Saturday, 30th November 2024

ಟಿ20 ವಿಶ್ವಕಪ್ ಸವಾಲು ಗೆದ್ದವರು !

ಪ್ರಚಲಿತ

ರವಿ ಸಜಂಗದ್ದೆ

ಭಾರತ ಕ್ರಿಕೆಟ್ ತಂಡ ೨೦೨೪ರ ಟಿ೨೦ ವಿಶ್ವ ಚಾಂಪಿಯನ್! ಹದಿಮೂರು ವರ್ಷಗಳ ಬಳಿಕ ಐಸಿಸಿ ಟ್ರೋಫಿ ಮತ್ತು ಹದಿನೇಳು ವರ್ಷಗಳ ನಂತರ ಮತ್ತೆ ಟಿ೨೦ ಚಾಂಪಿಯನ್. ಅಲ್ಲಿಗೆ ಕ್ರಿಕೆಟ್ ಭಾರತದಲ್ಲಿ ಮತ್ತೊಮ್ಮೆ ಉತ್ತುಂಗದಲ್ಲಿದೆ. ಈ ಯಶಸ್ಸಿನ ತತ್‌ಪರಿಣಾಮ (cascading effect) ಎನ್ನುವಂತೆ ತಂಡದ ಮುಖ್ಯ ತರಬೇತಿದಾರ ರಾಹುಲ್ ದ್ರಾವಿಡ್ ಸಂತೃಪ್ತಿಯಿಂದ ನೇಪಥ್ಯಕ್ಕೆ ಸರಿದಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ೨೦ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಅಲ್ಲಿಗೆ ಈ ಪೀಳಿಗೆಯ ಆರಾಧ್ಯ ದೈವ ಮತ್ತು ತಂಡದ ಆಧಾರ ಸ್ತಂಭಗಳು ‘ಯುವ ಮತ್ತು ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡುವ’ ನಿಟ್ಟಿನಲ್ಲಿ ವಿಶ್ವಕಪ್ ಗೆದ್ದ ಖುಷಿ ಯನ್ನು ಜೋಳಿಗೆಯಲ್ಲಿ ತುಂಬಿಸಿಕೊಂಡು ಶಸ ತ್ಯಜಿಸಿವೆ! ದಶಕಗಳಿಂದ ಭಾರತ ಕ್ರಿಕೆಟಿನ ಬಹುಮುಖ್ಯ ‘ಕೋಶ’ವು (ಕೋಹ್ಲಿ, ಶರ್ಮಾ) ಸಕ್ರಿಯ ಕ್ರಿಕೆಟಿನ ಕೊಂಡಿ ಕಳಚಿಕೊಂಡಿದ್ದಾರೆ. ಟಿ೨೦ ಪಂದ್ಯಗಳಿಗೆ ಭಾರತ ತಂಡದ ನೀಲಿ ಜರ್ಸಿ ಧರಿಸಿ ಇವರುಗಳು ಇನ್ನು ಮೈದಾನಕ್ಕೆ ಇಳಿಯುವುದಿಲ್ಲ ಎನ್ನುವ ಬೇಸರ. ದೇಶದ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸ್ಥಿತ್ಯಂತರ, ಪರ್ವಾಂತರ!

ಜುಲೈ ೧೩ಕ್ಕೆ ಭಾರತ ತಂಡ ನಿಗದಿತ ಓವರುಗಳ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಶುರುಮಾಡಿ ಭರ್ತಿ ಐವತ್ತು ವರ್ಷಗಳು (೧೯೭೪-೨೦೨೪)! ಅನಿರೀಕ್ಷಿತವಾಗಿ, ೧೯೮೩ರಲ್ಲಿ ಬಲಿಷ್ಠ ವೆಇಂಡೀಸ್ ತಂಡವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಆ ದಿನಗಳಿಂದ ಈ ಟಿ೨೦ ವಿಶ್ವ ಕಪ್ ಗೆಲ್ಲುವ ತನಕ ಭಾರತ ಕ್ರಿಕೆಟ್ ಸಾಗಿ ಬಂದ ದಾರಿ ಅನನ್ಯವಾದದ್ದು. ದೇಶದಲ್ಲಿ ಕ್ರಿಕೆಟ್ ಒಂದು ಧರ್ಮ. ಕ್ರೀಡೆ ಮತ್ತು ಮನರಂಜನೆಗೆ ಹೊಸ ಭಾಷ್ಯ ಬರೆದ ಹೆಗ್ಗಳಿಕೆ ಐಪಿಎಲ್‌ನದ್ದು. ಕ್ರಿಕೆಟ್ ಸಾವಿರಾರು ಕೋಟಿಯ ವ್ಯವಹಾರದ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಮರ್ಥ್ಯವಿರುವ ಶಕ್ತಿಯುತ ಕ್ರೀಡೋದ್ಯಮ!

ಒಂದು ಕಾಲದಲ್ಲಿ ದೇಶದ ನಾಲ್ಕಾರು ನಗರಗಳಿಗೆ ಸೀಮಿತವಾಗಿದ್ದ ನಾಲ್ಕು-ಆರು ಹೊಡೆಯುವ ಆಟ ಇಂದು ಕೇವಲ ನಾಲ್ಕಾರು ದೇಶಗಳ ಹೊರತಾಗಿ ವಿಶ್ವದೆಡೆ ಪಸರಿಸಿದೆ, ಆವರಿಸಿದೆ! ಕ್ರಿಕೆಟ್‌ನ ವ್ಯಾಪ್ತಿ, ಪ್ರಾಪ್ತಿ ಮತ್ತು ತೃಪ್ತಿಯ ಬಾಹುಳ್ಯ ಅದರ ಮೈದಾನದಷ್ಟೇ ವಿಶಾಲ, ಅಗಾಧ. ಕೆಲವೇ ನೂರು ರುಪಾಯಿಗಳ ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ಸಾವಿರಾರು ಕೋಟಿ ರುಪಾಯಿಗಳ
ವ್ಯವಹಾರ ನಡೆಸುವ, ಪ್ರಪಂಚದ ಅತ್ಯಂತ ಶ್ರೀಮಂತ, ಬಲಿಷ್ಠ ಮತ್ತು ಪ್ರಭಾವಿ ಕ್ರಿಕೆಟ್ ಮಂಡಳಿ. ವಿಶ್ವಾದ್ಯಂತ ಕ್ರಿಕೆಟ್ ಆಟ ಮತ್ತು ಮಂಡಳಿಗಳು ಬಿಸಿಸಿಐನ ಮುಲಾಜಿನಲ್ಲಿವೆ.

ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಾಟಗಳು, ವಿಶ್ವಕಪ್ ಪಂದ್ಯಾಟಗಳು ಬಿಸಿಸಿಐನ ಯೋಜನೆ, ಅಣತಿಯಂತೆ ನಡೆಯುತ್ತವೆ. ಬಿಸಿಸಿಐ ಕ್ರಿಕೆಟ್ ಜಗತ್ತಿನ
ದೊಡ್ಡಣ್ಣ. ಕ್ರಿಕೆಟ್ ಆಟವು ಕಾಲಕಾಲಕ್ಕೆ ಪರಿಷ್ಕರಣೆ, ಸುಧಾರಣೆ, ಮೌಲ್ಯವರ್ಧನೆ ಮತ್ತು ಪ್ರಗತಿ ಹೊಂದಿದೆ. ಕ್ರಿಕೆಟ್ ನಿಯಮಗಳೂ ನಿರಂತರ ಬದಲಾಗುತ್ತಿವೆ. ಒಂದು ಕಾಲದಲ್ಲಿ ಕ್ರಿಕೆಟ್ ಎಂದರೆ ಕೇವಲ ಟೆ ಪಂದ್ಯಗಳು. ನಂತರ ೬೦ ಓವರುಗಳ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳು ಶುರುವಾದವು. ೧೯೮೭ರಿಂದ ಏಕದಿನ ಪಂದ್ಯ ೫೦ ಓವರ್ ಆಟವಾಗಿ ಮತ್ತಷ್ಟು ಜನಪ್ರಿಯವಾಯಿತು. ೨೦೦೪ರಲ್ಲಿ ಶುರುವಾದ ಚುಟುಕು ಪ್ರಕಾರದ ಟಿ೨೦ ಕ್ರಿಕೆಟ್ ಮಾದರಿಯು ಆಟದ ಭಾಷ್ಯ, ಸೀಮೆ, ಸಮೀಕರಣ ಮತ್ತು ಪರಿಧಿಯನ್ನು ಬದಲಿಸಿ ಬಹಳ ಕ್ಷಿಪ್ರವಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯಿತು.

೨೦೦೮ರಿಂದ ಶುರುವಾದ ಐಪಿಎಲ್ ಪಂದ್ಯಾವಳಿ ಕ್ರಿಕೆಟ್ ಆಟವನ್ನು ಮತ್ತೊಂದು ಉತ್ತುಂಗಕ್ಕೆ ತೆಗೆದುಕೊಂಡು ಹೋಯಿತು. ಕ್ರಿಕೆಟ್ ಮತ್ತೂ ಖ್ಯಾತಿ ಗಳಿಸಿತು. ಆಟ, ಉದ್ಯಮ, ಸೆಲೆಬ್ರಿಟಿಗಳು, ಮಾಲಿಕತ್ವ, ಆಟಗಾರರ ಹರಾಜು, ಮನರಂಜನೆ, ಸಿನಿಮಾ ರಂಗ, ರಾಜಕಾರಣ, ಜಾಹೀರಾತು, ಟಿವಿ ಪ್ರಸಾರ  ಹಕ್ಕು… ಹೀಗೆ ಐಪಿಎಲ್ ಎ ಆಯಾಮಗಳ ಜನರನ್ನು ಕ್ರಿಕೆಟ್ ಕೊಡೆಯಡಿ ಸೇರಿಸಿ ಬೆಳೆದು ನಿಂತ ಅಪರಿಮಿತ ಪರಿ ಅನೂಹ್ಯ ಮತ್ತು ಅಚ್ಚರಿ. ದೇಶೀಯ ಪ್ರತಿಭೆಗಳ ಉಗಮಕ್ಕೆ ಐಪಿಎಲ್ ಹೊಸ ಭಾಷ್ಯ ಬರೆಯಿತು. ಬೆಟ್ಟಿಂಗ್ ಮತ್ತಿತರ ಕಾನೂನು ಬಾಹಿರ ವಿಚಾರದ ಕರಿಚುಕ್ಕೆಯೂ ಆಟದೊಡನೆ  ಅಂಟಿ ಕೊಂಡು gentlemen’s game ಎನಿ ಸಿರುವ ಕ್ರಿಕೆಟ್ ಒಂದಷ್ಟು ಮಲಿನವಾಯಿತು.

ಈಗಲೂ ಐಪಿಎಲ್ ಪಂದ್ಯಾಟ scripted ಎನ್ನುವ ಅಭಿಪ್ರಾಯ ಹಲವರದ್ದು. ಕೆಲವೊಮ್ಮೆ ಅದು ಅಲ್ಲವೆನಿಸದು. ಇರಲಿ. ತಂತ್ರಜ್ಞಾನ ಬಳಕೆ, ತಂತ್ರಗಾರಿಕೆ, ಎದುರಾಳಿಯ SWOT Analysis, ಮೈದಾನ ಮತ್ತು ಪಿಚ್ ಬಗೆಗಿನ ವಿವರ ಮತ್ತು ಅಧ್ಯಯನ, ಕ್ಷೇತ್ರರಕ್ಷಣೆ ವ್ಯೂಹ ತಯಾರಿ… ಹೀಗೆ ಕ್ರಿಕೆಟ್ ಕೇವಲ ಆಟವಾಗಿ ಉಳಿಯದೆ ನಿರಂತರ ಸಂಶೋಧನೆ ಮತ್ತು ಆಟದಲ್ಲಿ ಅಭಿವೃದ್ಧಿ ವಿಷಯವಾಗಿ ಮಾರ್ಪಟ್ಟಿದೆ. Cricket is no more a field game, it’s a mind game!

ಅನ್ನುವುದು ಅಕ್ಷರಶಃ ನಿಜ. ಮೊನ್ನೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ ಮುಕ್ತಾಯಗೊಂಡ ಪಂದ್ಯಾಟದ ಸಂದರ್ಭದಲ್ಲಿ ಪಂದ್ಯ ನಡೆಯುವ ಮೈದಾನದ ಪರಿಸರದ ಹವಾಮಾನ, ಇಬ್ಬನಿ – ತೇವಾಂಶದ ಪ್ರಮಾಣ, ಮುಖ್ಯವಾಗಿ ಗಾಳಿಯ ವೇಗ, ಚಲನೆ ಮತ್ತು ದಿಕ್ಕನ್ನು ನಿಖರವಾಗಿ ಅಭ್ಯಾಸಿಸಲು ಮತ್ತು ಪಂದ್ಯದಲ್ಲಿ ಎದುರಾಳಿ ಯನ್ನು ಕಟ್ಟಿಹಾಕಲು ಅದರ ಸದುಪಯೋಗ ಪಡೆಯಲು ಅಮೆರಿಕದ ಒಂದು Weather and Data Analytics ಸಂಸ್ಥೆಯೊಂದಿಗೆ ಭಾರತ ತಂಡ ಒಪ್ಪಂದ ಮಾಡಿಕೊಂಡಿತ್ತು ಅಂದರೆ ನಂಬಲೇಬೇಕು.

ಆಟಗಾರರ ಸರ್ವಾಂಗೀಣ ಪ್ರದರ್ಶನದ ಜತೆಗೆ ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ಮತ್ತು ಆ ಕುರಿತು ತಂತ್ರಗಾರಿಕೆ ರೂಪಿಸಲು ಹಲವು ವಿಭಿನ್ನ ಆಯಾಮಗಳಲ್ಲಿ ಭಾರತ ತಂಡ ಕೆಲಸ ಮಾಡಿದೆ. ಇದೆಲ್ಲದರ ಸತ್ಪರಿಣಾಮದ ಫಲವೇ ಈ ಟಿ೨೦ ವಿಶ್ವ ಚಾಂಪಿಯನ್ ಪಟ್ಟ. ಅದನ್ನು ಸಾಧ್ಯವಾಗಿಸಲು ಆಟಗಾರರು ಮೈದಾನದಲ್ಲಿ ಮಾಡಿದಷ್ಟೇ ಪ್ರಯತ್ನ ಉಳಿದ ಹಲವರು ಮೈದಾನದ ಹೊರಗೆ (behind the screen) ಮಾಡಿದ್ದಾರೆ.

ದೀಪಾವಳಿಗೆ ಸದ್ದು ಮಾಡುವಷ್ಟು ಸದ್ದು ವಿಶ್ವಕಪ್ ಗೆದ್ದ ರಾತ್ರಿ ದೇಶಾದ್ಯಂತ ಪಟಾಕಿ, ಸಿಡಿಮದ್ದುಗಳು ಮಾಡಿವೆ. ಸ್ಯಾಟಲೈಟ್ ಪ್ರಸಾರದ ಹಕ್ಕು ಪಡೆದ ಸಂಸ್ಥೆಯೂ ಭರಪೂರ ದುಡ್ಡು ಬಾಚಿ ಸಂಭ್ರಮಿಸಿದೆ. ವಾಟ್ಸಪ್, ಎಕ್ಸ್, ಫೇಸ್‌ಬುಕ್, ಇನ್ಸ್ಟಾ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಅಂದಾಜು ೧೦೦೦ ಪೆಟಾಬೈಟ್ (೧ ಕೋಟಿ ಟೆರಾಬೈಟ್) ನಷ್ಟು ಫೈನಲ್ ಪಂದ್ಯದ ಕುರಿತು ಮೆಸೇಜ್ ಪೋಟೋ, ಸ್ಟೇಟಸ್, ವಿಡಿಯೊ, ರೀಲ್ಸ್ , ಎಐಊ ಹರಿದಾಡಿವೆ, ಡೌನ್‌ಲೋಡ್ ಆಗಿವೆ!

ಜನರು ಹೆಚ್ಚು ಡೆಟಾ ಉಪಯೋಗಿಸಿದ ಪರಿಣಾಮ ಸೆಲ್ಯುಲರ್ ಸೇವಾ ಕಂಪನಿಗಳೂ ದಿಲ್ ಖುಷ್. ದೇಶಾದ್ಯಂತ ಅಂದಾಜು ನಾಲ್ಕೂವರೆ ಸಾವಿರ ಮೆಗಾವ್ಯಾಟ್ ವಿದ್ಯುತ್ ಆ ಒಂದು ರಾತ್ರಿ ಪಂದ್ಯ ವೀಕ್ಷಿಸಲು ಬಳಕೆಯಾಗಿದೆ. ಇದು ದೇಶದ ಅತಿದೊಡ್ಡ ವಿದ್ಯುತ್ ಸ್ಥಾವರ ವಿಂಧ್ಯಾಚಲದ ವಿದ್ಯುತ್
ಉತ್ಪಾದನಾ ಶಕ್ತಿಯ ಪ್ರಮಾಣಕ್ಕೆ ಸಮ! ಸಾಮಾನ್ಯವಾಗಿ calm silent ಇರುವ ’ಗೋಡೆ’ (wall) ಖ್ಯಾತಿ ಇರುವ ದ್ರಾವಿಡ್ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದು ಕಿರುಚಾಡಿ, ಬೊಬ್ಬಿರಿದು ಸಂಭ್ರಮಿಸಿದ್ದಾರೆ.

ಸದಾ agressive ಇರುವ ವಿರಾಟ್ ಗೆಲುವಿನ ನಂತರ ಸಾತತ್ಯದಿಂದ ಮೌನಕ್ಕೆ ಜಾರಿ ಖುಷಿಯಿಂದ ಕಣ್ಣೀರಾಗಿದ್ದಾನೆ. ರೋಹಿತ್ ತನು-ಮನ ತುಂಬಿ ಪಿಚ್ ಮೇಲಿನ ಮಣ್ಣಿನ ಕಣ ಬಾಯಿಗಿಟ್ಟು ವಿಶ್ವಕಪ್ ಗೆದ್ದ ಮೈದಾನಕ್ಕೆ ಧನ್ಯವಾದ ಹೇಳಿzನೆ. ಜಡೇಜಾ, ಬುಮ್ರಾ, ಹಾರ್ದಿಕ್ ಸಾಕಷ್ಟು ಆನಂದಭಾಷ್ಪ ಸುರಿಸಿ ಸಂಭ್ರಮಿಸಿದ್ದಾರೆ. ಇವರೆಲ್ಲರಿಗೂ ಇದು ಕೊನೆಯ ವಿಶ್ವಕಪ್! ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ’ಸೂರ್ಯ’ ಭಾರತದ ಆಗಸದಲ್ಲಿ ರಾತ್ರಿ ಸಮಯ ದಲ್ಲಿ ಉದಯಿಸಿ ಕಂಗೊಳಿಸಿದ್ದಾನೆ.

ಅರ್ಕ್ಷ ಅಕ್ಷರಶಃ ಆಪತ್ಭಾಂ ದವ ಎನಿಸಿಕೊಂಡಿzನೆ. ಲೀಗ್ ನ ಹಲವು ಗೆಲುವುಗಳಲ್ಲಿ ಕುಲ್ದೀಪ್ ಶ್ರೇಷ್ಠ ಕೊಡುಗೆ ನೀಡಿದ್ದಾನೆ. ಫೈನಲ್ ಪಂದ್ಯ ಸೋಲುವ ಹಂತದಲ್ಲಿದ್ದಾಗ ನಿಖರ ಬೌಲಿಂಗ್ ನಡೆಸಿದ ಆರ್ಷದೀಪ್ ಗೆಲುವಲ್ಲಿ ತಾನೂ ಮಹತ್ತರ ಕೊಡುಗೆ ನೀಡಿದ್ದಾನೆ. ವೃತ್ತಿ ಬದುಕಿನ ಉತ್ತುಂಗದಲ್ಲಿ ನಿವೃತ್ತಿ ಘೋಷಿಸಿದ ವಿರಾಟ, ರೋಹಿತ್ ಮತ್ತು ಜಡೇಜಾ ನಿರ್ಧಾರವನ್ನು ಮೆಚ್ಚಲೇಬೇಕು. ನಿವೃತ್ತರಾಗಲು ತಂಡದ ಆಯ್ಕೆ ಸಮಿತಿಯ ಅನಧಿಕೃತ ಆದೇಶಕ್ಕೆ ಅಥವಾ ಅವಗಣನೆಗೆ ಒಳಗಾಗಿ ನಿವೃತ್ತಿ ಘೋಷಿಸುವ ಆಟಗಾರರ ಮಧ್ಯೆ ಈ ಮೂವರು ವಿಶಿಷ್ಟವಾಗಿ ಕಾಣುತ್ತಾರೆ. Wise and timely decision gentlemen! Happy retirement.

ಪಾಕಿಸ್ತಾನ, ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮುಂತಾದ ಒಂದಕ್ಕಿಂತ ಒಂದು ಬಲಿಷ್ಠ ತಂಡವನ್ನು ಮಣಿಸಿ ಟಿ೨೦ ವಿಶ್ವ ಚಾಂಪಿಯನ್ ಶಿಪ್ ಪಟ್ಟ ಏರಿದ್ದು ನಿಜವಾದ ತಂಡಶ್ರಮ. ಭಾರತ ಗೆದ್ದ ಖುಷಿಯಲ್ಲಿ ಭಾರತೀಯರು ಸಂಭ್ರಮದಿಂದ ಸುರಿಸಿದ ಆನಂದಭಾಷ್ಪ ಚಿರಾಪುಂಜಿಯಲ್ಲಿ ಒಂದು ಋತುವಿನಲ್ಲಿ ದಾಖಲಾಗುವ ಮಳೆಗಿಂತ ಕಡಿಮೆ ಏನೂ ಆಗಲಾರದು! ಒಂದು ಗೆಲುವೂ ಯಕ್ಕಃಶ್ಚಿತ್ ಇಷ್ಟು ಕಣ್ಣೀರು ತರಿಸುತ್ತಾ? ಕ್ರಿಕೆಟ್ ಜಗತ್ತಿನಲ್ಲಿ ಇನ್ನೂ ಭರವಸೆಯ ನಾಳೆಗಳು ನಮದೆನಿಸಿವೆ.

(ಲೇಖಕರು : ಸಾಫ್ಟ್ ವೇರ್ ಉದ್ಯೋಗಿ, ಹವ್ಯಾಸಿ ಬರಹಗಾರ)