ಸಾರ್ಥಕ ಬದುಕು
ಡಿ.ಕೆ.ಶಿವಕುಮಾರ್
ಮಹಾಭಾರತದಲ್ಲಿ ವಿದುರ ಎಂದರೆ ಅಸಾಧಾರಣ ಮೇಧಾವಿ, ಸ್ಥಿತಪ್ರಜ್ಞತೆ ಉಳ್ಳ ಮಹಾವಿವೇಕಿ, ನಿಷ್ಠಾವಂತ, ಸದಾ ಧರ್ಮ ಮಾರ್ಗದಲ್ಲಿ ನಡೆಯುವವನು, ಎಲ್ಲಕ್ಕಿಂತ ಮಿಗಿಲಾಗಿ ಅವನದು ಭೂತಾಯಿಯಷ್ಟು ಸಹನೆ ಉಳ್ಳ ವ್ಯಕ್ತಿತ್ವ ಎಂಬ ಮಾನ್ಯತೆ ಇದೆ. ರಾಜವಂಶದ ಬೆಳವಣಿಗೆ, ಸಾಮ್ರಾಜ್ಯದ ಅಭಿವೃದ್ಧಿ ಸೇರಿದಂತೆ ಎಲ್ಲವನ್ನೂ ಗಮನಿಸುತ್ತಾ, ಮಾರ್ಗದರ್ಶನ ನೀಡುತ್ತಾ, ಏನೇ ಏರಿಳಿತಗಳು ಬಂದರೂ ಸಮಚಿತ್ತದಿಂದ ಸ್ವೀಕರಿಸಿದ ವಿದುರನ ಮಾತನ್ನು ಯಾರೂ ತಳ್ಳಿಹಾಕು
ತ್ತಿರಲಿಲ್ಲ. ಕೆಲ ವರ್ಷಗಳ ಹಿಂದೆ ತೆರೆಕಂಡ ‘ಬಾಹುಬಲಿ’ ಚಿತ್ರದ ಕಟ್ಟಪ್ಪನ ಪಾತ್ರ ಇಂಥದ್ದೇ ವ್ಯಕ್ತಿತ್ವದ ಮತ್ತೊಂದು ಬಗೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನು ಈಗಿನ ವಾಸ್ತವಕ್ಕೆ ತುಲನೆ ಮಾಡುವುದಾದರೆ ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ನಮಗೆ ಕಾಣಸಿಗುವ ವಿದುರ ಎಂದರೆ ಅದು ಮಲ್ಲಿಕಾರ್ಜುನ ಖರ್ಗೆ ಯವರು. ಕಟ್ಟಪ್ಪ ವಚನ ಹಾಗೂ ಕರ್ತವ್ಯ ನಿಷ್ಠೆಗೆ ಹೇಗೆ ಬದ್ಧರಾಗಿದ್ದರೋ, ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ, ಪಕ್ಷದ ತತ್ವ, ಮೌಲ್ಯ ಹಾಗೂ ಸಿದ್ಧಾಂತಗಳಿಗೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತಗಳಲ್ಲಿ ಅಚಲ ಶ್ರದ್ಧೆ
ಹೊಂದಿರುವ ಖರ್ಗೆ ಅವರು ಅವುಗಳ ಪಾಲನೆಯಲ್ಲಿ ಎಂದಿಗೂ ರಾಜಿಯಾಗುವವರಲ್ಲ.
ರಾಜಕಾರಣಕ್ಕೆ ಪದಾರ್ಪಣೆ ಮಾಡಿದ ಕೂಡಲೇ ನನಗೆ ಸ್ಥಾನಮಾನ ಬೇಕು, ಅಧಿಕಾರ ಬೇಕು ಎಂದು ಹಪಹಪಿಸುವ ಈಗಿನ ಕಾಲದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಬದ್ಧತೆ ಹಾಗೂ ಕಾರ್ಯವೈಖರಿ ಯುವಪೀಳಿಗೆಗೆ ಮಾದರಿಯಾಗಬೇಕಿದೆ. ಅಧಿಕಾರ ಎಂದರೆ ಕೇವಲ ವೈಯಕ್ತಿಕ ಬೆಳವಣಿಗೆಗಾಗಿ ಇರುವ
ವೇದಿಕೆಯಲ್ಲ. ಸ್ವಪ್ರತಿಷ್ಠೆ, ಸ್ವಹಿತಾಸಕ್ತಿ ಇವುಗಳನ್ನೆಲ್ಲ ಮೀರಿ ನಾವು ನಂಬಿದ ಸಿದ್ಧಾಂತದ ಹಾದಿಯಲ್ಲಿ ನಡೆದು ಆ ಮೂಲಕ ಸಮಾಜದ ಒಳಿತಿಗಾಗಿ ಪ್ರಾಮಾಣಿಕ ವಾಗಿ ದುಡಿಯುವುದೇ ರಾಜಕಾರಣದ ನಿಜವಾದ ಉದ್ದೇಶ ಎನ್ನುವುದು ಖರ್ಗೆ ಅವರ ಕಾರ್ಯವಿಧಾನದ ಬುನಾದಿ. ಕಳೆದ ಐದು ದಶಕಗಳಿಂದ ಇಂಥ ನಿಸ್ವಾರ್ಥ ಹಾದಿಯಲ್ಲಿ ನಡೆಯುತ್ತಾ ಬಂದಿರುವ ಖರ್ಗೆ ಅವರು ೫೦ ವರ್ಷಗಳ ಸಾರ್ಥಕ ರಾಜಕಾರಣ ಜೀವನ ಪೂರೈಸಿದ್ದಾರೆ.
ಭೀಕರ ಬಾಲ್ಯ: ಇಂದಿನ ಮಲ್ಲಿಕಾರ್ಜುನ ಖರ್ಗೆಯವರನ್ನು ನೋಡುವವರು, ಅವರು ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷದ ಪವರ್ ಫುಲ್ ಅಧ್ಯಕ್ಷರು ಎಂದು ಹೇಳಬಹುದು. ಆದರೆ ಇಲ್ಲಿಗೆ ತಲುಪಲು ಬಾಲ್ಯದ ಪ್ರತಿ ಹೆಜ್ಜೆಯನ್ನೂ ಅವರು ಮುಳ್ಳಿನ ಮೇಲೆ ಇಟ್ಟವರು ಎಂಬುದು ಅನೇಕರಿಗೆ ಗೊತ್ತಿಲ್ಲ. ಕಡು ಬಡತನ ಹಾಗೂ ನೋವಿನ ಬೇಗೆಯಿಂದ ಕೂಡಿದ್ದ ಅವರ ಬಾಲ್ಯವು, ಅನಾಥ ಪ್ರe, ಅನ್ಯಾಯಕ್ಕೊಳಗಾದ ದುಃಖ, ಭವಿಷ್ಯದ ಅಳುಕು, ತಾರತಮ್ಯಕ್ಕೊಳಗಾಗಿ ಉಂಟಾದ ಕೀಳರಿಮೆ ಹೀಗೆ ನಕಾರಾತ್ಮಕವಾದ ಭಾವಗಳಿಂದಲೇ ಆವರಿಸಿಕೊಂಡಿತ್ತು. ಆದರೆ ಖರ್ಗೆಯವರು ಬೆಳೆಯುತ್ತಾ ಹೋದಂತೆ ಅದನ್ನು ಸಕಾರಾತ್ಮಕವಾಗಿ ಪರಿವರ್ತಿಸಿ ವೈಯಕ್ತಿಕ ಬದುಕು ಹಾಗೂ ಸಾಮಾಜಿಕ ಬದುಕನ್ನು ಕ್ರಾಂತಿಕಾರಕವಾಗಿಸಿಕೊಂಡರು.
೧೯೪೨ರ ಜುಲೈ ೨೧ರಂದು ಬೀದರ್‌ನ ವರವಟ್ಟಿ ಎಂಬ ಪುಟ್ಟ ಗ್ರಾಮದಲ್ಲಿ ಖರ್ಗೆ ಜನಿಸಿದರು. ೧೯೪೭ರಲ್ಲಿ ಸ್ವಾತಂತ್ರ್ಯ ದೊರೆತರೂ ನಿಜಾಮರ ಕಪಿಮುಷ್ಟಿ ಯಲ್ಲಿದ್ದ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟಕ್ಕೆ ಸೇರಿರಲಿಲ್ಲ. ನಿಜಾಮನ ಸೈನ್ಯವು ಗ್ರಾಮಗಳಿಗೆ ದಾಳಿ ಮಾಡಿ, ಮನೆಗಳನ್ನು ಸುಟ್ಟು ಬಡಜನರ ಬದುಕನ್ನು ಬವಣೆಗೆ ತಳ್ಳಿತ್ತು. ಎಷ್ಟೋ ಗ್ರಾಮಸ್ಥರು ಬೀದಿಗೆ ಬಿದ್ದರು. ಈ ಸೈನ್ಯ ಖರ್ಗೆ ವಾಸವಿದ್ದ ಗುಡಿಸಲಿಗೂ ದಾಳಿ ಇಟ್ಟು ಬೆಂಕಿ ಹಾಕಿತ್ತು. ಖರ್ಗೆಯವರ ತಾಯಿ ಹಾಗೂ ಕುಟುಂಬ ಸದಸ್ಯರು ಆ ಜ್ವಾಲೆಯಲ್ಲಿ ಉರಿದು ಭಸ್ಮ ವಾದರು. ಅದೃಷ್ಟವಶಾತ್ ಅಪ್ಪ ಮಾಪಣ್ಣ ಮಗುಮಲ್ಲಿಕಾರ್ಜುನನನ್ನು ಎತ್ತಿಕೊಂಡು ಹೊರಗೆ ಹೋಗಿದ್ದರಿಂದ ಭವಿಷ್ಯದ ನಾಯ ಕನ ಸೃಷ್ಟಿಗೆ ಭದ್ರ ಬುನಾದಿ ದೊರೆಯಿತು. ಕುಟುಂಬದವರನ್ನು ಸುಟ್ಟ ಆ ಅಗ್ನಿಯು ಖರ್ಗೆಯವರ ಬಾಲ್ಯದ ಬದುಕನ್ನು ಅಕ್ಷರಶಃ ನರಕ ಮಾಡಿಬಿಟ್ಟಿತ್ತು. ಆದರೆ ಆ ಅನಲನ ತಾಪದಿಂದಲೇ ಒಬ್ಬ ನಾಯಕ ಜನಿಸುತ್ತಾನೆಂದು ಯಾರೂ ಊಹಿಸಿರಲಿಲ್ಲ!
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ: ತಂದೆಯೊಂದಿಗೆ ಹುಟ್ಟೂರು ತೊರೆದು ಕಲಬುರ್ಗಿಗೆ ಬಂದ ಮಲ್ಲಿಕಾರ್ಜುನ ಖರ್ಗೆ, ಶಾಲೆಗೆ ಸೇರಿ ವಿದ್ಯಾಭ್ಯಾಸದಲ್ಲಿ ಚುರುಕಾಗಿ, ಕಾನೂನು ಪದವಿ ಮುಗಿಸಿದ್ದರ ಜತೆಗೆ ವಿದ್ಯಾರ್ಥಿಯಾಗಿದ್ದುಕೊಂಡೇ ಹೋರಾಟಗಳಿಂದ ಬೆಳಕಿಗೆ ಬಂದರು. ನಂತರ ಕಾರ್ಮಿಕ ಮುಖಂಡರಾಗಿ ಹೋರಾಟಗಳಲ್ಲಿ ಭಾಗವಹಿಸಿದರು. ತಮ್ಮೊಳಗಿನ ಜನಸೇವೆಯ ಶಕ್ತಿಯನ್ನು ಕಂಡುಕೊಂಡು ೧೯೬೯ರಲ್ಲಿ ಕಾಂಗ್ರೆಸ್‌ಗೆ ಸೇರಿದರು.
೧೯೭೨ರಲ್ಲಿ ಮೊದಲ ಬಾರಿಗೆ ಗುರುಮಿಠಕಲ್ ಕ್ಷೇತ್ರದಲ್ಲಿ ಗೆದ್ದು, ವಿಧಾನಸಭೆ ಪ್ರವೇಶಿಸಿ, ೨೦೦೮ರವರೆಗೆ ಒಂಬತ್ತು ಬಾರಿ ಜಯ ಸಾಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡರು. ಈ ಅವಽಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ, ಪ್ರತಿಪಕ್ಷದ ನಾಯಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದರು. ೨೦೦೯ ಹಾಗೂ ೨೦೧೪
ರಲ್ಲಿ ಕಲಬುರ್ಗಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರಾಗಿ, ಸಂಸದೀಯ ನಾಯಕರಾಗಿ ಕೆಲಸ ಮಾಡಿದರು. ಅಲ್ಲಿಯವರೆಗೆ ಸೋಲೇ ಕಂಡಿರದ ಖರ್ಗೆಯವರು, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಒಂದು ಅಚ್ಚರಿಯೇ.
ಪಕ್ಷಕ್ಕಾಗಿಯೇ ಬದುಕು ಮೀಸಲಿಟ್ಟ ಅವರನ್ನು ಕಾಂಗ್ರೆಸ್ ಹೈಕಮಾಂಡ್ ರಾಜ್ಯಸಭೆಗೆ ಮತ್ತೆ ಕರೆತಂದಿತು. ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಉನ್ನತ ಸ್ಥಾನ ಅಲಂಕರಿಸಿದರು. ದಕ್ಷ ಆಡಳಿತಗಾರ-ಅಭಿವೃದ್ಧಿಗೆ ನವಸ್ಪರ್ಶ: ಖರ್ಗೆಯವರು ೧೯೮೦ರಲ್ಲಿ ಆರ್.ಗುಂಡೂರಾವ್ ಸರಕಾರ ದಲ್ಲಿ ಭೂ ಸುಧಾರಣಾ ಕಾಯಿದೆ ಜಾರಿಗೊಳಿಸಿ ೧೯೯೦ರಲ್ಲಿ ಎಸ್.ಬಂಗಾರಪ್ಪ ಅವರ ಸಂಪುಟದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಭೂ ಸುಧಾರಣಾ ಕಾಯಿದೆಯನ್ನು ಶಾಸನ ವಾಗಿಸಿ ಭೂರಹಿತರಿಗೆ ಭೂ ಒಡೆತನ ನೀಡಿದ್ದು ಐತಿಹಾಸಿಕ ಹೆಜ್ಜೆ. ಹೈದರಾಬಾದ್ ಕರ್ನಾಟಕದವರಾಗಿ ಅಲ್ಲಿನ ಜನರ ಸಂಕಟ ಅರಿತು, ೩೭೧(ಜೆ) ಅಧಿನಿಯಮ ದಡಿ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಯಶಸ್ವಿಯಾದರು. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆಗೆ ಕೊಡುಗೆ ನೀಡಿದರು.
ರೈಲ್ವೆ ಸಚಿವರಾಗಿ ಚಿಕ್ಕಮಗಳೂರು- ಸಕಲೇಶಪುರ, ಶಿವಮೊಗ್ಗ-ಹರಿಹರ, ಬಾಗಲಕೋಟೆ-ಕುಡಚಿ ಮಾರ್ಗಗಳಿಗೆ ಹೆಚ್ಚು ಅನುದಾನ ತಂದುಕೊಟ್ಟರು. ಹೈದರಾಬಾದ್-ಹುಬ್ಬಳ್ಳಿ, ಶಿವಮೊಗ್ಗ-ತಾಳಗುಪ್ಪ, ಯಶವಂತ ಪುರ-ಬೀದರ್, ಬೆಂಗಳೂರು-ತುಮ ಕೂರು, ಯಶವಂತ ಪುರ-ಚಂಡೀಗಢಕ್ಕೆ ಸಂಪರ್ಕ ಕ್ರಾಂತಿ ರೈಲು ಸೇವೆ ತಂದರು. ಎಸ್.ಎಂ.ಕೃಷ್ಣ ಸರಕಾರದಲ್ಲಿ ಗೃಹ ಸಚಿವರಾಗಿದ್ದಾಗ, ಕಾಡುಗಳ್ಳ ವೀರಪ್ಪನ್‌ನಿಂದ ಆದ ವರನಟ ಡಾ.ರಾಜ್ ಕುಮಾರ್ ಅವರ ಅಪಹರಣ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದು ಅವರ ಹೆಗ್ಗಳಿಕೆ. ಆ ಘಟನೆ ರಾಜ್ಯವನ್ನು ಅಲಕಲ ಮಾಡಿತ್ತು. ಆ ಎಲ್ಲ ಒತ್ತಡವನ್ನು ತಮ್ಮ ಮೇಲೆಯೇ ಹೇರಿಕೊಂಡ ಖರ್ಗೆ ನಿಟ್ಟುಸಿರು ಬಿಟ್ಟಿದ್ದು ಡಾ.ರಾಜ್ ಮನೆಗೆ ಮರಳಿದ ನಂತರವೇ.
ಸಮಚಿತ್ತ, ಶಾಂತ ಹಾಗೂ ಸೌಮ್ಯ ಸ್ವಭಾವ, ಮಾತಿನಲ್ಲಿ ಜಾಗೃತ ಪ್ರಜ್ಞೆ, ಅಪಾರ ಅನುಭವದಿಂದ ಮಿಳಿತವಾದ ವ್ಯಕ್ತಿತ್ವ ದಿಂದಾಗಿ ಪಕ್ಷಾತೀತವಾಗಿ ಎಲ್ಲರ
ಗೌರವಕ್ಕೆ ಪಾತ್ರರಾಗಿರುವ ಅವರನ್ನು ‘ರಾಜಕಾರಣದ ವಿದುರ’ ಎನ್ನುವುದು ಅತಿಶಯೋಕ್ತಿಯಲ್ಲ. ಕಳೆದ ೯ ವರ್ಷಗಳಿಂದ ದೇಶದಲ್ಲಿ ಒಂದು ರೀತಿ ಅಘೋಷಿತ ತುರ್ತು ಪರಿಸ್ಥಿತಿ ಇರುವಾಗ ಯಾವುದೇ ಮುಲಾಜಿಲ್ಲದೆ ನೇರ ನಿಷ್ಠುರವಾಗಿ ಕೇಂದ್ರ ಸರಕಾರದ ತಪ್ಪು ನಿಲುವುಗಳು, ಲೋಪ-ದೋಷಗಳನ್ನು ಎತ್ತಿ ಹಿಡಿದು ತೋರಿಸುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮುಂಚೂಣಿಯಲ್ಲಿzರೆ. ಆಡಳಿತ ನಡೆಸುವ ಸರಕಾರದ ಕಿವಿ ಹಿಂಡಿ ಪ್ರಜಾಪ್ರಭುತ್ವದ ಆಶಯಗಳನ್ನು ಅವರಷ್ಟು
ಚಂದವಾಗಿ ಎತ್ತಿ ಹಿಡಿಯುವ ನಾಯಕರು ಅಪರೂಪಕ್ಕೆ ಅಪರೂಪ. ಖರ್ಗೆಯವರ ನಾಯಕತ್ವದ ಮಾದರಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಅದು ಭವಿಷ್ಯದ ರಾಜಕಾರಣಕ್ಕೂ ಮಾದರಿಯಾಗಲಿ.
(ಲೇಖಕರು ಉಪಮುಖ್ಯಮಂತ್ರಿಗಳು, ಕೆಪಿಸಿಸಿ
ಅಧ್ಯಕ್ಷರು)