Thursday, 19th September 2024

ನಮ್ಮ ಆಯ್ಕೆ ಆದ್ಯತೆಗಳ ದಾರಿ ತಪ್ಪಿಸುವ ಸಾರ್ವಜನಿಕ ಅಭಿಪ್ರಾಯಗಳು

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

T here is no untrue proverb. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ – ಹೀಗೆ ಹೇಳುವುದು ಕೂಡ ಒಂದು ಗಾದೆಯೇ. ಕೆಲವು ಗಾದೆಗಳನ್ನು, ಉಕ್ತಿ – ಸುಭಾಷಿತಗಳನ್ನು ಯಥಾವತ್ ಸ್ವೀಕರಿಸುವಾಗ ಕೆಲವೊಂದು ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತವೆ.

ಉದಾಹರಣೆಗೆ ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ. ಸತ್ಯವನ್ನು ಹೇಳು, ಪ್ರಿಯವಾದ ದ್ದನ್ನು ಹೇಳು, ಆದರೆ ಅಪ್ರಿಯವಾದ ಸತ್ಯವನ್ನು ಹೇಳಬೇಡ. ಸತ್ಯವನ್ನು ಹೇಳಬೇಕು – ಸರಿ ಒಪ್ಪೋಣ. ಅದರ ಜತೆ ಪ್ರಿಯ ವಾದದ್ದನ್ನೇ ಹೇಳೋಣ. ಆದರೆ ಅಪ್ರಿಯವಾದ ಸತ್ಯವನ್ನು ಹೇಳಬೇಡ ಎಂದಾಗ ಮಾತ್ರ ಕೆಲವೊಂದು ಸೈದ್ಧಾಂತಿಕ ತೊಳಲಾಟ ಗಳು ಹುಟ್ಟಿಕೊಳ್ಳುತ್ತವೆ.

ಹಾಗಾದರೆ ಅಪ್ರಿಯವಾದ ಸತ್ಯವನ್ನು ಹೇಳುವ ಸಂದರ್ಭ ಬಂದಾಗ ಏನು ಮಾಡಬೇಕು? ಅಲ್ಲಿ ಸುಳ್ಳನ್ನು ಹೇಳಬೇಕೇ? ಸತ್ಯವನ್ನು ಹೇಳದೇ, ಉತ್ತರ ಕೊಡದೇ ಜಾರಿಕೊಳ್ಳಬೇಕೇ? ಹಾಗೆ ಜಾರಿಕೊಳ್ಳುವ ಪ್ರಯತ್ನದಲ್ಲಿ ಸ್ವಲ್ಪವೇ ವ್ಯತ್ಯಯವಾದರೂ
ಎದುರಿಗಿರುವವರಲ್ಲಿ ನಮ್ಮ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಮೂಡಬಹುದು. ಹೀಗೆ ಸತ್ಯವನ್ನು ಹೇಳದಿದ್ದರೆ ಅದು
ಸುಳ್ಳು ಹೇಳಿದಂತೆಯೇ ಅಲ್ಲವೇ? ಆಗ ಸತ್ಯಂ ಬ್ರೂಯಾತ್ ಎನ್ನುವ ಮಾತಿಗೆ ತಪ್ಪಿದಂತಾಯಿತಲ್ಲ.

ಯಾರೇ ತಿಳಿದವರ ಹತ್ತಿರ ಅಪ್ರಿಯವಾದ ಸತ್ಯವನ್ನು ಹೇಳಬೇಕಾದ ಸಂದರ್ಭ ಒದಗಿ ಬಂದಾಗ, ಅದರ ಬದಲಿಗೆ ಸುಳ್ಳು ಹೇಳಬಹುದೇ ಎನ್ನುವ ಪ್ರಶ್ನೆ ಕೇಳಿದರೆ – ಯಾರಿಗೂ ನಷ್ಟವಾಗದಿದ್ದರೆ ಸುಳ್ಳು ಹೇಳಿದರೆ ಪರವಾಗಿಲ್ಲ ಎನ್ನುವ ಉತ್ತರ ಸಿಗುವುದು ಸಾಮಾನ್ಯ. ಆದರೆ ಸುಳ್ಳು ಎಂದಿಗೂ ಅಲ್ಲಿಗೇ ನಿಲ್ಲುವುದಿಲ್ಲವಲ್ಲ. ಒಂದು ಅನವಶ್ಯಕ ಅಥವಾ ಅವಶ್ಯಕ ಸುಳ್ಳು ಆ ಕ್ಷಣದಲ್ಲಿ ನಿರುಪದ್ರವಿಯಾದರೂ ಮುಂದೆ ಯಾವತ್ತೋ ಹೇಳಿದವನಿಗೇ ಉಪದ್ರ ಕೊಡಲಿಕ್ಕೆ ಶುರುಮಾಡಬಹುದು.

ವಾದಕ್ಕೆ ಇದೆಲ್ಲವನ್ನು ಹೇಳಿದರೂ ನಿಜ ಜೀವನದಲ್ಲಿ ಈ ರೀತಿಯ ಸ್ಥಿತಿ ಆಗೀಗ ಎದುರಾಗುತ್ತಲೇ ಇರುತ್ತದೆ; ಈ ರೀತಿಯ
ತೊಳಲಾಟಗಳು ಮತ್ತು ಯಡವಟ್ಟುಗಳು ಆಗೀಗ ಅನುಭವಕ್ಕೆ ಬರುತ್ತಲೇ ಇರುತ್ತವೆ. ತೀರಾ ಆಪ್ತ ಸ್ನೇಹಿತನಿರುತ್ತಾನೆ. ಆತ ಒಳ್ಳೆಯವನೇ. ಜೀವ ಬೇಕಾದರೂ ಕೊಡುವಂತಹ ಸ್ನೇಹಿತ. ಆದರೆ ಆತನಿಗೆ ಯಾವುದೇ ಕ್ರಿಟಿಸಿಸಂ ಇಷ್ಟವಾಗುವುದಿಲ್ಲ. ಹಾಗಂತ ಆ ಒಂದು ಗುಣದಿಂದಾಗಿಯೇ ದೂರ ಇಡಬಹುದಾದ ಸ್ನೇಹಿತನೂ ಆತನಾಗಿರುವುದಿಲ್ಲ.

ತೀರಾ ಮ್ಯಾಚ್ ಆಗದ ಅಂಗಿಯನ್ನೋ, ಬಟ್ಟೆಯನ್ನೋ ಧರಿಸಿ ಹೇಗಿದೆ ಎಂದು ಎದುರಿಗೆ ನಿಂತು ಕೇಳುತ್ತಾನೆ. ಚೆನ್ನಾಗಿಲ್ಲ ಎಂದರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಮನಸ್ಸಿನವನಲ್ಲ. ಹಾಗಂತ ಆ ಕಾರಣಕ್ಕೆ ಆ ಸ್ನೇಹಿತ ಒಳ್ಳೆಯವನಲ್ಲ ಎಂದೇನೂ ಅಲ್ಲ. ಆಗ ಬಟ್ಟೆಯೋ, ಇನ್ನೇನೋ ಒಂದನ್ನು ಸುಮ್ಮನೆ ಚೆನ್ನಾಗಿದೆ’ ಎಂದು ಹೇಳಲೇಬೇಕಾಗುತ್ತದೆ. ಸತ್ಯಹರಿಶ್ಚಂದ್ರನ ವಂಶಸ್ಥನಂತೆ ಸತ್ಯವನ್ನೇ ಹೇಳಬೇಕಾದ ಅನಿವಾರ್ಯತೆ ಅಲ್ಲಿ ನಮಗಿರುವುದಿಲ್ಲ.

ಹೀಗೆ ಒಂದು ನಯವಾದ – ಪ್ರಿಯವಾದ ಸುಳ್ಳು ಹೇಳುವಾಗ ಸ್ನೇಹಕ್ಕೆ ಮಾಡಿದ ದ್ರೋಹ ಎಂದೆಲ್ಲ ತಿಳಿದುಕೊಳ್ಳುವಂತಿಲ್ಲ. ಅದು ಆ ಸಮಯದ ಮತ್ತು ಸಂಬಂಧದ ಅವಶ್ಯಕತೆಯಷ್ಟೆ. ಈ ರೀತಿಯ ಸುಳ್ಳುಗಳಿಗೆ ಸುಳ್ಳು ಎನ್ನುವ ಬದಲು ಪೋಕಳೆ ಎನ್ನುವ ಶಬ್ದ ಹೆಚ್ಚು ಸಮಂಜಸ. ಈ ರೀತಿಯ ಉದಾಹರಣೆಗಳಲ್ಲಿ ಸತ್ಯ ಅನಗತ್ಯ. ಈ ಸುಳ್ಳುಗಳು ಯಾವುದೇ ತೊಂದರೆಗೆ ಸಿಕ್ಕಿ ಹಾಕಿಸದ ಸುಳ್ಳುಗಳು – ನಿರುಪದ್ರವಿ.

ಸ್ನೇಹಿತರ ಅಥವಾ ನೆಂಟರ ಮನೆಗೆ ಊಟಕ್ಕೆ ಹೋಗಿರುತ್ತೇವೆ. ಪ್ರೀತಿಯಿಂದ ಅಡುಗೆ ಮಾಡಿ ಬಡಿಸಿರುತ್ತಾರೆ. ಕೆಲವೊಮ್ಮೆ
ನಮಗೆ ಆ ಅಡುಗೆ ಹಿಡಿಸುತ್ತದೆ, ಇನ್ನು ಕೆಲವೊಮ್ಮೆ ರುಚಿಸಿರುವುದಿಲ್ಲ. ಅದೆಲ್ಲ ಏನೇ ಇದ್ದರೂ ಊಟ ಚೆನ್ನಾಗಿದೆ ಎಂದೇ ಹೇಳಿರುತ್ತೇವೆ. ಯಾವುದೋ ಒಂದು ತಿನಿಸನ್ನು ಹೊಸತಾಗಿ ಮಾಡಿರುತ್ತಾರೆ, ಹೇಗಾಗಿದೆ ಎಂದು ಕೇಳಿರುತ್ತಾರೆ. ಈ ರೀತಿ ಬಾಯಿ ಬಿಟ್ಟು ಹೇಗಾಗಿದೆ, ಇದೇ ಮೊದಲ ಬಾರಿ ಮಾಡಿದ್ದು ಎಂದು ಕೇಳಿದಾಗಲಂತೂ ಬಹುತೇಕರು ಮಾಡಿದವರ ನಿರೀಕ್ಷೆಗಿಂತಲೂ ತುಸು ಹೆಚ್ಚಿಗೆಯೇ ಹೊಗಳಿ ಹೋಗಿರುತ್ತಾರೆ. ಹೀಗೆ ಹೊಗಳುವವರಿಗೆ ಕೆಲವೊಮ್ಮೆ ಈ ತಿನಿಸು ಒಂದು ಚೂರೂ ಇಷ್ಟವಾಗಿ ರುವುದಿಲ್ಲ.

ಇದೊಂದು ತೀರಾ ಚಿಕ್ಕ ಸುಳ್ಳೇ ಇರಬಹುದು. ಎಲ್ಲವೂ ಸರಿ, ಆದರೆ ಇದರಿಂದಾಗಿ ಅಂದು ತಪ್ಪು ಗ್ರಹಿಕೆ ಉಂಟಾಗಿರುತ್ತದೆ ಮತ್ತು ಅದಕ್ಕೆ ಅನವಶ್ಯಕ ಕಾರಣ ನಾವಾಗಿರುತ್ತೇವೆ. ಈ ಗ್ರಹಿಕೆಯಿಂದ ಆ ಮನೆಯ ಗೃಹಿಣಿ ಇನ್ಯಾರೋ ಬಂದಾಗಲೂ ಅದೇ ತಿನಿಸನ್ನು
ಮತ್ತೆ ಮಾಡುತ್ತಾಳೆ. ಅವರ ಬಳಿಯಲ್ಲೂ ಹುಸಿ ಶಹಬಾಸ್ ಸಿಗುತ್ತದೆ. ಹೀಗೆ ಆಗುತ್ತಲೇ ಹೋಗಿ ಅಷ್ಟೇನೂ ರುಚಿಯಾಗದ
ತಿನಿಸೊಂದನ್ನು ತಾನು ಅದ್ಭುತವಾಗಿ ಮಾಡಬ ಎನ್ನುವ ಒಂದು ತಪ್ಪು ಕಲ್ಪನೆ ಹುಟ್ಟಿಬಿಡುತ್ತದೆ.

ಇನ್ನು ಮದುವೆ ಮುಂಜಿಗಳಲ್ಲಿ ಯಜಮಾನರು ಪಂಕ್ತಿಯಲ್ಲಿ ಊಟ ಮಾಡುತ್ತಿರುವವರ ಹತ್ತಿರ ಅಡುಗೆ ಹೇಗಾಗಿದೆ ಎಂದು
ಕೇಳುವುದು ಒಂದು ಸಾಮಾನ್ಯ ರೂಢಿ. ಪ್ರಶ್ನೆ ಜೆನ್ಯೂನ್ ಇದ್ದರೂ, ಅಡುಗೆ ಹೇಗೇ ಇದ್ದರೂ ಈ ಪ್ರಶ್ನೆ ಕೇಳಿದವರೆಲ್ಲ ಚೆನ್ನಾಗಿದೆ ಎಂದೇ ಹೇಳಿರುತ್ತಾರೆ. ಇನ್ನು ಕೆಲವು ಅಡುಗೆ ಕಂಟ್ರಾಕ್ಟರ್‌ಗಳಂತೂ ಈ ರೀತಿ ಯಜಮಾನರ ಜತೆಯೇ ಹೋಗಿ ಅಡುಗೆ ಹೇಗಾಗಿದೆ ಎಂದು ಕೇಳುತ್ತಾರೆ. ಈ ರೀತಿ ಕೇಳಿದಾಗ ಶಹಬಾಸ್‌ಗಿರಿ ಸಿಗುವುದು ಪಕ್ಕಾ.

ನಂತರ ಕೊನೆಯ ಪಂಕ್ತಿಯಲ್ಲಿ ಹಸಿದು ಊಟಕ್ಕೆ ಕೂರುವ ಮನೆಯ ಯಜಮಾನನಿಗೆ ಅಡುಗೆಯ ಅಸಲಿ ರುಚಿ ಗೊತ್ತಾಗುವುದೇ
ಇಲ್ಲ. ತಮ್ಮ ಮನೆಯ ಕಾರ್ಯಕ್ರಮದಲ್ಲಿ ಅಡುಗೆ ಚೆನ್ನಗಾಗಿತ್ತು ಎಂದು ಆತ ಮಾತ್ರ ಗಟ್ಟಿ ನಂಬಿರುತ್ತಾನೆ. ಆತನಿಗೆ ಅದು ನೆಮ್ಮದಿ ಕೊಟ್ಟಿರುತ್ತದೆ. ಆ ನೆಮ್ಮದಿ ಯಾರೇ ಆಪ್ತರು ಹಾಳುಮಾಡಲು ಹೋಗುವುದಿಲ್ಲ. ಇಲ್ಲೆಲ್ಲಾ ಖಾಸಗೀ ಮಟ್ಟದಲ್ಲಿ ಸತ್ಯ
ಬೇರೆಯದೇ ಇರುತ್ತದೆ. ಬಹಿರಂಗವಾಗಿ – ಸಮಾಜದಲ್ಲಿ ಅಥವಾ ಒಬ್ಬ ವ್ಯಕ್ತಿಯಲ್ಲಿ ಸುಳ್ಳೇ ಸತ್ಯವಾಗಿರುತ್ತದೆ.

ಇಂತಹ ಅದೆಷ್ಟೋ ಉದಾಹರಣೆಗಳು ನಮಗೆ ಆಗೀಗ ಕಾಣಿಸುತ್ತಲೇ ಇರುತ್ತವೆ. ಈ ಉದಾಹರಣೆಗಳನ್ನು ಈ ಮಟ್ಟದಿಂದ ಮುಂದೆ ಹೋಗಿ ನೋಡಿದಾಗ ಬೇರೊಂದಿಷ್ಟು ಆಯಾಮಗಳು ನಮಗೆ ಕಾಣಿಸುತ್ತವೆ. ಕೆಲವೊಮ್ಮೆ ಈ ರೀತಿಯ ಸಾರ್ವಜನಿಕ ಸುಳ್ಳುಗಳು ಮುಂದಿನ ಹಲವು ಪ್ರಮಾದಗಳಿಗೆ ಕಾರಣವಾಗುತ್ತವೆ. ಸಾಮಾನ್ಯವಾಗಿ ಹೊಸ ಬರಹಗಾರರಿಗೆ, ಚಿತ್ರ ಬಿಡಿಸುವವನಿಗೆ, ಕಲಾಕಾರ ನಿಗೆ ಆಗುವ deception ಕೂಡ ಇದೇ ರೀತಿಯದ್ದು. ಲೇಖಕ ಲೇಖನ, ಪುಸ್ತಕ ಬರೆದಿರುತ್ತಾನೆ. ಕೇಳಿದವರೆಲ್ಲ ಶೈಲಿ, ವಿಚಾರ ಅತ್ಯುತ್ತಮವಾಗಿದೆ ಎಂದೇ ಹೇಳಿರುತ್ತಾರೆ. ಆತ ಅದನ್ನೇ ನಂಬಿಕೊಳ್ಳುತ್ತಾನೆ.

ಕೆಲವೊಂದೆರಡು ಮಂದಿ ಮಾತ್ರ ಸತ್ಯವಾದ ಅಭಿಪ್ರಾಯ ಹೇಳಿರುತ್ತಾರೆ. ಆ ಒಂದೆರಡು ಮಂದಿಯ ಅಭಿರುಚಿಯನ್ನೇ
ಪ್ರಶ್ನಿಸುತ್ತ ಒಂದು ಸುಳ್ಳಿನ ಮಹಲ್‌ನಲ್ಲಿಯೇ ಲೇಖಕ ಇದ್ದುಬಿಡುತ್ತಾನೆ. ಇಷ್ಟಕ್ಕೇ ನಿಲ್ಲುವುದಿಲ್ಲ. ಆತ ಈ ರೀತಿಯ ಪ್ರಿಯವಾದ ಸುಳ್ಳುಗಳಿಂದಾಗಿ ಅದೇ ಲೇಖನ ಶೈಲಿ ಮುಂದುವರಿಸಿಕೊಂಡು ಹೋಗಿಬಿಡುತ್ತಾನೆ. ಅಲ್ಲಿ ಕೂಡ ಖಾಸಗಿ ಮಟ್ಟದಲ್ಲಿ ಸತ್ಯ ಸಾರ್ವಜನಿಕವಾಗಿ ಆತನಿಂದಾಚೆ ಸುಳ್ಳಾಗಿರುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಬಹುತೇಕರು ಆಗೀಗ ಈ ರೀತಿಯ deceiving opinionಗಳ ಸಂತ್ರಸ್ತರೇ. ಈ ರೀತಿ ನಿರ್ಮಾಣವಾಗುವ ಸ್ಥಿತಿಯನ್ನು ಭ್ರಮಾ ಲೋಕ ಎನ್ನುವುದು ಅಷ್ಟು ಸರಿಯಲ್ಲ.

ನಮ್ಮ ಸುತ್ತಲೂ ಒಳ್ಳೆಯ ಅಭಿಪ್ರಾಯ ಕೊಡುವವರೇ ಸಹಜವಾಗಿ ಜಾಸ್ತಿ ಸಿಗುತ್ತಾರೆ. ಇದು ಅವರ ತಪ್ಪಲ್ಲ. ಏಳ್ಗೆ ಬಯಸುವವರು ಇದೆಲ್ಲದರ ಮಧ್ಯೆ ಸಿಗುವ ಕೆಲವೇ ಕೆಲವು ಅಪ್ರಿಯವಾದ ಸತ್ಯವನ್ನು, ವಿಮರ್ಶೆ ಯನ್ನು ಕ್ರೀಡಾತ್ಮಕ ಮನೋಭಾವದಿಂದ ಸ್ವೀಕರಿಸಬೇಕಾಗುತ್ತದೆ. ಆಗ ಮಾತ್ರ ಏಳ್ಗೆ ಸಾಧ್ಯ. ಆ ಪರಿಪಕ್ವತೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು.

ಈ ರೀತಿಯ ಪೋಕಳೆ ಅಭಿಪ್ರಾಯಗಳು ಕೆಲವೊಮ್ಮೆ ನಾನಾ ರೀತಿಯ ತಪ್ಪುಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ
ಎಡೆ ಮಾಡಿಕೊಡುತ್ತವೆ. ಇದರೊಂದಿಗೆ ತಳುಕು ಹಾಕಿಕೊಳ್ಳುವ ಇನ್ನೊಂದು ವಿಚಾರವೆಂದರೆ preference falsification. ಒಬ್ಬ
ವ್ಯಕ್ತಿಯ ಖಾಸಗಿ ಮಟ್ಟದ ವಿಚಾರ ಮತ್ತು ಆದ್ಯತೆ ಒಂದಾಗಿರುತ್ತದೆ. ಆದರೆ ನಾಲ್ಕು ಜನರ ಎದುರಿಗೆ – ಎಲ್ಲರೊಳಗೆ ಒಂದಾಗ ಬೇಕಾದ ಅನಿವಾರ್ಯತೆಯಿಂದ ಆತ ತನ್ನ ಅಭಿಪ್ರಾಯವನ್ನು, ಆದ್ಯತೆಯನ್ನು ಬದಲಿಸಿಕೊಳ್ಳಬೇಕಾಗುತ್ತದೆ.

ಸ್ನೇಹಿತನ ಮನೆಗೆ ಸಮಯ ಕಳೆಯಲು ಹೋಗಿರುತ್ತೇವೆ. ಎಲ್ಲರೂ ಏನು ಮಾಡೋಣ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ಒಬ್ಬೊಬ್ಬರು ಒಂದೊಂದು ಯೋಜನೆ ಮುಂದಿಡುತ್ತಾರೆ. ಯಾರೋ ಒಬ್ಬ ಫಿಲಂ ನೋಡೋಣ ಎನ್ನುತ್ತಾನೆ. ಆತನಿಗೆ ಆಪ್ತನಾಗಿರುವ ಇನ್ನೊಬ್ಬ ಸ್ನೇಹಿತ ಹಾಗೆಯೇ ಮಾಡೋಣ ಎಂದು ಅನುಮೋದಿಸುತ್ತಾನೆ. ಅಸಲಿಗೆ ಆತನಿಗೆ ಮತ್ತು ಮೊದಲು ಹೇಳಿದವನಿಗೆ ಫಿಲಂ ನೋಡುವ ಬಗ್ಗೆ ಅಷ್ಟಾಗಿ ಮನಸ್ಸಿರುವು ದಿಲ್ಲ. ಅಲ್ಲಿ ಆತ ಸುಮ್ಮನೆ ತಾನೂ ಒಂದು ಸಲಹೆ ಕೊಡಬೇಕೆಂದು ಮುಂದಾಗಿರುತ್ತಾನೆ.

ಕ್ರಮೇಣ ಎಲ್ಲರೂ ಅದನ್ನೇ ಅನುಮೋದಿಸುತ್ತಾರೆ. ಎಲ್ಲ ಸ್ನೇಹಿತರಿಗೆ ಫಿಲಂ ನೋಡಲು ಖಾಸಗೀ ಮಟ್ಟದಲ್ಲಿ ಮನಸ್ಸಿಲ್ಲ ದಿದ್ದರೂ ಇಡೀ ಗುಂಪು ಫಿಲಂ ನೋಡಲು ಮುಂದಾಗುತ್ತದೆ. ಅಷ್ಟಕ್ಕೇ ನಿಲ್ಲುವುದಿಲ್ಲ. ಈ ಸ್ನೇಹಿತರು ಮುಂದೆ ಸೇರಿದಾಗಲೆಲ್ಲ ಫಿಲಂ ನೋಡುವುದೇ ಈ ಗುಂಪಿನ ಆದ್ಯತೆ ಎಂದೇ ಒಂದು ಭಾವನೆ ಬೆಳೆದು ಮತ್ತೆ ಮತ್ತೆ ಈ ಘಟನೆ ಮುಂದುವರಿದು ಬಿಡುತ್ತದೆ. ಇದೇ ರೀತಿ ಸಾರ್ವಜನಿಕವಾಗಿ ಅದೆಷ್ಟೋ ಘಟನೆಗಳು ನಮ್ಮ ಅರಿವಿಗೆ ಬಾರದಂತೆ ನಡೆಯುತ್ತಲೇ ಇರುತ್ತವೆ. ಇದನ್ನೇ preference falsification- ಮಿಥ್ಯ ಆದ್ಯತೆ ಎಂದು ಕರೆಯುವುದು.

ಈ ರೀತಿಯ ಮಿಥ್ಯ ಆದ್ಯತೆ ಮತ್ತು ಆಪ್ತರ ಸುಳ್ಳು ಅಭಿಪ್ರಾಯ ರಾಜಕಾರಣದಲ್ಲಿ ತೀರಾ ಸಾಮಾನ್ಯ. ಇಲ್ಲಿ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿ ಇವರೆಲ್ಲ ಇದರ ಸಂತ್ರಸ್ತರು. ರಾಜಕಾರಣಿ ಅಭಿಪ್ರಾಯ ಪಡೆಯಲೆಂದು ಒಂದು ವಿಚಾರವನ್ನು ತನ್ನ ಆಪ್ತ – ಸುತ್ತಲಿನವರ ಎದುರು ಮೊದಲ ಬಾರಿ ಇಡುತ್ತಾನೆ. ತಕ್ಷಣ ಸುತ್ತಲಿರುವವರಲ್ಲಿ ಒಬ್ಬ ವ್ಯಕ್ತಿ ಆತನದೇ ಆದ ಕಾರಣಗಳಿಂದಾಗಿ, ಅಥವಾ ನಾಯಕನನ್ನು ಮೆಚ್ಚಿಸಲು, ಇದೊಂದು ಅತ್ಯುತ್ತಮ ಯೋಜನೆ ಎಂದು ಮೊದಲು ಅನುಮೋದಿಸು ತ್ತಾನೆ.

ಅದಾದ ಕೂಡಲೇ ಸುತ್ತಲಿರುವ ಉಳಿದವರು ತಾಮುಂದು ಎಂದು ಅನುಮೋದಿಸತೊಡಗುತ್ತಾರೆ. ರಾಜಕಾರಣಿಗೆ ಅಥವಾ ಮಂತ್ರಿಗೆ ಮೂಲದಲ್ಲಿ ಈ ವಿಚಾರ/ ಯೋಜನೆಯ ಮೇಲೆ ಅಷ್ಟಾಗಿ ಭರವಸೆ ಯಿರುವುದಿಲ್ಲ. ಆದರೆ ಇಷ್ಟೆಲ್ಲ ಮಂದಿಯ ಅಭಿಪ್ರಾಯದಿಂದಾಗಿ ಇದೊಂದು ಒಳ್ಳೆಯ ಯೋಜನೆಯೇ ಇರಬಹುದು ಎಂದು ನಂಬಲು ಶುರು ಮಾಡುತ್ತಾನೆ. ಅದನ್ನು ಜಾರಿಗೆ ತರಲು ಮುಂದಾಗುತ್ತಾನೆ.

ನಾಯಕನಿಗೆ ಅಲ್ಲಿ ಸಿಕ್ಕಿದ್ದು ಸುಳ್ಳು ಅಭಿಪ್ರಾಯ. ಅಲ್ಲಿ ಉಳಿದವರದ್ದು ಮಿಥ್ಯ ಆದ್ಯತೆ. ಇತಿಹಾಸದ ನಾಯಕರ ಅದೆಷ್ಟೋ ದೊಡ್ಡ ದೊಡ್ಡ ತಪ್ಪುಗಳಿಗೆ ಕೂಡ ಇದೇ ಕಾರಣ ಎನ್ನುವುದನ್ನು ಗ್ರಹಿಸ ಬಹುದು. ಅದೆಷ್ಟೋ ಸರ್ವಾಧಿಕಾರಿಗಳಂತೂ ಈ ರೀತಿಯ ತಪ್ಪು ಅಭಿಪ್ರಾಯಗಳನ್ನೇ ಸತ್ಯವೆಂದು ನಂಬಿ ದೊಡ್ಡ ದೊಡ್ಡ ದುರಂತಗಳಿಗೆ ಎಡೆಮಾಡಿ ಕೊಟ್ಟದ್ದಿದೆ. ಅಥವಾ ತಪ್ಪುಗ್ರಹಿಕೆಯ ಮುಂದುವರಿದದ್ದಿದೆ. ಇರಾಕ್‌ನ ಸದ್ದಾಂ ಹುಸೇನ್ ತೀವ್ರ ದಬ್ಬಾಳಿಕೆ ನಡೆಸಿದ್ದರೂ ಆಡಳಿತ ನಡೆಸುತ್ತ ಹೋದಂತೆಲ್ಲ, ಎಲ್ಲ ಜನರೂ ನನ್ನನ್ನು ಆರಾಧಿಸುತ್ತಾರೆ ಎಂದೇ ತಿಳಿದಿದ್ದ.

ಸzಂಗೆ ಈ ರೀತಿಯ ಪ್ರಿಯ ಸುಳ್ಳು ಅಭಿಪ್ರಾಯಗಳ ಚಟ ಹತ್ತಿ ಬಿಟ್ಟಿತ್ತು. ಯಾವುದೇ ಯೋಜನೆ ಆತನ ತಲೆಗೆ ಬಂದರೂ
ಮೊದಲೆಲ್ಲ ಬೇರೆಯವರ ಅಭಿಪ್ರಾಯ ಕೇಳುತ್ತಿದ್ದ ಸದ್ದಾಂ. ಆತನನ್ನು ಮೆಚ್ಚಿಸಲು ಮತ್ತು ಹೆದರಿಕೆಯಿಂದ ಆತನ ಸುತ್ತಲಿನ ವರೆಲ್ಲ ಮಿಥ್ಯ ಆದ್ಯತೆಯನ್ನು ಆತನೆದುರು ಇಡುತ್ತಿದ್ದರು. ಆತನಿಗೆ ಕ್ರಮೇಣ ಅದು ಯಾವ ಅಭ್ಯಾಸವಾಗಿ ಹೋಯ್ತು. ಆತನ ಯಾವುದೇ ಅಭಿಪ್ರಾಯ ಮತ್ತು ಯೋಜನೆಯಲ್ಲಿ ಒಂದೇ ಒಂದು ಲೋಪವನ್ನು ಯಾರಾದರೂ ಎತ್ತಿ ಹೇಳಿದರೂ ಆತ ಸಹಿಸುತ್ತಿರಲಿಲ್ಲ.

ಒಮ್ಮೆಯಂತೂ ಸಂಸತ್ತಿನಲ್ಲಿ ಒಬ್ಬ ಮಂತ್ರಿ ಆತನ ವಿಚಾರದ ವಿರುದ್ಧ ಅಭಿಪ್ರಾಯ ಹೇಳಿದ್ದಕ್ಕೆ ಅಧಿವೇಶನ ನಡೆಯುವಾಗಲೇ ಮಂತ್ರಿಯನ್ನು ಎಳೆದುಕೊಂಡು ಹೋಗುವಂತೆ ಆದೇಶಿಸಿದ. ಸಂಸತ್ತಿನ ಕಾರಿಡಾರ್‌ನ ಆ ಮಂತ್ರಿಯನ್ನು ಗುಂಡುಹಾರಿಸಿ ಕೊಲ್ಲಲಾಯಿತು. ಆ ಗುಂಡಿನ  ಶಬ್ದ ಅಲ್ಲಿದ್ದ ಉಳಿದ ಮಂತ್ರಿ ಗಳಿಗೂ ಕೇಳಿಸಿತ್ತು. ಇದಾದ ಮೇಲಂತೂ ಯಾರೊಬ್ಬರೂ ಆತನ ಅಭಿಪ್ರಾಯವನ್ನು ಪ್ರಶ್ನಿಸುವುದು ಬಿಡಿ, ಆತನೆದುರು ಬಾಯನ್ನೇ ತೆಗೆಯುತ್ತಿರಲಿಲ್ಲ. ಇದರಿಂದಾಗಿ ಸರ್ವಾಧಿಕಾರಿ ತಪ್ಪು ನಿರ್ಧಾರಗಳನ್ನು ಗೆದುಕೊಳ್ಳುತ್ತ ಹೋದ. ಅದೇ ರೀತಿ ಇನ್ನೊಂದು ಘಟನೆ ನಡೆದದ್ದು ಉತ್ತರ ಕೊರಿಯಾದಲ್ಲಿ.

೨೦೧೩ರಲ್ಲಿ ಅಲ್ಲಿನ ಸರ್ವಾಽಕಾರಿ ಕಿಮ್‌ನ ಮೀಟಿಂಗ್‌ನಲ್ಲಿ ಆತನ ಮಾವನೂ ಇದ್ದ. ಆಪ್ತ ಮಾವ ಕಿಮ್‌ನ ಯಾವುದೋ ಒಂದು ಅಭಿಪ್ರಾಯವನ್ನು ಒಪ್ಪಲಿಲ್ಲ. ಒಂದು ತೀರಾ ಚಿಕ್ಕ ಪ್ರಶ್ನೆ ಕೇಳಿದ. ಹೀಗೆ ಪ್ರಶ್ನಿಸಿದ್ದ , ಮಾತನಾಡಿದ್ದಕ್ಕೆ ಮಾವನನ್ನು ಅಲ್ಲಿಂದಲೇ ಎಳೆದುಕೊಂಡು ಹೋಗಿ ಗುಂಡು ಹೊಡೆಸಿ ಕೊಂದುಬಿಟ್ಟ.

ಈ ರೀತಿಯ ಘಟನೆಗಳು ಸರ್ವಾಧಿಕಾರಿ ರಾಜಕಾರಣದಲ್ಲಿ ಕ್ರೌರ್ಯದಿಂದ ಕೂಡಿರುತ್ತದೆ. ಆದರೆ ಇದು ಅಲ್ಲಿ ಮಾತ್ರ
ಸೀಮಿತ ವಲ್ಲ. ಬಹುತೇಕ ಪ್ರಜಾಪ್ರಭುತ್ವದಲ್ಲಿ ಕೂಡ ಬಹಳಷ್ಟು ಬಾರಿ ನಾಯಕ ಸುತ್ತಲಿನವರ ಮಿಥ್ಯ ಆದ್ಯತೆ ಮತ್ತು ಸುಳ್ಳು
ಅಭಿಪ್ರಾಯಗಳಿಂದಾಗಿ ಸರ್ವಾಧಿಕಾರಿಯಂತೆಯೇ ವರ್ತಿಸಲು ಶುರುಮಾಡಿಕೊಂಡುಬಿಡುತ್ತಾನೆ. ಅಮೆರಿಕಾದ ಅಧ್ಯಕ್ಷ
ಡೊನಾಲ್ಡ ಟ್ರಂಪ್ ಇದಕ್ಕೆ ಅತ್ಯುತ್ತಮ ಉದಾಹರಣೆ.

ಆತನಿಗೆ ಕೂಡ ಯಾವುದೇ ರೀತಿಯ ಭಿನ್ನ ವೈರುಧ್ಯ ಅಭಿಪ್ರಾಯ ಹಿಡಿಸುವುದೇ ಇಲ್ಲ. ಟ್ರಂಪ್ ಅಧ್ಯಕ್ಷರಾಗಿ ಆರಿಸಿ ಬಂದ
ಹೊಸತರ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿದ ಕೆಲ ಉನ್ನತ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಮನೆಗೆ ಕಳಿಸಿದ್ದ. ಈ
ಘಟನೆಯಿಂದಾಗಿ ವೈಟ್ ಹೌಸ್‌ನಲ್ಲಿ ಇರುವವರೆಲ್ಲ ಹೆದರಿ ಮುಂದಿನ ನಾಲ್ಕು ವರ್ಷ ಆತನ ಅಭಿಪ್ರಾಯಗಳನ್ನು ಪ್ರಶ್ನಿಸಲೇ
ಇಲ್ಲ. ಅಲ್ಲಿರುವವರೆಲ್ಲ ಆತನನ್ನು ಒಪ್ಪುವುದು ಮತ್ತು ಹೊಗಳುವುದು ಒಂದೇ ತಮ್ಮ ಉಳಿವಿನ ಮಾರ್ಗ ಎಂದು ಬಹು
ಬೇಗ ಮನಗಂಡರು. ಆತ ಮಾಡಿದ್ದಕ್ಕೆಲ್ಲ ಹೊಗಳುತ್ತಲೇ ಹೋದರು.

ಈ ರೀತಿ ಭಾರತದಲ್ಲಿ ಕೂಡ ಹಲವು ಉದಾಹರಣೆಗಳನ್ನು ನೀವು ನೋಡಬಹುದು. ಇಂದಿನ ಸೋಷಿಯಲ್ ಮೀಡಿಯಾ ಜಮಾನಾದಲ್ಲಿ ಜನಸಾಮಾನ್ಯರಾದ ನಾವು ಕೂಡ ಈ ಮೊದಲು ಹೇಳಿದ ಎಲ್ಲ ಸಾಧ್ಯತೆಗಳಿಗೆ ನಮ್ಮದೇ ಆದ ಮಟ್ಟದಲ್ಲಿ ತೆರೆದು
ಕೊಳ್ಳುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಖಾಸಗಿ ಸತ್ಯಗಳು ಸ್ಕ್ರೀನ್‌ನ ಆಚೆ ಮರೆಯಾಗಿಯೇ ಇರುತ್ತವೆ. ಸಾರ್ವಜನಿಕವಾಗಿ ಬೇರೆಯದೇ ಆದ ಒಂದು ಇಮೇಜ್ ಬಹುತೇಕರ ಮತ್ತು ಬಹುತೇಕ ವಿಚಾರಗಳ ಸುತ್ತ ಸುಲಭದಲ್ಲಿ ಬೆಳೆದಿರುತ್ತದೆ. ನಮ್ಮ -ಟೋ, ಕಾಮೆಂಟ್, ಪ್ರವಾಸ, ವಿಚಾರ, ವಿಡಿಯೋ ಇವೆಲ್ಲವುಗಳ ಬಗ್ಗೆ ಬರುವ ಕಾಮೆಂಟ್ ಗಳು ಒಂದಿಷ್ಟು ತಪ್ಪು ಗ್ರಹಿಕೆ ನಮಗೇ ನಮ್ಮ ಸುತ್ತ ಹುಟ್ಟಿಸಿರುತ್ತವೆ.

Deceiving opinion, preference falsification –  ಸುಳ್ಳು ಅಭಿಪ್ರಾಯಗಳ ಮತ್ತು ಮಿಥ್ಯ ಆದ್ಯತೆಗಳ ಸಾಧ್ಯತೆ ಸೋಷಿಯಲ್ ಮೀಡಿಯಾದಲ್ಲಿ, ಸೋಷಿಯಲ್ ಮೀಡಿಯಾ ಕಾರಣದಿಂದ ಸಾರ್ವಜನಿಕರ ಜೀವನದಲ್ಲಿ ಇಂದು ಬಹಳ ಜಾಸ್ತಿ. ಸೋಷಿಯಲ್ ಮೀಡಿಯಾ ಉಪಯೋಗಿಸುವ ಬಹುತೇಕರಲ್ಲಿ ಸಂತೋಷದ ಜೀವನ ಎಂದರೇನು ಎನ್ನುವ ಬಗ್ಗೆ ತಪ್ಪು ಗ್ರಹಿಕೆ ಬೆಳೆಯುತ್ತ ಸಾಗುತ್ತದೆ.

ನನ್ನ ಜೀವನಕ್ಕಿಂತ ಇನ್ನೊಬ್ಬರ ಜೀವನ ಉತ್ತಮ ಎನ್ನುವ ಅಭಿಪ್ರಾಯ ಕ್ರಮೇಣ ರೂಪುಗೊಳ್ಳುತ್ತಾ ಹೋಗುತ್ತದೆ.
ಇದರಿಂದಾಗಿ ನಮಗರಿವಿಲ್ಲದಂತೆ ಮಿಥ್ಯ ಆದ್ಯತೆಗಳನ್ನು ನಮ್ಮದಾಗಿಸಿಕೊಳ್ಳ ತೊಡಗುತ್ತೇವೆ. ತಿಂಗಳಿಗೊಂದು ಪ್ರವಾಸ,
ಪಾರ್ಟಿ, ಸ್ನೇಹಕೂಟಗಳು ಇದ್ದರೆ ಮಾತ್ರ ಜೀವನ ಪೂರ್ಣ ಎಂದೆಲ್ಲ ಅಂದುಕೊಳ್ಳಲು ಶುರು ಮಾಡುತ್ತೇವೆ. ಇನ್ನೊಬ್ಬರ
-ಟೋಗೆ ಸಿಗುವ ಪ್ರಮಾಣದ ಕಾಮೆಂಟ್‌ಗಳನ್ನು ನಾವೂ ಬಯಸಲು ಶುರು ಮಾಡುತ್ತೇವೆ. ಯಾರೋ ಒಬ್ಬರು
ಹೊಗಳಿದಷ್ಟು ನಮ್ಮನ್ನು ಹೊಗಳಲಿಲ್ಲ ಎಂಬ ವಿಚಾರಕ್ಕೆಲ್ಲ ಖಿನ್ನರಾಗುತ್ತೇವೆ.

ನಮ್ಮ ಫೋಟೋಕ್ಕೆ ಆ ಸಂಖ್ಯೆಯಲ್ಲಿ ಲೈಕ್ ಸಿಗಲಿಲ್ಲ ಎಂದು ಒಳಗೊಳಗೇ ಬೇಸರಿಸಿಕೊಳ್ಳುತ್ತೇವೆ, ಕಾರಣ ಹುಡುಕುತ್ತೇವೆ. ನಮಗರಿವಿಲ್ಲದೆ ನಮ್ಮ ಮೇಲೇ ನಮಗೆ ಸುಳ್ಳು ಅಭಿಪ್ರಾಯಗಳು ಬೆಳೆದು ಬಿಡುತ್ತದೆ. ಸಿಕ್ಕ ಹೊಗಳಿಕೆ ಗಳಿಗೆ ಮತ್ತು ಲೈಕ್‌ಗಳಿಗೆ ಅವಶ್ಯಕತೆಗಿಂತ ಜಾಸ್ತಿ ಉಬ್ಬಿ ಹೋಗುತ್ತೇವೆ. ಇದೆಲ್ಲದರ ಜತೆ ಇನ್ನೊಬ್ಬರ ಜೀವನದ ಜತೆ ಹೋಲಿಕೆ ಮಾಡಿ ನಮಗೆ ಅವಶ್ಯಕತೆ ಮತ್ತು ಇಷ್ಟವಿಲ್ಲದ ಮಿಥ್ಯ ಆದ್ಯತೆಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ.