Saturday, 23rd November 2024

ಅಷ್ಟಕ್ಕೂ ಅಹೋರಾತ್ರಿ ಧರಣಿಯಿಂದ ಗಳಿಸಿದ್ದೇನು ?

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಸದನದಲ್ಲಿ ವಾಗ್ದಾಳಿ ನಡೆಸುವುದಕ್ಕೆ ಕಾಂಗ್ರೆಸ್ ಬಳಿ ಯಾವುದೇ ಅಸಗಳು ಇರಲಿಲ್ಲ. ಇದದ್ದು ಹಿಜಾಬ್. ಆದರೆ ಅದಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕೈಹಾಕಿದಂತೆ ಎನ್ನುವ ಎಚ್ಚರಿಕೆ ವರಿಷ್ಠರಿಂದ ಬರುತ್ತಿದ್ದಂತೆ, ಅದನ್ನು ಕೈಬಿಟ್ಟರು.

ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಒಂದಿಲ್ಲೊಂದು ಗದ್ದಲ ನಡೆಯುತ್ತಲೇ ಇದೆ. ಅದರಲ್ಲಿಯೂ ಹಿಜಾಬ್ ವಿವಾದದಿಂದ ಅಂತಾ ರಾಷ್ಟ್ರೀಯ ಮಟ್ಟಕ್ಕೆ ಕರ್ನಾಟಕ ಸುದ್ದಿಯಾಗಿದೆ. ಇದಾದ ಬಳಿಕ ಈಶ್ವರಪ್ಪ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಅಹೋರಾತ್ರಿ ಧರಣಿ ಆರಂಭಿಸಿದೆ. ಧರಣಿ ಆರಂಭವಾಗಿ ವಾರ ಕಳೆಯುತ್ತ ಬಂದರೂ, ಸರಕಾರವಾಗಲಿ, ಬಿಜೆಪಿಯಾಗಲೀ ಹೆಚ್ಚೇನೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೂ ಸತತ ಆರು ದಿನಗಳ ಅಹೋರಾತ್ರಿ ಧರಣಿಯಿಂದ ಕಾಂಗ್ರೆಸ್ ಗಳಿಸಿದ್ದೇನು ಎನ್ನುವ ಪ್ರಶ್ನೆಗೆ ಉತ್ತರ ಕಾಂಗ್ರೆಸ್ ಬಳಿಯೇ ಇಲ್ಲ.

ಹೌದು, ಈಶ್ವರಪ್ಪ ಅವರ ವಿರುದ್ಧ ನಿಲುವಳಿ ಸೂಚನೆಯಿಂದ ಆರಂಭವಾದ ತಿಕ್ಕಾಟ, ಅಹೋರಾತ್ರಿ ಧರಣಿಗೆ ತಿರುಗಿ, ಕಲಾಪ ರಜಾದಿನದಲ್ಲಿಯೂ ಕಾಂಗ್ರೆಸ್ ಶಾಸಕರು ವಿಧಾನಸೌಧದಲ್ಲಿಯೇ ಗಟ್ಟಿಯಾಗಿ ಕೂತು ಧರಣಿ ನಡೆಸಿದರು. ಆದರೆ ಅದಕ್ಕೆ ಸಿಗಬೇಕಾದ ಮಾನ್ಯತೆ ಮಾತ್ರ ಸಿಕ್ಕಂತೆ ಕಾಣಲಿಲ್ಲ. ಅಹೋರಾತ್ರಿ ಧರಣಿಯಾದರೂ, ಜನರಲ್ಲಿ ಹೆಚ್ಚು ಸುದ್ದಿ ಏಕೆ ಮಾಡಲಿಲ್ಲ ಎಂದರೆ, ಧರಣಿಗೆ ಆಯ್ಕೆ ಡಿಕೊಂಡ ವಿಷಯ ಎನ್ನುವುದು ಸ್ಪಷ್ಟ. ಅಷ್ಟಕ್ಕೂ ಕಾಂಗ್ರೆಸ್ ಆರಂಭಿಸಿದ ಧರಣಿಗೆ ಇದ್ದ ಕಾರಣವೇನು ಎನ್ನುವುದನ್ನು ನೋಡಲೇ ಬೇಕು. ಹಿಜಾಬ್ ವಿವಾದದ ಸಮಯದಲ್ಲಿ ಪರ-ವಿರೋಧದ ಚರ್ಚೆ ನಡೆಯುವಾಗ ಸಚಿವ ಈಶ್ವರಪ್ಪ ಅವರು ‘ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ’ ಎನ್ನುವ ಹೇಳಿಕೆ ನೀಡಿದ್ದಾರೆ.

ಇದು ದೇಶದ್ರೋಹ ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಕೆಲಸವೆಂದು ಆರೋಪಿಸಿ ಉಭಯ ಸದನದಲ್ಲಿ ಧರಣಿ ಆರಂಭ ವಾಯಿತು. ಆದರೆ ಇದು ಉಗ್ರ ಸ್ವರೂಪಕ್ಕೆ ಹೋಗಿದ್ದು, ಡಿಕೆಶಿ ಹಾಗೂ ಈಶ್ವರಪ್ಪ ಅವರ ನಡುವೆ ನಡೆದ ವೈಯಕ್ತಿಕ ನಿಂದನೆಯ ಬಳಿಕ. ಆದರೆ ಈಶ್ವರಪ್ಪ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ನೋಡಿದರೆ, ‘ಇವತ್ತು ಹಿಂದು ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ.
ಹಿಂದುತ್ವ ಬಗ್ಗೆ ಚರ್ಚೆಯಾಗುತ್ತಿದೆ. ಅಯೊಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಾಗಿ ಹೇಳಿದಾಗ ನಗುತ್ತಿದ್ದರು. ಈಗ? ಹಾಗೇ ಯಾವುದೊ ಕಾಲದಲ್ಲಿ ನೂರಿನ್ನೂರು, ೫೦೦ ವರ್ಷದಲ್ಲಿ ಭಗವಾಧ್ವಜವೇ ರಾಷ್ಟ್ರಧ್ವಜವಾಗಬಹುದು; ಗೊತ್ತಿಲ್ಲ ನನಗೆ. ಎಲ್ಲಿ ಬೇಕಾದರು ಹಾರಬಹುದು. ಅದಕ್ಕೆ ನಾನು ಹೇಳ್ತಾ ಇರೊದು.

ಈಗ ನಾವೆಲ್ಲರೂ ಕೂಡ ಸಂವಿಧಾನ ಬದ್ಧವಾಗಿ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಅದಕ್ಕೆ ಗೌರವ ಕೊಡಲೇ ಬೇಕು. ಯಾರೇ ಅದಕ್ಕೆ ಗೌರವ ಕೊಡೊದನ್ನು ತಪ್ಪಿದರೆ ಅವನು ರಾಷ್ಟ್ರ ದ್ರೋಹಿ ಯಾಗುತ್ತಾನೆ’ ಎಂದು ಹೇಳಿದ್ದಾರೆ. ಆದರೆ ಆ ಸಮದಲ್ಲಿ ಪತ್ರಕರ್ತರೊಬ್ಬರು ‘ಕೆಂಪುಕೋಟೆ ಮೇಲೆ ಹಾರಬಹುದೇ’ ಎಂದಿದ್ದಕ್ಕೆ, ‘ಆಗಬಹುದು. ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ. ಆದ್ದರಿಂದ ಅಂದು ಈಶ್ವರಪ್ಪ ಕೊಟ್ಟಿರುವ ಹೇಳಿಕೆಯ ವಿಡಿಯೊಂದನ್ನು ಸರಿಯಾಗಿ ಕೇಳಿಸಿಕೊಂಡರೆ, ಕಾಂಗ್ರೆಸ್‌ನವರ ವಾದವೇ ಬಿದ್ದು ಹೋಗುತ್ತದೆ.

ಇದು ಕಾಂಗ್ರೆಸ್ ಗೊತ್ತಿಲ್ಲವೆಂದಲ್ಲ. ಆದರೆ ಅವರಿಗೆ ಈ ಬಾರಿ ಬಿಜೆಪಿ ವಿರುದ್ಧ ಸದನದಲ್ಲಿ ವಾಗ್ದಾಳಿ ನಡೆಸುವುದಕ್ಕೆ ಯಾವುದೇ ಅಸಗಳು ಇರಲಿಲ್ಲ. ಇದದ್ದು ಹಿಜಾಬ್. ಆದರೆ ಅದಕ್ಕೆ ಕೈ ಹಾಕಿದರೆ ಜೇನುಗೂಡಿಗೆ ಕೈಹಾಕಿದಂತೆ ಎನ್ನುವ ಎಚ್ಚರಿಕೆ ವರಿಷ್ಠರಿಂದ ಬರುತ್ತಿದ್ದಂತೆ, ಅದನ್ನು ಕೈಬಿಟ್ಟರು. ಆದರೆ ಈಶ್ವರಪ್ಪ ಹೇಳಿಕೆಯ ಒಂದು ಅಂಶವನ್ನಿಟ್ಟುಕೊಂಡು ರಾಜೀನಾಮೆಗೆ ಆಗ್ರಹಿಸಲು ಕಾಂಗ್ರೆಸ್ ಯೋಜನೆ ರೂಪಿಸಿತ್ತು. ಆದರೆ ಗುರುವಾರದ ಸದನದಲ್ಲಿ ಈಶ್ವರಪ್ಪ ಅವರು ಡಿಕೆ ವಿರುದ್ಧ ಏಕವಚನದಲ್ಲಿ ಬೈಯ್ದಾಡಿಕೊಂಡಿದ್ದರಿಂದ ‘ಅಧ್ಯಕ್ಷರ
ಪ್ರತಿಷ್ಠೆ’ಗೆ ಬಿದ್ದು ಈ ಅಹೋರಾತ್ರಿ ಧರಣಿ ಆರಂಭವಾಗಿದೆ.

ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹುತೇಕರು ಈ ಯೋಜನೆಯನ್ನು ಆರಂಭದಲ್ಲಿ ಒಪ್ಪಿರಲಿಲ್ಲ. ಬಳಿಕ ಅನಿವಾರ್ವಾಗಿ ಕುಳಿತುಕೊಳ್ಳುವಂತಾಯಿತು. ಅಹೋರಾತ್ರಿ ಧರಣಿ ಎನ್ನುವುದು ಇದೇ ಮೊದಲಲ್ಲ. ಈ ಹಿಂದೆ ಗಣಿ ಹಗರಣವನ್ನು ಬಯಲಿಗೆ ಎಳೆಯಲು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಶಾದಿಭಾಗ್ಯವನ್ನು ವಿರೋಧಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಸೇರಿದಂತೆ ಇನ್ನು ಹಲವು ನಡೆದಿವೆ. ಈ ಎಲ್ಲ ಸಂದರ್ಭದಲ್ಲಿಯೂ ಪ್ರತಿಪಕ್ಷಕ್ಕೆ ನಿರ್ದಿಷ್ಟ ಗುರಿಯಿತ್ತು.

ಒತ್ತಡಕ್ಕೆ ಮಣಿದು ಕ್ರಮ ಅಥವಾ ತನಿಖೆಗೆ ಆದೇಶಿಸಲು ಸರಕಾರಕ್ಕೂ ಒಂದು ದಾರಿಯಿತ್ತು. ಆದರೆ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ನಡೆಸುತ್ತಿರುವ ಧರಣಿಯಲ್ಲಿ ಈ ಎರಡೂ ಇಲ್ಲ. ಏಕೆಂದರೆ, ಈಶ್ವರಪ್ಪ ಅವರು ನೀಡಿರುವ ಆಡಿಯೊ ಕೇಳಿಸಿಕೊಂಡರೆ ಕಾನೂನಾತ್ಮಕ ವಾಗಿ ಅವರು ಎಲ್ಲಿಯೂ ತಪ್ಪು ಮಾಡಿಲ್ಲ. ಆದ್ದರಿಂದ ಯಾವುದೇ ತನಿಖೆ ನಡೆಸಿದರೂ ಅವರ ವಿರುದ್ಧ ‘ಕ್ಲೀನ್ ಚಿಟ್’ ಸಿಗುವುದು ಸ್ಪಷ್ಟ. ಇನ್ನೊಂದು ರಾಜೀನಾಮೆ ವಿಷಯದಲ್ಲಿ ಸರಕಾರ ಹಾಗೂ ಪಕ್ಷ ಈಗಾಗಲೇ ಸ್ಪಷ್ಟ ನಿಲುವು ತಗೆದುಕೊಂಡಿರುವುದರಿಂದ ಅದು ಸಾಧ್ಯವಿಲ್ಲ.

ಅಷ್ಟಕ್ಕೂ ಬಿಜೆಪಿ ನಾಯಕರ ಪ್ರಕಾರ ಈಶ್ವರಪ್ಪ ತಪ್ಪೇ ಮಾಡಿಲ್ಲ. ಹೀಗಿರುವಾಗ ರಾಜೀನಾಮೆ, ವಜಾ ಆದರೂ ಹೇಗೆ? ವಾರವಲ್ಲ ತಿಂಗಳ ಕಾಲ ಅಹೋರಾತ್ರಿ ಧರಣಿ ನಡೆಸಿದರೂ, ಕಾಂಗ್ರೆಸ್ ಬೇಡಿಕೆ ಈಡೇರುವುದಕ್ಕೆ ಸಾಧ್ಯವೇ ಇಲ್ಲ. ಈ ವಿಷಯ ಕಾಂಗ್ರೆಸ್ ನಾಯಕ ರಿಗೆ ಗೊತ್ತಿಲ್ಲವೆಂದಲ್ಲ. ಅಹೋರಾತ್ರಿ ಧರಣಿಯಲ್ಲಿರುವ ಶಾಸಕರನ್ನು ಪ್ರತ್ಯೇಕವಾಗಿ ಮಾತನಾಡಿಸಿದರೆ, ಕಾಂಗ್ರೆಸಿನ ಈ ನಿಲುವಿಗೆ ಅವರಲ್ಲಿಯೇ ವಿರೋಧವಿದೆ. ‘ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದೊಳಗೆ ಧರಣಿ ಮಾಡುವ ಬದಲು, ಹೊರಗೆ ಮಾಡಿದ್ದರೆ ಪಕ್ಷಕ್ಕೆ ಲಾಭವಾದರೂ ಆಗುತ್ತಿತ್ತು. ಸದನವನ್ನು ಬಿಟ್ಟು ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ್ದರೆ, ಕ್ಷೇತ್ರಗಳಲ್ಲಿ ಕೊಂಚ ಲಾಭವಾದರೂ ಆಗುತ್ತಿತ್ತು. ಆದರೆ ಅದ್ಯಾವುದನ್ನೂ ಮಾಡದೇ, ವಾರಗಟ್ಟಲೇ ಸದನದಲ್ಲಿ ಕೂರುವ ಈ ನಿರ್ಧಾರದಿಂದ ನಮಗೆ ನಷ್ಟವಾಗುತ್ತಿದೆ’ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಅಹೋರಾತ್ರಿ ಧರಣಿಯ ಸಂಪೂರ್ಣ ವಿಫಲವಾಗಲೂ, ಪಕ್ಷದೊಳಗಿನ
ತಂತ್ರ ಗಾರಿಕಾ ತಂಡವೇ ನೇರ ಹೊಣೆ ಎನ್ನುವುದು ಸ್ಪಷ್ಟ.

ಕಾಂಗ್ರೆಸ್‌ನ ಈ ವೈಫಲ್ಯವನ್ನು ಸಂಪೂರ್ಣವಾಗಿ ತಮ್ಮ ಪರವಾಗಿ ಮಾಡಿಕೊಂಡಿದ್ದು ಮಾತ್ರ ಬಿಜೆಪಿ. ಬಹುತೇಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಂತೆ, ಸದನವನ್ನು ಅನಿಽಷ್ಟಾವಽಗೆ ಮಂದೂಡಿ, ಧರಣಿಗೆ ಬ್ರೇಕ್ ಹಾಕಿಸುತ್ತಾರೆ ಎನ್ನುವ ಮಾತಿತ್ತು. ಆದರೆ ಸರಕಾರ ಮಾತ್ರ
ಶುಕ್ರವಾರದ ಸದನವನ್ನು ಸೋಮವಾರಕ್ಕೆ ಮುಂದೂಡುವ ಮೂಲಕ, ಕಾಂಗ್ರೆಸ್ ನಾಯಕರೆಲ್ಲನ್ನು ಸದನದಲ್ಲಿಯೇ ‘ಲಾಕ್’ ಮಾಡಿದರು. ಇದರಿಂದ ಬೆಂಗಳೂರಿನಲ್ಲಿ ಶಾಸಕರು ಏನಾದರೂ ಮಾತನಾಡಬಹುದಾಗಿತ್ತು, ಹೊರತು ಬೆಂಗಳೂರಿನ ಆಚೆಯಲ್ಲಿ ಕಳೆದ ಒಂದು ವಾರದಿಂದ ಕಾಂಗ್ರೆಸ್ ಶಾಸಕರೇ ಇಲ್ಲವಾಗಿದೆ. ಇದನ್ನು ಬಳಸಿಕೊಂಡು ಸ್ಥಳೀಯ ಮಟ್ಟದಲ್ಲಿ ಬಿಜೆಪಿ ತನ್ನದೇ ಆದ ಪ್ಲಾನ್ ರೂಪಿಸುತ್ತಿದೆ. ಇದರಿಂದ ಹೊಡೆತ ಬಿದಿದ್ದು ಕಾಂಗ್ರೆಸ್‌ಗೆ ಮಾತ್ರ.

ಇನ್ನು ಅಹೋರಾತ್ರಿ ಧರಣಿ ಆರಂಭಿಸಿದ ಮೊದಲ ದಿನ ಸಾರ್ವಜನಿಕ ವಲಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮ ಗಳಲ್ಲಿ ಅಹೋರಾತ್ರಿ ಧರಣಿಯ ಬಗ್ಗೆ ಒಂದಷ್ಟು ಚರ್ಚೆಗಳು ನಡೆದವು. ಸಚಿವರೊಬ್ಬರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆದರೂ, ಇದರ ಮೂಲ ಹಿಜಾಬ್ ಆಗಿದ್ದರಿಂದ ಮುಸ್ಲಿಮರು ಸಹ ಒಂದು ಹಂತಕ್ಕೆ ಕಾಂಗ್ರೆಸ್‌ನ ನಡೆಯನ್ನು ಒಪ್ಪಿಕೊಂಡು, ಬೆಂಬಲಿಸಿ ದರು. ಆದರೆ ಇದಾದ ಬಳಿಕ ಕಲಾಪದ ರಜೆ ದಿನದಲ್ಲಿಯೂ ಕಾಂಗ್ರೆಸ್ ಶಾಸಕರು ನಡೆಸಿದ ಅಹೋರಾತ್ರಿ ಧರಣಿಗೆ ಮನ್ನಣೆ ಸಿಗದೇ ಹೋಯಿತು. ಬೆಳಗ್ಗೆಯಿಂದ ಸಂಜೆಯ ತನಕ ನಾನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ ಬಂದು ಅಹೋರಾತ್ರಿ ಧರಣಿಯ ಹೆಸರಲ್ಲಿ ವಿಧಾನ ಮಂಡಲದೊಳಗೆ ನಿದ್ರಿಸುವ ನಡೆಯಿಂದ ಸಾರ್ವಜನಿಕವಾಗಿಯೂ ಈ ಧರಣಿಯ ಮಹತ್ವ ಕುಂದಿತ್ತು ಎಂದರೆ ತಪ್ಪಾಗುವುದಿಲ್ಲ.
ಕಲಾಪ ಆರಂಭವಾದರೆ ಒಂದು ದಿನಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸಬೇಕಾಗುತ್ತದೆ.

ಸದನ ನಡೆಯಲಿ, ಬಿಡಲು ಇಷ್ಟು ಹಣವನ್ನು ಖರ್ಚಾಗುವುದು ಆಗುವುದೇ ಸರಿ. ಅದರಲ್ಲಿಯೂ ಇದೀಗ ಕಳೆದ ಐದು ದಿನಗಳಿಂದ
ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ದಿನಕ 24 ಗಂಟೆ ಉಭಯ ಕಲಾಪ, ಮೊಗಸಾಲೆ ಸೇರಿದಂತೆ ಶಾಸಕರಿರುವ ಸ್ಥಳದಲ್ಲಿ ವಿದ್ಯುತ್ ಇರಲೇಬೇಕು. ಇದರೊಂದಿಗೆ ಅಹೋರಾತ್ರಿ ಧರಣಿ ನಡೆಸುವ ಶಾಸಕರಿಗೆ ತರಹೇವಾರಿ ಆಹಾರವನ್ನು ಸಾರ್ವಜನಿಕರ ಹಣದಲ್ಲಿಯೇ ತರಿಸಲಾಗುತ್ತದೆ (ಈಗ ಎರಡು ದಿನದಿಂದ ಈ ಮೊತ್ತವನ್ನು ಕಾಂಗ್ರೆಸ್ ಪಕ್ಷ ನೀಡುತ್ತಿದೆ ಎನ್ನುವುದು ಬೇರೆ ಮಾತು). ಇನ್ನು ವಿಧಾನಸೌಧಕ್ಕೆ ಹೆಚ್ಚುವರಿ ಭದ್ರತೆ, ಕೆಲಸ ಕಾರ್ಯಕ್ಕೆ ಒಂದಿಷ್ಟು ಖರ್ಚು.

ತಾರ್ತಿಕ ಅಂತ್ಯವೇ ಕಾಣಲು ಸಾಧ್ಯವಿಲ್ಲದ ವಿಷಯವೊಂದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಶಾಸಕರು ಕಳೆದ ಆರು ದಿನಗಳಿಂದ ಅಹೋರಾತ್ರಿ ಧರಣಿ ಗಳಿಸಿದ್ದು ಮಾತ್ರ ಶೂನ್ಯ. ಇನ್ನಾದರೂ ಪ್ರತಿಪಕ್ಷವಾಗಿ ಕಾಂಗ್ರೆಸ್ ಹೋರಾಟದ ರೂಪುರೇಷೆ ರೂಪಿಸುವ ಮೊದಲು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಇಲ್ಲವಾದಲ್ಲಿ, ಈಗ ಸಿಲುಕಿರುವಂತೆ ಮುಜುಗರಕ್ಕೆ ಸಿಲುಕಬೇಕಾಗುತ್ತದೆ.