ಈಗ ಇಷ್ಟಕ್ಕೇ ನಿಲ್ಲಿಸುತ್ತೇನೆ. ಆದರೆ ಲಿಮರಿಕ್ ಹೊಸೆಯುವ ಇವರ ಸಾಮರ್ಥ್ಯದ ಬಗ್ಗೆ ಒಂದೆರಡು ಮಾತುಗಳನ್ನು ಸೇರಿಸಲೇಬೇಕು. ಡುಂಡಿರಾಮ್ಸ್ ಲಿಮರಿಕ್ಸ್ ಪುಸ್ತಕ ಪರಿಚಯವಿದ್ದ ಅಂಕಣಬರಹದಿಂದ ಪ್ರಭಾವಿತರಾಗಿ ಈ ಕಾವ್ಯ ಪ್ರಕಾರದಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡ ಮೋಹಿನಿ ದಾಮ್ಲೆಯವರು ಇದುವರೆಗೆ ಗೀಚಿದ ಲಿಮರಿಕ್‌ಗಳ ಸಂಖ್ಯೆ ನೂರು ದಾಟಿರಬಹುದು.

ವಿಶೇಷವಾಗಿ ನಮ್ಮ ಚಿತ್ಪಾವನಿ ಭಾಷೆಯಲ್ಲಿ ಸಾಕಷ್ಟು ಲಿಮರಿಕ್ಸ್ ಬರೆದಿದ್ದಾರೆ. ಮಾತ್ರವಲ್ಲ, ಲಿಮರಿಕ್ ಸಾಹಿತ್ಯಕ್ಕೆ ಚಿತ್ಪಾವನಿ ಭಾಷೆ ಕನ್ನಡಕ್ಕಿಂತಲೂ ಚೆನ್ನಾಗಿ ಒದಗಿಬರುತ್ತದೆಂದು ಅವರ ಅಭಿಪ್ರಾಯ. ಇರಲಿ, ಈಗಿನ್ನು ಸಿಹಿ-ಕಾರ ತಿಂಡಿತಿನಸುಗಳ ಬಗೆಗೆ ಮೋಹಿನಿ ದಾಮ್ಲೆಯವರು ಸವಿಗನ್ನಡದಲ್ಲಿ ಸಿಂಗರಿಸಿದ ಈ
ತಾಜಾ ಫ್ರೆಷ್ ಲಿಮರಿಕ್ಕುಗಳನ್ನು ಚಪ್ಪರಿಸೋಣ. ೧. ಅಕ್ಕಿಯ ಹಿಟ್ಟಿಗೆ ಬೆಲ್ಲದ ಪಾಕ ಗಸಗಸೆ ಏಲಕ್ಕಿ ಬೆರೆಯಲು ನಾಕ; ಅಸುರರ ಒದ್ದ ತಿಮ್ಮಪ್ಪ ಮೆದ್ದ ಅತಿರಸ ಮಹಿಮೆಯು ಜಗದೇಕ! ೨. ಇದರೊಳಗಿಲ್ಲ ಯಾವುದೆ ಬೇಳೆ ಹೊಸೆಯಲು ಬೇಕಿರುವುದು ವೇಳೆ; ಚಕ್ಕುಲಿ ಚೂಡಾ ಇದ್ದರು ಕೂಡಾ ಕೈಗಳನೆಳೆವುದೇ ಕೋಡುಬಳೆ!
೩. ಬಡವರ ಪಾಲಿನ ಸಿಹಿ ಹಲ್ವಾ ಹೆಸರಿದು ಪರ್ಫೆಕ್ಟ್ ಇದೆಯಲ್ವಾ? ಓ! ಹಾಲ್‌ಬಾಯಿ ನೀ ಬಲು ಹಾಯಿ ಬೇಡಿಕೆ ಮುಗಿಯದು ‘ಉಳಿದಿಲ್ವಾ?’

೪. ಬರೆದಷ್ಟು ಇಹುದು ಅಡುಗೆ ಕಾದಂಬರಿ ರಾಮಾಯಣಕೂ ನಂಟು ಇದೆ ನಂಬಿರಿ; ಕಂಡಳೆಮಗಲ್ಲಿ ಪಂಚವಟಿಯಲ್ಲಿ ಕೋಸಲೇಶನಿಗೆ ಪ್ರಿಯೆ ಕೋಸಂಬರಿ!
೫. ಗೇರುಬೀಜ ದ್ರಾಕ್ಷಿ ಲವಂಗ ತೋರೆ ಪ್ರೇಮಸಾಕ್ಷಿಯ ಸಂಗ; ಸಂಡೇ ಯಾ ಮಂಡೆ ಘಂಘಂ ರವೆಉಂಡೆ ಚಂದಕೆ ನಾಚಿದನಾ ಅನಂಗ!
೬. ಸೊಪ್ಪು ಕಾಳಿನ ಬಸ್ಸಾರು ಜೊತೆಗಿರೆ ಭಾರೀ ಸೂಪರ್ರು; ರಾಗಿಯ ಮುದ್ದೆ ನೀಡಿದ ಹುದ್ದೆ ತೋರಿಸಿತದರ ಟ್ರೂ ಪವರ್ರು!
೭. ಹೋಳಿಗೆ ಹೂರಣ ನಾನಲ್ಲ ಬೇಳೆಯ ಪಾಯಸ ಅಲ್ಲಲ್ಲ; ಕುದುರೆಯ ಕತ್ತು ಮಂದನೆ ಮತ್ತು ಹಯಗ್ರೀವ ನಾ ಮೊದ್ದಲ್ಲ!

೮. ಒಂದೇ ತಿಂದರೆ ಸಾಕಾಗದ ಪೆಟ್ಟು ಮತ್ತೂ ಬೇಕೆನಿಸುವುದರ ಗುಟ್ಟು; ಅಮ್ಮನ ಕೇಳು ನಮಗೂ ಹೇಳು ತಿನ್ನುವ ಮೊದಲೇ ತಾಲೀಪೆಟ್ಟು!
೯. ಒಳಗಿರುವವರನು ಹೊರಗೆಸೆಯುವರು ಹೊರಗಿಹ ನನ್ನನು ಕೊಯ್ದಿರಿಸುವರು; ಗೇರಿನ ಬೀಜ ನಾನೇ ರಾಜ ನನ್ನಯ ಬರ್ಫಿಗೆ ಸಮನಾರಿಹರು?
೧೦. ದಕ್ಷಿಣಕನ್ನಡದಿಂದಲಿ ಬಂದ ತಿಂಡಿಯು ಯಾವುದು ಹೇಳೆಲೊ ಕಂದ; ಕಾರ್ಕಳಕ್ ಹತ್ರ ಇದುವೇ ಉತ್ರ ಗೋಳಿಬಜೆಯ ರುಚಿ ಬಲು ಅಂದ!
೧೧. ಶ್ಯಾವಿಗೆಯಿರಲಿ ದೋಸೆಯೆ ಇರಲಿ ನೀಡಲು ಪ್ರೀತಿಯ ಕಂಪನಿ ಅಸಲಿ; ಕಾಯಿಯ ಹಾಲೇ ಸವಿ ರಸಬಾಳೆ ಬೆಲ್ಲವೆ ಸಿಹಿ ಸೀಕರಣೆಗೆ ಬರಲಿ!
೧೨. ಬೊಂಬಾಯಿಂದ ಬಂದೆ ಬಹಳ ವರ್ಷ ಹಿಂದೆ; ಪಾವು ಭಾಜಿ ಅಲ್ಲ ಮಾಜಿ ನಾನು ಈಗ್ಲೂ ಮುಂದೆ!
೧೩. ಕೋಟೆ ಕಟ್ಟಿ ಕುಣ್ದೋರೆಲ್ಲ ಏನಾದರು? ಮೀಸೆ ತಿರುವಿ ಮೆರ್ದೋರೆಲ್ಲ ಮಣ್ಣಾದರು; ಬಳ್ಳಿ ಮ್ಯಾಲೆ ಬಳ್ಳಿ ಸುತ್ತಿ ರಂಗವಲ್ಲಿ ಉಳಿದನೊಬ್ಬನಂತೆ ಅವನೇ ಜಹಂಗೀರು!

೧೪. ನಾಷ್ಟಾಗೇನಿದೆ ಮೂರು ದೋಸೆ ಸೆಟ್ಟು ನೆಂಚಿಕೊಳ್ಳಲಿಕೆ ಚಟ್ನಿ ಸಾಗು ಫಿಟ್ಟು; ತುಂಬೀ ಹೊಟ್ಟೆ ಅಣೆಧಿ ಕಟ್ಟೆ ನೇಸರನೇರಿರೆ ನಿದ್ದೆ ಹೋದ ಕಿಟ್ಟು!
೧೫. ಬಿಸಿಯಿರುವಾಗ ಅಬ್ಬಾ ಸೊಕ್ಕು ತಣಿದಾಗೆಲ್ಲ ಅಯ್ಯೋ ಸುಕ್ಕು; ಮಾಗಿದ ಕಾರಣ ಒಳಗಿನ ಹೂರಣ ಹೆಚ್ಚಿತು ನೋಡಿರಿ ಉಂಡೆಯ ಲುಕ್ಕು.
೧೬. ಪುಟ್ಟದಾದ್ರು ಪೂರಿ ದೊಡ್ಡ ಬಾಯ್ ತೆರೀರಿ; ಬೆಂದ ಕಾಳು ಮಿದ್ದ ಆಲು ಕಾರ ಪಾನಿ ಸುರೀರಿ!

೧೭. ಅಕ್ಕಿ ಬೆಲ್ಲ ಕಾಯ್ ತುಪ್ಪ ಕಾಂಬಿನೇಷನ್ ಬಲು ಒಪ್ಪ; ಚೊಯ್ಯಂತ್ ಎರ್ದು ಚೆಂದಾಗ್ ಕರ್ದು ತಟ್ಟೇಲಿಟ್ಕೊಡಿ ಎರೆಯಪ್ಪ!
೧೮. ಗೋಪಿಯರೆಲ್ಲರ ಅಹವಾಲು ಕೇಳಿ ಯಶೋದೆಯು ಮುನಿಸಿರಲು; ಓಡಿದ ಕಿಟ್ಟ ಹತ್ತಿದ ಬೆಟ್ಟ ಕುರುಕುತ ಬಾಯಲಿ ತೇಂಗೊಳಲು!
೧೯. ಸಕ್ಕರೆ ಪ್ರಿಯನಿವ ಬೆಲ್ಲವನೊಲ್ಲ ಅಕ್ಕನ ಮಮತೆಗೆ ಬಿಳುಚಿದ ಗಲ್ಲ; ಒಡೆದಾಗ ಹಾಲು ಹುಟ್ಟಿದೀ ಗೋಲೂ ಬಂಗಾಳಿಗರಿಗೆ ರೊಶೊಗುಲ್ಲಾ!
೨೦. ಬಯಲುಸೀಮೆಗಿವ್ಳ್ ಫೇಮಸ್ಸು ಬಾಯಾಗಿಟ್ರೆ ಉಸ್ಸ್ ಉಸ್ಸು; ಗಿರ್ಮಿಟ್ ನರ್ಗಿಸ್ ಜೊತೆಯಲಿ ಫಿಕ್ಸು ಮಿರ್ಚಿಭಜಿಯಿವಳ ಕೋರಸ್ಸು!
೨೧. ಗಸಗಸೆ ಕೊಬ್ಬರಿ ಬಾದಾಮು ಒಣಹಣ್ಣುಗಳದು ಗೋದಾಮು; ಬೆಸೆದಿದೆ ನಂಟು ರುಚಿ-ಕರದಂಟು ಗೋಕಾಕ್ ಸ್ವೀಟಿದು ಸುಪ್ರೀಮು!
೨೨. ಮುಳುಗುತ ಏಳುತ ತೇಲಿತು ಉಬ್ಬಿ ಹೇಳಿದ್ಕೇಳದೆ ಎಣ್ಣೆ ಕುಡಿದ್ ಕೊಬ್ಬಿ; ವಾಹ್‌ರೇ ಪೂರಿ ಬಹುತ್ ಪ್ಯಾರಿ ಸಾಗು ಇದ್ದರೆ ಒಂದಾದ್ಮೇಲೊಂದಬ್ಬಿ!
೨೩. ಹ್ಯಾಂಗೈತಂತ ತಿಂದು ನೋಡಿ ಉಪ್ಪಿಟ್ಟ್ ಶೀರಾ ಆದರ್ಶ ಜೋಡಿ; ಸ್ವೀಟೂ-ಕಾರ ಬಾಯಾಗ್ ನೀರ ಚೌಚೌ ಭಾತಿದು ಮಾಡಿತು ಮೋಡಿ!
೨೪. ಹೋಳಿಗೆ ಆಂಬೊಡೆ ಚಿತ್ರಾನ್ನ ಉಂಡರು ಪರಿಪರಿ ಪರಮಾನ್ನ; ಹೇಳರು ಸಾಕು ನುಡಿವರು ಬೇಕು ಕೊನೆಯಲಿ ತಂಪಿನ ಮೊಸರನ್ನ!

ರಸಪ್ರಶ್ನೆಯಲ್ಲಿ ಕೇಳಿದ್ದ ಒಟ್ಟು ಇಪ್ಪತ್ತನಾಲ್ಕು ತಿಂಡಿತಿನಸುಗಳು ಯಾವುವೆಂದು ನೀವು ಈ ಲಿಮರಿಕ್‌ಗಳಿಂದ ತಿಳಿದುಕೊಂಡಿರಿ ಮತ್ತು ಆನಂದಿಸಿದಿರಿ ಎಂದು ಭಾವಿಸಿದ್ದೇನೆ. ಒಂದುವೇಳೆ ಗೊತ್ತಾಗದಿದ್ದರೆ ಇಲ್ಲಿ ಕೊಟ್ಟಿರುವ ಚಿತ್ರದಲ್ಲಿಯೂ ಕಾಣಬಹುದು. ಅಷ್ಟೇ ಅಲ್ಲ, ಈ ಚಿತ್ರದ ಜೋಡಣೆಯನ್ನೂ ಸೂಕ್ಷ್ಮವಾಗಿ
ಗಮನಿಸಿದಿರಾದರೆ, ೧ನೆಯ, ೨ನೆಯ, ಮತ್ತು ೫ನೆಯ ಸಾಲುಗಳು ಉದ್ದವಾಗಿ ಇವೆ; ೩ ಮತ್ತು ೪ನೆಯ ಸಾಲುಗಳು ಗಿಡ್ಡವಾಗಿ ಇವೆ. ಥೇಟ್ ಲಿಮರಿಕ್‌ನಂತೆಯೇ!

Leave a Reply

Your email address will not be published. Required fields are marked *

error: Content is protected !!