Sunday, 8th September 2024

ಯಶಸ್ವಿ ಪುರುಷನ ಹಿಂದಿರುವ ಸ್ತ್ರೀಯ ನಾನಾ ಮುಖಗಳು !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಮಹಿಳೆ, ಬಹುರೂಪಿಯಾಗಿ ಸಮಾಜದ ಅನಿವಾರ್ಯ ಭಾಗವಾಗಿ ನಿಲ್ಲುವಲ್ಲಿ ವಿಜಯ ಸಾಧಿಸಿದ್ದಾಳೆ. ಇಷ್ಟೆಲ್ಲ ಪ್ರಗತಿ ಸಾಧಿಸಿದರೂ ಇಂದಿಗೂ ಅವಳ ಸಂಪೂರ್ಣ ಸುರಕ್ಷತೆ ಸಾಧ್ಯವಾಗಿಲ್ಲ ಎನ್ನುವುದು ನಾಗರಿಕ ಸಮಾಜಕ್ಕೊಂದು ಕಪ್ಪು ಚುಕ್ಕಿ.

ಮನೆಮನೆಯಲಿ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ-ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೆ ಸಾಕೆ? ಎಂದು ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಸ್ತ್ರೀಯೆಡೆಗಿನ ತಮ್ಮ ಭಾವನೆಗಳಿಗೆ ಅಕ್ಷರಗಳನ್ನು ಪೋಣಿಸಿದ್ದಾರೆ.

ಸ್ತ್ರೀ ಜನ್ಮತಃ ಮಾತೃ ಸ್ವರೂಪಿ ಅಂತಾರೆ. ಆದರೆ ಅವಳೊಳಗೆ ಕಾಡುವ ಅತ್ತೆಯೂ ಇರುತ್ತಾಳೆ ಅನ್ನುವುದನ್ನು ಮರೆತು ಬಿಡುತ್ತೇವೆ. ಸ್ತ್ರೀಯೊಳಗೆ ಸದಾ ಒಬ್ಬ ಸಹೋದರಿ ಯನ್ನು ಕಾಣುವ ನಾವು ಅವಳೊಳಗೇ ಇರುವ ನಾದಿನಿಯ ಮತ್ಸರವನ್ನು ಮರೆತು ಬಿಡುತ್ತೇವೆ. ಆರೈಕೆ ಮಾಡುವ ಅತ್ತಿಗೆಯ ನಡುವೆ ಸ್ಪರ್ಧೆಗೆ ಬೀಳುವ ಓರೆಗಿತ್ತಿಯನ್ನು ಮರೆತು ಬಿಡುತ್ತೇವೆ. ಕಾರ್ಯೇಶು ದಾಸಿ-ಶಯನೇಶು ರಂಭಾ ಎಂದು ಹೇಳುತ್ತ ಹೆಂಡತಿ ಯನ್ನು ಆಧರಿಸಿ ಅವಳೊಳಗಿರುವ ವೇಶ್ಯೆಯನ್ನು ಅವಮಾನಿಸುತ್ತೇವೆ. ಉಸಿರು ನೀಡುವ ಜನ್ಮದಾತೆಯೊಳಗೆ ಉಸಿರು ಕೊಲ್ಲುವ ಮಹಾ ಪಾತಕಿಯೂ ಅಡಗಿರುತ್ತಾಳೆ.

ಹೀಗೆ ನೋಡುತ್ತ ಬಂದರೆ ಪ್ರತಿ ಸ್ತ್ರೀಯೊಳಗೂ ಒಬ್ಬ ದೇವತೆಯೂ ಒಬ್ಬ ರಾಕ್ಷಸಿಯೂ ಜತೆಜತೆಗೆ ಇರುತ್ತಾರೆ ಅನ್ನುವುದು ತಿಳಿಯುತ್ತದೆ. ಆದರೆ ನಾವು ಅವರೊಳಗಿರುವ ಒಂದು ಮುಖ ಮಾತ್ರ ಒಪ್ಪಿ, ಮತ್ತೊಂದನ್ನು ನಿರ್ಲಕ್ಷಿಸುತ್ತೇವೆ. ನಮ್ಮ ಹಿಂದಿನ ವೇದ ಪುರಾಣಗಳ ಕಾಲದಿಂದ ಹಿಡಿದು ಇಂದಿನ ಆಧುನಿಕ ಯುಗದ ಮಹಿಳೆಯ ತನಕ ಸ್ತ್ರೀ ನಾನಾ ಹಂತ ಗಳನ್ನು ದಾಟಿ ಮನೆ, ಮಕ್ಕಳು, ಸಂಸಾರದೊಂದಿಗೆ ಉದ್ಯೋಗಿಯಾಗಿಯೂ, ಉದ್ಯಮಿ ಯಾಗಿಯೂ ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ನಿಲ್ಲಬಲ್ಲವ ರಾಗಿದ್ದಾರೆ. ತನಗೆ ದೊರೆತ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಹುರೂಪಿಯಾಗಿ ಸಮಾಜದ ಅನಿವಾರ್ಯ ಭಾಗವಾಗಿ ನಿಲ್ಲುವಲ್ಲಿ ವಿಜಯ ಸಾಧಿಸಿದ್ದಾಳೆ.

ಇಷ್ಟೆಲ್ಲ ಪ್ರಗತಿ ಸಾಧಿಸಿದರೂ ಇಂದಿಗೂ ಅವಳ ಸಂಪೂರ್ಣ ಸುರಕ್ಷತೆ ಸಾಧ್ಯವಾಗಿಲ್ಲ ಎನ್ನುವುದು ನಾಗರಿಕ ಸಮಾಜಕ್ಕೊಂದು ಕಪ್ಪು ಚುಕ್ಕಿ. ಮಹಾಕಾವ್ಯವಾದ ಮಹಾಭಾರತದಲ್ಲಿ ಬರುವ ಗಾಂಧಾರ ದೇಶದ (ಇಂದಿನ ಅಫ್ಘಾನಿಸ್ತಾನ) ರಾಜಕುಮಾರಿ ಗಾಂಧಾರಿ ಕುರುವಂಶದ ರಾಜಕುವರನಾದ ಧೃತರಾಷ್ಟ್ರನನ್ನು ವಿವಾಹವಾಗುವಾಗ ಹುಟ್ಟು ಕುರುಡನಾದ ತನ್ನ ಪತಿಗೆ ಕಾಣದ ಹೊರಜಗತ್ತನ್ನು ನಾನೂ ನೋಡುವುದಿಲ್ಲ ಎಂದು ಕಣ್ಣಿಗೆ ಬಟ್ಟೆಯನ್ನು ಸುತ್ತಿಕೊಂಡು ದೃಷ್ಟಿಹೀನಳಂತೆ ದಿನಗಳನ್ನು ಕಳೆದದ್ದೇನು ಕಡಿಮೆ ಸಾಹಸವೇ? ಒಂದೇ ಒಂದು ಗಂಟೆಯ ಕಾಲ ಕಣ್ಣುಮುಚ್ಚಿ ದಿನ ಕಳೆಯುವುದನ್ನು ಊಹಿಸಲೂ ನಮ್ಮಿಂದ ಸಾಧ್ಯವಿಲ್ಲದಿರುವಾಗ ಗಾಂಧಾರಿ ಅದು ಹೇಗೆ ತನ್ನ ಇಡೀ ವೈವಾಹಿಕ ಬದುಕನ್ನು ಅಂಧಳಂತೆ ಕಳೆದಳೋ? ನೂರು ಮಕ್ಕಳನ್ನು ಹಡೆದು ತನ್ನ ಓರಗಿತ್ತಿಯಾದ ಕುಂತಿಯೆದುರಿಗೆ ಸಾಮ್ರಾಜ್ಞಿಯಾಗಿ ಮೆರೆವಾಗ ಅದಾವ ದಿವ್ಯ ಚೇತನ ಅವಳೊಂದಿಗಿತ್ತೋ? ತಿಳಿಯದು.

ಕಂಸನಂಥ ಬಲಶಾಲಿಯಾದ ಅಣ್ಣನಿದ್ದಾಗಿಯೂ ಪತಿಯೊಡನೆ ಸುಖವಾಗಿ ಸಂಸಾರ ಮಾಡಲಾಗದೆ. ಸೆರೆಮನೆಯ ಅಂಧಕಾರ ದಲ್ಲಿ ಕಳೆಯುತ್ತ ಜಗತ್ ರಕ್ಷಕನಿಗೇ ಜನ್ಮವಿತ್ತರೂ ಅವನನ್ನು ಎತ್ತಿ ಮುದ್ದಾಡುವ ಸಂತೋಷದ ಗಳಿಗೆಗಳಿಂದ ವಂಚಿತಳಾಗಿ ಕೊರಗುತ್ತ ದಿನದೂಡಿದ ದೇವಕಿಯ ಮನಸಿನ ತುಮುಲಗಳೆಲ್ಲ ಅಂಧಕಾರದಲ್ಲೇ ಕರಗಿ ಹೋಗಿ ಯಶೋಧೆಯ ಮುದ್ದು ಕಂದನಾಗಿ ನಲಿದಾಡಿದ ಬಾಲಕೃಷ್ಣನ ಲೀಲೆಗಳು ಇಂದಿಗೂ ಜನಮಾನಸದಲ್ಲಿ ಅಮರವಾಗುಳಿದಿವೆ.

ಮಹಾ ಶಿಲ್ಪಿಯಾದ ಮಯಾಸುರ ಹಾಗೂ ಅಪ್ಸರೆಯಾದ ಹೇಮಾರ ದಾಂಪತ್ಯಕ್ಕೆ ಜನಿಸಿದ ಪಂಚಪತಿವ್ರತೆಯರಲ್ಲಿ ಒಬ್ಬಳಾಗಿ ಇಂದಿಗೂ ಮುತ್ತೈದೆಯರಿಂದ ಪೂಜಿಸಿಕೊಳ್ಳುವ ಮಂಡೋದರಿಯು, ಶಿವನ ಪರಮ ಭಕ್ತನೂ, ಮಹಾನ್ ಪರಾಕ್ರಮ ಶಾಲಿಯೂ ದಶಕಂಠನೂ ಲಂಕೆಯ ಚಕ್ರಾಧಿಪತಿಯೂ ಆಗಿದ್ದ ಲಂಕಾಧೀಶ ರಾವಣನನ್ನು ವಿವಾಹವಾಗುತ್ತಾಳೆ. ರಾವಣನು ತನ್ನ ಸಹೋದರಿ ಯಾದ ಶೂರ್ಪನಖಿಯ ಮೂಗು ಕತ್ತರಿಸಿ ಅವಮಾನಿಸಿದ ಸೇಡಿನ ಕಿಚ್ಚನ್ನು ತೀರಿಸಿಕೊಳ್ಳಲು ಮಾಯಾವಿಯ ವೇಷ ತೊಟ್ಟು ಘೋರಾರಣ್ಯದ ನಡುವೆಯಿದ್ದ ಕುಟೀರದಲ್ಲಿ ಏಕಾಂಗಿಯಾಗಿದ್ದ ರಾಮನ ಪತ್ನಿ ಸೀತೆಯನ್ನು ಅಪಹರಿಸಿ, ನಂತರ
ಅವಳನ್ನು ಮೋಹಿಸಿ ವಿವಾಹವಾಗಲು ಬಯಸಿ ಅವಳನ್ನು ಅಶೋಕವನದಲ್ಲಿ ರಾಕ್ಷಸಿಯರ ಕಣ್ಗಾವಲಿನಲ್ಲಿಟ್ಟು ಒಲಿಸಿಕೊಳ್ಳಲು ನಿರಂತರ ಪ್ರಯತ್ನದಲ್ಲಿರುವ ವಿಷಯವನ್ನು ಅರಿತೂ ಅವನೊಂದಿಗೆ ಸಹನೆಯಿಂದ ನಡೆದು ಅವನನ್ನು ಅಪಾರವಾಗಿ ಪ್ರೀತಿಸಿದವಳು.

ಪರಸ್ತ್ರೀಯಾದ ಸೀತೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳದೆ ಅವಳನ್ನು ಅವಳ ಪತಿಯಾದ ರಾಮನ ಬಳಿಗೆ ಕಳುಹಿಸಿ ಕೊಡುವಂತೆ ಸಲಹೆಯಿತ್ತವಳು. ಸೀತೆ ಸ್ವತಃ ಮಂಡೋದರಿಯ ಮಗಳು ಎನ್ನುವ ಕತೆಯಿದೆ. ತನ್ನ ಸಾವಿಗೆ ತನ್ನ ಮೊದಲ ಮಗುವೇ ಕಾರಣವಾಗುತ್ತದೆಂಬ ಭವಿಷ್ಯವಾಣಿಯನ್ನು ಅರಿತಿದ್ದ ರಾವಣನು ಆ ಕಾರಣದಿಂದಾಗಿ ತನಗೆ ಮಂಡೋದರಿಯಲ್ಲಿ
ಹುಟ್ಟಿದ ಹೆಣ್ಣುಮಗುವನ್ನು ಕೊಲ್ಲುವ ಮನಸಾಗದೆ ಒಂದು ಪೆಟ್ಟಿಗೆಯಲ್ಲಿಟ್ಟು ಜನಕನ ಪಟ್ಟಣದಲ್ಲಿ ನೆಲದಲ್ಲಿ ಹೂಳಿದ್ದ ನಂತೆ. ಮುಂದೆ ಆ ಮಗುವೇ ಜನಕನಿಗೆ ಸಿಕ್ಕು ಜಾನಕಿಯಾಗಿ ರಾವಣನ ಮೃತ್ಯುವಿಗೆ ಕಾರಣಳಾದಳು ಎನ್ನುವ ಮಾತಿದೆ.

ಪರಾಕ್ರಮಶಾಲಿಯೂ, ಅಹಂಕಾರಿಯೂ, ಛಲಗಾರನೂ ಆದ ದುರ್ಯೋಧನನಿಗೆ ಪಾಂಡವರನ್ನು ಹಣಿಯುವುದನ್ನು ಬಿಟ್ಟರೆ ಬೇರೊಂದು ಧ್ಯೇಯ ಕಾಣಸಿಗದು. ಪಾಂಡುರಾಜನ ಮರಣಾನಂತರ ಅರಣ್ಯವಾಸದಿಂದ ಹಿಂತಿರುಗಿದ ಪಾಂಡವರಿಂದಾಗಿ ತನಗೆ ದಕ್ಕಬೇಕಿದ್ದ ಯುವರಾಜನ ಪಟ್ಟ ಕೈತಪ್ಪಿಹೋದ ಕಾರಣಕ್ಕಾಗಿ ಪಾಂಡವರೆಡೆಗೆ ಹಗೆತನ ಸಾಧಿಸುವ ದುರ್ಯೋಧನ, ಧೃತರಾಷ್ಟ್ರ-ಗಾಂಧಾರಿಯ ಹಿರಿಯ ಪುತ್ರನಾಗಿ ತನ್ನ ತೊಂಬತ್ತೊಂಬತ್ತು ಜನ ತಮ್ಮಂದಿರನ್ನೂ ಅತ್ಯಂತ ಪ್ರೀತಿಯಿಂದ ಕಾಣುವ ಹಾಗೂ ಸ್ನೇಹಕ್ಕೆ ಅನ್ವರ್ಥದಂತಿದ್ದ ದುರ್ಯೋಧನನ ಬಾಳಸಂಗಾತಿಯಾದ ಭಾನುಮತಿಯ ಪಾತ್ರ ಹೆಚ್ಚು ಬೆಳಕು ಕಾಣದೆ ಮರೆಯಲ್ಲೆ ಉಳಿದುಹೋಗಿದೆ.

ಅವಳು ಯಾರ ಮಗಳೆಂಬುದರ ನಿಖರವಾದ ವಿವರವೇ ಸಿಗುವುದಿಲ್ಲ. ಒಂದು ಹೇಳಿಕೆಯ ಪ್ರಕಾರ ಕಳಿಂಗ ದೇಶದ ರಾಜನಾದ
ಚಿತ್ರಾಂಗದನ ಮಗಳಾದ ಭಾನುಮತಿಯ ವಿವಾಹಕ್ಕಾಗಿ ಏರ್ಪಡಿಸಿದ್ದ ಸ್ವಯಂವರದಲ್ಲಿ ಪಾಲ್ಗೊಳ್ಳಲು ಶಿಶುಪಾಲ, ಜರಾಸಂಧ, ಭೀಷ್ಮಕ, ಶೃಂಗ, ರುಕ್ಮಿಯಂಥ ಅತಿರಥ- ಮಹಾರಥರೇ ಆಗಮಿಸಿದ್ದ ಸಂದರ್ಭದಲ್ಲಿ ಹೂಮಾಲೆಯನ್ನು ಹಿಡಿದು ಒಬ್ಬೊಬ್ಬರ ವಿವರವನ್ನೂ ಕೇಳುತ್ತಾ ಬಂದು ದುರ್ಯೋಧನನ ವಿವರಗಳನ್ನೂ ಕೇಳಿ ತಿಳಿದ ನಂತರ ವರಿಸಲು ಇಚ್ಛಿಸದೆ ಮುಂದಕ್ಕೆ ನಡೆದು ಹೋದದ್ದನ್ನು ಕಂಡು ತಿರಸ್ಕೃತನಾದ ಅವಮಾನವನ್ನು ಸಹಿಸಲಾಗದೆ ಭಾನುಮತಿಯನ್ನು ಸ್ವಯಂವರದಿಂದ ಅಪಹರಿಸಿ
ಹಸ್ತಿನಾಪುರಕ್ಕೆ ತಂದು ಅಲ್ಲಿ ವಿವಾಹವಾಗುತ್ತಾನೆ.

ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳಲು ತನ್ನ ತಾತ ಭೀಷ್ಮಾಚಾರ್ಯರೂ ಹೀಗೆಯೇ ತನ್ನ ಮಲ-ಸಹೋದರರಿಗಾಗಿ ಕಾಶಿ ಯಿಂದ ಅಂಬಿಕೆ, ಅಂಬಾಲಿಕೆಯರನ್ನು ಅಪಹರಿಸಿದ್ದರು ಎಂದು ಹೇಳಿದಾಗ ವಿಽಯಿಲ್ಲದೆ ಅವನನ್ನೇ ವರಿಸುವ ಭಾನುಮತಿ ಮುಂದೆ ಎಲ್ಲಿಯೂ ಅವನ ಪರಾಕ್ರಮಕ್ಕೆ ಚ್ಯುತಿ ಬಾರದಂತೆ ಅವನ ಮನದಿಚ್ಛೆಯನ್ನರಿತು ನಡೆಯುತ್ತಾ ಅವನ ಪುರುಷಾ ಹಂಕಾರಕ್ಕೆ ಎಲ್ಲ ರೀತಿಯಲ್ಲೂ ಸಹಕರಿಸುತ್ತಾ ಮೌನ ಸಾಧಕಿಯಾಗಿ ಸೋತಂತೆ ಕಂಡರೂ, ಮತ್ತೊಂದು ಹೆಣ್ಣಿನೆಡೆಗೆ ತಿರುಗಿ ನೋಡದ ಮಹತ್ವಾಕಾಂಕ್ಷಿಯಾದ ದುರ್ಯೋಧನನ ಏಕೈಕ ಮನದರಸಿಯಾಗಿ ಮೆರೆಯುತ್ತಾಳೆ.

ಕರಣೇಶು ಮಂತ್ರಿ ಎನ್ನುವ ಮಾತಿನಂತೆ ಅವನ ಆಪ್ತಸಖಿಯಾಗಿ, ಅಂತಃಶಕ್ತಿಯ ದ್ಯೋತಕವಾಗಿ ಯಶಸ್ವೀ ಪುರುಷನ ಹಿಂದಿರುವ ಸೀಯಾಗಿ ಉಳಿದುಹೋಗುತ್ತಾಳೆ. ಇಂದ್ರನಿಂದ ವಂಚಿತಳಾಗಿ ಪತಿಯಿಂದ ಶಾಪಗ್ರಸ್ಥಳಾಗಿ ಶಿಲೆಯಾದ ಅಹಲ್ಯೆ, ಲಕ್ಷ್ಮಣನ  ಅಗಲಿಕೆಯ ವಿರಹವನ್ನು ತಾಳಲಾಗದೆ ಹದಿನಾಲ್ಕು ವರುಷಗಳಷ್ಟು ಸುದೀರ್ಘ ನಿದ್ರೆಗೆ ಜಾರಿದ ಊರ್ಮಿಳೆ, ರಾಮನ ಬರುವಿಕೆ ಯನ್ನೇ ಕಾದು ಕುಳಿತ ಶಬರಿ, ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಸಂಕಲ್ಪಿಸಿ ದಿಗಂಬರಳಾಗಿ ನಡೆದ ಅಕ್ಕಮಹಾದೇವಿ, ಪತಿಯಾದ ರಾಮಕೃಷ್ಣ ಪರಮಹಂಸರಿಗೆ ಮಾತೃಸ್ವರೂಪಳಾಗಿ ಕಂಡ ಶಾರದಾ ದೇವಿ, ಗಾಂಧೀಜಿಯ ಹೋರಾಟಗಳಲ್ಲೆಲ್ಲ ಜತೆಗೆ ಇದ್ದ ಕಸ್ತೂರ ಬಾ, ಮೊದಲ ಮಹಿಳಾ ಕವಯಿತ್ರಿಯಾಗಿದ್ದ ಬೆಳಗೆರೆ ಜಾನಕಮ್ಮ, ಗಾನಗಂಗೆ ಗಂಗೂಬಾಯಿ ಹಾನಗಲ್ಲು, ಶಿಕ್ಷಕಿಯಾಗಿ, ಸಂಚಾಲಕಿಯಾಗಿ, ಕೇವಲ ಮಹಿಳೆಯರಿಗಾಗಿಯೇ ಶಾಲೆಗಳು ಹಾಗೂ ಅಬಲಾಶ್ರಮವನ್ನು ಸ್ಥಾಪಿಸಿದ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿದ್ದ ಸಾವಿತ್ರಿಬಾಯಿ ಫುಲೆ, ಕಂಪ್ಯೂಟರನ್ನೂ ಮೀರಿಸುವಂಥ ಗಣಿತದ ಜೀನಿಯಸ್ಸಾಗಿದ್ದ ಶಕುಂತಲಾ ದೇವಿ, ಸುಪ್ರಭಾತದ ಎಂ.ಎಸ್. ಸುಬ್ಬುಲಕ್ಷ್ಮಿ, ಭಾರತದ ಮೊತ್ತಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಛಾಪು ಮೂಡಿಸಿದ ಇಂದಿರಾ ಗಾಂಧಿ, ಮೊದಲ ಮಹಿಳಾ ಪೊಲೀಸ್ ಅಧಿಕಾರಿಯಾದ ಕಿರಣ್ ಬೇಡಿ, ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆಯಾಗಿದ್ದ ಗಗನಯಾತ್ರಿ ಕಲ್ಪನಾ ಚಾವ್ಲಾ, ಕರ್ನಾಟಕದ ಮೊದಲ ಮಹಿಳಾ ಪತ್ರಕರ್ತೆಯಾಗಿದ್ದ ತಿರುಮಲಾಂಬಾ, ಭಾರತದ ಓಟದ ರಾಣಿಯಾಗಿದ್ದ ಪಿ.ಟಿ. ಉಷಾ, ಟೆನ್ನಿಸ್ ಆಟಗಾರ್ತಿ
ಸಾನಿಯಾ ಮಿರ್ಜಾ, ಲೇಖಕಿ ಹಾಗೂ ಉದ್ಯಮಿ ಸುಧಾಮೂರ್ತಿ, ಚಿತ್ರ ನಿರ್ಮಾಪಕರಾಗಿದ್ದ ಪಾರ್ವತಮ್ಮ ರಾಜಕುಮಾರ್, ಡಕಾಯಿತಳಾಗಿ ನಂತರ ರಾಜಕಾರಣಿಯಾಗಿದ್ದ ಪೂಲನ್ ದೇವಿ, ಪ್ರಖ್ಯಾತ ಪರಿಸರವಾದಿಯಾದ ಮೇಧಾ ಪಾಟ್ಕರ್, ಪ್ರಾಣಿ ಸಂರಕ್ಷಕಿಯಾದ ಮನೇಕಾ ಗಾಂಧಿ, ಗುರು ಭಗಿನಿಯಾದ ವೀಣಾ ಬನ್ನಂಜೆ, ನೋವಲ್ಲೂ ನಗುವರಳಿಸುತ್ತಿದ್ದ ಎಚ್‌ಐವಿ ಪೀಡಿತೆ ವೀಣಾಧರಿ… ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಮಹಿಳಾ ಸಾಧಕಿಯರು ನಮ್ಮ-ನಿಮ್ಮೆಲ್ಲರಿಗೆ ಸೂರ್ತಿ ದೇವತೆಯರಂತೆ ಕಾಣುತ್ತಾರೆ.

ಆದರೆ ಭಾರತ ದೇಶದಲ್ಲಿ ಒಟ್ಟಾರೆ ಇರುವ ಸುಮಾರು ೬೦ ಕೋಟಿ ಮಹಿಳಾ ಜನಸಂಖ್ಯೆಯಲ್ಲಿ ಕೇವಲ ಕೆಲವರಷ್ಟೆ ತಮ್ಮ ಗುರಿಯನ್ನು ಸಾಧಿಸುತ್ತ ಮುಂಚೂಣಿಗೆ ಬರಲು ಸಾಧ್ಯವಾಗುತ್ತಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದ್ವಿತೀಯ ದರ್ಜೆಯ ಪ್ರಜೆಯಾಗಿ ಹಿಂದುಳಿದಿದ್ದ ಸ್ತ್ರೀ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತ ಅದನ್ನು ಪಡೆಯುವಲ್ಲಿ ಹಂತ ಹಂತವಾಗಿ ಯಶಸ್ವಿ ಯಾಗಿದ್ದಾರೆ. ಮತದಾನದ ಹಕ್ಕನ್ನು ಗಳಿಸಿಕೊಂಡಿದ್ದಷ್ಟೇ ಅಲ್ಲದೆ ಸಾರ್ವಜನಿಕ ಕಚೇರಿಗಳಲ್ಲಿ ಕೆಲಸ ಮಾಡುವ ಹಕ್ಕು, ಹಾಗೂ ಉದ್ಯೋಗ ಕ್ಷೇತ್ರದಲ್ಲಿರುವ ತಾರತಮ್ಯನ್ನು ವಿರೋಧಿಸಿ ಪ್ರತಿಭಟಿಸಿ ಸಮಾನತೆಯ ಹಕ್ಕನ್ನು ಗಳಿಸಿಕೊಂಡರು.

ಆದರೆ ಇನ್ನೂ ಸಾಕಷ್ಟು ಹೆಣ್ಣುಮಕ್ಕಳು ಸೌಲಭ್ಯಗಳಿಂದ ವಂಚಿತರಾಗಿ ನಾಲ್ಕು ಗೋಡೆಗಳ ನಡುವೆಯೇ ತಮ್ಮ ಜೀವನ ಕಳೆಯುತ್ತಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸ, ಕಾನೂನಿನ ಅರಿವು, ಉತ್ತೇಜನ ನೀಡುವ ಪರಿಸರ ಹಾಗೂ ಮಾರ್ಗದರ್ಶನ ಸಿಕ್ಕರೆ
ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಧನೆಯತ್ತ ದಾಪುಗಾಲಿಕ್ಕಬಹುದು. ನಾರಿ ಮುನಿದರೆ ಮಾರಿ, ನಾರಿ ಸ್ವರ್ಗಕ್ಕೆ ದಾರಿ ಹಾಗೆಯೇ ಕಲಿತ ನಾರಿ ಸುಖ-ಸಂಸಾರಕ್ಕೆ ಮಾದರಿ. ಸರ್ಕಾರ ಕೂಡ ಅವಳ ಹಿತರಕ್ಷಣೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅವೆಲ್ಲವನ್ನೂ ಬಳಸಿಕೊಂಡು ಕೇವಲ ಯಶಸ್ವೀ ಪುರುಷನ ಹಿಂದೆ ನಿಲ್ಲುವ ಬದಲಿಗೆ ಪುರುಷನ ಜೊತೆಜೊತೆಗೆ ನಡೆಯುತ್ತಾ ಸ್ವಯಂಪ್ರಭೆಯಿಂದ ಕಂಗೊಳಿಸುವಂತಾಗಲಿ..

error: Content is protected !!