Saturday, 7th September 2024

ಶೆಟ್ಟರ್‌ಗೆ ಪಕ್ಷ ಬಿಟ್ಟರೂ ಸಿದ್ಧಾಂತ ಬಿಡಲಾಗಲಿಲ್ಲ

ವರ್ತಮಾನ

maapala@gmail.com

ಸಿದ್ಧಾಂತದ ಕಾರಣಕ್ಕಾಗಿ ದಶಕಗಳ ಕಾಲ ಒಂದು ರಾಜಕೀಯ ಪಕ್ಷದಲ್ಲಿದ್ದು, ಯಾವುದೋ ಒಂದು ಕಾರಣಕ್ಕೆ ಮತ್ತೊಂದು ಪಕ್ಷ ಸೇರಿದರೆ ಅಲ್ಲಿ ತಮ್ಮ ಅನಿವಾರ್ಯ ಅಥವಾ ಅಗತ್ಯ ಇಲ್ಲದಿದ್ದರೆ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಅಧಿಕಾರ ಸಿಗದಿದ್ದರೆ ಹೊಂದಿಕೊಂಡು ಹೋಗುವುದೂ ಕಷ್ಟವಾಗುತ್ತದೆ. ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರಿದ್ದೂ ಇದೇ ಕಾರಣಕ್ಕೆ.

ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋಗುವಾಗಲೇ ಅವರು ಅಲ್ಲಿ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂಬುದು ಬಹುತೇಕರಿಗೆ ಗೊತ್ತಿತ್ತು. ಏಕೆಂದರೆ,
ಅವರು ಬೆಳೆದುಬಂದ ಹಾದಿ, ರಾಜಕಾರಣದಲ್ಲಿ ಹಲವು ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಸಿದ್ಧಾಂತಕ್ಕೆ ತದ್ವಿರುದ್ಧ ರಾಜಕಾರಣ ಮಾಡುತ್ತಿರುವ
ಕಾಂಗ್ರೆಸ್‌ನ ಸಿದ್ಧಾಂತಗಳು ಅವರಿಗೆ ಒಗ್ಗುವುದು ಅಸಾಧ್ಯದ ಮಾತಾಗಿತ್ತು. ಆದರೆ, ಇಷ್ಟು ಬೇಗ ಅವರು ಈ ತೀರ್ಮಾನಕ್ಕೆ ಬಂದಿರುವುದು ಬಹುತೇಕ
ರಲ್ಲಿ ಅಚ್ಚರಿ ತಂದಿದೆ.

ಏಕೆಂದರೆ, ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸಿ ಸೋತರೂ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗಿತ್ತು. ಹೀಗಾಗಿ ಕಾಂಗ್ರೆಸ್‌ನಲ್ಲಿ ಶೆಟ್ಟರ್ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ; ಹೀಗಾಗಿ ಸದ್ಯಕ್ಕಂತೂ ಅವರು ಬಿಜೆಪಿಗೆ ಸೇರುವುದಿಲ್ಲ ಎಂದು ಹೇಳಲಾಗುತ್ತಿತ್ತು. ಒಂದೊಮ್ಮೆ ಅವರನ್ನು ಸೆಳೆಯುವ ಪ್ರಯತ್ನ ಬಿಜೆಪಿಯಿಂದ ನಡೆದರೂ ಅದಕ್ಕೆ ಶೆಟ್ಟರ್ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಏಕೆಂದರೆ, ದಶಕಗಳ ಕಾಲ ಪಕ್ಷದಲ್ಲಿದ್ದು, ರಾಜ್ಯಾಧ್ಯಕ್ಷ, ಮುಖ್ಯಮಂತ್ರಿಯಂಥ ಸ್ಥಾನಗಳನ್ನು ನೀಡಿದ್ದರೂ ವಿಧಾನಸಭೆ ಚುನಾವಣೆ ಯಲ್ಲಿ ಟಿಕೆಟ್ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಮತ್ತೆ ಮರಳಲು ಸಮಯಾವಕಾಶ ತೆಗೆದುಕೊಳ್ಳಬಹುದು ಎಂದು ಭಾವಿಸಲಾಗಿತ್ತು. ಆದರೆ, ಎಲ್ಲಾ ನಿರೀಕ್ಷೆ, ನಂಬಿಕೆ, ವಿಶ್ವಾಸಗಳನ್ನು ಹುಸಿ ಮಾಡಿದ ಜಗದೀಶ್ ಶೆಟ್ಟರ್, ಸೋತರೂ ಸ್ಥಾನಮಾನ ನೀಡಿದ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ್ದಾರೆ.

ಇದಕ್ಕೆ ಕಾಂಗ್ರೆಸ್ ಸೇರುವಾಗ ಆ ಪಕ್ಷದಿಂದ ಹೆಚ್ಚು ನಿರೀಕ್ಷೆಗಳನ್ನು ಹೊಂದಿದ್ದು ಒಂದು ಕಾರಣವಾದರೂ ಅದಕ್ಕಿಂತ ಮುಖ್ಯವಾಗಿ ಸೈದ್ಧಾಂತಿಕವಾಗಿ ಹೊಂದಾ
ಣಿಕೆಯಾಗದೇ ಇರುವುದೇ ಮುಖ್ಯ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ, ಹಲವು ದಶಕಗಳ ಕಾಲ ಇಟ್ಟುಕೊಂಡಿದ್ದ ಸಿದ್ಧಾಂತಕ್ಕೆ ವ್ಯತಿರಿಕ್ತವಾದ ಜನರೊಂದಿಗೆ ಬೆರೆತು, ಹೊಂದಿಕೊಂಡು ಹೋಗುವುದು ಅತ್ಯಂತ ತ್ರಾಸದ ಕೆಲಸ. ಅದರಲ್ಲೂ ಕೈಯಲ್ಲಿ ಅಽಕಾರ ಇಲ್ಲದೇ ಇದ್ದಾಗ, ತಮ್ಮ ಮಾತಿಗೆ
ಹೆಚ್ಚಿನ ಮಾನ್ಯತೆ ಸಿಗದಿದ್ದಾಗಲಂತೂ ಮುಂದುವರಿಯುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗೆಂದು ಏಕಾಏಕಿ ತವರು
ಪಕ್ಷಕ್ಕೆ ಮರಳಿದರೆ ಅಲ್ಲೂ ಸೂಕ್ತ ಅವಕಾಶಗಳು ಸಿಗುವುದಿಲ್ಲ.

ಹೀಗಾಗಿ ಕಾಂಗ್ರೆಸ್‌ನಲ್ಲಿ ಇರುವುದು ಕಷ್ಟವಾಗುತ್ತಿದ್ದರೂ ಪರ್ಯಾಯ ಆಯ್ಕೆಗಳು ಇಲ್ಲದ ಕಾರಣ ಜಗದೀಶ್ ಶೆಟ್ಟರ್ ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್‌ನಲ್ಲಿ ಮುಂದುವರಿದಿದ್ದರು. ಆದರೆ, ಯಾವಾಗ ಬಿಜೆಪಿಯಿಂದ ಆಹ್ವಾನ ಬಂದು ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವ ಭರವಸೆ ಸಿಕ್ಕಿತೋ, ಹಿಂದೆ ಮುಂದೆ ಯೋಚಿಸದೆ ಅವರು ಬಿಜೆಪಿಗೆ ಮತ್ತೆ ಜೈ ಎಂದುಬಿಟ್ಟರು. ಏಕೆಂದರೆ, ಹಲವು ದಶಕಗಳ ಕಾಲ ಸಂಘ ಪರಿವಾರ, ಹಿಂದುತ್ವದ ಸಿದ್ಧಾಂತದೊಂದಿಗೆ ಜನಸಂಘ, ಬಿಜೆಪಿಯಲ್ಲಿ ಇದ್ದ ಶೆಟ್ಟರ್ ರಾಜಕೀಯವಾಗಿ ಮುಂಚೂಣಿಗೆ ಬಂದಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರಳಿನಲ್ಲಿ. ಯಡಿಯೂರಪ್ಪ ಅವರ ಕಾರಣದಿಂದಲೇ ಅವರು ಪಕ್ಷದಲ್ಲಿ ಸ್ಥಾನ ಮಾನ ಪಡೆದಿದ್ದರು, ಸಂಘಟನೆಗೆ ದುಡಿದಿದ್ದರು.

ಅವರನ್ನು ಹೊರತುಪಡಿಸಿ ಏಕಾಂಗಿಯಾಗಿ ಯಾವತ್ತೂ ಕೆಲಸ ಮಾಡಿಲ್ಲ, ಮಾಡಿದರೂ ಅದು ಯಶಸ್ವಿಯಾಗಿಲ್ಲ ಎಂಬುದಕ್ಕೆ ೨೦೧೩ರ ವಿಧಾನಸಭೆ
ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ತಾವು ಮುಖ್ಯಮಂತ್ರಿಯಾಗಿದ್ದರೂ ಬಿಜೆಪಿಯನ್ನು ಹೀನಾಯ ಸೋಲಿನಿಂದ ತಪ್ಪಿಸಲು ಸಾಧ್ಯ ವಾಗದಿದ್ದುದೇ ಸಾಕ್ಷಿ. ಇನ್ನು ಕಾಂಗ್ರೆಸ್‌ನಲ್ಲಿ ತಮ್ಮನ್ನು ಜತೆಯಾಗಿಸಿಕೊಂಡು ಪಕ್ಷ ಸಂಘಟನೆ ಮಾಡುವ ಅಥವಾ ರಾಜಕೀಯ ಅಧಿಕಾರ ಕಲ್ಪಿಸುವವರಾರೂ ಅವರಿಗೆ ಇರಲಿಲ್ಲ. ಆದರೆ, ೨೦೨೦ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಹೆಚ್ಚು ಗೌರವ ಸಿಗಲಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಾಗ ಅವರನ್ನು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರನ್ನಾಗಿ ಮಾಡಿದರೂ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ಯಡಿಯೂರಪ್ಪ ಮಾತಿಗೆ ಮನ್ನಣೆ ಸಿಕ್ಕಿರಲಿಲ್ಲ.

ಒಂದೊಮ್ಮೆ ಸಿಕ್ಕಿದ್ದರೆ ಶೆಟ್ಟರ್‌ಗೆ ಟಿಕೆಟ್ ಕೈತಪ್ಪುತ್ತಿರಲಿಲ್ಲ. ಹೀಗಾಗಿ ಇನ್ನುಮುಂದೆ ಪಕ್ಷದಲ್ಲಿ ತಮಗೆ ಅವಕಾಶ ಸಿಗುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದ ಫಲಿತಾಂಶ ಪಕ್ಷದಲ್ಲಿ ಯಡಿಯೂರಪ್ಪ ಅವರ
ಅನಿವಾರ್ಯವನ್ನು ಸಾಬೀತುಪಡಿಸಿತು. ಆದರೆ, ವಯಸ್ಸಿನ ಕಾರಣದಿಂದಾಗಿ ಮತ್ತು ಈಗಾಗಲೇ ಎಲ್ಲಾ ಅಧಿಕಾರವನ್ನು ಅನುಭವಿಸಿದ ಅವರಿಗೆ ಸ್ಥಾನ ಮಾನ ಸಿಗದೇ ಇದ್ದರೂ ಅವರ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದರು. ಅಲ್ಲಿಗೆ ಯಡಿಯೂರಪ್ಪ ಅವರು ಅನಿವಾರ್ಯ ಎಂಬುದನ್ನು ಬಿಜೆಪಿ ಒಪ್ಪಿಕೊಂಡಂತಾ ಗಿತ್ತು. ಆಗಲೇ ಶೆಟ್ಟರ್ ಅವರಿಗೆ ಮತ್ತೆ ಬಿಜೆಪಿ ಸೇರುವ ಆಸೆ ತುಂಬಿ ಕೊಂಡಿದ್ದರೆ ಅದು ಅಚ್ಚರಿಯಲ್ಲ. ಏಕೆಂದರೆ, ತಾವು ಬಿಜೆಪಿ ತೊರೆಯಲು ಪಕ್ಷದಲ್ಲೇ ತಮ್ಮನ್ನು ವಿರೋಧಿಸುವವರು ಕಾರಣ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತಿತ್ತು, ಶೆಟ್ಟರ್ ಕೂಡ ತಿಳಿದಿದ್ದರು.

ಶೆಟ್ಟರ್ ಆಸೆಗೆ ಪೂರಕವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೂಡ ಪ್ರಯತ್ನ ಆರಂಭಿಸಿದರು. ಶೆಟ್ಟರ್ ಕಾಂಗ್ರೆಸ್ ತೊರೆಯಲು ಮುಂದಾದಾಗ ಅವರಿಗೆ ರಾಜ್ಯಸಭೆ ಸದಸ್ಯತ್ವದ ಭರವಸೆಯನ್ನು ಯಡಿಯೂರಪ್ಪ ನೀಡಿದ್ದರು. ವರಿಷ್ಠರೊಂದಿಗೆ ಚರ್ಚಿಸಿದ ಬಳಿಕವೇ ಅವರು ಆ ಭರವಸೆ ನೀಡಿದ್ದರು. ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆತರಲು ಮುಂದಾದ ಯಡಿಯೂರಪ್ಪ ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್ ಕೊಡಿಸುವ ಭರವಸೆ ಕೊಟ್ಟಿದ್ದರು. ಅಲ್ಲಿಗೆ ತಾವು ಬಯಸಿದ್ದೂ ಹಾಲು-ಅನ್ನ, ಸಿಗುವುದೂ ಹಾಲು-ಅನ್ನ ಎಂಬುದು ಶೆಟ್ಟರ್ ಅವರಿಗೆ ಖಾತರಿಯಾಗಿ ಬಿಜೆಪಿ ಸೇರಲು ನಿರ್ಧರಿಸಿದ್ದರು. ಆದರೆ, ವರಿಷ್ಠರ ಒಪ್ಪಿಗೆ ಬೇಕಿತ್ತು. ಅದನ್ನು
ವಿಜಯೇಂದ್ರ ಮತ್ತು ಯಡಿಯೂರಪ್ಪ ನೋಡಿಕೊಂಡರು. ಹೀಗಾಗಿ ಹಿಂದೆ-ಮುಂದೆ ಯೋಚಿಸದೆ ಶೆಟ್ಟರ್ ಬಿಜೆಪಿ ಸೇರಿಯೇಬಿಟ್ಟರು.

ಇಲ್ಲಿ ಶೆಟ್ಟರ್ ಅವರನ್ನು ತುರ್ತಾಗಿ ಬಿಜೆಪಿಗೆ ಸೇರಿಸಿಕೊಳ್ಳುವ ಅವಶ್ಯಕತೆ ಶೆಟ್ಟರ್ ಅವರಿಗಿಂತ ಹೆಚ್ಚಾಗಿ ಬಿಜೆಪಿಗಿತ್ತು. ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಬದಲಾಗಿ ಬೇರೆಯವರಿಗೆ ಟಿಕೆಟ್ ನೀಡಿದರೆ ಆ ಕುಟುಂಬ ಸಿಡಿದೇಳುವ ಸಾಧ್ಯತೆ ಇತ್ತು. ಆದರೆ, ಜಗದೀಶ್ ಶೆಟ್ಟರ್‌ಗೆ ನೀಡಿದರೆ, ಅವರು ಕುಟುಂಬದ ಬಂಧುವೇ ಆಗಿರುವುದರಿಂದ ವಿರೋಧ ವ್ಯಕ್ತವಾಗುವುದಿಲ್ಲ. ಮೇಲಾಗಿ ವಿಧಾನಸಭೆ ಚುನಾವಣೆ ವೇಳೆ ಬಿ.ಎಲ್.ಸಂತೋಷ್ ಮತ್ತು ಅವರ ಕಡೆಯವರು ಕೈಗೊಂಡ ನಿರ್ಧಾರದಿಂದ ಬಿಜೆಪಿಗೆ ಒದಗಿದ್ದ ‘ಲಿಂಗಾಯತ ವಿರೋಽ’ ಹಣೆಪಟ್ಟಿಯಿಂದ ದೂರ ವಾಗುವ ತುರ್ತಿತ್ತು. ಲೋಕಸಭೆ ಚುನಾವಣೆಗೆ
ಕೆಲವೇ ತಿಂಗಳು ಇರುವುದರಿಂದ ಶೆಟ್ಟರ್ ಅವರನ್ನು ಎಷ್ಟು ಬೇಗ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆಯೋ ಅಷ್ಟು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಯಡಿ
ಯೂರಪ್ಪ ಮತ್ತು ವಿಜಯೇಂದ್ರ ಸೇರಿ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟು ಅವರನ್ನು ಪಕ್ಷಕ್ಕೆ ಸೇರಿಸಿಕೊಂಡುಬಿಟ್ಟರು.

ಇದಿಷ್ಟು ಒಂದೆಡೆಯಾದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು, ರಾಜಕೀಯ ಅಽಕಾರ ಇಲ್ಲದೇ ಇರುವುದು ಯಾವ ರೀತಿ ಇಲ್ಲಿ ಕೆಲಸ ಮಾಡಿದೆ ಎಂಬುದಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಬಿಜೆಪಿ ಸೇರ್ಪಡೆ ಉತ್ತಮ ಉದಾಹರಣೆ. ಕಾಂಗ್ರೆಸ್‌ನಲ್ಲಿ ಎಲ್ಲಾ ಅಽಕಾರಗಳನ್ನು ಅನುಭವಿಸಿದರೂ ಯಾವುದೋ ಒಂದು ಕಾರಣಕ್ಕೆ ಕೃಷ್ಣ ಅವರು ಬಿಜೆಪಿ ಸೇರಿದರು. ಆದರೆ, ಯಾವುದೇ ಕಾರಣಕ್ಕೂ ಅವರು ಪಕ್ಷದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹತ್ತಾರು ವರ್ಷಗಳ ಕಾಲ ಯಾವ ಪಕ್ಷವನ್ನು ಸಿದ್ಧಾಂತದ ಕಾರಣಕ್ಕೆ ವಿರೋಧಿಸಿದರೋ ಅದೇ ಪಕ್ಷಕ್ಕೆ ಬಂದು ಆ ಸಿದ್ಧಾಂತ ಒಪ್ಪಿಕೊಳ್ಳಲು ಅವರ ಮನಸ್ಸು ತಯಾರಿರ ಲಿಲ್ಲ. ಆದರೆ, ಮರಳಿ ಕಾಂಗ್ರೆಸ್ ಗೆ ಹೋಗಲು ವಯಸ್ಸಿನ ಕಾರಣ ಅಡ್ಡಿಯಾಗಿತ್ತು.

ಹೀಗಾಗಿ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡು ಬಿಜೆಪಿಯಲ್ಲೇ ಮುಂದುವರಿದು ಅಂತಿಮವಾಗಿ ರಾಜಕೀಯ ನಿವೃತ್ತಿ ಘೋಷಿಸಿದರು. ಇದೇ ಸಮಸ್ಯೆ
ಸಿದ್ದರಾಮಯ್ಯ ಅವರಿಗೂ ಎದುರಾಗಿತ್ತು. ಕಾಂಗ್ರೆಸ್ ಅನ್ನು ವಿರೋಧಿಸಲೆಂದೇ ಹುಟ್ಟಿಕೊಂಡ ಜನತಾ ಪರಿವಾರ ಒಡೆದು ಚೂರಾದಾಗ ಎಚ್.ಡಿ. ದೇವೇಗೌಡರು ಜೆಡಿಎಸ್ ಸ್ಥಾಪಿಸಿದರು. ಆ ಸಂದರ್ಭದಲ್ಲಿ ಅವರ ಹೆಗಲಿಗೆ ಹೆಗಲು ಕೊಟ್ಟು ಜೆಡಿಎಸ್ ಬೆಳೆಸಿದ ಸಿದ್ದರಾಮಯ್ಯ ಆ ವೇಳೆ ‘ಮಾಸ್ ಲೀಡರ್’ ಆಗಿ ಗುರುತಿಸಿಕೊಂಡಿದ್ದರು.

ಅಲ್ಲಿ ನಿರೀಕ್ಷಿತ ಸ್ಥಾನಮಾನ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸೇರಿದರು. ಆದರೆ, ಅವರ ಸೇರ್ಪಡೆ ಕಾಂಗ್ರೆಸ್‌ಗೂ ಅನಿವಾರ್ಯವಾಗಿತ್ತು. ಎಸ್.ಎಂ.ಕೃಷ್ಣ ಅವರ
ನಂತರ ಪಕ್ಷದಲ್ಲಿ ಮಾಸ್ ಲೀಡರ್ ಕೊರತೆ ಎದುರಾಗಿತ್ತು. ಡಿ.ಕೆ.ಶಿವಕುಮಾರ್ ಆಗಷ್ಟೇ ಮುನ್ನೆಲೆಗೆ ಬರುತ್ತಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡ ಕಾಂಗ್ರೆಸ್ ಅವರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಿತು. ಕಾಂಗ್ರೆಸ್ ಸೇರುತ್ತಿದ್ದಂತೆ ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದರು. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನ ಸಿದ್ಧಾಂತದ ಬಿಸಿ ಮುಟ್ಟಲೇ ಇಲ್ಲ. ಆದ್ದರಿಂದ ಅವರು ಕಾಂಗ್ರೆಸ್‌ನಲ್ಲಿ ಅಧಿಕಾರದೊಂದಿಗೆ ಮುಂದುವರಿದಿದ್ದಾರೆ.

ಆದರೆ, ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿ ಅಂಥ ವಾತಾವರಣ ಇರಲಿಲ್ಲ. ಬಿಜೆಪಿಯ ಮೇಲಿನ ಸಿಟ್ಟಿಗಿಂತಲೂ ಆ ಪಕ್ಷದ ಕೆಲವು ನಾಯಕರ ಮೇಲಿನ ಸಿಟ್ಟಿಗೆ ಅವರು ಕಾಂಗ್ರೆಸ್ ಸೇರಿಕೊಂಡಾಗ, ಲಿಂಗಾಯತ ವಿರೋಽ ಎಂಬ ಹಣೆಪಟ್ಟಿಯಿಂದ ದೂರವಾಗಲು ಆ ಪಕ್ಷಕ್ಕೂ ಅದರ ಅಗತ್ಯವಿತ್ತು. ಅದರ ಪರಿಣಾಮ ಚುನಾವಣಾ ಫಲಿತಾಂಶದಲ್ಲಿ  ಸ್ಪಷ್ಟವಾಗಿ ಕಾಣಿಸಿಕೊಂಡಿತ್ತು. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋತರೂ ಪಕ್ಷವು ಶೆಟ್ಟರ್ ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಿತ್ತು. ಆದರೆ, ಶೆಟ್ಟರ್‌ಗೆ ಅದು ಸಾಕಾಗುತ್ತಿರಲಿಲ್ಲ.

ಬಿಜೆಪಿಯಲ್ಲಿದ್ದಾಗ ಮಾಜಿಯಾದರೂ ಅವರಿಗೆ ಪಕ್ಷದಲ್ಲಿ ವಿಶೇಷ ಗೌರವ ಸಿಗುತ್ತಿತ್ತು. ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಇದು ಕಾಂಗ್ರೆಸ್‌ನಲ್ಲಿ ಸಿಗುತ್ತಿರಲಿಲ್ಲ. ಅಲ್ಲಿ ಸಾಕಷ್ಟು ನಾಯಕರು ಇದ್ದುದರಿಂದ ಸಿಗುವ ಸಾಧ್ಯತೆಯೂ ಇರಲಿಲ್ಲ. ಅದಕ್ಕಿಂತ ಮುಖ್ಯವಾಗಿ ತಾವು ಆರ್‌ಎಸ್ ಎಸ್‌ನಲ್ಲಿದ್ದಾಗಿನಿಂದಲೂ ವಿರೋಽಸುತ್ತಲೇ ಬಂದಿದ್ದ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ತುಷ್ಟೀಕರಣ, ಬಹುಸಂಖ್ಯಾತ ಹಿಂದೂಗಳ ವಿಚಾರದಲ್ಲಿ ನಿರ್ಲಕ್ಷ್ಯ ಶೆಟ್ಟರ್ ಅವರಿಗೆ ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಅದರಲ್ಲೂ ಅಯೋಧ್ಯೆಯ ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರ ಶೆಟ್ಟರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳದಿದ್ದರೆ ಕಾಂಗ್ರೆಸ್ ನಲ್ಲಿ ಸಂಪೂರ್ಣ ಮೂಲೆಗುಂಪಾಗುವ ಆತಂಕ
ವಿತ್ತು. ಅದರಲ್ಲೂ ಲೋಕಸಭೆ ಚುನಾವಣೆಯಲ್ಲಿ ಇದೇ ಪ್ರಮುಖ ಅಂಶವಾಗುವ ಸಾಧ್ಯತೆಗಳಿದ್ದು ದರಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ತಕ್ಷಣವೇ ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದರು. ಅಲ್ಲಿಗೆ ಶೆಟ್ಟರ್ ಅವರ ೯ ತಿಂಗಳು, ೯ ದಿನದ ಕಾಂಗ್ರೆಸ್ ಸಹವಾಸಕ್ಕೆ ತೆರೆ ಬಿತ್ತು.

ಲಾಸ್ಟ್ ಸಿಪ್: ಸಿಟ್ಟಿನ ಕೈಗೆ ಬುದ್ಧಿ ಕೊಡುವುದು, ಚುನಾವಣೆ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷ ಬದಲಿಸುವುದು ಎರಡೂ ಒಂದೇ.

Leave a Reply

Your email address will not be published. Required fields are marked *

error: Content is protected !!