Saturday, 27th July 2024

ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರೆಯುವುದೇ ?

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಸಾಮಾನ್ಯ ಸಂಗತಿ. ಅಲ್ಲಿ ಚುನಾವಣೋತ್ತರ ಹಿಂಸಾಚಾರ, ರಾಜಕೀಯ ಕೊಲೆ ನಡೆಯದಿದ್ದರೆ
ಆಶ್ಚರ್ಯವಾಗುತ್ತದೆ. ಮೊದಲು ಅದು ಎಡರಂಗ ಸರಕಾರದ ನೇತೃತ್ವದಲ್ಲಿ ನಡೆಯುತ್ತಿತ್ತು. ಈಗ ಅದಕ್ಕೂ ಭೀಷಣವಾಗಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿದೆ.

ಪಶ್ಚಿಮ ಬಂಗಾಳದ ೨೪ ಉತ್ತರ ಪರಗಣಾಸ್ ಜಿಲ್ಲೆಯ ಬಸಿರ್ ಹಾತ್‌ನಲ್ಲಿ ‘ಸಂದೇಶ್ ಖಾಲಿ’ ಎಂಬ ಗ್ರಾಮವಿದೆ. ಇದರ ಜನಸಂಖ್ಯೆ ೧.೬೨ ಲಕ್ಷ. ಬಹು ತೇಕರು ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು. ಬಾಂಗ್ಲಾದೇಶ ಗಡಿಯ ಸಮೀಪವಿರುವ ಸುಂದರಬನ ಪ್ರದೇಶದಲ್ಲಿ ಈ
ಗ್ರಾಮವಿದೆ. ಈ ಪ್ರದೇಶ ಅಕ್ರಮ ವಲಸಿಗರ ಬೀಡು. ಮೊದಲು ಸಿಪಿಎಂ ನಾಯಕರು, ಈಗ ತೃಣಮೂಲ ಕಾಂಗ್ರೆಸ್ ನಾಯಕರು ಬಾಂಗ್ಲಾ ಅಕ್ರಮ ವಲಸಿ ಗರ ಪೋಷಕರಾಗಿದ್ದಾರೆ.

ಸಂದೇಶ್ ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಸದಸ್ಯ ಶೇಖ್ ಷಹಜಹಾನ್ ಮತ್ತು ಅವನ ಗೂಂಡಾಪಡೆಯು ಗ್ರಾಮದ ಮನೆ ಮನೆಗೂ ತೆರಳಿ ಸುಂದರವಾಗಿರುವ ಮಹಿಳೆ/ಹುಡುಗಿಯರನ್ನು ತೃಣಮೂಲ ಕಚೇರಿಗೆ ಎಳೆದೊಯ್ದು, ೩-೪ ದಿನಗಳ ಕಾಲ ಅವರ ಮೇಲೆ ಸತತವಾಗಿ
ಅತ್ಯಾಚಾರ ನಡೆಸಿರುವ ಭೀಕರ ಸಂಗತಿಯನ್ನು ಗ್ರಾಮದ ಮಹಿಳೆಯರು ಹೊರಹಾಕಿದ್ದಾರೆ. ಈ ದುಷ್ಕೃತ್ಯವು ಕಳೆದ ದಶಕದಿಂದ ಅವ್ಯಾಹತವಾಗಿ ನಡೆಯುತ್ತಿದೆಯೆಂದು ಸಂತ್ರಸ್ತ ಮಹಿಳೆಯರು ಹೇಳಿರುವುದು ಆಘಾತಕಾರಿ ಸಂಗತಿ.

ಶೇಖ್ ಷಹಜಹಾನ್ ಮತ್ತು ಅವನ ಸಂಗಡಿಗರ ಕಾಮತೃಷೆಗೆ ಬಲಿಯಾಗುತ್ತಿರುವುದು ಹಿಂದೂ ಮಹಿಳೆಯರು ಮಾತ್ರ. ಇವರಲ್ಲಿ ಬಹುತೇಕರು ದಲಿತರು ಮತ್ತು ಆದಿವಾಸಿಗಳು. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದಲ್ಲದೆ ಆದಿವಾಸಿಗಳಿಗೆ ಸೇರಿದ ಜಮೀನುಗಳನ್ನು ಬೆದರಿಸಿ, ಹಲ್ಲೆ ಮಾಡಿ ವಶಪಡಿಸಿ ಕೊಳ್ಳುವುದು ತಡೆಯಿಲ್ಲದೆ ನಡೆಯುತ್ತಿದೆ. ಹೀಗಾಗಿ ಅನೇಕ ಪುರುಷರು ಮನೆ ತೊರೆದು ಹೊರ ಊರುಗಳಲ್ಲಿ ಕೆಲಸಕ್ಕೆ ಸೇರಿದ್ದಾರೆ. ಅಲ್ಲಿಯೇ ಇರುವವ ರದ್ದು, ಶೇಖ್ ಷಹಜಹಾನ್‌ನ ಗೂಂಡಾಗಿರಿಗೆ ಬೆದರಿ ಮನೆಯವರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ನಡೆದರೂ ತೆಪ್ಪಗಿರಬೇಕಾದ ಪರಿಸ್ಥಿತಿಯಾಗಿದೆ. ನಾಚಿಕೆಗೆಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತೃಣಮೂಲ ಕಾಂಗ್ರೆಸ್‌ನ ಚೇಲಾಗಳ ಹಾಗೆ ವರ್ತಿಸಿ, ನೊಂದವರಿಗೆ ನ್ಯಾಯ ದೊರಕಿಸುವ ಬದಲು ಗೂಂಡಾಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಅಲ್ಲಿನ ಮಹಿಳೆಯರು ಕಣ್ಣೀರಿಡುತ್ತಾ ಹೇಳುತ್ತಾರೆ.

ಇದರ ಬಗ್ಗೆ ದಶಕಗಳಿಂದ ಸುಮ್ಮನಿದ್ದು ಈಗೇಕೆ ದೂರು ನೀಡಿದರು ಎಂಬ ಪ್ರಶ್ನೆ ಏಳುವುದು ಸಹಜ. ಕೇಂದ್ರದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಶ್ಚಿಮ ಬಂಗಾಳದ ರೇಷನ್ ಕಾರ್ಡ್ ಹಗರಣದ ತನಿಖೆಗಾಗಿ ಜನವರಿ ೫ರಂದು ಸಂದೇಶ್ ಖಾಲಿಯಲ್ಲಿರುವ ಶೇಖ್ ಷಹಜಹಾನ್ ಮನೆಯ ಮೇಲೆ ದಾಳಿ ಮಾಡುತ್ತಾರೆ. ಆಗ ಅವನ ಗೂಂಡಾ ಬೆಂಬಲಿಗರು ಆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುತ್ತಾರೆ. ಶೇಖ್ ಷಹಜಹಾನ್ ಬಂಧನದ ಭೀತಿಯಿಂದ ಊರು ಬಿಟ್ಟು ಪರಾರಿಯಾಗಿದ್ದಾನೆ.

ಈತನಕ ಅವನನ್ನು ಪೊಲೀಸರು ಬಂಧಿಸಿಲ್ಲ. ಅವನು ಓಡಿಹೋದ ತರುವಾಯ ಅನೇಕ ಮಹಿಳೆಯರು ಧೈರ್ಯವಾಗಿ ಅವನ ಅಮಾನುಷ ಕೃತ್ಯವನ್ನು ಬಯಲು ಮಾಡುತ್ತಿದ್ದಾರೆ. ಫೆಬ್ರವರಿ ೯ರಂದು ಸಂದೇಶ್ ಖಾಲಿ ಮಹಿಳೆಯರು ಶೇಖ್ ಷಹಜಹಾನ್ ಮತ್ತು ಶಿಬು ಪ್ರಸಾದ್ ಹಜ್ರಾನನ್ನು ಬಂಧಿಸಲು
ಒತ್ತಾಯಿಸಿ ಪ್ರತಿಭಟನೆ ಮಾಡಿದರು. ಇಲ್ಲಿನ ಮಹಿಳೆಯರ ಆಕ್ರೋಶ ಈಗ ಸ್ಫೋಟಗೊಂಡು ಬೀದಿಗೆ ಇಳಿದಿದ್ದಾರೆ. ರೊಚ್ಚಿ ಗೆದ್ದಿರುವ ಮಹಿಳೆಯರು ಹಜ್ರಾನ ಹಲವು ಕೋಳಿ-ರಂಗೆ ಬೆಂಕಿ ಹಚ್ಚಿದ ಪರಿಣಾಮ ಪರಿಸ್ಥಿತಿಯು ಗಂಭೀರ ಸ್ವರೂಪ ತಳೆಯಿತು. ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯ
ಹೆಸರಲ್ಲಿ ಸೆಕ್ಷನ್ ೧೪೪ ವಿಧಿಸಿದೆ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರನ್ನು ಹೊರತುಪಡಿಸಿ ಯಾರಿಗೂ ಗ್ರಾಮ ದೊಳಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ.

ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷರು ಭೇಟಿ ನೀಡಿ ಅಲ್ಲಿನ ಮಹಿಳೆಯರ ದಯನೀಯ ಪರಿಸ್ಥಿತಿಯ ಬಗ್ಗೆ ಸರಕಾರಕ್ಕೆ ಮತ್ತು ರಾಷ್ಟ್ರಪತಿಗಳಿಗೆ ವರದಿ ನೀಡಿದ್ದಾರೆ. ಅವರಿಗೆ ಜಿಲ್ಲಾಡಳಿತ ಸಹಕರಿಸದಿದ್ದರೂ ಪ್ರತಿಕೂಲ ವಾತಾವರಣವನ್ನು ಲೆಕ್ಕಿಸದೆ
ಅಲ್ಲಿನ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸಂದೇಶ್ ಖಾಲಿಯ ಅಮಾನುಷ ಕೃತ್ಯಗಳ ಬಗ್ಗೆ ದೂರು ನೀಡಿದ ಬಿಜೆಪಿ ನಾಯಕ ನನ್ನು, ಈ ಕ್ರೂರ ವರ್ತನೆಯ ವಿರುದ್ಧ ಪ್ರತಿಭಟಿಸಿದವರನ್ನು ಪೊಲೀಸರು ‘ಹಿಂಸೆಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂಬ ಸುಳ್ಳು ಆರೋಪದ ಮೇಲೆ ಬಂಧಿಸಿದ್ದಾರೆ. ವರದಿ ಮಾಡುತ್ತಿದ್ದ ರಿಪಬ್ಲಿಕ್ ಟಿವಿ ವರದಿಗಾರನನ್ನೂ ವಶಕ್ಕೆ ಪಡೆದಿದ್ದಾರೆ.

ಅತ್ಯಂತ ಹೇಯ ಸಂಗತಿಯೆಂದರೆ ಮಮತಾ ಬ್ಯಾನರ್ಜಿ ಯವರು ಓರ್ವ ಹೆಣ್ಣಾಗಿದ್ದುಕೊಂಡು, ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ, ದಬ್ಬಾಳಿಕೆ, ಅಕ್ರಮ ಭೂ ಕಬಳಿಕೆಯ ಬಗ್ಗೆ ದೂರು ಸಲ್ಲಿಸಿದವರ ಮೇಲೆಯೇ ತಮ್ಮ ಅಧಿಕಾರದ ಅಟ್ಟಹಾಸವನ್ನು ತೋರುತ್ತಿದ್ದಾರೆ. ‘ಶೇಖ್ ಷಹಜಹಾನ್ ನಿರಪರಾಧಿ. ಅವನ ಮೇಲಿನ ಆರೋಪ ರಾಜಕೀಯ ಪ್ರೇರಿತ’ ಎಂದು ಸದನದೊಳಗೆ ಹೇಳಿಕೆ ನೀಡಿ ಈ ಕುಖ್ಯಾತ ಅಪರಾಧಿಗೆ ರಕ್ಷಣೆ ನೀಡಿದ್ದಾರೆ. ಅವರು ಈ ಅಮಾನುಷ ಕೃತ್ಯದ ವಿರುದ್ಧ ಕಿಂಚಿತ್ತೂ ಸಂವೇದನಾಶೀಲತೆ ತೋರದೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ.

ಆರೋಪ ಬಂದ ಕೂಡಲೇ ಉನ್ನತ ಮಟ್ಟದ ತನಿಖೆಯ ನೆಪದಲ್ಲಿ ತಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಿ ಅಲ್ಲಿ ಪರಿಸ್ಥಿತಿಯು ನಿಯಂತ್ರಣದಲ್ಲಿದೆ ಮತ್ತು ಯಾರ ಮೇಲೆಯೂ ಅತ್ಯಾಚಾರ ವಾಗಲೀ, ದೌರ್ಜನ್ಯವಾಗಲೀ ನಡೆದಿಲ್ಲ; ಇದೊಂದು ಬಿಜೆಪಿಯ ಪಿತೂರಿ ಎಂದು ತೀರ್ಪು ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ ಬೋಸ್‌ರವರು ‘ನಾನು ಕಂಡದ್ದು ಆಘಾತಕಾರಿ ಸಂಗತಿಯಾಗಿತ್ತು. ಯಾವುದನ್ನು ನೋಡಬಾರದೋ ಅದನ್ನು ನೋಡಿದೆ, ಕೇಳಬಾರದ ಅನೇಕ ವಿಷಯಗಳನ್ನು ಕೇಳಿದೆ. ಕಣ್ಣೀರಿದ್ದರೆ ಅದನ್ನು ಸುರಿಸುವ ಸಮಯವಿದು. ಅಲ್ಲಿನ ನನ್ನ ತಾಯಂದಿರು ಮತ್ತು ಸಹೋದರಿಯರ ಮಾತುಗಳನ್ನು ಕೇಳಿದಾಗ ಮಾನವನ ಬದುಕು ಎಷ್ಟು ಭೀಕರವಾಗಿದೆ ಎನ್ನಿಸಿತು.

ಒಂದು ಸಂತೋಷದ ಮನೆಯನ್ನು ಕಲ್ಪಿಸಿಕೊಳ್ಳಿ, ಗಂಡ ಮತ್ತು ಹೆಂಡತಿ, ಹೆಣ್ಣು ಮಕ್ಕಳು ಸೇರಿದಂತೆ ಬೆಳೆದ ಮಕ್ಕಳು. ಕೆಲವು ಗೂಂಡಾಗಳು
ಮನೆಯೊಳಗಿಂದ ಒಂದು ಹೆಣ್ಣು ಮಗುವನ್ನು ಹಿಡಿದುಕೊಂಡು ಗಂಡನ ಎದುರೇ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಗಂಡನಿಗೆ ಥಳಿಸುತ್ತಾರೆ. ಇದು ಕಾಲ್ಪನಿಕವಲ್ಲ. ಇದನ್ನು ಯಾರು ಮಾಡಿದ್ದಾರೆಂದು ಅವರಿಗೆ ತಿಳಿದಿದೆ’ ಎಂದು ಸಂಕಟದಿಂದ ಸಂದೇಶ್ ಖಾಲಿಯ ಮಹಿಳೆಯರ ದಯನೀಯ ಪರಿಸ್ಥಿತಿ
ಯನ್ನು ವಿವರಿಸಿದ್ದಾರೆ.

ಘಟನೆಯು ಬಯಲಾಗಿ ೪೦ಕ್ಕೂ ಹೆಚ್ಚು ದಿನಗಳಾದ ಮೇಲೆ ಶಿಬು ಪ್ರಸಾದ್ ಹಜ್ರಾನ ಬಂಧನವಾಗಿದೆ; ಆದರೆ ಮುಖ್ಯ ಆರೋಪಿ ಶೇಖ್ ಷಹಜಹಾನ್‌ನ ಬಂಧನವಾಗಿಲ್ಲ. ಆದರೆ ಮಮತಾರವರಿಗೆ ಅವನನ್ನು ಬಂಧಿಸುವುದಕ್ಕಿಂತ ನಡೆದಿರುವ ಅಪರಾಧಕ್ಕೆ ಪರದೆ ಎಳೆದು, ‘ಇಲ್ಲಿನ ಪರಿಸ್ಥಿತಿ ಬಿಗಡಾಯಿಸಲು
ಆರೆಸ್ಸೆಸ್ ಕಾರಣ’ ಎಂದು ಆಧಾರರಹಿತವಾಗಿ ದೂಷಿಸುವುದು ಮುಖ್ಯವಾಗಿದೆ. ಸಂದೇಶ್ ಖಾಲಿಯಲ್ಲಿ ನಡೆದ ಘೋರ ಘಟನೆಯನ್ನು ನಾಗರಿಕ ಸಮಾಜವು ಪಕ್ಷಾತೀತವಾಗಿ ಒಕ್ಕೊರಲಿನಿಂದ ಖಂಡಿಸಬೇಕಿತ್ತು. ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ತುತ್ತಾಗಿರುವ ಅಸಹಾಯಕ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿತ್ತು.

ದುರ್ದೈವವೆಂದರೆ, ಈ ಹೇಯ ಘಟನೆಯನ್ನು ಕೂಡಾ ಪಕ್ಷ ರಾಜಕೀಯದ ಭಾಗವಾಗಿ ನೋಡಿ, ಮಹಿಳಾ ಪರ ಧ್ವನಿಯೆತ್ತುವವರ ಗಂಟಲಲ್ಲಿ ಕಡುಬು ಸಿಲುಕಿಕೊಂಡಿದೆ. ‘ಇಂಡಿಯ’ ಮೈತ್ರಿ ಕೂಟದ ಸದಸ್ಯರು ಈ ವಿಷಯದ ಬಗ್ಗೆ ಚಕಾರವೆತ್ತಿಲ್ಲ. ಮೋದಿ ವಿರೋಧಿಗಳು ದಿವ್ಯಮೌನಕ್ಕೆ ಶರಣಾಗಿದ್ದಾರೆ.
ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯ ವರನ್ನು ಕರೆಯದೆ ಆದಿವಾಸಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಮೊಸಳೆ ಕಣ್ಣೀರು ಸುರಿಸಿದವರು, ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಅವರನ್ನು ಬೆದರಿಸಿ ಅವರ ಜಮೀನು ಕಸಿದುಕೊಂಡು ನಿರಂತರ ದೌರ್ಜನ್ಯ
ಮಾಡುತ್ತಿರುವವರ ಬಗ್ಗೆ ಸೊಲ್ಲೆತ್ತುತ್ತಿಲ್ಲ.

ಮಣಿಪುರದ ಜನಾಂಗೀಯ ಗಲಭೆಯಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ವಿಡಿಯೋ ಹೊರಬಂದಾಗ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದವರು, ಸಂದೇಶ್ ಖಾಲಿಯ ಟಿಎಂಸಿ ಕಚೇರಿಯಲ್ಲಿ ನಡೆದ ಅತ್ಯಾಚಾರವನ್ನು ಖಂಡಿಸದೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಈ ಘೋರ ಕೃತ್ಯದ ವಿರುದ್ಧ ದಲಿತ ಸಂಘಟನೆಗಳ ನಾಯಕರು ಪ್ರತಿಭಟನೆ ಮಾಡುವುದು ಒತ್ತಟ್ಟಿಗಿರಲಿ, ಅದನ್ನು ಖಂಡಿಸುವ ತ್ರಾಸನ್ನೂ ತೆಗೆದು ಕೊಂಡಿಲ್ಲ. ಪಾಪ, ಅದೇನು ಅನಿವಾರ್ಯತೆಯೋ ಗೊತ್ತಿಲ್ಲ!

೨೦೧೨ರ ವಿಧಾನಸಭೆಯ ಚುನಾವಣೆಯ ನಂತರವೂ ಪಶ್ಚಿಮ ಬಂಗಾಳದಲ್ಲಿ ನಡೆದ ವ್ಯಾಪಕ ಹಿಂಸಾಚಾರ, ಮಹಿಳೆಯರ ಮಾನಭಂಗ ಪ್ರಕರಣಗಳು ಬಯಲಾಗಿ ಕೋರ್ಟ್ ಆದೇಶದ ಮೇರೆಗೆ ಸಿಬಿಐ ತನಿಖೆ ನಡೆಯುತ್ತಿದೆ. ಮಮತಾರ ವರ ಆಡಳಿತದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ಸಾಮಾನ್ಯ
ಸಂಗತಿಯಾಗಿದೆ. ಸಂದೇಶ್ ಖಾಲಿಯ ಪ್ರಕರಣ ನ್ಯಾಯಾಲಯದ ಬಾಗಿಲು ತಟ್ಟಿದ ಮೇಲೆ ರಾಜ್ಯ ಸರಕಾರ, ‘ಈ ಘಟನೆಗೆ ಸಂಬಂಧಿಸಿ ೧೭ ಜನರನ್ನು ಬಂಧಿಸಲಾಗಿದೆ’ ಎಂದು ಸದನದಲ್ಲಿ ಹೇಳುತ್ತದೆ. ಆದರೆ ಇದರ ಪ್ರಮುಖ ಆಪಾದಿತನನ್ನು ಬಂಧಿಸುವ ಬಗ್ಗೆ ಚಕಾರವೆತ್ತುವುದಿಲ್ಲ. ಈ ಕ್ಷೇತ್ರದ
ಲೋಕಸಭಾ ಸದಸ್ಯೆ ನುಸ್ರತ್ ಜಹಾನ್ ಸಂತ್ರಸ್ತ ಮಹಿಳೆಯರ ನೆರವಿಗೆ ಧಾವಿಸುವುದು ದೂರದ ಮಾತು.

ಅವರು ವ್ಯಾಲೆಂಟೈನ್ ದಿನದಂದು ತಮ್ಮ ಪತಿಯ ಜತೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿ, ದೌರ್ಜನ್ಯಕ್ಕೊಳಗಾ ಗಿರುವ ಮಹಿಳೆಯರ ಗಾಯಕ್ಕೆ ಉಪ್ಪು ಸವರಿದ್ದಾರೆ. ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯ ಕಿಚ್ಚು ರಾಜ್ಯಾದ್ಯಂತ ಹಬ್ಬಿದೆ. ಸಂತ್ರಸ್ತ ಮಹಿಳೆಯರು, ನ್ಯಾಯಾಲಯವು ತಮಗೆ ನ್ಯಾಯ ದೊರಕಿಸಿಕೊಡುತ್ತದೆ ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಽಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)

Leave a Reply

Your email address will not be published. Required fields are marked *

error: Content is protected !!