Saturday, 23rd November 2024

ಲಾಜಿಕ್‌ ಇಲ್ಲದ ಆಚರಣೆಗಳೆಲ್ಲ ಮೂಢನಂಬಿಕೆಗಳೇ ?

ಶಿಶಿರ ಕಾಲ

shishirh@gmail.com

ಬ್ರೆಝಿಲ್ ಮತ್ತು ಉರುಗ್ವೆ, ಅರ್ಜೆಂಟೀನಾದಲ್ಲಿ ಈ ಪದ್ಧತಿಯಿದೆ. ಊರಿನ ದೊಡ್ಡ ವೃಕ್ಷಕ್ಕೆ ಕೆಂಪು ದಾರ ಸುತ್ತುತ್ತಾರೆ. ಒಬ್ಬ ಪುರೋಹಿತ ಬಂದು ಒಂದಿಷ್ಟು ಏನೋ ವಿಧಿ ವಿಧಾನಗಳನ್ನು ನಡೆಸುತ್ತಾನೆ. ಕೊನೆಯಲ್ಲಿ ಆ ಊರಿನ ದೊಡ್ಡ ಮರದಲ್ಲಿ ನೆಲೆಸಿರುವ ಸರ್ವ ಪಿತೃಗಳನ್ನು ತೃಪ್ತಿಪಡಿಸುವ ಆಹಾರಗಳನ್ನು ಇಡ ಲಾಗುತ್ತದೆ. ಎಲ್ಲ ಪಿತೃಗಳಿಗೂ ಒಂದೇ ರೀತಿಯ ರುಚಿ ಇದ್ದಂತಿದೆ.

ಕೊನೆಯಲ್ಲಿ ಬಾಟಲಿಗಳಲ್ಲಿ ತುಂಬಿ ತಂದ ಸಾರಾಯಿಯನ್ನು ಮುಚ್ಚಳ ತೆರೆದು ಕಲ್ಲಿಗೆ ಆನಿಸಿ ನಿಲ್ಲಿಸಿಡಲಾಗುತ್ತದೆ. ಥೇಟ್ ಹೆಚ್ಚುಕಡಿಮೆ ಇದೇ ಆಚರಣೆ ನಮ್ಮ ತುಳುನಾಡಿನಲ್ಲಿದೆ. ಉತ್ತರ ಕರ್ನಾಟಕದಲ್ಲಿ ಕೆಲವೆಡೆ, ಮಹಾರಾಷ್ಟ್ರದ ಗಡಿಯ ಗುಂಟ ಇಂತಹ ಆಚರಣೆ ಕಾಣಸಿಗುತ್ತದೆ. ಬ್ರೆಝಿಲ್ ಪ್ರಪಂಚದ ಇನ್ನೊಂದು ಭಾಗವಷ್ಟೇ ಅಲ್ಲ, ಸಮಭಾಜಕ ವೃತ್ತದಿಂದ ಕೆಳಗೆ
ಇರುವ ಇನ್ನೊಂದು ಲೋಕ. ಅಲ್ಲಿನ ಮೂಲ ನಿವಾಸಿಗಳು ಭಾರತೀಯರ ಸಂಪರ್ಕಕ್ಕೆ ಬಂದ ಯಾವೊಂದು ಇತಿಹಾಸವೂ ಕಾಣುವುದಿಲ್ಲ.

ಮನುಷ್ಯನ ಆಫ್ರಿಕನ್ ಮೂಲದ ವಾದವನ್ನೇ ಒಪ್ಪುವುದಾದರೂ ಅದೆಷ್ಟೋ ಲಕ್ಷ ವರ್ಷದ ಹಿಂದೆ ಬೇರ್ಪಟ್ಟವರು. ಆವತ್ತೇ ಅಂತಹ ಆಚರಣೆಗಳಿದ್ದವು ಎಂದಾದರೆ ಸಾರಾಯಿ ಆವಿಷ್ಕಾರ ಅದಕ್ಕಿಂತ ಹಿಂದೆಯೇ ಆಗಿತ್ತು ಎನ್ನಬೇಕಾಗುತ್ತದೆ. ಅದು ಸತ್ಯವಾಗಿರಲಿಕ್ಕಿಲ್ಲ. ಹಾಗಾದರೆ ಒಂದು ಪ್ರತ್ಯೇಕ ಮನುಷ್ಯ ವೈವಿಧ್ಯದಲ್ಲಿ, ಇಷ್ಟೊಂದು ದೂರದಲ್ಲಿ ಇಂತಹುದೇ ಹೋಲುವ ಹತ್ತು ಹಲವು ಆಚರಣೆಗಳು.

ಇವೆಲ್ಲ ಶುರುವಾದದ್ದಾದರೂ ಹೇಗೆ? ಯಾವ ಕಾರಣಕ್ಕೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತವೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಹೋಲಿಕೆಯ ಆಚರಣೆ ಗಳನ್ನು ಕಂಡ ನನಗೆ ಯಾವತ್ತೂ ಇದೆಲ್ಲ ಹೇಗೆ ಸಾಧ್ಯವೆಂಬುವ ಪ್ರಶ್ನೆ ಏಳುತ್ತಲೇ ಇರುತ್ತದೆ. ನಮ್ಮ ಪಕ್ಕದ ಊರು ತಲಗೆರೆ. ಆಚೀಚೆ ಊರಿನವರು ಹಬ್ಬ, ಆಚರಣೆಗಳಲ್ಲಿ ಒಂದೆಡೆ ಸೇರುವುದು ಸಾಮಾನ್ಯ ವಲ್ಲವೇ? ಹಾಗೆಯೇ, ತಲೆಗೆರೆ ಅಮ್ಮನ ವರೆಂದರೆ ಸುತ್ತಲಿನ ಹತ್ತು ಊರಿನವರು ನಡೆದುಕೊಳ್ಳುವ ದೇವರು.

ಹೆಚ್ಚಾಗಿ ಹಾಲಕ್ಕಿ ಗೌಡರೇ ಇದಕ್ಕೆ ನಡೆದುಕೊಳ್ಳುವವರಾದರೂ, ಇಂದಿಗೂ ಬ್ರಾಮ್ರು, ಮುಸಲ್ಮಾನರು, ಕ್ರಿಶ್ಚಿಯನ್ನರು ಹೀಗೆ ಎಲ್ಲ ಧರ್ಮ, ಜಾತಿಯವರೂ ಅಮ್ಮನವರ ಹಬ್ಬಕ್ಕೆ ಬಂದು ಕಾಯಿ ಒಡೆಸಿ, ಹಬ್ಬವನ್ನು ಅನುಭವಿಸಿ ಹೋಗುವುದು ಸಾಮಾನ್ಯ. ಇಲ್ಲಿನ ಬಹುಮುಖ್ಯ ಆಕರ್ಷಣೆ, ರಿವಾಜು ಬೆಂಕಿ (ಕೆಂಡ) ಹಾಯುವುದು. ಆಳೆತ್ತರ ಸರಿದ ಮರದ ದಿಮ್ಮಿಗಳಿಗೆ ಬೆಂಕಿಯಿಟ್ಟು, ತಾಸುಗಟ್ಟಲೆ ಉರಿಸಿ ಕೆಂಡವಾಗಿಸಲಾಗುತ್ತದೆ. ನಂತರದಲ್ಲಿ ಎಲ್ಲ ವಯೋವರ್ಗದ ವರು, ಜಾತಿ ಧರ್ಮದವರು, ಅವರ ಸಾಕುಪ್ರಾಣಿ, ಆಕಳು, ಎತ್ತು ಇವುಗಳ ಜತೆ ಈ ಕೆಂಡ ಹಾಯುವುದು. ಅದು ಭಯಂಕರ ಕೆಂಡ.

ಅದರ ಮೇಲೆ ನಡೆಯುವುದು ಬಿಡಿ, ಅದರ ನೂರು ಮೀಟರ್ ದೂರದಲ್ಲಿ ಒಂದೈದು ನಿಮಿಷ ನಿಲ್ಲಲಿಕ್ಕಾಗುವು ದಿಲ್ಲ. ಅಷ್ಟು
ಹೊತ್ತು ಮರದ ರಾಶಿ ಉರಿಸಿದ ಬೆಂಕಿಯ ತಾಪ ಏನಿಲ್ಲವೆಂದರೂ ೬೫೦’ ಸೆಲ್ಸಿಯಸ್‌ಗಿಂತ ಜಾಸ್ತಿ ಏರಿರುತ್ತದೆ. ಅದು
ಅಲ್ಯೂಮಿನಿಯಂ ಕರಗುವ, ಕಬ್ಬಿಣ ಮೃದುವಾಗಿ ಬಿಡುವಷ್ಟು ಉಷ್ಟತೆ. ಅದರಲ್ಲಿ ೬೦’ ಸೆ. ಅನ್ನೂ ಸಹಿಸದ ಕಾಲನ್ನು ಇಟ್ಟು ನಡೆಯುವುದು! ಈ ರೀತಿ ಕೆಂಡ ಹಾಯುವುದು ಕರ್ನಾಟಕ ವಾಯಿತಲ್ಲ, ಉತ್ತರ ಭಾರತದ ಲ್ಲಿಯೂ ಎಡೆ ಇದೆ.

ಅಷ್ಟೇ ಅಲ್ಲ, ಮಲಯಾ, ಜಪಾನ್, ಚೀನಾ, ಫಿಜಿ, ತಹಿತಿ, ನ್ಯೂಜಿಲ್ಯಾಂಡ್, ಮಾರಿಷಸ್ ಈ ಮೊದಲಾದ ದಕ್ಷಿಣ ಏಷ್ಯಾದಲ್ಲಿ,
ಯೂರೋಪಿನ ಸ್ಪೇನ್, ಬಲ್ಗೇರಿಯಾ, ಗ್ರೀಸ್‌ನಲ್ಲಿಯೂ ಇದೆ. ದಕ್ಷಿಣ ಅಮೆರಿಕಾದ ಚಿಲಿ, ಅರ್ಜೆಂಟಿನಾದಲ್ಲಿಯೂ ಇದೆ.
ಹೀಗೆ ಅದೆಷ್ಟೋ ನಾವು ನಿತ್ಯ ನೋಡುವ, ಭಾಗಿಯಾಗುವ ಆಚರಣೆಗಳು ಹೋಲುವ ರೂಪದಲ್ಲಿ ಜಗದ್ವ್ಯಾಪಿಸಿವೆ. ಆ ಕಾರಣಕ್ಕೆ ಆಚರಣೆಗಳನ್ನು ಮೂಢನಂಬಿಕೆಯೆಂದರೆ ಜಗತ್ತೇ ಮೂಢರ ಸಂತೆಯೆಂದಾಗುತ್ತದೆ. ಹಾಗಾದರೆ ಇದೆಲ್ಲದಕ್ಕೆ ಏನಾದರೂ ಒಂದು ಕಾರಣವಿರಬಹುದಲ್ಲವೇ? ಎಲ್ಲವನ್ನು ಪ್ರಶ್ನಿಸುವ ಸನಾತನಿಗಳಿಗೆ ಆಚರಣೆಗಳು ಪ್ರಶ್ನೆಯಾಗಲಿಲ್ಲ. ಹಾಗಾದರೆ ಈ ಅರ್ಥವಿಲ್ಲದ ಆಚರಣೆಗಳು ಅಸಲಿಗೆ ಏನು? ಇಷ್ಟೆಲ್ಲ ಬೆಳೆದು ನಿಂತ ಮನುಷ್ಯನ ವಿಕಸನದಲ್ಲಿ ಇಂಥದ್ದೆಲ್ಲ ಅಪಸವ್ಯಗಳಂತೆ ಕಾಣುವ ಆಚರಣೆಗಳು ಕೂಡಿ ಬಂದದ್ದಾದರೂ ಹೇಗೆ ಮತ್ತು ಏಕೆ? ಏನೋ ಒಂದು ಕಾರಣವಿರಬಹುದು ಎನ್ನುವ ಒಂದು ಅನುಮಾನ ಅಥವಾ ಖಚಿತತೆ ನನ್ನಲ್ಲಿ ಬಹುಕಾಲ ಇತ್ತು.

ಡಿಮಿಟ್ರಿ ಕ್ಸಿಗಲಾಟಸ್ ಅಮೆರಿಕದ ಕನೆಕ್ಟಿಕಟ್ ವಿಶ್ಯವಿದ್ಯಾಲಯದ ಮನಃಶಾಸ್ತ್ರಜ್ಞ. ಆತ ಇತ್ತೀಚೆಗೆ ಜಗತ್ತನ್ನೆಲ್ಲ ತಿರುಗಿ
ಆಚರಣೆಗಳನ್ನು ದಾಖಲಿಸಿದವ. ಕೇವಲ ದಾಖಲೆಯಷ್ಟೇ ಅಲ್ಲ, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಅದರ ಹಿಂದಿನ
ಒಳಗುಟ್ಟನ್ನು ತೆರೆದಿಡುವತ್ತ ಕೆಲಸಮಾಡುತ್ತಿರುವವ. ಆತನ ಕೆಲವು ವೈಟ್ ಪೇಪರ್‌ಗಳು, ರಿಸರ್ಚ್ ದಾಖಲೆಗಳು
ಆಚರಣೆಗಳತ್ತ, ಅದರ ಅವಶ್ಯಕತೆಯತ್ತ ಹೊಸತೊಂದು ಆಯಾಮವನ್ನೇ ತೆರೆದಿಟ್ಟಿವೆ.

ಸ್ಪೇನ್‌ನ ಸ್ಯಾನ್ಪೆಡ್ರೋ ಮೆನ್ರಿಕೆ ಎನ್ನುವ ಚಿಕ್ಕ ಊರಿನಲ್ಲಿ ಕೂಡ ನಮ್ಮೂರಿನಂತೆ ಕೆಂಡ ಹಾಯುವ ಪದ್ಧತಿ ತಲೆತಲಾಂತರ ದಿಂದ ನಡೆದುಕೊಂಡು ಬಂದಿದೆ. ಆರುನೂರು ಜನಸಂಖ್ಯೆಯಿರುವ ಆ ಊರಿನಲ್ಲಿ ಈ ಆಚರಣೆಯನ್ನು ನೋಡಲೆಂದೇ ದೇಶವಿದೇಶದಿಂದ ಸಾವಿರದ ಲೆಕ್ಕದಲ್ಲಿ ಜನರು ಬರುತ್ತಾರೆ. ಹಾಗಾಗಿ ಕೆಂಡ ಹಾಯುವುದನ್ನು ನೋಡಲು ಆ ಊರಿನಂದು ಬೃಹತ್ ಸ್ಟೇಡಿಯಂ ನಿರ್ಮಿಸಲಾಗಿದೆ. ಡಿಮಿಟ್ರಿ ಮತ್ತು ತಂಡ ಆ ಆಚರಣೆ ನಡೆಯುವಾಗ ಅಲ್ಲಿ ಕೆಂಡ ಹಾಯುವವರ, ಬೇರೆ ಕೈಂಕರ್ಯದಲ್ಲಿ ಭಾಗವಹಿಸುವವರ ಮತ್ತು ನೆರೆದವರೆಲ್ಲರ ಹೃದಯ ಬಡಿತವನ್ನು, ರಕ್ತದೊತ್ತಡ ಮತ್ತು ಕೆಲವು ದೈಹಿಕ ಏರಿಳಿತವನ್ನು ಗ್ರಹಿಸುವ ಮಾನಿಟರ್‌ಗಳನ್ನು ಅಳವಡಿಸಿತ್ತು.

ಇದನ್ನು ಆಚರಣೆಯ ನಂತರ ಅಭ್ಯಸಿಸಿದಾಗ ತಿಳಿದುಬಂದದ್ದೇ ನೆಂದರೆ ಅಲ್ಲಿರುವ ಎಲ್ಲರ ಎದೆಬಡಿತ ಇತ್ಯಾದಿಗಳು ಆ ಆಚರಣೆಯ ಸಂದರ್ಭ ದಲ್ಲಿ ಒಂದೇ ರೀತಿ ಏರಿಳಿತವನ್ನು ಕಾಣುತ್ತಿದ್ದವು. ಅಲ್ಲಿ ನೆರೆದಿರುವವರೆಲ್ಲ ಏಕಕಾಲಿಕದಲ್ಲಿ, ಏಕರೂಪದಲ್ಲಿ ಎಲ್ಲ ಮರೆತು ಪ್ರತಿಕ್ರಿಯಿಸುತ್ತಿದ್ದರು. ಅವರೆಲ್ಲರ ದೈಹಿಕ, ಮಾನಸಿಕ ಒತ್ತಡ ಅದರಲ್ಲಿ ಭಾಗಿಯಾದ ನಂತರ ಮೊದಲಿಗಿಂತ ಹೆಚ್ಚು ಶಾಂತ ವಾಗಿತ್ತು. ಈತ ಖುದ್ದು ಕೆಂಡ ಹಾಯ್ದು ಅದರದ ಅನಿರ್ವರ್ಣೀಯ ಅನುಭವವನ್ನು ವಿವರವಾಗಿ ದಾಖಲಿಸಿದ್ದಾನೆ.

ನಮ್ಮ ಮೆದುಳು ಲೆಕ್ಕ ಹಾಕುವ ಒಂದು ಬೃಹತ್ ಮಷಿನ್ ನ್ನುವ ಒಂದು ಯೋಚನೆ ಅರೆಬೆಂದ ವಿಜ್ಞಾನಕ್ಕಿತ್ತು. ಮೆದುಳು
ನಿರಂತರವಾಗಿ ಮಾಡುವ ಒಂದು ಮುಖ್ಯ ಕೆಲಸವೆಂದರೆ ಮುಂದಿನದನ್ನು ಅಂದಾಜಿಸುವುದು. ಇದು ಸದಾ ಭವಿಷ್ಯತ್ತಿ
ನಲ್ಲಿ ಏನಾಗುತ್ತದೆ ಎನ್ನುವುದನ್ನು ಅಂದಾಜು ಹಾಕುತ್ತಿರುತ್ತದೆ. ಅದು ನಮ್ಮ ಇನ್ಸ್‌ಟಿಂಕ್ಟ್. ಹೀಗಾಗುವಾಗ ಅಂದಾಜಿಸಲಾಗದ
ಸ್ಥಿತಿ ಎದುರಾದರೆ ಅಲ್ಲಿ ಮಾನಸಿಕ ಒತ್ತಡ ಹುಟ್ಟುವುದು. ಡಿಮಿಟ್ರಿ ಹೇಳುವಂತೆ ಈ ರೀತಿಯ ಕರಾರುವಕ್ಕಾದ, ನಂಬಿಕೆಯ ಹಿನ್ನೆಲೆಯಲ್ಲಿ ಹುಟ್ಟಿದ ಆಚರಣೆ ಮನಸ್ಸನ್ನು ಅತ್ಯಂತ ಒತ್ತಡದ ಹಂತಕ್ಕೆ ಒಯ್ಯುತ್ತದೆ.

ಅದುವೇ ಮುಂದುವರಿದರೆ ದೇವರು ಮೈ ಮೇಲೆ ಬರುವುದು ಇತ್ಯಾದಿ. ಹೀಗೆ ಅಷ್ಟು ಒತ್ತಡದಲ್ಲಿ ಮನಸ್ಸು ಶೂನ್ಯವಾಗುವ ಅನುಭವ ನಿತ್ಯ ಜೀವನದಲ್ಲಿ ಎದುರಾಗುವ ಮಾನಸಿಕ ಒತ್ತಡವನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನೂ ಕಲಿಸುತ್ತದೆ. ಇದು ಇಡೀ ಊರಿನವರು ಸೇರಿ ಆಚರಿಸಿದಾಗ ಅವರೆಲ್ಲರ ಒತ್ತಡ ಏಕಪ್ರಮಾಣಕ್ಕೆ ಬಂದು ನಿಲ್ಲುವುದಲ್ಲದೆ ತಾವೆಲ್ಲ ಒಂದೇ
ಎನ್ನುವ ಭಾವನೆ ಹುಟ್ಟಿ ಗಟ್ಟಿಯಾಗುತ್ತದೆ.

ಏಕತೆ ಮತ್ತು ಒತ್ತಡ ನಿರ್ವಹಣೆಗೆ ಅತ್ಯಂತ ಅವಶ್ಯಕ ಈ ಆಚರಣೆಗಳು. ಹೇಗೆ ಕೆಲಸಮಾಡುತ್ತದೆ ಎನ್ನುವುದನ್ನು ಅರಿಯದಾದಾಗ ಅದು ಬೋಗಸ್ ಎನ್ನುವ ಪ್ರಗತಿಪರತೆಯನ್ನು ಆ ಕಾರಣಕ್ಕೆ ಪ್ರಶ್ನಿಸಬೇಕಾಗುತ್ತದೆ. ಇಂತಹ ಆಚರಣೆಗಳು ಹೇಗೆ ಸಾಮೂಹಿಕವಾಗಿ ಕೆಲಸಮಾಡುತ್ತವೆ ಎನ್ನುವುದಕ್ಕಿಂತ ಆ ಆಚರಣೆಯಿಂದ ಲಾಭವಿದೆಯೆಂದಾದರೆ ಅಷ್ಟೇ ಕೂಡ ಸಾಕು. ಇಂದಿನ ಶಹರದ ಬದುಕು ಮನುಷ್ಯನ ಮಟ್ಟಿಗೆ ಹೊಸತು, ಒಗ್ಗಿಕೊಂಡಿಲ್ಲ. ನಗರಗಳಲ್ಲಿ ಆಚರಣೆಗಳ ಕೊರತೆ ಮತ್ತು
ತೊಂದರೆ ಇದೆ. ಊರದರೆ ಇಡೀ ಊರಿಗೆ ವ್ಯಕ್ತಿ ಯಾರು, ಎತ್ತ ಎನ್ನುವುದು ತಿಳಿದಿರುತ್ತದೆ.

ಆದರೆ ಪೇಟೆಯ ಬದುಕಿನಲ್ಲಿ ಪಕ್ಕದ ಮುಂಬಾಗಿಲಿನವ ಕೂಡ ಪರಿಚಯವಿರುವುದಿಲ್ಲ. ಮನುಷ್ಯ ಮೊದಲೇ ಹೈಪರ್ ಸಾಮಾಜಿಕ ಜೀವಿ. ಈ ಪೇಟೆಯ ನವ್ಯ ಬದುಕು ಸಾಮೂಹಿಕ, ಸಾಮರಸ್ಯದ, ಒಡನಾಟದ ಬದುಕನ್ನು ಮನುಷ್ಯನಿಂದ ದೂರವಾಗಿಸಿಬಿಟ್ಟಿದೆ. ಪೇಟೆಯ ಮಂದಿಯಲ್ಲಿ ಅತ್ಯಂತ ಹೆಚ್ಚಿನ ಒತ್ತಡವಿರುವುದಕ್ಕೆ ಇದು ಕಾರಣ. ಒತ್ತಡ ಹಳ್ಳಿಯವರಲ್ಲಿಯೂ ಇದ್ದರೂ ಅತಿ ಹೆಚ್ಚು ಪೇಟೆಯವರಲ್ಲಿ ಎನ್ನುವುದಕ್ಕೆ ಕಾರಣ ಅದನ್ನು ನಿಭಾಯಿಸುವ ಸಾಮರ್ಥ್ಯ ಆ ಬದುಕಿನಲ್ಲಿ ಕ್ಷೀಣಿಸಿರುತ್ತದೆ. ಈ ಕಾರಣಕ್ಕೆ ಪೇಟೆಯ ಜೀವನ, ಜನರು ಕೆಲವು ವಿಚಿತ್ರ ಆಚರಣೆಗಳನ್ನು ಹಳ್ಳಿಯ ಆಚರಣೆಗೆ ಪರ್ಯಾಯವಾಗಿ ಸ್ಥಾಪಿಸಿಕೊಂಡಿರುತ್ತಾರೆ.

ಅದು ಸ್ಟೇಡಿಯಂನಲ್ಲಿ ಒಂದೇ ರೀತಿಯ ಬಟ್ಟೆ ಹಾಕಿ, ತಮ್ಮ ತಂಡವನ್ನು ಬೆಂಬಲಿಸಿ ಏಕತೆಯನ್ನು ಅನುಭವಿಸುವುದಿರ ಬಹುದು. ಅಥವಾ ವೀಕೆಂಡ್ ಬಂದರೆ ಪಬ್‌ಗಳಿಗೆ ಹೋಗುವುದು ಇರಬಹುದು. ಈ ಪಬ್‌ನಲ್ಲಿ ಹೊಗೆ, ಕತ್ತಲು, ಮತ್ತು ಕಿವಿಗವಚುವ ಅಬ್ಬರದ ಸಂಗೀತ. ಇದು ಕೂಡ ಹಳ್ಳಿಯ ಹಬ್ಬದ ರೀತಿಯೇ ಮನುಷ್ಯನನ್ನು ಏಕತೆಯಲ್ಲಿ, ಗುಂಪಿನಲ್ಲಿ
ಒಂದು ಟ್ರಾನ್ಸ್‌ಗೆ ಒಯ್ಯುತ್ತದೆ. ಹಾಗಾಗಿಯೇ ಜನರು ಪಬ್ಬುಗಳಿಗೆ ಹೋಗುವುದು. ಇನ್ನು ಊರ ಹಬ್ಬಗಳಲ್ಲಿ, ಕೆಂಡ
ಹಾಯುವ ಮೊದಲಾದ ಆಚರಣೆಗಳಲ್ಲಿ ಸಾಕುಪ್ರಾಣಿಗಳನ್ನು ಭಾಗಿಯಾಗಿಸಿ ಅವನ್ನು ಕೂಡ ಮುಂದಿನ ದಿನಕ್ಕೆ ಸನ್ನದ್ಧ ವಾಗಿಸುವ, ಸಿಂಕ್ ಮಾಡುವ ಮನುಷ್ಯನ ಆಚರಣೆಗಳು ನಿಜವಾಗಿಯೂ ಅದ್ಭುತ.

ಒಂದಿಷ್ಟು ಆಚರಣೆಗಳು ಕೃಷಿ ಮತ್ತು ವರ್ಷದ ಕಾಲಾಧಾರಿತ. ಸಂಕ್ರಾಂತಿ, ಯುಗಾದಿ ಮೊದಲಾದ ಹಬ್ಬಗಳಿರಬಹುದು,
ವಾರ್ಷಿಕ ಅದೇ ತಿಥಿ ನಕ್ಷತ್ರದ ದಿನದಲ್ಲಿ ಆಚರಿಸುವ ಊರ ಹಬ್ಬವಿರಬಹುದು. ಇವುಗಳ ಇನ್ನೊಂದು ಉಪಯೋಗವೆಂದರೆ
ಅವು ಮಾನಸಿಕವಾಗಿ ತಮ್ಮೆದುರು ಮುಂದಿನ ದಿನಗಳಲ್ಲಿ ನಡೆಯವಹುದಾದ ಪ್ರಾಕೃತಿಕ ಬದಲಾವಣೆಗೆ ಸನ್ನದ್ಧವಾಗಿಸು
ತ್ತವೆ. ಮಳೆಗಾಲದ ಮೊದಲು ಆಚರಿಸುವ ಹಬ್ಬ ಹಿಂದೆ ನಡೆದ ಅತಿವೃಷ್ಟಿ, ಅನಾವೃಷ್ಟಿಯ ಅನಿಶ್ಚಿತತೆಯನ್ನು ಹಿಂದಿನ
ನೆನಪಿನೊಂದಿಗೆ ಸೇರಿಸಿ ಎದುರಿಸುವಂತೆ ತಯಾರಾಗಿಸುತ್ತದೆ.

ಆ ಕಾರಣಕ್ಕೆ ಹಬ್ಬದಲ್ಲಿ ಕೇವಲ ಕಡುಬು ಮಾಡಿ, ಆರತಿ ಮಾಡಿ ಮುಗಿಸುವುದಕ್ಕಿಂತ ಅದರ ಜತೆಯ ಎಲ್ಲ ಆಚರಣೆಗಳು
ಮುಖ್ಯವಾಗುತ್ತವೆ. ಪ್ರತೀ ಹಬ್ಬಕ್ಕೂ ಅದರದೇ ಆದ ಒಂದು ಗುರುತಿದೆ. ಆ ಗುರುತಿನ ಆಚರಣೆಗಳನ್ನು ತೆಗೆದು ಕೇವಲ
ಊದಿನ ಕಡ್ಡಿ ಹಚ್ಚಿ ಪೂಜೆ ಮುಗಿಸಿದರೆ ಅದು ಆ ಕಾರಣಕ್ಕೆ ಫಲಕಾರಿಯಾಗುವುದಿಲ್ಲ. ಅದುವೇ ಪುಣ್ಯ ಬರಬೇಕೆಂದರೆ
ಆಚರಣೆ ಸರಿಯಾಗಿರಬೇಕೆಂಬ ಒಮ್ಮತಕ್ಕೆ ಕಾರಣ.

ಜಗತ್ತಿನ ಒಂದೊಂದು ಸಂಸ್ಕೃತಿ, ಧರ್ಮ ಜಾತಿಗಳಲ್ಲಿ ಒಂದೊಂದು ರೀತಿಯ ಆಚರಣೆಗಳಿವೆ. ಆದರೆ ಒಬ್ಬ ವ್ಯಕ್ತಿಯ
ಜೀವಮಾನದ ಮೈಲಿಗಲ್ಲುಗಳ ಆಚರಣೆಗಳು ಸಾಮಾನ್ಯ. ಹುಟ್ಟು, ಹುಟ್ಟಿದ ಹಬ್ಬ, ನಾಮಕರಣ, ಮದುವೆ ಮತ್ತು ಸಾವು.
ಈ ಎಲ್ಲ ಹಂತಗಳನ್ನು ಆಚರಿಸುವ ವಿಧಾನ ಬೇರೆಯಿರಬ ಹುದು ಆದರೆ ಆಚರಣೆಯಂತೂ ಇದೆ. ಸಾವನ್ನೇ ತೆಗೆದುಕೊಂಡರೆ ಅದರ ಆಚರಣೆ ಹಲವು ರೀತಿ. ಸಾವು, ಅಂತ್ಯಸಂಸ್ಕಾರ ಇವುಗಳಲ್ಲಿ ಭಾಗಿಯಾಗುವುದು, ಅದನ್ನು ಆಯಾ ಸಂಸ್ಕೃತಿಗೆ
ತಕ್ಕಂತೆ ಆಚರಿಸುವುದು ಸರ್ವವ್ಯಾಪಿ.

ಇಲ್ಲಿ ತೇಜ ಕಳೆದ ದೇಹಕ್ಕೆ ಒಂದು ಗತಿ ಕಾಣಿಸುವುದನ್ನಷ್ಟೇ ಮಾಡಿದ್ದರೆ ಸಾಕಿತ್ತು. ಈ ಸುತ್ತು ಬರುವುದು, ಕೇಶಮುಂಡನ, ಮಡಕೆ ಒಡೆಯುವುದು, ಸ್ನಾನ, ಮಂತ್ರಗಳು ಇವೆಲ್ಲ ಬೇಕೇ? ಮುಗ್ಗಿದ ಹೆಣಕ್ಕೇಕೆ ಸಿಂಗಾರ? ಸಾವು ಹಿಂದೂ ಧರ್ಮದಲ್ಲಿ ಒಂದು ವರ್ಷದ ಆಚರಣೆ. ಮೃತ ದೇಹಕ್ಕೆ ಅಗ್ನಿಸ್ಪರ್ಶ ಮಾಡುವುದಕ್ಕಿಂತ ಮೊದಲಿನ ಆಚರಣೆಗಳಾದವಲ್ಲ, ಅದಾದ ಮೇಲೆ
ಹರಿಮೂರನೇ ದಿನದವರೆಗೆ, ನಂತರದಲ್ಲಿ ಮಾಸಿಕ, ವರ್ಷಾಂತಿಕ. ನಂತರ ವಾರ್ಷಿಕ.

ಇದೆಲ್ಲ ಆಚರಣೆ ಮೃತರ ತೀರಾ ಹತ್ತಿರದವರಿಗೆ ಕಷ್ಟವೆನ್ನಿಸಿದರೂ ಇದು ಅವರಿಗೆ ಮತ್ತು ಬದುಕಿನಲ್ಲಿ ಭಾಗಿಯಾಗುವ ಊರಿನವರಿಗೆ, ನೆಂಟರಿಷ್ಟರಿಗೆ ಆ ವ್ಯಕ್ತಿಯಿಲ್ಲದ ಜಗತ್ತನ್ನು ನಿಭಾಯಿಸಲು ತಯಾರು ಮಾಡುತ್ತದೆ. ಅದರ ಜೊತೆ ಆ ವ್ಯಕ್ತಿ ಇನ್ನಿಲ್ಲವೆನ್ನುವ ಸತ್ಯ ನಿಧಾನವಾಗಿ ಮಾನವರಿಕೆಯಾಗಲು ಸಹಾಯ ಮಾಡುವವು ಈ ಆಚರಣೆಗಳು. ಸುಮ್ಮನೆ ಹೋಗಿ ಸುಟ್ಟು ಬಂದುಬಿಟ್ಟರೆ ಆ ಅಗಲುವಿಕೆ ಜೀರ್ಣವಾಗುವುದೇ ಇಲ್ಲ. ಆ ಕಾರಣಕ್ಕೆ ಜಗತ್ತಿನ ಯಾವುದೇ ಮೂಲೆಯಲ್ಲೂ ಅದರದೇ ಆದ ಸಾವಿನ ಆಚರಣೆಗಳು ಎಲ್ಲ ಆಚರಣೆಗಳಂತೆ ವಿಕಾಸವಾಗಿ ರೂಪಗೊಂಡಿವೆ.

ಎಡೆಯಲ್ಲಿ ನಮ್ಮ ನಡುವೆಯೇ ಇದ್ದ ವ್ಯಕ್ತಿಯೊಬ್ಬ ಪೂರ್ವಜರಾಗಿ ಹೋಗುವ, ಅದನ್ನು ನಾವು ಒಪ್ಪುವ ಪ್ರಕ್ರಿಯೆಯಿದೆ. ಸಾವಿ ನಾಚೆಯ ಬದುಕು, ಇರುವಿಕೆ ನಮಗೆ ಅಮರತ್ವವನ್ನು ಕಲ್ಪಿಸುತ್ತದೆ. ಸಾವಿಗಿಂತ ಮೊದಲಿನ ತಯಾರಿ ಕೂಡ ಎಡೆ ಆಚರಣೆ ಯಲ್ಲಿ. ಜೀವ ಹೋಗುವ ಸ್ಥಿತಿ, ರೋಗ ಬಂದ ನಂತರ ಕೆಥೋಲಿಕ್ ಚರ್ಚಿಗೆ ಹೋಗಿ ತಪ್ಪೊಪ್ಪಿಗೆ ಒಪ್ಪಿಸುವ, ಅದರ ಜತೆಯಲ್ಲಿ ಸರತಿಯಲ್ಲಿ ನಡೆಯುವ ಆಚರಣೆಗಳು ವ್ಯಕ್ತಿಯನ್ನು, ಜತೆಗೆ ಮನೆಯವರನ್ನು ಸಾವಿಗೆ ತಯಾರಾಗಿಸುತ್ತದೆ.

ಕಾಶಿಗೆ ಹೋಗುವುದು – ಇದರ ಮಹತ್ವವೂ ಇದುವೇ. ವಾನಪ್ರಸ್ಥಕ್ಕೆ ಹೋಗುವಾಗಿನ ಮೊದಲ ಆಚರಣೆಯೂ ಇದೇ ಕೆಲಸವನ್ನು ಹಿಂದೆ ಮಾಡುತ್ತಿದ್ದವು. ನಾವು ವಿಕಾಸವಾದಂತೆ ಇದೆಲ್ಲ ಆಚರಣೆಗಳಿಗೆ ವ್ಯವಸ್ಥೆಗಳು ಕೂಡ ನಿರ್ಮಾಣವಾದವು.
ನಿತ್ಯ ಕರ್ಮ, ಸಂಧ್ಯಾವಂದನೆ, ಪೂಜೆಯಿಂದ ಹಿಡಿದು ಅಂಗಡಿ ಬಾಗಿಲು ತೆರೆದು ಊದಿನ ಕಡ್ಡಿ ಹಚ್ಚುವ ವ್ಯಾಪಾರಿಯ
ಆಚರಣೆಯವರೆಗೂ ಎಲ್ಲದಕ್ಕೂ ಅರ್ಥವಿದೆ. ಅರ್ಥವಿದೆ ಎನ್ನುವುದಕ್ಕಿಂತ ಅವಶ್ಯಕ ಸಮಾಧಾನವನ್ನು ನಿರಂತರ, ಪ್ರತಿನಿತ್ಯ ಕೊಡುತ್ತದೆ. ಬದುಕಿನ ಆ ದಿನದ ಅನಿಶ್ಚಿತತೆಯ ನಡುವೆ ಒಂದಿಷ್ಟು ನಿಶ್ಚಿತತೆಯನ್ನು ಹುಟ್ಟುಹಾಕಿತ್ತದೆ.

ಅನಿಶ್ಚಿತತೆಯೂ ನಿಶ್ಚಯಿಸಿದ್ದೇ ಎನ್ನುವ ಮನವರಿಕೆ ಮಾಡಿಕೊಡುತ್ತದೆ. ಆಚರಣೆ ದಿನದ ಒಂದು ನಿಯಮಿತ ಕಾಲ ಅಥವಾ ಘಟನೆಯ ನಂತರವಾಗುವಂತಿದ್ದರೆ ಅಷ್ಟು ಕಾಲ ನಾವು ನಿಶ್ಚಿತತೆಯಲ್ಲಿದ್ದೇವೆ ಎಂದರ್ಥ. ಹಾಗಾಗಿಯೇ ಪೂಜೆ ಪುನಸ್ಕಾರ ಸಮಾಧಾನ ಕೊಡುವುದು. ಎಲ್ಲವುದೂ ಅಮೂರ್ತ ಶಕ್ತಿ ನಿಶ್ಚಯಿಸಿದ್ದೇ ಎಂದೆನಿಸಿ ಅಲ್ಲಿ ಸಿಗುವ ಸಮಾಧಾನ. ಭಜನೆ,
ಮ್ಯೂಸಿಕ್ ಕನ್ಸರ್ಟ್‌ಗಳು, ಹಬ್ಬ, ಸತ್ಸಂಗ, ನೃತ್ಯ, ಪಬ್ಬು, ಕ್ರೀಡೆಯನ್ನು ಹಿಂಬಾಲಿಸಿ, ಕುಳಿತು ನೋಡುವುದು, ದೇಶಭಕ್ತಿ
ಇವೆಲ್ಲ ಅದೇ ಸಮಾಧಾನ ಕೊಡಬಲ್ಲವು.

ಒಂದು ಆಚರಣೆಯೆನಿಸಲು ಅದೇ ನಿಗದಿತ ಸಮಯದಲ್ಲಿ, ಒಂದು ಘಟಿಸಿದ ನಂತರ ಇನ್ನೊಂದರ ಮೊದಲು, ಇಂತಿಷ್ಟು
ಕಾಲ, ಹೀಗೆಯೇ, ಕರಾರುವಕ್ಕಾಗಿ ನಡೆಯಬೇಕು. ಇಲ್ಲಿನ ನಿಶ್ಚಿತತೆ ಮುಖ್ಯ. ಆಗ ಮಾತ್ರ ಅದು ಫಲಕಾರಿ. ಅದಲ್ಲದೆ
ಒಂದು ಆಚರಣೆಯನ್ನು ಅದೇ ರೀತಿ ಬೇರೆ ಕಾಲ, ಜಾಗ, ಹಿನ್ನೆಲೆಯಲ್ಲಿ ಮಾಡಿದಾಗ ಅದು ಆ ರೀತಿ ಪರಿಣಾಮ
ವಾಗುವುದಿಲ್ಲ. ಅದು ಫಲಕಾರಿ ಆಚರಣೆಯೆನಿಸಬೇಕೆಂದರೆ ಅದು ನಿಶ್ಚಿತ ರೂಪದಲ್ಲಿ ಬಹುಕಾಲ ಎದುರಿಗೆ ನಡೆಯಬೇಕು,
ಮನಸ್ಸಿನೊಳಗೆ ಚಿಕ್ಕಂದಿನಿಂದ ಇಳಿದಿರಬೇಕು.

ಆಗ ಅದು ಫಕ್ಕನೆ ಎಲ್ಲರಿಗೂ ಒಂದೇ ರೀತಿ ಪರಿಣಾಮ, ಒತ್ತಡ ನಿರ್ವಹಣೆ ಇತ್ಯಾದಿಗಳಿಗೆ ಕಾರಣವಾಗಬಲ್ಲದು. ಅದೆಲ್ಲ ಬಿಟ್ಟು ಒಂದಿಷ್ಟು ಕೆಲಸವನ್ನು ಇನ್ನೆ ಬೇಕಾಬಿಟ್ಟಿ ಮಾಡಿದರೆ ಅದು ಆಚರಣೆಗಿಂತ ನಾಟಕದಂತೆ ಭಾಸವಾಗುತ್ತದೆ. ಈ ಆಚರಣೆಗಳಲ್ಲಿ ಭಾಗವಹಿಸುವವರಿಗೆ ಕಾರಣ ಕೇಳಿದರೆ ಗೊತ್ತಿರುವುದಿಲ್ಲ. ಆದರೆ ಅದರ ಪರಿಣಾಮ ಅನುಭವಕ್ಕೆ ಬಂದಿರುತ್ತದೆ. ಇದೆಲ್ಲವನ್ನು ತಿಳಿಯದೆ ಆಚರಣೆಯೊಂದನ್ನು ಮೂಢನಂಬಿಕೆಯೆಂದು ಲದ್ದಿಜೀವಿಯಾಗಲು ಹೊರಟರೆ ಅವರು ಮೂರ್ಖರು. ತರ್ಕಕ್ಕೆ ಸಿಗದ ಆಚರಣೆಗಳನ್ನು ಮೂಢನಂಬಿಕೆಯೆನ್ನುವುದೇ ಮೌಢ್ಯತೆ. ಅದನ್ನು ನಿಲ್ಲಿಸಬೇಕೆನ್ನುವ ಮಾನಸಿಕತೆ, ಕೀಳರಿಮೆ ಕೊಲೊನಿಯಲ್ ವಿಚಾರದ ಇರುವಿಕೆಯ ಸೂಚಕ.

ಔಷಧಿಯಂತೆ ಕೆಲಸ ಮಾಡುವ ಆಚರಣೆಯ ಮಟ್ಟಿಗೆ ಕಾರಣಕ್ಕಿಂತ ಪರಿಣಾಮ ಮುಖ್ಯವಾಗುತ್ತದೆ. ಈ ಎಲ್ಲ ಕಾರಣಕ್ಕೆ, ಏಕತೆಗೆ, ಜೀವನ ನಿರ್ವಹಣೆಯ ಏರುಪೇರಿನ ಮಾನಸಿಕ ತಯಾರಿಗೆ, ಆಚರಣೆಗಳು ಇಂದಿನ ದಿನದಲ್ಲಿ ಹಿಂದೆಲ್ಲದಕ್ಕಿಂತ ಹೆಚ್ಚು ಅವಶ್ಯಕ. ಒಂದು ಲಾಜಿಕಲ್ ಆಯಾಮದೊಳಗೆ ಸಿಗದ ಅದೆಷ್ಟೋ ಆಚರಣೆಗಳ ಬಗ್ಗೆ ನಮ್ಮಲ್ಲಿ ತೀರಾ ಕೀಳರಿಮೆಯಿದೆ. ತಲೆಮಾರು ಕಳೆದಂತೆ ನಶಿಸುತ್ತಿದೆ ಕೂಡ. ಇದೆಲ್ಲ ಮೂಢನಂಬಿಕೆಯೆಂದು ಪ್ರಶ್ನಿಸುವ ವರು, ಅನುಮಾನಿಸುವವರು ಈಜಿಞಜಿಠ್ಟಿಜಿo ಗಿqsಜZZಠಿZo ಬರೆದಿಸುವ ಜಿಠ್ಠಿZ: ಏಟಡಿ ಖಛಿಛಿಞಜ್ಞಿಜ್ಝqs ಖಛ್ಞಿoಛ್ಝಿಛಿoo ಅಠಿo IZhಛಿ ಔಜ್ಛಿಛಿ Uಟ್ಟಠಿe ಔಜಿqಜ್ಞಿಜ’ ಪುಸ್ತಕವನ್ನು ಓದಬೇಕು.