Sunday, 8th September 2024

ಎಲ್ಲರೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ, ಖುಷಿಯಿಂದಿರಬಹುದು !

ಇದೇ ಅಂತರಂಗ ಸುದ್ದಿ

vbhat@me.com

ಪ್ರತಿಯೊಬ್ಬರಿಗೂ ಶ್ರೀಮಂತರಾಗುವುದು ಸಾಧ್ಯವಾಗಲಿಕ್ಕಿಲ್ಲ. ಶ್ರೀಮಂತಿಕೆಯ ಸಂಕೇತಗಳಾದ ಬಂಗಲೆ, ಕಾರು, ಅಭರಣ, ಆಸ್ತಿ-ಪಾಸ್ತಿಗಳನ್ನು ಮಾಡಲು ಆಗಲಿಕ್ಕಿಲ್ಲ. ಆದರೆ ಪ್ರತಿಯೊಬ್ಬರಿಗೂ ನೆಮ್ಮದಿ, ಶಾಂತಿಯ ಜೀವನ ಸಾಗಿಸಲು ಸಾಧ್ಯವಿದೆ. ಯಾಕೆಂದರೆ ನೆಮ್ಮದಿಯೆಂಬುದು ಶ್ರೀಮಂತಿಕೆಯಲ್ಲಿ ಇಲ್ಲ. ಸಮಾಧಾನ ವೆಂಬುದು ಆಸ್ತಿ-ಪಾಸ್ತಿಯಲ್ಲಿ ಇಲ್ಲ.

ಹೆಚ್ಚು ಶ್ರೀಮಂತನಾದವನು ಹೆಚ್ಚು ಸುಖಿ ಅಲ್ಲ. ವಿಪರ್ಯಾಸವೆಂದರೆ ಶ್ರೀಮಂತರೇ ಹೆಚ್ಚು ಅಸುಖಿಗಳು, ದುಃಖಿಗಳು. ಹಾಗಾಂತ ಶ್ರೀಮಂತರಾಗ ಬೇಡಿ, ಕಾರು, ಬಂಗಲೆ ಹೊಂದಬೇಡಿ ಅಂತ ಹೇಳುತ್ತಿಲ್ಲ. ಶ್ರೀಮಂತರನ್ನು ನೋಡಿ ಶ್ರೀಮಂತರಲ್ಲ ದವರು ಹೇಳುವ ಹಳವಂಡವೂ ಅಲ್ಲ. ಆದರೆ ಶ್ರೀಮಂತರಾಗದೇ, ಶ್ರೀಮಂತಿಕೆಯ ಸಂಕೇತಗಳನ್ನು ಹೊಂದದೇ, ಅವರಿಗಿಂತ ಹೆಚ್ಚು ಸಮಾಧಾನ, ನೆಮ್ಮದಿ, ಆನಂದ, ಶಾಂತಿಯನ್ನು ಹೊಂದುವುದು ಸಾಧ್ಯವಿದೆ. ಹಾಗಂತ ಇವೆಲ್ಲವುಗಳನ್ನು ಹೊಂದಲು ಬಹಳ ಹೆಣಗಬೇಕಿಲ್ಲ. ಹಣವೂ ಬೇಕಾಗಿಲ್ಲ.

ಸಣ್ಣ ಪುಟ್ಟ ಸಂಗತಿಗಳಲ್ಲಿ ಸಮಾಧಾನವನ್ನು ಕಾಣುವುದು ಸಾಧ್ಯವಿದೆ. ಈ ಸಮಾಧಾನದ ಮುಂದೆ, ಕೋಟಿ ರುಪಾಯಿ ಏನೂ ಅಲ್ಲ. ೧) ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಜತೆ ನಾಲ್ಕು ದೇಶಗಳಿಗೆ ಹದಿನಾಲ್ಕು ದಿನಗಳ ಕಾಲ ಪ್ರವಾಸ ಮುಗಿಸುವ ಸಂದರ್ಭದಲ್ಲಿ ನವದೆಹಲಿಗೆ ವಾಪಸಾಗುವಾಗ ವಿಮಾನದಲ್ಲಿ, ‘ನನ್ನ ಮಗನಿಗೆ ನಿಮ್ಮ ಸಂದೇಶ ಬರೆದುಕೊಡಿ’ ಎಂದು ವಿನಂತಿಸಿಕೊಂಡಾಗ, ‘ಆಯ್ತು’ ಎಂದರು. ಆದರೆ ತಕ್ಷಣ ಕಾಗದ ಸಿಗಲಿಲ್ಲ.

ತಕ್ಷಣ ನನ್ನ Scribbling pad ನ ಒಂದು ಹಾಳೆ ಹರಿದುಕೊಟ್ಟೆ. ನಿಮ್ಮ ಮಗನ ಹೆಸರೇನು ಎಂದು ಕೇಳಿದ ಡಾ.ಕಲಾಂ, ‘”Dear Vishwatma, Be a good citizen’ಎಂದು ತಮ್ಮ ಹೆಸರು ಬರೆದು ಕೊಟ್ಟಿದ್ದರು. ಇದಕ್ಕೆ ಬೆಲೆ ಕಟ್ಟಲು
ಸಾಧ್ಯವಾ? ೨) ‘ಇತ್ತೀಚೆಗೆ ದೆಹಲಿ ಪತ್ರಿಕೆಯೊಂದು ನಾಲ್ವರು ಯುವ ಸೃಜನಶೀಲ ಪ್ರಶಸ್ತಿಗೆ ಭಾಜನರಾದವರ ಫೋಟೊ ವನ್ನು ಪ್ರಕಟಿಸಿತ್ತು. ಆ ಪೈಕಿ ಮೂವರು ನನ್ನ ವಿದ್ಯಾರ್ಥಿಗಳೆಂಬುದನ್ನು ತಿಳಿದು ಅತೀವ ಸಂತಸವಾಯಿತು.

ಜನ್ಮ  ಸಾರ್ಥಕವಾಯಿತು.’ ಹಾಗಂತ This is all I Have To Say ಪುಸ್ತಕದಲ್ಲಿ ಲೇಖಕ ಸ್ವಪನ್ ಶೇಠ್ ಹೇಳಿಕೊಂಡಿ ದ್ದಾನೆ. ತನ್ನ ವಿದ್ಯಾರ್ಥಿಗಳು ಪಡೆದ ಪ್ರಶಸ್ತಿಯಲ್ಲಿ ಜನ್ಮ ಸಾರ್ಥಕ್ಯದ ಸುಖ ಕಾಣುವುದಿದೆಯಲ್ಲ ಅದಕ್ಕಿಂತ ದೊಡ್ಡ ಸಂಗತಿ ಯೇನಿದೆ? ೩) ಲಾಟರಿಯಲ್ಲಿ ಹತ್ತು ಕೋಟಿ ರುಪಾಯಿ ಗಳಿಸಿದ ದಿನವೇ ತಾಯಿ ನಿಧನಳಾದ ಸುದ್ದಿ ಕೇಳಿದ ಕಾರ್ಲಸ್ ಡೆವಿಡ್, ಆ ಹಣವನ್ನು ಚಾರಿಟಿಗೆ ಬರೆದು ಬರಿಗೈಲಿ ಬಂದು ಬಿಟ್ಟ.

ತಾಯಿಯ ನಿಧನದ ಮುಂದೆ ಆ ಹಣವೆಲ್ಲ ಅವನಿಗೆ ಕಲ್ಲು ಹರಳಿಗೆ ಸಮವಾಗಿತ್ತು. ತಾಯಿಯೇ ಇಲ್ಲದ ಮೇಲೆ ಹಣ ತೆಗೆದು ಕೊಂಡು ಏನು ಮಾಡಲಿ? ಎಂದುಬಿಟ್ಟ. ಅಯಾಚಿತವಾಗಿ ಬಂದ ಹಣವನ್ನು ನಿರಾಕರಿಸುವುದರಲ್ಲಿಯೂ ಸಂತಸವಿದೆ.

ಆ ಗಿಣಿ, ಈ ಅರಗಿಣಿ !

ಜರ್ಮನಿಯ ಕೊಲೊನ್ ನಗರದಲ್ಲಿ ತಿರುಗಾಡುತ್ತಿದ್ದಾಗ, ದಾರಿಯಲ್ಲಿ ಒಂದು ಬೋರ್ಡ್ ಕಾಣಿಸಿತು. “African Parrot
for sale, 300 Euros. This Parrot is one of the best talkers’ ಎಂದು ಬರೆದಿತ್ತು. ಇದನ್ನು ಓದುತ್ತಿದ್ದಂತೆ, ವೈಯೆನ್ಕೆ ಹೇಳಿದ ಒಂದು ತಮಾಷೆ ಪ್ರಸಂಗ ನೆನಪಾಯಿತು. ಒಮ್ಮೆ ಮೈಸೂರು ಪ್ರಾಣಿ ಸಂಗ್ರಹಾಲಯದ ಎದುರು ಒಬ್ಬ ಜೋರಾಗಿ ಕಿರುಚುತ್ತಿದ್ದನಂತೆ – ‘ಮಾತಾಡುವ ಗಿಳಿ ಮಾರಾಟಕ್ಕಿದೆ, ಕೇವಲ ನೂರು ರುಪಾಯಿ. ನಿಮ್ಮ ಜತೆ ಗಂಟೆಗಟ್ಟಲೆ ಮಾತಾಡುತ್ತದೆ..’ ಇದನ್ನು ಕೇಳಿದ ವೈಯೆನ್ಕೆ ಸ್ನೇಹಿತ ಸಂದೇಶ್ ಹೇಳಿದನಂತೆ – ‘ಅದೇನು ಮಹಾ? ನನ್ನ ಹೆಂಡತಿ (ಅರಗಿಣಿ) ಗಂಟೆಗಟ್ಟಲೆ ಅಲ್ಲ,  ದಿನಗಟ್ಟಲೆ ಮಾತಾಡ್ತಾಳೆ. ನಾನು ಪ್ರತಿ ಸಲ ನೂರು ರುಪಾಯಿ ಕೊಟ್ಟು ಸುಮ್ಮನಿರುತ್ತೇನೆ. ಆ ಗಿಣಿ, ಈ ಅರಗಿಣಿಗಳ ಸಹವಾಸವೇ ಸಾಕು.’

ಯಾರಿಗೆ ಯಾವ ಉಡುಗೊರೆ?
ಕೆಲವು ಸಲ ಯಾರಿಗೆ ಯಾವ ಉಡುಗೊರೆ(ಗಿಫ್ಟ್) ಕೊಡಬೇಕು ಎಂಬುದು ತಿಳಿಯುವುದಿಲ್ಲ. ಈ ಬಗ್ಗೆ ಬಹಳ ಯೋಚಿಸುತ್ತೇವೆ. ನನಗಂತೂ, ಉಡುಗೊರೆ ಕೊಟ್ಟ ನಂತರವೂ, ಕೆಲವು ಬಾರಿ ಸಮಾಧಾನವಾಗುವುದಿಲ್ಲ. ಅವರಿಗೆ ಇಷ್ಟವಾಯಿತಾ ಇಲ್ಲವಾ, ಇನ್ನೂ ಬೇರೆಯದೇನನ್ನೋ ಕೊಡಬೇಕಿತ್ತು, ಕೊಟ್ಟಿದ್ದರೆ ಅವರಿಗೆ ಇನ್ನೂ ಸಂತೋಷವಾಗುತ್ತಿತ್ತೇನೋ, ಹಣದ ಮುಖ
ನೋಡದಿದ್ದರೆ ಇನ್ನೂ ಒಳ್ಳೆಯ ಉಡುಗೊರೆ ಕೊಡಬಹುದಿತ್ತು.

ಇನ್ನಷ್ಟು ಸವುಡು ಸಿಕ್ಕಿದ್ದಿದ್ದರೆ, ಬೇರೆಡೆ ಒಳ್ಳೆಯ ಉಡುಗೊರೆ ಹುಡುಕಬಹುದಿತ್ತು… ಹೀಗೆ ಪ್ರತಿ ಸಲ ಯಾರಿಗಾದರೂ
ಉಡುಗೊರೆ ಕೊಟ್ಟಾಗ ಅನಿಸುವುದುಂಟು. ಫ್ರಾಂಕ್ ಫರ್ಟ್ ಪುಸ್ತಕ ಮೇಳದ ಗಿಫ್ಟ್ ಶಾಪ್‌ನಲ್ಲಿ ಜೋಡಿಸಿಟ್ಟ ಬಗೆಬಗೆಯ ಗಿಫ್ಟ್
ಗಳನ್ನು ಗಮನಿಸುತ್ತಿದ್ದೆ. ಹತ್ತು ನಿಮಿಷ ಕಳೆದ ನಂತರ, ಅಂಗಡಿಯಲ್ಲಿದ್ದ ಮಧ್ಯವಯಸ್ಸಿನ ಹೆಂಗಸೊಬ್ಬಳು ಬಂದು, ‘ಎಲ್ಲರೂ ಒಳ್ಳೆಯ ಗಿಫ್ಟ್ ಗಳನ್ನು ಕೊಡಬೇಕೆಂದು ಬಯಸುತ್ತಾರೆ.

ಆದರೆ ಅದು ದುಬಾರಿ ಆಗಿರಬಾರದು ಎಂದು ನಿರೀಕ್ಷಿಸುತ್ತಾರೆ. ಅಷ್ಟಕ್ಕೂ ಗಿಫ್ಟ್ ಗಳಿಗೆ ಬೆಲೆ ಕಟ್ಟಲಾಗುವುದಿಲ್ಲ, ಅಲ್ವಾ?’ ಎಂದರು. ಈ ಮಾತನ್ನು ನನಗೇ ಏಕೆ ಹೇಳಿದಳೆಂದು ಅರ್ಥವಾಗಲಿಲ್ಲ. ಅದಾಗಿ ಎರಡು ನಿಮಿಷಗಳ ನಂತರ, ಆಕೆ ಒಂದು ಪುಸ್ತಕ ತಂದು, ‘ಇದನ್ನು ಮೂರು ನಿಮಿಷಗಳಲ್ಲಿ ಓದಬಹುದು, ದಯವಿಟ್ಟು ಓದಿ’ ಎಂದಳು. ಒಂದು ಕಂಪನಿಯ ವಾರ್ಷಿ
ಕೋತ್ಸವದಲ್ಲಿ ಸಿಬ್ಬಂದಿಯೊಬ್ಬ ತನ್ನ ಜನರಲ್ ಮ್ಯಾನೇಜರ್‌ಗೆ ತಾನೇ ಬಿಡಿಸಿದ ಜಲಪಾತದ ಚಿತ್ರಕ್ಕೆ ಫ್ರೇಮ್ ಹಾಕಿಸಿ
ಉಡುಗೊರೆಯಾಗಿ ನೀಡಿದ ನಂತೆ. ಅದನ್ನು ಸ್ವೀಕರಿಸಿದ ಜನರಲ್ ಮ್ಯಾನೇಜರ್‌ಗೆ ಕಣ್ಣಲ್ಲಿ ನೀರು ಜಿನುಗಿತಂತೆ.

ಅಲ್ಲಿದ್ದವರೆಲ್ಲ ಮೂಕ ವಿಸ್ಮಿತರಾಗಿ ನೋಡುತ್ತಿದ್ದರಂತೆ. ಅಸಲಿ ವಿಷಯವೆಂದರೆ, ಜನರಲ್ ಮ್ಯಾನೇಜರ್‌ಗೆ ಕಣ್ಣುಗಳೇ
ಇರಲಿಲ್ಲವಂತೆ. ಮತ್ತೊಂದು ಪ್ರಸಂಗ. ಅವನ ತಂದೆಗೆ ೮೫ವರ್ಷ ತುಂಬಿದ ಸಂದರ್ಭದಲ್ಲಿ ಅವನ ಸಹೋದರನೊಬ್ಬ ಒಳ್ಳೆಯ ಬ್ರಾಂಡ್‌ನ ಎರಡು ಸಾಕ್ಸ್‌ಗಳನ್ನು ಉಡುಗೊರೆಯಾಗಿ ನೀಡಿದನಂತೆ. ವಿಚಿತ್ರವೆಂದರೆ ‘ಬರ್ಥಡೇ ಬಾಯ್’ಗೆ ಎರಡೂ ಕಾಲುಗಳೇ ಇರಲಿಲ್ಲವಂತೆ.

ಜನರಿಗೆ ಬುದ್ಧಿ ಇರು ವುದಿಲ್ಲವಾ? ಉಡುಗೊರೆ ಕೊಡುವಾಗ ಸ್ವಲ್ಪವೂ ಯೋಚಿ ಸುವು ದಿಲ್ಲವೇಕೆ? ಯಾರಿಗೆ ಯಾವ ಗಿಫ್ಟ್ ಕೊಡಬೇಕು ಎಂಬುದೂ ಗೊತ್ತಿರುವುದಿಲ್ಲವಾ? ಎಂದು ಯಾರಿ ಗಾದರೂ ಅನಿಸಬಹುದು. ಆದರೆ ಯಾರ ಬಳಿ ಯಾವುದು ಇರುವುದಿಲ್ಲವೋ ಅದನ್ನೇ ಗಿಫ್ಟ್ ಆಗಿ ಕೊಡಬೇಕೆಂದು ಎಲ್ಲರೂ ಬಯಸುತ್ತಾರೆ. ಆಗ ಇಂಥ ಯಡವಟ್ಟುಗಳು ಆಗುತ್ತವೆ. ಅಲ್ಲದೇ ಈ ಎರಡು ಪ್ರಸಂಗಗಳಲ್ಲಿ ಉಡುಗೊರೆ ಕೊಟ್ಟವರ ಪಾಲಿಗೆ, ಅದನ್ನು ಸ್ವೀಕರಿಸಿದವರು ಅಂಧನೂ ಅಲ್ಲ, ಹೆಳವನೂ ಅಲ್ಲ. ಅವರಿಬ್ಬರೂ ಪರಿಪೂರ್ಣ ವ್ಯಕ್ತಿಗಳು ಅಥವಾ ಪರಿಪೂರ್ಣರಾಗಿ ನೋಡಲು ಇವರು ಬಯಸಿದವರು. ಅಲ್ಲದೇ ಯಾರಿಗೆ ಯಾವ ಗಿಫ್ಟ್ ನ್ನು ಬೇಕಾದರೂ ಕೊಡಬಹುದು. ಗಿಫ್ಟ್ ನ ಬೆಲೆಗಿಂತ ಅದನ್ನು ನೀಡಿದ ನಂತರ ಮೌಲ್ಯ ಹೆಚ್ಚಾಗುತ್ತದೆ.

ಹಾಗೂ ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಅಷ್ಟೇ ಅಲ್ಲ, ಎಲ್ಲ ಗಿಫ್ಟ್ ಗಳು ನಾವು ಬದುಕಿದಷ್ಟೇ ವರ್ಷ ಬದುಕುತ್ತವೆ. ಆದ್ದರಿಂದ ಯಾವ ಗಿಫ್ಟ್ ನ್ನಾದರೂ ಕೊಡಿ, ಆದರೆ ಕೊಡಿ.’ ಹೌದಲ್ವ, ಎಷ್ಟು ನಿಜ ಅನಿಸಿತು. ಬಾಲ್ಯದಲ್ಲಿ ನನ್ನ ಕ್ಲಾಸ್‌ಮೇಟ್ ಕೊಟ್ಟ ನವಿಲುಗರಿ ಇನ್ನು ನನ್ನ ಹಳೆಯ ಪುಸ್ತಕದಲ್ಲಿದೆ. ಪುಸ್ತಕದೊಳಗೆ ನವಿಲುಗರಿ ಇಟ್ಟು ಕೊಂಡರೆ, ಅದು ಮರಿ ಹಾಕುತ್ತದಂತೆ ಎಂದು ಚಿಕ್ಕಂದಿನಲ್ಲಿ ಹೇಳುತ್ತಿದ್ದರು. ನವಿಲುಗರಿ ಮರಿ ಹಾಕಲು ಹೇಗೆ ಸಾಧ್ಯ ಎಂಬುದನ್ನು ಸಹ ಯೋಚಿ ಸದೇ, ನಾವೆಲ್ಲ ಅದನ್ನು ಪುಸ್ತಕದೊಳಗೆ ಇಟ್ಟುಕೊಂಡಿದ್ದೆವು. ಆದರೆ ಈಗ ಆ ಮಾತು ನಿಜ ಎಂದೆನಿ ಸುತ್ತದೆ. ನವಿಲುಗರಿ ಮರಿ ಹಾಕುತ್ತಲೇ ಇದೆ. ಹೌದು, ಬಾಲ್ಯದ ಸಾವಿರಾರು ಪ್ರಸಂಗಗಳ ಮರಿ ಹಾಕುತ್ತಿದೆ. ಅಸಂಖ್ಯ ನೆನಪುಗಳ ಮರಿ ಹಾಕುತ್ತಲೇ ಇದೆ.

ಪ್ರೀತಿ-ಅಧ್ಯಾತ್ಮ
ಸದ್ಗುರು ಅವರ ಉಪನ್ಯಾಸ, ಸತ್ಸಂಗ, ಪ್ರವಚನ, ಸಂವಾದ ಚೆನ್ನಾಗಿರುತ್ತವೆ. ಸದ್ಗುರು ಬಹಳ ಸಂಯಮದಿಂದ, ಹೊಸ
ಹೊಳವಿನಿಂದ ಮಾತಾಡುತ್ತಾರೆ. ಅವರ ಯೋಚನೆಯ ಧಾಟಿಯೂ ಭಿನ್ನವಾಗಿರುತ್ತದೆ. ಒಮ್ಮೆ ಯಾರೋ- ‘ನಾವು ಪ್ರೀತಿ ಯೆಂಬ ಆನಂದದಿಂದ ಕೂಡಿದ್ದರೆ, ಅಧ್ಯಾತ್ಮ ಹಾದಿಯಲ್ಲಿ ಸಾಗಬಹುದೇ?’ ಎಂದು ಸದ್ಗುರು ಅವರಿಗೆ ಕೇಳಿದಾಗ, ನೀಡಿದ
ಸರಳ ಉತ್ತರವಿದು.

ಪ್ರೀತಿ ಎನ್ನುವುದು ಆನಂದವಲ್ಲ. ಅದೊಂದು ಗಾಢವಾದ ಅದ್ಭುತವಾದ ನೋವು. ಅದು ನಿಮ್ಮೊಳಗಿರುವ ಎಲ್ಲವನ್ನೂ
ಹರಿದು ಛಿದ್ರ ಮಾಡುತ್ತದೆ. ಆಗಲೇ ನಿಮಗೆ ಪ್ರೀತಿಯ ಅರಿವಾಗುವುದು. ನೀವು ಸಂತೋಷಗೊಂಡರೆ ಅದು ಪ್ರೀತಿಯಲ್ಲ,
ಕೇವಲ ಅನುಕೂಲತೆಯಷ್ಟೆ. ನಿಮಗೆ ಸ್ವಲ್ಪ ವಾತ್ಸಲ್ಯ ಭಾವನೆ ಉಂಟಾಗಿರಬಹುದು. ಆದರೆ ನಿಮಗೆ ಪ್ರೀತಿಯ ಭಾವನೆ
ಉಂಟಾಯಿತೆಂದರೆ, ನಿಮ್ಮ ಆಂತರ್ಯದಲ್ಲಿರುವ ಎಲ್ಲವೂ ನಿಜವಾಗಲೂ ಛಿದ್ರಗೊಳ್ಳುವುದು. ಅದು ನೋವಿನಿಂದ ಕೂಡಿದ್ದರೂ ಅದ್ಭುತವಾಗಿರುತ್ತದೆ.

ನೀವು ಪ್ರೀತಿಯಲ್ಲಿ ಇದ್ದಾಗ, ನೀವು ಮಾಡುವುದೆಲ್ಲವೂ ಪ್ರೀತಿಯೇ. ನೀವು ತಿಂದರೆ ಅದು ಪ್ರೀತಿ. ಆ ವ್ಯಕ್ತಿಗಾಗಿ ಕೆಲಸ
ಮಾಡಲಿ, ಬಿಡಲಿ ಅದೂ ಪ್ರೀತಿಯೇ. ಆದರೆ ಇಂದು ನಾವು ಒಂದು ಮನೋಭಾವನೆಯನ್ನು ಮೈಗೂಡಿಸಿಕೊಂಡಿದ್ದೇವೆ.
‘ಪ್ರೀತಿ ಮಾಡುವುದು’ ಎಂಬ ಪದಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದೇವೆ. ಕೇವಲ ಕೆಲವು ನಿರ್ದಿಷ್ಟ ಕ್ರಿಯೆಗಳು ಮಾತ್ರ
ಪ್ರೀತಿಯದ್ದಾಗಿರುತ್ತವೆ. ನೀವು ಪ್ರೀತಿಯನ್ನು ಮಾಡಲಾಗುವುದಿಲ್ಲ. ನೀವು ಅನುವು ಮಾಡಿಕೊಟ್ಟರೆ, ಅದು ನಿಮಗೆ
ಉಂಟಾಗಬಹುದು. ಪ್ರೀತಿಯು ಎಲ್ಲವನ್ನು ಒಳಗೊಂಡಿದೆ.

ನೀವು ಪ್ರೀತಿಯಿಂದಿದ್ದರೆ ನಿಮ್ಮ ನಾಯಿಯನ್ನು ನೋಡಿದರೆ ಅದನ್ನು ಪ್ರೀತಿಸುವಿರಿ. ನೀವು ಒಂದು ಮರವನ್ನು ನೋಡಿ
ದೊಡನೆ ಅದನ್ನು ಪ್ರೀತಿಸುವಿರಿ- ಒಂದು ಹೂವನ್ನು ನೋಡಿ ಅದನ್ನು ಪ್ರೀತಿಸುವಿರಿ. ನೀವು ಆಕಾಶವನ್ನು ನೋಡುವಿರಿ,
ಅದನ್ನು ಪ್ರೀತಿಸುವಿರಿ.

ನೀವು ಪ್ರೀತಿಯಿಂದಿದ್ದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ. ಕೇವಲ ಒಬ್ಬ ವ್ಯಕ್ತಿಯು ಮಾತ್ರ ನಿಮಗೆ ಸುಂದರವಾಗಿ ಕಾಣಿಸಿದರೆ, ನಿಮ್ಮಲ್ಲಿ ಪ್ರೀತಿ ಇಲ್ಲವೆಂದಾಯಿತು. ಅದು ನಿಮ್ಮ ಕಾಮದ ನಯವಾದ ಅಭಿವ್ಯಕ್ತಿಯಾಗಿದೆ. ಒಂದು ಗುಣ,
ಅದೊಂದು ಕ್ರಿಯೆಯಲ್ಲ. ಧ್ಯಾನವೂ ಒಂದು ಗುಣ, ಅದೊಂದು ಕ್ರಿಯೆಯಲ್ಲ. ಅಧ್ಯಾತ್ಮಿಕತೆಯೂ ಒಂದು ಗುಣ, ಕ್ರಿಯೆಯಲ್ಲ.
ಅದೊಂದು ಹೊಸ ಆಯಾಮ. ಅದು ನೀವು ‘ಮಾಡುವ’ ಏನೋ ಒಂದು ಕ್ರಿಯೆಯಲ್ಲ. ನೀವು ಅದರೊಳಗೆ ಮುಳುಗುವು ದಾಗಿದೆ. ಅದು ನಿಮ್ಮನ್ನು ಆವರಿಸಿಕೊಳ್ಳಲು ನೀವು ಸಮ್ಮತಿಸುವುದಾಗಿದೆ.

ಇಲ್ಲದಿದ್ದಲ್ಲಿ ಅಲ್ಲಿ ಅಧ್ಯಾತ್ಮಿಕತೆ ಇಲ್ಲ. ನೀವು ಅಧ್ಯಾತ್ಮರಾಗುವಿರೆಂದು ಯೋಚಿಸಿದರೆ, ಅದು ಎಂದಿಗೂ ಸಂಭವಿಸುವುದಿಲ್ಲ.
ನೀವು ಸುಲಭವಾಗಿ ಭೇದಿಸುವಂತವರಾಗಬೇಕು. ಅಗಲೇ ಅಲ್ಲಿ ಅಧ್ಯಾತ್ಮಿಕತೆ ಇರುವುದು. ನೀವು ಅಭೇದ್ಯವಾದ ಕಲ್ಲಿನಂತೆ
ನಿಂತಿದ್ದರೆ, ಅಲ್ಲಿ ಅಧ್ಯಾತ್ಮಿಕತೆ ಇರುವುದಿಲ್ಲ.

Sick ಹಾಗೂ Sikh!
ಒಮ್ಮೆ ಖುಷವಂತ ಸಿಂಗ್ ಮುಂಬೈಯಿಂದ ಸಿಂಗಾಪುರಕ್ಕೆ ವಿಮಾನದಲ್ಲಿ ಹೊರಟಿದ್ದರಂತೆ. ಅವರ ಪಕ್ಕದಲ್ಲಿ ಕುಳಿತ ಮಹಿಳೆ
ಅವರನ್ನೇ ದುರುಗುಟ್ಟಿ ನೋಡುತ್ತಿದ್ದಳಂತೆ. ಈ ಮಹಿಳೆ ತನ್ನ ಜೀವನದಲ್ಲಿ ಎಂದೆಂದೂ ಸರ್ದಾರ್ಜಿಗಳನ್ನೇ ನೋಡಿರಲಿಕ್ಕಿಲ್ಲ
ಎಂದು ಖುಷವಂತ ಸಿಂಗ್ ಅಂದುಕೊಂಡರಂತೆ. ವಿಮಾನದಲ್ಲಿ ಉಪಾಹಾರ ಹಾಗೂ ಕಾಫಿ ವಿತರಿಸಿದ ಬಳಿಕ, ಆ ಮಹಿಳೆ ಸಿಂಗ್ ಜತೆಗೆ ಮಾತುಕತೆಗೆ ಆರಂಭಿಸಿದರಂತೆ.

ಮಾತುಕತೆಯ ಮಧ್ಯೆ ಆಕೆ, ‘ನೀವು ಯಾರು ?’ ಎಂದು ಕೇಳಿದಳಂತೆ. ‘ನಾನು ಸಿಖ್’ ಎಂದರಂತೆ, ಸಿಂಗ್. ಅದಕ್ಕೆ ಆ ಸ್ಪೇನ್‌ನ ಮಹಿಳೆ “I’m Sorry. Hope You Get Well Soon’ ಎಂದರಂತೆ. ತಕ್ಷಣ ಸಿಂಗ್, ‘ನೀವಂದುಕೊಂಡಂತೆ ನಾ Sick ಅಲ್ಲ. Sikh ನಾನು ಸಿಖ್ ಧರ್ಮದವನು’ ಎಂದು ಸ್ಪಷ್ಟನೆ ನೀಡಿದರಂತೆ.

ಅದಕ್ಕೆ ಖುಷಿ ವ್ಯಕ್ತಪಡಿಸಿದ ಆಕೆ, “Well, Now I am happy. It is nice meeting you. I am also sick of
religion’ ಎಂದಳಂತೆ.

ಕಾಲಕಾಲಕ್ಕೆ ಬದಲಾಗುವ ನೀರು

ಮನುಷ್ಯರೊಂದೇ ಅಲ್ಲ, ಕಾಲಕಾಲಕ್ಕೆ ನೀರೂ ತನ್ನ ಸ್ವರೂಪ ಬದಲಿಸುತ್ತಿದೆ. ನಾವು ಈ ಮೊದಲು ನೋಡುತ್ತಿದ್ದ ನೀರಿಗೂ, ಈಗಿನದಕ್ಕೂ ಬಹಳ ವ್ಯತ್ಯಾಸವಿದೆ. ಇತ್ತೀಚೆಗೆ ಸ್ನೇಹಿತರೊಬ್ಬರು, ನೀರನ್ನು ನಾವು ನೋಡುತ್ತಿರುವ ರೀತಿಯ ಬಗ್ಗೆ ಚೆಂದವಾಗಿ ಬರೆದ, ಸರಳ ವಿವರಣೆಯನ್ನು ಕಳಿಸಿಕೊಟ್ಟಿದ್ದರು.

ನಮ್ಮ ಪೂರ್ವಜರು, ನಮ್ಮ ತಾತ ನೀರನ್ನು ನೋಡಿದ್ದು ನದಿಯಲ್ಲಿ. ಅವರ ಪಾಲಿಗೆ ನೀರು ಅಂದರೆ ಗಂಗಾನದಿ. ನಮ್ಮ
ತಂದೆ- ತಾಯಂದಿರು ಅದನ್ನು ಬಾವಿಯಲ್ಲಿ ನೋಡಿದರು. ನಾವು ನಗರವಾಸಿಗಳು ನೀರನ್ನು ನೋಡಿದ್ದು ನಲ್ಲಿ(ಟ್ಯಾಪ್
)ಯಲ್ಲಿ. ಈಗ ನಮ್ಮ ಮಕ್ಕಳು ನೀರನ್ನು ನೋಡುತ್ತಿರುವುದು ಬಾಟಲಿಯಲ್ಲಿ. ಪ್ರಾಯಶಃ ನಮ್ಮ ಮೊಮ್ಮಕ್ಕಳು ಅದನ್ನು
ಕ್ಯಾಪ್ಸುಲ್‌ನಲ್ಲಿ ನೋಡಬಹುದೇನೋ? ನೀರಿನ ಮಹತ್ವ ಇನ್ನಾದರೂ ಅರಿಯದಿದ್ದರೆ, ಕಣ್ಣೀರಿನಲ್ಲಿ ಅದನ್ನು ನೋಡಬೇಕಾಗ ಬಹುದೇನೋ!

ಗಂಡಸರ ಬುದ್ಧಿ
ಗಂಡಸನ್ನು ಸರಿಯಾಗಿ ಮತ್ತೊಬ್ಬ ಗಂಡಸು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಗಂಡಸಿನ ಮೆಂಟಾಲಿಟಿಯೇನು ಎಂಬುದು ಗಂಡಸಿಗೆ ಪರಿಣಾಮಕಾರಿಯಾಗಿ ಗೊತ್ತಾಗುವಷ್ಟು ಬೇರೆಯವರಿಗೆ ಅರ್ಥವಾಗುವುದು ಸಾಧ್ಯವೇ ಇಲ್ಲ. ಹೇಗೆ ಅಂತೀರಾ?
ಹಾಗಾದರೆ ಗಿರಾಕಿ ಹಾಗೂ ಅಂಗಡಿಯವನ ನಡುವಿನ ಸಂಭಾಷಣೆ ಕೇಳಿ,

ಗಿರಾಕಿ: ನನಗೊಂದು ಲೇಡೀಸ್ ವಾಚ್ ಬೇಕಾಗಿತ್ತು.

ಅಂಗಡಿಯಾತ: ಹೆಂಡತಿಗಾದರೆ ಈ ವಾಚನ್ನು ನೋಡಿ, ಬೇರೆಯವರಿಗಾದರೆ ಒಳ್ಳೆಯ ಕ್ವಾಲಿಟಿಯ ಬ್ರ್ಯಾಂಡೆಡ್ ವಾಚ್
ತೋರಿಸಲಾ?

ಜೂಜುಗಾರರಿಗೊಂದು ಸಲಹೆ
ಕಠ್ಮಂಡುವಿನಲ್ಲಿ ಒಂದು ರೆಸ್ಟೋರೆಂಟ್ ಇದೆ. ಜೂಜುಕೋರರಿಗೆಂದೇ ಮೀಸಲಾದದ್ದು. ಬಹಳ ಕಡಿಮೆ ಬೆಲೆಗೆ ಊಟ,
ತಿಂಡಿಗಳುಅಲ್ಲಿ ಸಿಗುತ್ತವೆ. ಸಾಮಾನ್ಯವಾಗಿ ಜೂಜಿನಲ್ಲಿ ಸೋತವರು, ದಾರಿ ಖರ್ಚಿಗೆಂದು ಉಳಿಸಿಕೊಂಡು ಇರುತ್ತಾರಲ್ಲ,
ಅಂಥವರಿಗಾಗಿ ಇರುವ ರೆಸ್ಟೋರೆಂಟ್ ಅದು. ಆ ಹೋಟೆಲ್‌ನ ಮಾಲೀಕ ಬಹಳ ಶಾಣ್ಯಾ ಇರಬೇಕು. ತನ್ನ ಹೋಟೆಲ್‌ನ ಮುಂದೆ ಒಂದು ಬೋರ್ಡ್ ಹಾಕಿದ್ದಾನೆ- “Eating your betting money and don’t bet on your eating money’

ಯಾರ ನಾಯಿ ಚೆನ್ನಾಗಿದೆ?
ಆ ಇಬ್ಬರು ಸ್ನೇಹಿತರು ಯಾರ ನಾಯಿ ಚೆನ್ನಾಗಿದೆ ಎಂಬ ಬಗ್ಗೆ ತಮ್ಮ ತಮ್ಮಲ್ಲೇ ವಾದ ಮಾಡುತ್ತಿದ್ದರು. ಮೊದಲನೆಯವ
ಹೇಳಿದ- ‘ನನ್ನ ನಾಯಿಯೇ ಸ್ಮಾರ್ಟ್ ಆಗಿದೆ.’ ಅದಕ್ಕೆ ಎರಡನೆಯವ, ‘ಹೇಗೆ ಹೇಳ್ತೀಯಾ?’ ಎಂದು ಕೇಳಿದ. ‘ನೋಡು, ನನ್ನ ನಾಯಿ ಪ್ರತಿದಿನ ಬೆಳಗ್ಗೆ ಹೊರಗೆ ಬಿದ್ದ ದಿನಪ ತ್ರಿಕೆಗಳನ್ನೆಲ್ಲ ಎತ್ತಿತಂದು ನನ್ನ ಮಂಚದ ಮೇಲಿಡುತ್ತದೆ. ನಂತರ ಹೊರಗೆ ಇಟ್ಟಿರುವ ಹಾಲಿನ ಪೊಟ್ಟಣಗಳನ್ನು ಅಡುಗೆ ಮನೆಯಲ್ಲಿ ಇಡುತ್ತದೆ. ಹೂ ಮಾರುವವಳಿಂದ ಹೂಗಳನ್ನು ತಂದು, ದೇವರ
ಮನೆ ಮುಂದೆ ಇಡುತ್ತದೆ. ನಂತರ ಕೆಲಸದವಳು ಬರುತ್ತಾಳೆ.

ಅವಳು ಬೆಲ್ ಮಾಡುತ್ತಿದ್ದಂತೆ ಬಾಗಿಲನ್ನು ತೆರೆಯುತ್ತದೆ. ನಂತರ ನ್ಯೂಸ್ ಚಾನೆಲ್ ಆನ್ ಮಾಡಿ, ನನ್ನನ್ನು ಎಬ್ಬಿಸುತ್ತದೆ’ ಎಂದು ಮೊದಲನೆಯವ ತನ್ನ ನಾಯಿ ಬಗ್ಗೆ ಕೊಚ್ಚಿಕೊಂಡ. ಅದಕ್ಕೆ ಎರಡನೆಯವ ‘ನನಗೆ ಗೊತ್ತು’ ಎಂದ. ‘ನಿನಗೆ ಹೇಗೆ
ಗೊತ್ತು?’ ಎಂದು ಕೇಳಿದ ಮೊದಲನೆಯವ. ಅದಕ್ಕೆ ಎರಡನೆಯವ ಹೇಳಿದ- ‘ನನ್ನ ನಾಯಿ ನನಗೆ ಎಲ್ಲವನ್ನೂ ಹೇಳುತ್ತದೆ.’

ಅರ್ಥವಾಗದ ಸಂಗತಿಗಳು
ಇತ್ತೀಚೆಗೆ ಸ್ಕೂಲ್‌ನಲ್ಲಿ ಟೀಚರ್ ‘ನನಗೆ ಅರ್ಥವಾಗದ ಸಂಗತಿಗಳು’ ಎಂಬ ವಿಷಯದ ಮೇಲೆ ಕಿರು ಪ್ರಬಂಧ ಬರೆಯಲು ಹೇಳಿದರಂತೆ. ಹತ್ತು ವರ್ಷದ ಬಾಲಕಿಯೊಬ್ಬಳು ಬರೆದ ಕಿರು ಪ್ರಬಂಧ ಹೀಗಿದೆ: ‘ಟೀಚರ್, ನೀವು ನಮಗೆ ಹೇಳಿಕೊಟ್ಟಿದ್ದೀರಿ, ಬೇರೆಯವರನ್ನು ನೋಯಿಸಬಾರದೆಂದು. ಆದರೆ ಈ ಮಾತು ಪ್ರಾಣಿಗಳಿಗೇಕೆ ಅನ್ವಯಿಸುವುದಿಲ್ಲ? ಮನುಷ್ಯನೇಕೆ ಪ್ರಾಣಿಗಳಿಗೆ ಹಿಂಸೆ ಕೊಡುತ್ತಾನೆ?’ ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಮರ್ಡರ್ ಮಾಡುವುದು ಪಾಪ ಎಂದು, ಆದರೆ ಆ ನಿಯಮ ಮನುಷ್ಯರಿಗೆ ಮಾತ್ರ ಅನ್ವಯಿಸುವುದಿಲ್ಲ, ಏಕೆ?’ ‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಸೀರಿಯಲ್ ಕಿಲ್ಲರ‍್ಸ್ ಇದ್ದಾರಲ್ಲ, ಅವರು ಕೆಟ್ಟವರು ಎಂದು.

ಆದರೆ ಪ್ರಾಣಿಗಳನ್ನೇಕೆ ಅದೇ ರೀತಿ ಬೇಟೆ ಯಾಡಿ (Hunting) ಕೊಲ್ಲುತ್ತಾರೆ?’ ‘ಟೀಚರ್, ನೀವು ಹೇಳಿಕೊಟ್ಟಿದ್ದೀರಿ ಮನುಷ್ಯರನ್ನು ಜೈಲಿನಲ್ಲಿ ಇಟ್ಟರೆ ಅದು ಶಿಕ್ಷೆ ಅಂತ. ಆದರೆ ಮೈಸೂರಿನ ಮೃಗಾಲಯ (zoo)ದಲ್ಲಿ ಪ್ರಾಣಿಗಳನ್ನಿಟ್ಟು ಮನುಷ್ಯನೇಕೆ ಆನಂದಿಸುವುದು?’ ನನಗೆ ಅರ್ಥವಾಗದ ಸಂಗತಿಗಳೆಂದರೆ ಇವು.

error: Content is protected !!