Sunday, 16th June 2024

ಸಮಸ್ಯೆಗಳ ಮೂಲವೇ ಜನಸಂಖ್ಯೆ

ವೀಕೆಂಡ್ ವಿತ್ ಮೋಹನ್

camohanbn@gmail.com

ದೇಶವನ್ನು ನಡೆಸುವುದು ಒಂದು ಕುಟುಂಬವನ್ನು ನಡೆಸಿದಂತೆಯೇ. ಕುಟುಂಬದಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿ ಅವಲಂಬಿತರ ಸಂಖ್ಯೆ
ಹೆಚ್ಚಾದಾಗ ಉಂಟಾಗುವ ಪರಿಣಾಮಗಳನ್ನೇ ದೇಶವೂ ಎದುರಿಸಬೇಕಾಗುತ್ತದೆ. ಭಾರತದ ಪ್ರತಿ ರಾಜ್ಯದ ಮೂಲ ಸಮಸ್ಯೆ ಜನಸಂಖ್ಯೆಯೇ.

ಮಾತು ಮಾತಿಗೂ ಭಾರತದ ಅಭಿವೃದ್ಧಿಯನ್ನು ಅಮೆರಿಕ ದೇಶಕ್ಕೆ ಹೋಲಿಕೆ ಮಾಡುವವರಿಗೆ, ಭಾರತದ ಭೂ ಭಾಗಕ್ಕಿಂತಲೂ ಅಮೆರಿಕದ ಭೂಭಾಗ ಮೂರು ಪಟ್ಟು ಹೆಚ್ಚಿದೆಯೆಂಬ ಸತ್ಯ ತಿಳಿಯಬೇಕು. ಅಮೆರಿಕದ ಜನಸಂಖ್ಯೆಯು ಸುಮಾರು ೪೦ ಕೋಟಿಯಷ್ಟಿದ್ದರೆ ಭಾರತದ ಜನಸಂಖ್ಯೆ ೧೪೦ ಕೋಟಿ ಯನ್ನು ದಾಟಿದೆ. ಅಮೆರಿಕ ದೇಶದಲ್ಲಿನ ಭೂಭಾಗವನ್ನು ಹಂಚಿದರೆ ಬಹುಶಃ ಒಬ್ಬೊಬ್ಬರಿಗೆ ಸುಮಾರು ೧೦ ಎಕರೆ ಸಿಗಬಹುದು. ಆದರೆ ಭಾರತದ ಭೂ ಭಾಗವನ್ನು ಹಂಚಿದರೆ ಒಬ್ಬೊಬ್ಬರಿಗೆ ಇಪ್ಪತ್ತು, ಮೂವತ್ತು ಸೈಟಿನಷ್ಟು ಜಾಗ ಸಿಗುವುದೂ ಅನುಮಾನ.

ಅಮೆರಿಕ ದೇಶದಲ್ಲಿ ಜನಸಂಖ್ಯೆಗಿಂತಲೂ ಹೆಚ್ಚಿನ ಸಂಪನ್ಮೂಲವನ್ನು ಕಾಣಬಹುದು. ಭಾರತದಲ್ಲಿ ಜನಸಂಖ್ಯೆ ಮತ್ತು ಸಂಪನ್ಮೂಲಗಳ ನಡುವೆ ದೊಡ್ಡ ಅಂತರವಿದೆ. ಮುಂದುವರಿದ ದೇಶಗಳಾದ ಜಪಾನ್, ಜರ್ಮನಿ, ಬ್ರಿಟನ್, ಫ್ರಾನ್ಸ್, ಇಟಲಿಯ ಅಭಿವೃದ್ಧಿಯ ಯಶಸ್ಸಿನ ಹಿಂದಿನ ಮೂಲಕಾರಣ ಜನಸಂಖ್ಯಾ ನಿಯಂತ್ರಣ. ಭಾರತದಲ್ಲಿನ ವಿರೋಧ ಪಕ್ಷಗಳು ನೆಹರು ಮತ್ತು ಇಂದಿರಾ ಗಾಂಧಿ ಕಾಲದಿಂದಲೂ ತಮ್ಮ ಮತಬ್ಯಾಂಕ್ ಆಗಿರುವ ಮುಸಲ್ಮಾನರ ವೋಟು ಕೈ ತಪ್ಪುವ ಭಯದಿಂದ ದೇಶದ ಹಿತಾಸಕ್ತಿಯನ್ನು ಮರೆತು ಜನಸಂಖ್ಯಾನಿಯಂತ್ರಣಕ್ಕೆ ಕೈ ಹಾಕಲಿಲ್ಲ.

ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ನಶಿಸಿಹೋಗಿದ್ದ ಜಪಾನ್ ಜಗತ್ತಿನಲ್ಲಿ ಮುಂದುವರಿದ ದೇಶವಾಗಲು ಕಾರಣವಾದದ್ದು ಅಲ್ಲಿ ಜಾರಿಗೆ ತಂದ ಜನಸಂಖ್ಯಾ ನಿಯಂತ್ರಣ ನೀತಿ. ಈಗ ಜಪಾನಿನಲ್ಲಿ ಜನಸಂಖ್ಯಾ ನೀತಿಯಿಂದ ಯುವಕ ಯುವತಿಯರ ಸಂಖ್ಯೆ ಕಡಿಮೆಯಾಗಿರುವುದು ನಿಜವಾ ದರೂ, ಅಂದು ಜಪಾನ್ ತೆಗೆದುಕೊಂಡ ನಿರ್ಧಾರದಿಂದ ಇಡೀ ಜಗತ್ತೇ ಇಂದು ಅದರೆಡೆಗೆ ನೋಡುವಂತಾಗಿದೆ. ಜಪಾನ್‌ಗೆ ಈಗ ತನ್ನ ಜನಸಂಖ್ಯಾ ನೀತಿಯನ್ನು ಸಡಿಲಿಸುವ ಎಲ್ಲಾ ಅವಕಾಶವೂ ಇದೆ. ಹಾಗಾಗಿ ಅದು ನೂತನ ನೀತಿಗಳ ಮೂಲಕ ತನ್ನ ಜನಸಂಖ್ಯೆಯನ್ನು ಹೆಚ್ಚಿಸುವಲ್ಲಿ ತೊಡಗಿದೆ.

ಭಾರತದ ಪ್ರತಿಯೊಂದು ರಾಜ್ಯದ ಮೂಲ ಸಮಸ್ಯೆ ಜನಸಂಖ್ಯೆ. ಹಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಲುಕಲು ಮೂಲಕಾರಣ ಜನಸಂಖ್ಯೆ. ಜನಸಂಖ್ಯೆ ಹೆಚ್ಚಾದಂತೆ ಸಂಪನ್ಮೂಲಗಳ ಕೊರತೆ ಹೆಚ್ಚಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಓಲೈಸಲು ಇಲ್ಲಸಲ್ಲದ ಉಚಿತ ಯೋಜನೆಗಳನ್ನು ಜಾರಿಗೆ ತಂದಲ್ಲಿ ಸಮಾಜದಲ್ಲಿನ ವಿವಿಧ ವರ್ಗದ ಜನರ ನಡುವಿನ ಅಸಮಾನತೆ ಹೆಚ್ಚುವುದರ ಜತೆಗೆ ರಾಜ್ಯದ ಸಾಲದ ಮೊತ್ತ ಏರಿಕೆಯಾಗುತ್ತದೆ. ೧೯೫೧ ಹಾಗೂ ೨೦೧೧ರ ನಡುವಿನ ೭೦ ವರ್ಷಗಳ ಅವಧಿಯಲ್ಲಿ ಹಿಂದೂಗಳ ಸಂಖ್ಯಾ ಬೆಳವಣಿಗೆಯಲ್ಲಿ ಇಳಿಮುಖವಾಗಿದ್ದರೆ, ಮುಸಲ್ಮಾನರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಮಕ್ಕಳನ್ನು ಹೆರುವ ಫಲವತ್ತತೆಯ ದರ ಮುಸಲ್ಮಾನರಲ್ಲಿ ಶೇ.೨.೩೬ರಷ್ಟಿದ್ದರೆ, ಹಿಂದೂಗಳಲ್ಲಿ ಶೇ.೧.೯೪ರಷ್ಟಿದೆ, ಕ್ರಿಶ್ಚಿಯನ್ನರಲ್ಲಿ ಶೇ.೧.೮೮ರಷ್ಟಿದ್ದರೆ, ಸಿಖ್ಖರಲ್ಲಿ ಶೇ.೧.೬೧ರಷ್ಟಿದೆ. ವಿಪರ್ಯಾಸವೆಂದರೆ ಒಂದೆಡೆ ಭಾರತದ ಜನಸಂಖ್ಯೆಯು ದಿನದಿಂದ ದಿನಕ್ಕೆ ಏರುತ್ತಿದೆ, ಮತ್ತೊಂದೆಡೆ ಬೀದಿಗೊಂದರಂತೆ ಬಂಜೆತನ ನಿರ್ಮೂಲನಾ ಆಸ್ಪತ್ರೆಗಳೂ ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವಿಷ್ಟೇ: ಮಕ್ಕಳನ್ನು ಸಾಕುವ ಸಾಮರ್ಥ್ಯವಿರುವವರು ಮದುವೆಯ ನಂತರ ಜೀವನವನ್ನು ಆನಂದಿಸುವ ನಿಟ್ಟಿನಲ್ಲಿ ಸಮಯವನ್ನು ವ್ಯರ್ಥ ಮಾಡಿ ಕಾಲ ತಳ್ಳುತ್ತಿದ್ದಾರೆ.

ಸಾಕುವ ಸಾಮರ್ಥ್ಯವಿಲ್ಲದವರು ೩-೪ ಮಕ್ಕಳನ್ನು ಹೆತ್ತು ಸರಕಾರಗಳನ್ನು ಅವಲಂಬಿಸುತ್ತಾರೆ. ಕೆಲವರು ಹೆಂಡತಿ ಮಕ್ಕಳ ಜವಾಬ್ದಾರಿಯನ್ನು ಮರೆತು, ತಾವು ದುಡಿದ ಹಣದಲ್ಲಿ ಪ್ರತಿನಿತ್ಯ ಕುಡಿತದ ದಾಸರಾಗಿರುತ್ತಾರೆ. ಆ ಮಕ್ಕಳ ಊಟ, ವಸತಿ, ಪೌಷ್ಟಿಕತೆ, ಓದು, ವಿದ್ಯಾಭ್ಯಾಸ ಎಲ್ಲವನ್ನೂ ಸರಕಾರವೇ ನೋಡಿಕೊಳ್ಳಬೇಕಾದಂಥ ಪರಿಸ್ಥಿತಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿಯೂ ಇರುತ್ತದೆ. ಭಾರತ ದೇಶವನ್ನು ನಡೆಸುವುದು ಒಂದು ಕುಟುಂಬವನ್ನು ನಡೆಸಿದ ಹಾಗೆ. ಕುಟುಂಬದಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗಿ ಕಷ್ಟದಲ್ಲಿರುವವರ ಸಂಖ್ಯೆ ಹೆಚ್ಚಾದಾಗ ಉಂಟಾಗುವ ಪರಿಣಾಮಗಳನ್ನೇ ದೇಶವೂ ಎದುರಿಸಬೇಕಾಗುತ್ತದೆ.

೧೪೦ ಕೋಟಿ ಜನಸಂಖ್ಯೆಯ ಭಾರತದಲ್ಲಿ ನೇರ ತೆರಿಗೆ ಪಾವತಿಸುವವರ ಸಂಖ್ಯೆ ೨ ಕೋಟಿಯಷ್ಟಿದೆ. ಜನಸಂಖ್ಯೆಯ ಶೇಕಡಾವಾರಿನಲ್ಲಿ ಭಾರತ ಜಗತ್ತಿನ ಅತ್ಯಂತ ಕಡಿಮೆ ಆದಾಯ ತೆರಿಗೆದಾರರಿರುವ ದೇಶ. ಕಡಿಮೆ ತೆರಿಗೆ ದಾರರ ಆದಾಯದಿಂದ ಇಡೀ ದೇಶವನ್ನೇ ನೋಡಿಕೊಳ್ಳಬೇಕಾದಂಥ ಪರಿಸ್ಥಿತಿ ಭಾರತದ್ದು. ಇದಕ್ಕೆಲ್ಲ ಮೂಲಕಾರಣ ಜನಸಂಖ್ಯೆ. ಒಂದು ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯು ೨೦೫೦ರ ವೇಳೆಗೆ ೧೫೦ ಕೋಟಿಯನ್ನು ದಾಟುವುದೆಂದು ಹೇಳಲಾಗುತ್ತಿದೆ. ಸರಿಯಾಗಿ ತೆರಿಗೆ ಪಾವತಿಸುವವರಿಗೆ, ‘ನಾವ್ಯಾಕೆ ತೆರಿಗೆ ಪಾವತಿಸಲು ಸಾಧ್ಯವಾಗದವರ ಏಳಿಗೆಗಾಗಿ ದುಡಿಯಬೇಕು?’ ಎಂಬ ಯೋಚನೆ ಬರಲು ಶುರುವಾಗಿದೆ.

ಅಸಾವುದ್ದೀನ್ ಒವೈಸಿ ಮುಸಲ್ಮಾನರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಹಿರಂಗವಾಗಿ ಕರೆ ಕೊಟ್ಟಿದ್ದ. ತಮ್ಮ ಜನಸಂಖ್ಯೆಯು ಹೆಚ್ಚಾದರೆ ಭಾರತ ದಲ್ಲಿ ತಾವು ಬಹುಸಂಖ್ಯಾತರಾಗಿ ತಮಗಿಷ್ಟ ಬಂದಂತೆ ಆಡಳಿತ ನಡೆಸಬಹುದೆಂಬ ಹಗಲುಗನಸು ಆತನದ್ದು. ಮತಾಂಧತೆಯ ಅಮಲಿನಲ್ಲಿಯೇ ದೇಶವನ್ನು ನೋಡುವ ಇಂಥ ವ್ಯಕ್ತಿಗಳಿಗೆ ಜನಸಂಖ್ಯೆ ಹೆಚ್ಚಾದಂತೆ ಮುಂದೆ ತಮ್ಮ ಸಮುದಾಯದವರ ಮೇಲುಂಟಾಗುವ ದುಷ್ಪರಿಣಾಮಗಳ ಅರಿವಿಲ್ಲ.

ರಾಜ್ಯಗಳ ಜನಸಂಖ್ಯೆ ಹೆಚ್ಚಾದಷ್ಟೂ ಬಡ ಕುಟುಂಬಗಳ ಮೇಲಿನ ಸಾಮಾಜಿಕ ಜವಾಬ್ದಾರಿಯು ಸರಕಾರದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತ ಲಿರುತ್ತವೆ. ಹನಿ ಹನಿಗೂಡಿದರೆ ಹಳ್ಳವೆಂಬಂತೆ ಸಣ್ಣ ಸಣ್ಣ ಸಾಮಾಜಿಕ ಯೋಜನೆಗಳೂ ಸರಕಾರದ ಆರ್ಥಿಕ ವ್ಯವಸ್ಥೆಯ ಮೇಲೆ ಬಹುದೊಡ್ಡ
ಋಣಾತ್ಮಕ ಪರಿಣಾಮವನ್ನು ಬೀರುತ್ತವೆ. ಒಮ್ಮೆ ನೀಡಿದ ಯೋಜನೆಗಳನ್ನು ವಾಪಾಸ್ ಪಡೆಯುವುದು ಸುಲಭದ ಕೆಲಸವಲ್ಲ. ಖರ್ಚುಗಳು ಹೆಚ್ಚಾದಂತೆ ಆದಾಯವೂ ಹೆಚ್ಚಾದರೆ ಪರವಾಗಿಲ್ಲ; ಆದರೆ ಸರಕಾರದ ಮೇಲೆ ತಮ್ಮ ಭಾರ ಹೇರಿ ಜೀವನ ನಡೆಸುವವವರ ಸಂಖ್ಯೆಯು ಹೆಚ್ಚಾಗುತ್ತಲೇ ಇರುತ್ತದೆ. ಅದು ಸರಕಾರದ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಜನಸಂಖ್ಯೆಯು ಹೆಚ್ಚಾದಷ್ಟೂ ಉದ್ಯೋಗಾಕಾಂಕ್ಷಿಗಳು ಹೆಚ್ಚಾಗುತ್ತಾರೆ. ಸರಕಾರದ ಯೋಜನೆಗಳು ಹೆಚ್ಚಾದಂತೆ ಆರ್ಥಿಕ ಇಲಾಖೆಗಳ ಮೇಲಿನ ಭಾರವೂ ಹೆಚ್ಚುತ್ತದೆ. ಸರಕಾರದ ಬೊಕ್ಕಸಕ್ಕೆ ಹಣದ ಕೊರತೆಯುಂಟಾಗುತ್ತದೆ. ಮತ್ತದೇ ತೆರಿಗೆ ಕಟ್ಟುವವರು ಹಾಗೂ ಯೋಜನೆಯ ಫಲಾನುಭವಿಗಳ ಮಧ್ಯೆ ಬಹು ದೊಡ್ಡ ಅಂತರವೇರ್ಪಡುತ್ತದೆ. ಜನಸಂಖ್ಯಾ ನೀತಿಯಿಂದ ಅತಿಹೆಚ್ಚು ನಷ್ಟ ಅನುಭವಿಸುವವರು ಮುಸಲ್ಮಾನರೆಂಬುದು ಆ ಧರ್ಮದ ನಾಯಕರು ಹಾಗೂ ಮೌಲ್ವಿಗಳ ವಾದ. ಸರ್ವ ಧರ್ಮಕ್ಕೂ ಅನ್ವಯವಾಗುವ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದು, ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲೇಬೇಕಾದ ಅನಿವಾರ್ಯ ವಿದೆ. ಚೀನಾ ಮಾದರಿಯಲ್ಲಿ ಬಲವಂತದ ಕಮ್ಯುನಿಸ್ಟ್ ಆಡಳಿತ ಹೇರಲು ಭಾರತದಲ್ಲಿ ಸಾಧ್ಯವಿಲ್ಲ. ಚೀನಾ ದೇಶ
ಭಾರತದಂತೆ ವಿವಿಧ ಧರ್ಮಗಳನ್ನು ಪಾಲಿಸುವುದಿಲ್ಲ.

೧೯೯೦ರ ಆಸುಪಾಸಿನಲ್ಲಿ ಭಾರತ ಮತ್ತು ಚೀನಾ ದೇಶದ ಆರ್ಥಿಕತೆ ಒಂದೇ ತಕ್ಕಡಿಯಲ್ಲಿತ್ತು. ಸರ್ವಾಧಿಕಾರಿ ಧೋರಣೆಯಿಂದ ಅಲ್ಲಿನ ಅಧ್ಯಕ್ಷ ಕ್ಷಣಾರ್ಧ ದಲ್ಲಿ ನಿರ್ಧಾರಗಳನ್ನು ಕೈಗೊಂಡು ಇಡೀ ದೇಶದ ಜನರನ್ನು ಕೆಲಸಕ್ಕೆ ದೂಡಬಲ್ಲ. ಚೀನಾ ತನ್ನ ಕಮ್ಯುನಿಸ್ಟ್ ನೀತಿಗಳ ಮೂಲಕ ತನ್ನ ಜನ ಸಂಖ್ಯೆ ಯನ್ನೇ ಅಸ್ತ್ರವಾಗಿಸಿಕೊಂಡು ಕಠಿಣ ಕಾನೂನುಗಳನ್ನು ಜಾರಿಗೆ ತಂದು, ಬಲವಂತವಾಗಿ ಕೆಲಸಕ್ಕೆ ದೂಡಿ ಅಭಿವೃದ್ಧಿಯನ್ನು ಕಂಡಿತ್ತು. ಇಂದಿರಾ ಗಾಂಧಿಯವರ ಮಗ ಸಂಜಯ ಗಾಂಧಿ ೧೯೮೦ರ ದಶಕದಲ್ಲಿ ಜನಸಂಖ್ಯೆಯನ್ನು ನಿಯಂತ್ರಿ ಸಲು ತೆಗೆದುಕೊಂಡಿದ್ದಂಥ ಕ್ರಮಗಳನ್ನು ಅಂದಿನ ಮುಸ ಲ್ಮಾನ ಮುಖಂಡರು ಖಾರವಾಗಿ ಖಂಡಿಸಿದ್ದರು.

ಕಾಂಗ್ರೆಸ್ ಪಕ್ಷ ತನ್ನ ವೋಟ್‌ಬ್ಯಾಂಕ್ ನೆಲಕಚ್ಚುತ್ತದೆಯೆಂಬ ಭಯದಿಂದ ಸಂಜಯ್ ಗಾಂಧಿಯ ಕ್ರಮಗಳನ್ನು ನಿಲ್ಲಿಸಿ ಮುಸಲ್ಮಾನರ ಸಲುವಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಗಳನ್ನು ಕೈಚೆಲ್ಲಿತ್ತು. ಅಂದು ಆ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರೆ ಬಹುಶಃ ೧೯೯೧ರಲ್ಲಿ
ಭಾರತವು ಲಂಡನ್ನಿನ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನ ದಿಂದಲೂ ಜನಸಂಖ್ಯೆಯನ್ನು ನಿಯಂತ್ರಿಸಲು ಕಾನೂನೊಂದನ್ನು ತರುತ್ತಾರೆಂಬ ವಿಶ್ವಾಸ ಬಹುತೇಕ ಭಾರತೀಯರಿಗಿದೆ. ಇದರ ಭಾಗವಾಗಿ ಅಸ್ಸಾಂ ರಾಜ್ಯದಲ್ಲಿ ಜನ ಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಮುಂದಾ ಗಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನಿನ ಕರಡು ಪ್ರತಿಯನ್ನು ಸಾರ್ವಜನಿಕರ
ಮುಂದೆ ಚರ್ಚೆಗೆ ಇಟ್ಟಿದ್ದರು. ಈಗ ಕೇಂದ್ರ ಸರಕಾರ ಜನಸಂಖ್ಯಾ ನಿಯಂತ್ರಣದ ಬಗ್ಗೆ ಚರ್ಚಿಸಲು ಹೊಸದೊಂದು ಸಮಿತಿಯನ್ನು ರಚನೆ ಮಾಡಿದ್ದು, ವಿವರವಾದ ವರದಿಯನ್ನು ಕೇಳಿದೆ. ಪೆಟ್ರೋಲ್ ಹಾಗೂ ಡೀಸೆಲ್ ವಿಷಯಕ್ಕೆ ಬರುವುದಾದರೆ, ಭಾರತದ ಜನಸಂಖ್ಯೆಗನುಗುಣವಾಗಿ ಕಚ್ಚಾ ತೈಲವನ್ನು ಆಮದು ಮಾಡಿ ಕೊಳ್ಳಬೇಕಿದೆ. ಹೆಚ್ಚಿನ ಜನಸಂಖ್ಯೆ ಇರುವ ಕಾರಣ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳಬೇಕಿದೆ.

ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಪೆಟ್ರೋಲ್ ಹಾಗೂ ಡೀಸೆಲ್‌ಗೆ ಪರ್ಯಾಯ ಮೂಲಗಳನ್ನು ಅಭಿವೃದ್ಧಿಪಡಿಸದ ಕಾರಣ ಬೇಡಿಕೆ ಮತ್ತಷ್ಟು ಹೆಚ್ಚಾಗಿತ್ತು. ಕಚ್ಚಾ ತೈಲದ ನಿಕ್ಷೇಪಗಳನ್ನು ಗುರುತಿಸುವ ಕೆಲಸವನ್ನೂ ಮಾಡಿರಲಿಲ್ಲ. ಪರ್ಯಾಯ ಸಾರ್ವಜನಿಕ ಸಾರಿಗೆಗಳ ಅಭಿವೃದ್ಧಿ ಕಾಣದ ಜನರು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಾಗಿ ಅವಲಂಬಿಸುವಂತಾಗಿತ್ತು. ಕಳೆದ ೯ ವರ್ಷಗಳಿಂದ ನರೇಂದ್ರ ಮೋದಿಯವರ ಆಡಳಿತ ದಲ್ಲಿ ಪರ್ಯಾಯ ಮಾರ್ಗ ಗಳಾಗಿ, ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಲಾಗುತ್ತಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಣ್ಣ ಸಣ್ಣ ವಿಮಾನ ನಿಲ್ದಾಣಗಳನ್ನು ನವೀಕರಿಸಿ ಮೇಲ್ದರ್ಜೆ ಗೇರಿಸಲಾಗುತ್ತಿದೆ. ೨೦೧೪ರ ಹೊತ್ತಿಗೆ ದೇಶದಲ್ಲಿ ಕೇವಲ ೫ ನಗರಗಳಲ್ಲಿ ಮೆಟ್ರೋ ಸಂಪರ್ಕವಿತ್ತು.

ಆದರೀಗ ೨೦ ನಗರಗಳಲ್ಲಿ ಮೆಟ್ರೋ ಸಂಪರ್ಕವಿದೆ. ೨೦೧೪ರ ಹೊತ್ತಿಗೆ ದೇಶದಲ್ಲಿ ೭೦ ವಿಮಾನ ನಿಲ್ದಾಣಗಳಿದ್ದವು, ಈಗ ಅವುಗಳ ಸಂಖ್ಯೆ ೧೪೦ಕ್ಕೆ ಏರಿಕೆಯಾಗಿದೆ. ಜನಸಂಖ್ಯೆ ಹೆಚ್ಚಾದಷ್ಟೂ ಸರಕಾರಗಳ ಮೇಲಿನ ಹೊರೆ ಹೆಚ್ಚಾಗುತ್ತದೆ. ವಿವಿಧ ಸಂಸ್ಕೃತಿಯಲ್ಲಿ ವೈವಿಧ್ಯ ಮೆರೆಯುವ ಭಾರತದಂಥ
ದೇಶದಲ್ಲಿ ಚೀನಾ ಮಾದರಿಯ ಕಮ್ಯುನಿಸ್ಟ್ ಆಡಳಿತ ಹೇರಲು ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಭಾರತ ನಿಲ್ಲಬೇಕಾದರೆ ದೊಡ್ಡ ಮಟ್ಟದಲ್ಲಿ ಜನಸಂಖ್ಯಾ ನಿಯಂತ್ರಣ ಆಗಲೇಬೇಕು. ಕಮ್ಯುನಿಸ್ಟರ ಆಡಳಿತದಲ್ಲಿ ಸಮಾಜವಾದದ ಹೆಸರಿನಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯ ಗಳಲ್ಲಿ ಬಂಡವಾಳಕ್ಕೆ ಹೆಚ್ಚಿನ ಆದ್ಯತೆ ನೀಡದ ಕಾರಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಲಿಲ್ಲ.

ಅತ್ತ ಜನಸಂಖ್ಯೆಯೂ ಹೆಚ್ಚಾದ ಕಾರಣ ಆ ರಾಜ್ಯಗಳು ಇಂದಿಗೂ ಅಭಿವೃದ್ಧಿಯಾಗದೇ ಸಾಲದ ಸುಳಿಯಲ್ಲಿವೆ. ಬಂಡವಾಳಶಾಹಿ ವಾದವಿಲ್ಲದೆ ಸಮಾಜ ವಾದಿ ವಾದವಿಲ್ಲ. ಅತ್ತ ಸಂಪತ್ತಿನ ಸೃಷ್ಟಿಯಾದರೆ ಮಾತ್ರ ದೇಶದ ಜನರಿಗೆ ಹಂಚಲು ಸಾಧ್ಯ. ಅತ್ತ ಜನಸಂಖ್ಯೆಯ ನಿಯಂತ್ರಣವೂ ಆದರೆ, ಸಂಪನ್ಮೂಲ ಮತ್ತು ಅಭಿವೃದ್ಧಿಯ ಸಮತೋಲನವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!