Saturday, 27th July 2024

ಸ್ವಯಂ ನಂಬಿಕೆ ಮೂಡಿಸುವುದು ಶಿಕ್ಷಣದ ಉದ್ದೇಶವಾಗಲಿ

ಶ್ವೇತ ಪತ್ರ

shwethabc@gmail.com

ಶಿಕ್ಷಣವು ಸ್ವಯಂ-ನಂಬಿಕೆಯನ್ನು ಉನ್ನತೀಕರಿಸಬೇಕು. ಬೆಳೆದು ಸಾಮಾಜಿಕವಾಗಿ ಸದೃಢರಾಗುವವರೆಗೂ ಮಕ್ಕಳು ಸಾಮಾಜಿಕ ಕೌಶಲಗಳನ್ನು, ನ್ಯಾಯಪರ ಸಂವೇದನೆಗಳನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ಶಿಕ್ಷಣವು ಅವರ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಮಧ್ಯಪ್ರವೇಶಿಸದೆ ಸ್ವಯಂ-ನಂಬಿಕೆಯನ್ನು ಮೂಡಿಸಿಕೊಳ್ಳಲು ನೆರವಾಗ ಬೇಕು.

ಹೊಸ ಕನಸು, ಹೊಸ ಆಶಯಗಳೊಂದಿಗೆ ಮಕ್ಕಳೆಲ್ಲ ಶಾಲಾ ಕಾಲೇಜುಗಳತ್ತ ಮುಖ ಮಾಡಿದ್ದಾರೆ, ಶಿಕ್ಷಣದ ಜತೆಗೆ ಬದುಕನ್ನು ಕಟ್ಟಿಕೊಳ್ಳುವ ನಿರೀಕ್ಷೆಯೊಂದಿಗೆ. ಶಿಕ್ಷಣದ ಕುರಿತಾದ ಇವತ್ತಿನ ನನ್ನ ಅಂಕಣಕ್ಕೆ ಪ್ರೇರಣೆಯಾಗಿದ್ದೇ ಇತ್ತೀಚೆಗೆ ನಾನು ಓದಿದ
ಆಸ್ಟ್ರಿಯಾ ದೇಶದ ವೈದ್ಯ, ಮನೋಚಿಕಿತ್ಸಕ, ಸ್ವತಂತ್ರ ಮನೋವಿಜ್ಞಾನದ ಪ್ರತಿಪಾದಕ ಆಲ್ರೆಡ್ ಆಡ್ಲರ್‌ನ, ಶಿಕ್ಷಣದ ಬಗ್ಗೆ ನಮಗಿರುವ ಗಮನಕ್ಕೆ ಆತನವಿರೋಧಾಭಾಸದ ಕುರಿತಾದ ಲೇಖನ.

ಆಡ್ಲರ್ ಪ್ರತಿಪಾದಿಸುವ ಆಯಾಮಗಳು ಮತ್ತು ಅವುಗಳ ಮೂಲಬೇರುಗಳಿಗೂ ನಮ್ಮ ಇವತ್ತಿನ ಶಿಕ್ಷಣ ವ್ಯವಸ್ಥೆಗೂ ಸಾಮರಸ್ಯ ಕಂಡುಬರುವುದಿಲ್ಲ. ಆಡ್ಲರ್ ಪ್ರತಿಪಾದಿಸುವ ಮನೋವೈಜ್ಞಾನಿಕ ಸಿದ್ಧಾಂತದಲ್ಲಿ ಆತ ಆಲೋಚನೆಯ ಕ್ರಮವೊಂದನ್ನು ಗುರುತಿಸು ತ್ತಾನೆ ಮತ್ತು ಆ ಆಲೋಚನಾ ಕ್ರಮವೇ ’’Seperation of tasks’ (ಬೇರ್ಪಟ್ಟ ಕಾರ್ಯ ಭಾರಗಳು ಎನ್ನಲಡ್ಡಿಯಿಲ್ಲ). ನಮ್ಮ ಬದುಕಲ್ಲಿ ಘಟಿಸುವ ಎಲ್ಲಾ ತರಹದ ವಸ್ತು ಹಾಗೂ ಘಟನೆಗಳಿಗೂ ಒಂದು ದೃಷ್ಟಿಕೋನವಿದೆ ಹೌದಲ್ಲವೇ? ಇದು ಯಾರ ಕೆಲಸ? ಮತ್ತೆ ಮುಂದುವರಿಯುತ್ತಾ ಇದು ನನ್ನ ಕೆಲಸ, ಇದು ಬೇರೆಯವರ ಕೆಲಸ ಎಂಬುದಾಗಿ ವಿಭಜನೆ ಗೊಂಡು ಮುಂದುವರಿಯುತ್ತಲೇ ಇರುತ್ತದೆ.

ಉದಾಹರಣೆಗೆ ನಮ್ಮ ಬಾಸ್‌ಗೆ ನನ್ನ ಕಂಡರಾಗದು. ಸಹಜವಾಗೇ ಈ ಅಂಶ ನಮ್ಮಲ್ಲಿ ಬೇಸರವನ್ನುಂಟುಮಾಡುತ್ತದೆ. ಹಾಗಾಗಿಯೇ ನಮ್ಮತ್ತ ಆತನ ಗಮನ ಸೆಳೆಯಲು ಅಗತ್ಯಕ್ಕಿಂತ ಹೆಚ್ಚಿನ ಶ್ರಮವಹಿಸಿ ಹೇಗಾದರೂ ಮಾಡಿ ಆತನಿಂದ ಶಹಭಾಸ್‌ ಗಿರಿ ಪಡೆಯಲು ನಾವು ಹವಣಿಸುತ್ತೇವೆ. ಆದರೆ ಇದನ್ನು ಆಡ್ಲರ್ ತಪ್ಪೆಂದು ಪ್ರತಿಪಾದಿಸುತ್ತಾನೆ. ಬೇರೆಯವರು ನಮ್ಮ ಬಗ್ಗೆ (ಮೇಲಿನ ಉದಾಹರಣೆಯಲ್ಲಿ ಬಾಸ್) ನಮ್ಮ ಮಾತು, ನಡವಳಿಕೆಗಳ ಬಗ್ಗೆ ನೀಡುವ ತೀರ್ಪು ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತದೆಯೇ ಎಂದು ಪ್ರಶ್ನಿಸುತ್ತಾನೆ.

ಬಾಸ್ ಆಗಲಿ ಮತ್ತೊಬ್ಬರಾಗಲಿ ಅವರಿಗೆ ನಾವು ಇಷ್ಟವಾಗದೇ ಹೋದರೆ, ಅದು ನಾವು ನಿಯಂತ್ರಿಸಲಾಗದ ವಿಷಯ. ನಾವು ಬಾಸ್‌ನನ್ನು ಎಷ್ಟೇ ಇಂಪ್ರೆಸ್ ಮಾಡಲು ಪ್ರಯತ್ನಪಟ್ಟರೂ ಆತನಿಗೆ ನಾವು ಇಷ್ಟವಾಗದೇ ಹೋಗಬಹುದು. ಇಂಥ ಹಂತದಲ್ಲಿ ಆಡ್ಲರ್ ಪ್ರತಿ ಪಾದಿಸುವುದು: ‘ನೀವಿಲ್ಲಿ ಬೇರೆ ಜನರ ನಿರೀಕ್ಷೆಗಳನ್ನು ಸಂತುಷ್ಟಪಡಿಸಲು ಬದುಕುತ್ತಿಲ್ಲ. ಬೇರೆ ಜನರು ನಿಮ್ಮನ್ನು
ಗಮನಿಸುತ್ತಿದ್ದಾರೆ ಎಂದು ಆತಂಕಪಡುವ ಅಗತ್ಯವಿಲ್ಲ. ಬೇರೆ ಜನರ ತೀರ್ಪುಗಳನ್ನು ಪರಿಗಣಿಸಬೇಡಿ. ಜನರು ನಮ್ಮನ್ನು ಗುರುತಿಸಬೇಕೆಂದು ಹವಣಿಸಬೇಡಿ. ನಿಮಗೆ ಸರಿ ಎನಿಸಿದ ಮತ್ತು ನೀವು ನಂಬುವ ಉತ್ತಮ ಮಾರ್ಗವನ್ನು ಆಯ್ಕೆಮಾಡಿಕೊಳ್ಳಿ. ಹಾಗೆಯೇ, ನೀವು ಬೇರೆ ವ್ಯಕ್ತಿಗಳ ಕೆಲಸಗಳಲ್ಲಿ ಮೂಗು ತೂರಿಸಲು ಹೋಗಬೇಡಿ‘.

Read E-Paper click here

ಮನೋಚಿಕಿತ್ಸಕ ದೃಷ್ಟಿಕೋನದಲ್ಲಿ ಈ ವಿಷಯವನ್ನು ನೋಡಿದಾಗ ಆಡ್ಲರನು ಪ್ರತಿಪಾದಿಸುವ ಈ ‘ಸಪರೇಷನ್ ಆಫ್ ಟಾಸ್ಕ್’
ನಾಟಕೀಯವಾಗಿ ವ್ಯಕ್ತಿಗತ ಸಂಬಂಧಗಳ ನಡುವಿನ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತದೆ ಎಂಬುದು ಒಪ್ಪತಕ್ಕಂಥ ವಿಚಾರ. ಇನ್ನು ಇದೇ ಆಡ್ಲರನ ಸಿದ್ಧಾಂತವನ್ನು ಮಕ್ಕಳ ಶಿಕ್ಷಣದ ಪರಿಕಲ್ಪನೆಯಲ್ಲಿ ನೋಡಿದಾಗ ಅಥವಾ ಅನ್ವಯಿಸಿದಾಗ, ಉದಾ ಹರಣೆಗೆ ಒಂದು ಮಗು ಸರಿಯಾಗಿ ಓದುತ್ತಿಲ್ಲ ಎಂದಾದರೆ ಆ ಮಗುವಿನ ಪೋಷಕರು ಮಗುವಿನ ಭವಿಷ್ಯದ ಬಗ್ಗೆ ಆತಂಕಕ್ಕೆ
ಒಳಗಾಗುತ್ತಾರೆ. ಇದೇ ಆತಂಕದಿಂದ ಮಗುವಿನ ಮೇಲೆ ಕೂಗಾಡಿ ಕಿರುಚಾಡಿ ಕೋಪ ಮಾಡಿಕೊಳ್ಳುತ್ತಾರೆ.

ಆದರಿಲ್ಲಿ ಉದ್ಭವಿಸುವ ಒಂದು ಪ್ರಶ್ನೆ: ಓದುವುದು, ಬರೆಯುವುದು ಮಗುವಿನ ಕೆಲಸ. ಆ ಕೆಲಸದಲ್ಲಿ ಯಾರೂ ಮಧ್ಯಪ್ರವೇಶಿಸ ಬಾರದು ಎಂದಾದರೆ ಮತ್ತೇಕೆ ನಾವು ಇದನ್ನು ಶಿಕ್ಷಣ, ಶಿಕ್ಷಣದ ವ್ಯವಸ್ಥೆ ಎನ್ನಬೇಕು? ಶಿಕ್ಷಕರಾಗಿ, ಶಿಕ್ಷಣ ತಜ್ಞರಾಗಿ ಹಾಗಿದ್ದರೆ ನಮ್ಮದೇ ವಿವೇಚನೆಯ ಹಾದಿಯಲ್ಲಿ ಮಕ್ಕಳು ನಡೆಯಬೇಕೇ? ನಡೆಯಬೇಕು ಎಂದೇಕೆ ನಾವೆಲ್ಲ ನಿರೀಕ್ಷಿಸುತ್ತೇವೆ? ಮಕ್ಕಳ ಕೆಲಸದಲ್ಲಿ ನಾವೇಕೆ ಅತಿಕ್ರಮಪ್ರವೇಶಿಸುತ್ತೇವೆ? ಈ ಪ್ರಶ್ನೆಗಳಿಗೆ ಆಡ್ಲರನ ಸಿದ್ಧಾಂತಗಳಲ್ಲಿ ಉತ್ತರಗಳನ್ನು ತಡಕಾಡಿದಾಗ ಅಲ್ಲಿ ನನಗೆ ಸಿಕ್ಕ ಉತ್ತರ ‘ರೀ-ಎಜುಕೇಶನ್’ (ಮರುಶಿಕ್ಷಣ)! ಮರು ಶಿಕ್ಷಣ ಹಾಗೆಂದರೇನು? ಎಂಬ ಪ್ರಶ್ನೆ ಸಹಜವಾಗೇ ತಲೆ
ದೋರುತ್ತದೆ.

ಹೌದು! ಶಿಕ್ಷಣ ಎಂಬ ಪರಿಕಲ್ಪನೆ ನಮ್ಮೆದುರಿಗೆ ಬಂದಾಗ ಜ್ಞಾನಾರ್ಜನೆ, ಅಂಕಗಳು, ಪರೀಕ್ಷೆಗಳು, ರ‍್ಯಾಂಕುಗಳು, ಪಠ್ಯಪುಸ್ತಕಗಳು ಹೀಗೆ ಸಾಲು ಸಾಲು ಸೀಮಿತ ವ್ಯಾಪ್ತಿ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಇವೆಲ್ಲವೂ ಮುಖ್ಯವಾದರೂ, ಇವೆಲ್ಲವನ್ನು ಮೀರಿದ ಇನ್ನೂ ಎತ್ತರದ ಚಿತ್ರಣದಲ್ಲಿ ಶಿಕ್ಷಣವನ್ನು ನಾವು ನೋಡಬೇಕಾಗುತ್ತದೆ. ನಾವೆಲ್ಲ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮುಖ್ಯ ಉದ್ದೇಶ ಅವರು ಸ್ವತಂತ್ರವಾಗಿ ಬದುಕಲಿ ಎಂಬುದು ಹೌದಲ್ಲವೇ? ಹಾಗಾಗಿ ಶಿಕ್ಷಣದ ಉದ್ದೇಶ ಮಕ್ಕಳಲ್ಲಿ ಸ್ವಯಂ- ನಂಬಿಕೆ ಯನ್ನು ಮೂಡಿಸುವುದಾಗಿರಬೇಕು. ಆಡ್ಲರನ ಮನೋವಿಜ್ಞಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕನ್ನು ಬದುಕುವುದು ತನ್ನ ಅಸಹಾಯಕ ಸ್ಥಿತಿಗಳಿಂದ ತಪ್ಪಿಸಿಕೊಂಡು ತನ್ನನ್ನು ತಾನು ಸುಧಾರಿಸಿಕೊಳ್ಳಲು, ಇದರ ಅರ್ಥವೇ ಅತ್ಯುತ್ತಮದ ಹುಡುಕಾಟವಲ್ಲದೇ ಮತ್ತಿನ್ನೇನು? ಶೈಶವಾವಸ್ಥೆಯಲ್ಲಿರುವ ಮಗು ನಿಧಾನವಾಗಿ ನಿಂತುಕೊಳ್ಳಲು ಪ್ರಯತ್ನಿಸುತ್ತದೆ, ನಂತರ ನಡೆ
ಯಲು ಪ್ರಯತ್ನಿಸುತ್ತದೆ, ಮುಂದುವರಿದು ಮಾತನ್ನು ಕಲಿಯಲು ತವಕಿಸುತ್ತದೆ.

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಎಲ್ಲಾ ಮನುಷ್ಯರು ತಮ್ಮ ಅಸಹಾಯಕ ಮತ್ತು ಬಿಡಿಸಿಕೊಳ್ಳಲಾಗದ ಸ್ಥಿತಿಗಳಿಂದ ಸ್ವಾತಂತ್ರ್ಯವನ್ನು ಜತೆಗೆ ಸ್ವಯಂ-ನಂಬಿಕೆಯನ್ನು ಹುಡುಕಾಡುತ್ತಾರೆ. ಇವೇ ಬದುಕಿನ ಮೂಲಭೂತ ಆಶಯಗಳು. ಹಾಗಿದ್ದರೆ ಶಿಕ್ಷಣ ಸ್ವಯಂ-ನಂಬಿಕೆಯನ್ನು ಉನ್ನತೀಕರಿಸಬೇಕೆ? ಅವಶ್ಯವಾಗಿ. ಮಕ್ಕಳು ಬೆಳೆದು ಸಾಮಾಜಿಕವಾಗಿ ಸದೃಢರಾಗುವವರೆಗೂ ಅವರು ಸಾಮಾಜಿಕ ಕೌಶಲಗಳನ್ನು, ನ್ಯಾಯಪರ ಸಂವೇದನೆಗಳನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ಶಿಕ್ಷಣವು ಅವರ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಮಧ್ಯಪ್ರವೇಶಿಸದೆ ಸ್ವಯಂ-ನಂಬಿಕೆಯನ್ನು ಮೂಡಿಸಿಕೊಳ್ಳಲು ನೆರವಾಗಬೇಕು.

ಹಾಗಿದ್ದರೆ ಶಿಕ್ಷಣವನ್ನು ನಾವು ಬೇರೆಯದೇ ರೀತಿಯಲ್ಲಿ ಅನುಕ್ರಮಗೊಳಿಸಬೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಆಡ್ಲರನ ಮನೋವೈಜ್ಞಾನಿಕ ಸಿದ್ಧಾಂತವೂ ಇದಕ್ಕೆ ಹೌದೆನ್ನುತ್ತದೆ. ಇದನ್ನು ಮತ್ತಷ್ಟು ಸವಿವರವಾಗಿ ಹೇಳುವುದಾದರೆ, ಟ್ರಾಫಿಕ್ ನಿಯಮಗಳೇ ಗೊತ್ತಿಲ್ಲದ ವ್ಯಕ್ತಿಯನ್ನು ಕೆಂಪು ದೀಪ, ಹಸಿರು ದೀಪ ಇವುಗಳ ಬಗೆಗೆ ಅರಿವೇ ಇಲ್ಲದ ವ್ಯಕ್ತಿಯನ್ನು ತಂದು ನಡುರಸ್ತೆಯಲ್ಲಿ ನಿಲ್ಲಿಸಿದರೆ ಹೇಗೆ? ರಸ್ತೆ ದಾಟಬೇಕಾದರೆ ಅಥವಾ ಗಾಡಿ ಓಡಿಸಬೇಕಾದರೆ ಅಗತ್ಯವಾಗಿ ನಾವೆಲ್ಲ ಆ ಕೆಲಸಕ್ಕೆ
ಬೇಕಾದ ಕೌಶಲಗಳನ್ನು ಕಲಿಯಲೇಬೇಕು. ಇದನ್ನೇ ಬದುಕಿಗೆ ಅನ್ವಯಿಸಿಕೊಂಡಾಗ ಗೊತ್ತಿಲ್ಲದೆ, ಗುರಿಯಿಲ್ಲದೆ ಬದುಕಿನ ದೋಣಿ ಏರಿದಾಗ ನಮ್ಮನ್ನು ಜತೆಗೆ ಸುತ್ತಲಿನವರನ್ನು ನಾವು ಅಪಾಯಕ್ಕೆ ಒಡ್ಡಿಬಿಡಬಹುದು.

ಹಾಗಾಗಿಯೇ ನಮ್ಮನ್ನು ಅರಿಯಲು, ಬೇರೆಯವರನ್ನು ಅರಿಯಲು, ವ್ಯಕ್ತಿಯ ನಿಜ ಸ್ವಭಾವವನ್ನು ಅರಿಯಲು, ಮನುಷ್ಯ ಬದುಕುವ ರೀತಿಯನ್ನು ಅರ್ಥೈಸಲು ಆಡ್ಲರನು ಗುರುತಿಸುವುದೇ Human Knowledge. ಏನಿದು Human Knowledge ಎಂದು ನಮ್ಮೆಲ್ಲರಿಗೂ ಆಶ್ಚರ್ಯ ವಾಗಬಹುದು! ಈ Human Knowledge ಎಂಬುದು ಪುಸ್ತಕಗಳಿಂದ ಪಡೆದ ಜ್ಞಾನವಲ್ಲ. ಪರಸ್ಪರ ವ್ಯಕ್ತಿಗಳ ಜತೆಯಲ್ಲಿ ಬೆರೆತಾಗ ದಕ್ಕಿದ ಜ್ಞಾನ. ಇದು ಮನುಷ್ಯನ ಶಿಕ್ಷಣಕ್ಕೆ ಬೇಕಾದ ಬಹುಮುಖ್ಯ ಅಂಶ. ಸ್ವಯಂ- ನಂಬಿಕೆ ಯನ್ನು ರೂಢಿಸಿಕೊಳ್ಳುತ್ತಾ ಸಮಾಜದೊಂ ದಿಗೆ, ಸಹಬಾಳ್ವೆಯಲ್ಲಿ ಬದುಕುತ್ತಾ ಸಾಗುವುದೇ Human Knowledge. ಸ್ವಯಂ-ನಂಬಿಕೆಯನ್ನು ಕಳೆದು ಕೊಂಡುಬಿಟ್ಟರೆ ಅಥವಾ ಅದನ್ನು ಪಡೆಯದೆ ಹೋದರೆ ವ್ಯಕ್ತಿಯು ತನ್ನ ಬದುಕನ್ನು ಭಾರವಾ
ಗಿಸಿಕೊಳ್ಳಬೇಕಾಗುತ್ತದೆ.

ಆದರೆ ವಾಸ್ತವಿಕವಾಗಿ ಆಡ್ಲರನ ಸಿದ್ಧಾಂತವನ್ನು ಬದುಕಿಗೆ ಅನ್ವಯಿಸಿಕೊಳ್ಳುವುದು ಸಾಧ್ಯವೇ? ಇವೆಲ್ಲ ಸಿದ್ಧಾಂತಗಳು ಕೇವಲ ಪುಸ್ತಕ, ಲೇಖನಗಳಿಗಷ್ಟೇ ಸೀಮಿತವಾಗುವ ಅಮೂರ್ತ ಕಲ್ಪನೆ ಯಾಗಷ್ಟೇ ಉಳಿದು ಬಿಡುವುದಿಲ್ಲವೇ? ಈ ತರಹದ ಯೋಚನೆ ನನ್ನಲ್ಲೂ ಮೂಡಿತು.

ಆಮೇಲೆ ನನಗನಿಸಿದ್ದು: ‘ಆಡ್ಲರನ ಸಿದ್ಧಾಂತ ವನ್ನು ಅಮೂರ್ತ ಕಲ್ಪನೆಯಾಗಿ ನೋಡದೆ ಮೂರ್ತ ರೂಪವಾಗಿ, ವಾಸ್ತವಿಕವಾಗಿ ನೋಡುವ ಪ್ರಯತ್ನ ಮಾಡಬೇಕು. ಆಗ, ಕೇವಲ ಐಡಿಯಾಲಜಿಗಳ ಆಧಾರದಲ್ಲಷ್ಟೇ ಅಲ್ಲ, ವಾಸ್ತವದ ನೆಲೆ ಗಟ್ಟಿನಲ್ಲೂ ಈ ಪರಿಕಲ್ಪನೆ ನಮ್ಮ ಅರಿವನ್ನು ಹೆಚ್ಚಿಸುತ್ತಾ ಸಾಗುತ್ತದೆ’ ಅಂತ.

Leave a Reply

Your email address will not be published. Required fields are marked *

error: Content is protected !!