Saturday, 7th September 2024

ರಾಷ್ಟ್ರಪತಿ ಹುದ್ದೆಯನ್ನೇ ತಿರಸ್ಕರಿಸಿದ ರಾಜಕಾರಣಿ !

ಶಶಾಂಕಣ

shashidhara.halady@gmail.com

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೨೭ ವರ್ಷಗಳ ನಂತರವೂ, ದೇಶದ ಜನರನ್ನು ಹಸಿವು ಕಾಡುತ್ತಿದೆ, ಏರುತ್ತಿರುವ ಬೆಲೆ,
ಭ್ರಷ್ಟಾಚಾರ .. ಎಲ್ಲಾ ರೀತಿಯ ಅನ್ಯಾಯಗಳು ಜನರ ಬದುಕನ್ನು ದುರ್ಭರಗೊಳಿಸಿವೆ. ..ಇದಕ್ಕೆ ಪರಿಹಾರವಾಗಿ, ನಮಗೆ ಬೇಕಾಗಿರುವುದು ಸಂಪೂರ್ಣ ಕ್ರಾಂತಿ!’ ಈ ರೀತಿ ಘೋಷಣೆ ಮಾಡಿದವರು ಜಯಪ್ರಕಾಶ್ ನಾರಾಯಣ್ (ಜೆಪಿ). ಜಯಪ್ರಕಾಶ ನಾರಾಯಣರು, ಸಂಪೂರ್ಣ ಕ್ರಾಂತಿಗೆ ಕರೆಕೊಟ್ಟು, ೨೭ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಸವಾಲನ್ನು ಎಸೆದಿ
ದ್ದರು.

ಅವರ ಪರಿಕಲ್ಪನೆಯ ಸಂಪೂರ್ಣ ಕ್ರಾಂತಿಯಲ್ಲಿ ಏಳು ವಿಭಾಗಳಿದ್ದವು : ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ತಾತ್ವಿಕ, ವಿದ್ಯಾಭ್ಯಾಸ ಮತ್ತು ಅಧ್ಯಾತ್ಮ – ಸಂಪೂರ್ಣ ಕ್ರಾಂತಿಯನ್ನು ದೇಶದಲ್ಲಿ ಜಾರಿಗೊಳಿಸಬೇಕು ಮತ್ತು ಇವೆಲ್ಲವೂ ಸರ್ವೋದಯದ ಆಶಯಗಳಾಗಿವೆ ಎಂದು ಹೇಳುತ್ತಿದ್ದರು. ಅದಕ್ಕಾಗಿ, ಯಾವ ಪಕ್ಷದಲ್ಲಿದ್ದುಕೊಂಡು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೋ, ಅದೇ ಪಕ್ಷದ ವಿರುದ್ಧ ಅವರು ಯುದ್ಧ ಸಾರಿದ್ದರು – ೧೯೭೦ ರ ದಶಕದಲ್ಲಿ!

ಕಾಂಗ್ರೆಸ್ ನಡೆಸುತ್ತಿದ್ದ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಜೆಪಿಯವರು, ‘ಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಜಾರ್ಖಂಡ್‌ನ ಹಜಾರಿಬಾಗ್ ಜೈಲಿನಲ್ಲಿ ಜೆಪಿಯವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಇದೇ ರೀತಿ
ಜೈಲಿನಲ್ಲೇ ಇದ್ದರೆ, ಹೋರಾಟವನ್ನು ಮುಂದುವರಿಸಲು ಆಗುವುದಿಲ್ಲ ಎಂದರಿತ ಜೆಪಿಯವರು, ಜೈಲಿನಿಂದ ಪರಾರಿ ಯಾದರು!

ಅದು ದೀಪಾವಳಿಯ ದಿನ; ನವೆಂಬರ್ ೧೯೪೨. ಜೈಲಿನ ಸಿಬ್ಬಂದಿ ಮತ್ತು ಇತರರು ದೀಪಾವಳಿಯನ್ನು ಆಚರಿಸುತ್ತಿದ್ದ
ಸಂದರ್ಭದಲ್ಲಿ, ೧೭ ಅಡಿ ಎತ್ತರದ ಜೈಲುಗೋಡೆಯನ್ನು, ತನ್ನ ಗೆಳೆಯರೊಂದಿಗೆ ಏರಿ, ಹೊರಬಂದರು. ಅವರ ಜತೆಯಲ್ಲೇ ಯೋಗೇಂದ್ರ ಶುಕ್ಲಾ, ಸೂರಜ್ ನಾರಾಯಣ ಸಿಂಗ್, ಗುಲಾಬ್ ಚಂದ್ ಗುಪ್ತಾ, ಪಂಡಿತ್ ರಮಾನಂದನ್ ಮಿಶ್ರಾ, ಶಾಲಿ ಗ್ರಾಮ ಸಿಂಗ್ ಮೊದಲಾದವರು ಜೈಲಿನಿಂದ ಹೊರಬಂದರು. ಜೈಲಿನಿಂದ ತಪ್ಪಿಸಿಕೊಂಡ ಜೆಪಿಯವರನ್ನು ಹಿಡಿಯಲು ಬ್ರಿಟಿಷರು ನಾನಾ ತಂತ್ರ ಹೂಡಿದರು; ಬಹುಮಾನವನ್ನು ಸಹ ಘೋಷಿಸಲಾಗಿತ್ತು!

ಅವರು ತಪ್ಪಿಸಿಕೊಂಡು ಸುದ್ದಿಯು ಎಲ್ಲೆಡೆ ಪ್ರಚಾರಕ್ಕೂ ಒಳಗಾಯಿತು. ಈ ಸುದ್ದಿಯೇ ಜನರಲ್ಲಿದ್ದ ಹೋರಾಟದ ಕಿಚ್ಚನ್ನು
ಬಡಿದೆಬ್ಬಿಸಿತು. ಭೂಗತರಾಗಿದ್ದುಕೊಂಡು ಬ್ರಿಟಿಷರ ವಿರುದ್ಧ ಹೋರಾಡಲು ಜೆಪಿಯವರ ಜತೆ, ರಾಮ ಮನೋಹರ ಲೋಹಿಯಾ, ಅರುಣಾ ಅಸಫ್ ಆಲಿ ಮೊದಲಾದವರು ಕೈಜೋಡಿಸಿದರು. ಈ ಹೊತ್ತಿಗಾಗಲೇ ಜೆಪಿಯವರು ನುರಿತ ಹೋರಾಟ ಗಾರರಾಗಿದ್ದರು; ೧೯೩೦ರ ಅಸಹಕಾರ ಚಳವಳಿಯ ಸಮಯದಲ್ಲಿ ಜೆಪಿಯವರನ್ನು ನಾಸಿಕ್ ಜೈಲಿನಲ್ಲಿ ಬಂಧನಕ್ಕೆ ಒಳಪಡಿಸಿದ್ದಾಗ, ರಾಮ ಮನೋಹರ ಲೋಹಿಯ, ಮಿನೂ ಮಸಾಣಿ ಮೊದಲಾದವರ ಗೆಳೆತನ ದೊರಕಿತ್ತು.

ಬ್ರಿಟಿಷರನ್ನು ದೇಶದಿಂದ ಒದ್ದೋಡಿಸಬೇಕು ಮತ್ತು ನಮ್ಮ ದೇಶದ ಎಲ್ಲಾ ಜನರೂ ಸುಖವಾಗಿ ಬಾಳಬೇಕು ಎಂಬುದು ಜೆಪಿಯವರ ಕನಸು; ಅದಕ್ಕೆಂದೇ ಅವರು ಸರ್ವೋದಯ ಪರಿಕಲ್ಪನೆಯನ್ನು ಪ್ರಚುರಗೊಳಿಸಿದ್ದರು. ಹಾಗೆ ನೋಡಿದರೆ, ಜೆಪಿಯವರು ಈ ರೀತಿ ಭೂಗತ ಕಾರ್ಯಾಚರಣೆ ನಡೆಸುತ್ತಾ, ಅಪಾಯದ ಸಂದರ್ಭಗಳನ್ನು ಎದುರಿಸುತ್ತಾ ಹೋರಾಟ
ನಡೆಸಬೇಕಾಗಿರಲಿಲ್ಲ. ಉನ್ನತ ವಿದ್ಯಾಭ್ಯಾಸ ಪಡೆದಿದ್ದ ಅವರು, ಮನಸ್ಸು ಮಾಡಿದ್ದರೆ ಬ್ರಿಟಿಷ್ ಸರಕಾರದಲ್ಲಿ ಉದ್ಯೋಗ ಪಡೆಯಬಹುದಿತ್ತು! ಅವರ ವಿದ್ಯಾಭ್ಯಾಸದ ಹಿನ್ನೆಲೆಯೇ ಕುತೂಹಲಕಾರಿ.

೧೧.೧೦.೧೯೦೨ರಂದು ಬಿಹಾರದ ಸೀತಾಬ್ದಿರ ಎಂಬ ಹಳ್ಳಿಯಲ್ಲಿ ಜನಿಸಿದ್ದ ಜೆಪಿಯವರು, ಮಾಧ್ಯಮಿಕ ಶಿಕ್ಷಣವನ್ನು ಪಾಟ್ನಾದಲ್ಲಿ ಪೂರೈಸಿದರು. ಅವರ ತಂದೆಯು ಸರಕಾರದ ನೀರಾವರಿ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದುದರಿಂದ, ವಿವಿಧ ಪ್ರದೇಶಗಳಿಗೆ ವರ್ಗಾವಣೆ ಸಹಜ. ೧೬ನೆಯ ವಯಸ್ಸಿ ನಲ್ಲಿ ಪ್ರಭಾವತಿ ಎಂಬುವವರನ್ನು ಮದುವೆಯಾದರು. ಸತಿ, ಪತಿ ಇಬ್ಬರಲ್ಲೂ ಸ್ವಾತಂತ್ರ್ಯ ಹೋರಾಟದ ಕಿಚ್ಚು! ೧೯೧೯ರಲ್ಲಿ ಗಾಂಽಜಿಯವರು ಅಸಹಕಾರ ಚಳವಳಿಗೆ ಕರೆಕೊಟ್ಟಾಗ, ಜೆಪಿಯವರು ಆಕರ್ಷಿತರಾದರು. ಆಗ ಅವರು ಓದುತ್ತಿದ್ದ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇತ್ತು, ಬಿಹಾರ್ ವಿದ್ಯಾಪೀಠ ದಲ್ಲಿ ಸೇರ್ಪಡೆಗೊಂಡು, ವಿದ್ಯಾಭ್ಯಾಸ ಮುಂದುವರಿಸಿದರು.

ನಂತರದ ದಿನಗಳಲ್ಲಿ ಅವರ ಪತ್ನಿ ಪ್ರಭಾವತಿಯವರು, ಸಬರಮತಿ ಆಶ್ರಮದ ಸದಸ್ಯೆಯಾದರು. ೧೯೨೩ರಲ್ಲಿ ಜೆಪಿಯವರು ಅಮೆರಿಕಕ್ಕೆ ತೆರಳಿ, ಬಾರ್ಕಲಿಯಲ್ಲಿ ಉನ್ನತ ವಿದ್ಯಾಭ್ಯಾಸ ಮುಂದುವರಿಸಿದರು; ಬಿಡುವಿನ ವೇಳೆಯಲ್ಲಿ ಕೆಲಸ ಮಾಡುವುದು ಅವರ ಅಂದಿನ ದಿನಚರಿ. ದ್ರಾಕ್ಷಿ ತೋಟಗಳಲ್ಲಿ, ಗೆರಾಜುಗಳಲ್ಲಿ ಕೆಲಸ ಮಾಡಿದರು; ಪಾತ್ರೆ ತೊಳೆಯುವ ಕೆಲಸವನ್ನೂ ಮಾಡಿದ್ದರು.

ಕಾಲೇಜುಗಳು ಶುಲ್ಕವನ್ನು ಹೆಚ್ಚಳಗೊಳಿಸಿದ್ದರಿಂದಾಗಿ, ಅವರು ಕಾಲೇಜುಗಳನ್ನು ಬದಲಿಸಿ, ಸಮಾಜವಾದವನ್ನು ಪ್ರಮುಖ ವಾಗಿ ಅಧ್ಯಯನ ಮಾಡಿದರು. ಈ ನಡುವೆ, ವಿಸ್ಕಾಸಿನ್‌ನಲ್ಲಿದ್ದಾಗ, ಮಾರ್ಕ್ಸ್‌ನ ‘ದಾಸ್ ಕ್ಯಾಪಿಟಲ್’ ಪುಸ್ತಕದ ಸಂಪರ್ಕಕ್ಕೆ ಬಂದರು. ರಷ್ಯದಲ್ಲಿ ಕ್ರಾಂತಿಯಾದ ವಿಚಾರವು (೧೯೧೭- ೧೯೨೩) ಪ್ರಚಾರಕ್ಕೆ ಬಂದಿತ್ತು. ಜನಸಾಮಾನ್ಯರ ಮತ್ತು ಬಡವರ ಸಂಕಷ್ಟಗಳಿಗೆ ‘ಮಾರ್ಕಿಸಂ’ನಲ್ಲಿ ಉತ್ತರವಿದೆ ಎಂದು ಜೆಪಿಯವರು ಗಮನಿಸಿದರು.

ವಿಸ್ಕಾಸಿನ್ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದು, ೧೯೨೯ರಲ್ಲಿ ಭಾರತಕ್ಕೆ ವಾಪಸಾದಾಗ, ಜೆಪಿಯವರು ಮಾರ್ಕ್ಸಿಸ್ಟ ರಾಗಿದ್ದರು! ಆಗ ಭಾರತದಲ್ಲಿ ಗಾಂಧಿ, ನೆಹರೂ ಅವರ ಹವಾ; ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ನ ಅಹಿಂಸಾ ಹೋರಾಟವು ಮುಂಚೂಣಿಯಲ್ಲಿದ್ದ ಕಾಲ. ಜೆಪಿಯವರು ಭಾರತಕ್ಕೆ ಬಂದವರೇ, ಕಾಂಗ್ರೆಸ್ ಸೇರಿ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡರು.

ಅವರು ಅಮೆರಿಕದಿಂದ ವಾಪಸಾದ ಒಂದೇ ವರ್ಷದಲ್ಲಿ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು (೧೯೩೦) ಘೋಷಿಸಿದರು. ಆ ಹೋರಾಟದಲ್ಲಿ ಪಾಲ್ಗೊಂಡ ಜೆಪಿಯವರು, ಬಂಧನಕ್ಕೆ ಒಳಗಾದರು. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಕಾರ್ಮಿಕರ, ಜನಸಾಮಾನ್ಯರ ಪರವಾಗಿ ಹೋರಾಟ ವನ್ನು ಮುಂದುವರಿಸಿದರು. ಭಾರತೀಯ ರೈಲ್ವೆಯ ಕಾರ್ಮಿಕ ಸಂಘದ ಅಧ್ಯಕ್ಷರಾಗಿ, ಕಾರ್ಮಿಕರ ಹಿತಾಸಕ್ತಿ ಕಾಯುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಹಿರಿಯ ಕಾಂಗ್ರೆಸ್ ಸದಸ್ಯರಾಗಿದ್ದ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜೆಪಿಯವರು, ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ನಡೆಸಿದ ಹೋರಾಟ ಮಾತ್ರ ಐತಿಹಾಸಿಕ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಹೊಸದರಲ್ಲಿ, ನೆಹರೂ ಅವರು ಹೇಳುತ್ತಿದ್ದರು ‘ಎಂತಹದೇ ಬಿರುಗಾಳಿ ಬೀಸಲಿ, ನಮ್ಮ ಸ್ವಾತಂತ್ರ್ಯದ ದೊಂದಿಯ ಬೆಳಕು ಆರಿಹೋಗಲು ಎಂದಿಗೂ ಬಿಡುವುದಿಲ್ಲ’. ಆದರೆ, ನೆಹರೂ ಅವರ ಮಗಳು ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ, ೨೬.೬.೧೯೭೫ರಂದು ಸ್ವಾತಂತ್ರ್ಯದ ಬೆಳಕು ಮಸುಕಾಯಿತು, ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಲಾಯಿತು, ಪತ್ರಿಕಾ
ಸ್ವಾತಂತ್ರ್ಯ ಮತ್ತು ಜನರ ಮೂಲ ಭೂತ ಹಕ್ಕುಗಳ ದಮನವಾಯಿತು. ಇಂತಹದೊಂದು ಪರಿಸ್ಥಿತಿಯನ್ನು ಜೆಪಿಯವರು ಮೊದಲೇ ಊಹಿಸಿದ್ದರು ಎನಿಸುತ್ತದೆ, ಏಕೆಂದರೆ, ೧೯೭೪ರಿಂದಲೂ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ನಡೆಯುತ್ತಿದ್ದ ಹೋರಾಟದ ನೇತೃತ್ವವನ್ನು ವಹಿಸಿದ್ದರು.

ಅದರಿಂದಾಗಿ, ಅವರ ಹಿರಿಯ ಸ್ನೇಹಿತ ನೆಹರೂ ಅವರ ಮಗಳಾದ ಇಂದಿರಾ ಗಾಂಧಿಯವರ ವೈರವನ್ನು ಕಟ್ಟಿಕೊಂಡಿದ್ದರು.
೧೯೭೦ರ ದಶಕದ ಹೊತ್ತಿಗೆ ನಮ್ಮ ದೇಶದ ಜನಸಾಮಾನ್ಯರ ಪರಿಸ್ಥಿತಿ ಬಿಗಡಾಯಿಸಿತ್ತು; ನಿರುದ್ಯೋಗ, ಹಣದುಬ್ಬರ, ಅಗತ್ಯವಸ್ತುಗಳ ಕೊರತೆ ಮೊದಲಾದ ಸಂಕಟಗಳು ದೇಶವನ್ನು ಕಾಡುತ್ತಿದ್ದವು. ೧೯೭೪ರಲ್ಲಿ ಬಿಹಾರದಲ್ಲಿ ವಿದ್ಯಾರ್ಥಿಗಳು ಸರಕಾರದ ವಿರುದ್ಧ ಹೋರಾಟ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಬಿಹಾರ ಪೊಲೀಸರು ಗುಂಡು ಹಾರಿಸಿ,
ಎಂಟು ಜನರನ್ನು ಸಾಯಿಸಿದರು. ಆಗ ಜೆಪಿಯವರಿಗೆ ೭೨ ವರ್ಷ; ಆರೋಗ್ಯ ಅಷ್ಟಕ್ಕಷ್ಟೆ.

ಆದರೆ ಜನರ ಮೇಲಾಗುತ್ತಿದ್ದ ದಬ್ಬಾಳಿಕೆಯನ್ನು ನೋಡುತ್ತಾ ಕೂರುವವರಲ್ಲ ಜೆಪಿ. ಪಾಟ್ನಾದಲ್ಲಿ ನಡೆದ ಮೌನಪ್ರತಿಭಟನೆಯ ನೇತೃತ್ವವನ್ನು ವಹಿಸಿ ದರು. ಪೊಲೀಸರು ಲಾಠಿ ಚಾರ್ಜ್ ನಡೆಸಿದ ರು. ಆದರೆ ಹೋರಾಟ ಮುಂದುವರಿಯಿತು. ಪಾಟ್ನಾದಲ್ಲಿ
೫.೬.೧೯೭೪ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ‘ಸಂಪೂರ್ಣ ಕ್ರಾಂತಿ’ಯ ಘೋಷಣೆ ಮಾಡಿದರು.

‘ಗೆಳೆಯರೆ, ಇದು ಸಂಪೂರ್ಣ ಕ್ರಾಂತಿಗೆ ಕರೆ. ವಿಧಾನ ಸಭೆಯನ್ನು ವಿಸರ್ಜಿಸಿದರೆ ಸಾಲದು, ಇದೊಂದು ಹೆಜ್ಜೆ ಮಾತ್ರ. ನಾವು ಇನ್ನೂ ಮುಂದೆ ಹೋಗಬೇಕು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೨೭ ವರ್ಷಗಳ ನಂತರವೂ, ದೇಶದ ಜನರನ್ನು ಹಸಿವು ಕಾಡುತ್ತಿದೆ, ಏರುತ್ತಿರುವ ಬೆಲೆ, ಭ್ರಷ್ಟಾಚಾರ .. ಎಲ್ಲಾ ರೀತಿಯ ಅನ್ಯಾಯಗಳು ಜನರ ಬದುಕನ್ನು ದುರ್ಭರಗೊಳಿಸಿವೆ. .. ಇದಕ್ಕೆ ಪರಿಹಾರವಾಗಿ, ನಮಗೆ ಬೇಕಾಗಿ ರುವುದು ಸಂಪೂರ್ಣ ಕ್ರಾಂತಿ!’ ಬಿಹಾರದ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟವು ನಿಧಾನವಾಗಿ ಇತರ ಭಾಗಗಳಿಗೆ ಹರಡಿತು. ಗುಜರಾತ್‌ನಲ್ಲೂ ಹೋರಾಟದ ಕಿಚ್ಚು; ತಮಗೆ ಹೋರಾಟದಲ್ಲಿ
ಮಾರ್ಗದರ್ಶನ ನೀಡಲು ಅಲ್ಲಿನವರು ಜೆಪಿಯವರನ್ನು ಕೇಳಿಕೊಂಡರು.

ಇದೇ ಸಮಯದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಒಂದು ಐತಿಹಾಸಿಕ ತೀರ್ಪನ್ನು ನೀಡಿತು. ಚುನಾವಣೆಗಳಲ್ಲಿ ಅಕ್ರಮ ನಡೆಸಿದ್ದಕ್ಕಾಗಿ, ಚುನಾವಣಾ ಪ್ರಚಾರಕ್ಕೆ ಸರಕಾರಿ ಅಧಿಕಾರಿಗಳನ್ನು ಬಳಸಿಕೊಂಡ ಆರೋಪವು ಸಾಬೀತು ಗೊಂಡಿದ್ದಕ್ಕಾಗಿ, ಇಂದಿರಾ ಗಾಂಧಿಯವರ ಆಯ್ಕೆಯನ್ನು ಅನರ್ಹ ಗೊಳಿಸಿತು. ತಕ್ಷಣ ರಾಜಿನಾಮೆ ನೀಡುವಂತೆ ಜೆಪಿ
ಯವರು ಇಂದಿರಾ ಗಾಂಧಿಯವರಿಗೆ ಕರೆ ನೀಡಿದರು. ಆಗ ಜಾರಿಗೆ ಬಂದದ್ದೇ ಆಂತರಿಕ ತುರ್ತುಪರಿಸ್ಥಿತಿ.

ಯಾವುದೇ ಕಾರಣ ನೀಡದೇ ವಿರೋಧ ಪಕ್ಷದ ನಾಯಕರನ್ನು ಮತ್ತು ಸರಕಾರದ ವಿರುದ್ಧ ಮಾತನಾಡುತ್ತಿದ್ದವರನ್ನು ಬಂಽಸಲಾಯಿತು. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳು ಸೆನ್ಸಾರ್‌ಗೆ ಒಳಪಟ್ಟಿದ್ದವು. ತುರ್ತುಪರಿಸ್ಥಿತಿಯ ಸಮಯದಲ್ಲಿ
ಒಂದು ಲಕ್ಷಕ್ಕೂ ಅಽಕ ಜನರನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಒಳಗಾದ ಜಯಪ್ರಕಾಶ ನಾರಾಯಣ ಅವರನ್ನು ಚಂಡಿಗಡ ಜೈಲಿನಲ್ಲಿ ಇರಿಸಲಾಗಿತ್ತು.

ಒಮ್ಮೆಗೇ ಅವರ ಆರೋಗ್ಯ ಕ್ಷೀಣಿಸಿತು. ನವೆಂಬರ್ ೧೨ ರಂದು ಅವರನ್ನು ಆರೋಗ್ಯ ತಪಾಸಣೆಗೆ ಒಳ ಪಡಿಸಿದಾಗ, ಅವರ ಮೂತ್ರಪಿಂಡಗಳು ಸಂಪೂರ್ಣ ವಿಫಲಗೊಂಡದ್ದು ಪತ್ತೆಯಾಯಿತು. ಆ ನಂತರ ಅವರು ಬದುಕಿರುವ ತನಕವೂ, ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಯಿತು. ಅದೇನಿದ್ದರೂ ಜೆಪಿಯವರ ಹೋರಾಟ ನಿಲ್ಲಲಿಲ್ಲ. ೧೮.೧.೧೯೭೭ರಂದು ತುರ್ತುಪರಿಸ್ಥಿತಿಯನ್ನು ಹಿಂಪಡೆದ ಇಂದಿರಾ ಗಾಂಧಿಯವರು, ಚುನಾವಣೆ ನಡೆಸಲು ಮುಂದಾದರು. ಬಹುಷಃ ವಿರೋಧ
ಪಕ್ಷಗಳ ಶಕ್ತಿಯನ್ನು ಅವರು ಸರಿಯಾಗಿ ಅಂದಾಜಿಸಲಿಲ್ಲ ಎಂದನಿಸುತ್ತದೆ. ಅನಾರೋಗ್ಯದ ನಡುವೆಯೂ, ಜೆಪಿಯವರು ಹೋರಾಟಕ್ಕೆ ಧುಮುಕಿದರು; ಜನತಾ ಪಾರ್ಟಿಯ ಆಶ್ರಯದಲ್ಲಿ ಹಲವು ಪಕ್ಷಗಳನ್ನು ಒಗ್ಗೂಡಿಸಿ, ಪ್ರಚಾರ ನಡೆಸಿದರು. ಇಂದಿರಾ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸೋತಿತು; ಜನತಾಪಕ್ಷವು ಮಿತ್ರ ಪಕ್ಷಗಳ ಸಹಾಯದಿಂದ ೩೩೦ ಸ್ಥಾನದಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತು.

ಅದೇ ಮೊದಲ ಬಾರಿ, ನಮ್ಮ ದೇಶದಲ್ಲಿ ಕಾಂಗ್ರೆಸೇತರರು ಅಧಿಕಾರದ ಚುಕ್ಕಾಣಿ ಹಿಡಿದರು. ಮೊರಾರ್ಜಿ ದೇಸಾಯಿವರು ಪ್ರಧಾನಿಯಾದರು. ಸಂಪೂರ್ಣ ಕ್ರಾಂತಿಗೆ ಕರೆ ನೀಡಿ, ದೇಶದಲ್ಲಿ ಮೊದಲ ಬಾರಿ ಜನತಾಪಕ್ಷ ಅಧಿಕಾರಕ್ಕೆ ಬರುವಲ್ಲಿ
ಪ್ರಮುಖ ಪಾತ್ರ ವಹಿಸಿದ್ದ ಜೆಪಿಯವರನ್ನು ರಾಷ್ಟ್ರಪತಿಯಾಗುವಂತೆ ಕೇಳಿಕೊಳ್ಳಲಾಯಿತು. ಆದರೆ, ಅದೇಕೋ ಜೆಪಿಯವರು ಅಂತಹ ಪ್ರಮುಖ ಹುದ್ದೆಯನ್ನು ಅಲಂಕರಿಸಲು ಇಷ್ಟಪಡಲಿಲ್ಲ. ಆದ್ದರಿಂದ ನೀಲಂ ಸಂಜೀವ ರೆಡ್ಡಿಯವರು ರಾಷ್ಟ್ರಪತಿಯಾಗಿ
ಆಯ್ಕೆಗೊಂಡರು. ಬಹುಷಃ ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಜೆಪಿಯವರು ರಾಷ್ಟ್ರಪತಿಯಾಗಲು ಹಿಂದೆ ಸರಿದರು. ಜೆಪಿಯವರು ಅಂತಹ ಪ್ರಮುಖ ಹುದ್ದೆಯನ್ನು ತಿರಸ್ಕರಿಸಿದ್ದರು ಎಂಬ ವಿಷಯವೇ ಇಂದು ನಂಬಲು ಕಷ್ಟ ಎನಿಸುವ ವಿದ್ಯಮಾನ.

ಅದಾಗಿ ಎರಡು ವರ್ಷಗಳಲ್ಲಿ, ೮.೧೦.೧೯೭೯ ರಂದು ಜೆಪಿಯವರು ನಿಧನರಾದರು. ಅವರ ನಿಧನಾ ನಂತರ, ಜನತಾಪಕ್ಷದಲ್ಲಿನ ಒಗ್ಗಟ್ಟು ಮುಂದುವರಿಯಲಿಲ್ಲ; ಜೆಪಿಯವರಂತಹ ಹಿರಿಯರ ಮಾರ್ಗದರ್ಶನದ ಕೊರತೆಯಿಂದಾಗಿಯೋ ಏನೋ, ಜನತಾ ಪಕ್ಷದ ನಾಯಕರುಗಳಲ್ಲಿ ಒಳಜಗಳಗಳು ತಾರಕಕ್ಕೇರಿದವು. ಜನತಾಪಕ್ಷವು ತನ್ನ ಪೂರ್ಣಾವಧಿಯ ತನಕ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ದೇಶದ ಮೊದಲ ಕಾಂಗ್ರೆಸೇತರ ಸರಕಾರವು ಕುಸಿದುಬಿತ್ತು. ೧೯೮೦ರ ಜನವರಿ ೧೪ರಂದು ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿಯವರು ಪುನಃ ಪ್ರಧಾನಮಂತ್ರಿಯಾದರು.

೧೯೭೭ರಲ್ಲಿ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವಲ್ಲಿ ಜೆಪಿಯವರ ಕೊಡುಗೆ ಅಪಾರ. ೨೧ ತಿಂಗಳುಗಳ ಆ ಹೋರಾಟದ ನೇತೃತ್ವ ವಹಿಸಿದ್ದ ಜೆಪಿಯವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಮರಳಿ ದೊರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ, ಅವರು ಅಧಿಕಾರಕ್ಕಾಗಿ ಎಂದೂ ಆಸೆ ಪಡಲಿಲ್ಲ. ಜನಸಾಮಾನ್ಯರ ಹಿತ ಮತ್ತು ಸರ್ವೋದಯಕ್ಕಾಗಿ ಹಪಹಪಿಸಿ, ಹೋರಾಟದ ನೇತೃತ್ವವನ್ನು ವಹಿಸಿ, ಅದಕ್ಕಾಗಿ ತಮ್ಮ ಆರೋಗ್ಯವನ್ನು ಕೆಡಿಸಿಕೊಂಡರು. ಅದೇ ಅವರ ಸಾವಿಗೂ ಕಾರಣವಾಯಿತು. ೧೯೯೯ರಲ್ಲಿ ಅವರಿಗೆ ಮರಣೋತ್ತರ ‘ಭಾರತರತ್ನ’ವನ್ನು ಘೋಷಿಸಲಾಯಿತು. ಜೆಪಿಯವರ ಸಂಪೂರ್ಣ ಕ್ರಾಂತಿಯ ಪರಿಕಲ್ಪನೆ ಇಂದಿಗೂ ಒಂದು ಆದರ್ಶವಾಗಿಯೇ ಉಳಿದಿದೆ.

error: Content is protected !!