Saturday, 30th November 2024

ರಾಜಕೀಯ, ಧಾರ್ಮಿಕ ಸಂಬಂಧ ಸಮಾಜಮುಖಿಯಾಗಲಿ

ಅಭಿಪ್ರಾಯ

ವಿನಾಯಕ ಓಣಿವಿಘ್ನೇಶ್ವರ

ಭಾರತದ ಸಂಸ್ಕೃತಿಯೇ ವಿಶಿಷ್ಟ. ಇಲ್ಲಿನ ವಿವಿಧತೆಯಲ್ಲಿ ಏಕತೆ ಅನ್ನುವ ಮೂಲ ಮಂತ್ರ ಸದಾ ಎಲ್ಲರಲ್ಲೂ ಜಾಗೃತವಾಗಿರಬೇಕೆಂದು ಬಯಸುತ್ತಾರೆ. ಅದು ಎಷ್ಟರ ಮಟ್ಟಿಗೆ ಸತ್ಯವೊ ಅಷ್ಟೇ ವಿವಾದಾತ್ಮಕವೂ ಹೌದು. ಇಲ್ಲಿನ ಮೂಲ ಸಾಂಸ್ಕೃತಿಕ ರಚನೆಯಿರುವುದು ವಿವಿಧ ಜಾತಿಗಳು ಎನ್ನುವ ವಿವಿಧತೆಯ ಮೇಲೆ. ಇಲ್ಲಿನ ರಾಜಕೀಯ, ಆಡಳಿತ ವ್ಯವಸ್ಥೆ, ಚುನಾವಣಾ ಚಟುವಟಿಕೆಗಳೂ ಈ ಜಾತಿಯ ಆಧಾರದ ಮೇಲೆ ಆಗುತ್ತಿರುವುದು ಒಂಥರದ ಓಪನ್ ಸೀಕ್ರೆಟ್.

ಭಾರತದ ಇತಿಹಾಸವನ್ನು ಅವಲೋಕಿಸಿದಾಗ, ರಾಜ ಮಹಾರಾಜರುಗಳ ಕಾಲದಿಂದಲೂ ಧಾರ್ಮಿಕ ಸಂಸ್ಥೆ, ಗುರುಗಳು, ಸ್ವಾಮಿಗಳು ರಾಜಾಶ್ರಯ ವನ್ನು ಪಡೆದಿದ್ದು ಕಾಣಸಿಗುತ್ತದೆ. ಆದರೆ, ಹಿಂದಿನ ಕಾಲದಲ್ಲಿ ಧಾರ್ಮಿಕ ವ್ಯವಸ್ಥೆ ಮತ್ತು ಜಾತಿಯಾಧಾರಿತ ಸ್ವಾಮಿಗಳೋ, ಗುರುಗಳೋ ಮುಂತಾ ದವರ ನೇರವಾದ ಹಸ್ತಕ್ಷೇಪ ಆಡಳಿತದಲ್ಲಿ ಕಡಿಮೆಯಿತ್ತು. ರಾಜರುಗಳ ನೈತಿಕ ಬದುಕು, ಸಾಮಾಜಿಕವಾದ ತುಡಿತದತ್ತ ಲಕ್ಷ್ಯದ ಬಗ್ಗೆ ಹೆಚ್ಚಿನ ಮಾರ್ಗದರ್ಶನ ಈ ಧಾರ್ಮಿಕ ವ್ಯಕ್ತಿಗಳಿಂದ ಆಗುತ್ತಿತ್ತು.

ಅದು ಒಂದರ್ಥದಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನೇ ಕೊಡುತ್ತಿತ್ತು. ವಿವಿಧತೆಯಲ್ಲಿ ಏಕತೆಯನ್ನು ತರಲು ಅಂತಹ ಮಾರ್ಗದರ್ಶನ ಅವಶ್ಯಕವಾಗಿತ್ತು. ಆದರೆ ಇಂದಿನ ಕೆಲವು ಧರ್ಮ ಗುರುಗಳು ನೇರವಾಗಿ ರಾಜಕೀಯಕ್ಕೆ ಇಳಿದಿದ್ದು, ನೇರವಾಗಿ ತಮ್ಮ ಜಾತಿ ಆಧಾರಿತ ಬೇಡಿಕೆಗಳನ್ನು
ಇಡುತ್ತಿರುವುದು ಧಾರ್ಮಿಕ ವ್ಯಕ್ತಿಗಳ ಮೂಲ ಆಶಯಕ್ಕೆ ಧಕ್ಕೆ ತರುವ ವಿಚಾರವಾ ಅನ್ನುವ ಸಂಶಯ ಕಾಡುತ್ತದೆ.

ಇತ್ತೀಚೆಗೆ ಧಾರ್ಮಿಕ ಗುರುಗಳೊಬ್ಬರು ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದೂ, ಸಿದ್ದರಾಮಯ್ಯ ಅವರು ಅದಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಾರ್ವಜನಿಕ ವೇದಿಕೆಯಲ್ಲಿಯೇ ಹೇಳಿಬಿಟ್ಟರು. ಅವರ ಆ ಹೇಳಿಕೆಯ ಪರಿಣಾಮ ತಕ್ಷಣವೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಬಿಡುತ್ತಾರೆ ಎಂದೇನಿಲ್ಲ. ಸರ್ವಸಂಗ ಪರಿತ್ಯಾಗಿಯೂ, ಪ್ರಾಪಂಚಿಕವಾದ ಯಾವುದೇ ಆಸೆಗಳನ್ನು ಹೊಂದಿರದ ಒಬ್ಬ ಸ್ವಾಮಿ, ಸನ್ಯಾಸಿ ತನ್ನ ಜಾತಿಯ ಬಗ್ಗೆ ಮಾತ್ರ ಚಿಂತನೆ ನಡೆಸುವುದು ಸರಿಯೇ ಎನ್ನುವ ಜಿeಸೆ ಬರುವುದಿಲ್ಲವೇ.

ಎಲ್ಲರನ್ನೂ  ಸಮ ಭಾವದಿಂದ ಕಂಡು, ಸರ್ವರ ಏಳಿಗೆಯನ್ನೂ ಬಯಸಬೇಕಾಗಿದ್ದ ಸ್ವಾಮೀಜಿ ಕೇವಲ ತಮ್ಮ ಜಾತಿ ಅನ್ನುವ ಕಾರಣಕ್ಕೆ ಇಂಥ
ರಾಜಕೀಯ ಹೇಳಿಕೆಗಳನ್ನು ನೀಡುವುದು ಸರಿಯೇ ಎನ್ನುವ ಪ್ರಶ್ನೆ ಏಳುವುದಿಲ್ಲವೇ. ತಮ್ಮ ಜಾತಿಯವ ಮುಖ್ಯ ಮಂತ್ರಿ ಆದರೆ ತಮ್ಮ ಜಾತಿಗೆ ಹೆಚ್ಚು ಅನುಕೂಲ ಆಗುತ್ತದೆ ಅನ್ನುವ ಭಾವ ಅವರಲ್ಲಿ ಇದ್ದಾರೆ, ಅದು ಸಂಕುಚಿತ ಮನೋಭಾವ ಎಂದೆನಿಸಿಕೊಳ್ಳುವುದಿಲ್ಲವೇ? ಸ್ವಾಮಿಗಳು, ಮಠಾಧೀಶರು ಗಳು ಸರಕಾರಕ್ಕೆ ಸಲಹೆ ನೀಡುವುದು, ಸರಿ ದಾರಿಯನ್ನು ತೋರುವುದು ತಪ್ಪು ಎಂದೇನಿಲ್ಲ. ಆದರೆ ಅದು, ಕೇವಲ ತಮ್ಮ ಜಾತಿ ಆಧಾರಿತ ಆಗಿರಬಾರದು. ಅದರಲ್ಲೂ, ಕೆಲವು ಪಕ್ಷಗಳು ತಮ್ಮ ಮತ ಬ್ಯಾಂಕಿಗೋಸ್ಕರ, ಹಿಂದೂ ಧರ್ಮವನ್ನು ವಿರೋಧಿಸುತ್ತಾ, ಒಂದು ಕೋಮನ್ನು ವಿಪರೀತವಾದ ತುಷ್ಟೀ ಕರಣ ಮಾಡುತ್ತಿರುವ ಈ ಸಂದರ್ಭದಲ್ಲಿ ಮಠಾಧೀಶರುಗಳು ಜಾತಿಯ ಸಂಕೋಲೆಯಿಂದ ಹೊರ ಬಂದು ಹಿಂದೂ ಧರ್ಮದ ಒಗ್ಗಟ್ಟಿನ ಬಗ್ಗೆ ಮಾತಾಡುವ ಅವಶ್ಯಕತೆ ಕಂಡು ಬರುತ್ತಿದೆ.

ತಮ್ಮ ಜಾತಿಯವ ಮಂತ್ರಿಯಾಗಲಿ, ತಮ್ಮ ಜಾತಿಯವ ಮುಖ್ಯಮಂತ್ರಿಯಾಗಲಿ ಎನ್ನುವ ಚಿಂತನೆ ಬಿಟ್ಟು, ಆಡಳಿತ ಪಕ್ಷ ಹಿಂದೂ ಧರ್ಮಕ್ಕೂ
ಒಳ್ಳೆಯದನ್ನು ಮಾಡಲಿ ಅನ್ನುವ ಆಶಯದೆಡೆಗೆ ಮಾತಾಡುವುದು ಈಗಿನ ಸದ್ಯದ ಅವಶ್ಯಕತೆ ಇದೆ. ಸರ್ವೇ ಜನಾಃ ಸುಖಿನೋ ಭವಂತು ಅನ್ನುವುದು ಹಿಂದೂ ಧರ್ಮದ ಆಶಯ. ಅದರಲ್ಲಿ ಯಾವುದೇ ಜಾತಿಯ, ಕೋಮಿನ ಭಾವನೆ ಅಡಗಿಲ್ಲ. ಮಠಾಧೀಶರಿಂದ ಸರಕಾರಕ್ಕೆ, ರಾಜಕೀಯ ವ್ಯವಸ್ಥೆಗೆ ಕೊಡಲ್ಪಡಬೇಕು.

ಭಾರತೀಯ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಎತ್ತರಿಸುವ ಕಾರ್ಯಕ್ರಮಗಳನ್ನು ಮಾಡುವಂತೆ ಮಠಾಧೀಶರು ಸರ್ಕಾರಕ್ಕೆ ಒತ್ತಡ ತರಬೇಕು. ರಾಜಕೀಯ ಮತ್ತು ಸರ್ಕಾರದ ವ್ಯವಸ್ಥೆಗಳು ಇಂಥ ವಿಚಾರಗಳನ್ನು ಪುರಸ್ಕರಿಸಲೂ ಬೇಕು. ಅಗ ಧಾರ್ಮಿಕ ಸಂಸ್ಥೆ ಮತ್ತು ವ್ಯಕ್ತಿಗಳು ನಿಜವಾದ ಸಾಮಾಜಿಕ ನ್ಯಾಯದತ್ತ ಸರ್ಕಾರವನ್ನು ಸೆಳೆಯುವ ಕೆಲಸ ಮಾಡಿದಂತೆ ಆಗುತ್ತದೆ. ಈ ದಾರಿಯಲ್ಲಿ ಸಾಗಿದಾಗ ಮಾತ್ರ, ರಾಜಕೀಯ-ಧಾರ್ಮಿಕ ಹಿನ್ನೆಲೆಗಳು ನಿಜವಾದ ಸಾಮಾಜಿಕ ಸ್ವಾಸ್ಥ್ಯಕ್ಕೆ ಕಾರಣ. ಅದಿಲ್ಲದಿದ್ದಲ್ಲಿ, ಇಂಥ ಹೇಳಿಕೆಗಳು ಹಿಂದೂ ಸಮಾಜವನ್ನು ಮತ್ತೂ ಒಡೆಯುವಂತೆ ಮಾಡುತ್ತವೆ ಅಷ್ಟೇ.