Sunday, 8th September 2024

ಗಾಂಧಿಗಳ ಆಯ್ಕೆ ಖರ್ಗೆಯೇ ಆಗಿದ್ದೇಕೆ ?

ಅಶ್ವತ್ಥಕಟ್ಟೆ

ranjith.hoskere@gmail.com

ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ, ಸೋನಿಯಾ ಗಾಂಧಿ ಪ್ರಧಾನಿಯಾಗಲಿಲ್ಲ ಎನ್ನುವುದನ್ನು ಬಿಟ್ಟರೆ, ಮನಮೋಹನ್ ಸಿಂಗ್ ಅವರು ಪ್ರತಿಯೊಂದು ತೀರ್ಮಾನವನ್ನು ‘ಗಾಂಧಿ ಕುಟುಂಬ’ ತಲುಪಿಸಿಯೇ ತೆಗೆದುಕೊಳ್ಳುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ.

ಲೋಕಸಭಾ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿಯಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಆರೇಳು ತಿಂಗಳು ಬಾಕಿಯಿದೆ. ಪಂಚರಾಜ್ಯ ಚುನಾವಣೆಗೆ ಕೆಲ ತಿಂಗಳು ಬಾಕಿಯಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಹಲವು ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ‘ಕಾಯಂ’ ಅಧ್ಯಕ್ಷರನ್ನು ಕೂರಿಸುವುದೂ ಒಂದು.

ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ ಕ್ಷಣದಿಂದ ‘ಹಂಗಾಮಿ ಅಧ್ಯಕ್ಷ’ರಾಗಿರುವ ಸೋನಿಯಾ ಗಾಂಧಿ ಅವರು ‘ಕಾಯಂ ಅಧ್ಯಕ್ಷ’ರಾಗುವ ಮನಸು ಮಾಡಲಿಲ್ಲ.

ಆದರೆ ಪೂರ್ಣಾವಧಿ ಎಐಸಿಸಿ ಅಧ್ಯಕ್ಷಕ್ಕೆ ಬೇಡಿಕೆ ಹೆಚ್ಚಾದಂತೆ, ಗಾಂಧಿಯೇತರ ಕುಟುಂಬದ ಅಧ್ಯಕ್ಷರನ್ನು ಮಾಡಲು ಸೋನಿಯಾ, ರಾಹುಲ್ ಮುಂದಾಗಿದ್ದಾರೆ. ಹಲವು ಮೇಲಾಟಗಳ ಬಳಿಕ ಗಾಂಧಿ ಕುಟುಂಬ, ತಮ್ಮ ನಿಷ್ಠ, ಪರಮಾಪ್ತ ವಲಯದಲ್ಲಿರುವ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದಿನ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಲು ಒಪ್ಪಿಗೆ ನೀಡಿದೆ. ಈ ಮೂಲಕ ಕರ್ನಾಟಕದ ದಲಿತ ನಾಯಕನೊಬ್ಬನಿಗೆ ಪಕ್ಷದ ಮಟ್ಟದಲ್ಲಿ ನೀಡಬಹುದಾದ ಬಹುದೊಡ್ಡ ಹುದ್ದೆಯನ್ನು ಕಾಂಗ್ರೆಸ್ ನೀಡಲು ಸಿದ್ಧತೆ ನಡೆಸಿಕೊಂಡಿದೆ.

ಹಾಗೇ ನೋಡಿದರೆ ಗಾಂಽ ಕುಟುಂಬದ ಹೊರಗಿನವರು ಎಐಸಿಸಿ ಅಧ್ಯಕ್ಷರಾಗಬೇಕು ಎನ್ನುತ್ತಿದ್ದಂತೆ, ಸೋನಿಯಾ ಹಾಗೂ ರಾಹುಲ್ ಆಪ್ತ ವಲಯದಲ್ಲಿರುವ ಹಲವರ ಹೆಸರುಗಳು ಕೇಳಿಬಂದಿತ್ತು. ಇನ್ನೇನು ಅಶೋಕ್ ಗೆಹಲೋಥ್ ಅವರ ಹೆಸರು ಅಂತಿಮವಾಯಿತು ಎನ್ನುವ ಹೊತ್ತಿಗೆ, ರಾಜಸ್ಥಾನದಲ್ಲಿ ‘ಬಂಡಾಯದ ಬಿಸಿ’ ತಟ್ಟಿದ್ದರಿಂದ ಗೆಹ್ಲೋಥ್ ಸ್ಪರ್ಧೆಗೆ ಕಾಂಗ್ರೆಸ್ ಅಽನಾಯಕಿ ಒಪ್ಪಿಗೆ ನೀಡಲಿಲ್ಲ. ಗಾಂಧಿ ಕುಟುಂಬ ಅತಿಹೆಚ್ಚು ನಂಬಿದ್ದ ಗೆಹ್ಲೋಥ್ ಅವರಿಂದ ಈ ರೀತಿ ಬಂಡಾಯದ ಬಿಸಿ
ಕಾಣಿಸಿಕೊಳ್ಳುತ್ತಿದ್ದಂತೆ, ಸೋನಿಯಾ ಹಾಗೂ ರಾಹುಲ್ ವಿಚಲಿತರಾಗಿದ್ದರೂ ಹೌದು.

ಏಕೆಂದರೆ, ನಾಲ್ಕೈದು ದಶಕದಿಂದ ನಿಷ್ಠರಾಗಿದ್ದ ವ್ಯಕ್ತಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಈ ರೀತಿ ಶಾಸಕರನ್ನು ಬಂಡಾಯ ವೇಳಿಸುತ್ತಾರೆಂದು ಅಂದುಕೊಂಡಿರಲಿಲ್ಲ. ಗೆಹ್ಲೋಥ್ ಅವರ ಈ ನಡೆಯ ಬಳಿಕ, ಅವರಿಗೆ ಕಾಣಿಸಿದ್ದು ‘ಮಲ್ಲಿಕಾರ್ಜುನ ಖರ್ಗೆ’
ಎಂದರೆ ತಪ್ಪಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ಸ್ಥಾನ ಘೋಷಣೆಯಾಗುತ್ತಿದ್ದಂತೆ ಖರ್ಗೆ ಹೆಸರು ಮುನ್ನಲೆಗೆ ಬಂದರೂ, ದಕ್ಷಿಣ ಭಾರತದ ಕಾರ್ಡ್ ಅನ್ನು ಮುಂದಿಟ್ಟು ಗೆಹಲೋಥ್ ಅವರಿಗೆ ಮಣೆ ಹಾಕಿತ್ತು.

ಆದರೆ ಗೆಹಲೋಥ್ ಅವರ ಬದಲಿಗೆ ಯಾರು ಎನ್ನುವುದು ಬಂದಾಗ ಗಾಂಧಿ ಕುಟುಂಬಕ್ಕೆ ‘ಖರ್ಗೆ’ ಹೆಸರಲ್ಲದೇ ಬೇರೆ
ಯಾವುದೂ ಸಿಗಲಿಲ್ಲ. ರಾಹುಲ್ ಹಾಗೂ ಸೋನಿಯಾ ಈ ರೀತಿಯ ತೀರ್ಮಾನ ಕೈಗೊಳ್ಳುವುದಕ್ಕೆ ಪ್ರಮುಖ ಕಾರಣವೆಂದರೆ, ಕಳೆದ ನಾಲ್ಕೈದು ದಶಕದಿಂದ ಮಲ್ಲಿಕಾರ್ಜುನ ಖರ್ಗೆ ಅವರ ನಡೆದುಕೊಂಡಿರುವ ರೀತಿ. ಹೌದು, ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದ ದಿನದಿಂದಲೂ ಕಾಂಗ್ರೆಸ್‌ಗೆ ಅವರು ನಿಷ್ಠೆಯಿಂದ ಇದ್ದಾರೆ. ಎಂತಹದೇ ಸಂಕಷ್ಟ ಸಮಯದಲ್ಲಿಯೂ ಪಕ್ಷವನ್ನು ಬಿಟ್ಟುಕೊಟ್ಟವರಲ್ಲ ಹಾಗೂ ಪಕ್ಷದ ವಿರುದ್ಧ ಮಾತನಾಡಿದವರಲ್ಲ.

ಖರ್ಗೆ ಅವರ ಈ ನಡೆಯಿಂದ ಅನೇಕ ಬಾರಿ ಅವರಿಗೆ ‘ಲಾಸ್’ ಆಗಿದೆ. ಆದರೂ ಪಕ್ಷ ನಿಷ್ಠೆ ಬಿಟ್ಟವರಲ್ಲ. ಕೇವಲ ಪಕ್ಷ ನಿಷ್ಠೆ ಮಾತ್ರವಲ್ಲದೇ, ಗಾಂಧಿ ಕುಟುಂಬಕ್ಕೆ ಅವರು ತೋರಿರುವ ನಿಷ್ಠೆಯೂ ಅಷ್ಟೇ ಇದೆ. ಇಂದಿರಾ ಗಾಂಧಿ ಕಾಲದಿಂದಲೂ, ಗಾಂಧಿ
ಕುಟುಂಬದ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅವರು ಎಂದಿಗೂ ‘ಗಾಂಧಿ ಕುಟುಂಬ’ದ ವಿರುದ್ಧ ಮಾತನಾಡಿದ್ದು ಇಲ್ಲ. ಕಾಂಗ್ರೆಸ್‌ನ ಅತಿರಥ ಮಹಾರಥರು ಪಕ್ಷದಿಂದ ದೂರಾದಾಗಲೂ ಇಂದಿರಾ ಗಾಂಧಿ ಅರೊಂದಿಗೆ ನಿಂತದ್ದು ಖರ್ಗೆ ಅವರಿಗೆ ಇರುವ ಪ್ಲಸ್ ಪಾಯಿಂಟ್.

ಇಂದಿರಾ ಗಾಂಧಿ ಅವರ ಕಾಲದಿಂದ ಪಕ್ಷದಲ್ಲಿ ಮುನ್ನೆಲೆಗೆ ಬಂದ ಖರ್ಗೆ ಅವರು ಬಳಿಕ, ರಾಜೀವ್, ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರೊಂದಿಗೂ ಅದೇ ಆತ್ಮೀಯತೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿ ಸಂಘಟನೆಯ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿ ಹೋರಾಟ ಹಾದಿಯಲ್ಲಿಯೇ ಸಾಗಿದರೂ, ಖರ್ಗೆ ಅವರೆಂದಿಗೂ ಪಕ್ಷದ ವೇದಿಕೆಯಲ್ಲಿ ಮಾತ್ರ ‘ಹೋರಾಟ’
ಹಾದಿ ತುಳಿಯಲಿಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ದಲಿತ ಮತಗಳು ಚದುರದಂತೆ ದಶಕಗಳ ಕಾಲ ನೋಡಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯದಲ್ಲಿ ಒಮ್ಮೆಯಾದರೂ ‘ಮುಖ್ಯಮಂತ್ರಿ’ಯಾಗಬೇಕು ಎನ್ನುವ ಹಂಬಲವಿತ್ತು. ಆ ಆಸೆಯನ್ನು ಹೈಕಮಾಂಡ್ ಈಡೇರಿಸದೇ ಇದ್ದರೂ, ಅದನ್ನು ಮನಸಿಗೆ ತಗೆದುಕೊಳ್ಳದೇ ಹೈಕಮಾಂಡ್ ನ ಸಂಕಷ್ಟದಲ್ಲಿ ಹೆಜ್ಜೆಯಾದರು.

೨೦೦೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು, ಮನಸು ಮಾಡಿದ್ದರೆ ಮುಖ್ಯಮಂತ್ರಿಯಾಗಬಹುದಾಗಿತ್ತು. ಆದರೆ ಅದನ್ನು ವರಿಷ್ಠರ ಸೂಚನೆಯಂತೆ ಧರ್ಮಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಬಳಿಕ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ‘ತಿಕ್ಕಾಟ’ ಶುರುವಾಗು ತ್ತಿದ್ದಂತೆ ‘ಕರ್ನಾಟಕಕ್ಕೆ ಸಿದ್ದರಾಮಯ್ಯಗೆ-ದೆಹಲಿಗೆ ಖರ್ಗೆ’ ಎನ್ನುವ ಸೂತ್ರವನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಿ ದಾಗಲೂ ಎದುರು ಮಾತನಾಡದೇ ಒಪ್ಪಿಕೊಂಡು ದೆಹಲಿಗೆ ಹೊರಟರು.

ಬಳಿಕ ಯುಪಿಎ ಸರಕಾರದ ಅವಽಯ ೨೦೦೯ರಿಂದ ೨೦೧೩ರವರೆಗೆ ಕಾರ್ಮಿಕ ಸಚಿವರಾಗಿ ನಿರ್ವಹಣೆ ಮಾಡಿದ್ದರು. ಅವರಿಗೆ ಇಷ್ಟವಾದ ಖಾತೆಯಾದರೂ, ಅದನ್ನು ಹಿಂಪಡೆದು ರೈಲ್ವೇ ಖಾತೆ ನೀಡಿದಾಗಲೂ ಎದುರು ಮಾತನಾಡದೇ
ಒಪ್ಪಿಕೊಂಡು ನಡೆದರು. ಇನ್ನು ೨೦೧೮ರ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಖರ್ಗೆ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಲು ಹಲವು ತಿಂಗಳು ಗಾಂಽ ಕುಟುಂಬ ಯೋಚಿಸಿತ್ತು. ಕೊನೆಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅನ್ನು
ಸಮರ್ಥಿಸಿಕೊಳ್ಳುವುದಕ್ಕೆ ಗಟ್ಟಿ ಧ್ವನಿ ಬೇಕು ಎನಿಸಿದಾಗ ಖರ್ಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ,
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ನೇಮಕ ಮಾಡಲಾಯಿತು.

ಅದನ್ನು ಸಹ ಎದುರು ಮಾತನಾಡದೇ ಒಪ್ಪಿಕೊಂಡಿದ್ದರು. ಈ ಎಲ್ಲ ‘ಗುಣ’ಗಳೇ ಗಾಂಧಿ ಕುಟುಂಬಕ್ಕೆ ಖರ್ಗೆ ಅವರ
ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡುವಂತೆ ಮಾಡಿದ್ದು. ಇದನ್ನು ಹೊರತುಪಡಿಸಿ, ಸಾರ್ವಜನಿಕ ಜೀವನದಲ್ಲಿ
ಮುತ್ಸದ್ದಿತನವನ್ನು ಖರ್ಗೆ ಹೊಂದಿರುವುದರಿಂದ, ಗಾಂಧಿಯೇತರ ನಾಯಕರು ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿ ಕೊಳ್ಳುತ್ತಾರೆ ಎನ್ನುವ ವಿಶ್ವಾಸ ಅನೇಕರಲ್ಲಿದೆ.

ಇನ್ನು ಅಧ್ಯಕ್ಷರಾದ ಬಳಿಕ ಖರ್ಗೆ ಅವರು ನೇರಾನೇರ ಹೋರಾಡಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ವಿರುದ್ಧ. ದಕ್ಷಿಣ ಭಾರತದವರಾದರೂ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಉತ್ತಮ ಹಿಡಿತವಿದ್ದು, ಮೋದಿ ಅವರನ್ನು ನೇರವಾಗಿ ‘ಅಟ್ಯಾಕ್’ ಮಾಡುವ ವಾಕ್ ಶಕ್ತಿಯೂ ಖರ್ಗೆ ಅವರಿಗೆ ಇದೆ. ದಕ್ಷಿಣ ಭಾರತ ಎನ್ನುವ ಅಂಶವನ್ನು ಬದಿಗಿಟ್ಟು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಒಪ್ಪಿರುವುದಕ್ಕೆ ಇದೂ ಸಹ ಒಂದು ಕಾರಣ.

ಈ ಎಲ್ಲದರ ನಡುವೆ ಗಾಂಽಯೇತರ ವ್ಯಕ್ತಿ ಅಧ್ಯಕ್ಷ ಸ್ಥಾನಕ್ಕೆ ಕೂರುತ್ತಿರುವುದು ಸತ್ಯ. ಆದರೆ ಪಕ್ಷದ ಯಾವುದೇ ತೀರ್ಮಾನ ವನ್ನು ತಗೆದುಕೊಳ್ಳುವಾಗ, ‘ಗಾಂಧಿ ಕುಟುಂಬದ ತೀರ್ಮಾನಕ್ಕೆ ಒಪ್ಪಿಗೆ ಒತ್ತುವಂತಹ’ ಕೆಲಸಕ್ಕೆ ಮುಂದಾದರೆ, ಪಕ್ಷ ಇನ್ನಷ್ಟು ಕಳಂಕ ಹೊತ್ತುಕೊಳ್ಳುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ, ಸೋನಿಯಾ ಗಾಂಧಿ ಪ್ರಧಾನಿಯಾಗಲಿಲ್ಲ  ಎನ್ನುವುದನ್ನು ಬಿಟ್ಟರೆ, ಮನಮೋಹನ್ ಸಿಂಗ್ ಅವರು ಪ್ರತಿಯೊಂದು ತೀರ್ಮಾನವನ್ನು ‘ಗಾಂಧಿ ಕುಟುಂಬ’ ತಲುಪಿಸಿಯೇ ತೆಗೆದುಕೊಳ್ಳುತ್ತಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವೇ.

ಆದ್ದರಿಂದ ಈ ಸಂಕಷ್ಟದಿಂದ ಪಕ್ಷ ಹೊರಬರಬೇಕಾದರೆ, ಅಧ್ಯಕ್ಷರನ್ನು ಮಾತ್ರ ಬದಲಾಯಿಸುವುದಲ್ಲ. ಬದಲಿಗೆ, ಇಡೀ
ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಗಾಂಧಿ ಕುಟುಂಬವನ್ನು ಹೊರಗಿಟ್ಟು ಪಕ್ಷ ಸಂಘಟನೆ ಸಾಧ್ಯವಿಲ್ಲ ಎನ್ನುವುದು ಒಪ್ಪುವ ಮಾತಾದರೂ, ಅಧ್ಯಕ್ಷರಾದವರಿಗೆ ‘ಉಸಿರಾಡಲು ಅವಕಾಶ’ ನೀಡಬೇಕು. ಇಲ್ಲದಿದ್ದರೆ, ವ್ಯವಸ್ಥೆ ಬದಲಾಗುವುದು ಕಷ್ಟದ ವಿಷಯ.

ಏನೇ ಆಗಲಿ, ಕರ್ನಾಟಕದವರೊಬ್ಬರು ಕಾಂಗ್ರೆಸ್ ಚುಕ್ಕಾಣಿ ಹಿಡಿಯುತ್ತಿರುವುದು ರಾಜ್ಯದ ಪಾಲಿಗೆ ಉತ್ತಮ ವಿಷಯ. ಆದರೆ ಖರ್ಗೆ ಅಧ್ಯಕ್ಷರಾದ ಬಳಿಕ, ಪಕ್ಷದ ತೀರ್ಮಾನಗಳಿಗಿಂತ ಹೆಚ್ಚಾಗಿ ‘ಸೋಲಿನ ಹೊಣೆ’ಯನ್ನು ಹೊರಿಸುವ ಮೂಲಕ ರಾಜ ಕೀಯದ ಸಂದ್ಯಾ ಕಾಲದಲ್ಲಿ ಅವರ ‘ಪ್ರೋಫೈಲ್’ಗೆ ನೆಗೆಟಿವ್ ಪಾಯಿಂಟ್ಸ್ ಸೇರದಿರಲಿ. ದಲಿತ ನಾಯಕನೊಬ್ಬ ಚುಕ್ಕಾಣಿ ನೀಡುವುದು ಮಾತ್ರವಲ್ಲದೇ, ಸ್ವತಂತ್ರವಾಗಿ ಅಧಿಕಾರ ನಿರ್ವಹಿಸಲು ಸಾಧ್ಯವೇ ಎನ್ನುವುದೇ ಈಗಿರುವ ಪ್ರಶ್ನೆ.

error: Content is protected !!