Saturday, 7th September 2024

ಪಾಪ ಹೆಂಗ್ ಬದುಕ್ತಾರೋ ಆ ಬಡಪಾಯಿ ಜನ !

ಶಶಾಂಕಣ

shashidhara.halady@gmail.com

ಕನ್ನಡದ ವ್ಲೋಗಿಂಗ್ ಅಥವಾ ಬ್ಲಾಗಿಂಗ್ ಪ್ರಪಂಚ ಬೇರೊಂದು ಮಜಲನ್ನು ತಲುಪಿದೆ. ಮೂವತ್ತು ನಿಮಿಷದ ಇದೊಂದು ವಿಡಿಯೋವನ್ನು ನೋಡಿ ದವರು ವಿಸ್ಮಯ, ಬೆರಗು, ಅದ್ಭುತ, ತುಸು ಭಯ ಹುಟ್ಟಿಸುವ ಲೋಕವನ್ನು ಪ್ರವೇಶಿಸಿ ಬಂದಂತೆ ಆಗುತ್ತದೆ; ಸರಳ, ಸುಂದರ ಕನ್ನಡದಲ್ಲಿ ವಿವರಣೆ ಇರುವ, ಯುಟ್ಯೂಬ್‌ನಲ್ಲಿ ಉಚಿತವಾಗಿ ನೋಡಲು ಸಿಗುವ ಆ ವಿಡಿಯೋವನ್ನು ನೀವು ಒಮ್ಮೆ ನೋಡಿ, ಇದುವರೆಗೆ ಕಂಡು ಕೇಳರಿಯದ ದೇಶವೊಂದರ ಪರಿಚಯವಾಗುವುದರ ಜತೆಯಲ್ಲೇ, ಬೆರಗಿನ ಅನುಭವವನ್ನು ಪಡೆಯದಿದ್ದರೆ ಹೇಳಿ! ಅದನ್ನು ನೋಡಿದ ಒಬ್ಬರು ಹಾಕಿದ ಕವೆಂಟ್ ‘ಅವತಾರ್ ಸಿನಿಮಾದ ಮೂರನೆಯ ಭಾಗವನ್ನು ನೋಡಿದಂತಾಯಿತು!’

ಇದನ್ನು ತಯಾರಿಸಿ, ಯುಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿದವರು ಡಾ. ಬ್ರೊ ಯುಟ್ಯೂಬ್ ಚಾನೆಲ್ ನಡೆಸುತ್ತಿರುವ ಬೆಂಗಳೂರಿನ ಗಗನ್. ಅವರು ಈಗ ಭೇಟಿ ಕೊಟ್ಟಿರುವ ಪ್ರಾಂತ್ಯ ‘ವೆಸ್ಟ್ ಪಪುವಾ’. ಇಂಡೋನೇಷ್ಯಾ ದೇಶದ ಒಂದು ರಾಜ್ಯ; ಹಿಂದೆ ಇದನ್ನು ‘ಪಪುವಾ ಬಾರತ್’ ಅಥವಾ ‘ಇರಿಯನ್ ಜಯ ಬಾರತ್’ಎಂದೂ ಕರೆಯುತ್ತಿದ್ದರು.

ಗಗನ್ ಅವರ ವಿಡಿಯೋ ಆರಂಭವಾಗುವುದು ವೆಸ್ಟ್ ಪಪುವಾಕ್ಕೆ ಹೋಗುವ ಪಯಣದ ಮೂಲಕ. ಇಂಡೋನೇಷ್ಯಾದ ಈ ಭಾಗಗಳೆಲ್ಲಾ ಅವೆಷ್ಟು ಹಿಂದುಳಿದಿವೆ ಎಂದರೆ, ಅಲ್ಲಿನ ಎಷ್ಟೋ ಪ್ರದೇಶಗಳಿಗೆ ರಸ್ತೆ ಸಂಪರ್ಕ ಸರಿಯಾಗಿಲ್ಲ. ಅವೆಷ್ಟೋ ಹಳ್ಳಿಗಳಿಗೆ ದೋಣಿಗಳ ಮೂಲಕ ಮಾತ್ರ ತಲುಪಬಹುದು. ಒಂದು ಪುಟ್ಟ ದೋಣಿಯಲ್ಲಿ ಕುಳಿತ ಗಗನ್ ಮತ್ತು ಸ್ಥಳೀಯ ನಾಲ್ಕಾರು ಯುವಕರು, ನದಿಯೊಂದರಲ್ಲಿ ಸಾಗುತ್ತಾರೆ. ಸುಮಾರು ಎರಡು ಗಂಟೆಯ ಪಯಣ. ಮೋಟಾರ್ ಬೋಟ್ ಆಗಿದ್ದರೂ, ನಾಲ್ಕಾರು ಬಾರಿ ನಡು ನಡುವೆ ಆಫ್ ಆಗುತ್ತದೆ.

ಪ್ರತಿ ಬಾರಿ ಬೋಟ್ ಆಫ್ ಆದಾಗಲೂ, ಗಗನ್‌ಗೆ ಭಯ, ದಿಗಿಲು. ‘ಇಲ್ಲೇ ನಿಂತುಬಿಟ್ಟರೆ, ಮುಂದಿನ ದಾರಿ ಏನು?’ ಎಂಬ ಗಾಬರಿ. ಏಕೆಂದರೆ
ಸುತ್ತಲೂ ನದಿ ನೀರು, ದಡದಲ್ಲಿ ಮರ ಗಿಡಗಳು, ರೈನ್ ಫಾರೆಸ್ಟ್. ವಿಸ್ತೀರ್ಣದಲ್ಲಿ ಅಮೆಜಾನ್ ಕಾಡಿನ ನಂತರ, ಜಗತ್ತಿನ ಎರಡನೆಯ ಅತಿ ದೊಡ್ಡ ರೈನ್ ಫಾರೆಸ್ಟ್ ಇದು. ಪುಟಾಣಿ ದೋಣಿಯಲ್ಲಿ ಕುಳಿತು, ಒಂದು ಕೈಯಲ್ಲಿ ಕ್ಯಾಮೆರಾ ಸ್ಟಿಕ್ ಹಿಡಿದು, ಅರಳು ಹುರಿದಂತೆ, ಪಟ ಪಟನೆ ಮಾತನಾಡುವ ಗಗನ್ ಅವರ ಸರಳ ಕನ್ನಡದ ವ್ಯಾಖ್ಯಾನವನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ. ಅವರು ಮಾತನಾಡುವ ಶೈಲಿಗೆ, ಸಂದರ್ಭಕ್ಕೆ ಸರಿಯಾಗಿ ನೀಡುವ ವಿವರಣೆಗೆ, ಮಧ್ಯೆ ಮಧ್ಯೆ ಸಹಜವಾಗಿ ಹೇಳುವ ಕೆಲವು ಹಾಸ್ಯದ ವಾಕ್ಯಗಳಿಗೆ, ನಮ್ಮ ನಿಮ್ಮ ಮಧ್ಯೆ ಕುಳಿತು ಪಟ್ಟಾಂಗ ಹೊಡೆಯು ತ್ತಿರುವರೇನೋ ಎಂಬಂತೆ ನೀಡುವ ನಿರಂತರ ಕಮೆಂಟರಿಗೆ ಮಾರುಹೋದವರು ಲಕ್ಷ ಲಕ್ಷ ಜನ!

ನಿಜ, ಅವರ ಯುಟ್ಯೂಬ್ ಚಾನೆಲ್‌ಗೆ ಹದಿಮೂರು ಲಕ್ಷಕ್ಕಿಂತ ಹೆಚ್ಚು ಜನ ಫಾಲೋವರ್ಸ್ ಇದ್ದಾರೆ. ವೆಸ್ಟ್ ಪಪುವಾದ ಆದಿವಾಸಿಗಳ ಕುರಿತ ಈ ವಿಡಿಯೋ ಅಪ್‌ಲೋಡ್ ಮಾಡಿದ ಒಂದು ಗಂಟೆಯಲ್ಲಿ, ಸುಮಾರು 33000 ಜನ ನೋಡಿದ್ದರು! ‘ಮನುಷ್ಯನನ್ನು ಕೊಂದು ತಿನ್ನೋ ಜನಗಳ ಜತೆ ಮುಖಾಮುಖಿ’ ಎಂಬ ಹೆಸರಿನ ಆ ವಿಡಿಯೋ ಅಪ್‌ಲೋಡ್ ಆಗಿ ಎರಡೇ ದಿನಗಳಲ್ಲಿ, ಸುಮಾರು 10 ಲಕ್ಷ ಜನ ವ್ಯೂ ಆಗಿದೆ. ಅಂದರೆ, ಒಂದು ನಿಮಿಷದಲ್ಲಿ ಎಷ್ಟು ಜನ ನೋಡಿರಬಹುದು ನೀವು ಲೆಕ್ಕ ಹಾಕಿ. ಗಗನ್ ಅವರ ಮಾತಿಗೆ, ವಿಡಿಯೋಗಳಿಗೆ ಜನಸಾಮಾನ್ಯರು ಫಿದಾ ಆಗಿದ್ದಾರೆ ಎಂದೇ ಹೇಳಬಹುದು.

ವೆಸ್ಟ್ ಪಪುವಾ ಎಂಬ ಆ ಬೃಹತ್ ಅರಣ್ಯಕದ ಕಥನವನ್ನು ಮುಂದುವರಿಸುತ್ತಾ, ಅವರ ಆ ದೋಣಿ ಪಯಣವೇ ಒಂದು ರೋಚಕ ಹಾದಿ ಎನ್ನಬಹುದು.
ಅಡ್ಡಲಾಗಿ ಬಿದ್ದಿರುವ ಮರಗಳ ಅಡಿಯಲ್ಲಿ ಸಾಗುವ ದೋಣಿ. ಆ ಸಂದರ್ಭದಲ್ಲಿ ತಲೆ ಬಗ್ಗಿಸಿಕೊಳ್ಳಬೇಕು, ಇಲ್ಲವಾದರೆ, ಮೇಲ್ಭಾಗದಲ್ಲಿ ಅಡ್ಡಲಾಗಿ ಬಿದ್ದಿರುವ ಮರಕ್ಕೆ ತಲೆ ತಗುಲಿ ಅಪಘಾತವಾದೀತು! ಪುಟ್ಟ ಉಪನದಿಯಲ್ಲಿ ಕೆಳಗೆಲ್ಲಾ ಕೆಂಪನೆಯ ನೀರು; ಅದರಲ್ಲಿ ಮುಳುಗಿರುವ ಹಲವು ಒಣ ಮರಗಳು.

ಆಗ ದೋಣಿಯ ಪ್ರೊಪೆಲ್ಲರ್ ಅದಕ್ಕೆ ತಗುಲಿದಾಗ, ದೋಣಿ ಆಫ್ ಆಗುತ್ತದೆ! ಅದು ಪುನಃ ಸ್ಟಾರ್ಟ್ ಆಗುವ ತನಕ ಗಗನ್‌ಗೆ ದಿಗಿಲು. ಎರಡು ಗಂಟೆಯ ಪಯಣದ ನಂತರ, ದೋಣಿ ನಿಲ್ಲುತ್ತದೆ. ಅಲ್ಲೇ ನಾಲ್ಕಾರು ಮಕ್ಕಳು ನೀರಿನಲ್ಲಿ ಈಜುತ್ತಿರುತ್ತಾರೆ. ಸುತ್ತಲೂ ಗಿಡ ಗಂಟಿ ತುಂಬಿದ ಆ
ನೀರಿನಲ್ಲಿ ಆ ಮಕ್ಕಳು ಆಡುವ ಪರಿಯೇ ಅಚ್ಚರಿ. ನಿಜವಾದ ಕಾಡಿನ ಮಕ್ಕಳು ಅವರು. ದೋಣಿ ಇಳಿದ ತಕ್ಷಣ ಒಂದು ಹಳ್ಳ, ಅದನ್ನು ದಾಟಲು ಒಂದು
ಮರದ ಸಂಕ. ಎದುರಿನಲ್ಲಿತ್ತು ಇವರು ನೋಡಲು ಬಂದಿರುವ ಆದಿವಾಸಿ ಜನರ ‘ಮರದ ಮನೆ’.

ವೆಸ್ಟ್ ಪಪುವಾದ ‘ಕೊರಬ್ರಜಾ’ ತಾಲೂಕಾದ ‘ಕುಂಪುಂಗ್ ಬುಮ’ ಎಂಬ ಪ್ರದೇಶದ ದಟ್ಟ ಕಾಡಿನ ನಡುವೆ ವಾಸಿಸುತ್ತಿರುವ ‘ಕೊರವೇ’ ಬುಡಕಟ್ಟು
ಜನರನ್ನು ನೋಡುವುದು ಗಗನ್ ಅವರ ಆ ದಿನದ ಕಾರ್ಯಕ್ರಮ. 1970ರ ತನಕ ಈ ಆದಿವಾಸಿ ಜನರು ಹೊರಗಿನ ಪ್ರಪಂಚದ ಸಂಪರ್ಕ ಇಲ್ಲದೇ ಜೀವನ ಸಾಗಿಸುತ್ತಿದ್ದರು; ಅಲ್ಲಿ ಹಲವು ಬುಡಕಟ್ಟು ಜನರಿದ್ದಾರೆ; ಅವರೆಲ್ಲರಿಗೂ ಹೊರಗಿನ ಪ್ರಪಂಚದ ಸಂಪರ್ಕ ಅಷ್ಟಕ್ಕಷ್ಟೇ. ತಮ್ಮ ತಮ್ಮ ಜಾಗವನ್ನು ಗುರುತಿಸಿಕೊಂಡು, ಅದನ್ನು ರಕ್ಷಿಸಿಕೊಂಡು, ಶಿಲಾಯುಗದ ಜೀವನ ಕ್ರಮವನ್ನು ಅನುಸರಿಸುತ್ತಿದ್ದರು.

ಅತಿಕ್ರಮಣ ಮಾಡುವ ಇತರ ಬುಡಕಟ್ಟು ಜನರನ್ನು ಸಾಯಿಸಿ, ಅವರನ್ನು ತಿನ್ನುವ ಪರಿಪಾಠವೂ ಇತ್ತು, ಆದರೆ ಈಚಿನ ನಲವತ್ತು ವರ್ಷಗಳಲ್ಲಿ ಆ ಪರಿಪಾಠ ನಿಂತುಹೋಗಿದೆ ಎಂದು ಗಗನ್ ವ್ಯಾಖ್ಯಾನ ನೀಡುತ್ತಾರೆ. ಪಶ್ಚಿಮ ಪಪುವಾದ ‘ಕೊರವೇ’ ಬುಡಕಟ್ಟು ಜನರು ನಿಗ್ರಿಟೋಗಳು; ಗಗನ್ ಅವರ ವಿಡಿಯೋದಲ್ಲಿ ಕಂಡಂತೆ, ದಕ್ಷಿಣ ಕನ್ನಡದ ಕೊರಗ ಜನಾಂಗದ ಮೈ ಲಕ್ಷಣವನ್ನು ಹೋಲುತ್ತಿದ್ದಾರೆ. ಬಹು ಹಿಂದೆ, ಆಫ್ರಿಕಾದಿಂದ ಹೊರಟು ಬಂದ ಜನರ ಪೀಳಿಗೆ ಇವರು ಇರಬಹುದು. ಡಾ.ಬ್ರೊ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ದಲ್ಲಿ ಗಗನ್ ಭೇಟಿಯಾದ ಬುಡಕಟ್ಟು ಜನರ
ಹಿರಿಯ ತಲೆಮಾರು, ಯಾವುದೇ ಬಟ್ಟೆ ಧರಿಸದೇ, ಸೊಪ್ಪು ಮತ್ತು ಬಾಳೆ ಎಲೆಯಿಂದ ತಮ್ಮ ದೇಹದ ಕೆಲವು ಭಾಗಗಳನ್ನು ಮುಚ್ಚಿಕೊಂಡಿದ್ದರು.

ಅದೇ ಬುಡಕಟ್ಟಿನ ಕಿರಿಯರು ಟಿ.ಶರ್ಟ್ ಮತ್ತು ಚಡ್ಡಿ ಧರಿಸಿದ್ದರು. ಮರಗಳನ್ನು ಬಳಸಿ, ಮರದ ಮೇಲೆ ಮನೆಯನ್ನು ಕಟ್ಟಿಕೊಂಡು, ಅಲ್ಲೇ ವಾಸವಿದ್ದರು. ನೆಲಮಟ್ಟದಿಂದ ಸುಮಾರು ಮೂವತ್ತು ಅಡಿ ಎತ್ತರದ ಆ ಮರದ ಮನೆಯ ಒಳಗೆ ಹೋಗಲು, ಮರದ ಕಾಂಡಗಳಿಂದ ಮಾಡಿದ ಮೆಟ್ಟಿಲು. ಆ ಮರದ ಮನೆಯು, ಆ ಬುಡಕಟ್ಟು ಜನರಿಗೆ ಪ್ರಮುಖ ಕಟ್ಟಡ ಇರಬಹುದು; ಏಕೆಂದರೆ, ಆ ದೊಡ್ಡ ಗಾತ್ರದ ಮರದ ಮನೆಯಿಂದ ತುಸು ದೂರದಲ್ಲಿ ನಾಲ್ಕಾರು ಪುಟಾಣಿ ಗುಡಿಸಲುಗಳು ಕಾಣಿಸುತ್ತವೆ- ಗಗನ್ ಶೂಟ್ ಮಾಡಿದ ಡ್ರೋನ್ ದೃಶ್ಯದಲ್ಲಿ.

ಮಾರ್ಗದರ್ಶಿಯ ಸಹಾಯದಿಂದ ಗಗನ್ ಆ ಆದಿವಾಸಿ ಜನರೊಂದಿಗೆ ಮಾತನಾಡುತ್ತಾರೆ. ಅವುಗಳ ನಡುವೆ ಕನ್ನಡವನ್ನೂ ಮಾತನಾಡಿ,
ಗೆಣಸು ಎಂಬ ಪದವನ್ನು ಅವರಿಗೆ ಕಲಿಸುವ ಪರಿ ವಿಸ್ಮಯ ಮೂಡಿಸುತ್ತದೆ. ಇದಕ್ಕೂ ಮೊದಲು, ಅವರು ಆಹಾರ ಸಂಗ್ರಹಿಸುವ ಪರಿಯ ದೃಶ್ಯ
ಬರುತ್ತದೆ. ನಮ್ಮ ಪಶ್ಚಿಮ ಘಟ್ಟಗಳ ಕಾಡಿನಲ್ಲಿರುವ ಬಗನಿ ಮರವನ್ನು ಹೋಲುವ ಮರವೊಂದನ್ನು ಕಡಿದಾಗ ದೊರೆಯುವ ಲಾರ್ವಾಗಳು ಆ ಬುಡಕಟ್ಟು ಜನರ ರುಚಿಕರ ಆಹಾರ. ಹಳೆಯ ಮರವೊಂದನ್ನು ನಾಲ್ಕಾರು ಮಂದಿ ಬಗೆದು, ಲಾರ್ವಾಗಳನ್ನು ಸಂಗ್ರಹಿಸಿ, ಆ ನಂತರ, ಎಲೆಯೊಂದ ರಲ್ಲಿಟ್ಟು ಬೆಂಕಿಯಿಂದ ಬೇಯಿಸಿ ತಿನ್ನುವ ದೃಶ್ಯವಿದೆ.

ಜೀರುಂಡೆಯ ಲಾರ್ವಾಗಳು ಅವು. ಅವುಗಳನ್ನು ಹಸಿಯಾಗಿಯೂ ಆ ಜನ ಸೇವಿಸುವ ದೃಶ್ಯವು ಗಗನ್ ಅವರ ವಿಡಿಯೋದಲ್ಲಿ ಸೆರೆಯಾಗಿದೆ! ಜತೆಗೆ, ಅದೇ ಮರದ ಕಾಂಡದ ತಿರುಳಿನ ಭಾಗದಲ್ಲಿರುವ ಬಿಳಿ ಭಾಗವನ್ನು ಸಹ ಆಹಾರವಾಗಿ ಸೇವಿಸುತ್ತಾರೆ. ಡಾ. ಬ್ರೊಅವರ ಈ ವಿಡಿಯೋದ ವಿಸ್ಮಯಕಾರಿ ದೃಶ್ಯವೆಂದರೆ, ಆ ಗಿಡದ ಕಾಂಡವನ್ನು ಗಗನ್ ತಿಂದು ಚಪ್ಪರಿಸುವುದು: ‘ಆಪಲ್ ಹಣ್ಣಿನ ರುಚಿ ಇದೆ’ ಎಂಬ ಉದ್ಗಾರ ಬೇರೆ. ರಸ್ತೆ ಇಲ್ಲದ ಆ ದೂರದ ಊರಿನಲ್ಲಿ ಇಂತಹ ಹೊಸ ಆಹಾರವನ್ನು ಸೇವಿಸಿ, ಹೊಟ್ಟೆ ಕಟ್ಟರೆ, ಆ ಮಹಾರಾಯನಿಗೆ ಔಷಧ ಸಿಗುವುದಾದರೂ ಎಲ್ಲಿ? ಮರದೊಳಗಿನ ತಿರುಳನ್ನು ತಿನ್ನುವ ಪದ್ಧತಿ ಬೇರೆ ಬೇರೆ ಕಡೆಗಳಲ್ಲೂ ಇದೆ.

ನಮ್ಮ  ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಬಗನಿ ಮರದ ಕಾಂಡವನ್ನು ಬಗೆದಾಗಲೂ, ಬಿಳಿ ಹುಡಿ ಸಿಗುತ್ತದೆ, ಅದನ್ನು ಮಳೆಗಾಲದಲ್ಲಿ, ಸ್ಥಳೀಯರು ಆಹಾರವಾಗಿ ಸೇವಿಸುತ್ತಿದ್ದರು. ಈ ಹೋಲಿಕೆ ಹೇಗೆ? ಇದು ಅಧ್ಯಯನಯೋಗ್ಯ ವಿಷಯ. ಕಾಡುಗಿಡಗಳ ಸಂದಿಯಲ್ಲಿ ಸಿಗುವ ಗಡ್ಡೆ ಗೆಣಸುಗಳನ್ನು ಸಹ ಆ ಜನರು ಸಂಗ್ರಹಿಸಿದರು. ಆದಿವಾಸಿಗಳು ನಿರ್ಮಿಸಿರುವ ಮರದ ಮನೆಯ ಮಧ್ಯದಲ್ಲಿ ನಾಲ್ಕಾರು ಜನರು ಬೆಂಕಿಯನ್ನು ಉರಿಸಿ, ಏನನ್ನೋ ಮಾಡುತ್ತಿರುವುದು ಕಂಡುಬಂದರೂ, ಅದರ ವಿವರ ಗಗನ್‌ಗೂ ಗೊತ್ತಾಗಲಿಲ್ಲ.

ಲಾರ್ವಾವನ್ನು ಬೇಯಿಸುವುದು, ಗೆಣಸನ್ನು ಬೇಯಿಸುವುದು ಅದೇ ಜಾಗದಲ್ಲಿ. ಈ ಆದಿವಾಸಿಗಳು ಬೇಟೆಯಲ್ಲೂ ಪ್ರವೀಣರು. ಬಿಲ್ಲು ಬಾಣಗಳನ್ನು ಹಿಡಿದು, ನಿಖರವಾಗಿ ಬಾಣ ಬಿಡುತ್ತಾರೆ! ಆ ದುರ್ಗಮ ಕಾಡಿನ ನಡುವೆ, ಅಲ್ಲಲ್ಲಿ ತುಸು ಜಾಗವನ್ನು ಸವರಿ ಮಾಡಿದ ಪ್ರದೇಶದಲ್ಲಿ ಮರದ
ಮನೆಗಳನ್ನು ಕಟ್ಟಿಕೊಂಡು, ನಾಗರಿಕ ಜಗತ್ತಿನ ಸಂಪರ್ಕವೇ ಇಲ್ಲದೆ ಜೀವಿಸುವ ಆ ಆದಿವಾಸಿ ಜನರನ್ನು ಕಂಡು, ಅವರ ವಿಡಿಯೋವನ್ನು ಸೆರೆಹಿಡಿದು, ಅದಕ್ಕೆ ಕನ್ನಡದಲ್ಲೇ ಚೊಕ್ಕವಾದ ವಿವರಣೆ ನೀಡಿದ ಗಗನ್ ಅವರ ಕಾರ್ಯವನ್ನು ಸಾಹಸ ಎಂದೇ ಹೇಳಬಹುದು.

ಇದುವರೆಗೆ ಗಗನ್ ಅವರು ನೂರಕ್ಕೂ ಹೆಚ್ಚು ವಿಡಿಯೋ ಮಾಡಿದ್ದರೂ, ಮೊನ್ನೆ ಅಪ್ ಲೋಡ್ ಮಾಡಿದ, ವೆಸ್ಟ್ ಪಪುವಾ ಕಾಡಿನ ನಡುವಿನ
‘ಕೊರವೇ ಟ್ರೈಬ್’ ಕುರಿತಾದ ಈ ವಿಡಿಯೋದ ಮೂಲಕ, ಮೇಲಿನ ಮಜಲನ್ನು ತಲುಪಿದ್ದಾರೆ. ಇದುವರೆಗೆ ರಾಜ್ಯ ಮಟ್ಟದಲ್ಲಿದ್ದ ಇವರ ವ್ಲೋಗ್
ಗಳು, ಈ ವಿಡಿಯೋ ಮೂಲಕ ಅಂತಾರಾಷ್ಟ್ರೀಯ ಮಟ್ಟವನ್ನು ಮುಟ್ಟಿವೆ ಎಂದು ಸುಲಭವಾಗಿ ಹೇಳಬಹುದು. ವಿಶ್ವದ ಖ್ಯಾತ ವ್ಲೋಗರ್‌ಗಳ ವಿಡಿಯೋದ ಗುಣಮಟ್ಟದಲ್ಲಿರುವ ಇಲ್ಲಿನ ದೃಶ್ಯಗಳು, ಅದಕ್ಕಿಂತ ಮಿಗಿಲಾಗಿ ಗಗನ್ ನೀಡಿರುವ ವ್ಯಾಖ್ಯಾನಗಳು, ಸರಳವಾಗಿ ಹೇಳಬೇಕೆಂದರೆ, ಅದ್ಭುತ!

ಇಂಡೋನೇಷ್ಯಾದ ಆ ದೂರದ್ವೀಪದಲ್ಲಿರುವ ನಿಗ್ರಿಟೋ ಜನರ ಶಿಲಾಯುಗದ ಜೀವನಕ್ರಮವನ್ನು ಗಗನ್ ಅವರ ವಿಡಿಯೋದಲ್ಲಿ ನೋಡಿದಾಗ,
ನನಗೆ ನೆನಪಾಗಿದ್ದು, ‘ಕಾಲಾತೀತರ ದ್ವೀಪಗಳಲ್ಲಿ’ ಪುಸ್ತಕ. ದೇನಾಶ್ರೀ ಎಂಬ ಸಾಹಸಿ ಚಾರಣಿಗರು 1980ರ ದಶಕದಲ್ಲಿ ಬರೆದ ಆ ಪುಸ್ತಕದಲ್ಲಿ,
ಅಂಡಮಾನ್ ಸಾಹಸ ಯಾತ್ರೆಯ ವಿವರಗಳಿವೆ; ಒಂದು ದಿನ ಲೇಖಕ ದೇನಾಶ್ರೀಯವರು ಏಕಾಂಗಿಯಾಗಿ ಜಾರವಾ ಬುಡಕಟ್ಟು ಜನರಿರುವ
ದ್ವೀಪಕ್ಕೆ ಹೋಗುತ್ತಾರೆ; ಅಲ್ಲಿನ ಕಾಡಿನಲ್ಲಿ, ಟುನಿರು ಎಂಬ ಜಾರವಾ ಯುವತಿಯೊಂದಿಗೆ ಸನ್ನೆಯ ಭಾಷೆಯಲ್ಲೇ ಗೆಳೆತನ ಬೆಳೆಸುತ್ತಾರೆ; ಜಾರವಾ ಹಳ್ಳಿಯನ್ನು ನೋಡಿ, ಅವರೊಂದಿಗೆ ಸನ್ನೆ ಭಾಷೆಯಲ್ಲೇ ಮಾತನಾಡಿ ವಾಪಸಾಗುತ್ತಾರೆ. ಅದೊಂದು ಅಪಾಯಕಾರಿ ಸಾಹಸವಾಗಿತ್ತು. ಅಂತಹದ್ದೇ ಒಂದಜ ಸಾಹಸವನ್ನು ಗಗನ್ ೨೧ನೆಯ ಶತಮಾನದಲ್ಲಿ ಮಾಡಿದ್ದಾರೆ!

ಹಿಂದೆ ಫೀಚರ್ ಬರಹಗಳು, ಪ್ರವಾಸ ಕಥನಗಳು ಮಾಡುತ್ತಿದ್ದ ಕೆಲಸವನ್ನು ಇಂದು ಡಾ. ಬ್ರೊ ಅಂತಹ ಚಾನೆಲ್‌ಗಳು ಮಾಡುತ್ತಿವೆ; ಗಗನ್ ಮತ್ತು ಇತರ ಸಾಹಸಿಗರು ತಮ್ಮ ಅನುಭವಗಳನ್ನು ವಿಡಿಯೋದಲ್ಲಿ ದಾಖಲಿಸಿ, ಯಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ; ಅವುಗಳನ್ನು ಲಕ್ಷಾಂತರ ಜನರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಮಾಧ್ಯಮ ಇನ್ನಷ್ಟು ಜನಪ್ರಿಯವಾಗಲಿದೆ. ಗಗನ್ ಅವರ ಡಾ. ಬ್ರೊ ಚಾನೆಲ್, ಅದೆಷ್ಟೋ ಕನ್ನಡಿಗರ ಜ್ಞಾನದಾಹ ತಣಿಸುತ್ತಿದೆ, ಮನರಂಜನೆ ನೀಡುತ್ತಿದೆ, ಹೊಸ ಜಾಗಗಳನ್ನು ಪರಿಚಯಿಸುತ್ತಿದೆ.

ಜತೆಗೆ ಅವರ ವಿಡಿಯೋಗಳಲ್ಲಿ ಮಾನವೀಯತೆ ಇದೆ, ಸರಳತೆ ಇದೆ, ಚುರುಕುತನವಿದೆ. ಕುಂಪುಂಗ್ ಬುದು ಎಂಬಲ್ಲಿಗೆ ಹೋದಾಗ, ಅಲ್ಲಿ ಅವರಿಗೆ
ತಂಗಲು ಆಶ್ರಯ ನೀಡಿದ ಪುಟಾಣಿ ಚರ್ಚ್‌ನ ಉಪಕಾರವನ್ನು ಗಗನ್ ಸ್ಮರಿಸಿದ್ದಾರೆ. ಬುಡಕಟ್ಟು ಜನರ ಕಷ್ಟವನ್ನು ನೋಡಿ, ಮಾತಿನ ಮಧ್ಯೆ ಅವರ
ಉದ್ಗಾರ “ಪಾಪ ಹೆಂಗ್ ಬದುಕ್ತಾರೋ ಈ ಬಡ ಜನ!’ ಗಗನ್ ಅಲ್ಲಲ್ಲಿ ವ್ಯಕ್ತಪಡಿಸುವ ಇಂತಹ ಸಾಮಾಜಿಕ ಕಳಕಳಿಯಿಂದಾಗಿಯೇ, ಡಾ. ಬ್ರೊ
ಚಾನೆಲ್ ನಮಗೆ ಆಪ್ತ ಎನಿಸುತ್ತದೆ. ಗಗನ್ ಅವರು ಇನ್ನಷ್ಟು ಎತ್ತರಕ್ಕೆ ಏರುವ ದಿನ ದೂರವಿಲ್ಲ. ಶುಭವಾಗಲಿ.

error: Content is protected !!