Sunday, 8th September 2024

ವಿಶ್ವವಿದ್ಯಾಲಯ ಎನ್ನುವುದು ಪ್ರತಿಷ್ಠೆಯಾಗದಿರಲಿ

ಅಶ್ವತ್ಥಕಟ್ಟೆ

ranjith.hoskere@gmail.com

ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳ ಪ್ರಕಾರ ಯಾವುದೇ ಒಂದು ಹೊಸ ವಿಶ್ವವಿದ್ಯಾಲಯವನ್ನು ಆರಂಭಿಸಬೇಕಾದರೆ ಕನಿಷ್ಠ ೨೦ ಕೋಟಿ ರು. ಆರಂಭದಲ್ಲಿಯೇ ನೀಡಬೇಕು. ಈ ಅನುದಾನವನ್ನು ಬಳಸಿಕೊಂಡು, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.

ಯಾವುದೇ ವ್ಯಕ್ತಿಗೆ ಶಿಕ್ಷಣ ಅಗತ್ಯ. ಅದರಲ್ಲಿಯೂ ಉದ್ಯೋಗ ಅರಸುವ, ಸಂಶೋಧನೆಗೆ ಪೂರಕವಾಗಿರುವಂತೆ ಮಾಡುವು ದಕ್ಕೆ ವಿಶ್ವವಿದ್ಯಾಲಯ ಗಳು ಅತ್ಯಗತ್ಯ. ಹೆಚ್ಚೆಚ್ಚು ವಿಶ್ವವಿದ್ಯಾಲಯಗಳನ್ನು ಆರಂಭಿಸಿರುವುದರಿಂದ ಶಿಕ್ಷಣಕ್ಕೆ ಪೂರಕ ವಾಗುತ್ತದೆ. ಇದರಿಂದ ರಾಜ್ಯ, ದೇಶದಲ್ಲಿ ಉನ್ನತ ಶಿಕ್ಷಣ, ಸಂಶೋಧನೆಯತ್ತ ಹೊರಳುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎನ್ನುವುದು ಶಿಕ್ಷಣ ತಜ್ಞರ, ನೀತಿ ಆಯೋಗದ ನಿಲುವು.

ಇದೇ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಕರ್ನಾಟಕದಲ್ಲಿ ಏಳು ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕೆ ವಿಧೇಯಕ ವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡಿದೆ. ಆದರೆ, ಈ ವಿಧೇಯಕ ಮಂಡಿಸುವ ಸಮಯದಲ್ಲಿ ಉಭಯ ಸದನದಲ್ಲಿ ಪ್ರಕ್ಷಾತೀತವಾಗಿ ಕೆಲವು ಪ್ರಶ್ನೆಗಳನ್ನು ಶಾಸಕರು ಎತ್ತಿದ್ದಾರೆ. ಈ ಪ್ರಶ್ನೆಗಳಿಗೆ ಸರಕಾರ ‘ಭರವಸೆ’ಯ ಹಾಗೂ ‘ಮುತ್ಸದ್ದಿತನ’ ಉತ್ತರ ನೀಡಿದೆಯೇ ಹೊರತು, ಖಚಿತ ಉತ್ತರ ನೀಡುವುದರಲ್ಲಿ ಯಶಸ್ವಿಯಾಗಿಲ್ಲ.

ಪ್ರಮುಖವಾಗಿ ಕೇಳಿಬಂದ ಪ್ರಶ್ನೆಗಳೆಂದರೆ, ‘ಈಗಿರುವ ವಿಶ್ವವಿದ್ಯಾಲಯದ ಸಮಸ್ಯೆಗಳಿಗೆ ಪರಿಹಾರವೇನು?’, ‘ಹೊಸ
ವಿಶ್ವವಿದ್ಯಾಲಯ ಸ್ಥಾಪನೆಗೆ ಈಗ ನೀಡುತ್ತಿರುವ ಅನುದಾನ ಸಾಕೇನು?’,‘ ಈಗಿರುವ ವಿವಿಗಳಲ್ಲಿ ಆಗುತ್ತಿರುವ ಪೋಲನ್ನು
ನಿಯಂತ್ರಿಸುವುದಕ್ಕೆ ತಗೆದುಕೊಳ್ಳುವ ಕ್ರಮವೇನು?’ ಎನ್ನುವುದು ಬಹುತೇಕರ ಪ್ರಶ್ನೆಯಾಗಿದೆ. ಅಷ್ಟಕ್ಕೂ ಶಾಸಕರು ಪಕ್ಷಾತೀತವಾಗಿ ಈ ಪ್ರಶ್ನೆಗಳನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ.

ಏಕೆಂದರೆ, ರಾಜ್ಯದಲ್ಲಿರುವ ಕೆಲವೇ ಕೆಲವು ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿರುವ, ಬಹುತೇಕ ವಿವಿಗಳಲ್ಲಿ ಈ ಸಮಸ್ಯೆಗಳು ತಾಂಡವವಾಡುತ್ತಿದೆ. ಅದರಲ್ಲಿಯೂ ಅನುದಾನದ ಕೊರತೆ, ಆಡಳಿತಾತ್ಮಕ ವಿಷಯದಲ್ಲಿಯೇ ಬಹುತೇಕರು ಸಮಯ ಕಳೆದು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸದ ಸನ್ನಿವೇಶಗಳು ಕಣ್ಣ ಮುಂದಿವೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು
ಆಡಳಿತಾತ್ಮಕವಾಗಿ ವಿಶ್ವವಿದ್ಯಾಲಯಗಳಾಗಿದ್ದರೂ, ಸರಿಯಾದ ಅನುದಾನ ಸಿಗದೇ ಸೊರಗಿ ಹೋಗುತ್ತಿವೆ.

ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಸವಾಲುಗಳ ಬಗ್ಗೆ ಚರ್ಚಿಸುವ ಮೊದಲು, ಈಗಿರುವ ವಿಶ್ವವಿದ್ಯಾಲಯಗಳ ಬಗ್ಗೆ ಚರ್ಚಿಸುವುದು ಅತ್ಯಗತ್ಯ. ಕರ್ನಾಟಕದಲ್ಲಿ ಒಟ್ಟು 60ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿದ್ದು, ಅದರಲ್ಲಿ 33 ರಾಜ್ಯ ವಿಶ್ವವಿದ್ಯಾ ಲಯ, 24 ಖಾಸಗಿ ವಿಶ್ವವಿದ್ಯಾಲಯ, 11 ಸ್ವಾಯತ್ತ ಸ್ಥಾನಮಾನ ಪಡೆದಿರುವ ವಿಶ್ವವಿದ್ಯಾಲಯ ಹಾಗೂ ಒಂದು ಕೇಂದ್ರೀಯ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ತನ್ನದೇ ಆದ ಆಡಳಿಯ ಮಂಡಳಿ ಇರುತ್ತದೆ. ಆದರೆ ರಾಜ್ಯ ಸರಕಾರದ ಸ್ವಾಧೀನದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಅದರದ್ದೇ ಆದ ತೊಂದರೆಗಳಿವೆ. ನಾವು ಚರ್ಚಿಸಬೇಕಿರುವುದು ಈ 33 ವಿಶ್ವವಿದ್ಯಾಲಯಗಳ ವಿಷಯದ ಬಗ್ಗೆ.

ಹೌದು, ಈ 33 ವಿಶ್ವವಿದ್ಯಾಲಯಗಳ ಪೈಕಿ ಅನೇಕ ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆಯಿದೆ. ಅದರಲ್ಲಿಯೂ ಕಳೆದೊಂದು ದಶಕದಿಂದ ಆರಂಭವಾಗಿರುವ ವಿಶ್ವವಿದ್ಯಾಲಯಗಳಿಗೆ ಈ ಅನುದಾನ ಸಮಸ್ಯೆ ತುಸು ಹೆಚ್ಚಾಗಿಯೇ ಇದೆ. ಏಕೆಂದರೆ, ವಿವಿ ಆರಂಭದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಅನುದಾನ ನೀಡದೇ, ಯಾವುದೋ ಹಿತಾಸಕ್ತಿಯ ಒತ್ತಡಕ್ಕೆ ಸಿಲುಕಿ ಆರಂಭಿಸಲಾಗಿರುತ್ತದೆ. ಆದರೆ ವಿಶ್ವವಿದ್ಯಾಲಯಗಳ ಆರಂಭಕ್ಕೆ ಬೇಕಿರುವ ಅಗತ್ಯ ಅನುದಾನವನ್ನು ಮೀಸಲಿಡು ವುದಿಲ್ಲ.

ಇದರಿಂದಾಗಿ, ವರ್ಷದಿಂದ ವರ್ಷಕ್ಕೆ ಈ ವಿವಿಗಳ ಮೇಲಿನ ಹೊರೆ ಹೆಚ್ಚಾಗುತ್ತಲೇ ಹೋಗುತ್ತದೆಯೇ ಹೊರತು, ಕಡಿಮೆ ಯಾಗುವುದಿಲ್ಲ. ಹಾಗೇ ನೋಡಿದರೆ, ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರಿಗೆ, ಉಪನ್ಯಾಸಕರಿಗೆ, ಪಠ್ಯೇತರ ಚಟುವಟಿಕೆ  ಯಲ್ಲಿನ ಸಿಬ್ಬಂದಿ ವರ್ಗಕ್ಕೆ ಸರಕಾರದಿಂದ ವೇತನ ನೀಡಿದರೂ, ಕೆಲವೊಂದನ್ನು ವಿಶ್ವವಿದ್ಯಾಲಯಗಳೇ ನಿಭಾಯಿಸಬೇಕು. ಅದರಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಬಹುತೇಕ ವಿವಿಗಳೇ ಅನುದಾನ ಹೊಂದಿಸಿಕೊಳ್ಳಬೇಕು. ಅದನ್ನು ಸರಕಾರ ನೀಡುವ ವಿಶೇಷ ಅನುದಾನ, ಇಲ್ಲವೇ ಕಾಲೇಜುಗಳು ಕಟ್ಟುವ ನವೀಕರಣ ಶುಲ್ಕ, ವಿದ್ಯಾರ್ಥಿಗಳ ದಾಖಲೆ ಶುಲ್ಕ, ಪರೀಕ್ಷಾ ಶುಲ್ಕ ಹೊರತು ಇನ್ಯಾವ ಆದಾಯ ಮೂಲಗಳೂ ವಿಶ್ವವಿದ್ಯಾಲಯಗಳಿಗೆ ಇರುವುದಿಲ್ಲ.

ಮೈಸೂರು ರಾಜ ವಂಶಸ್ಥರು ಅಥವಾ ಆ ನಂತರ ಬಂದ ಸರಕಾರಗಳು ಆರಂಭಿಸಿರುವ ವಿಶ್ವವಿದ್ಯಾಲಯಗಳಿಗೆ ನೂರಾರು ಎಕರೆ ಜಾಗವನ್ನು ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ ಎರಡು ದಶಕದಿಂದ ಈಚೆಗೆ ಆರಂಭವಾಗಿರುವ ಯಾವ
ವಿವಿಗಳಿಗೂ ಈ ರೀತಿಯ ಸೌಲಭ್ಯ ಸಿಕ್ಕಿಲ್ಲ. ಇದರಿಂದಾಗಿ, ಆ ವಿವಿಗಳಿಗೆ ಅಗತ್ಯವಿರುವಷ್ಟು ಜಾಗವೂ ಇಲ್ಲದೇ, ಅನುದಾನವೂ ಇಲ್ಲದೇ ಸೊರಗಿ ಹೋಗುತ್ತಿದೆ.

ಇನ್ನು ಕೆಲವು ವಿಶ್ವವಿದ್ಯಾಲಯಗಳಿವೆ. ಸಾಂಪ್ರದಾಯಿಕವಲ್ಲದೇ, ಕೇವಲ ಒಂದು ವಿಷಯದ ಮೇಲೆ ಅಧ್ಯಯನಕ್ಕಾಗಿಯೇ ಮೀಸಲಿರುವ ವಿಶ್ವವಿದ್ಯಾಲಯಗಳ ಸಮಸ್ಯೆಯೇ ಬೇರೆಯಾಗಿದೆ. ಪ್ರಮುಖವಾಗಿ, ಉದಾಹರಣೆಗೆ ಸಂಗೀತ ವಿಶ್ವವಿದ್ಯಾಲಯ ನೋಡುವುದಾದರೆ ಆ ವಿವಿಗೆ ಯಾವುದೇ ಕಾಲೇಜುಗಳು ಹೊಂದಿಕೊಂಡಿಲ್ಲ. ಜತೆಗೆ ಇಡೀ ವಿಶ್ವವಿದ್ಯಾಲಯಕ್ಕೆ ಇರುವುದೇ 30 ವಿದ್ಯಾರ್ಥಿಗಳು! ಈ 30 ವಿದ್ಯಾರ್ಥಿಗಳಿಗಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ. ಅಂದರೆ, ಸರಕಾರದ ಮೇಲೆ ಭಾರಿ ‘ಹಣಭಾರ’ವನ್ನೇ ಹಾಕುತ್ತಿದೆ.

ಇದೇ ರೀತಿ ಜಾನಪದ ವಿಶ್ವವಿದ್ಯಾಲಯ, ಶಿಲ್ಪಕಲಾ ವಿಶ್ವವಿದ್ಯಾಲಯ, ಸಂಸ್ಕೃತ ವಿಶ್ವವಿದ್ಯಾಲಯಗಳ ಪರಿಸ್ಥಿತಿಯೂ ಈ
ವಿವಿಗಿಂತ ಭಿನ್ನವಾಗಿಲ್ಲ. ಈ ಹಿಂದೆ ಈ ಎಲ್ಲವೂ ಹಂಪಿ ಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿಯೇ ಇದ್ದವು. ಆ ವಿವಿಯಲ್ಲಿ ಈಗಲೂ ಈ ವಿಷಯಗಳ ಅಧ್ಯಯನಕ್ಕಾಗಿಯೇ ದೊಡ್ಡ ದೊಡ್ಡ ಕ್ಯಾಂಪಸ್‌ಗಳಿವೆ. ಆದರೆ ಪ್ರತ್ಯೇಕ ವಿವಿಗಳಾದ ಮೇಲೆ, ಅತ್ತ ಆ ವಿವಿಯ ಕೇಂದ್ರಕ್ಕೂ ಜನರಿಲ್ಲ. ಇತ್ತ ಹೊಸದಾಗಿಯಾಗಿರುವ ವಿಶ್ವವಿದ್ಯಾಲಯಗಳಲ್ಲಿಯೂ ಜನರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಈಗಿರುವ ವಿಶ್ವವಿದ್ಯಾಲಯಗಳಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ತೀರಾ ಸಂಕಷ್ಟದಲ್ಲಿರುವ ಧಾರವಾಡ ವಿಶ್ವವಿದ್ಯಾ ಲಯದ ಬಗ್ಗೆ ಸದನದಲ್ಲಿ ಪ್ರಸ್ತಾಪವಾದ ಸಮಯದಲ್ಲಿ ಸ್ವತಃ ಬಸವರಾಜ ಬೊಮ್ಮಾಯಿ ಅವರು, ‘ನಿಯಮ ಬಾಹಿರವಾಗಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ’ ಎನ್ನುವ ಮಾತನ್ನು ಹೇಳಿದರು. ಕೆಲವು ವಿಶ್ವವಿದ್ಯಾಲಯಗಳಲ್ಲಿ, ಸರಿಯಾದ ಸಿಬ್ಬಂದಿಗಳಿಲ್ಲ , ಉಪನ್ಯಾಸಕರಿಗೆ ಸೂಕ್ತ ಶಿಕ್ಷಣವಿಲ್ಲದಿದ್ದರೂ ‘ಪ್ರಭಾವ’ ಬಳಸಿಕೊಂಡು ಆಯಕಟ್ಟಿನ ಸ್ಥಳದಲ್ಲಿ ತಳ ಊರಿದ್ದಾರೆ.

ಅನೇಕ ಉಪನ್ಯಾಸಕರು, ಪಾಠವನ್ನು ಬಿಟ್ಟು ಬೇರೆಲ್ಲ ಮಾಡುತ್ತಿರುವ ಬಗ್ಗೆ ಆರೋಪಗಳು ಇದ್ದೇಯಿವೆ. ಈ ಎಲ್ಲವನ್ನು ಸರಿಪಡಿಸುವ ಬದಲು, ಸ ವಿಶ್ವವಿದ್ಯಾಲಯಗಳನ್ನು ಆರಂಭಿಸಿದರೆ ಯಾವ ಕಾರ್ಯವೂ ಸಾಧಿಸಿದಂತಾಗುವುದಿಲ್ಲ ಎನ್ನುವುದು ಸ್ಪಷ್ಟ. ಹಾಗೇ ನೋಡಿದರೆ, ಶಿಕ್ಷಣ ತಜ್ಞರು, ವಿಶ್ರಾಂತ ಕುಲಪತಿಗಳ ಪ್ರಕಾರ ಯಾವುದೇ ಒಂದು ಹೊಸ ವಿಶ್ವವಿದ್ಯಾಲಯ ವನ್ನು ಆರಂಭಿಸಬೇಕಾದರೆ ಕನಿಷ್ಠ 20 ಕೋಟಿ ರು. ಆರಂಭದಲ್ಲಿಯೇ ನೀಡಬೇಕು. ಈ ಅನುದಾನವನ್ನು ಬಳಸಿಕೊಂಡು, ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಆದರೆ ಬಹುತೇಕ ಸರಕಾರಗಳು, ವಿವಿ ಘೋಷಿಸಿ ಎರಡು ಅಥವಾ ಮೂರು ಕೋಟಿ ರು. ಗಳನ್ನು ಮಾತ್ರ ನೀಡಲಾಗುತ್ತದೆ.

ಇದರಿಂದ ಇತ್ತ ವಿವಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೇ, ಬಿಡಲು ಆಗದಿರುವ ಪರಿಸ್ಥಿತಿಯನ್ನು ಎದುರಿಸುವಂತಾ ಗುತ್ತದೆ. ಈ ಎಲ್ಲ ಸಮಸ್ಯೆಗಳ ನಡುವೆ ರಾಜ್ಯ ಸರಕಾರ ಕಳೆದ ವಾರ ನಡೆದ ಅಧಿವೇಶನದಲ್ಲಿ ಹೊಸದಾಗಿ ಏಳು
ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ವಿಧೇಯಕ ಮಂಡಿಸಿ ಅನುಮೋದಿಸಿಕೊಂಡಿದೆ. ಈ ಎಲ್ಲ ವಿವಿಗಳಿಗೆ ತಲಾ ಎರಡು
ಕೋಟಿ ರು. ಅನುದಾನವನ್ನು ನೀಡುವುದಾಗಿ ಘೋಷಿಸಿದೆ. ಇನ್ನು ಮೂಲಸೌಕರ್ಯಕ್ಕೆ ಅನುದಾನ ಕೊರತೆಯಾಗುತ್ತದೆ
ಎನ್ನುವ ಆರೋಪಕ್ಕೆ ಸರಕಾರದ ಉತ್ತರ, ’ಈಗಿರುವ ಸಂಶೋಧನಾ ಕೇಂದ್ರಗಳನ್ನೇ ವಿವಿಯಾಗಿ ಮಾರ್ಪಡಿಸುವು
ದಾಗಿ’ ಹೇಳಿದೆ.

ಆದರೆ ರಾಜ್ಯ ಸರಕಾರ ಗುರುತಿಸಿರುವ ಕೆಲವು ಸಂಶೋಧನಾ ಘಟಕಗಳಲ್ಲಿ, ಒಂದು ಶಾಲೆಯನ್ನು ಮಾಡಬಹುದೇ ಹೊರತು, ವಿಶ್ವವಿದ್ಯಾಲಯವನ್ನು ಮಾಡುವಷ್ಟು ಜಾಗವಿಲ್ಲ ಎನ್ನುವ ಮಾತುಗಳಿವೆ. ಹೀಗಿರುವಾಗ ರಾಜ್ಯ ಸರಕಾರ ಕೊಟ್ಟಿರುವ ಎರಡು ಕೋಟಿ ಅನುದಾನದಲ್ಲಿ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ವಿವಿಗಳನ್ನು ಸ್ಥಾಪಿಸಲೇಬೇಕು ಎನ್ನುವ ಉದ್ದೇಶ ಸರಕಾರದ ಮುಂದಿದ್ದರೆ, ಈಗಿರುವ ವಿವಿಗಳಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಮೊದಲು ಮಾಡಬೇಕು. ಬಳಿಕ ಹೊಸ ವಿವಿಗಳಿಗೆ ಅಗತ್ಯವಿರುವಷ್ಟು ಅನುದಾನವನ್ನು ಒಂದೇ ಬಾರಿಗೆ ನೀಡದೇ ಹೋದರೆ ವಿವಿಗಳ ಸಮಸ್ಯೆಗೆ
ಕೊನೆಯಿಲ್ಲವಾಗುವುದರಲ್ಲಿ ಅನುಮಾನವೇ ಇಲ್ಲ.

ಆದ್ದರಿಂದ ರಾಜ್ಯ ಸರಕಾರ ಹೊಸದಾಗಿ ಚಾಮರಾಜ ನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಹಾಗೂ ಮಂಡ್ಯದಲ್ಲಿ ಕೇಂದ್ರ ಸರಕಾರದ ನಿರ್ಣಯದಂತೆ ಹಾಗೂ ಬಜೆಟ್ ಘೋಷಣೆಯಂತೆ ವಿಶ್ವವಿದ್ಯಾಲಯ ಸ್ಥಾಪಸಲು ಮುಂದಾಗಿದೆ. ಆದರೆ ಈಗಾಗಲೇ ಆರಂಭವಾಗಿರುವ, ಆರಂಭದ ಹಂತದಲ್ಲಿರುವ ವಿಶ್ವವಿದ್ಯಾಲಯಗಳನ್ನು ಸರಿಪಡಿಸಿ, ಅಲ್ಲಿರುವ ತೊಂದರೆಗಳಿಗೆ ಉತ್ತರಿಸುವ ಕೆಲಸವಾಗಬೇಕಿದೆ.

ಇದಾಗದೇ, ಸರಕಾರಗಳು ಬಂದಾಗಲೆಲ್ಲ, ತಮಗೆ ಬೇಕಾದ ಜಾಗದಲ್ಲಿ, ಹಿತಾಸಕ್ತಿಗೆ ತಕ್ಕಂತೆ ವಿಶ್ವವಿದ್ಯಾಯಗಳನ್ನು ಆರಂಭಿಸಿದರೆ ಮುಂದೊಂದು ಇದೇ ವಿಶ್ವವಿದ್ಯಾಲಯಗಳು ಸರಕಾರಕ್ಕೆ ‘ಬಿಳಿಯಾನೆ’ ಯಾಗುವುದರಲ್ಲಿ ಅನುಮಾನವೇ ಇಲ್ಲ.

error: Content is protected !!