Saturday, 7th September 2024

ಸಮೀಕ್ಷೆಗಳೆಲ್ಲ ನಿಜವಲ್ಲ, ಆದರೆ..!

ಅಶ್ವತ್ಥಕಟ್ಟೆ

ranjith.hoskere@gmail.com

ಕಳೆದ ಮೂರು ತಿಂಗಳ ಸುದೀರ್ಘ ಚುನಾವಣೆಯ ಬಳಿಕ, ಇಡೀ ದೇಶ ಇದೀಗ ಚುನಾವಣಾ ಫಲಿತಾಂಶದ ಮೂಡ್‌ನತ್ತ ಹೊರಳಿದೆ. ಚುನಾವಣೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರವನ್ನು ಮೀರಿದ ಹತ್ತು ಹಲವು ಗಣನೆಗಳು ಈಗಾಗಲೇ ದೇಶದ ಗಲ್ಲಿ-ಗಲ್ಲಿಯಲ್ಲಿ ಆರಂಭವಾಗಿವೆ. ಈ ಎಲ್ಲ ವಿಚಾರಗಳಿಗೂ ಕಳಶಪ್ರಾಯದ ರೀತಿಯಲ್ಲಿ ‘ಸಮೀಕ್ಷಾ ವರದಿ’ಗಳು ಬಂದಿವೆ. ಅಂತಿಮ ಹಂತದ ಮತದಾನದ ಬೆನ್ನಲ್ಲೇ, ದೇಶಾದ್ಯಂತ ಹತ್ತಾರು ಸಂಸ್ಥೆಗಳು ಮಾಡಿರುವ ವಿಮರ್ಶೆಗಳನ್ನು ಬಹಿರಂಗಪಡಿಸುವ ಮೂಲಕ ಸೋಲು-ಗೆಲುವಿನ ಮಾತುಗಳಿಗೆ ಇನ್ನಷ್ಟು ‘ಪುಷ್ಟಿ’ ನೀಡಿವೆ.

ದೇಶವ್ಯಾಪಿ ಸುಮಾರು ೨೦ಕ್ಕೂ ಹೆಚ್ಚು ಸಂಸ್ಥೆಗಳು ಸಮೀಕ್ಷೆಗಳನ್ನು ನಡೆಸಿದ್ದು, ಇನ್ನು ಕೆಲವೊಂದಷ್ಟು ಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ ವಿಮರ್ಶೆ ಗಳನ್ನು ನಡೆಸಿ ವರದಿಯನ್ನು ಬಹಿರಂಗಪಡಿಸಿವೆ. ಕೆಲವೊಂದಷ್ಟು ಜನಾಭಿಪ್ರಾಯಗಳು ಒಂದೊಂದು ಪಕ್ಷಕ್ಕೆ ಪೂರಕವಾಗಿ ಫಲಿತಾಂಶ ನೀಡಿರುವ
ಆರೋಪಗಳಿದ್ದರೂ, ಒಟ್ಟಾರೆ ವರದಿಗಳನ್ನು ಗಮನಿಸಿದರೆ, ಇಡೀ ದೇಶದಲ್ಲಿ ‘ಮೋದಿ ವೇವ್’ ಇರುವುದು ಸ್ಪಷ್ಟವಾಗಿದೆ. ಈ ಸಮೀಕ್ಷೆಯ ಅಂಕಿ-ಅಂಶಗಳೆಲ್ಲ ಸುಳ್ಳು, ‘ಇಂಡಿಯ’ ಮೈತ್ರಿಕೂಟವೇ ಅಧಿಕಾರದ ಗದ್ದುಗೆ ಏರುತ್ತದೆ ಎಂದು ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ನಾಯಕರು ಹೇಳುತ್ತಿ
ದ್ದಾರೆ. ಅವರವರ ನಂಬಿಕೆ, ಅವರವರಿಗೆ ಬಿಟ್ಟಿದ್ದು ಎನ್ನುವ ಮಾತು ಬೇರೆ.

ಬಿಡುಗಡೆಯಾಗಿರುವ ಬಹುತೇಕ ಸಮೀಕ್ಷೆಗಳಲ್ಲಿರುವ ಸಾಮಾನ್ಯ ಅಂಶವೆಂದರೆ, ಇಡೀ ದೇಶದಲ್ಲಿ ಎನ್‌ಡಿಎ ಮೈತ್ರಿಕೂಟ ೩೫೦ರಿಂದ ೩೭೦ರ ಆಸುಪಾಸಿನಲ್ಲಿ ಬಂದು ನಿಲ್ಲುತ್ತದೆ ಎನ್ನುವುದಾಗಿದೆ. ಈ ಮೂಲಕ ಬಿಜೆಪಿಯ ‘೪೦೦’ ಸ್ಥಾನ ತಲುಪುವ ಮಹತ್ವಾಕಾಂಕ್ಷೆ ನನಸಾಗಿಲ್ಲ. ಇದರೊಂದಿಗೆ ಕಳೆದ ಎರಡು ಅವಧಿಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನವನ್ನೇ ಪಡೆಯದ ಕಾಂಗ್ರೆಸ್‌ಗೆ ಈ ಬಾರಿ ಲೋಕಸಭೆಯಲ್ಲಿ ಈ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನುವುದು ಕಾಂಗ್ರೆಸ್ ನಾಯಕರ ಪಾಲಿಗಿರುವ ‘ಸಂತೋಷ’ದ ಸಂಗತಿ. ಈಗಲೂ ಸಮೀಕ್ಷೆಯಲ್ಲಿರುವ ಎಲ್ಲ ಸಂಖ್ಯೆಗಳನ್ನು ಮೀರಿ, ಕಾಂಗ್ರೆಸ್ ಕೇಂದ್ರದ
ಚುಕ್ಕಾಣಿ ಹಿಡಿಯಲಿದೆ ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಬಿಜೆಪಿಯ ‘ಪೇಯ್ಡ್’ ಮೀಡಿಯಾದಿಂದ ಬಂದಿರುವ ಸಮೀಕ್ಷೆಗಳಿವು.

ಆದ್ದರಿಂದ ಅವರಿಗೆ ಬೇಕಾದ ರೀತಿಯಲ್ಲಿ ವಿಶ್ಲೇಷಣೆಯ ವರದಿಯನ್ನು ನೀಡಿವೆ. ಆದರೆ ನಿಜವಾಗಿ ‘ತಳ’ಮಟ್ಟದ ಮತದಾರರ ವಿಷಯ ನಮಗೆ ಮಾತ್ರ ತಿಳಿದಿದೆ ಎನ್ನುವ ಮಾತನ್ನು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಅದು ಅವರ ನಂಬಿಕೆಯಿರಬಹುದು. ಈ ನಂಬಿಕೆ ಅಸಲಿಯೋ ಅಥವಾ ನಕಲಿಯೋ ಎನ್ನುವುದಕ್ಕೆ ಫಲಿತಾಂಶವೇ ಉತ್ತರಿಸಲಿದೆ ಎನ್ನುವುದು ಬೇರೆ ಮಾತು.

ಹಾಗೆ ನೋಡಿದರೆ, ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಏಜೆನ್ಸಿಗಳು ನೀಡಿರುವ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿರುವ, ಸುಳ್ಳಾಗಿರುವ ಎರಡೂ ನಿದರ್ಶನಗಳಿವೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ, ಸಮೀಕ್ಷೆಗಳು ನೀಡಿರುವ ಸಂಖ್ಯೆಗಳನ್ನು ಮೀರಿದ ಫಲಿತಾಂಶ ಬಿಜೆಪಿಗೆ
ಸಿಕ್ಕಿರುವ ಉದಾಹರಣೆಯಿದೆ. ಆದರೆ ಎಕ್ಸಿಟ್ ಪೋಲ್‌ನ ‘ಮೂಡ್’ನಲ್ಲಿಯೇ ಚುನಾವಣಾ ಫಲಿತಾಂಶ ಬಂದಿರುವುದು ಸ್ಪಷ್ಟ. ಲೋಕಸಭಾ ಚುನಾವಣೆ ಯಲ್ಲಿನ ಎಕ್ಸಿಟ್ ಪೋಲ್‌ಗಳಿಗೆ ಹೋಲಿಸಿದರೆ, ವಿಧಾನಸಭಾ ಚುನಾವಣೆಯಲ್ಲಿ ಹಲವು ಬಾರಿ ಏರುಪೇರಾಗಿರುವ ಉದಾಹರಣೆಯಿದೆ.

ಇದಕ್ಕೆಲ್ಲಾ ಕಳೆದ ವರ್ಷದ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವೇ ನೈಜ ಉದಾಹರಣೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಏಜ್ಸೆನಿಗಳೂ, ಕಾಂಗ್ರೆಸ್‌ಗೆ ಬಹುಮತ ಬರಲಿದೆ ಎನ್ನುವ ಭವಿಷ್ಯವನ್ನು ನುಡಿದಿರಲಿಲ್ಲ. ಸ್ವತಃ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಿದ್ದ ಸಮೀಕ್ಷೆ ಯಲ್ಲಿಯೂ ಕಾಂಗ್ರೆಸ್‌ಗೆ ೧೧೦ರಿಂದ ೧೧೪ ಸ್ಥಾನ ಸಿಗಲಿದೆ ಎಂದೇ ಹೇಳಲಾಗಿತ್ತು. ಇನ್ನು ಕೆಲವು ವಿಶ್ಲೇಷಣೆಗಳು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದೂ ಹೇಳಿದ್ದವು. ಆದರೆ ಬಹುತೇಕ ಏಜೆನ್ಸಿಗಳ ವಿಮರ್ಶೆಯಲ್ಲಿ ಅತಂತ್ರ ಪರಿಸ್ಥಿತಿ ಎದುರಾಗುವುದು ನಿಶ್ಚಿತ ಎಂದು ಹೇಳಲಾಗಿತ್ತು.

ಈ ವರದಿಯನ್ನು ಮುಂದಿಟ್ಟುಕೊಂಡು ಬಹುತೇಕ ಪಕ್ಷಗಳು, ಅತಂತ್ರ ಪರಿಸ್ಥಿತಿ ವೇಳೆ ಅಗತ್ಯವಾಗುವ ‘ಮೈತ್ರಿ’ ಲೆಕ್ಕಾಚಾರಗಳನ್ನು ನಡೆಸಿದ್ದವು. ಕಾಂಗ್ರೆಸ್ ನಾಯಕರಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ವಿಶೇಷ ವಿಮಾನಗಳ ಮೂಲಕ ತಮ್ಮ ಶಾಸಕರನ್ನು ಇನ್ನೊಂದು ರಾಜ್ಯಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಿಕೊಂಡಿದ್ದರು. ಆದರೆ ಫಲಿತಾಂಶ ಬಂದಾಗ ಯಾರೂ ಊಹಿಸದ, ಸುಮಾರು ಎರಡು ದಶಕದ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಬಾರದ ‘೧೩೬’ ಶಾಸಕರ ಸಂಖ್ಯಾಬಲದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದು ಇತಿಹಾಸ. ಇದೇ ರೀತಿ ಜಯಲಲಿತಾ ಅವರ ಕೊನೆಯ ಚುನಾವಣೆ
ವೇಳೆಯೂ ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದೇ ಬಹುತೇಕ ವಿಶ್ಲೇಷಣೆಗಳು ಹೇಳಿದ್ದವು. ಆದರೆ ಅಂತಿಮವಾಗಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಜಯಲಲಿತಾ ಯಶಸ್ವಿಯಾಗಿದ್ದರು.

ಇದೇ ರೀತಿ ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆಯ ವೇಳೆ ಹಲವು ರಾಜ್ಯಗಳಲ್ಲಿ ನಡೆಸಲಾಗಿದ್ದ ‘ಸಮೀಕ್ಷೆ’ಗಳು ಉಲ್ಟಾ ಹೊಡೆದಿದ್ದವು. ಇದೇ ಪರಿಸ್ಥಿತಿ ಈ ಬಾರಿಯ ಲೋಕಸಭಾ ಚುನಾವಣೆ ಯಲ್ಲಿ ನಡೆಯಲಿದೆ ಎನ್ನುವ ವಿಶ್ವಾಸ ಕಾಂಗ್ರೆಸ್ ಸೇರಿದಂತೆ ‘ಇಂಡಿಯ’ ಮೈತ್ರಿಕೂಟದ ಬಹುತೇಕ ನಾಯಕರಲ್ಲಿದೆ. ಆದರೆ ಈ ನಂಬಿಕೆ ನಿಜವಾಗುವುದೋ ಅಥವಾ ಸಮೀಕ್ಷೆಗಳು ನೀಡಿರುವ ವರದಿಗಳೇ ನಿಜವಾಗುವುದೋ ಎನ್ನುವುದು ಇಂದು (ಮಂಗಳ ವಾರ) ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗುತ್ತದೆ. ಹಾಗಾದರೆ ಸಮೀಕ್ಷಾ ವರದಿಗಳು ಉಲ್ಟಾ ಹೊಡೆಯಲು ಕಾರಣವೇನು ಎನ್ನುವುದಕ್ಕೆ ಬಹುತೇಕರ ಉತ್ತರ ‘ಅಂಡರ್ ಕರೆಂಟ್’ ಎನ್ನುವುದಾಗಿದೆ.

ಅಂದರೆ, ಪಕ್ಷದ ಕಾರ್ಯಕರ್ತರು, ನಾಯಕರು, ವಿವಿಧ ಕ್ಷೇತ್ರದ ಪ್ರಮುಖರನ್ನೆಲ್ಲ ಮೀರಿ, ಜನಸಾಮಾನ್ಯರು ಅದರಲ್ಲಿಯೂ ತಳಮಟ್ಟದಲ್ಲಿರುವ ಮತದಾರನ ಮನಸ್ಸಿನಲ್ಲೇನಿದೆ ಎನ್ನುವುದನ್ನು ಅರಿಯುವಲ್ಲಿ ವಿಫಲವಾದರೆ, ‘ಅಚ್ಚರಿ’ಯ ಫಲಿತಾಂಶ ಸಿಗುತ್ತದೆ. ಕರ್ನಾಟಕ ವಿಧಾನಸಭಾ ಚುನಾವಣೆ ಯಲ್ಲಿ ಬಹುತೇಕರು ಎಡವಿದ್ದು ಇಂಥ ಅಂಡರ್ ಕರೆಂಟ್ ವಿಷಯದಲ್ಲಿಯೇ. ಬಿಜೆಪಿ ನಾಯಕರು ಮೋದಿಯೇ ಗ್ಯಾರಂಟಿ. ಮೋದಿ ವೇವ್‌ನಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಹೋದರೆ, ೪೦ ಪರ್ಸೆಂಟ್ ಸರಕಾರ, ಪೇ ಸಿಎಂ, ಭ್ರಷ್ಟಾಚಾರ ಸೇರಿದಂತೆ ಬಹುತೇಕ ವಿಷಯಗಳನ್ನು ಜನ ಮರೆಯುತ್ತಾರೆ ಎನ್ನುವ ಭ್ರಮೆಯಲ್ಲಿದ್ದರು.

ಆದರೆ ಅಂತಿಮವಾಗಿ ನೋಡಿದರೆ, ಮತದಾರು ‘ಮೋದಿಯೇನು ರಾಜ್ಯವನ್ನು ಆಳುವರೇ’ ಎನ್ನುವ ಮನಸ್ಥಿತಿಗೆ ಬಂದಿದ್ದರು. ಇದರೊಂದಿಗೆ ಬಿಜೆಪಿ ಎಡವಿದ್ದು, ಪಂಚಗ್ಯಾರಂಟಿಗಳನ್ನು ಜನ ಯಾವ ರೀತಿ ಸ್ವೀಕರಿಸಿ ದ್ದಾರೆ ಎನ್ನುವುದನ್ನು ವಿಶ್ಲೇಷಣೆ ಮಾಡುವಲ್ಲಿ ಎಂದರೆ ತಪ್ಪಾಗುವುದಿಲ್ಲ.
ಚುನಾವಣಾ ಸಮಯದಲ್ಲಿ ಕಾಂಗ್ರೆಸಿಗರು ನೀಡಿದ್ದ ಪಂಚಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಬಿಜೆಪಿ ನಾಯಕರು ಹೋದಲ್ಲಿ-ಬಂದಲ್ಲಿ ಹೇಳಿಕೊಂಡು ಓಡಾಡಿದರೂ, ಅಂತಿಮವಾಗಿ ಜನರಿಗೆ ಕರ್ನಾಟಕದಲ್ಲಿರುವ ಕಾಂಗ್ರೆಸ್ ನಾಯಕತ್ವದ ಮೇಲೆ
ನಂಬಿಕೆ, ವಿಶ್ವಾಸವಿತ್ತು. ಇದಿಷ್ಟೇ ಅಲ್ಲದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಾರ್ಷಿಕ ೫೦ರಿಂದ ೬೦ ಸಾವಿರ ರು.ಪ್ರತಿ ಮನೆಗೆ ತಲುಪಲಿದೆ ಎನ್ನುವ ನಂಬಿಕೆ ಬಂದಿತ್ತು. ಅದಕ್ಕೆ ಮೋದಿ ವೇವ್ ಫ್ಯಾಕ್ಟರ್ ಮೀರಿ ಕಾಂಗ್ರೆಸ್‌ಗೆ ಮತ ನೀಡಿದ್ದರು.

ಆದರೆ ಅದೇ ಮತದಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿಲ್ಲ ಎನ್ನುವುದು ಸದ್ಯದ ಚುನಾವಣಾ ವಿಶ್ಲೇಷಣಾ ವರದಿಯಲ್ಲಿ ಸ್ಪಷ್ಟವಾಗುತ್ತಿದೆ. ಏಕೆಂದರೆ, ರಾಜ್ಯದ ಬಿಜೆಪಿ ನಾಯಕತ್ವವನ್ನು ನೋಡಿ, ಬಿಜೆಪಿ ಸರಕಾರವನ್ನು ತಿರಸ್ಕರಿಸಿರುವ ಬಹುತೇಕರು, ದೇಶದಲ್ಲಿರುವ
ಕಾಂಗ್ರೆಸ್ ನಾಯಕತ್ವ ಹಾಗೂ ಕಾಂಗ್ರೆಸ್ ಗೆದ್ದರೆ ಎದುರಾಗಬಹುದಾದ ‘ಇಂಡಿಯ’ ಮೈತ್ರಿಕೂಟದ ‘ಕಿತ್ತಾಟ’ವನ್ನು ಕಲ್ಪಿಸಿಕೊಂಡು ಬಿಜೆಪಿಯತ್ತ ಒಲವು ತೋರಿದ್ದಾರೆ ಎನ್ನುವುದು ಸ್ಪಷ್ಟ. ಈ ವಿಷಯದಲ್ಲಿ ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದಲ್ಲಿ ಬಿಜೆಪಿ ಪರ ಒಲವು ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವೆಂದರೆ ‘ನಾಯಕತ್ವ’ ಎಂದರೆ ತಪ್ಪಾಗುವುದಿಲ್ಲ.

ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿನ ಸಮೀಕ್ಷೆಗಳು ‘ನೈಜ’ ಎನಿಸುವುದಕ್ಕೆ ಕಾರಣವೂ ಇದೇ ಆಗಿದೆ. ಬಹುತೇಕ ಮತದಾರರು ನಾಯಕತ್ವ ವನ್ನು ನೋಡಿ ಮತ ಹಾಕಿರುತ್ತಾರೆ ಹಾಗೂ ದೇಶದಲ್ಲಿ ಬಲಿಷ್ಠ ನಾಯಕತ್ವ ಬೇಕೆಂದೇ ಆಶಿಸುತ್ತಿದ್ದು, ಕಾಂಗ್ರೆಸ್ ಅಥವಾ ‘ಇಂಡಿಯ’ ಮೈತ್ರಿಕೂಟದಲ್ಲಿ ಕಳೆದ ಮೂರು ಚುನಾವಣೆಯಲ್ಲಿ ನಾಯಕತ್ವದ್ದೇ ಬಹುದೊಡ್ಡ ಸಮಸ್ಯೆ ಎನ್ನುವುದನ್ನು ಅವರು ಬಿಡಿಸಿ ಹೇಳಬೇಕಿತ್ತು.

ಬಿಜೆಪಿ ಗೆಲುವು ಸಾಧಿಸಿದೆಯೋ ಅಥವಾ ಕಾಂಗ್ರೆಸ್ ಗೆಲ್ಲುವುದೋ ಎನ್ನುವುದು ಫಲಿತಾಂಶದ ಸಮಯದಲ್ಲಿ ಸ್ಪಷ್ಟವಾಗಲಿದೆ. ಆದರೆ ಫಲಿತಾಂಶ ಬರುವ ಮೊದಲೇ ಭಾರತದ ಮತದಾರರ ಮತ್ತು ಪ್ರಜಾಪ್ರಭುತ್ವದ ಗೆಲುವಾಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಬಾರಿ ಏಳು ಹಂತದಲ್ಲಿ ನಡೆದಿದ್ದ ಮತದಾನದಲ್ಲಿ ಸರಾಸರಿ ಶೇ.೬೫ರಿಂದ ೬೬ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಅಂದರೆ, ೫೪೩ ಲೋಕಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ ೬೦ರಿಂದ ೬೨ ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಒಪ್ಪಿ, ಚುನಾವಣೆ ನಡೆಸುವ ಬಹುತೇಕ ದೇಶಗಳ ಸಂಖ್ಯೆಗಿಂತ ಎರಡು ಮೂರು ಪಟ್ಟು ಮಂದಿ ಭಾರತದಲ್ಲಿ ಮತವನ್ನು ಚಲಾಯಿಸಿದ್ದಾರೆ.

ಏಳು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಬಹುತೇಕ ಭಾಗದಲ್ಲಿ ‘ಶಾಂತಿಯುತ’ ಮತದಾನ ನಡೆದಿದ್ದು, ಅಲ್ಲಲ್ಲಿ ನಡೆದಿರುವ ದೊಂಬಿ, ಗಲಾಟೆಗಳು ಭಾರತದ ಸಂಖ್ಯೆಗೆ ಹೋಲಿಸಿದರೆ ದೊಡ್ಡ ವಿಷಯವೇನಲ್ಲ ಎಂದರೆ ತಪ್ಪಾಗುವುದಿಲ್ಲ. ಕಳೆದ ಮೂರು ತಿಂಗಳಲ್ಲಿ ಹಲವು ಹಂತದಲ್ಲಿ ನಡೆದ ಮತದಾನದ ಫಲಿತಾಂಶದ ಮೂಡ್ ಅನ್ನು ಬಹುತೇಕ ಸಮೀಕ್ಷೆಗಳು ಕಟ್ಟಿಕೊಟ್ಟಿವೆ. ಆದರೆ ಈ ಸಮೀಕ್ಷೆಯಲ್ಲಿ ಕಾಣಿಸಿರುವ ಜನರ ಮೂಡ್‌ಗೆ ‘ಅಧಿಕೃತ’ ಮೊಹರನ್ನು ಇಂದಿನ ಫಲಿತಾಂಶ ಒತ್ತಲಿದೆ ಎನ್ನುವುದು ಸ್ಪಷ್ಟ. ಬಹುತೇಕ ಈ ಅಂಕಣ ಓದುವ ವೇಳೆಗೆ ಸಮೀಕ್ಷೆಯ ವರದಿಗಳು ನಿಜವೋ, ಸುಳ್ಳೋ ಎನ್ನುವ ಸ್ಪಷ್ಟ ಚಿತ್ರಣ ಸಿಗದಿದ್ದರೂ ಶೇ.೫೦ರಷ್ಟಾದರೂ ಫಲಿತಾಂಶ ಯಾವ ಕಡೆ ಸಾಗಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರುತ್ತದೆ.

ಹಲವು ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಮೀಕ್ಷೆಗಳು ಆಚೀಚೆಯಾಗಿರುವ ಉದಾಹರಣೆಯಿದೆ. ಆದರೆ ಕಳೆದ ಮೂರು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಮೀಕ್ಷಾ ವರದಿಗಳ ಅಂಕಿ- ಅಂಶಗಳಲ್ಲಿ ಹೆಚ್ಚು ಕಡಿಮೆಯಾಗಿದ್ದರೂ, ದೇಶದ ಜನರ
‘ಮೂಡ್’ ಕೊಡುವಲ್ಲಿ ಅವು ಎಲ್ಲಿಯೂ ಎಡವಿಲ್ಲ. ಈ ಬಾರಿಯ ಸಮೀಕ್ಷಾ ವರದಿಗಳು ‘ಸುಳ್ಳಾಗಲಿವೆ’ ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕ ರಿದ್ದರೆ, ಬಿಜೆಪಿಯವರು ವಿಮರ್ಶಾ ವರದಿಗಳೇ ಪರಮಸತ್ಯ ಎನ್ನುವ ಉತ್ಸಾಹದಲ್ಲಿದ್ದಾರೆ.

ಸಮೀಕ್ಷೆಗಳ ಸುಳ್ಳು-ಸತ್ಯದ ಫಲಿತಾಂಶ ಇಂದು ಮಧ್ಯಾಹ್ನದ ವೇಳೆಗೆ ಸ್ಪಷ್ಟವಾಗಲಿದೆ. ಅಂತಿಮವಾಗಿ, ಏನೇ ಆಗಲಿ ಭಾರತದ ಪ್ರಜಾಪ್ರಭುತ್ವ ಗೆಲ್ಲಲಿದೆ ಎನ್ನುವುದಷ್ಟೇ ಸಮಾಧಾನ.

Leave a Reply

Your email address will not be published. Required fields are marked *

error: Content is protected !!