ರಾಜಬೀದಿ
ವಿನಾಯಕ ಮಠಪತಿ
ಇತ್ತೀಚಿನ ವರ್ಷಗಳಲ್ಲಿ ಸದನ ಕಲಾಪದಲ್ಲಿ ಚರ್ಚೆ, ಸಲಹೆ ಸೂಚನೆಗಳಿಗಿಂತ ಹೆಚ್ಚಾಗಿ, ಗದ್ದಲ, ಆರೋಪ-ಪ್ರತ್ಯಾರೋಪಗಳೇ ಹೆಚ್ಚಾಗಿ ಕಾಣಿಸುತ್ತಿದೆ. ಅದರಲ್ಲಿಯೂ ಚಿಂತಕರ ಚಾವಡಿ ಎನಿಸಿರುವ ರಾಜ್ಯಸಭೆಯಲ್ಲಿಯೂ ಇಂತಹ ಬೆಳವಣಿಗೆ ಇರುಸು-ಮುರುಸಿಗೆ ಕಾರಣವಾಗಿದ್ದು ಸುಳ್ಳಲ್ಲ.
ಪ್ರಜಾಪ್ರಭುತ್ವದ ದೇಗುಲಗಳಲ್ಲಿ ಚರ್ಚೆಗಳೇ ಇಲ್ಲವೇ’ ಎನ್ನುವ ಆತಂಕದ ಸನ್ನಿವೇಶನದಲ್ಲಿ ಕಳೆದ ವಾರದ ಒಂದು ಭಾಷಣ, ಈ ಆತಂಕವನ್ನು ಸಣ್ಣ
ಮಟ್ಟಿಗಾದರೂ ಸುಳ್ಳಾಯಿತು ಎಂದರೆ ತಪ್ಪಾಗುವುದಿಲ್ಲ. ಹೌದು, ಲೋಕಸಭಾ ಚುನಾವಣೆ ಕೆಲವೇ ತಿಂಗಳ ಮೊದಲು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡ ಸುಧಾಮೂರ್ತಿ ಅವರ ಭಾಷಣವನ್ನು ಆಲಿಸಿದಾಗ, ಸುಧಾಮೂರ್ತಿ ಅವರ ಸಲಹೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ
ಉತ್ತರಿಸಿದಾಗ ಈಗಲೂ ಇಂತಹ ಆರೋಗ್ಯಪೂರ್ಣ ಚರ್ಚೆಗೆ ಅವಕಾಶವಿದೆ ಎನ್ನುವುದನ್ನು ಸಾಬೀತುಪಡಿಸಿತ್ತು.
‘ಯಾವಾಗ ಮಾತು ಪ್ರಾರಂಭಿಸಬೇಕು’ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಲೇ ಎದ್ದುನಿಂತ ಸುಧಾಮೂರ್ತಿ ಅವರು ನಗುಮೊಗದ ತಮ್ಮ ಭಾಷಣ ಪ್ರಾರಂಭಿಸಿದರು. ಮಾತಿನ ಮಧ್ಯೆ ಸಂಸ್ಕೃತ ಶ್ಲೋಕಗಳು, ಬಾಲ್ಯದಲ್ಲಿ ತಂದೆಯಿಂದ ಕಲಿತ ಬದುಕಿನ ಪಾಠಗಳು, ತಮ್ಮ ಸಾಮಾಜಿಕ ಕೆಲಸ ಗಳಿಂದ ಕಂಡುಕೊಂಡ ಅಪಾರ ಅನುಭವದ ಬುತ್ತಿಯನ್ನು ಬಿಚ್ಚಿ ಎಲ್ಲರನ್ನೂ ಮಂತ್ರಮುಗ್ದಗೊಳಿಸಿದರು. ಇವರ ಮೊದಲ ಭಾಷಣದ ಮಹಿಳೆಯರ ಪರವಾದ ಗಟ್ಟಿ ಧ್ವನಿ ಇತ್ತು. ಈ ದೇಶದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿನ ಮುಂದೆ ಇನ್ನಷ್ಟು ತೆರೆದಿಡಬೇಕೆಂಬ ಬಲವಾದ ಹಂಬಲ ಇವರ ಮಾತಿನಲ್ಲಿ ಅಡಗಿತ್ತು.
೧೮ನೇ ಲೋಕಸಭೆಯ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಯವರು ಮಾಡಿದ ಭಾಷಣ ದೇಶದ ಪ್ರಧಾನಿ ಸೇರಿದಂತೆ ವಿರೋಧ ಪಕ್ಷದ ನಾಯಕರ ಗಮನಸೆಳೆಯಿತು. ಸುಧಾಮೂರ್ತಿ ಅವರು ಅಖಂಡ ಭಾರತದ ಮಹಿಳಾ ಪ್ರತಿನಿಧಿಯಾಗಿ ಆಡಿದ ಮಾತುಗಳು ಮಹಿಳೆ ಯರ ದಶಕಗಳ ನೋವನ್ನು ಸರಕಾರಕ್ಕೆ ಸಾರಿ ಹೇಳಿದಂತಿತ್ತು. ಸಿಕ್ಕ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವ ಹಾಗೂ ಅಧ್ಯಯನದ ಮೂಲಕ ತಾವು ಆಡುವ ಮಾತನ್ನು ಸ್ಪಷ್ಟವಾಗಿ ಕೇಳುಗರ ಮುಂದೆ ಒಪ್ಪಿಸುವುದು
ಸುಧಾಮೂರ್ತಿಯವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು.
ತಮ್ಮ ಮೊದಲ ಭಾಷಣದಲ್ಲಿ ಸುಧಾಮೂರ್ತಿಯವರು ದಶಕಗಳಿಂದ ಭಾರತೀಯ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ಭಾರತೀಯ ಪ್ರವಾಸೋದ್ಯಮವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕಾದ ಕ್ರಮಗಳ ಕುರಿತು ಗಮನಸೆಳೆದರು. ಇದರ ಮಧ್ಯೆ ತಮ್ಮ ರಾಜ್ಯಸಭೆಯ ಮೊದಲ ಭಾಷಣದಲ್ಲಿ ಎಂದಿನಂತೆ ಹಾಸ್ಯ, ಸಂಸ್ಕೃತ ಶ್ಲೋಕಗಳ ರಸದೌತಣವೂ ಅಡಗಿತ್ತು. ಸುಧಾಮೂರ್ತಿ ಅವರಿಗೆ ಮಾತನಾಡಲು ರಾಜ್ಯಸಭೆಯ ಉಪ ಸಭಾಪತಿ ಮೊದಲಿಗೆ ಕೊಟ್ಟಿದ್ದು ಕೇವಲ ಐದು ನಿಮಿಷಗಳು. ಆದರೆ ತಮ್ಮ ವಿಷಯ ಮಂಡನೆಗೆ ಇವರು ಹೆಚ್ಚಿನ ಸಮಯಕ್ಕೆ ವಿನಂತಿಸಿ ಮಾತು ಪ್ರಾರಂಭಿಸಿದರು.
ತಮ್ಮ ಭಾಷಣದಿಂದ ಮಹಿಳೆಯರ ಆರೋಗ್ಯದ ಕುರಿತು ರಾಜ್ಯಸಭೆ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಗರ್ಭಕಂಠದ ಕ್ಯಾನ್ಸರ್‌ನಿಂದ ದೇಶದಲ್ಲಿ ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದ್ದು, ಸರಕಾರಿ ಪ್ರಾಯೋಜಿತ ಲಸಿಕೆಗಳ ಅವಶ್ಯಕತೆ ಕುರಿತು ಸರಕಾರದ ಗಮನ ಸೆಳೆದಿದ್ದು ವಿಶೇಷವಾಗಿತ್ತು. ೯
ರಿಂದ ೧೪ ವಯಸ್ಸಿನ ಯುವತಿಯರಿಗೆ ಈ ಗರ್ಭಕಂಠದ ಲಸಿಕೆ ನೀಡುವುದರಿಂದ ಮುಂದೆ ಬರಬಹುದಾದ ಕ್ಯಾನ್ಸರ್ ಮಹಾಮಾರಿಯಿಂದ ರಕ್ಷಿಸಬಹುದಾಗಿದೆ ಎಂದು ಹೇಳಿದರು.
ರಾಜ್ಯಸಭೆ ಎಂದರೆ ಅದೊಂದು ರೀತಿಯಲ್ಲಿ ಚುನಾವಣಾ ರಾಜಕಾರಣದಿಂದ ಸೋತವರಿಗೆ ರಾಜಕೀಯ ಸ್ಥಾನಮಾನ ನೀಡುವ ಇನ್ನೊಂದು ವ್ಯವಸ್ಥೆ ಎಂಬಂತ ಮನೋಭಾವ ಜನರಲ್ಲಿ ಮೂಡಿದೆ. ತಮಗೆ ಬೇಕಾದ ವ್ಯಕ್ತಿಗಳ ಋಣಸಂದಾಯ ಮಾಡುವ ಕಾರಣಕ್ಕೆ ಅನೇಕ ಪಕ್ಷಗಳು ರಾಜ್ಯಸಭೆಯನ್ನು
ಬಳಸಿಕೊಂಡ ನಿದರ್ಶನಗಳು ನಮ್ಮ ಮುಂದಿವೆ. ಅಲ್ಲಿ ಆಯ್ಕೆ ಯಾಗುವ ಬಹುತೇಕರು ತಮಗೂ ರಾಜ್ಯಸಭೆಗೂ ಸಂಬಂಧವೇ ಇಲ್ಲ ಎಂಬಂತ್ತಿರುತ್ತಾರೆ. ಇದರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಆಳುವ ಸರಕಾರಕ್ಕೆ ತಮ್ಮ ವೃತ್ತಿ ರಂಗದ ಅನುಭವಗಳನ್ನು ಹಾಗೂ
ಸೂಕ್ತ ನಿರ್ದೇಶನ ನೀಡಿದ್ದಾರೆ. ಇವರಲ್ಲಿ ಸುಧಾಮೂರ್ತಿ ಒಬ್ಬರು ಎಂದರೆ ತಪ್ಪಾಗಲಾರದು.
ಸುಧಾಮೂರ್ತಿ ತಮ್ಮ ಭಾಷಣದಲ್ಲಿ ಹೇಳಿದ ಗರ್ಭಕಂಠದ ಕ್ಯಾನ್ಸರ್ ಕಾಯಿಲೆ ತಡೆಗಟ್ಟುವ ಕುರಿತು ಇದೇ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ಅವಽಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದರು. ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ೯
ರಿಂದ ೧೪ ವರ್ಷದ ಮಹಿಳೆಯರಿಗೆ ಸರಕಾರದ ವತಿಯಿಂದ ಗರ್ಭಕಂಠ ಲಸಿಕೆ ನೀಡುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸದ್ಯ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಈ ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದು ಮುಂಬರುವ ಬಜೆಟ್‌ನಲ್ಲಿ ಈ ಕುರಿತು ವಿಶೇಷ ಅನುದಾನ ಹಾಗೂ ಯೋಜನೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಲ್ಲಿ ದೇಶದ ಮಹಿಳೆಯರಿರುವುದು ಸತ್ಯ.
ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಗರ್ಭಕಂಠ ಕ್ಯಾನ್ಸರ್‌ನ ರೋಗ ವೇಗವಾಗಿ ಹೆಚ್ಚುತ್ತಿದೆ. ೨೦೨೨ರ ಅಂಕಿ ಅಂಶಗಳ ಪ್ರಕಾರ ಜಗತ್ತಿನ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಚೀನಾದಲ್ಲಿ ೧,೫೦,೬೫೯ ಪ್ರಕರಣಗಳಿಗೆ. ಇನ್ನೂ ಭಾರತದಲ್ಲಿ ೧,೨೭,೫೨೬ ಮಹಿಳೆಯರಲ್ಲಿ ಹೊಸ ಪ್ರಕರಣ ಗಳು ದಾಖಲಾಗಿವೆ. ಇಂಡೋನೇಷ್ಯಾ, ಬ್ರೆಜಿಲ್, ರಷ್ಯಾ ಸೇರಿದಂತೆ ಅಮೆರಿಕದಲ್ಲಿಯೂ ಗರ್ಭಕಂಠದ ಕ್ಯಾನ್ಸರ್ ನಿಂದ ಮಹಿಳೆಯರು ಬಲಿಯಾಗುತ್ತಿzರೆ. ಭಾರತ ಒಂದರ ಸುಮಾರು ೭೭ ಸಾವಿರ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಕಾಯಿಲೆಯಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ವೈದ್ಯಕೀಯ ರಂಗದಲ್ಲಿ ಭಾರತ ಅನೇಕ ಸಾಧನೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ೧೪೦ ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಯಶಸ್ವಿಯಾಗಿ ಲಸಿಕೆ ನೀಡಿದ್ದು ಈಗಲೂ ನಮ್ಮ ಕಣ್ಣಮುಂದಿದೆ. ಅಷ್ಟೇ ಅಲ್ಲದೆ ಪೋಲಿಯೊವನ್ನು ಯಶಸ್ವಿಯಾಗಿ ಜಾರಿಗೆ ತಂದ ಭಾರತದ ಕಾರ್ಯಕ್ಕೆ ಡಬ್ಲೂ ಎಚ್‌ಓ ಪ್ರಶಂಸೆ ವ್ಯಕ್ತಪಡಿಸಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇರುವ ಜನಗಳಲ್ಲಿ ಎಚ್‌ಐವಿ ಸೇರಿದಂತೆ ಇನ್ನೀತರ ಮಾರಕ ರೋಗಗಳ ಕುರಿತು ಅರಿವು ಮೂಡಿದ್ದು ವಿಶೇಷ. ಇವೆಲ್ಲದರ ಮಧ್ಯೆ ಸುಧಾಮೂರ್ತಿ ಅವರು ಹೇಳಿದ ಗರ್ಭಕಂಠದ ಲಸಿಕೆಯ ನೀಡುವ ಕುರಿತು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದರೆ ಇದೂ ಅಸಾಧ್ಯವಾದ ಕೆಲಸವಲ್ಲ.
ಸುಧಾಮೂರ್ತಿ ಅವರು ತಮ್ಮ ಮೊದಲ ಭಾಷಣದಲ್ಲಿ ಮತ್ತೊಂದು ಮಹತ್ವದ ವಿಷಯದ ಕುರಿತು ಗಮನಸೆಳೆದರು. ಕೇವಲ ಪಾಶ್ಚಿಮಾತ್ಯ ರಾಷ್ಟ್ರಗಳ ಪಾರಂಪರಿಕ ತಾಣಗಳು ಹಾಗೂ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೈಭವಿಕರಿಸುತ್ತಾ ಅಂಗೈಯಲ್ಲಿ ಬೆಣ್ಣೆ ಹಿಡಿದು ಊರೆಲ್ಲ ಸುತ್ತುತ್ತಿದ್ದೇವೆ ಎಂಬ
ಮಾತು ನಿಜಕ್ಕೂ ಸತ್ಯ. ಭಾರತದಲ್ಲಿರುವ ಅದೆಷ್ಟೋ ಪ್ರವಾಸಿ ತಾಣಗಳು ನಮ್ಮವರಿಗೆ ಗೊತ್ತಿಲ್ಲ. ೫೭ಕ್ಕೂ ಹೆಚ್ಚು ಪ್ರವಾಸೋದ್ಯಮ ಸ್ಥಳಗಳಿಗೆ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ.
ಶ್ರವಣ ಬೆಳಗೊಳದ ಭಗವಾನ್ ಬಾಹುಬಲಿ ಮೂರ್ತಿ, ಮಧ್ಯಪ್ರದೇಶದ ಮಾಂಡು, ಹಲವಾರು ಗುಹೆಗಳು, ಬಾದಾಮಿ, ಐಹೊಳೆ, ಲಿಂಗರಾಜ ದೇವಾಲಯಗಳು ದೇಶದ ಸಂಸ್ಕೃತಿಯ ತಾಣಗಳಾಗಿವೆ. ಇವುಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎಂಬ ಅವರ ವಾದ ನಿಜಕ್ಕೂ ಪ್ರಶಂಸನೀಯ. ಕಳೆದ ಕೆಲ ದಶಕಗಳಿಂದ ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರಗಳು ಹೆಚ್ಚಿನ ಗಮನ ನೀಡಿದ್ದರು ಅಂದುಕೊಂಡಂತೆ ಇನ್ನೂ ಸಾಧಿಸಬೇಕಾಗಿದ್ದು ಸಾಕಷ್ಟಿದೆ.
ಹೇರಳವಾಗಿ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಪಾರಂಪರಿಕ ಕಟ್ಟಡಗಳು ನಮ್ಮ ದೇಶದಲ್ಲಿದ್ದು ಇವುಗಳನ್ನು ಸಂರಕ್ಷಿಸಿ ಜನರಿಗೆ ನೋಡಲು ಅವಕಾಶ ಕಲ್ಪಿಸಬೇಕಾಗಿದ್ದು ಸರಕಾರದ ಮೂಲ ಧ್ಯೇಯವಾಗಬೇಕು. ನಮ್ಮದೇ ದೇಶದ ಪಕ್ಕದಲ್ಲಿರುವ ಸಿಂಗಾಪುರ, ಮಾಲ್ಡೀ,
ದುಬೈ ರಾಷ್ಟ್ರಗಳು ಪ್ರವಾಸೋದ್ಯಮವನ್ನೇ ತಮ್ಮ ಆರ್ಥಿಕ ಸಂಪನ್ಮೂಲವನ್ನಾಗಿ ಬಳಸಿಕೊಂಡಿದೆ. ಇದೇ ಮಾದರಿಯಲ್ಲಿ ಭಾರತವೂ ನಮ್ಮಲ್ಲಿನ ಸಾಂಸ್ಕೃತಿಕ ಮೌಲ್ಯವನ್ನು ಇನ್ನಷ್ಟು ಜಗತ್ತಿಗೆ ಪರಿಚಯಿಸಬೇಕಾಗಿದೆ. ಈ ಕುರಿತು ಸುಧಾಮೂರ್ತಿ ಅವರು ಮಾಡಿದ ಭಾಷಣದ ಮೂಲ ಉದ್ದೇಶ ವಾಗಿತ್ತು.
ಇನೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಲ್ಲಿಸಿರುವ ಸೇವೆ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಉತ್ತರ ಕರ್ನಾಟಕ ಭಾಗದ ದೇವದಾಸಿ ಮಹಿಳೆಯರ ಪುನರ್‌ವಸತಿ ಹಾಗೂ ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಇವರು ಅವಿರತ ಪ್ರಯತ್ನ ಮಾಡಿದರು. ಸದಾಕಾಲವೂ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮಧ್ಯೆ ಬೆರೆಯುವ ಸುಧಾಮೂರ್ತಿ ಅವರ ಅನುಭವ ಮಾತುಗಳು ರಾಜ್ಯಸಭೆ ಯಲ್ಲಿ ಪ್ರತಿಧ್ವನಿಸಿದವು. ಅಧ್ಯಯಯನದ ಮೂಲಕ ಸಮಸ್ಯೆಗಳನ್ನು ಸರ್ಕಾರದ ಗಮನಸೆಳೆಯುವ ಇಂತಹ ಭಾಷಣಗಳು ಇನ್ನಷ್ಟು ಹೆಚ್ಚಾದರೆ
ಇದರಿಂದ ರಾಜ್ಯಸಭೆಗೂ ಒಂದು ಶೋಭೆ.
ಒಟ್ಟಿನಲ್ಲಿ ಸುಧಾಮೂರ್ತಿ ಅವರು ರಾಜ್ಯಸಭೆಯಲ್ಲಿ ಮಾಡಿದ ಮೊದಲ ಭಾಷಣದ ಕೋಟ್ಯಾಂತರ ಮಹಿಳೆಯರ ಹೃದಯ ಗೆದ್ದಿದ್ದಂತು ನಿಜ. ಅದು ಕೇವಲ ಒಬ್ಬರ ಮಾತಾಗಿರಲಿಲ್ಲ. ದಶಕಗಳ ಕಾಲ ಸಂಕಷ್ಟ ಅನುಭವಿಸುತ್ತಿರುವ ಮಹಿಳೆಯರಿಗೆ ಒಂದು ಆಶಾದಾಯಕ ಧ್ವನಿಯಾಗಿತ್ತು. ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಿರುವ ಭಾರತದಲ್ಲಿ ಅವರ ಸಮಸ್ಯೆಗೆ ಸ್ಪಂದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು, ಗರ್ಭಕಂಠದ ಲಸಿಕೆಯನ್ನು ಸರಕಾರದ ಪರವಾಗಿ ಉಚಿತವಾಗಿ ವಿತರಣೆ ಮಾಡಿದರೆ ಆಗ ಸುಧಾಮೂರ್ತಿಯವರು ಆಡಿದ ಮಾತಿಗೆ ಮತ್ತಷ್ಟು ಗೌರವ ಸಲ್ಲಿಸಿದಂತೆ.