Saturday, 27th July 2024

ತೆರಿಗೆ ವಿನಾಯಿತಿಗಾಗಿ ಯೋಜನೆಗಳು

ಮಾಹಿತಿಕೋಶ

ಡಾ.ಅಮ್ಮಸಂದ್ರ ಸುರೇಶ್

ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡುವ ಹಣದ ಮೇಲೆ ೧೯೬೧ರ ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ
ವಿನಾಯಿತಿಗಳು ಲಭ್ಯವಿವೆ. ಹೂಡಿಕೆಯ ಮೇಲೆ ನಿಗದಿತ ಆದಾಯ ದಕ್ಕಿಸಿಕೊಡುವುದರ ಜತೆಗೆ ಹಣವನ್ನು ಉಳಿಸಿ ಬೆಳೆಸುವುದು ಈ ಯೋಜನೆಗಳ ಮುಖ್ಯ ಗುರಿ.

ಪ್ರತಿ ಆರ್ಥಿಕ ವರ್ಷದ ಕೊನೆಯ ತಿಂಗಳುಗಳಲ್ಲಿ ತೆರಿಗೆದಾರರು ಅದರಲ್ಲೂ ಮುಖ್ಯವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರು ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಲು ಎಲ್ಲಿ ಮತ್ತು ಯಾವ ಉಳಿತಾಯ ಯೋಜನೆಗಳ ಮೇಲೆ ಹಣ ಹೂಡಿದರೆ ಒಳಿತು ಎಂಬುದನ್ನು ಅರಿಯಲು ಬಯಸುವುದು ಸಾಮಾನ್ಯ
ಸಂಗತಿ. ಇಂಥ ಅನ್ವೇಷಣೆಯಲ್ಲಿರುವವರಿಗಾಗಿ ಅಂಚೆ ಇಲಾಖೆಯಲ್ಲಿ ಹಲವು ಉಳಿತಾಯ ಯೋಜನೆಗಳಿವೆ. ಇವು ಎಲ್ಲ ಶಾಖೆಗಳಲ್ಲೂ ಲಭ್ಯವಿರುವುದರಿಂದ ಹೂಡಿಕೆಯ ಮಾರ್ಗವೂ ಸುಲಭವಾಗಿದೆ. ಹೀಗೆ ಹೂಡಿದ ಹಣಕ್ಕೆ ಕೇಂದ್ರ ಸರಕಾರದ ಭದ್ರತೆಯಿರುವುದರಿಂದ, ತೆರಿಗೆ ಉಳಿತಾಯದ ಜತೆಗೆ ಹೂಡಿಕೆ ಮಾಡಲಾದ ಹಣಕ್ಕೆ ಅನ್ವಯವಾಗುವ ಬಡ್ಡಿಯನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯುವ ಅನುಕೂಲವಿದೆ. ಹೀಗಾಗಿ ಇವು ಹೂಡಿಕೆದಾರರ ಪಾಲಿಗೆ ಸೂಕ್ತ
ಆಯ್ಕೆಗಳಾಗಬಲ್ಲವು.

ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳಲ್ಲಿ ಹೂಡುವ ಹಣದ ಮೇಲೆ ೧೯೬೧ರ ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿಗಳು ಲಭ್ಯವಿವೆ. ಹೂಡಿಕೆಯ ಮೇಲೆ ನಿಗದಿತ ಆದಾಯವನ್ನು ದಕ್ಕಿಸಿಕೊಡುವುದರ ಜತೆಗೆ ಹಣವನ್ನು ಉಳಿಸುವುದು ಮತ್ತು ಬೆಳೆಸುವುದು ಈ ಯೋಜನೆಗಳ ಮುಖ್ಯ ಗುರಿ. ಆದಾಯ ತೆರಿಗೆ ಕಾಯ್ದೆ ೧೯೬೧ರ ಸೆಕ್ಷನ್ ೮೦(ಸಿ) ಅಡಿಯಲ್ಲಿ ತೆರಿಗೆ ವಿನಾಯಿತಿ ನೀಡುವ ಅಂಥ ಕೆಲವು ಯೋಜನೆಗಳು ಹೀಗಿವೆ:
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಇದು ಸರಕಾರಿ ಬೆಂಬಲಿತ ಯೋಜನೆಯಾಗಿದ್ದು, ವಾರ್ಷಿಕವಾಗಿ ೫೦೦ ರುಪಾಯಿಗಳಿಂದ ೧.೫ ಲಕ್ಷ ರುಪಾಯಿಗಳ ವರೆಗೆ ಹೂಡಿಕೆದಾರರು ಹೂಡಿಕೆ ಮಾಡಬಹುದು.

ಪ್ರಸ್ತುತ ವಾರ್ಷಿಕ ಶೇ.೭.೧ರಷ್ಟು ಬಡ್ಡಿ ನೀಡಲಾಗುತ್ತಿರುವ ಈ ಯೋಜನೆಯು ೧೫ ವರ್ಷಗಳ ಅವಧಿಯದಾಗಿದ್ದು, ಮಾರಣಾಂತಿಕ ಕಾಯಿಲೆ, ಉನ್ನತ ಶಿಕ್ಷಣ ಮುಂತಾದ ಕಾರಣಗಳಿಗಾಗಿ ೫ ವರ್ಷಗಳ ನಂತರ ಹೂಡಿಕೆ ಮಾಡಿದ ಹಣವನ್ನು ಪೂರ್ಣ ಹಿಂತೆಗೆದುಕೊಳ್ಳಲು ಅವಕಾಶವಿದೆ. ಈ ಯೋಜನೆಯಲ್ಲಿ ವಾರ್ಷಿಕ ವಾಗಿ ೧.೫ ಲಕ್ಷ ರು.ವರೆಗೆ ತೆರಿಗೆ ಉಳಿಸಬಹುದು ಮತ್ತು ಗಳಿಸಿದ ಬಡ್ಡಿ ಹಾಗೂ ಹೂಡಿಕೆಗೆ ತೆರಿಗೆ ವಿಧಿಸಲಾಗುವುದಿಲ್ಲ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ): ತೆರಿಗೆ ವಿನಾಯಿತಿಗಾಗಿಯೇ ಇರುವ ಈ ಯೋಜನೆಯಲ್ಲಿ ಹೂಡಿಕೆದಾರರು ಹೂಡಿಕೆಯ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರದ ಅವಽ ೫ ವರ್ಷಗಳಾಗಿದ್ದು, ಈ ಯೋಜನೆಯಲ್ಲಿ ಕನಿಷ್ಠ ೧,೦೦೦ ರುಪಾಯಿಗಳನ್ನು ತೊಡಗಿಸಬೇಕು. ಹೂಡಿಕೆಯ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಈ ಯೋಜನೆಗೆ ಪ್ರಸ್ತುತ ವಾರ್ಷಿಕ ಶೇ.೭.೭ರಷ್ಟು ಬಡ್ಡಿದರವಿದೆ.

ಸುಕನ್ಯಾ ಸಮೃದ್ಧಿ: ಭಾರತ ಸರಕಾರದ ಒಂದು ಸಣ್ಣ ಠೇವಣಿ ಯೋಜನೆಯಾಗಿರುವ ಇದು ಹೆಣ್ಣು ಮಗುವಿಗೆ ಮಾತ್ರ ಮೀಸಲಾಗಿದೆ ಹಾಗೂ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದ ಭಾಗವಾಗಿ ಇದನ್ನು ಪ್ರಾರಂಭಿಸ ಲಾಗಿದೆ. ಹೆಣ್ಣು ಮಗು ಹುಟ್ಟಿದ ನಂತರ ೧೦ ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಬೇಕಾದರೂ ‘ಸುಕನ್ಯಾ ಸಮೃದ್ಧಿ’ ಖಾತೆಯನ್ನು ತೆರೆಯಬಹುದು. ೨೫೦ ರುಪಾಯಿ ಆರಂಭಿಕ ಠೇವಣಿಯನ್ನು ಇರಿಸಿ ನಂತರ ೧೦೦ ರುಪಾಯಿಗಳ ಗುಣಕದಲ್ಲಿ ಎಷ್ಟು ಹಣವನ್ನಾದರೂ ಠೇವಣಿ ಮಾಡಬಹುದು. ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ೨೫೦ ರು. ಠೇವಣಿ ಮಾಡಲೇಬೇಕು; ಆದರೆ ಒಂದೇ ಸಂದರ್ಭದಲ್ಲಿ ಅಥವಾ ಅನೇಕ ಸಂದರ್ಭಗಳಲ್ಲಿ ಸೇರಿ ಒಂದು ಆರ್ಥಿಕ ವರ್ಷದಲ್ಲಿ ಈ ಯೋಜನೆಯಲ್ಲಿ ತೊಡಗಿಸುವ ಹಣವು ಒಂದೂವರೆ ಲಕ್ಷ ರುಪಾಯಿಗಳನ್ನು ಮೀರುವಂತಿರುವುದಿಲ್ಲ.
ಈ ಯೋಜನೆಯಲ್ಲಿನ ಹೂಡಿಕೆಗೆ ಪ್ರಸ್ತುತ ವಾರ್ಷಿಕ ಶೇ.೮.೨ರಷ್ಟು ಬಡ್ಡಿದರವಿದೆ. ಉನ್ನತ ಶಿಕ್ಷಣ ಮತ್ತು ಮದುವೆಯ ಉದ್ದೇಶಕ್ಕಾಗಿ ಖಾತೆದಾರರ ಹಣಕಾಸಿನ
ಅವಶ್ಯಕತೆಗಳನ್ನು ಪೂರೈಸಲು, ಹಿಂದಿನ ಹಣಕಾಸು ವರ್ಷದ ಕೊನೆಯಲ್ಲಿ ಖಾತೆಯ ಕ್ರೆಡಿಟ್‌ನಲ್ಲಿ ೫೦ ಪ್ರತಿಶತದವರೆಗೆ ಬಾಕಿ ಹಣವನ್ನು ಹಿಂಪಡೆಯಲು ಅವಕಾಶವಿದೆ.

ಅಲ್ಪಾವಧಿ ಠೇವಣಿ ಯೋಜನೆಗಳು: ಅಂಚೆ ಕಚೇರಿಯಲ್ಲಿ ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಠೇವಣಿ ಉಳಿತಾಯ ಯೋಜನೆಗಳು ಲಭ್ಯವಿದ್ದು ಇವು ಹೂಡಿಕೆದಾರರಿಗೆ ನಿಖರ ಬಡ್ಡಿದರದಲ್ಲಿ ಆದಾಯವನ್ನು ಒದಗಿಸುತ್ತವೆ. ಈ ಪೈಕಿ ಒಂದು ವರ್ಷದ ಅವಽಯ ಠೇವಣಿಗೆ ಶೇ.೬.೯, ಎರಡು ವರ್ಷಕ್ಕೆ ಶೇ.೭.೦, ಮೂರು ವರ್ಷಕ್ಕೆ ಶೇ.೭.೧ ಮತ್ತು ೭ ವರ್ಷಕ್ಕೆ ಶೇ.೭.೫ರಷ್ಟು ವಾರ್ಷಿಕ ಬಡ್ಡಿದರವಿದೆ. ಕನಿಷ್ಠ ೧,೦೦೦ ರು. ಹೂಡಿಕೆಯೊಂದಿಗೆ ಸದರಿ ಠೇವಣಿ ಖಾತೆಯನ್ನು
ಆರಂಭಿಸಬಹುದು ಮತ್ತು ಗರಿಷ್ಠ ಎಷ್ಟು ಹಣವನ್ನು ಬೇಕಿದ್ದರೂ ಠೇವಣಿ ಇರಿಸಬಹುದು. ಬಡ್ಡಿಯನ್ನು ವಾರ್ಷಿಕ ವಾಗಿ ಲೆಕ್ಕಹಾಕಿ ಕೊಡಲಾಗುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ: ಇದು ಅಂಚೆ ಕಚೇರಿಯ ಒಂದು ಪ್ರಮುಖ ತೆರಿಗೆ ಉಳಿತಾಯ ಯೋಜನೆಯಾಗಿದ್ದು, ಹಿರಿಯ ನಾಗರಿಕರ ಹಿತದೃಷ್ಟಿ ಯಿಂದ ಇದನ್ನು ಆರಂಭಿಸಲಾಗಿದೆ. ೬೦ ವರ್ಷ ಮೇಲ್ಪಟ್ಟ ವ್ಯಕ್ತಿಗಳು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಆದಾಗ್ಯೂ, ೫೫ ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ೬೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ವೃತ್ತಿಯಿಂದ ವಿಆರ್‌ಎಸ್ ತೆಗೆದುಕೊಂಡಿದ್ದರೆ, ಅಂಥವರೂ ಹೂಡಿಕೆ
ಮಾಡಲು ಅರ್ಹರಾಗಿರುತ್ತಾರೆ. ಯೋಜನೆಯ ಮುಕ್ತಾಯ ಅವಧಿಯು ೫ ವರ್ಷಗಳಾಗಿದ್ದು, ವ್ಯಕ್ತಿಗಳು ತಮ್ಮ ಸಂಗಾತಿ ಯೊಂದಿಗೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಖಾತೆ ಯನ್ನು ತೆರೆಯಬಹುದು. ಕನಿಷ್ಠ ೧,೦೦೦ ರುಪಾಯಿಗಳನ್ನು ಪಾವತಿಸುವ ಮೂಲಕ ಆರಂಭಿಸಬಹುದಾದ ಈ ಯೋಜನೆಯಲ್ಲಿ ಗರಿಷ್ಠ ೩೦ ಲಕ್ಷ ರುಪಾಯಿಗಳವರೆಗೂ ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಅತ್ಯಧಿಕ ಅಂದರೆ ವಾರ್ಷಿಕ ಶೇ.೮.೨ರಷ್ಟು ಬಡ್ಡಿಯನ್ನು ನೀಡಲಾಗು ತ್ತಿದೆ ಮತ್ತು ಅದನ್ನು ಮೂರು ತಿಂಗಳಿಗೊಮ್ಮೆ ಕೊಡಲಾ ಗುತ್ತದೆ.

ಮಾಸಿಕ ವರಮಾನ ಯೋಜನೆ: ಈ ಯೋಜನೆಯ ಮೂಲಕ ಹೂಡಿಕೆದಾರರು ಸ್ಥಿರವಾದ ಮಾಸಿಕ ಆದಾಯ ವನ್ನು ಪಡೆಯಬಹುದು. ಕನಿಷ್ಠ ೧,೦೦೦ ರುಪಾಯಿ ಗಳನ್ನು ಹೂಡಿಕೆ ಮಾಡುವ ಮೂಲಕ ಮಾಸಿಕ ವರಮಾನ ಉಳಿತಾಯ ಖಾತೆಯನ್ನು ಆರಂಭಿಸಬಹುದು. ೧,೦೦೦ ರುಪಾಯಿಗಳ ಗುಣಕದಲ್ಲಿ ವೈಯಕ್ತಿಕವಾಗಿ ೯ ಲಕ್ಷ ರು. ಮತ್ತು ಜಂಟಿಯಾಗಿ ೧೫ ಲಕ್ಷ ರು.ವರೆಗೂ ಈ ಖಾತೆಯಲ್ಲಿ ವಿನಿಯೋಗಿಸಬಹುದು. ಈ ಖಾತೆಗೆ ಪ್ರಸ್ತುತ ವಾರ್ಷಿಕ ಶೇ.೭.೪ರಷ್ಟು ಬಡ್ಡಿದರವಿದ್ದು, ಯೋಜನೆಯ ಕಾಲಾವಧಿ ೫ ವರ್ಷಗಳಾಗಿವೆ. ತೊಡಗಿಸುವ ಹಣವನ್ನು ಒಂದು ವರ್ಷದ ಅವಧಿಯವರೆಗೂ ಹಿಂಪಡೆಯಲು ಸಾಧ್ಯವಿಲ್ಲ. ಒಂದು ವರ್ಷದ ನಂತರ ಅಕಾಲಿಕವಾಗಿ ಖಾತೆಯನ್ನು ಮುಕ್ತಾಯ ಗೊಳಿಸಿಕೊಳ್ಳಬಹುದು.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!