Friday, 19th April 2024

ಹೊಸ ಫಲಿತಾಂಶ ಬೇಕಿದ್ದರೆ ಜಗತ್ತಿಗೆ ಪರಿಚಯಿಸಿಕೊಳ್ಳಿ

ಶ್ವೇತಪತ್ರ

ಅತ್ಯಂತ ಮೇಧಾವಿಗಳನ್ನು ಒಳಗೊಂಡಂತೆ ಎಲ್ಲರೂ ಮಾನಸಿಕ ಅಡೆತಡೆಗಳಿಗೆ ಒಳಗಾಗುವುದು ಸಹಜ. ಇದಕ್ಕೆ ಬಹುಶಃ, ಯಾವ ದಿಕ್ಕಿನತ್ತ ತಾವು ಪಯಣಿಸಬೇಕು ಎಂಬ ಸ್ಪಷ್ಟತೆ ಇಲ್ಲದಿರುವುದು ಕಾರಣವೋ ಏನೋ ಗೊತ್ತಿಲ್ಲ. ಸಾಧ್ಯವಾಗುವ ತನಕ ಪ್ರಯತ್ನಿಸುತ್ತಲೇ ಇರಬೇಕು. ಒಂದಾದ ನಂತರ ಮತ್ತೊಂದು ಎನ್ನುವಂತೆ ಅನೇಕ ಸಾಧ್ಯತೆಗಳಿಗೆ ತೆರೆದುಕೊಂಡರೆ ಸಮಸ್ಯೆಯ ಪರಿಹಾರಕ್ಕೆ ಒಂದು ಹೆಜ್ಜೆ ಹತ್ತಿರವಾಗು ತ್ತೇವೆ. ಹೌದಲ್ಲವೇ?

ಹಾಗೇ ಊಹಿಸಿಕೊಳ್ಳಿ, ಪ್ರಪಂಚದ ಅತ್ಯುತ್ತಮ ಗಾಯಕರು ಅಥವಾ ಕ್ರಿಕೆಟ್ ಆಟಗಾರರು ತಮ್ಮ ಪ್ರತಿಭೆಯ ಪರಿಚಯವೇ ಇಲ್ಲದೆ ದೂರದ ಯಾವುದೋ ಮರುಭೂಮಿಯಲ್ಲಿ ಬದುಕುತ್ತಿದ್ದಾರೆಂದು; ಹೀಗೆ ಬದುಕಿಬಿಟ್ಟರೆ ಅವರ ಬಗ್ಗೆ, ಅವರ ಪ್ರತಿಭೆಯ ಬಗ್ಗೆ ಜಗತ್ತಿಗೆ ಅರಿವಾಗುವುದಾದರೂ ಹೇಗೆ? ಇದನ್ನು ನಮ್ಮ ಬದುಕಿಗೂ ಅನ್ವಯಿಸಿಕೊಳ್ಳಬಹುದು. ನಮಗೆ ನಾವೇ ಪ್ರತಿ ಬಂಧಿಸಿಕೊಂಡು ಜಗತ್ತಿಗೆ ಪರಿಚಯಿಸಿಕೊಳ್ಳಲು ಹಿಂಜರಿಯುತ್ತೇವೆ.

ನಮ್ಮಲ್ಲಿ ಅನೇಕರು ಅದ್ಭುತವಾದ ಚಿತ್ರಕಾರರಿರಬಹುದು, ಅವರ ಚಿತ್ರಕಲೆಯ ಸೌಂದರ್ಯವು ಯಾವುದೋ ಕಾರಿನ ಗ್ಯಾರೇಜಿನಲ್ಲಿ ಕಳೆದುಹೋಗಿಬಿಡ ಬಹುದು, ಅದ್ಭುತ ಬರಹ ಗಾರರ ಸಾಹಿತ್ಯವನ್ನು ಯಾರೂ ಓದಲು ಸಾಧ್ಯವೇ ಆಗದಿರ ಬಹುದು, ಅನೇಕ ಸುಂದರ ಛಾಯಾಚಿತ್ರಗಳನ್ನು ಯಾರೂ ಕಣ್ತುಂಬಿಕೊಳ್ಳಲು ಆಗದಿರಬಹುದು. ನೀವೇನು ಮಾಡುತ್ತೀರಿ ಎಂಬುದನ್ನು ಜಗತ್ತಿಗೆ ಪರಿಚಯಿಸಲು ಅದೇಕೆ ಹಿಂಜರಿಕೆ?! ‘ಅವರಿವರು ಏನಂದಾರು?’ ಈ ಚಿಂತೆಯನ್ನು ಮರೆತು ಬಿಡಿ. ಅಸಲಿಗೆ ಜನ ಏನನ್ನಾದರೂ ಮಾಡಲು ಹಿಂದೇಟು ಹಾಕುವುದೇ ಈ ಕಾರಣಕ್ಕೆ. ಬೇರೆಯವರು ಏನಂದಾರು ಎಂಬ ಭಯಕ್ಕೆ. ಆಗೆಲ್ಲ ನಾವು ಹೀಗೆ ಯೋಚಿಸುವುದು ಸಹಜ- ಏನೋ ಮಾಡಲು ಹೋಗಿ ನನ್ನನ್ನು ನಾನು ಮೂರ್ಖನಾಗಿಸಿ ಕೊಂಡುಬಿಟ್ಟರೆ? ಏನೋ ಮಾಡಲು ಹೋಗಿ ಅದು ನನ್ನಿಂದ ನಿಭಾಯಿಸಲು ಸಾಧ್ಯವಾಗದೆ ಹೋದರೆ? ಅದನ್ನು ಮಾಡಲು ನನಗೆ ನಿಜವಾಗಲೂ ಸಾಧ್ಯವಾಗುವುದೇ? ಈ ಎಲ್ಲಾ ಪ್ರಶ್ನೆಗಳೂ ನಮ್ಮದೇ ಮನಸ್ಸಿನ ಒಳಭಯಗಳು. ಅವುಗಳತ್ತ ನಾವು ಕಿವಿ ಗೊಡಬಾರದಷ್ಟೇ. ಏಕೆಂದರೆ ಈ ಯಾವುದೇ ಪ್ರಶ್ನೆಗಳು ನಮ್ಮ ಉದ್ದೇಶಗಳಿಗೆ ಇಂಬು ತುಂಬಲಾರವು, ಬದಲಾಗಿ ಮಾಡುವ ಕೆಲಸಕ್ಕೆ ಇಲ್ಲದ ನೆಪಗಳನ್ನು ಹುಡುಕಿ ತಪ್ಪಿಸಿಕೊಳ್ಳುವಂತೆ ಮಾಡುತ್ತವೆ.

ಇರಲಿ, ನಿಮಗೊಂದು ಉದಾಹರಣೆಯನ್ನು ತಿಳಿಸುತ್ತೇನೆ. ವೀನಸ್ ವಿಲಿಯಮ್ಸ್ ಹಾಗೂ ಸೆರೆನಾ ವಿಲಿಯಮ್ಸ್, ಟೆನಿಸ್‌ನ ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತವಾದ ಪ್ರದರ್ಶನವನ್ನು ನೀಡಿದರೆ? ಚಂದ್ರಯಾನ-೩ ಯಶಸ್ವಿಯಾಗುವ ಮೊದಲು ಎರಡು ಬಾರಿ ವಿಫಲಗೊಂಡಿದ್ದು ಸುಳ್ಳೇ? ಯಶಸ್ಸಿನ ಮೆಟ್ಟಿ
ಲೇರಿದ ಪ್ರತಿಯೊಬ್ಬ ಸಾಧಕನಿಗೂ ಭಯ ಸದಾ ಕಾಡಿರುವುದು ಸುಳ್ಳಲ್ಲ; ಆದರೆ ಆ ಯಶಸ್ವಿ ವ್ಯಕ್ತಿಗಳು ತಮ್ಮ ಭಯಗಳನ್ನು ಹತ್ತಿಕ್ಕಿ ತಮ್ಮನ್ನು ತಾವು ಜಗತ್ತಿಗೆ ಪರಿಚಯಿಸಿಕೊಂಡಿದ್ದರಿಂದಲೇ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗಿದ್ದು.

ವ್ಯಕ್ತಿಯೊಬ್ಬ ತನ್ನ ವೃತ್ತಿಯ ಯಶಸ್ಸಿನ ಶಿಖರದಲ್ಲಿದ್ದಾಗ ಆತನ ಆರಂಭದ ದಿನಗಳ ಕಡೆಗೆ ನಮಗೆ ಗಮನ ಹೋಗುವುದೇ ಇಲ್ಲ. ಅವರನ್ನು ಅಷ್ಟೆತ್ತರಕ್ಕೆ ಕರೆದುಕೊಂಡು ಹೋಗಿದ್ದು ನಿರಂತರ ಪರಿಶ್ರಮವಷ್ಟೇ. ಸಾಮಾನ್ಯವಾಗಿ, ಸಾಮಾಜಿಕ ಸಂದರ್ಭದಲ್ಲಿ ನಾವು ಜನರ ಯಶಸ್ಸನ್ನಷ್ಟೇ ನೋಡುತ್ತೇವೆ, ಅವರ ಪಯಣದ ಹಾದಿಯಲ್ಲಿನ ಸೋಲುಗಳನ್ನಲ್ಲ. ನಾವು ಎದುರಿಸುವ ಅನೇಕ ಘಟನೆಗಳು ದುಸ್ತರವಾಗಿದ್ದರೂ ನಾವು ತಿಳಿಯಬೇಕಿರುವ ವಿಷಯವೆಂದರೆ, ನಾವು ಅಂದುಕೊಂಡದ್ದಕ್ಕಿಂತ ಗಟ್ಟಿಗರು ಎಂಬುದನ್ನು.

‘ಒಂದು ವಿಧಾನವನ್ನು ಹಿಡಿದು ಪ್ರಯತ್ನಿಸಬೇಕು, ಸೋಲಾದರೂ ಚಿಂತೆ ಇಲ್ಲ ಅದನ್ನು ಒಪ್ಪಿಕೊಳ್ಳುತ್ತಾ ಮತ್ತೊಂದು ಬಾರಿ ಪ್ರಯತ್ನಿಸಬೇಕು’- ಹೀಗೆನ್ನುತ್ತಾನೆ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್. ಅತ್ಯಂತ ಮೇಧಾವಿಗಳನ್ನು ಒಳಗೊಂಡಂತೆ ಎಲ್ಲರೂ ಮಾನಸಿಕ ಅಡೆತಡೆಗಳಿಗೆ ಒಳಗಾಗುವುದು ಸಹಜ. ಇದಕ್ಕೆ ಬಹುಶಃ, ಯಾವ ದಿಕ್ಕಿನತ್ತ ತಾವು ಪಯಣಿಸಬೇಕು ಎಂಬ ಸ್ಪಷ್ಟತೆ ಇಲ್ಲದಿರುವುದು ಕಾರಣವೋ ಏನೋ ಗೊತ್ತಿಲ್ಲ. ಸಾಧ್ಯವಾಗುವ ತನಕ ಪ್ರಯತ್ನಿಸುತ್ತಲೇ ಇರುವ ಪ್ರಕ್ರಿಯೆಯನ್ನೇ ವಿಜ್ಞಾನವು ‘ಪ್ರಯತ್ನ ದೋಷ ಕಲಿಕೆ’ (ಟ್ರಯಲ್ ಆಂಡ್ ಎರರ್ ಲನಿಂಗ್) ಎನ್ನುತ್ತದೆ. ಒಂದಾದ ನಂತರ ಮತ್ತೊಂದು ಎನ್ನುವಂತೆ ಅನೇಕ ಸಾಧ್ಯತೆಗಳಿಗೆ ತೆರೆದುಕೊಂಡರೆ ಸಮಸ್ಯೆಯ  ಪರಿಹಾರಕ್ಕೆ ಒಂದು ಹೆಜ್ಜೆ ಹತ್ತಿರವಾಗುತ್ತೇವೆ. ಹೌದಲ್ಲವೇ? ಅನೇಕ ಸೋಲುಗಳ ನಂತರವೂ ಥಾಮಸ್ ಆಲ್ವ ಎಡಿಸನ್ ಇಡೀ ಜಗತ್ತನ್ನು ಬೆಳಗಿದಾಗ ಅನೇಕ ಜನರು ಕೇಳುತ್ತಾರೆ- ‘ಸೋಲು ನಿಮ್ಮನ್ನು ನಿರುತ್ಸಾಹಗೊಳಿಸಲಿಲ್ಲವೇ?’ ಎಂದು.

ಇದಕ್ಕುತ್ತರಿಸುವ ಎಡಿಸನ್, ‘ನಾನು ಸಾವಿರ ಬಾರಿ ಸೋಲಲಿಲ್ಲ, ಸಾವಿರ ಬೇರೆ ಬೇರೆ ಸಾಧ್ಯತೆಗಳಿಗೆ ತೆರೆದುಕೊಂಡೆ’ ಎನ್ನುತ್ತಾನೆ. ಬದುಕಲ್ಲಿ ಎಲ್ಲವೂ ಇರುವವರು (ದುಡ್ಡು , ಹೆಸರು, ಬಂಗಲೆ, ಕಾರು) ಖಿನ್ನತೆಯ ಹೆಸರಿನಲ್ಲಿ ನನ್ನ ಬಳಿ ಆಪ್ತಸಲಹೆಗೆ ಬರುತ್ತಾರೆ. ಅವರ ಮುಖ್ಯವಾದ ದೂರು- ‘ಬದುಕು ಖಾಲಿ ಎನಿಸುತ್ತಿದೆ’ ಎನ್ನುವುದು. ಆಗೆಲ್ಲ ನನಗನಿಸುವುದು- ‘ಅವರು ತಮ್ಮ ಆರಾಮದಾಯಕ ಜೀವನ ಶೈಲಿಯಿಂದ ಹೊರಬಂದು ಬದುಕನ್ನು ಆಲಿಂಗಿಸಬೇಕು, ಸಿದ್ದಾರ್ಥ ಬುದ್ಧನಾದ ಹಾಗೆ’. ಬದುಕಿಗೊಂದು ಅರ್ಥ ತುಂಬಬೇಕಾದರೆ ಅರಮನೆಯನ್ನು ಬಿಟ್ಟು ನಡೆಯಬೇಕು. ಜಗತ್ತನ್ನು ಅನ್ವೇಷಿಸುತ್ತ ಈ ಕಾರ್ಯ ಭಾರವನ್ನು ಅನುಷ್ಠಾನಗೊಳಿಸಲು ನಮಗೆ ೬ ಬಹುಮುಖ್ಯ ಸಾಧನಗಳ ಅವಶ್ಯಕತೆ ಇದೆ. ಅವುಗಳೆಂದರೆ: ಕಲ್ಪನೆ, ವೈಯಕ್ತಿಕ
ದಕ್ಷತೆ, ಸೂರ್ತಿ, ಕೃತಜ್ಞತೆ, ದಿಟ್ಟತನ ಹಾಗೂ ಸುಧಾರಣೆ. ಕಲ್ಪನೆ: ಸಿದ್ಧಾರ್ಥ ತನ್ನ ಯೌವನದ ದಿನಗಳಲ್ಲಿ ಅರಮನೆಯೊಳಗೆ ಬಂದಿಯಾಗಿದ್ದ. ಆತನೊಳಗೆ ವಿವಿಧ ಪರಿಕಲ್ಪನೆಗಳಿ ದ್ದವು. ತನ್ನ ಕಿಟಕಿಯ ಮೂಲಕವೇ ಪ್ರಪಂಚವನ್ನು ಅರಿಯಲು ಆತ ಪ್ರಯತ್ನಿಸುತ್ತಿದ್ದ.

ಅವನಿಗೆ ಗೊತ್ತಿಲ್ಲದ ಪ್ರತಿಯೊಂದು ಸಂಗತಿಯೂ ಅವನ ಕಲ್ಪನೆಯನ್ನು ತಾಗುತ್ತಿತ್ತು. ಈ ಕಲ್ಪನೆಯೇ ಮುಂದೆ ಜಗತ್ತನ್ನು ಅವನು ಅನ್ವೇಷಿಸಲು ಸಾಧ್ಯತೆಯನ್ನು ಒದಗಿಸಿಕೊಡುತ್ತಿತ್ತು. ನಿಮ್ಮ ಕಲ್ಪನೆಗಳನ್ನು ವಿಸ್ತರಿಸಿ. ಹಾಗೆ ವಿಸ್ತರಿಸಲು ಪುಸ್ತಕಗಳನ್ನು ಓದಿ. ಅದರಲ್ಲೂ ಆತ್ಮಕಥೆಗಳು, ಬದುಕಿನ ಕುರಿತಾದ ಅನುಭವಗಳಿಗೆ ಸದಾ ತೆರೆದುಕೊಳ್ಳಿ, ಏನನ್ನಾದರೂ ಹಾಗೆ ಕಲ್ಪಿಸಿಕೊಳ್ಳಿ, ನಿಮ್ಮ ಕನಸುಗಳಿಗೆ ಬಣ್ಣ ತುಂಬಿ ಹಾರಲು ಬಿಡಿ.

ವೈಯಕ್ತಿಕ ದಕ್ಷತೆ: ಸಿದ್ಧಾರ್ಥ ಅರಮನೆಯನ್ನು ತೊರೆದ ತಕ್ಷಣವೇ ಬುದ್ಧನಾಗಲಿಲ್ಲ ಅಥವಾ ಆತನಿಗೆ ಜ್ಞಾನೋದಯ ವಾಗಲಿಲ್ಲ. ತನ್ನ ಗುರಿಯನ್ನು ಸಾಧಿಸುವ ಪ್ರಯತ್ನದ ಹಾದಿ ಯಲ್ಲಿ ಆತ ಅನೇಕ ವರ್ಷಗಳೇ ಕಾಯ ಬೇಕಾಯಿತು. ಧ್ಯಾನದ ಮೂಲಕ ಸಿದ್ಧಾರ್ಥ ಪ್ರತಿದಿನ ತನ್ನನ್ನು ತಾನು ಸುಧಾರಿಸಿಕೊಂಡ. ಪ್ರತಿದಿನವೂ ನಿನ್ನೆಗಿಂತ ಇಂದು ನಮ್ಮನ್ನು ನಾವು ಉತ್ತಮವಾಗಿ ಸುಧಾರಿಸಿಕೊಳ್ಳುವುದು ವೈಯ ಕ್ತಿಕ ದಕ್ಷತೆ ಎನ್ನಬಹುದು.
ಎಷ್ಟೋ ಬಾರಿ ನಮಗನಿಸುವು ದುಂಟು- ‘ವಾಟ್ ಟು ಡು ವಿತ್ ಲೈಫ್’ ಅಂತ. ಬದುಕಲ್ಲಿ ಮಾಡುವುದಕ್ಕೆ ಬಹಳಷ್ಟು ಇದೆ. ಪ್ರತಿ ದಿನ ನಮ್ಮಲ್ಲಿ ಶೇ.೧ರಷ್ಟು ವೈಯಕ್ತಿಕ ದಕ್ಷತೆ ಮೂಡುತ್ತಾ ಹೋದರೆ, ೧೦೦ ದಿನಗಳಲ್ಲಿ ೧೦೦ ಪರ್ಸೆಂಟ್ ದಕ್ಷತೆ ನಮ್ಮದಾಗಿ ರುತ್ತದೆ. ಹೊಸ ಭಾಷೆ ಕಲಿಯುವುದು, ಹೊಸದೊಂದು ಆಟಕ್ಕೆ ತೆರೆದುಕೊಳ್ಳುವುದು, ಬೇರೆಯವರ ಜಾಗದಲ್ಲಿ ನಿಂತು ಬದುಕನ್ನು ಅರ್ಥೈಸುವುದು ಹೀಗೆ ನಾವು ಎಷ್ಟೊಂದನ್ನು ಮಾಡ ಬಹುದು ಅಲ್ಲವೇ?

ಸ್ಪೂರ್ತಿ: ಮೊದಲಿಗೆ ಸಿದ್ಧಾರ್ಥ ಸಾವನ್ನು, ಬಡತನವನ್ನು, ರೋಗವನ್ನು ಎದುರಿಸಿರಲಿಲ್ಲ. ಅವುಗಳನ್ನೆಲ್ಲಾ ಆತ ಎದುರಿಸಿ ದಾಗ ಅವನಿಗೆ ಅರಿವಾಗಿದ್ದು ಮಾನವರಲ್ಲಿನ ಅನೇಕ ಬಳಲಿಕೆ ಗಳು. ಈ ಬಳಲಿಕೆಗಳ ಕುರಿತಾಗಿ ಆತ ದುಃಖಿಸುವ ಬದಲು ಅವುಗಳಿಂದ ಹೊರಬರುವ ವಿಧಾನಗಳನ್ನು ಹುಡುಕತೊಡಗಿದ. ತಾನು ಭೇಟಿ ನೀಡಿದ ಪ್ರತಿಯೊಂದು ಜಾಗದಲ್ಲಿಯೂ ಆತ ಪ್ರತಿ ಬಾರಿಯೂ ಭರವಸೆಯನ್ನು ಕಳೆದುಕೊಳ್ಳುತ್ತಲೇ ಹೋದ. ಸ್ಪೂರ್ತಿಯೆನ್ನುವುದು ನಮ್ಮ ಬದುಕಿಗೆ ನಾವೇ ಅರ್ಥವನ್ನು, ಉದ್ದೇಶವನ್ನು ಕಂಡುಕೊಳ್ಳುವುದರ ವ್ಯಾಖ್ಯಾನವೇ ಆಗಿದೆ. ನೀವೇನು ಮಾಡುತ್ತೀರಿ, ಅದರಿಂದ ನಿಮಗೆ ಖುಷಿ ಸಿಗುತ್ತದೆ.

ಅದನ್ನು ಮಾಡುವುದರಿಂದ ಮತ್ತೆ ಮತ್ತೆ ನಿಮಗೆ ಖುಷಿ ದೊರೆಯುತ್ತದೆ ಎನ್ನುವುದಾದರೆ ಅದನ್ನೇ ಸೂರ್ತಿ ಅಥವಾ ಪ್ರೇರಣೆಯೆನ್ನುವುದು. ನಮ್ಮೊಳಗಿನ ಧ್ವನಿಗೆ ಇಂಬು ತುಂಬುವ ಕ್ರಿಯೆಯದು. ಯಾವುದೋ ಕೆಲಸವನ್ನು ಮಾಡುತ್ತೀರಿ, ಅದು ನಿಮಗೆ ಬೋರ್ ಹೊಡೆಸುತ್ತದೆ. ಆಗ ಆ ಕೆಲಸವನ್ನು ಬದಲಾ ಯಿಸಿ, ನಿಮಗೆ ಖುಷಿಯನ್ನು ಕೊಡುವ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡರೆ ಅದೇ ಸೂರ್ತಿ. ಸೂರ್ತಿ ಎಂಬುದು ನಿಮ್ಮ ಕನಸನ್ನು ನನಸಾಗಿಸುವ ಮಾನಸಿಕ ಶಕ್ತಿ. ಕತ್ತಲೆಯ ಹಾದಿಯಲ್ಲಿ ಬೆಳಕು ನೀಡುತ್ತಾ ಮುನ್ನಡೆಸಿಕೊಂಡು ಹೋಗುವ ಗೈಡಿಂಗ್ ಫ್ಯಾಕ್ಟರ್ ಅದು.

ಕೃತಜ್ಞತೆ: ಇದು ಹೃದಯಗಳ ವಿಷಯ. ಸಿದ್ಧಾರ್ಥ ತಾನು ಬುದ್ಧನಾಗುವವರೆಗೂ ಅನೇಕ ಜನರಿಗೆ ಬೋಧಿಸುತ್ತಾ ನಡೆದ ಮತ್ತು ಅವರೆಲ್ಲರಿಗೂ ಸದಾ ಕೃತಜ್ಞನಾಗಿರುತ್ತಿದ್ದ. ಏಕೆಂದರೆ ಅವರಿಂದಲೇ ಆತ ಕಲಿತದ್ದು ಹೆಚ್ಚು. ಒಂದು ಪುಟ್ಟ ಕೃತಜ್ಞತೆ ನಮ್ಮೊಳಗೆ ಅದೆಷ್ಟೋ ದೊಡ್ಡ ಸಂತೋಷಗಳನ್ನು ತುಂಬ
ಬಹುದು. ಕೃತಜ್ಞತೆ ಎಂಬುದು ನಮ್ಮೊಳಗೆ ನಮ್ಮನ್ನು ಬೆಳಗು ವಂತೆ, ನಮ್ಮ ಬದುಕನ್ನು ಬೆಳಕಿನಂತೆ ಬೆಳಗಲು ಸಹಕರಿಸುತ್ತದೆ. ಕೃತಜ್ಞತೆ ಬದುಕಿನ ಎಲ್ಲಾ ಸುಂದರ ವಿಷಯಗಳನ್ನು ನಮಗೆ ಅರ್ಥೈಸುತ್ತದೆ ಹಾಗೂ ಪ್ರತಿ ಕಾರಣಗಳಿಗೂ ನಾವು ಕೃತಜ್ಞ ರಾಗಿರಬೇಕು ಎಂಬ ಅರಿವನ್ನು ಮೂಡಿಸುತ್ತದೆ. ಹಾಗಿದ್ದರೆ,
ಈಗ ನೀವು ನಿಮ್ಮ ಬದುಕಲ್ಲಿ ಯಾವೆಲ್ಲ ವಿಷಯಗಳಿಗೆ ಕೃತಜ್ಞರು? ನೆನಪಿರಲಿ, ಒಂದು ಪುಟ್ಟ ಸಂಗತಿಗೂ ನಾವು ಕೃತಜ್ಞರಾಗಿರಬೇಕು!

ದಿಟ್ಟತನ: ಸಿದ್ಧಾರ್ಥ, ತನ್ನ ಅರಮನೆಯ ಎಲ್ಲಾ ವೈಭೋಗಗಳು, ಆರಾಮದಾಯಕ ಜೀವನ ಶೈಲಿಯನ್ನು ಬಿಟ್ಟು ಹೊರಬರಲು ಸಾಧ್ಯವಾಗಿದ್ದು ತನ್ನ ದಿಟ್ಟತನದಿಂದಾಗಿಯೇ. ಹೀಗೆ ಆತ ತೋರಿದ ದಿಟ್ಟತನಕ್ಕೆ ನಾವೆಲ್ಲರೂ ಕೃತಜ್ಞರಾಗಿರಬೇಕು. ಯಾಕೆಂದರೆ ಆ ದಿಟ್ಟತನವೇ ಮುಂದೆ ಆತ ಬದುಕಿನ ತತ್ವವನ್ನು ಅರಿತು ಜಗತ್ತಿಗೆ ಜ್ಞಾನೋದಯವನ್ನು ನೀಡಲು ಸಾಧ್ಯ ವಾಯಿತು. ನಮ್ಮಲ್ಲಿ ಅನೇಕರು ಭಯ ಅಥವಾ ಇನ್ಯಾವುದೋ ಕಾರಣಗಳಿಗೆ ಹೆದರಿ ನಮ್ಮ ಒಳಗಿನ ದಿಟ್ಟತನವನ್ನು ತೋರಿಸಿ ಕೊಳ್ಳಲು ಸೋತು ಹೋಗುತ್ತೇವೆ. ದಿಟ್ಟತನವನ್ನು ಬದುಕಿಗೆ ಅನ್ವಯಿಸಿಕೊಳ್ಳುವ ಮೊದಲು ನಾವು ನಮ್ಮ ಭಾವನೆಗಳನ್ನು ಬಾಗಿಸಬೇಕು; ಭಾವನೆಗಳು ಬಾಗಿದಾಗಷ್ಟೇ ಬದುಕನ್ನು ಬದಲಾಯಿಸಬಹುದು

ಸುಧಾರಣೆ: ಬದುಕು ನಾವಂದುಕೊಂಡ ಹಾಗೆ ಸಾಗುತ್ತಿಲ್ಲವೇ? ನಾವು ಮಾಡುವ ಪ್ರತಿಯೊಂದು ಕೆಲಸವು ಬೋರ್ ಹೊಡೆಸುತ್ತಿದೆಯೇ? ಹಾಗಿದ್ದರೆ ನಾವು ನಮ್ಮ ಹೊಸ ದಾರಿಗಳನ್ನು ಅನ್ವೇಷಿಸುವುದನ್ನು ಕಲಿಯಬೇಕು. ಹಿಂದೆ ನಾವು ಮಾಡಿರದ ಅನೇಕ ಹೊಸ ಪ್ರಯತ್ನಗಳನ್ನು ಮಾಡುವುದನ್ನು ರೂಢಿಸಿಕೊಳ್ಳ ಬೇಕು. ಬದುಕುವುದೆಂದರೆ ಹೊಸ ದಾರಿಗಳನ್ನು ಅನ್ವೇಷಿಸುತ್ತಾ ಹಳೆಯ ದಾರಿಗಳನ್ನು ತೊಡೆದು ಹಾಕುತ್ತಾ ಮುನ್ನಡೆಯು
ವುದು. ನಾನು ಸದಾ ನಂಬುವುದು ಹೊಸ ಅನ್ವೇಷಣೆಯ ಮನಸ್ಥಿತಿಯನ್ನು. ಇದು ಸದಾ ನಮ್ಮೊಳಗಿನ ಭಯವನ್ನು ನಾವೇ ದಾಟಿ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಸಾಧ್ಯವಾಗಿಸುತ್ತದೆ. ಆಗೆಲ್ಲ ನನಗೆ ಆಲ್ಬರ್ಟ್ ಐನ್‌ಸ್ಟೀನ್‌ರವರ ಮಾತುಗಳು ನೆನಪಾಗುತ್ತವೆ: : If you do the same thing over
& over again, don’t expect different results. Ö. ಹೊಸ ಫಲಿತಾಂಶ ನಿಮ್ಮದಾಗಬೇಕೆ? ಹಾಗಿದ್ದರೆ ಜಗತ್ತಿಗೆ ಪರಿಚಯಿಸಿಕೊಂಡು ನೋಡಿ!

Leave a Reply

Your email address will not be published. Required fields are marked *

error: Content is protected !!