ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ranjith.hoskere@gmail.com
ರಾಜ್ಯದಲ್ಲಿ ಮತ್ತೊಮ್ಮೆ ಮೀಸಲು ಕೂಗನ್ನು ಮುಂದಿಟ್ಟುಕೊಂಡು ಮತ್ತೊಂದು ಹೋರಾಟ ಶುರುವಾಗಿದೆ. ಕೂಡಲಸಂಗಮದ
ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮತ್ತೊಮ್ಮೆ ಧರಣಿ ಆರಂಭವಾಗಿದೆ.
ಆಡಳಿತದಲ್ಲಿವವರೂ, ‘ಮೀಸಲು ನೀಡುವುದು ಖಚಿತ’ ಎನ್ನುವ ಭರವಸೆಯ ಮಾತುಗಳನ್ನು ಆಡುತ್ತಿದ್ದಾರೆ. ಆದರೆ, ಪಂಚಮಸಾಲಿ ಸಮುದಾಯವನ್ನು 2ಎ ಒಳಗೆ ತರುವುದು ಸುಲಭದ ಮಾತಲ್ಲ ಎನ್ನುವುದು ಸ್ಪಷ್ಟ. ರಾಜ್ಯದಲ್ಲಿ ಈ ರೀತಿ ಮೀಸಲು ನೀಡಬೇಕು. ಮೀಸಲು ಏರಿಸಬೇಕು ಎನ್ನುವ ವಾದ ಬಂದಿರುವುದು ಇದೇ ಮೊದಲಲ್ಲ. ಇದೇ ಕೊನೆಯೂ ಅಲ್ಲ. ವರ್ಷಕ್ಕೆ ಎರಡು ಬಾರಿ ಈ ರೀತಿಯ ಮೀಸಲು ಆಗ್ರಹಗಳು ಬರುತ್ತವೆ.
ದೊಡ್ಡ ದೊಡ್ಡ ಸಮುದಾಯಗಳಿಂದ ಈ ರೀತಿಯ ಕೂಗು ಕೇಳಿಬಂದಾಗ, ಸರಕಾರ ಗಳು ‘ಶೀಘ್ರದಲ್ಲಿಯೇ ಮೀಸಲು ನೀಡುವ ಸಂಬಂಧ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇವೆ’ ಎನ್ನುವ ಮಾತನ್ನು ಹೇಳಿ ಮುಂದಕ್ಕೆ ತಳ್ಳುತ್ತವೆ. ಆದರೆ ಸಾಮಾಜಿಕ ವಾಗಿ, ಕಾನೂನಾತ್ಮಕವಾಗಿ ಈ ರೀತಿ ಮೀಸಲು ಹೆಚ್ಚಿಸಲು ಸಾಧ್ಯವೇ ಇಲ್ಲ ಎನ್ನುವು ದನ್ನು ಅರ್ಥ ಮಾಡಿಕೊಳ್ಳುವಲ್ಲಿ ಬಹುತೇಕ ಮುಂದಾಗುತ್ತಿಲ್ಲ.
ಸಾಮಾಜಿಕವಾಗಿ ಆಗುವ ಸವಾಲಿಗಿಂತ ಮೊದಲು ಕಾನೂನಾತ್ಮಕವಾಗಿರುವ ಸಮಸ್ಯೆಯನ್ನು ನೋಡಬೇಕಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಶೇ.50ಕ್ಕಿಂತ ಹೆಚ್ಚು ಮೀಸಲನ್ನು ಯಾವ ರಾಜ್ಯಗಳಲ್ಲಿಯೂ ನೀಡುವಂತಿಲ್ಲ ಎನ್ನುವ ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಒಂದು ವೇಳೆ ಈ ಪ್ರಮಾಣ ಹೆಚ್ಚಾದರೆ, ಅದನ್ನು ಅಸಿಂಧುಗೊಳಿಸಿದೆ. ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲು ನೀಡಲು ಠಾಕ್ರೆ ಸರಕಾರ ಮುಂದಾದ ಸಮಯದಲ್ಲಿ, ಆ ಕಾನೂನನ್ನೇ ಅಸಿಂಧುಗೊಳಿಸಿ ಶೇ.50ಕ್ಕಿಂತ ಹೆಚ್ಚು ಮೀಸಲು ನೀಡುವಂತಿಲ್ಲ ಎಂದು ಹೇಳಿದೆ.
ತಮಿಳುನಾಡಿನಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಿದೆ. ಆದರೆ, ಅದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಕೇಂದ್ರ ಸರಕಾರದಿಂದಲೇ ಒಪ್ಪಿಗೆ ನೀಡಲಾಗಿದೆ. ಆ ರೀತಿ ಮಾಡುವುದು ಸುಲಭದ ಮಾತಲ್ಲ. ಕರ್ನಾಟಕದಲ್ಲಿ ಹಾಲಿ ಶೇ.೫೦ರಷ್ಟಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಕ್ಕೆ ಶೇ.3, ಕ್ಯಾಟಗರಿ 1ಗೆ ಶೇ.4, 2ಎಗೆ ಶೇ.15, 2ಬಿಗೆ ನಾಲ್ಕು, 3ಎಗೆ ನಾಲ್ಕು ಹಾಗೂ 3ಬಿಗೆ ಶೇ.5ರಷ್ಟು ಮೀಸಲು ನೀಡುವ ಮೂಲಕ ಮೀಸಲು ಕೋಟಾ ಖಾಲಿಯಾಗಿದೆ. ಆದರೆ ಪರಿಶಿಷ್ಟ ಜಾತಿ ಹಾಗೂ ಪಂಗಡವರು ತಮಗಿರುವ ಮೀಸಲನ್ನು ಹೆಚ್ಚಿಸಬೇಕು ಎಂದು ಈಗಾಗಲೇ ಸರಕಾರದ ಮೇಲೆ ಒತ್ತಡವನ್ನು ಹೇರುತ್ತಿದ್ದು, ಪರಿಶಿಷ್ಟ ಪಂಗಡದವರು ತಮ್ಮ ಮೀಸಲನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಇಟ್ಟಿದೆ.
ಇದಕ್ಕೆ ಪೂರಕವಾಗಿ ನಾಗಮೋಹನ ದಾಸ್ ಅವರ ನೇತೃತ್ವದ ಸಮಿತಿಯೂ ಮೀಸಲನ್ನು ಹೆಚ್ಚಿಸಬೇಕು ಎಂದು ಈಗಾಗಲೇ ಶಿಫಾರಸು ಮಾಡಿದೆ. ಇದರೊಂದಿಗೆ ಕುರುಬ ಸಮುದಾಯದವರು, ತಮ್ಮನ್ನು ಎಸ್‌ಟಿ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದ್ದು, ತಳವಾರ ಸಮುದಾಯವನ್ನು ಈಗಾಗಲೇ ಎಸ್‌ಟಿಗೆ ಸೇರಿಸಲಾಗಿದೆ. ಆದ್ದರಿಂದ ಇನ್ನು ಯಾವುದೇ ಒಂದು ಸಮುದಾಯವನ್ನು ಮೀಸಲಿಗೊಳಗೆ ತಂದರೂ, ಮೀಸಲು ಪ್ರಮಾಣ ಶೇ.50ನ್ನು ಮೀರಲಿದೆ.
ಕರ್ನಾಟಕದಲ್ಲಿ ಶೇ.50ಕ್ಕಿಂತ ಹೆಚ್ಚಿನ ಮೀಸಲನ್ನು ನೀಡಬೇಕು ಎನ್ನುವ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು,
ಅದಕ್ಕೆ ಬೇಕಿರುವ ಅಗತ್ಯ ಕಾನೂನನ್ನು ತರಲು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆಯಾದರೂ, ಅದು ಸುಲಭಕ್ಕೆ ಬಗೆಹರಿಯುವ ಮಾತಲ್ಲ ಎನ್ನುವುದು ಸತ್ಯ. ಈ ಕಾನೂನಿನ ಜಟಿಲತೆ ರಾಜ್ಯವನ್ನು ಆಳುತ್ತಿರುವ ನಾಯಕರಿಗೆ, ಪ್ರತಿಪಕ್ಷದವರಿಗೆ ಗೊತ್ತಿಲ್ಲ ಎಂದಲ್ಲ. ಆದರೆ, ಮೀಸಲು ನೀಡುವುದು ಅಥವಾ ಏರಿಕೆ ಮಾಡುವ ವಿಷಯವೊಂದು ರಾಜಕೀಯ ದಾಳವಾಗಿದೆ.
ಚುನಾವಣೆಗಳು ಹತ್ತಿರ ವಾದಾಗಲ್ಲ, ಈ ದಾಳವನ್ನು ಸರಿಯಾದ ರೀತಿಯಲ್ಲಿ ರಾಜಕೀಯ ನಾಯಕರು ಉರುಳಿಸುತ್ತಾರೆ. ಇದರಿಂದ ಆ ಸಮುದಾಯದ ಮತಬ್ಯಾಂಕ್ ಗಟ್ಟಿಯಾಗುತ್ತದೆ ಎನ್ನುವುದು ಸ್ಪಷ್ಟ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ, ಈ ಭರವಸೆಗಳು ಭರವಸೆ
ಯಾಗಿಯೇ, ಕನ್ನಡಿಯೊಳಗಿನ ಗಂಟಾಗಿ ಉಳಿಯುತ್ತದೆ. ಒಂದು ವೇಳೆ ಶೇ.೫೦ರಷ್ಟು ಮೀಸಲಿನೊಳಗೆ ಹೊಸದಾಗಿ ಯಾವುದೇ ಸಮುದಾಯಕ್ಕೆ ಮೀಸಲು ನೀಡಬೇಕೆಂದರೆ, ಇನ್ನೊಂದು ಸಮುದಾಯದ ಮೀಸಲನ್ನು ಕಸಿದುಕೊಂಡು ನೀಡಬೇಕು. ಆದರೆ, ಯಾವುದೇ ಸಮುದಾಯದ ಮೀಸಲನ್ನು ಹಿಂಪಡೆಯುವ ವಿಷಯವನ್ನು ಎತ್ತುವುದು ಸಹ, ಹೆಜ್ಜೇನಿನ ಗೂಡಿಗೆ ಕೈಹಾಕಿದಂತೆ ಎನ್ನುವುದರಲ್ಲಿ ಅನುಮಾನವಿಲ್ಲ.
ಆದ್ದರಿಂದ ಎಲ್ಲ ಸಮುದಾಯವನ್ನು ಮ್ಯಾನೇಜ್ ಮಾಡಲು ಬಹುತೇಕ ರಾಜಕೀಯ ನಾಯಕರು, ಮೀಸಲೆಂಬ ಭರವಸೆಯನ್ನು ನೀಡು ತ್ತಲೇ ಹೋಗುತ್ತಾರೆ ಹೊರತು, ಅದು ಜಾರಿಗೊಳಿಸುವುದಿಲ್ಲ. ಈಗ ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡುವ ವಿಷಯದಲ್ಲಿರುವ ಸಮಸ್ಯೆಯ ಬಗ್ಗೆ ನೋಡುವುದಾದರೆ, ಲಿಂಗಾಯತ ಸಮುದಾಯದ ಕೆಲ ಪಂಗಡಗಳು ಈಗಾಗಲೇ ಒಬಿಸಿಯಲ್ಲಿ 3ಬಿ ಮೀಸಲು ನೀಡಲಾಗಿದೆ. ಆದರೆ ಇದು ಶೈಕ್ಷಣಿಕ ಮೀಸಲಾತಿಗೆ ಮಾತ್ರ ಬರಲಿದ್ದು, ಉದ್ಯೋಗದಲ್ಲಿ ಮೀಸಲು ಸಿಗುವುದಿಲ್ಲ. ಆದ್ದರಿಂದ 2ಎಗೆ ಸೇರಿಸಬೇಕು ಎನ್ನುವ ಹೋರಾಟವನ್ನು ಜಯಮೃತ್ಯಂಜಯ ಸ್ವಾಮೀಜಿಗಳು ಆರಂಭಿಸಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಮೀಸಲಿಗೆ ಆಗ್ರಹಿಸಿದ್ದರು. ಅಂದಿನ ಸಿಎಂ ಯಡಿಯೂರಪ್ಪ ಅವರು, ಇನ್ನಾರು ತಿಂಗಳಲ್ಲಿ ಮೀಸಲು ಖಚಿತವೆಂದು ಹೇಳಿದ್ದರು. ಆದರೆ ಕಾನೂನಾ ತ್ಮಕವಾಗಿ ಇದು ಸಾಧ್ಯವಿಲ್ಲವೆಂದು ಗೊತ್ತಿದ್ದರೂ, ‘ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು’ ಭರವಸೆ ನೀಡಿದ್ದರು. ಇದೀಗ ಆರು ತಿಂಗಳು ಕಳೆದಿರುವುದರಿಂದ ಪುನಃ ಹೋರಾಟ ಆರಂಭವಾಗಿದೆ.
ಹಾಗೇ ನೋಡಿದರೆ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಮೊದಲು ಹಿಂದುಳಿದ ವರ್ಗಗಳ ಆಯೋಗದಿಂದ ಇದಕ್ಕೆ ಪೂರಕ ವರದಿ ತಯಾರಿಸಬೇಕು. ಆ ವೇಳೆ ಸಮುದಾಯದವರು ಪೂರಕ ದಾಖಲೆಗಳನ್ನು ಮಂಡಿಸಬೇಕು. ಯಡಿಯೂರಪ್ಪ ಅವರು ಭರವಸೆ ನೀಡಿದ ಬಳಿ, ಒಬಿಸಿ ಆಯೋಗ ವಿಚಾರಣೆ ನಡೆಸಿದ ಹಂತದಲ್ಲಿ, ಜಯಮೃತ್ಯುಂಜಯ ಸ್ವಾಮೀಜಿಗಳಿಂದ ಆಯೋಗಕ್ಕೆ ಪೂರಕ ದಾಖಲೆಗಳನ್ನೇ
ನೀಡಿಲ್ಲ ಎನ್ನುವ ಮಾತುಗಳಿವೆ. ಆದರೆ ವಚನಾನಂದ ಸ್ವಾಮೀಜಿಗಳು ವಕೀಲರ ಮೂಲಕ, ದಾಖಲೆಗಳನ್ನು ನೀಡಿದ್ದಾರೆ. ಈ ದಾಖಲೆ ಗಳ ಆಧಾರದಲ್ಲಿ ಮೀಸಲು ನೀಡಬೇಕು ಎಂದರೂ, ಯಾರಿಂದ ಹಿಂಪಡೆದು ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡಬೇಕು ಎನ್ನುವ ಪ್ರಶ್ನೆ ಬಂದಾಗ ಬಹುತೇಕರ ಬಳಿ ಉತ್ತರವಿಲ್ಲ.
ಇನ್ನು ಪಂಚಮಸಾಲಿ ಸಮುದಾಯಕ್ಕೆ ಮೀಸಲು ನೀಡುವ ಪ್ರಶ್ನೆ ಬರುತ್ತಿದ್ದಂತೆ, ಇನ್ನುಳಿದ ಸಮುದಾಯಗಳು ತಮಗೂ ಮೀಸಲು ನೀಡಿ ಎಂದು ಕೇಳುವುದರಲ್ಲಿ ಅನುಮಾನವಿಲ್ಲ. ಏಕೆಂದರೆ, ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಅದರಲ್ಲಿಯೂ ಪಂಚಮಸಾಲಿ ಸಮುದಾಯದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢವಾಗಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯದವರು 2.5 ಕೋಟಿ ಮಂದಿಯಿದ್ದರೆ, ಅದರಲ್ಲಿ ಪಂಚಮಸಾಲಿಯವರು 1.25 ಕೋಟಿಗೂ ಹೆಚ್ಚು ಮಂದಿಯಿದ್ದಾರೆ. ಇದರೊಂದಿಗೆ ಸಮುದಾಯ ದಲ್ಲಿರುವ ಅನೇಕರಿಗೆ ಈ ಮೀಸಲಿನ ಅಗತ್ಯವಿಲ್ಲ.
ಆದರೂ ರಾಜಕೀಯವಾಗಿ ಮತಬ್ಯಾಂಕ್ ಗಟ್ಟಿಗೊಳಿಸುವ ಕಾರಣಕ್ಕೆ ಈ ರೀತಿಯ ಹೋರಾಟಗಳು ನಡೆಯುತ್ತಿದೆ. ಒಂದು ವೇಳೆ 2.50 ಕೋಟಿಗೂ ಹೆಚ್ಚು ಜನರಿರುವ ಲಿಂಗಾಯತ ಸಮುದಾಯದವರಿಗೆ ಮೀಸಲಾತಿ ನೀಡಿದರೆ, ಸರಿಸುಮಾರು 1.10 ಕೋಟಿ ಜನರಿರುವ ಒಕ್ಕಲಿಗರು ತಮಗೂ ಮೀಸಲಾತಿ ನೀಡಿ ಎನ್ನುವ ಬೇಡಿಕೆಯನ್ನು ಮುಂದಿಡುವುದರಲ್ಲಿ ಅನುಮಾನವಿಲ್ಲ. ಇದರೊಂದಿಗೆ ಮಲೆನಾಡ
ಗೌಡರು, ಕೂಡು ಒಕ್ಕಲಿಗರೂ ಸಹ ಮೀಸಲು ನೀಡುವಂತೆ ಸರಕಾರದ ಮೇಲೆ ಒತ್ತಡ ಹೇರುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕ ಮಾತ್ರವಲ್ಲದೇ ದೇಶದ ಬಹುತೇಕ ರಾಜ್ಯಗಳಲ್ಲಿ ಮೀಸಲು ಘೋಷಣೆ ಎನ್ನುವುದು ರಾಜಕೀಯವಾಗಿ ಪ್ರಬಲ ಅಸ್ತ್ರ. ಮತ ಬ್ಯಾಂಕ್ ಗಟ್ಟಿಗಳಿಸುವುದಕ್ಕಾಗಿ ಈ ರೀತಿಯ ಮೀಸಲು ಭರವಸೆ ನೀಡುವ ಅಥವಾ ಕಲ್ಪಿಸುವ ಉದಾಹರಣೆಗಳು ಸಾಕಷ್ಟಿದೆ. ಆದರೆ ಯಾವುದೇ ಸಮುದಾಯಕ್ಕೆ ಮೀಸಲು ಕಲ್ಪಿಸುವುದು ಸುಲಭದ ಮಾತಲ್ಲ. ಕೇಂದ್ರ ಸರಕಾರ ಕೇಳುವ ಸೂಕ್ತ ದಾಖಲೆಗಳನ್ನು ಸಿದ್ಧಪಡಿ ಸುವುದು ಹಾಗೂ ಅದಕ್ಕೆ ಇತರ ಸಮುದಾಯಗಳ ವಿರೋಧವಿಲ್ಲ ಎನ್ನುವುದನ್ನು ಸಾಬೀತುಪಡಿಸುವ ಜವಾಬ್ದಾರಿ ಸರಕಾರಗಳ ಮೇಲಿರುತ್ತದೆ.
ಆದ್ದರಿಂದ ಒಂದು ವೇಳೆ ಮೀಸಲು ನೀಡಿದರೂ, ಅದಕ್ಕೆ ವರ್ಷಾನುಗಟ್ಟಲೇ ಕೆಲಸವಂತೂ ಇರುತ್ತದೆ. ಈಗ ಮತ್ತೊಮ್ಮೆ ಮೀಸಲಾತಿಗೆ ಆಗ್ರಹಿಸಿ ಆರಂಭವಾಗಿರುವ ಹೋರಾಟದಲ್ಲಿ ಭಾಗಿಯಾಗಿರುವವರಿಗೆ ಈ ವಿಷಯಗಳು ಗೊತ್ತಿಲ್ಲವೆಂದಲ್ಲ. ಆದರೆ ರಾಜಕೀಯ ಕಾರಣಕ್ಕೆ ಈ ಕಿಡಿಯನ್ನು ಹೊತ್ತಿರುವ ಪ್ರಯತ್ನದಲ್ಲಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೊನೆಯದಾಗಿ, ಸಮುದಾಯದ ಅಭಿವೃದ್ಧಿಗಾಗಿ ಮೀಸಲು ನೀಡುವುದು ಸಂವಿಧಾನ ಬದ್ಧವಾಗಿರುವ ಸರಕಾರದ ಜವಾಬ್ದಾರಿ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಮೀಸಲು ನೀಡುವುದಕ್ಕೆ ಅದರದ್ದೇ ಆದ ಮಾನದಂಡಗಳಿರುತ್ತವೆ.
ಆದರೆ ಇತ್ತೀಚಿನ ದಿನದಲ್ಲಿ ಆ ಮಾನದಂಡಗಳಿಗಿಂತ ಹೆಚ್ಚಾಗಿ, ರಾಜಕೀಯ ಮೇಲಾಟಕ್ಕೆ ಮೀಸಲು ನೀಡುವ ಒತ್ತಡಗಳು ಹೆಚ್ಚಾಗುತ್ತಿದೆ. ಪಕ್ಷಗಳು ಚುನಾವಣಾ ಸಮಯದಲ್ಲಿ ಮೀಸಲಿನ ಹೋರಾಟಗಳಿಗೆ ಕಿಡಿ ಹೊತ್ತಿಸಿ, ಅದರಿಂದ ಲಾಭ ಪಡೆಯುವ ಬದಲು ಸಮುದಾಯದ ಏಳಿಗೆ ಬೇಕಿರುವ ರೀತಿಯಲ್ಲಿ ವರ್ತಿಸಬೇಕು. ರಾಜಕೀಯ ಪಕ್ಷಗಳು, ಮೀಸಲಾತಿ ಎನ್ನುವುದನ್ನು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಯನ್ನಾಗಿ ಮಾಡಿಕೊಳ್ಳದೇ, ಅರ್ಹರಿಗೆ ಮೀಸಲು ನೀಡುವುದಕ್ಕೆ ಪ್ರಯತ್ನಿಸಬೇಕು ಹಾಗೂ ಈಗಾಗಲೇ ನಾನಾ ಸಮುದಾಯಗಳಿಗೆ ನೀಡಿರುವ ಮೀಸಲು ಪಟ್ಟಭದ್ರರಿಗೆ ಸೀಮಿತವಾಗದೇ, ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕಿದೆ.