Friday, 18th October 2024

ರಾಜಾಹುಲಿ ವರ್ಸಸ್ ಹುಲಿಯಾ ರಾಜಕಾರಣ

ವರ್ತಮಾನ

maapala@gmail.com

ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಈಗಾಗಲೇ ಅಖಾಡಾ ಸಿದ್ಧವಾಗುತ್ತಿದೆ. ಒಂದೆಡೆ ರಾಹುಲ್ ಗಾಂಧಿ ನೇತೃತ್ವ ದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಮತ್ತೊಂದೆಡೆ ಬಿಜೆಪಿ ರಾಜ್ಯ ನಾಯಕರ ಸಂಕಲ್ಪ ಯಾತ್ರೆ, ರಾಜ್ಯ ಪ್ರವಾಸ ಮುಂದುವರಿದಿದೆ.

ಅವರ ನಡುವಿನ ವಾಕ್ಸಮರ, ಜಿದ್ದಾಜಿದ್ದಿ, ಆರೋಪ-ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ಇದೆಯೇನೋ ಎಂಬ ವಾತಾವರಣ ನಿರ್ಮಾಣ ವಾಗುತ್ತಿದೆ. ಇದೆಲ್ಲದರ ಮಧ್ಯೆ ಹೆಚ್ಚು ಸುದ್ದಿಯಾಗುತ್ತಿರು ವವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿ ಯೂರಪ್ಪ ಮತ್ತು ಸಿದ್ದರಾಮಯ್ಯ. ಹೌದು, ರಾಜ್ಯ ರಾಜಕಾರಣದಲ್ಲಿ ‘ರಾಜಾ ಹುಲಿ’ (ಬಿ.ಎಸ್.ಯಡಿಯೂರಪ್ಪ) ಮತ್ತು ‘ಹುಲಿಯಾ’ (ಸಿದ್ದರಾಮಯ್ಯ) ಇಂದಿಗೂ ರಾಜ್ಯ ರಾಜಕಾರಣದ ‘ಮಾಸ್ ಲೀಡರ್’ಗಳು ಎಂಬುದು ಈ ಯಾತ್ರೆಗಳಲ್ಲಿ ಮತ್ತೊಮ್ಮೆ ಸ್ಪಷ್ಟವಾಗಿದೆ.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದರೂ ಜನಾಕರ್ಷಣೆ ಹೆಚ್ಚಾಗಿರುವುದು ಸಿದ್ದರಾಮಯ್ಯ ಅವರತ್ತ. ಅದೇ ರೀತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಪ್ರವಾಸ ಕೈಗೊಂಡಿದ್ದರೂ ಅಲ್ಲಿ ಕೇಂದ್ರ ಬಿಂದುವಾಗಿರುವುದು ಬಿ.ಎಸ್.ಯಡಿಯೂರಪ್ಪ.

ಅವರಿಗೆ ಬೀಳುತ್ತಿರುವ ಶಿಳ್ಳೆ, ಚಪ್ಪಾಳೆಗಳು ಬೇರಾವ ನಾಯಕರಿಗೂ ಸಿಗುತ್ತಿಲ್ಲ. ಈ ಇಬ್ಬರು ನಾಯಕರಿಗೆ ಸಿಗುತ್ತಿರುವ
ಜನಬೆಂಬಲ ಗಮನಿಸಿದರೆ, ಅವರಿಬ್ಬರು ಇಲ್ಲದಿದ್ದರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂಬ ವಾತಾವರಣವಿದೆ.
ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ, ಬೆಳೆಸಿ ಅಧಿಕಾರಕ್ಕೆ ತಂದವರು.

ವೀರಶೈವ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದು ಕರೆಸಿಕೊಳ್ಳುವ ಮುನ್ನವೇ ಅವರು ತಮ್ಮ ಹೋರಾಟಗಳ ಮೂಲಕ ಸಮುದಾಯದ ನಾಯಕರಾಗಿ ಬೆಳೆದವರು. ಅಧಿಕಾರದಲ್ಲಿದ್ದಾಗಲೂ ಎಲ್ಲಾ ಸಮುದಾಯಗಳನ್ನು ಸಮನಾಗಿ ಪರಿಗಣಿಸಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದವರು. ಹೀಗಾಗಿ ಅಧಿಕಾರ ಕಳೆದುಕೊಂಡ ಮೇಲೂ ಅವರ ಜನಪ್ರಿಯತೆ ಕಡಿಮೆಯಾಗಲಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವಂತೆ ನೋಡಿಕೊಂಡು, 2019ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ನೋಡಿಕೊಂಡರು. 2020ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.

ಮತ್ತೆ ಬಿಜೆಪಿಯಲ್ಲಿ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದ್ದರೂ ಅವರ ಜನಪ್ರಿಯತೆ ಕುಗ್ಗಿಲ್ಲ ಎಂಬುದಕ್ಕೆ ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಸಮಾವೇಶಗಳೇ ಸಾಕ್ಷಿ. ಅಧಿಕಾರ ಇಲ್ಲದಿದ್ದರೂ, ಸಿಗದಿದ್ದರೂ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕತ್ವ ಇನ್ನೂ ಸೃಷ್ಟಿಯಾಗಿಲ್ಲ. ಸದ್ಯಕ್ಕೆ ಆಗುವ ಸಾಧ್ಯತೆಗಳೂ ಇಲ್ಲ
ಎಂಬುದು ಸ್ಪಷ್ಟವಾಗಿದೆ.

ಅದೇ ರೀತಿ ಜನತಾ ಪರಿವಾರದ ಮೂಲಕ ಕಾಂಗ್ರೆಸ್ ವಿರುದ್ಧ ಹೋರಾಡುತ್ತಲೇ ನಾಯಕರಾಗಿ ಹೊರಹೊಮ್ಮಿದ
ಸಿದ್ದರಾಮಯ್ಯ ಅಧಿಕಾರ ಸಿಕ್ಕಿದಾಗ ಹಣಕಾಸು ಸಚಿವರಾಗಿ ಮಂಡಿಸಿದ ಬಜೆಟ್‌ಗಳಲ್ಲಿ ನೀಡಿದ ಕಾರ್ಯಕ್ರಮಗಳ ಮೂಲಕ ಜನನಾಯಕರಾದವರು. ನಂತರ ಜೆಡಿಎಸ್‌ನಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಿಂದ ಬೇಸತ್ತು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ತಿರುಗಿ ಬಿದ್ದು ಕಾಂಗ್ರೆಸ್ ಸೇರಿದವರು. ಅಷ್ಟರಲ್ಲಾಗಲೇ ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಸಮಾವೇಶದ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಹೀಗಾಗಿ ಕಾಂಗ್ರೆಸ್ ಸೇರುತ್ತಿದ್ದಂತೆ ಅವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾದರು. ಅಷ್ಟು ಮಾತ್ರವಲ್ಲ, 2013ರಲ್ಲಿ
ರಾಜ್ಯದ ಮುಖ್ಯಮಂತ್ರಿಯೂ ಆದರು. ಆದರೆ, ತಮ್ಮ ಆಡಳಿತದ ಅವಽಯಲ್ಲಿ ಹಿಂದೂ ವಿರೋಧಿ, ಮೇಲ್ವರ್ಗದವರ ವಿರೋಧಿ ಎಂಬ ಆರೋಪದಿಂದ ಅಧಿಕಾರ ಕಳೆದುಕೊಳ್ಳುವಂತಾಯಿತು. ಆದರೆ, ಅವರು ಈಗಲೂ ಕಾಂಗ್ರೆಸ್ ನಲ್ಲಿ ಅಹಿಂದ ನಾಯಕರಾಗಿಯೇ ಉಳಿದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೂ ಅವರೇ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ, ಅದೂ ರಾಹುಲ್ ಗಾಂಧಿ ಸಮ್ಮುಖದಲ್ಲೇ ಸಾಬೀತಾಗಿದೆ.

2019ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದಾಗ ಬಿಜೆಪಿ ವರಿಷ್ಠರ ತಲೆಯಲ್ಲಿದ್ದ ಪ್ರಮುಖ ಯೋಚನೆಗಳಲ್ಲಿ, ರಾಜ್ಯದಲ್ಲಿ ಬಿಜೆಪಿಯನ್ನು ಅವರ ಹಿಡಿತದಿಂದ ಹೊರತರಬೇಕು ಎಂಬುದೂ ಒಂದಾಗಿತ್ತು. ಈ ನಿಟ್ಟಿನಲ್ಲಿ ಒಂದು ವರ್ಷ ಪ್ರಯತ್ನ ನಡೆಯಿತಾದರೂ ಅದು ಸಾಧ್ಯವಾಗಲಿಲ್ಲ. ಬದಲಾಗಿ ಪಕ್ಷ ಹಿನ್ನಡೆ ಅನುಭವಿಸುವ ವಾತಾವರಣ ಸೃಷ್ಟಿಯಾಯಿತು. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ವೀರಶೈವ ಲಿಂಗಾಯತರು ಮಾತ್ರವಲ್ಲದೆ, ಇತರೆ ಸಮುದಾಯಗಳೂ ಪಕ್ಷದಿಂದ ದೂರವಾಗುವ ಮುನ್ಸೂಚನೆ ಸಿಕ್ಕಿತ್ತು.

ಏಕೆಂದರೆ, ರಾಜ್ಯದ ಜನ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಒಪ್ಪಿಕೊಳ್ಳುತ್ತಾರಾದರೂ ಅದು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ. ವಿಧಾನಸಭೆ ಚುನಾವಣೆ ವಿಚಾರ ಬಂದಾಗ ಸ್ಥಳೀಯ ನಾಯಕತ್ವವೇ ಮುಖ್ಯವಾಗುತ್ತದೆ ಎಂಬುದು ವರಿಷ್ಠರಿಗೆ ಅರಿವಾಯಿತು. ಈ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಅವರಿಗೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯ ಸ್ಥಾನ ನೀಡಲಾಯಿತು.

ಇದರಿಂದಾಗಿ ಅಧಿಕಾರದಿಂದ ಕೆಳಗಿಳಿದ ಮೇಲೆ ಸ್ವಲ್ಪ ಹಿಂದೆ ಸರಿದಿದ್ದ ಎಂಬುದಕ್ಕಿಂತ ರಾಜ್ಯ ನಾಯಕರಿಂದ ಹಿಂದೆ
ಸರಿಸಲಾಗಿದ್ದ ಯಡಿಯೂರಪ್ಪ ಮತ್ತೆ ಮುನ್ನಲೆಗೆ ಬಂದರು. ಅದರ ಜತೆಗೆ ರಾಜ್ಯ ಬಿಜೆಪಿಯಲ್ಲಿ ಲವಲವಿಕೆಯ ವಾತಾವರಣ ಕಾಣಿಸಿಕೊಂಡಿತು. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವುದಿಲ್ಲ ಎಂಬಂತಿದ್ದ ವಾತಾವರಣ ಇದೀಗ ಬದಲಾಗಿದೆ. ಇನ್ನಷ್ಟು ಶ್ರಮ ವಹಿಸಿದರೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸ ಮೂಡಿದೆ.

ಏಕೆಂದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಂಸದೀಯ ಮಂಡಳಿ ತೀರ್ಮಾನವೇ ಅಂತಿಮವಾಗಿರುತ್ತದೆ. ಅಲ್ಲಿ ಯಡಿಯೂರಪ್ಪ ಅವರೂ ಇರುವುದರಿಂದ ಮತ್ತು ಅವರಿಗೆ ಪಕ್ಷದ ಬಗ್ಗೆ ಸಂಪೂರ್ಣ ಅರಿವಿರುವು ದರಿಂದ ಅಭ್ಯರ್ಥಿಗಳ ನೇಮಕದಲ್ಲಿ ಬಿಜೆಪಿ ತಪ್ಪು ಹೆಜ್ಜೆ ಇಡುವ ಸಾಧ್ಯತೆ ಕಡಿಮೆ. ಜತೆಗೆ ತಮ್ಮ ನೇತೃತ್ವದ ಸಮಿತಿಯೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರಿಂದ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ಯಡಿಯೂರಪ್ಪ ಮೇಲಿರುತ್ತದೆ. ಅವರು ಪೂರ್ಣ ಪ್ರಮಾಣದಲ್ಲಿ ಅಖಾಡಾಕ್ಕಿಳಿದರೆ ಪ್ರತಿಪಕ್ಷಗಳಿಗೆ ಎದುರಿಸುವುದು ಕಷ್ಟ.

ಪಕ್ಷದ ರಾಜ್ಯ ಘಟಕ ವರಿಷ್ಠರು ಹಾಕಿದ ಗೆರೆ ದಾಟದೇ ಇರುವುದರಿಂದ ಸದ್ಯಕ್ಕೆ ಯಡಿಯೂರಪ್ಪ ಮುಂಚೂಣಿ ನಾಯಕ ರಾಗಿಯೇ ಮುಂದುವರಿಯುವುದು ಸ್ಪಷ್ಟವಾಗುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಪರಿಸ್ಥಿತಿ ಅದಕ್ಕಿಂತ ಭಿನ್ನ. ಅವರು ಕಾಂಗ್ರೆಸ್ ಪ್ರವೇಶಿಸಿದ್ದೇ ನಾಯಕರಾಗಿ ಮತ್ತು ಈಗಲೂ ಅದೇ ನಾಯಕತ್ವ ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಯಾಗಿದ್ದಾಗ ಹಿಂದೂ ವಿರೋಧಿ, ಮೇಲ್ವರ್ಗದವರ ವಿರೋಧಿ ಎಂಬ ಆರೋಪ ಬಂದಿದ್ದು ಬಿಟ್ಟರೆ, ಅವರು ಕೊಟ್ಟ ಕಾರ್ಯ ಕ್ರಮಗಳು, ವಿವಿಧ ಭಾಗ್ಯಗಳು ಈಗಲೂ ಜನಮಾನಸದಲ್ಲಿದೆ.

ಏನೇ ಆಗಲಿ, ನಾವು ಸಿದ್ದರಾಮಯ್ಯ ಪರ ಎನ್ನುವ, ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಂಹಿದ ವರ್ಗ ಅವರೊಂದಿಗಿದೆ. ಇದಕ್ಕೆ ಇತ್ತೀಚೆಗೆ ನಡೆದ ಸಿದ್ದರಾಮೋತ್ಸವವೇ ಸಾಕ್ಷಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರೂಪಿಸಿದ್ದ ಮೇಕೆದಾಟು ಹೋರಾಟವನ್ನು ಈ ಸಿದ್ದರಾಮೋತ್ಸವ ನುಂಗಿಹಾಕಿತ್ತು. ಈಗಲೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದರೆ ಬಹುತೇಕರು ಹೇಳುವುದು ಸಿದ್ದರಾಮಯ್ಯ ಅವರ ಹೆಸರು.

ಅಷ್ಟರ ಮಟ್ಟಿಗೆ ಅವರು ಪಕ್ಷದಲ್ಲಿ ‘ಮಾಸ್ ಲೀಡರ್’ ಆಗಿಯೇ ಉಳಿದುಕೊಂಡಿದ್ದಾರೆ. ಒಂದೊಮ್ಮೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಕಾಂಗ್ರೆಸ್ ಚುನಾವಣೆಗೆ ಹೋದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಮಾತು ಆ ಪಕ್ಷದಲ್ಲೇ ಕೇಳಿಬರುತ್ತಿದೆ. ಆದರೆ, ಅದಕ್ಕೆ ಅಡ್ಡಿಯಾಗಿರುವುದು ಎರಡು ನಾಯಕರ ನಡುವಿನ ಆಂತರಿಕ ಸಂಘರ್ಷ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ.

ಹೀಗಾಗಿ ಈ ಸ್ಥಾನಕ್ಕಾಗಿ ಇಬ್ಬರ ಮಧ್ಯೆ ಸ್ಪರ್ಧೆ ಇದೆ. ಆಗಾಗ ಇಬ್ಬರ ಬೆಂಬಲಿಗರು ಇಬ್ಬರ ಮಧ್ಯೆ ಬೆಂಕಿ ಹಚ್ಚುವ ಪ್ರಯತ್ನ
ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಇಬ್ಬರೂ ಒಗ್ಗಟ್ಟಾಗಿರುವಂತೆ ಕಾಣಿಸಿಕೊಳ್ಳುತ್ತಿದ್ದರೂ ಆಂತರಿಕವಾಗಿ ಒಬ್ಬರ ವಿರುದ್ಧ
ಇನ್ನೊಬ್ಬರು ಕತ್ತಿ ಮಸಿಯುತ್ತಲೇ ಇದ್ದಾರೆ. ಪದೇ ಪದೆ ಇದು ಬಹಿರಂಗವಾಗುತ್ತಲೂ ಇದೆ. ಈ ಅಂಶವೇ ಕಾಂಗ್ರೆಸ್‌ಗೆ
ಮುಳುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಂತು ಚುನಾವಣೆ ಎದುರಿಸಿದರೆ 2023ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಹೆಚ್ಚು ರಂಗು ಬರುವುದಂತೂ ಖಚಿತ.

ಲಾಸ್ಟ್ ಸಿಪ್: ರಾಜಕೀಯ ನಾಯಕತ್ವ ಎನ್ನುವುದು ಹೋರಾಟದಿಂದ ಬರುತ್ತದೆಯೇ ಹೊರತು ಹುಟ್ಟಿನಿಂದಲ್ಲ.