Sunday, 8th September 2024

ನಗರದತ್ತ ಮುಖಮಾಡಿದ ಗ್ರಾಮೀಣ ಬದುಕು

ಶಶಾಂಕಣ

shashidhara.halady@gmail.com

ರುಚಿಯಾಗಿರುವ ಆರ್.ಒ. ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸಿ ಉಪಯೋಗಿಸುತ್ತಿದ್ದೇವೆ. ಆದರೆ, ಹೀಗೆ ಶುದ್ಧೀಕರಿಸಿದ ನೀರಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಲವಣಾಂಶಗಳೇ ಇಲ್ಲದಿರಬಹುದು ಎನ್ನುತ್ತಾರೆ ತಜ್ಞರು! ಇಂಥ ಪರಿಶುದ್ಧ ನೀರನ್ನು ದೀರ್ಘಕಾಲ ಕುಡಿಯುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎನ್ನಲಾಗುತ್ತಿದೆ.

ಹಲವು ನಗರವಾಸಿಗಳಂತೆ ನಾವೂ ಆರ್.ಒ. ನೀರನ್ನು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇವೆ. ಆರೋಗ್ಯ ಕಾಪಾಡಿಕೊಳ್ಳಲು ಯಾವುದೇ ಬ್ಯಾಕ್ಟೀರಿಯಾ/ಕ್ರಿಮಿಗಳಿಲ್ಲದ ಗುಣಮಟ್ಟದ ನೀರನ್ನು ಕುಡಿಯಬೇಕು ಎಂಬ ಎಚ್ಚರದಿಂದ, ಆರ್.ಒ. ನೀರನ್ನು ಒದಗಿಸುವ ಪುಟ್ಟ ಯಂತ್ರವನ್ನು ಮನೆಯಲ್ಲೇ ಹಾಕಿಸಿಕೊಂಡಿದ್ದೇವೆ. ಜತೆಗೆ, ಮನೆಗೆ ನಲ್ಲಿಯಿಂದ ಪೂರೈಕೆಯಾಗುವ ನೀರು ಬೋರ್‌ವೆಲ್‌ನಿಂದ ಬರುತ್ತಿದ್ದುದರಿಂದಾಗಿ, ಈ ಯಂತ್ರ ಅದರ ಒಗರುರುಚಿ ಹೊಡೆದೋಡಿಸಿ ಸಿಹಿನೀರನ್ನು ಕೊಡುತ್ತದೆ ಎಂದ್ದಿದ್ದರು ಕಂಪನಿಯವರು.

ಅದನ್ನು ಹಾಕಿಸಿದ ಕೆಲ ದಿನಗಳ ತನಕ ನನ್ನಲ್ಲಿ ಸಣ್ಣ ತಪ್ಪಿತಸ್ಥ ಭಾವನೆ: ಆ ಯಂತ್ರವು ಒಂದು ಲೀಟರ್ ರುಚಿಕರ ನೀರನ್ನು ನಮಗೆ ನೀಡುವ ವೇಳೆ ಸುಮಾರು ಅಷ್ಟೇ ನೀರನ್ನು ವ್ಯರ್ಥಮಾಡುತ್ತಿತ್ತು! ಇತ್ತ ಆರ್.ಒ. ನೀರು ಬಂದಂತೆಲ್ಲಾ, ಅತ್ತ ಮಲಿನನೀರು ಹರಿದು ಸಿಂಕ್ ಸೇರುತ್ತಿತ್ತು. ಶುದ್ಧನೀರಿನ ಆಸೆಗೆ ಬಿದ್ದು
ಇಷ್ಟೊಂದು ನೀರನ್ನು ವ್ಯರ್ಥ ಮಾಡುತ್ತಿದ್ದೇವಲ್ಲಾ ಎಂದು ವ್ಯಥೆಯಾಗತೊಡಗಿತ್ತು. ಆದರೇನು ಮಾಡುವುದು, ಮನೆಯ ಎಲ್ಲರಿಗೂ ಗುಣಮಟ್ಟದ ನೀರು ಬೇಕಾದ್ದರಿಂದಾಗಿ ಇಂಥ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕು ಎಂಬ ನಗರಿಗರ ಮನೋಭಾವವನ್ನು ರೂಢಿಸಿಕೊಳ್ಳಬೇಕಾಯಿತು. ನಗರದ ಎಷ್ಟೋ ಮನೆಗಳಲ್ಲಿ ಇಂಥ ಆರ್.ಒ. ಯಂತ್ರವೇ ಇರುವುದರಿಂದ, ನಾವೂ ಅವರಂತಿರಬೇಕಲ್ಲವೆ ಎಂಬ ವಾದವೂ ಸೇರಿಕೊಂಡಿತು!

ಶುದ್ಧನೀರನ್ನು ಒದಗಿಸುವ ಇಂಥ ಯಂತ್ರಗಳು ಲಕ್ಷಾಂತರ ಮನೆಗಳಲ್ಲಿದ್ದು, ಅವು ಒಟ್ಟಾಗಿ ವ್ಯರ್ಥಮಾಡುವ ನೀರು ಎಷ್ಟು ಲಕ್ಷ ಲೀಟರುಗಳಾಗಬಹುದು ಎಂದು
ಯೋಚಿಸಿದರೆ ಗಾಬರಿಯಾಗುತ್ತದೆ. ಆದರೆ, ನಗರಿಗರಿಗೆ ಅಂಥ ಗಾಬರಿಗಳನ್ನು ಮೆಟ್ಟಿನಿಲ್ಲುವ ಛಾತಿಯಿರುವುದರಿಂದ, ಇದೊಂದು ಚರ್ಚಾ ವಿಷಯವಾಗಿ ಉಳಿದಿಲ್ಲ. ರುಚಿಯಾಗಿರುವ ಆರ್.ಒ. ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರವನ್ನು ಸ್ವೀಕರಿಸಿ ಉಪಯೋಗಿಸುತ್ತಿದ್ದೇವೆ. ಆದರೆ, ಹೀಗೆ ಶುದ್ಧೀಕರಿಸಿದ ನೀರಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಲವಣಾಂಶಗಳೇ ಇಲ್ಲದಿರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ! ಇಂಥ ಪರಿಶುದ್ಧ ನೀರನ್ನು ದೀರ್ಘಕಾಲ ಕುಡಿಯುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬ ವಿಚಾರವೂ ಮುನ್ನೆಲೆಗೆ ಬರುತ್ತಿದೆ.

ಕುಡಿಯುವ ನೀರಿನ ಶುದ್ಧತೆ, ಗುಣಮಟ್ಟ, ರುಚಿಯನ್ನು ಗಮನಿಸುತ್ತಾ ಹೋದರೆ, ಹಳೇ ಮೈಸೂರು ಭಾಗದ ಜನರು, ಬೆಂಗಳೂರಿನವರು ಅದೃಷ್ಟವಂತರು. ಉತ್ತರ ಕರ್ನಾಟಕದ ಹಲವೆಡೆ ಬಾವಿ, ಬೋರ್‌ವೆಲ್‌ನಲ್ಲಿ ಗುಣಮಟ್ಟದ ನೀರು ಸಿಗುವುದಿಲ್ಲ; ಹಲವು ಕಡೆ ಒಗರಾದ, ತುಂಬಾ ಸವಳಾಗಿರುವ, ಕೆಲವು ಕಡೆ ಅಧಿಕ -ರಿನ್ ಇರುವ ನೀರು ದೊರಕುತ್ತಿದ್ದು, ಅದನ್ನೇ ಅನಿವಾರ್ಯವಾಗಿ ಕುಡಿಯುತ್ತಿರುವ ಜನರ ಆರೋಗ್ಯವೂ ಕೆಡುತ್ತಿದೆ. ಮಲೆನಾಡು, ಕರಾವಳಿಯ ಹಲವೆಡೆ ಗುಣಮಟ್ಟದ ನೀರು ಲಭ್ಯ; ಹೆಚ್ಚು ಮಳೆಯಿಂದಾಗಿ ಅಲ್ಲಿ ಸಿಹಿರುಚಿಯ ನೀರು ಲಭ್ಯವಿದೆ.

ನೀರು ಸಹಜವಾಗಿದ್ದಾಗಲೇ ರುಚಿ ಜಾಸ್ತಿ. ಪರಿಶುದ್ಧ ನೀರಿನ ಸೇವನೆ ಎಂದಾಕ್ಷಣ ನನ್ನ ಮನಸ್ಸು ಬಾಲ್ಯಕ್ಕೆ ಜಾರುತ್ತದೆ. ಪ್ರತಿದಿನ ಶಾಲೆ ಮುಗಿಸಿ ನಡೆದು ಕೊಂಡೇ ೩ ಕಿ.ಮೀ. ದೂರದ ಮನೆಗಳಿಗೆ ವಾಪಸಾಗುತ್ತಿದ್ದ ನಾವು, ಗುಡ್ಡದ ಕಿಬ್ಬದಿಯಲ್ಲಿ ಹರಿಯುವ ಜುಳುಜುಳು ಸದ್ದಿನ ಪುಟ್ಟ ತೊರೆಯ ನೀರನ್ನು ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಿದ್ದೆವು! ಆಗೆಲ್ಲಾ ಮನೆಯಿಂದ ಶಾಲೆಗೆ ಕುಡಿಯುವ ನೀರನ್ನು ಒಯ್ಯುವ ಪ್ರಮೇಯ ಇರಲಿಲ್ಲ. ಏಕೆಂದರೆ, ಪ್ಲಾಸ್ಟಿಕ್ ಬಾಟಲಿಗಳು ಕಾಲಿಟ್ಟಿರಲಿಲ್ಲ. ಶಾಲೆಯಲ್ಲಿ ಮಣ್ಣಿನ ಹೂಜಿಯಲ್ಲಿದ್ದ ನೀರನ್ನು ಆಗಾಗ ಕುಡಿಯುತ್ತಿದ್ದುದುಂಟು. ಅದು ಬಿಟ್ಟರೆ, ಶಾಲೆ ಬಿಟ್ಟ ನಂತರ ಮನೆಗೆ ಸಾಗುವಾಗ, ಬಾಯಾ ರಿದರೆ, ನಡುವೆ ಸಿಗುವ ತೊರೆಯ ನೀರೇ ನಮಗೆ ಅಮೃತ.

ನಮಗಾಗ ಒಂದು ಸಂಗತಿ ಗೊತ್ತಿರಲಿಲ್ಲ- ಬೆಟ್ಟ ಗುಡ್ಡಗಳ ಇಳಿಜಾರಿನಲ್ಲಿ ಹರಿಯುತ್ತಿದ್ದ ಆ ನೀರು ಖನಿಜಾಂಶಗಳ ಆಗರ, ಔಷಧಿಯ ಗುಣಗಳ ಖಣಿ. ಆ ಬೆಟ್ಟಗಳ ಸುತ್ತ ನಾನಾ ರೀತಿಯ ಮರ, ಗಿಡ, ಬಳ್ಳಿಗಳು ಬೆಳೆದಿದ್ದವು; ಅವುಗಳ ಸೆಲೆಯಿಂದ ಒಂದೊಂದೇ ಹನಿ ನೀರು ಸಂಚಯನಗೊಂಡು ಮುಂದೆ ಪುಟ್ಟ ತೊರೆಯಾಗಿ ಹರಿಯುವಾಗ, ಎಲ್ಲಾ ಸಸ್ಯರಾಶಿಯ ಅಂಶಗಳೂ ಅದರಲ್ಲಿ ತುಂಬಿರುವುದು ಸಹಜ ತಾನೆ! ಅದಕ್ಕೇ ಇರಬೇಕು, ಆ ನೀರಿನಲ್ಲಿ ಅಂಥ ಅದ್ಭುತ ರುಚಿ! ಆ ತೊರೆಯ
ನೀರು, ಮಳೆಗಾಲ ಮುಗಿದ ನಂತರವೂ ಒಂದೆರಡು ತಿಂಗಳು ಹರಿದುಬರುತ್ತಿತ್ತು. ಅದೇ ಕಾಡುದಾರಿಯಲ್ಲಿ ಒಂದು ನೀರಿನ ಬುಗ್ಗೆಯೂ ಇತ್ತು! ಶಾಲೆಯಿಂದ ಮರಳುವಾಗ, ಅದರಿಂದ ಎಷ್ಟು ನೀರು ಉಕ್ಕುತ್ತಿದೆ ಎಂದು ನೋಡುವ ಕುತೂಹಲ. ಜೂನ್ ಶುರುವಿನಲ್ಲಿ ಹತ್ತಾರು ದಿನ ಮಳೆ ಸುರಿದು ಬೆಟ್ಟಗುಡ್ಡಗಳ ಗರ್ಭಗಳಲ್ಲಿ ನೀರಿನ ಸೆಲೆ ತುಂಬಿದ ನಂತರ, ದಾರಿಪಕ್ಕದ ಆ ಸಪಾಟು ಜಾಗದಲ್ಲಿ ಶುದ್ಧನೀರಿನ ಬುಗ್ಗೆ ಉಕ್ಕಲು ಶುರು!

ಒಂದು ದೊಡ್ಡ ಬೋಗಿಮರ ಅಲ್ಲಿತ್ತು, ಒಣಗಿದ ನಂತರ ಮರದ ಬೇರು ಪುಡಿಯಾಗಿ ಹೋಗಿರಬೇಕು- ಆ ಬೇರಿನ ದಾರಿ ನಿರ್ಮಿಸಿದ ಟೊಳ್ಳಿನ ಮೂಲಕ ನೀರು ಉಕ್ಕುತ್ತಿತ್ತು. ಆ ಜಾಗದ ಮೇಲ್ಭಾಗದಲ್ಲಿ ಕುರುಚಲು ಕಾಡು ಇದ್ದುದರಿಂದ, ನೆಲದಾಳಕ್ಕೆ ಇಂಗಿದ ಮಳೆನೀರು, ಭೂಮ್ಯಂತರ್ಗತವಾಗಿ ಹರಿದು ನೆಲದಿಂದ ಉಕ್ಕುತ್ತಾ, ನಮ್ಮಂಥವರ ಕೌತುಕದ ನೋಟಕ್ಕೆ ಪಕ್ಕಾಗಿತ್ತು. ನಮ್ಮ ಜತೆ ಕೆಲವು ಕೀಟಲೆಯ ಹುಡುಗರಿದ್ದರು. ಒಮ್ಮೆ ಅವರು ಒಂದಷ್ಟು ಕಲ್ಲನ್ನು ಆ ಬುಗ್ಗೆಗೆ
ತುಂಬತೊಡಗಿದರು. ‘ಬೇಡ, ಕಲ್ಲು ತುಂಬಿದರೆ ನೀರು ಉಕ್ಕುವುದು ನಿಲ್ಲಬಹುದು’ ಎಂದಿದ್ದೆ ನಾನು. ಆದರೆ ದೊಡ್ಡ ಕ್ಲಾಸಿನ ಆ ಹುಡುಗರು ಅದನ್ನು ಕೇಳಿಯಾರೇ? ಆರೆಂಟು ಕಲ್ಲನ್ನು ಬುಗ್ಗೆಗೆ ತುಂಬಿದರು. ಮರುದಿನ, ಆ ಬುಗ್ಗೆಯಲ್ಲಿ ಹಿಂದಿನ ದಿನಕ್ಕಿಂತ ಅರ್ಧದಷ್ಟು ಮಾತ್ರ ನೀರು ಉಕ್ಕುತ್ತಿತ್ತು; ಅದರ ಮರುದಿನ ಮಳೆಯೂ ತಗ್ಗಿತ್ತು, ಬುಗ್ಗೆಯ ನೀರು ನಿಂತಿತು. ನಂತರ ಅದರಲ್ಲೆಂದೂ ನೀರು ಉಕ್ಕಲಿಲ್ಲ!

ಹಳ್ಳಿಮನೆಯಲ್ಲಿದ್ದಾಗ ನಾವು ಹೆಚ್ಚು ಕಮ್ಮಿ ವರ್ಷವಿಡೀ ಕುಡಿಯುತ್ತಿದ್ದುದು ಮಳೆ ನೀರೇ! ಮನೆಯಂಗಳದ ಮೂಲೆಯಲ್ಲಿದ್ದ ೭-೮ ಅಡಿ ಅಗಲದ ನೆಲಮಟ್ಟದ ಬಗ್ಗುಬಾವಿಯೇ ನಮ್ಮ ಜಲಮೂಲ. ಜೂನ್ ೨ನೇ ವಾರದ ಹೊತ್ತಿಗೆ, ಅದರ ನೀರು ಮತ್ತು ಅಂಗಳದ ನೀರುಗಳ ಸಂಗಮವಾಗುತ್ತದೆ! ಎಡೆಬಿಡದೆ ಮಳೆಯಾಗಿ
ಅಂಗಳದಲ್ಲಿ ಹರಿದುಬಂದ ನೀರೆಲ್ಲವೂ ಬಾವಿಯನ್ನು ತುಂಬಿ, ಬಾವಿ ಯಾವುದು ಅಂಗಳ ಯಾವುದು ಎಂದು ಗೊತ್ತಾಗದ ಸನ್ನಿವೇಶ! ಇದೇ ಬಾವಿಯ ನೀರನ್ನು ವರ್ಷವಿಡೀ ಕುಡಿಯುತ್ತಿದ್ದುದರಿಂದ, ನಾವು ಸದಾಕಾಲ ಮಳೆನೀರನ್ನೇ ಕುಡಿಯುತ್ತಿದ್ದೆವು ಎಂದುಕೊಳ್ಳಬಹುದಲ್ಲವೆ!

ಈ ಬಗ್ಗುಬಾವಿ ಬೇಸಗೆಯಲ್ಲಿ ಒಣಗುತ್ತಿದ್ದುದರಿಂದ ಮನೆ ಮುಂದಿನ ಅಗೇಡಿಯಲ್ಲಿ ಒಂದು ದೊಡ್ಡ ಬಾವಿಯನ್ನು ತೋಡಿಸಿದರು. ಅದರ ಅಪಾರ ಜಲರಾಶಿ ನೋಡುತ್ತಾ ಆ ನೀರನ್ನು ಕುಡಿದರೆ, ರುಚಿ ಕಡಿಮೆ! ಕೆಲವು ಅಡಿ ದೂರದಲ್ಲಿದ್ದ ಬಗ್ಗುಬಾವಿಯ ನೀರಿನ ರುಚಿ ಜಾಸ್ತಿ! ಇದು ಪ್ರಕೃತಿಯ ವಿಸ್ಮಯಗಳಲ್ಲೊಂದು. ಈ
ಎರಡಕ್ಕೂ ಮಳೆ ನೀರು ಸೇರುತ್ತಿದ್ದರೂ, ಮಳೆ ಕಡಿಮೆಯಾದ ನಂತರ, ಇವಕ್ಕೆ ನೆಲದಾಳದ ಜಲಮೂಲವೇ ಆಧಾರ. ಅದನ್ನು ಹೆಚ್ಚಿಸುವಲ್ಲಿ ಮನೆಯ ಸುತ್ತ ಹರಿಯುತ್ತಿದ್ದ ೩ ತೋಡುಗಳ ಪಾತ್ರ ಹಿರಿದು (ತೋಡು=ತೊರೆ). ಮನೆಯೆದುರಿನ ಅಂಗಳದಲ್ಲಿ ಒಂದು ಬಗ್ಗುಬಾವಿ.

ಅದನ್ನು ದಾಟಿ ನಡೆದರೆ, ತೋಟದೊಳಗೊಂದು ಪುಟ್ಟ ತೋಡು. ೨ನೇ ಬೆಳೆ ಎನಿಸಿದ ಸುಗ್ಗಿs ಬೆಳೆಗೆ ಅನುಕೂಲವಾಗುವಂತೆ, ಮೇಲ್ಬಾಗದ ಜಾಗದಿಂದ
ನೀರು ಹಾಯಿಸಲು ಮಾಡಿದ್ದ ಪುಟ್ಟ ತೋಡು. ಅದರಲ್ಲಿ ಜೂನ್‌ನಿಂದ ಜನವರಿ ತನಕ ನೀರು ಹರಿಯುತ್ತಿತ್ತು. ಇದನ್ನು ಹಾದು, ಅಡಕೆ ತೋಟವನ್ನು ದಾಟಿದರೆ, ‘ಸಣ್ಣತೋಡು’. ಇದು ನಮ್ಮ ಹಲವು ಅವಶ್ಯಕತೆಗಳನ್ನು ಪೂರೈಸುವ ಗಂಗೆ. ಅದರಲ್ಲಿ ಜೂನ್‌ನಿಂದ ಜನವರಿ ತನಕ ಶುದ್ಧನೀರು ಹರಿಯುತ್ತಿತ್ತು. ಆದರೆ ಹಳ್ಳಿಯವರೆಲ್ಲ ಪಾತ್ರೆ, ಗಂಟಿ ಮೈ ತೊಳೆಯಲು, ಬೆಳಗಿನ ಕೆಲಸ ಸೇರಿದಂತೆ ಎಲ್ಲಕ್ಕೂ ಅದನ್ನೇ ಬಳಸುತ್ತಿದ್ದುದರಿಂದ ಸಣ್ಣ ತೋಡಿನ ನೀರು ಅಷ್ಟು ಚೊಕ್ಕಟ ಅಲ್ಲವೆಂಬ ಭಾವನೆ. ಇದು ಗದ್ದೆಸಾಲುಗಳ ನಡುವೆ ೧೦೦ ಅಡಿ ಹರಿದು, ದೊಡ್ಡ ತೋಡನ್ನು ಸೇರುತ್ತಿತ್ತು. ಈ ದೊಡ್ಡ ತೋಡಿಗೆ ಸುಮಾರು ೧೫೦ ಅಡಿ ದೂರ.
ಹೀಗೆ ನಮ್ಮ ಮನೆಯ ಸುತ್ತ ನೀರು ಹರಿಯುವ ಒರತೆಗಳು! ಬೈಲಿನುದ್ದಕ್ಕೂ ಹರಿದುಹೋಗಿದ್ದ ದೊಡ್ಡ ತೋಡು, ಸದಾ ನೀರಿನಿಂದ ತುಂಬಿರುತ್ತಿದ್ದ ಕಾಲ ವೊಂದಿತ್ತು. ಹಿಂದೆ ಅದರಲ್ಲಿ ಜೂನ್‌ನಿಂದ ಎಪ್ರಿಲ್ ತನಕವೂ ನೀರು ಹರಿಯತ್ತಿತ್ತಂತೆ; ನಾನು ಕಂಡಂತೆ ಜೂನ್‌ನಿಂದ ಫೆಬ್ರವರಿ ತನಕ ನೀರು ಇರುತ್ತಿತ್ತು. ಈಗ ಡಿಸೆಂಬರ್ ಸಮಯಕ್ಕೇ ಅದು ಬತ್ತತೊಡಗುತ್ತದೆ! ಆ -ಸಲೆಯಲ್ಲಿ ಕಾಡುಮರ ಗಳ ಸಂಖ್ಯೆ ಕಡಿಮೆಯಾಗಿ, ಎಲ್ಲೆಂದರಲ್ಲಿ ಅಕೇಶಿಯಾಗಳ ಹಿಂಡು ಹೆಚ್ಚಿದ್ದ ರಿಂದಾಗಿ, ಡಿಸೆಂಬರ್ ಹೊತ್ತಿಗೆ ದೊಡ್ಡ ತೋಡು ಒಣಗುತ್ತದೆ.

ನವೆಂಬರ್ ವೇಳೆ ದೊಡ್ಡತೋಡಿಗೆ ಅಲ್ಲಲ್ಲಿ ಮಣ್ಣಿನ ಕಟ್ಟು ಕಟ್ಟಿ, ಗದ್ದೆಗೆ ನೀರು ಹಾಯಿಸಿ ಸುಗ್ಗಿಬೆಳೆ ಬೆಳೆವ ಪರಿಪಾಠ. ಪಂಪ್‌ಸೆಟ್ ಬಂದ ನಂತರ, ಹೀಗೆ ಕಟ್ಟುಹಾಕಿ ಬೆಳೆ ಬೆಳೆವ ಪದ್ಧತಿ ನಿಂತಿದೆ. ನಮ್ಮ ಹಳ್ಳಿಗರ ದೃಷ್ಟಿಯಲ್ಲಿ ಬತ್ತ ಬೆಳೆಯುವುದರಿಂದ ಲಾಭ ಕಡಿಮೆ ಎಂದಾಗಿರುವುದರಿಂದ, ಈಗ ೨ನೇ ಬೆಳೆ ತೆಗೆಯುವ ಪರಿಪಾಠ ವನ್ನೇ ಬಿಟ್ಟುಬಿಟ್ಟಿದ್ದಾರೆ. ನಮ್ಮ ಮನೆಯ ಸುತ್ತ ಹರಿಯುತ್ತಿದ್ದ ೩ ತೋಡು ಗಳ ನೆನಪಿನಲ್ಲೇ, ಕೆಲ ದಿನಗಳ ಹಿಂದೆ ಅದೇ ಭಾಗದಲ್ಲಿ ಓಡಾಡಿದೆ. ಆದರೆ ಪುಟಾಣಿ ತೋಡು ಈಗ ಬತ್ತಿಹೋಗಿ ಉಪಯೋಗವೇ ಇಲ್ಲವಾಗಿದೆ.

ಅದರ ನೀರು ಬಳಸಿ ಬತ್ತ ಬೆಳೆಯುತ್ತಿದ್ದ ಪದ್ಧತಿಯೂ ನಿಂತಿದೆ; ಅದಕ್ಕೆ ನೀರು ಪೂರೈಸುತ್ತಿದ್ದ ಸೆಲೆ ಇರುವ ಜಾಗವು ಅನ್ಯಕಾರ್ಯಕ್ಕೆ ಬಳಕೆಯಾಗುತ್ತಿದೆ. ಸಣ್ಣ ಮತ್ತು ದೊಡ್ಡ ತೋಡುಗಳಲ್ಲಿ ನೀರಿದೆ; ಆದರೆ, ಕಟ್ಟುಹಾಕಿ ಸುಗ್ಗಿಬೆಳೆ ಬೆಳೆವ ಪದ್ಧತಿಯನ್ನು ಬಹುತೇಕರು ಕೈಬಿಟ್ಟಿದ್ದಾರೆ. ಹಲವರಿಗೆ ರಿಯಾಯತಿ ದರದಲ್ಲಿ ಸರಕಾರ ನೀಡುವ ಅಕ್ಕಿಯೇ ಉತ್ತಮ ಎನಿಸಿದೆ; ಇನ್ನು ಕೆಲವರಿಗೆ ಬತ್ತ ಬೆಳೆಯಲು ನೀಡುವ ಮಜೂರಿಯ ಮೊತ್ತ ಭಾರವೆನಿಸಿದೆ. ನೀರು, ಬೆಳೆ, ಕೃಷಿಕ,
ಜಲಮೂಲ, ಮಳೆ, ಕಟ್ಟು, ಸಣ್ಣ ತೋಡು ಇವೆಲ್ಲವುಗಳ ನಡುವಿನ ಅವಿನಾಭಾವ ಸಂಬಂಧ ವಿಂದು ಸ್ಥಿತ್ಯಂತರಗೊಂಡಿದೆ. ಗ್ರಾಮೀಣ ಬದುಕು ನಗರದತ್ತ ಮುಖಮಾಡಿದೆ.

Leave a Reply

Your email address will not be published. Required fields are marked *

error: Content is protected !!