Saturday, 7th September 2024

ಕುಟುಂಬ ರಾಜಕಾರಣದ ಸುತ್ತಮುತ್ತ

ವರ್ತಮಾನ

maapala@gmail.com

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬಿಕರ ವಿರುದ್ಧ ರಾಜ್ಯ ಬಿಜೆಪಿಗರು ಸಿಡಿದೇಳುವುದು, ಆರೋಪಿಸುವುದು ಹೊಸದೇ ನಲ್ಲ. ಕಳೆದೊಂದು ದಶಕದಿಂದ ಇಂಥ ಹಲವಾರು ಯತ್ನಗಳಾಗಿವೆ. ಆದರೆ, ಅಂಥವರಿಗೆ ವರಿಷ್ಠರು ಮಣೆ ಹಾಕಿದಾಗಲೆಲ್ಲಾ ರಾಜ್ಯದಲ್ಲಿ ಪಕ್ಷ ನಷ್ಟ ಅನುಭವಿಸಿದ್ದೇ ಹೆಚ್ಚು.

ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ವಂಚಿತರೆಲ್ಲರೂ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ. ‘ರಾಜ್ಯದಲ್ಲಿ ಬಿಜೆಪಿಯ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ಪಕ್ಷವು ಜಾತಿ, ಕುಟುಂಬ, ಚೇಲಾಗಳಿಗೆ ಸೀಮಿತವಾಗಿದೆ. ಅದು ಕುಟುಂಬ ರಾಜಕಾರಣದಿಂದ ಹೊರಬರಬೇಕು. ಯಡಿಯೂರಪ್ಪ ಅವರು ಬಿಜೆಪಿಯಲ್ಲೂ ಕಾಂಗ್ರೆಸ್ ಸಂಸ್ಕೃತಿಯನ್ನು ತೂರಿಸಿದ್ದಾರೆ. ಈ ಕುಟುಂಬ ರಾಜಕಾರಣದಿಂದ ಪಕ್ಷವನ್ನು ಮುಕ್ತಗೊಳಿಸಬೇಕು’ ಎಂದೆಲ್ಲಾ ಹೇಳುತ್ತಿದ್ದಾರೆ.

ಪಕ್ಷವನ್ನು ಶುದ್ಧಗೊಳಿಸುವ ಮಾತು ಗಳನ್ನು ಆಡುತ್ತಿದ್ದಾರೆ. ವಿಶೇಷ ಎಂದರೆ ಯಡಿಯೂರಪ್ಪ ಅವರಿಂದಾಗಿಯೇ ಪಕ್ಷ ಸೇರಿಕೊಂಡು, ಅವರ ಸಹಾಯ ದಿಂದ ಪಕ್ಷ ಮತ್ತು ಸರಕಾರದಲ್ಲಿ ಅಧಿಕಾರ ಅನುಭವಿಸಿದವರೂ ಈ ಗುಂಪಿನಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಾ, ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಾ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ನೆಪ ಮಾಡಿಕೊಂಡು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಳೆದ ೨ ವಾರಗಳಿಂದ ಬಿಜೆಪಿಯಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳು ಇದನ್ನು ಸಾಬೀತುಪಡಿಸುತ್ತಿವೆ.

ಖಂಡಿತವಾಗಿಯೂ, ಒಂದು ರಾಜಕೀಯ ಪಕ್ಷಕ್ಕೆ ಕುಟುಂಬ ರಾಜಕಾರಣ ಎನ್ನುವುದು ಅಪಾಯಕಾರಿ. ತಮ್ಮ ನಂತರ ತಮ್ಮ ಮಕ್ಕಳು, ಕುಟುಂಬದವರಿಗೇ
ಅಧಿಕಾರ ಸಿಗಬೇಕು. ಚುನಾವಣೆಗಳಲ್ಲೂ ಅವರಿಗೆ ಅವಕಾಶ ನೀಡಬೇಕು ಎಂಬ ನಾಯಕರ ನಿಲುವುಗಳಿಂದಾಗಿ ಇತರರು ರಾಜಕೀಯದಲ್ಲಿ ಮೇಲೆ
ಬರಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದರೆ ಅಂಥವರನ್ನು ಮೂಲೆಗುಂಪು ಮಾಡಲಾಗುತ್ತದೆ. ಆ
ಕುಟುಂಬ ರಾಜಕಾರಣದಿಂದಲೇ ಕಾಂಗ್ರೆಸ್ ಇಂದು ರಾಷ್ಟ್ರ ಮಟ್ಟದಲ್ಲಿ ಹೀನಾಯ ಪರಿಸ್ಥಿತಿಗೆ ತಲುಪಿದೆ.

ರಾಜ್ಯದಲ್ಲಿ ಜೆಡಿಎಸ್ ಕೂಡ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಆ ಕುಟುಂಬಗಳನ್ನು ಹೊರಗಿಟ್ಟರೆ ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಮತ್ತು ಜೆಡಿಸ್‌ಗೆ
ರಾಜ್ಯ ಮಟ್ಟದಲ್ಲಿ ಅಸ್ತಿತ್ವವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪಕ್ಷಗಳು ಕುಟುಂಬದ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಇತರ ನಾಯಕರನ್ನು ಬೆಳೆಯಲು
ಬಿಡದಿರುವುದು, ಬೆಳೆದರೂ ಅವರಿಗೆ ಅವಕಾಶ ಕಲ್ಪಿಸದಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂಬುದು ಸುಳ್ಳಲ್ಲ.

ದೇಶದಲ್ಲಿ ಬಿಜೆಪಿ ಬೆಳೆಯಲು ಕೂಡ ಕಾಂಗ್ರೆಸ್‌ನ ಕುಟುಂಬ ರಾಜಕಾರಣವೇ ಕಾರಣ. ಇದರ ವಿರುದ್ಧ ಅಟಲ್‌ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಆಡ್ವಾಣಿ ನಡೆಸಿದ ನಿರಂತರ ಹೋರಾಟದಿಂದಾಗಿ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಒಂದು ಶಕ್ತಿಯಾಗಿ ಹೊರ ಹೊಮ್ಮಿತು. ನಂತರದ ನರೇಂದ್ರ ಮೋದಿ, ಅಮಿತ್ ಶಾ ಅವರ ಅವಧಿಯಲ್ಲಿ ಈ ಶಕ್ತಿಯನ್ನು ಇನ್ನೂ ಹೆಚ್ಚಿಸಿಕೊಂಡಿತು. ಆದರೆ, ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಈಗಲೂ ಕುಟುಂಬ ರಾಜಕಾರಣದ ಗಾಳಿ ಸೋಕಿಲ್ಲ. ಅಷ್ಟರ ಮಟ್ಟಿಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪಕ್ಷವನ್ನು ಕಾಪಾಡಿಕೊಂಡಿದ್ದಾರೆ ಎನ್ನಬಹುದು. ಇಬ್ಬರೂ ತಮ್ಮ ಕುಟುಂಬ ವನ್ನು ರಾಜ ಕಾರಣದಿಂದ ಹೊರಗಿಟ್ಟಿದ್ದಾರೆ.

ಪಕ್ಷದೊಳಗೆ ಅವರಿಬ್ಬರಿಗೆ ಪರ್ಯಾಯ ನಾಯಕತ್ವ ಕಾಣಿಸಿಕೊಳ್ಳದೇ ಇದ್ದರೂ ತಮ್ಮವರನ್ನು ಆ ಸ್ಥಾನಕ್ಕೇರಿಸುವ ಪ್ರಯತ್ನವನ್ನು ಇಬ್ಬರೂ ಮಾಡ ಲಿಲ್ಲ. ಹೀಗಾಗಿ ಮೋದಿ, ಅಮಿತ್ ಶಾ ನಂತರ ಯೋಗಿ ಆದಿತ್ಯನಾಥ್, ಹಿಮಂತ್ ಬಿಸ್ವಾ ಶರ್ಮಾ ಅವರಂಥವರು ರಾಷ್ಟ್ರ ರಾಜಕಾರಣಕ್ಕೆ ಬರಲು ಸಿದ್ಧವಾಗಿದ್ದಾರೆ. ಇಷ್ಟರ ಮಧ್ಯೆಯೂ ರಾಜ್ಯದಲ್ಲಿ ಈಗಲೂ ಕಾಂಗ್ರೆಸ್ ತನ್ನ ಶಕ್ತಿ ಉಳಿಸಿಕೊಂಡಿದೆ ಎಂದರೆ ಅದಕ್ಕೆ ಕಾರಣ, ರಾಜ್ಯ ಘಟಕದಲ್ಲಿ ಕುಟುಂಬ ರಾಜಕಾರಣ ಎಂಬುದು ಬಲವಾಗಿ ಬೇರೂರಿಲ್ಲದೇ ಇರುವುದು. ಇಲ್ಲಿ ಪಕ್ಷದ ನಾಯಕತ್ವ ಎಂಬುದು ವಂಶಪಾರಂಪರ್ಯವಾಗಿ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಹೊರತುಪಡಿಸಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಪ್ಪನ ನಂತರ ಮಗ ಅಥವಾ ಮಗಳು, ಸೊಸೆ, ಪತ್ನಿ, ಕುಟುಂಬ ಸದಸ್ಯರು ಹೀಗೆ ಮುಂದುವರಿಯುತ್ತಿದೆಯಾದರೂ ನಾಯಕತ್ವದ ವಿಚಾರ ಬಂದಾಗ ಕುಟುಂಬ ರಾಜಕಾರಣ ಅಷ್ಟೊಂದು ಪ್ರಬಲವಾಗಿಲ್ಲ.

ಆದರೆ, ಜೆಡಿಎಸ್‌ನಲ್ಲಿ ತಂದೆ ರಾಷ್ಟ್ರೀಯ ಅಧ್ಯಕ್ಷ, ಮಗ ರಾಜ್ಯಾಧ್ಯಕ್ಷ, ಮೊಮ್ಮಗ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಇದು ಪಕ್ಷದಲ್ಲೇ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದ್ದರೂ ತಂದೆ-ಮಕ್ಕಳಿಲ್ಲದೆ ಪಕ್ಷವೂ ಇಲ್ಲ ಎಂಬ ಪರಿಸ್ಥಿತಿ ಇದೆ. ಮೇಲಾಗಿ ಜೆಡಿಎಸ್ ಪ್ರಾದೇಶಿಕ ಪಕ್ಷ ವಾಗಿರುವುದರಿಂದ ಅದು ಅನಿವಾರ್ಯವೂ ಆಗಿದೆ. ಆದರೀಗ ರಾಜ್ಯ ಬಿಜೆಪಿಯಲ್ಲೂ ಕುಟುಂಬ ರಾಜಕಾರಣದ ಆರೋಪ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಯಡಿಯೂರಪ್ಪ ಅವರ ಕುಟುಂಬ. ಯಡಿಯೂರಪ್ಪ ಅವರನ್ನು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿರುವ ಪಕ್ಷ, ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ. ಜತೆಗೆ ಅವರು ಶಾಸಕರೂ ಆಗಿದ್ದಾರೆ. ಮತ್ತೊಬ್ಬ ಪುತ್ರ ಬಿ.ವೈ. ರಾಘವೇಂದ್ರ ಸಂಸದರಾಗಿ ದ್ದಾರೆ. ಈ ಬಾರಿ ಲೋಕ ಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಿರ್ಧಾರ ಕೈಗೊಂಡಿರುವುದು ವರಿಷ್ಠರೇ ಆದರೂ ಆ ನಿರ್ಧಾರದ ಹಿಂದೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಚಾರವೇ ಟಿಕೆಟ್ ವಂಚಿತರಿಗೆ ಸಿಟ್ಟು ತರಿಸಿರುವುದು. ಯಡಿಯೂರಪ್ಪ ಕುಟುಂಬ ಮತ್ತೆ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ ಎಂಬ ಆತಂಕ ಸೃಷ್ಟಿಸಿರುವುದು. ಆದರೆ, ಇದಕ್ಕೆ ಕಾರಣ ಈಗ ಯಡಿಯೂರಪ್ಪ ಮತ್ತು ಕುಟುಂಬದವರನ್ನು ಟೀಕಿಸುವವರೇ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.

೨೦೦೮ರಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ೨೦೧೧ರಲ್ಲಿ ಅಧಿಕಾರದಿಂದ ಕೆಳಗಿಳಿಸ ಲಾಯಿತು. ಮೊದಲು ಡಿ.ವಿ.ಸದಾನಂದಗೌಡ, ನಂತರ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತಾದರೂ ಅದರಿಂದ ಪಕ್ಷಕ್ಕೇನೂ ಅನುಕೂಲವಾಗಲಿಲ್ಲ. ಬಿಜೆಪಿ ವಿರುದ್ಧ ತಿರುಗಿಬಿದ್ದ ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪಿಸಿ ಚುನಾವಣೆ ಎದುರಿಸಿದಾಗ ಯಡಿಯೂರಪ್ಪ ಅವರ ಜತೆಗೆ ಬಿಜೆಪಿಯೂ ಹೀನಾಯವಾಗಿ ಸೋತಿತು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಸೇರಿದರು. ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನೂ ನೀಡಲಾಯಿತು. ಇದರ ಪರಿಣಾಮ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು. ಆದರೆ, ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಆಗ ಮತ್ತೆ ಆಪರೇಷನ್ ಕಮಲದ ಮೊರೆಹೋದ ಯಡಿಯೂರಪ್ಪ ಅವರು ಬಿಜೆಪಿ ಯನ್ನು ಮತ್ತೆ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದರು. ಎರಡು ವರ್ಷದ ಬಳಿಕ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಬೊಮ್ಮಾಯಿ ಕೂಡ ಎರಡು ವರ್ಷ ಮುಖ್ಯಮಂತ್ರಿಯಾಗಿದ್ದರು. ಈ ಮಧ್ಯೆ ೨೦೧೧ ಮತ್ತು ೨೦೨೧ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ
ಇಳಿಸಿದ ಬಳಿಕ ಬಿಜೆಪಿ ವರಿಷ್ಠರು ಪರ್ಯಾಯ ನಾಯಕತ್ವ ಸೃಷ್ಟಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಬೇಕಾದಷ್ಟು ಸಮಯಾವಕಾಶವಿದ್ದರೂ
ಯಾರೊಬ್ಬರೂ ಪರ್ಯಾಯ ನಾಯಕರಾಗಿ ಬೆಳೆಯಲೇ ಇಲ್ಲ. ಪರಸ್ಪರರ ಕಾಲೆಳೆಯುತ್ತಾ, ತಮ್ಮ ಸ್ವಾರ್ಥ ಸಾಧನೆಯಲ್ಲಿ ಕಾಲ ಕಳೆದರೇ ಹೊರತು
ಪಕ್ಷವನ್ನು ಬೆಳೆಸಿ ತಾವೂ ಬೆಳೆದು ನಾಯಕತ್ವ ವಹಿಸಿಕೊಳ್ಳುವ ಮಟ್ಟಕ್ಕೆ ಯಾರೂ ಬರಲಿಲ್ಲ. ಇದರ ಪರಿಣಾಮ ೨೦೨೩ರ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿ ಮತ್ತೆ ಸೋಲಬೇಕಾಯಿತು.

ನಂತರ ಸುಮಾರು ಆರು ತಿಂಗಳು ಮತ್ತೆ ವರಿಷ್ಠರು ಪರ್ಯಾಯವಾಗಿ ಯಾರಾದರೂ ಬೆಳೆಯುತ್ತಾರೆಯೇ? ಅಂಥ ವರ್ಚಸ್ಸು ಇರುವವರು ಯಾರಾದರೂ
ಇದ್ದಾರೆಯೇ ಎಂದು ಕಾದುನೋಡಿದರು. ಆದರೆ, ಯಾರೂ ಕಾಣಿಸದ ಕಾರಣ ಮತ್ತೆ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಮಣೆ ಹಾಕಬೇಕಾ ಯಿತು. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಿಸುವ ಮೊದಲು ಪಕ್ಷದ ವರಿಷ್ಠರು ಬೇರೆ ಹಲವರ ಬಗ್ಗೆ ಪ್ರಯತ್ನಿಸಿದ್ದರು. ಆದರೆ, ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರಿಲ್ಲದೆ ಅವರಾರೂ ಯಶಸ್ವಿಯಾಗುವ ಸಾಧ್ಯತೆ ಕಾಣಿಸಲಿಲ್ಲ. ಇದಕ್ಕೆ ಕಾರಣ ಬಿಜೆಪಿಯ ಇತರೆ ರಾಜ್ಯ ನಾಯಕರೇ ಹೊರತು ಯಡಿಯೂರಪ್ಪ ಅಲ್ಲ.

ಏಕೆಂದರೆ, ಯಡಿಯೂರಪ್ಪ ಅವರನ್ನು ಹೊರಗಿಟ್ಟು ಪಕ್ಷ ಸಂಘಟಿಸಲು, ಪರ್ಯಾಯ ನಾಯಕತ್ವ ರೂಪಿಸಲು ೨೦೧೪ರಿಂದಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸಾಕಷ್ಟು ಪ್ರಯತ್ನ ಮಾಡಿದ್ದರು. ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಸಿ.ಟಿ.ರವಿ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಮಹತ್ವದ ಹುದ್ದೆ ನೀಡಿದರು. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಈ ಅವಧಿಯಲ್ಲಿ ಯಡಿಯೂರಪ್ಪ ಅವರನ್ನು ಬದಿಗಿಟ್ಟು ಬೇರೆಯ ವರು ಬೆಳೆಯಲು ಅವಕಾಶ ಮಾಡಿಕೊಟ್ಟರು.

ಆದರೆ, ಅವರಾರೂ ರಾಜ್ಯದಲ್ಲಿ ಪಕ್ಷವನ್ನು ಸದೃಢಗೊಳಿಸುವಲ್ಲಿ ಯಶಸ್ಸು ಸಾಧಿಸಲೇ ಇಲ್ಲ. ಈಗ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯ ರನ್ನು ಟೀಕಿಸುವವರು ಈ ಎಲ್ಲಾ ಅವಕಾಶ ಗಳನ್ನು ಪಡೆದವರೇ ಆಗಿದ್ದಾರೆ. ಬಿಜೆಪಿಯನ್ನು ಯಡಿಯೂರಪ್ಪ ಅವರ ನೆರಳಿನಿಂದ ಹೊರತರಲು
ವರಿಷ್ಠರು ಮಾಡಿದ ಪ್ರಯತ್ನಗಳಿಗೆ, ಕೊಟ್ಟ ಅವಕಾಶ ಗಳಿಗೆ ಇವರಾರೂ ಸರಿಯಾಗಿ ಕೈಜೋಡಿಸಲೇ ಇಲ್ಲ. ಪಕ್ಷ ಎರಡು ಗುಂಪುಗಳಾಗಿ ಒಡೆದು, ಆಂತರಿಕವಾಗಿ ಇನ್ನಷ್ಟು ಸಮಸ್ಯೆಗೆ ಒಳಗಾಗಬೇಕಾಯಿತೇ ಹೊರತು ಗಟ್ಟಿಯಾಗಲಿಲ್ಲ. ಒಂದೊಮ್ಮೆ ವರಿಷ್ಠರು ಮಾಡಿದ ಪ್ರಯತ್ನಗಳಿಗೆ ಈಗ ಯಡಿ ಯೂರಪ್ಪ ಮತ್ತು ಕುಟುಂಬದವರನ್ನು ಟೀಕಿಸುವವರು ಸರಿಯಾಗಿ ಸಾಥ್ ನೀಡಿದ್ದರೆ ಆ ಪರಿಸ್ಥಿತಿಯೂ ಬರುತ್ತಿರಲಿಲ್ಲ.

ಈಗ ಜಾತಿ ಹೆಸರಿನಲ್ಲಿ ಅವರ ವಿರುದ್ಧ ಆರೋಪ ಮಾಡಿದ ಜಾತಿಯ ಮುಖಂಡರಿಗೂ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಅವರೂ ಗುರಿ
ಸಾಧಿಸುವಲ್ಲಿ ವಿಫಲರಾದರು. ರಾಜ್ಯದಲ್ಲಿ ರಾಜಕೀಯವಾಗಿ ಬಲಾಢ್ಯವಾಗಿರುವ ಜಾತಿಗಳೆಂದರೆ ಲಿಂಗಾಯತರು ಮತ್ತು ಒಕ್ಕಲಿಗರು. ಯಡಿಯೂ
ರಪ್ಪ ಅವರ ನಂತರ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾಗಿದ್ದು ಈ ಎರಡು ಜಾತಿಯವರು ಮಾತ್ರ. ಆದರೆ, ಅವರಾರೂ ಸಮುದಾಯದ ನಾಯಕರಾಗಿ
ಹೊರಹೊಮ್ಮಲೇ ಇಲ್ಲ. ಹೀಗಾಗಿ ಅಧಿಕಾರದ ರಾಜಕಾರಣದಲ್ಲಿ ಪಕ್ಷ ಗೆಲ್ಲಿಸುವವರಿಗೆ ಅವಕಾಶ ಕಲ್ಪಿಸುವುದು ವರಿಷ್ಠರಿಗೂ ಅನಿವಾರ್ಯವಾಗಿತ್ತು.
ಆಗ ಅವರ ಮುಂದೆ ಯಡಿಯೂರಪ್ಪ ಮತ್ತು ಕುಟುಂಬವನ್ನು ಹೊರತುಪಡಿಸಿ ಬೇರೆ ಆಯ್ಕೆಗಳು ಇರಲಿಲ್ಲ. ಇದರ ಪರಿಣಾಮ ಯಡಿಯೂರಪ್ಪ
ಅವರ ಪುತ್ರನಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕಾಯಿತು. ರಾಜ್ಯ ಬಿಜೆಪಿಯು ಕುಟುಂಬ ರಾಜಕಾರಣದ ಸುತ್ತ ಗಿರಕಿ ಹೊಡೆಯಲೇಬೇಕಾದ
ಪರಿಸ್ಥಿತಿ ನಿರ್ಮಾಣವಾಯಿತು.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡು ಕುಟುಂಬ ರಾಜಕಾರಣದ ಟೀಕೆ ಮಾಡುತ್ತಾ, ಪಕ್ಷ ವನ್ನು ಶುದ್ಧೀಕರಿಸುವ, ಕುಟುಂಬ ರಾಜಕಾರಣದಿಂದ ಅದನ್ನು ಹೊರತರುವ ಹೇಳಿಕೆಗಳನ್ನು ನೀಡುತ್ತಿರುವ ನಾಯಕರು ಈ ಬಗ್ಗೆ ಯೋಚಿಸಬೇಕು. ಯಡಿಯೂರಪ್ಪ ಮತ್ತು ಅವರ ಕುಟುಂಬದವರನ್ನು ಹೊರಗಿಟ್ಟು ಬಿಜೆಪಿಯನ್ನು ಗಟ್ಟಿಯಾಗಿ ನೆಲೆಯೂರಿಸಿ ಅಽಕಾರಕ್ಕೆ ತರಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ನಡೆಸಬೇಕು ಮತ್ತು ಅದು ತಮ್ಮಿಂದ ಸಾಧ್ಯವೇ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ರಾಜ್ಯ ಬಿಜೆಪಿ ಯನ್ನು ಕುಟುಂಬ ರಾಜಕಾರಣದಿಂದ ಹೊರ ತರಲು ಸಾಧ್ಯ.

ಲಾಸ್ಟ್ ಸಿಪ್: ತಮಗೆ, ತಮ್ಮ ಕುಟುಂಬದವರಿಗೆ ಅವಕಾಶ ಸಿಕ್ಕಿಲ್ಲ ಎನ್ನುವವರಿಗೆ ಮಾತ್ರ ಇತರರು ಕುಟುಂಬ ರಾಜಕಾರಣ ಮಾಡುತ್ತಿರುವುದು
ಕಾಣಿಸುತ್ತದೆ.

Leave a Reply

Your email address will not be published. Required fields are marked *

error: Content is protected !!