Saturday, 23rd November 2024

Shishir Hegde Column: ಮಕ್ಕಳಿಗೆ ಮೊಬೈಲ್‌ ಸಂಸ್ಕಾರ- ಹೇಗೆ, ಯಾವಾಗ ಮತ್ತು ಎಷ್ಟು ?

ಶಿಶಿರ ಕಾಲ

ಶಿಶಿರ್‌ ಹೆಗಡೆ

ಸ್ಟೀವ್ ಜಾಬ್ಸ್. ಹೆಸರು ಕೇಳಿಯೇ ಇರುತ್ತೀರಿ! ಆಪಲ್ (ಫೋನ್) ಕಂಪನಿಯ ಸ್ಥಾಪಕರಲ್ಲೊಬ್ಬ, ದಾರ್ಶನಿಕ, ಬಿಸಿನೆಸ್
ಮ್ಯಾನ್, ಇತ್ಯಾದಿ. ೨೦೧೦ರ ಆಸುಪಾಸು. ಅದಾಗಲೇ ಐಫೋನ್ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು
ಪಡೆದಿತ್ತು. ಆಗತಾನೆ ಬಿಡುಗಡೆಯಾದ ಐಪ್ಯಾಡ್ ಮಕ್ಕಳ ಶಿಕ್ಷಣಕ್ಕೆ ಹೇಳಿಮಾಡಿಸಿದ್ದು ಎಂದು ಆಪಲ್ ಕಂಪನಿ ಜಾಹೀ ರಾತು ನೀಡುತ್ತಿತ್ತು. ಆಪಲ್ ಕಂಪನಿಯ ಮಾರ್ಕೆಟಿಂಗ್ ತಂಡವು ಅಮೆರಿಕದ ಹಲವು ರಾಜ್ಯ ಸರಕಾರಗಳ ಜತೆ ವ್ಯಾವಹಾರಿಕವಾಗಿ ಕೈಜೋಡಿಸಿತ್ತು.

ಶಿಕ್ಷಣಕ್ಕೆ ಬೇಕಾಗುವ ಅಪ್ಲಿಕೇಷನ್‌ಗಳನ್ನು ಐಪ್ಯಾಡ್‌ಗೆಂದೇ ಅಭಿವೃದ್ಧಿ ಪಡಿಸಲಾಯಿತು. ಕ್ರಮೇಣ ಅಮೆರಿಕನ್ ಶಿಕ್ಷಣ ವ್ಯವಸ್ಥೆಯ ಜತೆ ಐಪ್ಯಾಡ್ ಸೇರಿಕೊಂಡಿತು. ಅಮೆರಿಕದ ಶಾಲೆಗಳು ಕಿಂಡರ್ -ಗಾರ್ಟನ್ ವಯಸ್ಸಿನಲ್ಲಿಯೇ ಮಕ್ಕಳಿಗೆ ಐಪ್ಯಾಡ್ ನೀಡುವ ಕ್ರಮ ಆರಂಭಿಸಿದವು.

ಇದನ್ನೂ ಓದಿ: ದಿನವೊಂದಕ್ಕೆ 25 ತಾಸು, ತಪ್ಪುವುದೇ ಜಗತ್ತಿನ ತ್ರಾಸು ?

ಆದರೆ ಖುದ್ದು ಸ್ಟೀವ್ ಜಾಬ್ಸ್ ತನ್ನ ಮಕ್ಕಳಿಗೆ ಐಪ್ಯಾಡ್, ಐಫೋನ್ ಅಥವಾ ಯಾವುದೇ ಸ್ಮಾರ್ಟ್ ಇಲೆಕ್ಟ್ರಾನಿಕ್
ಸಲಕರಣೆ ಬಳಸಲು ಕೊಡುತ್ತಿರಲಿಲ್ಲ. ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ, ‘ಐಫೋನ್, ಐಪ್ಯಾಡ್ ಅಥವಾ ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ಮಕ್ಕಳ ಬಳಕೆಗೆ ಅಲ್ಲ, ಹಾಗಾಗಿ ನನ್ನ ಮಕ್ಕಳಿಗೆ ಕೊಡುವುದಿಲ್ಲ’ ಎಂದಿದ್ದ. ಸ್ಟೀವ್ ಜಾಬ್ಸ್ ಸ್ಮಾರ್ಟ್ ಫೋನ್‌ನಲ್ಲಿ ಕ್ರಾಂತಿ ತಂದ ವ್ಯಕ್ತಿ. ಆದರೆ ತನ್ನ ಮಕ್ಕಳಿಗೆ ಇಂಥ ಡಿವೈಸ್‌ಗಳನ್ನು ಕೊಡಲು ಆತ ಎಂದಿಗೂ ಒಪ್ಪಿರಲಿಲ್ಲ. ಆಗಿ ನ್ನೂ ಮೊಬೈಲ್ ಒಂದು ಸವಲತ್ತಿನ ಸಾಧನವಾಗಿತ್ತೇ ವಿನಾ ಇಂದಿನಂತೆ ಮಕ್ಕಳ ಫೋನ್ ಬಳಕೆ ಒಂದು ಸಮಸ್ಯೆಯಾಗಿರಲಿಲ್ಲ.

ಪೋನ್‌ಗಳು ಆಗಷ್ಟೇ ಸ್ಮಾರ್ಟ್ ಆಗುತ್ತಿದ್ದವು. ಆದರೆ ಐಫೋನ್ ಹುಟ್ಟಿದಾಗಲೇ ಅದರ ಪಿತಾಮಹ ಸ್ಟೀವ್ ಜಾಬ್ಸ್‌ಗೆ ಇದು ಮಕ್ಕಳಿಗೆ ಯೋಗ್ಯವಲ್ಲ ಎಂದು ತಿಳಿದಿತ್ತು. ಮೊಬೈಲ, ಸ್ಮಾರ್ಟ್ ಫೋನ್‌ಗಳನ್ನು ಬಳಸುವಷ್ಟು ಪ್ರಬುದ್ಧತೆ ಮಕ್ಕಳಿಗೆ ಬಂದಿರುವುದಿಲ್ಲ ಎಂಬುದು ಸ್ಟೀವ್ ಜಾಬ್ಸ್‌ನ ಗಟ್ಟಿ ನಂಬಿಕೆಯಾಗಿತ್ತು. ಶಾಲೆಯ ಪ್ರಾಜೆಕ್ಟ್ ಕೆಲಸಕ್ಕೆ ಬೇಕೆಂದರೆ ಮಾತ್ರ ಕಂಪ್ಯೂಟರ್, ಇಂಟರ್ನೆಟ್ ಬಳಸಲು‌ ಒಪ್ಪಿಗೆಯಿತ್ತು.

ಈ ವಿಷಯದಲ್ಲಿ ಸ್ಟೀವ್ ಜಾಬ್ಸ್ ಒಬ್ಬನೇ ಈ ರೀತಿಯಲ್ಲ. ಫೇಸ್‌ಬುಕ್‌ನ ರೂವಾರಿ ಮಾರ್ಕ್ ಜುಕರ್‌ಬರ್ಗ್, ಟೆಸ್ಲಾ
ಖ್ಯಾತಿಯ ಎಲಾನ್ ಮ, ಮೈಕ್ರೋಸಾಫ್ಟ್‌ ನ ಸತ್ಯ ನಡೆ ಇವರೆಲ್ಲರ ಸ್ಮಾರ್ಟ್ ಫೋನ್ ಬಗೆಗಿನ ಅಭಿಪ್ರಾಯ ಇದುವೇ
ಆಗಿದೆ. ಇವರ‍್ಯಾರೂ ತಮ್ಮ ಮಕ್ಕಳಿಗೆ ಬೇಕಾಬಿಟ್ಟಿ ಸ್ಮಾರ್ಟ್ ಡಿವೈಸ್ ಕೊಡುವುದಿಲ್ಲ. ಇದನ್ನು ಖುದ್ದು ಅವರುಗಳೇ
ಹಲವು ವೇದಿಕೆಯಲ್ಲಿ ಹೇಳಿಕೊಂಡಿದ್ದಿದೆ. ಅವರೆಲ್ಲರಿಗೂ ಇದು ಗೊತ್ತಿದೆ. ಈಗ ಮೊಬೈಲ, ಸ್ಮಾರ್ಟ್ ಸಲಕರಣೆ ಳಿಲ್ಲದ ಬದುಕನ್ನು ಯಾರಿಂದಲೂ ಊಹಿಸಿಕೊಳ್ಳಲಿಕ್ಕಾಗುವುದಿಲ್ಲ.

ಕೈಯಲ್ಲಿ ಒಂದರ್ಧ ಗಂಟೆ ಮೊಬೈಲ್ ಇಲ್ಲದಿದ್ದರೆ ರಕ್ತ ಸಂಚಾರವೇ ನಿಂತಂತೆ ಆಡುತ್ತೇವೆ. ಮೊಬೈಲ್ ಬದುಕನ್ನು
ಯಥೇಚ್ಛ ಸುಲಭವಾಗಿಸಿದ್ದು ನಿಜ. ಸ್ಮಾರ್ಟ್ ಫೋನ್ ಬಗ್ಗೆ ನನಗೆ ಎಳ್ಳಷ್ಟೂ ತಕರಾರಿಲ್ಲ. ಇದೊಂದು ವರ ಹೌದು.
ಮನುಷ್ಯನಿಗೆ ವಿಮಾನಕ್ಕಿಂತ ಮೊಬೈಲ್ ಕೊಟ್ಟ mobility- ಚಲನಾಸಾಧ್ಯತೆ ಹೆಚ್ಚು. ಆದರೆ ಮೊಬೈಲ್‌ನ ವ್ಯಂಗ್ಯ ವೆಂದರೆ ಅದು ತಾನು ಉಳಿಸಿದ ಸಮಯವನ್ನು ತಾನೇ ಕಬಳಿಸುತ್ತದೆ. ನಮ್ಮೆಲ್ಲರ ಮೊಬೈಲ್‌ನಲ್ಲಿ ಸಮಯ ಉಳಿಸುವ ಅಪ್ಲಿಕೇಷನ್ನಿಗಿಂತ ಸಮಯ ವ್ಯರ್ಥವಾಗಿಸುವ ಅಪ್ಲಿಕೇಷನ್ನುಗಳೇ ಜಾಸ್ತಿ ಇರುತ್ತವೆ. ಅದೆಲ್ಲ ಏನೇ ಇರಲಿ, ಇವತ್ತು ಮೊಬೈಲ್ ಎಂಬುದು ಧರಿಸುವ ಚಪ್ಪಲಿ, ಬಟ್ಟೆಗಳಷ್ಟೇ ಅಗತ್ಯ ವಸ್ತುವಾಗಿದೆ.

ಇದನ್ನೂ ಓದಿ:ಸಾಧನೆಗೆ ಸಿದ್ದ ಫಾರ್ಮುಲಾ ಇಲ್ಲ, ಒಮ್ಮೆಲೆ ಸಾಧನೆಯೂ ಆಗಲ್ಲ

ನಮ್ಮ ಸನಾತನ ಧರ್ಮದಲ್ಲಿ ಗರ್ಭಧಾರಣ, ಜಾತಕರ್ಮ (ಹುಟ್ಟು), ಚೌಲ, ನಾಮಕರಣ, ಅನ್ನಪ್ರಾಶನ, ಉಪನಯನ, ವಿವಾಹ ಹೀಗೆ ಅಂತ್ಯೇಷ್ಠಿಯವರೆಗೆ ಪ್ರತಿಯೊಂದು ಜೀವನ ಹಂತಕ್ಕೂ ಸಂಸ್ಕಾರಗಳಿವೆ. ಈ ಷೋಡಶ ಸಂಸ್ಕಾರದ ಜತೆಗೆ ಇತ್ತೀಚೆಗೆ ಮೊಬೈಲ್ ಹೊಂದುವುದು ಇತ್ಯಾದಿ ಸಂಸ್ಕಾರಗಳನ್ನು ಕೂಡ ಜೀವನದ ಭಾಗವಾಗಿಸ ಬೇಕೆಂದು ಅದೆಷ್ಟೋ ಬಾರಿ ಅನ್ನಿಸಿದ್ದಿದೆ. ಏಕೆಂದರೆ ಜೀವನದ ಭಾಗವೇ ಆಗಿರುವ ಮೊಬೈಲ್ ಅನ್ನು ಇಂದಿನ ಮಕ್ಕಳಿಗೆ ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳು ಪಾಲಕರಿಗಿವೆ. ಬಹುತೇಕ ಹೊಸ ತಲೆಮಾರಿನ ತಂದೆ-ತಾಯಿಗಳಿಗೆ ಮೊಬೈಲ್‌ನ ದುಷ್ಪರಿಣಾಮದ ಅಂದಾಜಿದೆ. ಆದರೆ ಮಕ್ಕಳಿಗೆ ಯಾವ ಹಂತದಲ್ಲಿ, ಯಾವ ರೀತಿಯಲ್ಲಿ ಮೊಬೈಲ್ ನೀಡಬೇಕು, ಬಳಕೆಯನ್ನು ಎಷ್ಟು ನಿಯಂತ್ರಿಸಬೇಕು ಎಂಬ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ. ಏಕೆಂದರೆ ಮೊಬೈಲ್ ಇಷ್ಟು ಬಳಸುತ್ತಿರುವ ಮೊದಲ ತಲೆಮಾರಿನ ತಂದೆ-ತಾಯಂದಿರು ಖುದ್ದು ತಾವೇ ಬಳಕೆ-ದುರ್ಬಳಕೆಯ ಸುಳಿಯಲ್ಲಿ ಸುತ್ತುತ್ತಿದ್ದಾರೆ.

ಮನೋವೈದ್ಯರಲ್ಲಿ ಕೇಳಿದರೆ ೧೫ ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಕೊಡಲೇಬಾರದು ಎನ್ನುತ್ತಾರೆ. ೧೮
ದಾಟಿದ ಮೇಲೆಯೇ ಮೊಬೈಲ್ ಕೊಡಬೇಕು ಎನ್ನುವವರೂ ಇದ್ದಾರೆ. ನಿಜ ಹೇಳಬೇಕೆಂದರೆ ಇದು ಇಂದಿನ ದಿನಮಾನದಲ್ಲಿ ಪ್ರಾಯೋಗಿಕವಾಗಿ ಸಾಧ್ಯವಿಲ್ಲ, ಸಾಧುವಲ್ಲ. ಹಾಗಾದರೆ ಮಕ್ಕಳಿಗೆ ಮೊಬೈಲ್ ಸಂಸ್ಕಾರ ಕೊಡು ವುದು ಹೇಗೆ? ಯಾವಾಗ? ಎಷ್ಟು? ಎಂಬುದು ಇಲ್ಲಿನ ಪ್ರಶ್ನೆ. ಈಗ ಕೆಲ ತಿಂಗಳುಗಳ ಹಿಂದೆ ಒಂದು ತಿಂಗಳು ರಜೆ ಗೆಂದು ಭಾರತದಲ್ಲಿದೆ. ವಿದೇಶದಲ್ಲಿರುವ ಒಂದು ಉಪಯೋಗವೆಂದರೆ ವರ್ಷಗಳ ಅಂತರದಲ್ಲಿ ದೇಶಕ್ಕೆ ಭೇಟಿ ನೀಡಿದಾಗ, ಕೆಲವೊಂದು ಬದಲಾವಣೆಗಳು ಅಲ್ಲಿರುವವರಿಗಿಂತ ಹೆಚ್ಚು ಅಚ್ಚೆದ್ದು ಕಾಣಿಸುತ್ತವೆ. ನಮ್ಮ ಎದುರಿಗಿನ ಯಾವುದೇ ಬದಲಾವಣೆಯನ್ನು ನೆನಪಿನೊಡನೆ ಹೋಲಿಸಿ ಅಪಾಯವನ್ನು ಅಂದಾಜಿಸುವುದು ಮನುಷ್ಯನ ಬೇಸಿಕ್ ಇನ್‌ಸ್ಟಿಂಕ್ಟ್ (ಮೂಲಪ್ರವೃತ್ತಿ) ಅಲ್ಲವೇ? ಈ ಬಾರಿ ನನಗೆ ದೇಶದಲ್ಲಿ ಅತ್ಯಂತ ಢಾಳಾಗಿ, ಹೋದಲ್ಲಿ ಬಂದಲ್ಲಿ, ವಿಮಾನದಲ್ಲಿ, ರೈಲು, ಬಸ್ಸು, ಕಾರು, ಅಂಗಡಿ, ಹೋಟೆಲ್ಲು, ಮಾಲ, ಮನೆಗಳು ಹೀಗೆ ಎಡೆಯೂ ಕಾಣಿಸಿದ್ದೆಂದರೆ ಮಕ್ಕಳ ‘ಮೊಬೈಲ್ ಬಳಕೆ’. ಭಾರತದಲ್ಲಿ ದೊಡ್ಡವರಿಗಿಂತ ಮಕ್ಕಳೇ ಹೆಚ್ಚು ಮೊಬೈಲ್ ಬಳಸು ತ್ತಾರೆ ಎಂದೆನಿಸಿಬಿಟ್ಟಿತು. ಮಕ್ಕಳು ಅತ್ತು ರಂಪ ಮಾಡಿ ಎಂದರಲ್ಲಿ ಮೊಬೈಲ್ ಬೇಡುತ್ತಿದ್ದವು.

ಪಾಲಕರು ಒಮ್ಮೆ ರಗಳೆ ನಿಂತರೆ ಸಾಕು ಎಂದು ಹುಚ್ಚಾಸ್ಪತ್ರೆಯಲ್ಲಿ ಉಪಟಳ ಜಾಸ್ತಿಯಾದಾಗ ಗುಳಿಗೆ ಕೊಡುವಂತೆ
ಮೊಬೈಲ್ ಕೈಗಿತ್ತು, ‘ಇವನು ಹೀಗೆಯೇ. ತುಂಬಾ ಹಠ. ಬೇಕೆಂದರೆ ಬೇಕೇ ಬೇಕು. ಏಯ್ ಅಂಕಲ್ ಬಯ್ತಾರೆ
ನೋಡು’ ಎಂದು ಅಕ್ಕ-ಪಕ್ಕದವರಲ್ಲಿ ಹಲ್ಲು ಗಿಂಜುತ್ತಿದ್ದರು. ಇಲ್ಲಿ ಮಕ್ಕಳು ಬದಲಾಗಿಲ್ಲ. ಬದಲಿಗೆ ಕಾಗಕ್ಕ ಗುಬ್ಬಕ್ಕನ, ಚಂದಮಾಮಾ ಕಥೆಯನ್ನು ಹೇಳಿ ಊಟಮಾಡಿಸುತ್ತಿದ್ದ ಅಮ್ಮಂದಿರು ಈಗ ಕಾಣುತ್ತಿಲ್ಲ. ನಾ ಕಂಡ ಪ್ರತಿಯೊಬ್ಬ ತಾಯಿಯೂ ಶಿಶುವಿನೆದುರು ಮೊಬೈಲ್ ಇಟ್ಟು, ‘ಓಲ್ಡ್ ಮ್ಯಾಕ್ಡೊನಾಲ್ಡ್ ಹ್ಯಾಡ್ ಅ ಫಾರ್ಮ್’ ಹಾಡನ್ನು ಹಾಕಿ ಮಕ್ಕಳ ಬಾಯಿಗೆ ಆಹಾರ ತುರುಕುತ್ತಿದ್ದರು. ಆ ಶಿಶುವೋ, ಅದೇನು ತಿನ್ನುತ್ತಿದ್ದೇನೆ ಎಂಬ ಅರಿವೇ ಇಲ್ಲದೆ ಚಮಚ ಬಾಯಿಯ ಹತ್ತಿರ ಬಂದಾಗ ತೆರೆಯುತ್ತಿತ್ತು.

‘ಮೊಬೈಲ್ ನಿಲ್ಲಿಸುತ್ತೇನೆ’ ಎಂದು ತಾಯಿ ಗದರಿಸಿದಲ್ಲಿ ಮಾತ್ರವೇ, ಬಾಯಲ್ಲಿಯೇ ಇಟ್ಟುಕೊಂಡ ಆಹಾರವನ್ನು ಶಿಶು ನುಂಗುತ್ತಿತ್ತು. ಈ ರೀತಿ ಭಾವಪರವಶ ಮಕ್ಕಳ ಹೊಟ್ಟೆಗೆ ಜಿಪ್ ತೆಗೆದು ಹಾಕಿದಂತೆ ಆಹಾರ ಒಳಸೇರಿಸುವ ದೃಶ್ಯ ತೀರಾ ಸಾಮಾನ್ಯವಾಗಿತ್ತು. ಒಬ್ಬ ತಾಯಿಗಂತೂ ಬಾಯಿಬಿಟ್ಟು ಮೊಬೈಲ್ ದುಷ್ಪರಿಣಾಮ ವಿವರಿಸಿ ಹೀಗೆ ಮಾಡಬೇಡಿ ಅಂತ ಹೇಳಿದ್ದೂ ಆಯಿತು. ಅದಾದ ಸ್ವಲ್ಪ ಸಮಯದ ನಂತರ ಅದೇ ತಾಯಿ ‘ನನ್ನ ಎರಡು ವರ್ಷದ ಮಗುವಿಗೆ ಮೊಬೈಲ್ ಅನ್‌ಲಾಕ್ ಮಾಡಲು ಬರುತ್ತದೆ, ಬ್ಯಾಕ್ ಬಟನ್ ಒತ್ತುವುದು, ತಾನು ವಿಡಿಯೋ ನೋಡು ವಾಗ ಯಾರದ್ದೇದರೂ ಕರೆ ಬಂದರೆ ಅದನ್ನು ಡಿಸ್‌ಕನೆಕ್ಟ್ ಮಾಡುವುದು ಗೊತ್ತು, ಅವನಿಗೆ ಬೇಕಾದ ವಿಡಿಯೋ ಅವನೇ ಹಚ್ಚಿಕೊಳ್ಳುತ್ತಾನೆ’ ಎಂದು ಹೇಳುವಾಗ ಅವಳ ಕಣ್ಣಲ್ಲಿ ಮೂರ್ಖ ಖುಷಿ‌ಯ ಹೆಮ್ಮೆಯಿತ್ತು.

ನಾನು ಹೇಳಿದಾಕ್ಷಣ ತಾಯಿಗೆ ತಪ್ಪಿನ ಅರಿವಾದಂತೆ ಕಂಡರೂ ಮಗು ಬಿಡಬೇಕಲ್ಲ. ಮುಂದಿನ ತುತ್ತಿಗಿಂತ ಮೊದಲು ಮಗು ‘ಬಾ ಬಾ’ ಎಂದು ಬಾಬಾ ಬ್ಲಾಕ್‌ಶೀಪ್ ಹಾಡನ್ನು ಮೊಬೈಲ್‌ನಲ್ಲಿ ಕೇಳಿ ದುಪ್ಪಟ್ಟಾ ಎಳೆಯು ತ್ತಿತ್ತು. ಮಕ್ಕಳು ಐದು ವರ್ಷದವರೆಗೆ ಕಲಿಯುವ ನೂರಾರು ವಿದ್ಯೆಗಳಲ್ಲಿ ಊಟ ಮಾಡುವ ವಿದ್ಯೆ ಕೂಡ ಒಂದು, ಬಹು ಮುಖ್ಯವಾದುದು. ಈ ರೀತಿ ವಿಡಿಯೋ ತೋರಿಸುವುದರ ದೊಡ್ಡ ಸಮಸ್ಯೆಯೆಂದರೆ ಆ ಮಗುವಿಗೆ
ಆಹಾರದ ರುಚಿಯ ಮತ್ತು ರಚನೆಯ ಅರಿವು ಆಗುವುದಿಲ್ಲ. ವಿಡಿಯೋ ನೋಡು ವ ಮೂಲಕ ಸ್ಕ್ರೀನ್ ಟೈಮ್ ಚಟವಾಗುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಆ ಮಗು ಆಹಾರ ಸ್ವೀಕರಿಸುವುದನ್ನು ಕಲಿಯುವುದೇ ಇಲ್ಲ. ಇದರ ಪರಿಣಾಮ ಮಗು ಬೆಳೆದಂತೆ ಸಮತೋಲಿತ ಆಹಾರದೆಡೆಗೆ ಇಚ್ಛೆಯನ್ನು ಕಳೆದುಕೊಳ್ಳುತ್ತದೆ. ಹೆಚ್ಚು ರುಚಿಯ, ಸಕ್ಕರೆ, ಉಪ್ಪು, ಕೊಬ್ಬಿರುವ ಜಂಕ್ ಆಹಾರವನ್ನು ಬಯಸುತ್ತದೆ.

ಅದಲ್ಲದೆ ವಿಡಿಯೋದಲ್ಲಿಯೇ ಮಗು ಕ್ರಮೇಣ ಜಗತ್ತನ್ನು ನೋಡಲು ಹವಣಿಸುತ್ತದೆ. ಹೂವಿನ ಮೇಲೆ ಹಾರುವ
ದುಂಬಿ ನೋಡಲು ಹೊರಗೆ ಹೋಗಬೇಕಿಲ್ಲ, ಮೊಬೈಲ್ ನಲ್ಲಿಯೇ ಅದು ಸಿಗುವಾಗ ದೈಹಿಕ ಶ್ರಮವೇಕೆ? ವಿಡಿಯೋ
ಗೇಮ್ ಕೂಡ ಹಾಗೆಯೇ. ಯಾವುದೇ ದೈಹಿಕ ಶ್ರಮವಿಲ್ಲದೆ ಗೆಲ್ಲುವ ಅನುಭವ ಇದರಿಂದ ಪಡೆಯಬಹುದಾಗಿದೆ.
ಅದಕ್ಕಾಗಿ ಆಟದ ಬಯಲಿಗೆ ಹೋಗಿ ನೋವು, ಸುಸ್ತು ಮಾಡಿಕೊಳ್ಳಬೇಕಾಗಿಲ್ಲ. ಈ ರೀತಿ ಸ್ಕ್ರೀನ್‌ನಲ್ಲಿಯೇ ಸರ್ವಸ್ವ
ಕಾಣುವ ಮಕ್ಕಳು ಕ್ರಮೇಣ ಜಗತ್ತನ್ನು ಎದುರಿಸಲಾಗದೇ ಒದ್ದಾಡುತ್ತವೆ. ಅಲ್ಲದೆ ಆ ರೀತಿ ಬೆಳೆದ ಮಕ್ಕಳಿಗೆ ಜೀವನದ
ಯಾವುದೇ ಚಿಕ್ಕಪುಟ್ಟ ಗೆಲುವುಗಳು ಸಂತಸ, ಅವಶ್ಯ ಉತ್ಸಾಹ ತುಂಬುವುದಿಲ್ಲ. ಕ್ರಮೇಣ ಖಿನ್ನತೆ ಇತ್ಯಾದಿ ಸಮಸ್ಯೆ ಗಳು ಬೆಳೆಯುವ ಹಂತದಲ್ಲಿ, ನಂತರದಲ್ಲಿಯೂ ಕಾಡುತ್ತವೆ.

ದೈಹಿಕ ಶ್ರಮವಿಲ್ಲದೆ ಗೆಲುವಿನ, ಖುಷಿಯ ಅನುಭವ ಕೊಡುವ ಮೊಬೈಲ್ ಮಕ್ಕಳ ಮಿದುಳಿನಲ್ಲಿ ಡೋಪಮೈನ್
-ಖುಷಿಯ ಜಾಡ್ಯ ಹುಟ್ಟುಹಾಕಿಬಿಡುತ್ತದೆ. ಇಷ್ಟಾಗಿಯೂ ಐದು ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ನಲ್ಲಿ ಏನೋ ಒಂದನ್ನು ತೋರಿಸಬೇಕೆಂದರೆ ಅದು ಕಲಿಕೆಯದ್ದಷ್ಟೇ ಆಗಿರಬೇಕು. ಅಲ್ಲದೆ ಸದಾಕಾಲ ಪಾಲಕರೇ ಮೊಬೈಲ್ ಆಪರೇಟ್ ಮಾಡಬೇಕು. ಅದು ಬಿಟ್ಟು ಯೂಟ್ಯೂಬಿನಲ್ಲಿ ಏನೋ ಒಂದು ವಿಡಿಯೋ ತೋರಿಸಿ, ನಂತರದಲ್ಲಿ ಮಗುವೇ ಸ್ಕ್ರೀನಿನಲ್ಲಿ ಮೂಡುವ ಮುಂದಿನ ವಿಡಿಯೋ ನೋಡಲು ಅನಿಯಂತ್ರಿತ ಬಿಡಲೇಬಾರದು. ಐದರೊಳಗಿನ ಮಕ್ಕಳಿಗೆ ಮೊಬೈಲ್ ಸಂಪೂರ್ಣ ನಿಷಿದ್ಧ ಮಾಡುವುದು ಸರಿ. ಆ ಸಮಯದಲ್ಲಿ ಮೊಬೈಲ್ ಕಲಿಯುವ ಅವಶ್ಯಕತೆ ಇರುವುದಿಲ್ಲ.

೬-೯ ವಯಸ್ಸು. ಈ ವಯಸ್ಸಿನಲ್ಲಿ ಇಂದಿನ ಮಕ್ಕಳು ಡಿಜಿಟಲ್ ಉಪಕರಣಗಳ ಬಗ್ಗೆ ಸಹಜವಾಗಿ ಅತಿ-ಕುತೂಹಲ
ಬೆಳೆಸಿಕೊಳ್ಳುತ್ತಾರೆ. ಇದು ಎದುರಿಗೆ ಏನಿದ್ದರೂ ಕಲಿತುಬಿಡುವ, ಅರ್ಥಮಾಡಿಕೊಳ್ಳುವ ವಯಸ್ಸು. ಅದಕ್ಕೆ ಬೇಕಾದ
ಹಾರ್ಮೋನುಗಳು ಸ್ರವಿಸುವ, ಮಿದುಳಿನ ರಚನೆಯಾಗುವ ವಯಸ್ಸು. ಈ ಹಂತದ ಮಕ್ಕಳು ಓದಲು, ನೋಡಲು,
ಬಳಸಲು ಸಾಕಷ್ಟು ಕಲಿಕೆಯ ಅಪ್ಲಿಕೇಷನ್‌ಗಳು ಲಭ್ಯವಿವೆ. ಈ ಹಂತದಲ್ಲಿ ಡಿಜಿಟಲ್ ಸಾಧನಗಳ ಉಪಯೋಗ,
ದುರುಪಯೋಗದ ಬಗ್ಗೆ ಮಕ್ಕಳಲ್ಲಿ ನಿಧಾನಕ್ಕೆ ಅರಿವು ಮೂಡಿಸುವ ಕೆಲಸ ಪಾಲಕರಿಂದಾಗಬೇಕು.

ಫೋನ್, ಐಪ್ಯಾಡ್ ಮೊದಲಾದವುಗಳ ಸರಿಯಾದ ಬಳಕೆ ಹೇಗೆ, ಇಂಟರ್ನೆಟ್ಟಿನಲ್ಲಿ ವಿಷಯ ಸಂಗ್ರಹಣೆ ಹೇಗೆ ಇತ್ಯಾದಿಯ ‘ಪರಿಚಯ’ ಈ ಹಂತದಲ್ಲಿ ಸೂಕ್ತ. ಆದರೆ ಇಲ್ಲಿ ಸದಾ ಮಕ್ಕಳ ಮೇಲಿನ ನಿಗಾ ಅವಶ್ಯ. ಏಕೆಂದರೆ ಇಂಟರ್ನೆಟ್ಟಿನಲ್ಲಿ ಒಳ್ಳೆಯದಕ್ಕಿಂತ ಮಕ್ಕಳಿಗೆ ಹೊಂದದ ವಿಷಯ, ವಿಚಾರ, ವಿಡಿಯೊಗಳೇ ಜಾಸ್ತಿ ಇವೆ. ಹಾಗಾಗಿ ಮಕ್ಕಳು ಅಂಥ ಅಸಮಂಜಸ ವಿಚಾರಗಳನ್ನು ನೋಡುವುದನ್ನು ತಪ್ಪಿಸಬೇಕೆಂದರೆ ಮಕ್ಕಳ ಪಕ್ಕದಲ್ಲಿಯೇ,
ಜತೆಯಲ್ಲಿಯೇ ಕೂತಿರಬೇಕು. ಮುಖ್ಯವಾಗಿ ಮಕ್ಕಳಿಗೆ ನಿಮ್ಮ ಮೊಬೈಲ್ ಪಾಸ್‌ವರ್ಡ್ ತಿಳಿದಿರಬಾರದು. ಈ ಹಂತ ದಲ್ಲಿ ಮೊಬೈಲ್ ಎಂದರೇನೆಂಬ ಕಲಿಕೆಗಷ್ಟೇ ಮೊಬೈಲ್ ಸೀಮಿತವಾಗಿರಬೇಕು.

೧೦-೧೨ ವಯಸ್ಸು. ಈ ವಯಸ್ಸಿನ ಮಕ್ಕಳಿಗೆ ಸ್ಮಾರ್ಟ್ ಫೋನ್‌ನ ಉಳಿದ ಬಳಕೆಗಳಾದ ವಾಟ್ಸ್ಯಾಪ್, ಸೋಷಿಯಲ್
ಮೀಡಿಯಾ ಇವುಗಳ ಪರಿಚಯ ಮಾಡಿಸಬಹುದು. ಹಾಗಂತ ಅವರಿನ್ನೂ ಅದೆಲ್ಲವನ್ನು ಬಳಸುವಷ್ಟು ಪ್ರಬುದ್ಧತೆ
ಹೊಂದಿರುವುದಿಲ್ಲ. ಹಾಗಾಗಿ ಅವರೇ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಲು ಇದು ಸರಿಯಾದ ವಯಸ್ಸು ಅಲ್ಲವೇ ಅಲ್ಲ. ಆದರೆ ಇವೆಲ್ಲ ಏನು, ಅದರ ಉಪಯೋಗ, ಅಡ್ಡ ಪರಿಣಾಮಗಳೇನು, ಸುರಕ್ಷಿತ ಬ್ರೌಸಿಂಗ್, ಸೈಬರ್ ಬುಲ್ಲಿಯಿಂಗ್ ಎಂದರೇನು ಎಂಬುದರ ಪರಿಚಯ ಮಾಡಿಕೊಡಲು ಇದು ಯೋಗ್ಯ ವಯಸ್ಸು. ಏಕೆಂದರೆ ಈ ಮಕ್ಕಳು ಇನ್ನೊಂದೆರಡು ವರ್ಷದಲ್ಲಿ ಟೀನ್- ಹದಿಹರೆಯದ ಹಂತ ತಲುಪುವವರಿರುತ್ತಾರೆ. ಹಾಗಾಗಿ ಅವರಲ್ಲಿ ಹಾರ್ಮೋನ್ ತನ್ನ ಕೈಚಳಕ ಶುರುಮಾಡುವುದಕ್ಕಿಂತ ಮೊದಲು ಯಾವುದು ಸಾಧು, ಸರಿ, ಯಾವುದು ತಪ್ಪು ಎಂಬುದರ ಅರಿವನ್ನು ಮೂಡಿಸಲೇಬೇಕು. ಇದು ಪಾಲಕರಿಂದಾಗಬೇಕೇ ವಿನಾ, ಶಾಲೆಯಿಂದಾಗುವ ಕೆಲಸವಲ್ಲ.

ಸಾಮಾನ್ಯವಾಗಿ, ಅದರಲ್ಲಿಯೂ ವಿಶೇಷವಾಗಿ ಪೇಟೆಗಳ ಲ್ಲಿ ೧೩-೧೫ ವಯಸ್ಸಿನಲ್ಲಿ ಮಕ್ಕಳಿಗೆ ಅವರಿಗೆಂದೇ ಮೊಬೈಲ್ ಕೊಡಿಸುವ ಅನಿವಾರ್ಯತೆ ಪಾಲಕರಿಗೆ ಎದುರಾಗುತ್ತದೆ. ಈ ಹಂತದಲ್ಲಿ ಅವರಿಗೆ ಮೊಬೈಲ್‌ನ ಸರಿ-ತಪ್ಪುಗಳು ತಿಳಿದಿರಲೇ ಬೇಕು. ಇಂದಿನ ಮಕ್ಕಳು ಮೊಬೈಲ್ ಬೇಕೆಂದು ಕೇಳುವ ವಯಸ್ಸು ಇದಾಗಿರುವುದರಿಂದ ಮಾನಸಿಕವಾಗಿ ತಯಾರಾಗದೆ ನೀವು ಅವರ ಕೈಗೆ ಮೊಬೈಲ್ ಕೊಟ್ಟುಬಿಟ್ಟರೆ ಮಾರನೇ ದಿನವೇ ಅವರ ನಡವಳಿಕೆ ಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮೊಬೈಲ್ ಪಡೆದ ಮುಂದಿನ ಒಂದರಿಂದ ಒಂದೂವರೆ ವರ್ಷ ಮಂಕಾಗಿ ಹೋಗುವ, ಯಾರೊಂದಿಗೂ ಸಾಮಾಜಿಕವಾಗಿ ಬೆರೆಯದ ಹದಿಹರೆಯದವರನ್ನು ಅದೆಷ್ಟೋ ಕಂಡಿದ್ದೇನೆ. ಅದರಿಂದ ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರು ಶಾಶ್ವತ ಬದಲಾಗದೆ ಹಾಗೆಯೇ ಉಳಿದುಬಿಡುವುದೂ ಇದೆ. ಈ ಹಂತದಲ್ಲಿ ವಿದ್ಯಾರ್ಥಿ ಜೀವನ, ಆಟೋಟ, ವ್ಯಾಯಾಮ, ಕುಟುಂಬದ ಸಮಯ ಇವೆಲ್ಲವುಗಳ ನಡುವೆ ಮೊಬೈಲ್ ಮಿತಿಯನ್ನು ಸರಿದೂಗಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಕ್ಕಳ ಜತೆ ಮುಕ್ತವಾಗಿ ಚರ್ಚಿಸಬೇಕು. ಅಂತೆಯೇ ಮೊಬೈಲ್ ಕೊಡುವುದೆಂದರೆ ಹೊಸತೊಂದು ಅಂಗಡಿಯಿಂದ ತಂದು ಕೊಟ್ಟಲ್ಲಿಗೆ ಕೆಲಸ ಮುಗಿಯ ಲಿಲ್ಲ.

ಆಂಡ್ರಾಯ್ಡ್ ಅಥವಾ ಆಪಲ್ ಫೋನ್‌ಗಳಲ್ಲಿ ‘ಪೇರೆಂಟಲ್ ಕಂಟ್ರೋಲ್‌ (ಪಾಲಕರ ನಿಯಂತ್ರಣ) ಎಂಬು ದೊಂದಿದೆ. ಆ ಮೂಲಕ ನಿಮ್ಮ ಮಕ್ಕಳ ಐಡಿ ನಮೂದಿಸಿದಲ್ಲಿ ಅವರ ಮೊಬೈಲ್ ವ್ಯವಹಾರಗಳ ಮೇಲೆ, ಚಲನವಲನಗಳ ಮೇಲೆ ಒಂದು ಕಣ್ಣಿಟ್ಟಿರಬಹುದು. ಅದಕ್ಕೆ ಮಕ್ಕಳ ಪ್ರತಿರೋಧ ಎದುರಾಗುವುದು ಸಹಜ. ಏಕೆಂದರೆ ಇಂದಿನ ಮಕ್ಕಳಿಗೂ ಒಂದಿಷ್ಟು ಗೌಪ್ಯತೆಯ ವಾತಾವರಣ ಬೇಕು. ಮೊಬೈಲ್ ಕೊಡಿಸುವುದಕ್ಕಿಂತ ಮೊದಲೇ ಪೇರೆಂಟಲ್ ಕಂಟ್ರೋಲ್‌ನ ಒಪ್ಪಿಗೆಗೆ ಅವರಿಂದ ಮೌಖಿಕ ಸಹಿ ಹಾಕಿಸಿಕೊಳ್ಳುವುದು ಬುದ್ಧಿವಂತಿಕೆ.

ಜತೆಯಲ್ಲಿ ಇತ್ತೀಚೆಗೆ ಸೈಬರ್ ಬುಲ್ಲಿಯಿಂಗ್ (ಹೆದರಿಸುವಿಕೆ, ರ‍್ಯಾಗಿಂಗ್) ಬಗ್ಗೆ ವಿವರಿಸಿ ಎಚ್ಚರಿಸುವುದು ಮತ್ತು ಅಂಥ ಕಷ್ಟದಲ್ಲಿ ಸಿಕ್ಕಿಬಿzಗ ಯಾವುದೇ ಹಂತದಲ್ಲಿ ಅವರು ನಿಮ್ಮನ್ನು ಸಂಪರ್ಕಿಸಬಹುದು ಎಂಬ ಆಶ್ವಾಸನೆ ಆಗೀಗ ಕೊಡುತ್ತಿರಬೇಕು. ಇಷ್ಟಾಗಿ ಹದಿನಾರು ದಾಟಿದರೆ ಆಗ ಆ ಮಗು ಅನಿಯಂತ್ರಿತ ಮೊಬೈಲ್ ಬಳಕೆಗೆ ಸಿದ್ಧ. ಆದರೆ ಹದಿನೆಂಟು ದಾಟುವವರೆಗೂ ಮೊಬೈಲ್ ಬಗ್ಗೆ ಆಗೀಗ ಚರ್ಚೆಗೆಳೆದು ವಿವರಿಸುವುದು ಒಳ್ಳೆಯದೇ.

ಮೊಬೈಲ್‌ನ್ನು ಇಂದಿನ ಕಾಲಕ್ಕೆ ತಕ್ಕಂತೆ ಹೇಗೆ ಬಳಸಬೇಕು ಎಂಬುದು ಬಹುಪಾಲು ಮಂದಿಗೆ ತಿಳಿದಿಲ್ಲ. Phones
have become smart, but people have become stupid ಎನ್ನುವುದು ಸುಳ್ಳಲ್ಲ. ಸೋಷಿಯಲ್ ಮೀಡಿಯಾವನ್ನು ಅದೆಷ್ಟು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕು, ವಾಟ್ಸ್ಯಾಪ್ ಮೊದಲಾದ ಸಂದೇಶವಾಹಕಗಳ ಇತಿ- ಮಿತಿಗಳೇನು, ಯಾವ ವಿಷಯ ಹೇಳಲು ಮೆಸೇಜ್ ಬಳಸಬೇಕು, ಯಾವುದಕ್ಕೆ ಕರೆ ಮಾಡಬೇಕು ಇತ್ಯಾದಿ ಅರಿವಿನ ಕೊರತೆ ಇದೆ. ಸ್ಮಾರ್ಟ್-ನ್ ಬಳಕೆಯ ಸರಿ-ತಪ್ಪು, ಅರಿವಿನ ಕೊರತೆ ಇಂಥ ಭಾನಗಡಿ ಮಾಡಬಹುದು ಎಂಬುದಕ್ಕೆ ದರ್ಶನ್-ರೇಣುಕಾಸ್ವಾಮಿ ಕೇಸ್ ಒಂದು ಕ್ಲಾಸಿಕ್ ಉದಾಹರಣೆ. ಒಂದು ವೇಳೆ ಸ್ಮಾರ್ಟ್ ಫೋನ್‌ನ ಬಳಕೆಯ ಇತಿಮಿ ತಿಯ ಅರಿವು ಸಂದೇಶ ಕಳುಹಿಸಿದವನಿಗೆ, ಸ್ವೀಕರಿಸಿದವಳಿಗೆ ಇದ್ದಿದ್ದರೆ ಈ ಘಟನೆ ನಡೆಯುತ್ತಲೇ ಇರಲಿಲ್ಲವೇನೋ. ಡಿಜಿಟಲ್ ಅನರಕ್ಷತೆ, ದಡ್ಡತನ ಇಂದು ನಮ್ಮೆಲ್ಲರನ್ನೂ ಬೇರೆ ಬೇರೆ ಹಂತದಲ್ಲಿ ಕಾಡುತ್ತಿದೆ. ಈ ನಡುವೆ ಮುಂದಿನ ತಲೆಮಾರನ್ನು ಇದೆಲ್ಲದಕ್ಕೆ ಸನ್ನದ್ಧವಾಗಿಸುವ ಅನಿವಾರ್ಯ ಜವಾಬ್ದಾರಿಯೂ ನಮ ಮೇಲಿದೆ.