Sunday, 1st December 2024

‌Yagati Raghu Nadig Column: ಪುಟ್ಟಿ ರೇಗಿದಳೆಂದು ಸಿಟ್ಟಿಗೇಳದಿರಿ, ಪ್ಲೀಸ್…‌

ರಸದೌತಣ

ಯಗಟಿ ರಘು ನಾಡಿಗ್

naadigru@gmail.com

ನಿಮ್ಮ ಖಾತೆಗೆ ಹಣವನ್ನು ತುಂಬಲೆಂದು ಬ್ಯಾಂಕಿನ ಕೌಂಟರ್ ಬಳಿಯ ಸರತಿ ಸಾಲಿನಲ್ಲಿ ನಿಂತಿರುತ್ತೀರಿ. ಕೌಂಟರ್ ಒಳಗೆ ಕೂತಿರುವುದು
ಒಬ್ಬ ಹೆಣ್ಣು ಮಗಳು. ನಿಮ್ಮ ಸರದಿ ಬರುತ್ತಿದ್ದಂತೆ ರೊಕ್ಕದ ಕಂತೆಯನ್ನು ಕೌಂಟರ್‌ನ ಕಿಂಡಿಯಲ್ಲಿ ತೂರಿಸಿ, ಆಕೆಯೆಡೆಗೆ ಒಂದು ನಸುನಗು ಬೀರುತ್ತೀರಿ. ಬಲವಂತಕ್ಕೆಂಬಂತೆ ಆಕೆ ನಗುವಿನ ಪ್ರತಿಕ್ರಿಯೆಯಿತ್ತು, ನೀವು ನೀಡಿದ ಹಣವನ್ನು ಎಣಿಸತೊಡಗುತ್ತಾಳೆ.

ನಡುನಡುವೆ ತಲೆಯ ನರಗಳನ್ನು ತನ್ನ ಕೋಮಲ ಬೆರಳುಗಳಿಂದ ನವಿರಾಗಿ ಸವರಿಕೊಳ್ಳುತ್ತಾಳೆ. ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ ನೀವು ಆಕೆಯನ್ನು ಏನೋ ಕೇಳುತ್ತೀರಿ. ಅದಕ್ಕವಳು ನಿಮ್ಮ ಮುಖ ನೋಡದೆಯೇ, ಅಗತ್ಯ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡಿ ಕೆಲಸದಲ್ಲಿ ವ್ಯಸ್ತಳಾಗುತ್ತಾಳೆ. ನೀವು ಕೌಂಟರ್‌ನ ಕಿಂಡಿಯಲ್ಲಿ ಇಣುಕಿ ಮತ್ತಾವುದೋ ವಿಷಯಕ್ಕೆ ಸ್ಪಷ್ಟೀಕರಣ ಬಯಸಿ ಅದೇನೋ ಪ್ರಶ್ನಿಸುತ್ತೀರಿ.. ಅಷ್ಟೇ! ಇದ್ದಕ್ಕಿದ್ದಂತೆ ನಿಮ್ಮ ಮೇಲೆ ರೇಗಿ ಬಿಡುತ್ತಾಳೆ. “ಆಗ್ಲೇ ಹೇಳಿದೆನಲ್ಲಾ ರೀ, ಎಷ್ಟು ಸಲ ಕೇಳ್ತೀರಿ…?” ಅಂತ ಮುಖ ಗಂಟುಹಾಕಿ ಕೊಳ್ಳುತ್ತಾಳೆ. ವಾಸ್ತವವಾಗಿ, ಬ್ಯಾಂಕ್ ವ್ಯವಹಾರ ಪರಿಪೂರ್ಣವಾಗಿ ಗೊತ್ತಿಲ್ಲದ ನೀವು, ಸಹಜವಾಗಿಯೇ ಅದೇನೋ ಮಾಹಿತಿ ಕೇಳಿರುತ್ತೀರಿ.

ಅದೇನೂ ತಪ್ಪು ನಡೆ ಆಗಿರುವುದಿಲ್ಲ. ಆದರೂ ಆ ಹುಡುಗಿ ನಿಮ್ಮ ಮೇಲೆ ಸಿಡುಕಿರುತ್ತಾಳೆ. ಉಳಿದ ಗ್ರಾಹಕರೆದುರು ಆಕೆ ಹೀಗೆ ವರ್ತಿಸಿದ್ದು ಕಂಡು ನಿಮಗೆ ಕೊಂಚ ಬೇಸರವಾಗುತ್ತದೆ.

ಹೀಗಾಗಿ, “ಅದು ಹಾಗಲ್ಲ ಮೇಡಂ… ನಾನು ಏನು ಕೇಳೋಕ್ಕೆ ಹೊರಟಿದ್ದೆ ಅಂದ್ರೇ…” ಅಂತ ಆಕೆಗೆ ನೀವು ಏನೋ ಸಮಜಾಯಿಷಿ ಕೊಡೋಕೆ ಹೋಗ್ತೀರಿ. ಆದರೆ ಆಕೆ ನೋಡನೋಡುತ್ತಿದ್ದಂತೆಯೇ ‘ಅಮ್ಮಾ’ ಎಂದು ಸಣ್ಣಗೆ ನರಳಿ ಎರಡೂ ಕೈಗಳಿಂದ ತನ್ನ ತಲೆಯನ್ನು ಒತ್ತಿ ಹಿಡಿದು
ಕೊಳ್ಳುತ್ತಾಳೆ. ನೀವು ದಿಗ್ಭ್ರಾಂತರಾಗುತ್ತೀರಿ. ಇವಿಷ್ಟನ್ನೂ ನೋಡುತ್ತ ಸರತಿ ಸಾಲಿನಲ್ಲಿ ನಿಮ್ಮ ಹಿಂದೆ ನಿಂತಿದ್ದವರು, “ಆಯ್ತೇನ್ರೀ ನಿಮ್ಮ ರಾಮಾಯಣಾ… ಬೇಗ ಮುಗಿಸ್ರೀ… ನಿಮ್ ಥರಾ ನಾವೂ ಕಸ್ಟಮರ್‌ಗಳೇ ಕಣ್ರೀ…” ಎಂದು ಮಾತಲ್ಲೇ ತಿವಿಯುತ್ತಾರೆ.

ವಿನಾಕಾರಣ ಆಪಾದಿತನ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂದಿದ್ದಕ್ಕೆ ಹಣೆಬರಹವನ್ನು ಹಳಿದುಕೊಂಡು “ಈ ಯಮ್ಮ ಮಾಡ್ತಾ ಇರೋದು ಕ್ಯಾಷಿಯರ್ ಕೆಲಸ, ಆದ್ರೆ ತನ್ನನ್ನು ಫೈನಾನ್ಸ್ ಮಿನಿಸ್ಟ್ರು ಅಂತ ಅಂದ್ಕೊಂಡು ಬಿಟ್ಟಿದ್ದಾಳೆ ಅನ್ಸುತ್ತೆ….” ಅಂತ ಗೊಣಗಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡುತ್ತೀರಿ.

***

ಆಕೆ ಹದಿನೆಂಟರ ಚೆಲುವೆ. ಕಾಲೇಜಿನ ಗ್ರಂಥಾಲಯದ ‘ರೆಫರೆನ್ಸ್ ಸೆಕ್ಷನ್’ನಲ್ಲಿ ಕೂತು, ಎದುರಿನ ಟೇಬಲ್ ಮೇಲೆ ಒಂದೆರಡು ಪುಸ್ತಕಗಳನ್ನು ಹರಡಿಕೊಂಡಿದ್ದಾಳೆ. ಕೆಲ ಹೊತ್ತಿನ ನಂತರ ಅಲ್ಲಿಗೆ ಬರುವ ಹುಡುಗನೊಬ್ಬ “ಹಾಯ್, ಹೇಗಿದ್ದೀಯಾ…?” ಎಂದು ‘ವಿಶ್’ ಮಾಡಿ ನಸುನಗುತ್ತಾ, ಅವಳೆದುರಿನ ಖಾಲಿ ಕುರ್ಚಿಯಲ್ಲಿ ಕೂರುತ್ತಾನೆ. ಆದರೆ ಪ್ರತಿಯಾಗಿ ಅವಳು ನಗುವುದೂ ಇಲ್ಲ, ‘ವಿಶ್’ ಮಾಡುವುದೂ ಇಲ್ಲ; ಬದಲಿಗೆ ದುರ್ದಾನ ತೆಗೆದುಕೊಂಡವಳಂತೆ ತನ್ನ ಪುಸ್ತಕ ಮತ್ತು ಬ್ಯಾಗ್ ಎತ್ತಿಕೊಂಡು ‘ಛೇ!’ ಎಂದು ಸಣ್ಣಗೆ ಸಿಡುಕುತ್ತಾ ಅಲ್ಲಿಂದ ‘ರುಮ್ಮನೆ’ ಹೊರಟು ಬಿಡುತ್ತಾಳೆ. ಈ ಸೀನ್ ನೋಡಿ ಸುತ್ತಮುತ್ತಲ ಟೇಬಲ್‌ನಲ್ಲಿದ್ದವರೆಲ್ಲಾ ತಮ್ಮತಮ್ಮಲ್ಲೇ ಮುಸುಮುಸು ನಗತೊಡಗುತ್ತಾರೆ.

ಹಾಗೆ ‘ವಿಶ್’ ಮಾಡಿ ನಸುನಗುತ್ತಾ ಅವಳೆದುರು ಕೂತ ಆ ಹುಡುಗ ಅನಾಮಿಕನೇನಲ್ಲ, ಆಕೆಯ ಸಹಪಾಠಿಯೇ! ಹಿಂದಿನ ದಿನವಷ್ಟೇ ಆಕೆಯೊಂದಿಗೆ ಕಾಲೇಜು ಪಕ್ಕದ ಪಾರ್ಕಿನಲ್ಲಿ ಹೆಜ್ಜೆ ಹಾಕಿದವನು, ಕ್ಯಾಂಟೀನ್‌ನಲ್ಲಿ ಐಸ್‌ಕ್ರೀಂ ಸವಿದವನು. ಆತ ಪುಂಡು-ಪೋಕರಿ ಹುಡುಗನೇ ನಲ್ಲ, ಸಭ್ಯನೇ. ಇಷ್ಟಾಗಿಯೂ ತನ್ನ ಗೆಳತಿ ಹಾಗೆ ಒರಟಾಗಿ ನಡೆದು ಕೊಂಡಿದ್ದನ್ನು ಕಂಡು, “ಈ ಹುಡುಗಿಯರೇ ಹೀಗೆ… ” ಎಂದು ಏನೇನೋ ಕಲ್ಪಿಸಿಕೊಳ್ಳತೊಡಗುತ್ತಾನೆ. ಅಕ್ಕಪಕ್ಕದಲ್ಲಿ ಬಂದು ನಿಲ್ಲೋ ಗೆಳೆಯರೆನಿಸಿಕೊಂಡ ಮೂತಿಗಳು, “ಬಿಡು ಗುರೂ, ಇವಳೊಬ್ಬಳೇನಾ ತ್ರಿಪುರ ಸುಂದರಿ?! ನೀನು ಮನಸ್ಸು ಮಾಡಿದ್ರೆ ಇಂಥ ನೂರು ಹುಡುಗೀರು ಕ್ಯೂನಲ್ಲಿ ನಿಲ್ತಾರೆ…” ಅಂತ ಪಕ್ಕವಾದ್ಯ ನುಡಿಸುತ್ತವೆ! ಹುಡುಗಿಯ ಬಿರುಸು ಪ್ರತಿಕ್ರಿಯೆಯ ಫಲಾನುಭವಿಯಾದ ಹುಡುಗ ಭಾರವಾದ ಹೆಜ್ಜೆಗಳನ್ನಿಡುತ್ತಲೇ ಅಲ್ಲಿಂದ ತೆರಳುತ್ತಾನೆ…

***

ಬರೆಯುತ್ತಾ ಹೋದರೆ, ಇಂಥ ಹತ್ತಾರು ನಿದರ್ಶನಗಳನ್ನು ಇಲ್ಲಿ ಹರವಿಡಬಹುದು. ನಿಮ್ಮಲ್ಲೂ ಕೆಲವರು ಇಂಥ ‘ಒರಟು ಅಭಿವ್ಯಕ್ತಿಯ, ವಿಲಕ್ಷಣ ಪ್ರತಿಕ್ರಿಯೆಯ’ ಫಲಾನುಭವಿಗಳಾಗಿರಬಹುದು. ಆದರೆ, ಇಂಥ ಘಟನೆ ಜರುಗಿದ ಕ್ಷಣಕ್ಕೆ ಮತ್ತು ನಂತರವೂ ನಾವು “ಛೇ, ಯಾವತ್ತೂ ಹೀಗಾಡ ದವಳು ಇವತ್ತು ಹೀಗೆ ಮಾಡಿಬಿಟ್ಟಳಲ್ಲಾ?” ಎಂದು ಅಸಮಾಧಾನವನ್ನೂ, ಕೊಂಚ ಆಕ್ರೋಶವನ್ನೂ ಹೊಮ್ಮಿಸುತ್ತೇವೆಯೇ ಹೊರತು, ಆ ಹುಡುಗಿಯ ಅಂಥ ವರ್ತನೆಗೆ ಕಾರಣವೇನಿರಬಹುದು ಎಂಬುದನ್ನು ವಿಶ್ಲೇಷಿಸುವುದು ಕಮ್ಮಿ. ಏಕೆಂದರೆ, ಹೇಳಿ ಕೇಳಿ ನಮ್ಮದು ಗಂಡುಜಾತಿ; ಹೆಣ್ಣಿನ ಕೆಲ ತಲ್ಲಣಗಳು ನಮಗೆ ಹೇಗೆ ತಾನೇ ಅರ್ಥವಾಗಬೇಕು?!

ಹೆಣ್ಣಿನ ದೇಹ ಮತ್ತು ಮನಸ್ಸನ್ನು ಕವಿಗಳು ‘ಸುಮಕೋಮಲ’ ಎಂದು ವರ್ಣಿಸುವುದಿದೆ. ಹೆಣ್ಣಿನ ‘ಹೂವಿನಂಥ’ ಮನಸ್ಸೂ ಹೀಗೆ ಕೆಲವೊಮ್ಮೆ ನಮ್ಮಂಥವರಿಗೆ ‘ಮುಳ್ಳಿನಂತೆ’ ಚುಚ್ಚಿದರೆ, ಆಕೆ ವಿನಾಕಾರಣ ರೇಗಿದಳು ಎನಿಸಿದರೆ ಪ್ರತಿಯಾಗಿ ನಾವೂ ರೇಗಬಾರದು, ಸಿಟ್ಟಿಗೇಳಬಾರದು. ಕಾರಣ, ಪ್ರಾಯಶಃ ಆಕೆ ತನ್ನದೇ ಆದ ದೈಹಿಕ ಮತ್ತು ಮಾನಸಿಕ ತಲ್ಲಣಗಳಲ್ಲಿ ಬಂದಿಯಾಗಿರುವ ಸಾಧ್ಯತೆ ಇರುತ್ತದೆ. ಅಂಥ ತಲ್ಲಣಗಳ ಪೈಕಿ ಒಂದು- ಆಕೆಯ ಮಾಸಿಕ ಋತುಧರ್ಮ.

ಹೌದು, ಮೇಲೆ ಉಲ್ಲೇಖಿಸಿದಂತೆ ನಮ್ಮಂಥ ಗಂಡುಜಾತಿಗೆ ಅದು ಅರ್ಥವಾಗದ, ಅನುಭವಕ್ಕೆ ಬಾರದ ಸಂಗತಿ. ಆದರೆ ‘ಪರಾನುಭೂತಿ ಶಕ್ತಿ’ಯನ್ನಾದರೂ ನಾವು ರೂಢಿಸಿಕೊಂಡು ಆ ತಲ್ಲಣವನ್ನು ಗ್ರಹಿಸಬಹುದಲ್ಲವೇ? ಹುಡುಗಿಯು ಬಾಲ್ಯಾವಸ್ಥೆ ಯಿಂದ ಹದಿಹರೆಯಕ್ಕೆ ಅಡಿಯಿಡುವ ಸಂದರ್ಭದಲ್ಲಿ ಆಗುವ ಒಂದಷ್ಟು ದೈಹಿಕ-ಮಾನಸಿಕ ಸ್ಥಿತ್ಯಂತರಗಳಲ್ಲಿ ಪ್ರಮುಖವಾದದ್ದು ಆಕೆಯ ಋತುಚಕ್ರದ ಆರಂಭ. ಆಡುಭಾಷೆಯಲ್ಲಿ ಇದನ್ನು ‘ಮುಟ್ಟಾಗುವುದು’ ಎಂದೇ ಕರೆಯವುದು ವಾಡಿಕೆ. ಇಂಥ ಘಟ್ಟದಲ್ಲಿ ಕೆಲ ಹೆಣ್ಣು ಮಕ್ಕಳಲ್ಲಿ ಅವ್ಯಕ್ತ ಭಯ, ಮುಜುಗರ, ಹಿಂಜರಿಕೆ ಇತ್ಯಾದಿಗಳು ಮಡುಗಟ್ಟಿರುತ್ತವೆ.

ಬದಲಾದ ತಮ್ಮ ಶಾರೀರಿಕ-ಮಾನಸಿಕ ಸ್ಥಿತಿಗತಿಗೆ ಅವರಿನ್ನೂ ಹೊಂದಿಕೊಂಡಿರುವುದಿಲ್ಲ, ಜತೆಗೆ ಋತುಚಕ್ರದ ನಿರ್ವಹಣೆಯ ಕಿರಿಕಿರಿಯೂ ಅವರಲ್ಲಿ ಒಂದಷ್ಟು ಗೊಂದಲವನ್ನು ಹುಟ್ಟುಹಾಕಿರುತ್ತದೆ. ಇದು ಎಲ್ಲ ಹೆಣ್ಣು ಮಕ್ಕಳಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ ಅಥವಾ ತೊಂದರೆಯ ತೀವ್ರತೆ ಒಂದೇ ಸ್ತರದಲ್ಲಿರುವುದಿಲ್ಲ. ಇಂಥ ವೇಳೆ ಕೆಲವರು ತಮಗೆ ಆಗುತ್ತಿರುವ ತೊಂದರೆಗಳನ್ನು ಹೊರಗೆ ಹೇಳಿಕೊಳ್ಳಲಾಗದೇ ಮುಚ್ಚಿಟ್ಟು ಕೊಂಡು ಒಳಗೊಳಗೇ ತಲ್ಲಣ ಮತ್ತು ವೇದನೆಯನ್ನು ಅನುಭವಿಸುವುದುಂಟು.

ಬದಲಾಗುತ್ತಿರುವ ಜೀವನಶೈಲಿ, ಆಹಾರಕ್ರಮ, ಕಾಲಘಟ್ಟ, ಹವಾಮಾನ ಅಥವಾ ಪರಿಸರದ ಪ್ರಭಾವ, ದೈಹಿಕ ಚಟುವಟಿಕೆಗಳ ಪ್ರಮಾಣದಲ್ಲಿನ ಕುಸಿತ ಇತ್ಯಾದಿ ಕಾರಣಗಳಿಂದಾಗಿ ಈಗೆಲ್ಲಾ 10-11 ವಯಸ್ಸಿನ ಹೆಣ್ಣು ಮಕ್ಕಳಲ್ಲೇ ಋತುಚಕ್ರ ಶುರುವಾಗುತ್ತಿರುವಂಥ ನಿದರ್ಶನಗಳನ್ನು ನೀವು ಕೇಳಿರಬಹುದು. ಮನೆಯಲ್ಲಿನ ಇಂಥ ಹೆಣ್ಣು ಮಕ್ಕಳನ್ನು ‘ಪುಟ್ಟೀ…’ ಎಂದು ಕರೆಯುವುದು ಬಹುತೇಕರ ವಾಡಿಕೆ ಎಂದಿಟ್ಟುಕೊಳ್ಳೋಣ. ಒಮ್ಮೆ ಕಲ್ಪಿಸಿಕೊಳ್ಳಿ ಅಥವಾ ಪ್ರಶ್ನಿಸಿಕೊಳ್ಳಿ: ನಮ್ಮ-ನಿಮ್ಮ ಮನೆಯ ‘ಪುಟ್ಟಿ’ ಇಂಥ ಬದಲಾದ ದೇಹಸ್ಥಿತಿ-ಮನಸ್ಥಿತಿಗಳಲ್ಲಿ ಅದಿನ್ನೆಂಥಾ ಮಾನಸಿಕ ಆಂದೋಲನಗಳಿಗೆ ತನ್ನನ್ನು ಒಡ್ಡಿಕೊಂಡಿರಬಹುದು?

‘ಮಾಸಿಕ ಮುಟ್ಟಿನ’ ಈ ಘಟ್ಟದಲ್ಲಿ ‘ಪುಟ್ಟಿ’ಯ ಗರ್ಭಾಶಯದ ಒಳಪದರವು ಬೆಳೆಯುತ್ತದೆ; ಒಂದೊಮ್ಮೆ ಸಂತಾನೋತ್ಪತ್ತಿ ಕ್ರಿಯೆ/ಫಲವಂತಿಕೆ ನಡೆಯದಿದ್ದಲ್ಲಿ ಆ ಒಳಪದರವು ಕಳಚಿಕೊಂಡು ರಕ್ತಸ್ರಾವದ ರೂಪದಲ್ಲಿ ದೇಹದಿಂದ ಹೊರಬರುತ್ತದೆ. ನೆನಪಿಡಿ, ‘ರಕ್ತಸ್ರಾವ’ ಎಂಬುದು ಸಾಮಾನ್ಯ ಸಂದರ್ಭದಲ್ಲೂ ಒಂದಷ್ಟು ಮಟ್ಟಿಗೆ ಸುಸ್ತು ಮಾಡುವ ಬಾಬತ್ತು.

ಹೀಗಿರುವಾಗ ಕನಿಷ್ಠ ಪಕ್ಷ ನಾಲ್ಕೈದು ದಿನಗಳವರೆಗೆ ಹೀಗೆ ಆಗಿಂದಾಗ್ಗೆ ರಕ್ತಸ್ರಾವವಾಗುವ ಈ ಘಟ್ಟದಲ್ಲಿ ‘ಪುಟ್ಟಿ’ ದೈಹಿಕವಾಗಿ ಮತ್ತು ಮಾನಸಿಕ ವಾಗಿ ಅದೆಷ್ಟು ನಿತ್ರಾಣಳಾಗಿರಬೇಕು? (ಅಧಿಕ ರಕ್ತಸ್ರಾವದಿಂದಾಗಿ ಕೆಲವರಿಗೆ ಕಣ್ಣು ಕತ್ತಲಿಟ್ಟುಕೊಂಡು ಬರುವುದೂ ಇದೆ). ಹಾಗಂತ ದಿನನಿತ್ಯದ ಕೆಲಸಗಳನ್ನು ಆಕೆ ನಿಲ್ಲಿಸಲಾದೀತೇ? ಶಾಲಾ-ಕಾಲೇಜಿಗೆ ಹೋಗಲೇಬೇಕು, ಕಚೇರಿ ಕೆಲಸಗಳನ್ನು ನಿರ್ವಹಿಸಲೇಬೇಕು. ಇಲ್ಲದಿದ್ದರೆ ಬದುಕಿನ ಬಂಡಿ ಸಾಗುವುದಾದರೂ ಹೇಗೆ? ಒಟ್ಟಾರೆ ಯಾಗಿ, ಒಂಥರಾ ಅಸ್ಥಿರ ತಳಹದಿಯ ಮೇಲೇ ಹೆಜ್ಜೆ ಹಾಕುತ್ತಿರುವಂತಿರುತ್ತದೆ ಆಕೆಯ ಸ್ಥಿತಿ. ಇದು ‘ಪುಟ್ಟಿ’ಯಲ್ಲಿ ಮಾತ್ರವಲ್ಲದೆ, ಕೆಲವು ಮಧ್ಯವಯಸ್ಕ ಮಹಿಳೆಯರಲ್ಲೂ ಕಾಣಬರುವಂಥದ್ದೇ.

ಇಂಥ ಸಂದರ್ಭಗಳಲ್ಲಿ ಸೊಂಟ ನೋವು, ಕೆಲವೊಮ್ಮೆ ತಲೆನೋವು, ಮೈ-ಕೈ ಹಿಂಡಿದಂತಾಗುವಿಕೆ ಸೇರಿದಂತೆ, ಆಯಾ ಹೆಣ್ಣು ಮಕ್ಕಳ ದೇಹ ಪ್ರಕೃತಿಯನ್ನಾಧರಿಸಿ ವಿಭಿನ್ನ ಸ್ವರೂಪದ ಅಸಹಜ ಕದಲಿಕೆಗಳು ಆಗಬಹುದು. ಹೀಗೆ, ಅವ್ಯಕ್ತ ನೋವಿನ ಚಾಟಿ ತನ್ನನ್ನು ಅಪ್ಪಳಿಸುತ್ತಿದ್ದರೂ ಅದನ್ನು ನುಂಗಿಕೊಂಡು ಮನೆಯಲ್ಲಿ, ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ನಗುನಗುತ್ತಲೇ ಕಾರ್ಯನಿರ್ವಹಿಸಿಕೊಂಡು ಹೋಗಬೇಕಾದ ‘ಸಾಂದರ್ಭಿಕ ಶಿಶು’ ಆಗುತ್ತಾಳೆ ನಮ್ಮ-ನಿಮ್ಮೆಲ್ಲರ ‘ಪುಟ್ಟಿ’. ಅಂಥ ವೇಳೆ, ತನ್ನ ಪಾಡಿಗೆ ತನ್ನನ್ನು ಬಿಟ್ಟರೆ ಸಾಕು, ಯಾರೂ ತನ್ನನ್ನು ಅನವಶ್ಯಕ ವಾಗಿ ಮಾತಾಡಿಸುವುದು, ಕಿರಿಕಿರಿ ಮಾಡುವುದು ಬೇಡ ಎಂಬ ಧೋರಣೆ ಅವಳಲ್ಲಿ ಕೆನೆಗಟ್ಟಿರುತ್ತದೆ… ಈಗ ಹೇಳಿ, ತಿಂಗಳಿಗೊಮ್ಮೆ ಇಂಥ ದೈಹಿಕ-ಮಾನಸಿಕ ತುಮುಲಗಳ ಹಾದಿಯಲ್ಲಿ ಹೆಜ್ಜೆಹಾಕಬೇಕಾಗಿ ಬರುವ ‘ಪುಟ್ಟಿ’, ತನ್ನೊಳಗಿನ ಅವ್ಯಕ್ತ ಆಂದೋಲನದ ಕಾರಣದಿಂದಾಗಿ ನಮ್ಮ ಮೇಲೆ ಅಕಸ್ಮಾತ್ ರೇಗಿದರೆ, ಅಸಮಾಧಾನ ತೋರಿದರೆ, ನಮ್ಮನ್ನು ನಿರ್ಲಕ್ಷಿಸಿದರೆ, ನಾವೂ ಪ್ರತಿಯಾಗಿ ಸಿಟ್ಟಿಗೇಳುವುದು ತರವೇ? ‘ಪುಟ್ಟಿ’ಯ ಕುರಿತಾಗಿ ಸಹಾನುಭೂತಿ ಇಟ್ಟುಕೊಳ್ಳೋಣ.

ಹಾಗಂತ ನಾವು ಆಕೆಯನ್ನು ‘ಅಬಲೆ’ ಎಂದು ಪರಿಭಾವಿಸುವುದು, ಲೊಚಗುಟ್ಟಿಕೊಂಡು ಅನುಕಂಪ ತೋರಿಸುವುದು ಬೇಡ. ಏಕೆಂದರೆ, ‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು’ ಆಗಿರುವ ಆಕೆ ಅದನ್ನು ಇಷ್ಟಪಡುವುದೂ ಇಲ್ಲ. ಆಕೆಯ ಆ ಕ್ಷಣದ ತಲ್ಲಣ ನಮ್ಮಂಥವರಿಗೆ ಅರ್ಥವಾದರೆ ಸಾಕು. ಈ ಸೃಷ್ಟಿಯಲ್ಲಿ ಜನ್ಮ ಕೊಡುವ ಶಕ್ತಿ ಇರುವುದು ಎರಡಕ್ಕೇ- ಅವುಗಳಲ್ಲಿ ಒಂದು ‘ಮಣ್ಣು’, ಇನ್ನೊಂದು
‘ಹೆಣ್ಣು’. ಈ ‘ಹೆಣ್ಣು’ ತಾಯಿಯಾಗಿ ನಮ್ಮನ್ನು ಪೊರೆಯುತ್ತಾಳೆ, ಗೆಳತಿಯಾಗಿ ಬದುಕಿಗೆ ಆಹ್ಲಾದ ತುಂಬುತ್ತಾಳೆ, ಮಡದಿಯಾಗಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾಳೆ.

ಅಷ್ಟೇಕೆ, ಗೃಹಿಣಿಯಾಗೇ ಉಳಿದುಬಿಟ್ಟರಂತೂ ಜೀವನ ಪರ್ಯಂತ ‘ಸಂಬಳವಿಲ್ಲದ ದುಡಿಮೆ’ಗೆ ಒಡ್ಡಿಕೊಂಡು, ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುವ ಎತ್ತಿನಂತೆ ಸಂಸಾರದ ನೊಗವನ್ನು ಹೊತ್ತು ಸಾಗುತ್ತಾಳೆ. ಹೀಗಾಗಿ ಅವಳನ್ನು ಆಧರಿಸಿ ಗೌರವಿಸುವುದು ನಮ್ಮ ಆದ್ಯತೆಯಾಗ
ಬೇಕು.

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ (ಎಲ್ಲಿ ಸ್ತ್ರೀಯರಿಗೆ ಗೌರವ, ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ) ಎಂಬ ದಿವ್ಯವಾಣಿಯು ನಮ್ಮ ಪೂರ್ವಜರಿಂದ ಹೊಮ್ಮಿರುವುದು ಈ ಆಶಯದಿಂದಲೇ.

‘ಹೆಣ್ಣು’ ಎಂಬ ಅನುಪಮ ಸೃಷ್ಟಿಯನ್ನು ಸದಾಶಯದ ರಕ್ಷಾಬಂಧನದಲ್ಲಿ ಕಾಪಿಟ್ಟುಕೊಳ್ಳುವುದು ನಮ್ಮ ಧರ್ಮವಾಗಲಿ. ಆಕೆಯ ನೋವನ್ನು ನಾವು ಹಂಚಿಕೊಳ್ಳಲಾಗದಿದ್ದರೂ, ಅದನ್ನು ಮತ್ತಷ್ಟು ಹೆಚ್ಚಿಸದಿರೋಣ. ಒಟ್ಟಿನಲ್ಲಿ, ‘ಪುಟ್ಟಿ’ ರೇಗಿದಳೆಂದು ಸಿಟ್ಟಿಗೇಳದಿರೋಣ…ಬರೆಯುತ್ತಾ ಹೋದರೆ, ಇಂಥ ಹತ್ತಾರು ನಿದರ್ಶನಗಳನ್ನು ಇಲ್ಲಿ ಹರವಿಡಬಹುದು.

ನಿಮ್ಮಲ್ಲೂ ಕೆಲವರು ಇಂಥ ‘ಒರಟು ಅಭಿವ್ಯಕ್ತಿಯ, ವಿಲಕ್ಷಣ ಪ್ರತಿಕ್ರಿಯೆಯ’ ಫಲಾನುಭವಿಗಳಾಗಿರಬಹುದು. ಆದರೆ, ಇಂಥ ಘಟನೆ ಜರುಗಿದ ಕ್ಷಣಕ್ಕೆ ಮತ್ತು ನಂತರವೂ ನಾವು “ಛೇ, ಯಾವತ್ತೂ ಹೀಗಾಡದವಳು ಇವತ್ತು ಹೀಗೆ ಮಾಡಿಬಿಟ್ಟಳಲ್ಲಾ?” ಎಂದು ಅಸಮಾಧಾನವನ್ನೂ, ಕೊಂಚ ಆಕ್ರೋಶವನ್ನೂ ಹೊಮ್ಮಿಸುತ್ತೇವೆಯೇ ಹೊರತು, ಆ ಹುಡುಗಿಯ ಅಂಥ ವರ್ತನೆಗೆ ಕಾರಣವೇನಿರಬಹುದು ಎಂಬುದನ್ನು ವಿಶ್ಲೇಷಿಸುವುದು ಕಮ್ಮಿ. ಏಕೆಂದರೆ, ಹೇಳಿಕೇಳಿ ನಮ್ಮದು ಗಂಡುಜಾತಿ; ಹೆಣ್ಣಿನ ಕೆಲ ತಲ್ಲಣಗಳು ನಮಗೆ ಹೇಗೆ ತಾನೇ ಅರ್ಥವಾಗಬೇಕು?! ಹೆಣ್ಣಿನ ದೇಹ ಮತ್ತು ಮನಸ್ಸನ್ನು ಕವಿಗಳು ‘ಸುಮಕೋಮಲ’ ಎಂದು ವರ್ಣಿಸುವುದಿದೆ.

ಹೆಣ್ಣಿನ ‘ಹೂವಿನಂಥ’ ಮನಸ್ಸೂ ಹೀಗೆ ಕೆಲವೊಮ್ಮೆ ನಮ್ಮಂಥವರಿಗೆ ‘ಮುಳ್ಳಿನಂತೆ’ ಚುಚ್ಚಿದರೆ, ಆಕೆ ವಿನಾಕಾರಣ ರೇಗಿದಳು ಎನಿಸಿದರೆ ಪ್ರತಿಯಾಗಿ ನಾವೂ ರೇಗಬಾರದು, ಸಿಟ್ಟಿಗೇಳಬಾರದು. ಕಾರಣ, ಪ್ರಾಯಶಃ ಆಕೆ ತನ್ನದೇ ಆದ ದೈಹಿಕ ಮತ್ತು ಮಾನಸಿಕ ತಲ್ಲಣಗಳಲ್ಲಿ ಬಂದಿಯಾಗಿರುವ ಸಾಧ್ಯತೆ ಇರುತ್ತದೆ. ಅಂಥ ತಲ್ಲಣಗಳ ಪೈಕಿ ಒಂದು- ಆಕೆಯ ಮಾಸಿಕ ಋತುಧರ್ಮ. ಹೌದು, ಮೇಲೆ ಉಲ್ಲೇಖಿಸಿದಂತೆ ನಮ್ಮಂಥ ಗಂಡುಜಾತಿಗೆ ಅದು ಅರ್ಥವಾಗದ, ಅನುಭವಕ್ಕೆ ಬಾರದ ಸಂಗತಿ. ಆದರೆ ‘ಪರಾನುಭೂತಿ ಶಕ್ತಿ’ಯನ್ನಾದರೂ ನಾವು ರೂಢಿಸಿ ಕೊಂಡು ಆ ತಲ್ಲಣವನ್ನು ಗ್ರಹಿಸಬಹುದಲ್ಲವೇ? ಹುಡುಗಿಯು ಬಾಲ್ಯಾವಸ್ಥೆಯಿಂದ ಹದಿಹರೆಯಕ್ಕೆ ಅಡಿಯಿಡುವ ಸಂದರ್ಭದಲ್ಲಿ ಆಗುವ ಒಂದಷ್ಟು ದೈಹಿಕ-ಮಾನಸಿಕ ಸ್ಥಿತ್ಯಂತರಗಳಲ್ಲಿ ಪ್ರಮುಖವಾದದ್ದು ಆಕೆಯ ಋತುಚಕ್ರದ ಆರಂಭ. ಆಡುಭಾಷೆಯಲ್ಲಿ ಇದನ್ನು ‘ಮುಟ್ಟಾಗುವುದು’ ಎಂದೇ ಕರೆಯವುದು ವಾಡಿಕೆ.

ಇಂಥ ಘಟ್ಟದಲ್ಲಿ ಕೆಲ ಹೆಣ್ಣು ಮಕ್ಕಳಲ್ಲಿ ಅವ್ಯಕ್ತ ಭಯ, ಮುಜುಗರ, ಹಿಂಜರಿಕೆ ಇತ್ಯಾದಿಗಳು ಮಡುಗಟ್ಟಿರುತ್ತವೆ. ಬದಲಾದ ತಮ್ಮ ಶಾರೀರಿಕ-ಮಾನಸಿಕ ಸ್ಥಿತಿಗತಿಗೆ ಅವರಿನ್ನೂ ಹೊಂದಿಕೊಂಡಿರುವುದಿಲ್ಲ, ಜತೆಗೆ ಋತುಚಕ್ರದ ನಿರ್ವಹಣೆಯ ಕಿರಿಕಿರಿಯೂ ಅವರಲ್ಲಿ ಒಂದಷ್ಟು ಗೊಂದಲ ವನ್ನು ಹುಟ್ಟುಹಾಕಿರುತ್ತದೆ. ಇದು ಎಲ್ಲ ಹೆಣ್ಣು ಮಕ್ಕಳಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ ಅಥವಾ ತೊಂದರೆಯ ತೀವ್ರತೆ ಒಂದೇ ಸ್ತರದಲ್ಲಿ ರುವುದಿಲ್ಲ. ಇಂಥ ವೇಳೆ ಕೆಲವರು ತಮಗೆ ಆಗುತ್ತಿರುವ ತೊಂದರೆಗಳನ್ನು ಹೊರಗೆ ಹೇಳಿಕೊಳ್ಳಲಾಗದೇ ಮುಚ್ಚಿಟ್ಟುಕೊಂಡು ಒಳಗೊಳಗೇ ತಲ್ಲಣ ಮತ್ತು ವೇದನೆಯನ್ನು ಅನುಭವಿಸುವುದುಂಟು.

ಬದಲಾಗುತ್ತಿರುವ ಜೀವನಶೈಲಿ, ಆಹಾರಕ್ರಮ, ಕಾಲಘಟ್ಟ, ಹವಾಮಾನ ಅಥವಾ ಪರಿಸರದ ಪ್ರಭಾವ, ದೈಹಿಕ ಚಟುವಟಿಕೆಗಳ ಪ್ರಮಾಣದಲ್ಲಿನ ಕುಸಿತ ಇತ್ಯಾದಿ ಕಾರಣಗಳಿಂದಾಗಿ ಈಗೆಲ್ಲಾ 10-11 ವಯಸ್ಸಿನ ಹೆಣ್ಣು ಮಕ್ಕಳಲ್ಲೇ ಋತುಚಕ್ರ ಶುರುವಾಗುತ್ತಿರುವಂಥ ನಿದರ್ಶನಗಳನ್ನು ನೀವು ಕೇಳಿರಬಹುದು. ಮನೆಯಲ್ಲಿನ ಇಂಥ ಹೆಣ್ಣು ಮಕ್ಕಳನ್ನು ‘ಪುಟ್ಟೀ…’ ಎಂದು ಕರೆಯುವುದು ಬಹುತೇಕರ ವಾಡಿಕೆ ಎಂದಿಟ್ಟುಕೊಳ್ಳೋಣ.

ಒಮ್ಮೆ ಕಲ್ಪಿಸಿಕೊಳ್ಳಿ ಅಥವಾ ಪ್ರಶ್ನಿಸಿಕೊಳ್ಳಿ: ನಮ್ಮ-ನಿಮ್ಮ ಮನೆಯ ‘ಪುಟ್ಟಿ’ ಇಂಥ ಬದಲಾದ ದೇಹಸ್ಥಿತಿ-ಮನಸ್ಥಿತಿಗಳಲ್ಲಿ ಅದಿನ್ನೆಂಥಾ ಮಾನಸಿಕ ಆಂದೋಲನಗಳಿಗೆ ತನ್ನನ್ನು ಒಡ್ಡಿಕೊಂಡಿರಬಹುದು? ‘ಮಾಸಿಕ ಮುಟ್ಟಿನ’ ಈ ಘಟ್ಟದಲ್ಲಿ ‘ಪುಟ್ಟಿ’ಯ ಗರ್ಭಾಶಯದ ಒಳಪದರವು ಬೆಳೆಯುತ್ತದೆ; ಒಂದೊಮ್ಮೆ ಸಂತಾನೋತ್ಪತ್ತಿ ಕ್ರಿಯೆ/ಫಲವಂತಿಕೆ ನಡೆಯದಿದ್ದಲ್ಲಿ ಆ ಒಳಪದರವು ಕಳಚಿಕೊಂಡು ರಕ್ತಸ್ರಾವದ ರೂಪದಲ್ಲಿ ದೇಹದಿಂದ ಹೊರಬರುತ್ತದೆ.

ನೆನಪಿಡಿ, ‘ರಕ್ತಸ್ರಾವ’ ಎಂಬುದು ಸಾಮಾನ್ಯ ಸಂದರ್ಭದಲ್ಲೂ ಒಂದಷ್ಟು ಮಟ್ಟಿಗೆ ಸುಸ್ತು ಮಾಡುವ ಬಾಬತ್ತು. ಹೀಗಿರುವಾಗ ಕನಿಷ್ಠ ಪಕ್ಷ
ನಾಲ್ಕೈದು ದಿನಗಳವರೆಗೆ ಹೀಗೆ ಆಗಿಂದಾಗ್ಗೆ ರಕ್ತಸ್ರಾವವಾಗುವ ಈ ಘಟ್ಟದಲ್ಲಿ ‘ಪುಟ್ಟಿ’ ದೈಹಿಕವಾಗಿ ಮತ್ತು ಮಾನಸಿಕವಾಗಿ ಅದೆಷ್ಟು ನಿತ್ರಾಣ ಳಾಗಿರಬೇಕು? (ಅಧಿಕ ರಕ್ತಸ್ರಾವದಿಂದಾಗಿ ಕೆಲವರಿಗೆ ಕಣ್ಣು ಕತ್ತಲಿಟ್ಟುಕೊಂಡು ಬರುವುದೂ ಇದೆ). ಹಾಗಂತ ದಿನನಿತ್ಯದ ಕೆಲಸಗಳನ್ನು ಆಕೆ ನಿಲ್ಲಿಸಲಾದೀತೇ? ಶಾಲಾ-ಕಾಲೇಜಿಗೆ ಹೋಗಲೇಬೇಕು, ಕಚೇರಿ ಕೆಲಸಗಳನ್ನು ನಿರ್ವಹಿಸಲೇಬೇಕು.

ಇಲ್ಲದಿದ್ದರೆ ಬದುಕಿನ ಬಂಡಿ ಸಾಗುವುದಾದರೂ ಹೇಗೆ? ಒಟ್ಟಾರೆಯಾಗಿ, ಒಂಥರಾ ಅಸ್ಥಿರ ತಳಹದಿಯ ಮೇಲೇ ಹೆಜ್ಜೆ ಹಾಕು
ತ್ತಿರುವಂತಿರುತ್ತದೆ ಆಕೆಯ ಸ್ಥಿತಿ. ಇದು ‘ಪುಟ್ಟಿ’ಯಲ್ಲಿ ಮಾತ್ರವಲ್ಲದೆ, ಕೆಲವು ಮಧ್ಯವಯಸ್ಕ ಮಹಿಳೆಯರಲ್ಲೂ ಕಾಣಬರುವಂಥದ್ದೇ. ಇಂಥ ಸಂದರ್ಭಗಳಲ್ಲಿ ಸೊಂಟ ನೋವು, ಕೆಲವೊಮ್ಮೆ ತಲೆನೋವು, ಮೈ-ಕೈ ಹಿಂಡಿದಂತಾಗುವಿಕೆ ಸೇರಿದಂತೆ, ಆಯಾ ಹೆಣ್ಣು ಮಕ್ಕಳ ದೇಹಪ್ರಕೃ
ತಿಯನ್ನಾಧರಿಸಿ ವಿಭಿನ್ನ ಸ್ವರೂಪದ ಅಸಹಜ ಕದಲಿಕೆಗಳು ಆಗಬಹುದು.

ಹೀಗೆ, ಅವ್ಯಕ್ತ ನೋವಿನ ಚಾಟಿ ತನ್ನನ್ನು ಅಪ್ಪಳಿಸುತ್ತಿದ್ದರೂ ಅದನ್ನು ನುಂಗಿಕೊಂಡು ಮನೆಯಲ್ಲಿ, ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ನಗುನಗುತ್ತಲೇ ಕಾರ್ಯನಿರ್ವಹಿಸಿಕೊಂಡು ಹೋಗಬೇಕಾದ ‘ಸಾಂದರ್ಭಿಕ ಶಿಶು’ ಆಗುತ್ತಾಳೆ ನಮ್ಮ-ನಿಮ್ಮೆಲ್ಲರ ‘ಪುಟ್ಟಿ’. ಅಂಥ ವೇಳೆ,
ತನ್ನ ಪಾಡಿಗೆ ತನ್ನನ್ನು ಬಿಟ್ಟರೆ ಸಾಕು, ಯಾರೂ ತನ್ನನ್ನು ಅನವಶ್ಯಕವಾಗಿ ಮಾತಾಡಿಸುವುದು, ಕಿರಿಕಿರಿ ಮಾಡುವುದು ಬೇಡ ಎಂಬ ಧೋರಣೆ ಅವಳಲ್ಲಿ ಕೆನೆಗಟ್ಟಿರುತ್ತದೆ… ಈಗ ಹೇಳಿ, ತಿಂಗಳಿಗೊಮ್ಮೆ ಇಂಥ ದೈಹಿಕ-ಮಾನಸಿಕ ತುಮುಲಗಳ ಹಾದಿಯಲ್ಲಿ ಹೆಜ್ಜೆಹಾಕಬೇಕಾಗಿ ಬರುವ
‘ಪುಟ್ಟಿ’, ತನ್ನೊಳಗಿನ ಅವ್ಯಕ್ತ ಆಂದೋಲನದ ಕಾರಣದಿಂದಾಗಿ ನಮ್ಮ ಮೇಲೆ ಅಕಸ್ಮಾತ್ ರೇಗಿದರೆ, ಅಸಮಾಧಾನ ತೋರಿದರೆ, ನಮ್ಮನ್ನು ನಿರ್ಲಕ್ಷಿಸಿದರೆ, ನಾವೂ ಪ್ರತಿಯಾಗಿ ಸಿಟ್ಟಿಗೇಳುವುದು ತರವೇ? ‘ಪುಟ್ಟಿ’ಯ ಕುರಿತಾಗಿ ಸಹಾನುಭೂತಿ ಇಟ್ಟುಕೊಳ್ಳೋಣ. ಹಾಗಂತ ನಾವು ಆಕೆಯನ್ನು ‘ಅಬಲೆ’ ಎಂದು ಪರಿಭಾವಿಸುವುದು, ಲೊಚಗುಟ್ಟಿಕೊಂಡು ಅನುಕಂಪ ತೋರಿಸುವುದು ಬೇಡ.

ಏಕೆಂದರೆ, ‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು’ ಆಗಿರುವ ಆಕೆ ಅದನ್ನು ಇಷ್ಟಪಡುವುದೂ ಇಲ್ಲ. ಆಕೆಯ ಆ
ಕ್ಷಣದ ತಲ್ಲಣ ನಮ್ಮಂಥವರಿಗೆ ಅರ್ಥವಾದರೆ ಸಾಕು. ಈ ಸೃಷ್ಟಿಯಲ್ಲಿ ಜನ್ಮ ಕೊಡುವ ಶಕ್ತಿ ಇರುವುದು ಎರಡಕ್ಕೇ- ಅವುಗಳಲ್ಲಿ ಒಂದು ‘ಮಣ್ಣು’, ಇನ್ನೊಂದು ‘ಹೆಣ್ಣು’. ಈ ‘ಹೆಣ್ಣು’ ತಾಯಿಯಾಗಿ ನಮ್ಮನ್ನು ಪೊರೆಯುತ್ತಾಳೆ, ಗೆಳತಿಯಾಗಿ ಬದುಕಿಗೆ ಆಹ್ಲಾದ ತುಂಬುತ್ತಾಳೆ, ಮಡದಿಯಾಗಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾಳೆ.

ಅಷ್ಟೇಕೆ, ಗೃಹಿಣಿಯಾಗೇ ಉಳಿದುಬಿಟ್ಟರಂತೂ ಜೀವನ ಪರ್ಯಂತ ‘ಸಂಬಳವಿಲ್ಲದ ದುಡಿಮೆ’ಗೆ ಒಡ್ಡಿಕೊಂಡು, ಮೂಗಿಗೆ ಕವಡೆ ಕಟ್ಟಿಕೊಂಡು ದುಡಿಯುವ ಎತ್ತಿನಂತೆ ಸಂಸಾರದ ನೊಗವನ್ನು ಹೊತ್ತು ಸಾಗುತ್ತಾಳೆ. ಹೀಗಾಗಿ ಅವಳನ್ನು ಆದರಿಸಿ ಗೌರವಿಸುವುದು ನಮ್ಮ ಆದ್ಯತೆಯಾಗ
ಬೇಕು. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ (ಎಲ್ಲಿ ಸೀಯರಿಗೆ ಗೌರವ, ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನ ರಾಗುತ್ತಾರೆ) ಎಂಬ ದಿವ್ಯವಾಣಿಯು ನಮ್ಮ ಪೂರ್ವಜರಿಂದ ಹೊಮ್ಮಿರುವುದು ಈ ಆಶಯದಿಂದಲೇ.

‘ಹೆಣ್ಣು’ ಎಂಬ ಅನುಪಮ ಸೃಷ್ಟಿಯನ್ನು ಸದಾಶಯದ ರಕ್ಷಾಬಂಧನದಲ್ಲಿ ಕಾಪಿಟ್ಟುಕೊಳ್ಳುವುದು ನಮ್ಮ ಧರ್ಮ ವಾಗಲಿ. ಆಕೆಯ ನೋವನ್ನು ನಾವು ಹಂಚಿಕೊಳ್ಳಲಾಗ ದಿದ್ದರೂ, ಅದನ್ನು ಮತ್ತಷ್ಟು ಹೆಚ್ಚಿಸದಿರೋಣ. ಒಟ್ಟಿನಲ್ಲಿ, ‘ಪುಟ್ಟಿ’ ರೇಗಿದಳೆಂದು ಸಿಟ್ಟಿಗೇಳದಿರೋಣ…

ಇದನ್ನೂ ಓದಿ: Yagati Raghu Nadig Column: ಬಾಯಿಮಾತು ಬಳುಕಿದರೆ ಬಾಳಲ್ಲಿ ಪುಳಕ !